ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಕವನಗಳು
ಅಂತರಂಗದ ಅಲೆಗಳು
Friday, July 19, 2013
ಭಾರತೀಯ ಕ್ರಮದಲ್ಲಿ ಋತುಗಳು
ಆರು ವಿಧದ ಕಾಲ ವಿಭಾಗದಲ್ಲಿ ಮೂರನೆಯ ವಿಭಾಗ ಋತು. ಇದರ ಪರಮಾಣ ವರ್ಷದ ಆರನೆಯ ಒಂದು ಭಾಗ ಎಂದರೆ ಎರಡು ತಿಂಗಳುಗಳ ಕಾಲ ಅಥವಾ ಅರವತ್ತು ದಿವಸಗಳು. ಒಂದು ವರ್ಷದಲ್ಲಿ ಒಟ್ಟು ಆರು ಋತುಗಳಿವೆ. ಚೈತ್ರ ಶುಕ್ಲ ಪ್ರಥಮ ದಿವಸದಿಂದ ವಸಂತ ಋತು ಪ್ರಾರಂಭವಾಗುತ್ತದೆ. ಇದು ವೈಶಾಖ ಮಾಸ ಅಮಾವಾಸ್ಯೆಯಂದು ಮುಗಿಯುತ್ತದೆ. ಜ್ಯೇಷ್ಠ ಶುಕ್ಲ ಪಾಡ್ಯದಿಂದ ಆಷಾಢ ಅಮಾವಾಸ್ಯೆಯತನಕ ಗ್ರೀಷ್ಮ ಋತು. ಶ್ರಾವಣ ಶುಕ್ಲ ಪ್ರಥಮದಿಂದ ಪುಷ್ಯ ಅಮಾವಾಸ್ಯೆಯತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆತನಕ ಹೇಮಂತ ಋತು. ಮಾಘ ಶುಕ್ಲ ಪ್ರಥಮದಿಂದ ಫಾಲ್ಗುಣ ಅಮಾವಾಸ್ಯೆಯತನಕ ಶಿಶಿರ ಋತು.
ಈ ಆರು ಋತುಗಳಲ್ಲಿ ಸಾಮಾನ್ಯವಾಗಿ ಶಿಶಿರ, ವಸಂತ ಗ್ರೀಷ್ಮ ಋತುಗಳು ಉತ್ತರಾಯಣಕ್ಕೂ ವರ್ಷ, ಶರತ್, ಹೇಮಂತ ಋತುಗಳು ದಕ್ಷಿಣಾಯಣಕ್ಕೂ ಹೀಗೆ ಶುಕ್ಲ ಪಕ್ಷಾದಿಯಿಂದ ಅಮಾವಾಸ್ಯೆಯವರೆಗೆ ಕಾಲಗಣನೆ ಮಾಡುವ ಋತು ವಿಭಾಗಕ್ಕೆ ಚಾಂದ್ರ ಋತುಗಳೆಂದು ಹೆಸರು.
ವಸಂತದಿಂದ ಶಿಶಿರದವರೆಗೆ:ಋತುಚರ್ಯೆಗೆ ಅನುಗುಣವಾಗಿಯೇ ಜೀವನ ಕ್ರಮ ರೂಪಿತವಾಗಿದ್ದು ಧರ್ಮ ಇದನ್ನು ನಿರ್ದೇಶಿಸುತ್ತದೆ. ಪ್ರತಿ ಭಾರತೀಯ ಆಚರಣೆ ಹಿಮದೆಯೂ ಜೀವನ್ಮುಖಿ ಅರ್ಥವಿದೆ.
ಸೂರ್ಯನ ಪಥ ಸಂಚಲನೆಯಿಂದ ಪ್ರಕೃತಿಯ ಪರಿವರ್ತನೆ. ಪ್ರಕೃತಿಯ ಈ ಪರಿವರ್ತನೆಯ ಪ್ರವೃತ್ತಿಯನ್ನು ಋತುಗಳೆಂದು ಕರೆದರು. ಒಂದು ವರ್ಷಾವಧಿಯಲ್ಲಿ ಎರಡು ಮಾಸಗಳಿಗೊಂದರಂತೆ ಆರು ಋತುಗಳು. ಋತುಚರ್ಯೆಗಳು ಆಯಾ ಪ್ರದೇಶ, ಜೀವರಾಶಿಯ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಋತುಚರ್ಯೆ ದಿನಚರ್ಯೆ ಎನಿಸಿಕೊಂಡರೆ, ಪ್ರಕೃತಿಯಲ್ಲಿನ ಪರಿವರ್ತನೆಗೆ ಅನುಸರಿಸಿ ನಡೆಯುವುದು ಋತುಚರ್ಯೆ ಎನಿಸಿಕೊಳ್ಳುವುದು. ಋತುಚರ್ಯೆಗೆ ಅನುಗುಣವಾಗಿ ಜೀವನ ಕ್ರಮವಿದೆ. ಧರ್ಮ ಅದನ್ನು ನಿರ್ದೇಶಿಸುತ್ತದೆ.
ಋತು ವೈಶಿಷ್ಟ್ಯ:ಆರು ಋತುಗಳಲ್ಲೂ ಹಗಲು ಇರುಳುಗಳ ಅವಧಿಯ ಪ್ರಮಾಣ, ಸೂರ್ಯನ ಬಿಸಿಲು, ಹವಾಮಾನ, ಆಗ ಬೀಸುವ ಗಾಳಿಗಳು ಹೀಗೆ ಪರಿಸರದಲ್ಲಿ ನಾನಾ ವ್ಯತ್ಯಾಸಗಳು ವೈಶಿಷ್ಟ್ಯಗಳು ಜರುಗುತ್ತವೆ. ನಾವು ಒಂದೇ ತೆರನಾದ ಆಹಾರ ವಿಹಾರ ಕ್ರಮಗಳನ್ನು ಅನುಸರಿಸುತ್ತ ಹೋದರೆ ಒಳಿತಾಗುವುದಿಲ್ಲ. ಆರಂಭ ಮತ್ತು ಅಂತ್ಯದಲ್ಲಿ 'ಪರ್ವ'ಗಳೆಂದು ಗುರುತಿಸಲಾಗಿದೆ.
ವಸಂತ ವಿಲಾಸ:ವಸಂತ ಋತುವಿನಲ್ಲಿ ಸೂರ್ಯ ಮತ್ತು ಚಂದ್ರ ಇಬ್ಬರೂ ಪೂರ್ಣ ಪ್ರಮಾಣದಲ್ಲಿ ಭೂಮಿಗೆ ಪ್ರಕಾಶ ನೀಡುತ್ತಾರೆ. ಆಕಾಶವು ಶುಭ್ರವಾಗಿರುತ್ತದೆ. ಹೂಗಿಡ ಮರಗಳು ಅರಳಿ ಕಂಗೊಳಿಸುತ್ತವೆ. ವಸಂತ ಋತು ಸಮಯದಲ್ಲಿ ಜೀವರಾಶಿಗಳಲ್ಲಿ ವಿಷಯಾಸಕ್ತಿ ವ್ಯಾಮೋಹ ವೃದ್ಧಿಸುವುದು.
ಗ್ರೀಷ್ಮಗಾನ:ಗ್ರೀಷ್ಮ ಋತುವು ಜ್ಯೇಷ್ಠ ಹಾಗೂ ಆಷಾಢ ಮಾಸಗಳನ್ನೊಳಗೊಂಡಿದೆ. ಸೂರ್ಯನು ತನ್ನ ಪ್ರಖರತೆಯಿಂದ ಭೂಮಿ ಹಾಗೂ ಮನುಷ್ಯನ ಸ್ನಿಗ್ಧ ಗುಣವನ್ನು ಹೀರುತ್ತಾನೆ. ಹಣ್ಣು ಹಂಪಲ ಸೇವನೆ, ಸುವಾಸನೆಯ ಪುಷ್ಪಗಳನ್ನು ಮೂಸುವುದು, ಧರಿಸುವುದು, ರಸಿಕತೆ ರಂಜನೆ ಈ ಕಾಲದಲ್ಲಿ ಹಿತಕರ.
ವರ್ಷಾಧಾರೆ:ವರ್ಷ ಋತುವಿನಲ್ಲಿ (ಶ್ರಾವಣ ಭಾದಪ್ರದ)ಭೂಮಿಯ ತೇವ ಮೇಘದ ಮಳೆ ಸುರುವಿಕೆಯಿಂದ ದೇಹದಲ್ಲಿ ಜಠರಾಗ್ನಿಯು ಕ್ಷೀಣವಾಗುವುದು. ಆಮ್ಲಪಾಕ ಉಂಟಾಗಿ ಪಿತ್ತಚಯವು,ಮಂದಾಗ್ನಿಯೂ ಆಗುವುದರಿಂದ ತ್ರಿದೋಷಕಾರಕ ಆಹಾರ ಸೇವಿಸಬೇಕು.
ಶರತ್ ಋತು:ಆಶ್ವೀಜ-ಕಾರ್ತಿಕ ಮಾಸಗಳನ್ನೊಳಗೊಂಡ ಶರತ್ ಋತುವಿನಲ್ಲಿ ಮಳೆಗಾಲದಲ್ಲಿ ಸಂಚಯವಾಗಿದ್ದ ಪಿತ್ತವು ಪ್ರಕೋಪಗೊಳ್ಳುತ್ತದೆ. ಈ ಋತುವಿನಲ್ಲಿ ಮಂಜು ಬೀಳುವ ಸ್ಥಳ, ಅತಿಭೋಜನ, ಮೊಸರು, ತೈಲ, ಮದ್ಯ, ಹಗಲು ನಿದ್ರೆ ಪೂರ್ವ ದಿಕ್ಕಿಗೆ ಬೀಸುವ ಗಾಳಿಗೆ ಎದುರಾಗಿ ನಡೆಯುವುದು ಇತ್ಯಾದಿಯನ್ನು ವರ್ಜಿಸಬೇಕು.
ಹೇಮಂತದ ಹಿಗ್ಗು:ಹೇಮಂತ ಋತುವಿನಲ್ಲಿ ಹಿಮ ಹಾಗೂ ಚಳಿಯಿಂದ ಶರೀರದ ರೋಮ ರಂಧ್ರಗಳೆಲ್ಲ ಆಕುಂಚನವಾಗುವುದರಿಂದ ಶರೀರೋಷ್ಣವು ಹೆಚ್ಚಾಗಿ ಜಠರಾಗ್ನಿಯು ಪ್ರಜ್ವಲಿಸುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಈ ಋತುವಿನಲ್ಲಿ ಈ ಅಗ್ನಿಯನ್ನು ಶಾಂತಗೊಳಿಸುವುದಕ್ಕೆ ಸಹಜಕ್ಕಿಂತ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಆಹಾರ ಸೇವಿಸಬೇಕಾಗುತ್ತದೆ. ಸ್ತ್ರೀ ಸಂಪರ್ಕ ಈ ಋತುಕಾಲದಲ್ಲಿ ಅತ್ಯಂತ ಸೂಕ್ತವಾದುದು.
ಶುಷ್ಕತೆಯ ಶಿಶಿರ:ಶಿಶಿರ ಋತುವಿನಲ್ಲಿ ಗಾಳಿ ಬೀಸುತ್ತಲೇ ಇರುವುದು ವಿಶೇಷ ಉಷ್ಣತೆಯಿರುವ ಮನೆಯಲ್ಲಿದ್ದುಕೊಂಡು ಖಾರ, ಕಹಿ, ಒಗರು ಇತ್ಯಾದಿ ವಾತ ವೃದ್ಧಿಕರವಾದ ಆಹಾರ, ಶೀತಕರವಾದ ಆಹಾರ ಪಾನೀಯಗಳನ್ನು ವರ್ಜಿಸಬೇಕಾಗುವುದು ವಾತ ಪ್ರಕೃತಿಯ ವ್ಯಕ್ತಿಗೆ ಗಾಢ ನಿದ್ರೆ ಇರುವುದಿಲ್ಲ.
ಪ್ರಕೃತ್ತಿದತ್ತ:ಪೃಥ್ವಿ, ಆಫ, ತೇಜಸ್ಸು, ವಾಯು ಹಾಗೂ ಆಕಾಶಗಳೆಂಬ ಪಂಚಮಹಾಭೂತಗಳ ಸಂಯೋಗದಿಂದಲೇ ಮಾನವನ ಶರೀರವು ಉತ್ಪತ್ತಿಯಾಗಿದೆ. ನಿಸರ್ಗವೇ ಮಾನವ ಪ್ರಕೃತಿಯ ಹೊರ ಶರೀರವೆನಿಸಿದರೆ ಪ್ರಕೃತಿಯೇ ಅದರ ಒಳ ಶರೀರವೆನಿಸಿದೆ. ಪಂಚಮಹಾಭೂತಗಳ ಮರು ಗುಂಪುಗಳನ್ನು 'ತ್ರಿದೋಷ'ಗಳೆಂದು ಕರೆದರು. ಪೃಥ್ವಿ ಹಾಗೂ ಆಪ್‌ತತ್ವ್ತಗಳು ಸೇರಿ 'ಕಫ'ವಾಗಿಯೂ ವಾಯು ಆಕಾಶ ಸೇರಿ 'ವಾತ'ವೆಂತಲೂ ಮತ್ತು ತೇಜಸ್ ತತ್ತ್ವ ಪ್ರಧಾನವಾದ ದ್ರವ್ಯಕ್ಕೆ 'ಪಿತ್ತ'ವೆಂತಲೂ ಕರೆದರು. ಇವುಗಳು ಕೂಡ ದ್ರವ್ಯಗಳಾಗಿದ್ದು ಕ್ರಮವಾಗಿ ಕಫವು ಸಂಗ್ರಹಣ ಕ್ರಿಯೆಗೂ, ಪಿತ್ತವು ಸಾತ್ಮೀಕರಣ ಕ್ರಿಯೆಗೂ ಹಾಗೂ ವಾತವು ವಿಷ ವಿಸರ್ಜನ ಕ್ರಿಯೆಗೂ ಅಧಿಕಾರಗಳೆನಿಸಿ ದೈಹಿಕ ಕ್ರಿಯೆಗಳನ್ನು ಮಾಡುತ್ತವೆ.
ಪ್ರಕೃತಿಯಲ್ಲಿನ ಈ ಪ್ರವೃತ್ತಿ ಪರಿವರ್ತನೆಯನ್ನೇ ಋತುಚರ್ಯೆಗಳೆಂದು ಕರೆದು ಪಂಚಪರ್ವಗಳನ್ನು ಗುರುತಿಸಿದ್ದಾರೆ. ಋತುಸಂಧಿಯ ಈ ಪರ್ವಗಳ ಆಚರಣೆ, ವಿಧಿ, ವಿಧಾನಗಳು, ನೈವೇದ್ಯಕ್ಕೆಂದು ತಯಾರಿಸುವ ರಸ ಪದಾರ್ಥಗಳು ಒಂದು ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳೇ ಆಗಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಭಾರತೀಯ ಆಚರಣೆಗೂ ಊಟೋಪಚಾರ, ಉಡುಗೆ-ತೊಡುಗೆಗೂ ಧರ್ಮಾತೀತವಾದ ಜೀವನ್ಮುಖಿ ಅರ್ಥವಿದೆ ಎನ್ನುವುದು ಉತ್ಪ್ರೇಕ್ಷೆ ಅಲ್ಲ.
-ಗುರುರಾಜ ಪೋಶೆಟ್ಟಿಹಳ್ಳಿ
ಅಸ್ತಮಾಕ್ಕೆ ಅಂಜಬೇಕಿಲ್ಲ
ಅಸ್ತಮಾವು ಸಾಮಾನ್ಯ ತೀವ್ರ ಉರಿಯೂತ ರೋಗವಾಗಿದ್ದು, ಆಗಾಗ್ಗೆ ಮರುಕಳಿಸುವ, ಪರಿವರ್ತನೆಯ ಹಾಗೂ ಉಸಿರಾಟಕ್ಕೆ ತಡೆಒಡ್ಡುವ ಗುಣಲಕ್ಷಣಗಳನ್ನು ಹೊಂದಿದೆ. ಉಸಿರಾಟದ ನಾಳಗಳ ರಚನೆಯನ್ನು ಬ್ರಾಂಕೋಸ್ಪಾಸ್ಮ್ ಎಂದು ಕರೆಯಲಾಗುತ್ತದೆ. ಅಸ್ತಮಾದ ಲಕ್ಷಣಗಳಲ್ಲಿ ಉಬ್ಬಸ, ಕೆಮ್ಮು, ಎದೆಬಿಗಿತ ಸೇರಿದೆ. ನಗರಗಳ ಕಾಲುಭಾಗದಷ್ಟು ಮಕ್ಕಳಲ್ಲಿ ಅಸ್ತಮಾದ ತೊಂದರೆ ಕಾಣಿಸಿಕೊಂಡಿರುವುದರಿಂದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಕಾಯಿಲೆ ಬಗ್ಗೆ ಜನಜಾಗೃತಿ ಹೆಚ್ಚಾಗಿದೆ.
ಅಸ್ತಮಾವು ಪರಿಸರ ಮತ್ತು ಅನುವಂಶಿಕ ಅಂಶಗಳಿಂದ ಉಂಟಾಗುತ್ತದೆ. ಇದು ತೀವ್ರತರನಾದ ಅಸ್ತಮಾ ಮತ್ತು ಔಷಧಕ್ಕೆ ಪ್ರತಿಕ್ರಿಯಿಸುವುದರ ಮೇಲೆ ಪ್ರಭಾವ ಬೀರಬಲ್ಲದು. ಧೂಳು, ಪ್ರಾಣಿಗಳ ಕೂದಲು, ಪರಾಗರೇಣು ಮುಂತಾದವುಗಳಿಂದ ಉಂಟಾಗುವ ಅಲರ್ಜಿಗಳು ನಮ್ಮ ದೇಹದ ಪ್ರತಿರಕ್ಷಣ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಒಡ್ಡುತ್ತವೆ.
ಅಸ್ತಮಾವು ಎರಡೂ ಲಿಂಗಗಳ ಹಾಗೂ ಎಲ್ಲ ವಯಸ್ಸಿನ ಜನರಿಗೂ ಉಂಟಾಗುತ್ತದೆ. ಆದರೆ ಸಾಮಾನ್ಯವಾಗಿ ಹದಿಹರೆಯದ ಮಕ್ಕಳಲ್ಲೇ ಇದು ಹೆಚ್ಚು. ಏಕೆಂದರೆ ಮಕ್ಕಳಲ್ಲಿ ಕಾಯಿಲೆಗೆ ಸುಲಭವಾಗಿ ಒಳಗಾಗುವ ಲಕ್ಷಣಮತ್ತು ಪ್ರತಿರೋಧ ಶಕ್ತಿಯ ಮಟ್ಟ ಕಡಿಮೆ ಇರುವುದು ಕಾರಣವಾಗಿದೆ. ಒಳಕ್ಕೆ ಎಳೆದುಕೊಳ್ಳುವ ಗಾಳಿ ( ಇನ್ಹೇಲ್ಡ್ ಏರ್ ) , ಸೇವಿಸಿದ ಆಹಾರ ಹಾಗೂ ಇನ್ನೂ ಕೆಲವೊಮ್ಮೆ ಕೆಲ ಔಷಧದಲ್ಲಿರುವ ಅಂಶಗಳಿಂದ ಅಸ್ತಮಾ ಉಂಟಾಗುತ್ತದೆ.
ತಂಬಾಕು, ಮರದ ಹೊಗೆ, ಮಾಲಿನ್ಯಗೊಂಡ ಗಾಳಿಯಲ್ಲಿ ಉಸಿರಾಟಕ್ಕೆ ತೆರೆದುಕೊಳ್ಳುವುದು, ಪರ್ಫ್ಯೂಮ್, ಸ್ವಚ್ಛಗೊಳಿಸುವ ಉತ್ಪನ್ನಗಳ ವಾಸನೆ ತೆಗೆದುಕೊಳ್ಳುವುದು, ಕಚೇರಿಗಳಲ್ಲಿ ಉದ್ರೇಕಕಾರಿ ವಾತಾಯನಕ್ಕೆ ತೆರೆದುಕೊಳ್ಳುವುದರಿಂದಲೂ ಅಸ್ತಮಾ ಉಂಟಾಗುತ್ತದೆ.
ಮೇಲ್ಭಾಗದ ಉಸಿರಾಟದ ಸೋಂಕುಗಳಾದ ಶೀತ, ಜ್ವರ, ಸೈನ್ಸ್, ಬ್ರಾಂಕೈಟಿಸ್, ಶುಷ್ಕ ಹವಾಮಾನ , ಭಾವನಾತ್ಮಕ ಉತ್ಸಾಹ ಅಥವಾ ಒತ್ತಡ, ದೈಹಿಕ ಪರಿಶ್ರಮ ಅಥವಾ ವ್ಯಾಯಾಮದಿಂದಲೂ ಅಸ್ತಮಾ ಉಂಟಾಗುತ್ತದೆ.
ರಾತ್ರಿ ಹೊತ್ತಿನಲ್ಲಿ ಕೆಮ್ಮು, ಉಸಿರಾಟದ ತೊಂದರೆ, ಎದೆ ಬಿಗಿಯಾದ ಭಾವನೆ, ದೀರ್ಘಕಾಲದ ' ಥ್ರೋಟ್ ಕ್ಲೀನಿಂಗ್ ' ಮಾದರಿಯ ಕೆಮ್ಮು ಅಸ್ತಮಾದ ಸಾಮಾನ್ಯ ಲಕ್ಷಣಗಳಾಗಿವೆ. ಕಾಯಿಲೆಯ ತೀವ್ರತೆ ಮತ್ತು ಲಕ್ಷಣದ ಹೆಚ್ಚಳ ಇವೆರಡು ಒಂದಕ್ಕೊಂದು ಸಂಬಂಧ ಹೊಂದಿರುತ್ತವೆ. ಲಕ್ಷಣಗಳು ಕ್ರಮೇಣ ಉಲ್ಬಣಹಂತಕ್ಕೆ ಇಲ್ಲವೇ ಗುಟ್ಟಾಗಿ ಉಲ್ಭಣ ಸ್ಥಿತಿಗೆ ತಲುಪಬಹುದು. ಸಾಮಾನ್ಯವಾಗಿ ಅಸ್ತಮಾ ರೋಗಿಗಳಿಗೆ ಉಬ್ಬಸವಿರುತ್ತದೆ ಎಂಬ ತಪ್ಪು ಅಭಿಪ್ರಾಯ ಇದೆ. ಆದರೆ ಕೆಲ ಅಸ್ತಮಾ ರೋಗಿಗಳಿಗೆ ಉಬ್ಬಸ ಇರುವುದಿಲ್ಲ. ಅವರ ಕಾಯಿಲೆಯು ಇನ್ನೊಂದು ತೀವ್ರ ತಡೆಯೊಡ್ಡುವ ಪಪ್ಪುಸ ಕಾಯಿಲೆಯಾದ ವಾತಶೋಧ ( ಶ್ವಾಸಕೋಶದಲ್ಲಿ ವಾಯುಕೋಶಕ ಉಬ್ಬಿರುವುದು ) ಅಥವಾ ದೀರ್ಘಕಾಲಿನ ಉರಿಯೂತ ದೊಂದಿಗೆ ತಳಕು ಹಾಕಿಕೊಂಡಿರುವ ಸಾಧ್ಯತೆ ಇರುತ್ತದೆ.
ಅಲೋಪತಿ ಔಷಧದ ಜತೆಗೆ ನಾವು ಹೋಮಿಯೊಪತಿ ಔಷಧವನ್ನು ಉಪಯೋಗಿಸಬಹುದಾಗಿದೆ. ಅಲೋಪತಿ ಔಷಧಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಹೋಮಿಯೊಪತಿ ಔಷಧವು ದೇಹದ ಪ್ರತಿರೋಧ ವ್ಯವಸ್ಥೆಯನ್ನು ಬಲಗೊಳಿಸಲು ಕೆಲಸ ಮಾಡುತ್ತದೆ.
ಅಸ್ತಮಾ ಕಾಯಿಲೆಯನ್ನು ಗುಣಪಡಿಸಲು ಪಾಸಿಟಿವ್ ಹೋಮಿಯೋಪತಿಯು ವ್ಯವಸ್ಥಿತ ಮತ್ತು ರಚನಾತ್ಮಕ ಪರಿಹಾರವನ್ನು ಸೂಕ್ತ ಡೋಸೇಜ್ ನೊಂದಿಗೆ ಒದಗಿಸುತ್ತದೆ. ಅಸ್ತಮಾದಂತಹ ದೀರ್ಘಕಾಲಿನ ಕಾಯಿಲೆಗಳಿಗೆ ಹೋಮಿಯೊಪತಿಯು ಶಾಶ್ವತ ಚಿಕಿತ್ಸೆಯನ್ನು ನೀಡುತ್ತದೆ. ರೋಗಿಯ ರೋಗ ಲಕ್ಷಣಗಳನ್ನು ಆಧರಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಯ ಕುಟುಂಬ ಹಿನ್ನೆಲೆ, ವೈಯಕ್ತಿಕ ಹಿನ್ನೆಲೆ ಮತ್ತು ಆತನ ವರ್ತನೆ ಮತ್ತು ಔಷಧಕ್ಕೆ ಆತ ಪ್ರತಿಕ್ರಿಯಿಸುವ ರೀತಿಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರವನ್ನು ಸೂಚಿಸಲಾಗುತ್ತದೆ.
ಬಂಜೆತನಕ್ಕೆ ಭಯ ಬೇಡ
ಬಂಜೆತನ ಅನ್ನೋದು ಇತ್ತೀಚೆಗೆ ತೀರ ಸಾಮಾನ್ಯ ಸಮಸ್ಯೆ ಅಂದೆನಿಸಿದೆ.
ಯಾವುದೇ ಒಂದು ಹೆಣ್ಣು ಮದುವೆಯಾದ ಒಂದು ಅಥವಾ ಎರಡು ವರ್ಷದ ಒಳಗೆ ಯಾವುದೇ ಗರ್ಭ ನಿರೋಧಕಗಳನ್ನು ಉಪಯೋಗಿಸದೆ ದಾಂಪತ್ಯ ಜೀವನ ನಡೆಸಿದರೂ ಮಗುವನ್ನು ಪಡೆಯಲು ವಿಫಲವಾದರೆ ಅದನ್ನು ಸಂತಾನಹೀನತೆ ಅಥವಾ ಬಂಜೆತನ ಅನ್ನುತ್ತೇವೆ. ಬಂಜೆತನ ಶೇ. 35ರಿಂದ 40ರಷ್ಟು ಮಹಿಳೆಯರಲ್ಲಿ ಕಂಡು ಬರುತ್ತದೆ. ಇದರಲ್ಲಿ ಶೇ. 10ರಿಂದ 15ರಷ್ಟು ಮಹಿಳೆಯರಲ್ಲಿ ಇದು ಯಾವುದೇ ಕಾರಣವಿಲ್ಲದೆ ಕಾಣಿಸಿಕೊಳ್ಳುತ್ತದೆ.
ಬಂಜೆತನಕ್ಕೆ ಸಾಮಾನ್ಯ ತೊಂದರೆ ಏನೆಂದರೆ ಎಂಡೋಮೆಟ್ರಿಯೊಸಿಸ್. ಅಂದರೆ ಗರ್ಭಕೋಶದ ಸೋಂಕು, ಗರ್ಭನಾಳದ ತೊಂದರೆಗಳಾದ ಟ್ಯೂಬಲ್ ಬ್ಲಾಕ್ ಮತ್ತು ಟ್ಯೂಬಲ್ ಸರ್ಜರಿ. ಅಂಡಾಶಯಗಳ ಉತ್ಪತ್ತಿಯಲ್ಲಿ ಕೊರತೆ, ಥೈರಾಯ್ಡ್ ತೊಂದರೆ, ಪಿಸಿಒಡಿ ಹಾಗೂ ಗರ್ಭಪಾತದ ತೊಂದರೆಗಳು ಕಾಣಿಸುತ್ತವೆ.
ಇನ್ನೂ ಹಲವು ಅಂಶಗಳೆಂದರೆ ಹೆಚ್ಚಿದ ವಯಸ್ಸು, ಮಾನಸಿಕ ಒತ್ತಡ, ಅಪೌಷ್ಠಿಕತೆ, ತೂಕದಲ್ಲಿ ಏರುಪೇರು, ಹಾರ್ಮೋನ್ ಸಮಸ್ಯೆ, ಲೈಂಗಿಕ ಸೋಂಕು, ಅನಾವಶ್ಯ ಔಷಧ ಸೇವನೆ, ಮದ್ಯಪಾನ, ಧೂಮಪಾನ ಇತ್ಯಾದಿ.
ಸಂತಾನಹೀನತೆಗೆ ಹೋಮಿಯೋಪಥಿಯಲ್ಲಿ ಸೂಕ್ತ ಪರಿಹಾರ ಇದೆ. ಈ ಚಿಕಿತ್ಸೆಯಲ್ಲಿ ಸಂತಾನಹೀನತೆಯನ್ನು ಒಂದು ಸಮಸ್ಯೆ ಅಥವಾ ಕೊರತೆ ಎಂದು ಪರಿಗಣಿಸುವುದರ ಜತೆ ಅವರ ದೇಹದ ಪ್ರಕೃತಿ, ಜೀವನಶೈಲಿ ಹಾಗೂ ಮಾನಸಿಕ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ಹೋಮಿಯೋಪಥಿಯಲ್ಲಿ ಕಾನ್‌ಸ್ಟಿಟ್ಯೂಷನಲ್ ಟ್ರಿಟ್‌ಮೆಂಟ್ ಎಂದು ಕರೆಯುತ್ತಾರೆ. ಈ ಚಿಕಿತ್ಸೆಯಿಂದ ಬಂಜೆತನವನ್ನು ಹೋಗಲಾಡಿಸಿ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಮಗುವನ್ನು ಪಡೆಯಬಹುದು.
ವಿದ್ಯಾರ್ಥಿಗಳಿಗೂ ವಾಸ್ತು
ವಿದ್ಯಾರ್ಥಿಗಳು ಸಾಮಾನ್ಯವಾಗಿ ತಮ್ಮ ತಾಯಿ ತಂದೆಯರಲ್ಲಿ ತೋಡಿಕೊಳ್ಳುವ ದೂರುಗಳೆಂದರೆ ಓದಲು ಕಷ್ಟವಾಗುತ್ತಿದೆ, ಹೋಂವರ್ಕ್ ಬಹಳ, ಒಂದೇ ದಿನದಲ್ಲಿ ಓದಲು ಬಹಳ ವಿಷಯ ಕೊಟ್ಟಿದ್ದಾರೆ. ಅದು ಬಹಳ ಹೊರೆ. ಎಷ್ಟೇ ಓದಿದರೂ ತಲೆಗೆ ಮಾತ್ರ ಹತ್ತುವುದಿಲ್ಲ. ಓದದೆ ಶಾಲೆಗೆ ಹೋದರೆ ಟೀಚರ್ ಹೊಡೆಯುತ್ತಾರೆ. ಶಾಲೆಗೆ ಹೋಗಲು ಮನಸ್ಸಾಗುವುದಿಲ್ಲ ಎಂಬ ಮಕ್ಕಳ ಮಾತು ಕೇಳಿದ ಪೋಷಕರು, ಶಿಕ್ಷಕರು ಹಾಗೂ ಶಾಲಾ ಡಳಿತ ಮಂಡಳಿಯವರ ಮೇಲೆ ಸಿಟ್ಟಾಗುತ್ತಾರೆ.
ಯಾವ ಶಾಲೆಯವರಿಗೂ ಮಕ್ಕಳನ್ನು ಕಾಡಿಸುವ ಆಸೆ ಇರುವುದಿಲ್ಲ. ಮಕ್ಕಳಿಗೆ ಹೊರೆ ಅಂದೆನಿಸುವ ಹೋಂವರ್ಕ್ ನೀಡುವುದಿಲ್ಲ. ದೋಷ ಇರುವುದು ವಿದ್ಯಾರ್ಥಿಗಳ ಮನಸಿನಲ್ಲಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲ ಬೀಜಕ್ಕೂ ಹೆಮ್ಮರವಾಗುವ ಶಕ್ತಿ ಇರುವಂತೆ ಪ್ರತಿ ವಿದ್ಯಾರ್ಥಿಯಲ್ಲೂ ದೈಹಿಕ -ಮಾನಸಿಕ ವಾಗಿ ಬೆಳೆದು ಸತ್ಪ್ರಜೆಯಾಗುವ ಶಕ್ತಿ ಇದ್ದೇ ಇದೆ. ಬೀಜ ಬೆಳೆದು ಹೆಮ್ಮರವಾಗಲೂ ಫಲವತ್ತಾದ ಭೂಮಿ, ನೀರು ಹಾಗೂ ಸೂಕ್ತ ವಾತಾವರಣ ಬೇಕಿರುವಂತೆ ವಿದ್ಯಾರ್ಥಿಗಳಿಗೆ ಕೂಡ ಮಾನಸಿಕ ಹಾಗೂ ದೈಹಿಕವಾಗಿ ಬೆಳೆಯಲು ಪೂರಕ ವಾತಾವರಣ ಅಗತ್ಯ. ಅದರಲ್ಲಿ ಒಂದು ವಾಸ್ತು ಪೂರಕ ಪರಿಸರ ಎಂಬುದನ್ನು ಕೂಡ ಮರೆಯಬಾರದು.
ಓದುವ ಕೋಣೆಯಲ್ಲಿ ವಿದ್ಯಾರ್ಥಿಗಳ ಪುಸ್ತಕಗಳನ್ನೆಲ್ಲ ನೈಋತ್ಯ ಭಾಗದಲ್ಲಿರಿಸಬೇಕು. ಸಾಧ್ಯವಾಗದಿದ್ದರೆ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿರಬೇಕು. ಉತ್ತರ ಹಾಗೂ ಪೂರ್ವ ದಿಕ್ಕಿನಲ್ಲಿ ಪುಸ್ತಕಗಳನ್ನು ಗುಡ್ಡೆ ಹಾಕಿ ಭಾರ ಮಾಡಬಾರದು ಅಥವಾ ಯಾವುದೇ ಭಾರದ ವಸ್ತುಗಳನ್ನು ಉತ್ತರ ಅಥವಾ ಪೂರ್ವದಲ್ಲಿರಿಸಬಾರದು. ಅಂಥ ಭಾರದ ವಸ್ತುಗಳು ವಿದ್ಯಾರ್ಥಿಗಳಲ್ಲಿ ತಲೆ ಶೂಲೆಯನ್ನು ಮಾಡುತ್ತವೆ.
ಓದುವ ಟೇಬಲ್, ಕುಳಿತುಕೊಳ್ಳುವ ಕುರ್ಚಿಗಳು, ಗೋಡೆಗೆ ಅಂಟಿಕೊಂಡಂತೆ ಇರಬಾರದು. ಅರ್ಧ ಅಡಿಯಷ್ಟಾದರೂ ಜಾಗ ಖಾಲಿ ಬಿಟ್ಟು ಇಡಬೇಕು. ಓದುವ ಸಂದರ್ಭದಲ್ಲಿ ಯಾವ ಪುಸ್ತಕ ಬೇಕೋ ಅದನ್ನಷ್ಟೇ ಎದುರಿಗಿಟ್ಟು ಓದಬೇಕು. ಇತರ ಪುಸ್ತಕ ನೈಋತ್ಯ ಭಾಗದಲ್ಲಿ ಇರುವ ಕಪಾಟಿನಲ್ಲಿ ಇರಬೇಕು. ಓದುವಾಗ ಟೇಬಲ್ ಲ್ಯಾಂಪ್ ಬಳಸುತ್ತಿದ್ದುದಲ್ಲಿ ಅದನ್ನು ಟೇಬಲಿನ ಆಗ್ನೇಯ ಮೂಲೆಯಲ್ಲಿರಿಸಬೇಕು. ಟೇಬಲಿನ ಆಕೃತಿ ಚೌಕಾಕಾರದಲ್ಲಿಬಾರದು. ಚತುರ್ಭುಜಾಕೃತಿ ಅತ್ಯುತ್ತಮ. ಅತಿ ದೊಡ್ಡ ಟೇಬಲ್ ಆಗಲಿ ಅಥವಾ ಅತಿ ಚಿಕ್ಕ ಟೇಬಲ್ ಕೂಡ ಒಳ್ಳೆಯದಲ್ಲ. ಅತಿ ದೊಡ್ಡ ಟೇಬಲ್‌ನಿಂದ ದೈಹಿಕ ಶಕ್ತಿ ಕ್ಷೀಣಿಸುತ್ತದೆ. ಅತಿ ಸಣ್ಣ ಟೇಬಲ್ ಮಾನಸಿಕ ಶಕ್ತಿ ಕುಂದಿಸುತ್ತದೆ. ಓದುವ ಕೋಣೆಯ ವರ್ಣ ತಿಳಿ ನೀಲಿ ವರ್ಣವಿದ್ದರೆ ವಿದ್ಯಾರ್ಥಿಗಳಲ್ಲಿ ಕಲಿಯುವ ಸಾಮರ್ಥ್ಯ ಹೆಚ್ಚಿಸುತ್ತದೆ.
ರಾತ್ರಿ ಓದಿಯಾದ ನಂತರ ವಿದ್ಯಾರ್ಥಿಗಳು ಮಲಗುವಾಗ ಪೂರ್ವ ದಿಕ್ಕಿನೆಡೆ ತಲೆ ಇಟ್ಟು ಮಲಗಿದರೆ ಭೂಮಿಯ ಅಯಸ್ಕಾಂತದ ಪ್ರವಾಹದ ಗುಣದಿಂದಾಗಿ ಅತ್ಯಂತ ಶಾಂತವಾಗಿ ನಿದ್ದೆ ಮಾಡಲು ಅನುಕೂಲವಾಗುತ್ತದೆ. ಮುಂಜಾನೆ ಎದ್ದಾಗ ಮನಸ್ಸಿನಲ್ಲಿ ಸಕಾರಾತ್ಮಕ ಹುರುಪಿರುತ್ತದೆ. ಓದುವ ಕೋಣೆಯಲ್ಲಿ ಪೂರ್ವ ದಿಕ್ಕಿನ ಗೋಡೆಗೆ ಪೆಂಡುಲಂ ಇರುವ ಗೋಡೆ ಗಡಿಯಾರ ಇರಿಸಿದಲ್ಲಿ ವಿದ್ಯಾರ್ಥಿಗಳ ಮಿದುಳಿನ ಎರಡು ಭಾಗಗಳು ಸಮತೋಲನ ಸ್ಥಿತಿಯಲ್ಲಿದ್ದು ಬಲ ಮತ್ತು ಎಡಭಾಗದ ಮಿದುಳು ಸಮಪ್ರಮಾಣದ ಶಕ್ತಿಯನ್ನು ಹೊಂದುತ್ತದೆ.
ಪ್ರತಿನಿತ್ಯ ರಾತ್ರಿ ಒಂದು ಲೀಟರ್ ಕಾಯಿಸಿ ಆರಿಸಿದ ನೀರಿನಲ್ಲಿ 27 ಶುದ್ಧವಾದ ಹವನೀಕೃತ ಸ್ಪಟಿಕ ಮಣಿ ಇರಿಸಿ, ಮುಂದಿನ ದಿನ ಆ ನೀರನ್ನು ಕುಡಿಯುವುದರಿಂದ ಬುದ್ಧಿ ಚುರುಕಾಗಲೂ ನೆರವಾಗುತ್ತದೆ. ತಾಮ್ರದ ಚೊಂಬನ್ನು ನೀರು ಶೇಖರಿಸಲು ಬಳಸುವುದು ಉತ್ತಮ.
ಇತ್ತೀಚೆಗೆ ವೈಜ್ಞಾನಿಕ ರಂಗದ ನ್ಯೂರೋ ಸೈನ್ಸ್ ವಿಭಾಗದಲ್ಲಿ ನಡೆಸಿರುವ ಸಂಶೋಧನೆಗಳು ಕೂಡ ದಿಕ್ಕುಗಳು ಮಾನವನ ಮಿದುಳಿನ ಮೇಲೆ ಅಪಾರವಾದ ಪರಿಣಾಮ ಬೀರುವುದಾಗಿ ದೃಢಪಡಿಸಿವೆ. ಅದರಲ್ಲೂ ಮಿದುಳಿನ ತಲಾಮಸ್ ಅಂಗದಲ್ಲಿ ಸಿಡಿಯುವ ನ್ಯೂರಾನ್‌ನ ಕ್ರಮದಲ್ಲಿ ಎಚ್ಚೆತ್ತುಕೊಳ್ಳುವ ಗುಣ ಉತ್ತರ ದಿಕ್ಕಿನೆಡೆ ಮುಖ ಮಾಡಿಕೊಂಡಾಗ ಉಂಟಾಗುವುದೆಂದು ಸಂಶೋಧನೆ ಖಚಿತಪಡಿಸಿರುವುದು ನೋಡಿದರೆ ವಾಸ್ತು ವಿಚಾರಗಳು ಮೂಢನಂಬಿಕೆಯಲ್ಲವೆಂದು ಯಾರೂ ಬೇಕಾದರೂ ಹೇಳಬಹುದು.
ಮನೆಯ ಹೆಣ್ಣು ಮಕ್ಕಳು ವಾಯುವ್ಯ ಕೋನದ ಕೋಣೆಯಲ್ಲಿ ವಾಸಿಸುವುದರಿಂದಲೂ ಆ ಕೋಣೆಯಲ್ಲಿ ಪೂರ್ವದ ಕಡೆ ಮುಖ ಮಾಡಿ ಓದುವುದರಿಂದ ಹೆಣ್ಣು ಮಕ್ಕಳು ವಿದ್ಯೆಯಲ್ಲಿ ಮಾತ್ರವಲ್ಲ ಮನೆ ಕೆಲಸಗಳಲ್ಲೂ ಚುರುಕುತನ ಹೊಂದುತ್ತಾರೆ ಎನ್ನುತ್ತದೆ ವಾಸ್ತು. ಅಷ್ಟೇ ಅಲ್ಲ ಮದುವೆಯಾಗದ ಹೆಣ್ಣು ಮಕ್ಕಳು ವಾಯುವ್ಯ ಕೋಣೆಯಲ್ಲಿ ಪೂರ್ವದ ಕಡೆ ತಲೆ ಹಾಕಿ ಮಲಗುವುದರಿಂದ ಬಹುಬೇಗ ಕಂಕಣ ಬಲ ಕೂಡಿ ಬರುತ್ತದೆ ಎನ್ನುವುದು ಸುಳ್ಳಲ್ಲ.
ಮಾರ್ಕಂಡೇಯ ಋಷಿಗಳ ವಾಸ್ತು ಶ್ಲೋಕದ ಪ್ರಕಾರ ಅತಿ ದಡ್ಡ ಮಕ್ಕಳು ಆಗ್ನೇಯ ದಿಕ್ಕಿನ ಕೋಣೆಯಲ್ಲಿ ಈಶಾನ್ಯ ಭಾಗದ ಪೂರ್ವ ದಿಕ್ಕಿನ ಕಡೆ ಮುಖ ಮಾಡಿ ಅಭ್ಯಸಿಸುವುದರಿಂದ ಕಾಲಕ್ರಮೇಣ ಬುದ್ಧಿವಂತರಾಗುವತರೆಂಬ ಉಲ್ಲೇಖವಿದೆ.
-ಡಾ. ಕೆ. ರಮೇಶ್ ಕಾಮತ್
ವಾಸ್ತು ಜಗತ್ತು: ವಿದ್ಯಾಲಯಗಳ ವಾಸ್ತು ಹೇಗಿರಬೇಕು ?
"ವಿದ್ಯಾದದಾತಿ ವಿನಯಂ, ವಿದ್ಯಾ ವಿಹೀನಂ ಪಶು ಸಮಾನಂ". ಇವೆಲ್ಲ ಹಿಂದಿನವರು ಬರೆದು ಹಾಕಿದ ಪದ ಪುಂಜಗಳು. ಬಹಳ ಅರ್ಥಪೂರ್ಣ ಮತ್ತು ಚಿರನೂತನ. ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಗಸು. ಇದು ಮರೆಯಲಾರದ ಮತ್ತು ಮರೆಯಬಾರದ ಮಾತು.
ಹಾಗೇನೆ ಹಳೆ ನೀತಿ-ಹೊಸ ರೀತಿ ಹೊಂದಿಸಿ ಬಾಳಿದರೆ ಅದೇ ಸ್ವರ್ಗೀಯ ಸ್ಥಿತಿ. ಇದಕ್ಕೆಲ್ಲ ಕಾರಣವಾಗುವುದು ಶಿಕ್ಷಣ. ಶಿಕ್ಷಣ ಎಂದರೆ ತಕ್ಷಣ ನೆನಪಾಗುವುದು ಪದವಿ. ಆದರೆ, ನೆನಪಿರಲಿ ಅದೇ ಸರ್ವಸ್ವ ಲ್ಲ. ಹೂವಿದ್ದರೆ ಸಾಲದು ಅದರೊಡನೆ ಪರಿಮಳವೂ ಬೇಕು. ಹಾಗೇನೆ ವಿದ್ಯೆಯೊಡನೆ ಬುದ್ಧಿಯು ಮೇಳೈಸಿರಬೇಕು. ಪ್ರತಿಭೆ ಹಾಸು ಹೊಕ್ಕಾಗಿರಬೇಕು. ಇವೆಲ್ಲವನ್ನು ಸೇರಿಸಿ ಬೆಳೆಯುವ ದೊಡ್ಡ ಗುಣ ವಿದ್ಯಾರ್ಥಿಗಳಲ್ಲಿರಬೇಕು. ಅಹಂಕಾರ ಅಧಃಪತನಕ್ಕೆ ದಾರಿ. ವಿದ್ಯಾವಂತ ಇದರ ಪ್ರವೇಶಕ್ಕೆ ಅವಕಾಶ ಕೊಡಲೇ ಬಾರದು. ಯಾಕೆಂದರೆ ಬೆಳೆ ಬೆಳೆದಲ್ಲಿ ಕಳೆಯೂ ಬೆಳೆಯುವುದು ಸಹಜ ತಾನೆ ಅದನ್ನು ಕಿತ್ತು ಬಿಸಕುವುದೇ ಜಾಣರ ಲಕ್ಷಣ. ವಿದ್ಯಾವಂತರ ಎರಡು ದಿವ್ಯಾಸ್ತ್ರಗಳೆಂದರೆ ಕರುಣೆ ಮತ್ತು ಕ್ಷಮೆ. ಕ್ಷಮಯಾಧರಿತ್ರಿ ಎಂಬುದು ವಿದ್ಯಾವಂತ ಜ್ಞಾನಿಗಳ ಬಾಯಿಯಿಂದ ಹೊರಹೊಮ್ಮಿದ ದಿವ್ಯವಾಣಿ ಅಲ್ಲವೇ ? ಇಂತಹ ವಿದ್ಯೆ ದೊರೆಯುವ ತಾಣವನ್ನು ನಾವು ವಿದ್ಯಾ ಮಂದಿರ ಶಿಕ್ಷಣ ಸಂಸ್ಥೆ ಮುಂತಾದ ಹೆಸರುಗಳಿಂದ ಕರೆಯುತ್ತೇವೆ. ಅದೇ ಶಾರದೆಯ ಆಲಯವು ಕೂಡ.
ದೇವಾಲಯ, ಮನುಷ್ಯಾಲಯಗಳಿಗೆ ಹೇಗೆ ವಾಸ್ತು ಬಲ ಬೇಕೋ ಹಾಗೇನೆ ವಿದ್ಯಾಲಯಕ್ಕೂ ಬೇಕು. ಕಾರಣ ಅನಿಶ್ಚಿತತೆಯ ಬದುಕಿನಲ್ಲಿ ನಿಶ್ಚಿತತೆಯನ್ನು ಹುಡುಕುವುದೇ ಜೀವನ. ಇಂತಹ ಜೀವನಕ್ಕೆ ರೂಪ ಕೊಡುವ ಕೆಲಸ ನಡೆಯುವುದೇ ಈ ವಿದ್ಯಾ ಸಂಸ್ಥೆಗಳಲ್ಲಿ . ಇದಕ್ಕೆ ಬೇಕು ದೈವಿಕ ಬಲ. ದೈವಿಕ ಬಲ ಎಂದರೆ ಪಂಚಭೂತಗಳ ಬೆಂಬಲ. ವಸ್ತು ಸ್ಥಿತಿಗಳನ್ನು ವಾಸ್ತವಿಕತೆಯೊಡನೆ ಮೇಳೈಸಿ ನಿರ್ಮಿಸುವ ಯಾವುದೇ ನಿರ್ಮಾಣವನ್ನು ವಾಸ್ತು ಎಂದು ಕರೆದರು ನಮ್ಮ ತ್ರಿಕಾಲ ಜ್ಞಾನಿಗಳಾದ ಋಷಿಮುನಿಗಳು. ಅದಕ್ಕೊಂದು ಶಾಸ್ತ್ರ ರೂಪ ಕೊಟ್ಟು ಗ್ರಂಥಸ್ಥಗೊಳಿಸಿ ಬೋಧಿಸಿದವರು ಆ ಮಹಾ ಮಹಿಮರು. ಶಾರದೆ ವಿದ್ಯಾಧಿದೇವತೆ. ಅವಳು ಎಲ್ಲರ ಪಂಚೇಂದ್ರಿಯಗಳ ಒಡತಿ. ಎಲ್ಲರ ತಾಯಿ. ಆಗರ್ಭ ಶ್ರೀಮಂತರನ್ನು ಸಾಮಾನ್ಯವಾಗಿ ಲಕ್ಷ್ಮೀ ಪತಿಗಳೆಂದು ಕರೆಯುವುದು ವಾಡಿಕೆ. ಆದರೆ, ಆಜನ್ಮ ವಿದ್ವಾಂಸರನ್ನು , ಜ್ಞಾನಿಗಳನ್ನು, ಋಷಿಮುನಿಗಳನ್ನು ಎಲ್ಲರನ್ನೂ ಕರೆಯುವುದು ಮಾತ್ರ ಸರಸ್ವತಿ ಪುತ್ರರೆಂದೇ. ಸರಸ್ವತಿಪತಿ ಎಂಬ ಶಬ್ದ ಎಲ್ಲೂ ಉಪಯೋಗಿಸಲ್ಪಟ್ಟಿಲ್ಲ. ಇದರಿಂದ ನಾವು ಅರಿಯಬಹುದು ಶಾರದೆಯ ಘನತೆ, ವಿದ್ಯೆಯ ಮಹತ್ವ. ಇದುವೇ ಇರುವ ವ್ಯತ್ಯಾಸ ಧನಸಂಪತ್ತು ಮತ್ತು ವಿದ್ಯಾ ಸಂಪತ್ತಿನ ನಡುವೆ. ಮಣ್ಣಿನ ಮುದ್ದೆಗೆ ಮಾನವರೂಪ ಕೊಡುವ ವಿದ್ಯಾಸಂಸ್ಥೆ ಹೇಗಿರಬೇಕು ? ವಾಸ್ತು ಶಾಸ್ತ್ರ ಈ ಕುರಿತು ಏನನ್ನು ನಿರೂಪಿಸುತ್ತದೆ ನೋಡೋಣ.
ವಿದ್ಯಾಲಯಗಳನ್ನು ಪೂರ್ವಮುಖವಾಗಿ ನಿರ್ಮಿಸಿದರೆ ಪ್ರಸಿದ್ಧಿ ಮತ್ತು ಶ್ರೇಯಸ್ಸು ಬರುವುದು. ಉತ್ತರ ಮುಖವಾಗಿ ಕಟ್ಟಿದಲ್ಲಿ ಉತ್ತಮ ಫಲಿತಾಂಶದೊಡನೆ ವಿದ್ಯಾರ್ಥಿಗಳು ಬುದ್ಧಿವಂತರೂ ಆಗುವರು. ಪಶ್ಚಿಮ ದಿಕ್ಕಿಗೆ ಎದುರಾಗಿ ಕಟ್ಟಿದಲ್ಲಿ ವಿದ್ಯೆಯೊಡನೆ ಧಾರ್ಮಿಕ ಸಂಸ್ಕೃತಿ ಬೆಳೆದು ಬರುವುದು. ದಕ್ಷಿಣ ದಿಕ್ಕಿಗೆ ಮುಖ್ಯ ದ್ವಾರ ಬರುವಂತೆ ಕಟ್ಟಿದರೆ ಉನ್ನತ ವ್ಯಾಸಂಗಕ್ಕೆ ಹೆಚ್ಚಿನ ಬಲ ಬರುವುದು. ಅರ್ಥಾತ್ ವೃತ್ತಿ ಪರತೆಗೆ ಹೆಚ್ಚಿನ ಒತ್ತು ಸಿಗುವುದು. ಆದರೆ ಯಾವುದೇ ಕಾರಣಕ್ಕೂ ಮೂಲೆ ದಿಕ್ಕುಗಳಿಗೆ ಮುಖ ಮಾಡಿ ವಿದ್ಯಾಲಯ ಕಟ್ಟಡ ಕಟ್ಟಬಾರದು.ಅಂದರೆ ನೈರುತ್ಯ ವಾಯುವ್ಯ, ಈಶಾನ್ಯ ಹಾಗೂ ಆಗ್ನೇಯ ದಿಕ್ಕುಗಳು ಸಿಂಹದ್ವಾ ಇಡಲು ನಿಷಿದ್ಧ. ಈ ಸಂಸ್ಥೆಗಳ ಎದುರಿನಿಂದ ಹಾದುಹೋಗುವ ಮಾರ್ಗವು ದಕ್ಷಿಣದಿಂದ ಉತ್ತರಕ್ಕೆ ತಗ್ಗಾಗಿ, ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿ ಹರಿದು ಹೋಗಿದ್ದರೆ ಸಂಸ್ಥೆಯ ಕೀರ್ತಿ ಹೆಚ್ಚುವುದು. ಪೂರ್ವ ಮತ್ತು ಉತ್ತರ ದಿಕ್ಕುಗಳಲ್ಲಿ ನೀರ ಹರಿವು ವಿದ್ಯಾಲಯಕ್ಕೆ ಶ್ರೇಯಸ್ಸನ್ನುಂಟು ಮಾಡುವುದು.
ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ನೈರುತ್ಯದ ಕೊಠಡಿಯಲ್ಲಿ ಪೂರ್ವ ಅಥವಾ ಉತ್ರ ಮುಖ್ಮಾಡಿ ಕುಳಿತುಕೊಳ್ಳಬೇಕು. ಈ ಕೋಣೆಯ ನೆಲಮಟ್ಟ ಬೇರೆಲ್ಲ ಕಡೆಗಿಂತ ಹೆಚ್ಚು ಎತ್ತರವಾಗಿರಬೇಕು. ಅಧ್ಯಾಪಕ ಕಠಡಿ ಪಶ್ಚಿಮ ಅಥವಾ ದಕ್ಷಿಣದಲ್ಲಿ ಇರಬೇಕು. ಅವರೂ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಬೇಕು. ಪ್ರಯೋಗ ಶಾಲೆ ದಕ್ಷಿಣದಲ್ಲಿ ಉತ್ತಮ. ಗ್ರಂಥಾಲಯ ಉತ್ತರದಲ್ಲಿದ್ದು ವಾಚನಾಲಯವನ್ನು ಈಶಾನ್ಯದಲ್ಲಿ ವ್ಯವಸ್ಥೆಗೊಳಿಸಬೇಕು. ಪ್ರವಚನ ಮಂದಿರ ಅಂದರೆ ಪಾಠ ಹೇಳುವ ಕೊಠಡಿಗಳಿಗೆ ಪೂರ್ವ ಮತ್ತು ಉತ್ತರದ ಬದಿ ಹೆಚ್ಚು ಫಲದಾಯಕ. ಅಧ್ಯಾಪಕ ವೇದಿಕೆ ಪಶ್ಚಿಮ ಅಥವಾ ದಕ್ಷಿಣದ ಬದಿಯಲ್ಲಿರಬೇಕು. ಆಗ ಅವರು ಪೂರ್ವ ಹಾಗೂ ಉತ್ತರ ದಿಕ್ಕಿಗೆ ಮುಖ ಮಾಡಿ ಪಾಠ ಮಾಡಲು ಅನುಕೂಲಕರವಾಗುವುದು. ಹೀಗೆ ವ್ಯವಸ್ಥೆಗೊಳಿಸುವುದರಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
ವಿದ್ಯಾರ್ಥಿಗಳಿಗೆ ಆಟೋಟದ ಬಯಲು ಉತ್ತರ ಅಥವಾ ಪೂರ್ವದಲ್ಲಿ ನಿರ್ಮಿಸಬೇಕು. ಒಟ್ಟಾರೆಯಾಗಿ ಜ್ಞಾನಕಾರಕ ಹಾಗೂ ಶ್ರೇಯಸ್ಸನ್ನು ಅನುಗ್ರಹಿಸುವ ರವಿ, ಬುಧ, ಗುರು ಮತ್ತು ಶುಕ್ರ ಮಹಾಗ್ರಹಗಳ ಅನುಗ್ರಹ ವಿದ್ಯಾಸಂಸ್ಥೆಯ ಮೇಲೆ ಸಂಪೂರ್ಣವಾಗಿ ಇರಬೇಕು. ಅವರ ಅಧಿಪತ್ಯಕ್ಕೆ ಒಳಪಡುವ ದಿಕ್ಕುಗಳಿಗೆ ಯಾವುದೇ ನ್ಯೂನ್ಯತೆ ಉಂಟಾಗಬಾರದು. ಕೊರತೆಯಾದಲ್ಲಿ ನಿರೀಕ್ಷಿತ ಫಲಿತಾಂಶ ದೊರಕಲಾರದು. ಎಲ್ಲವೂ ಸರಿಯಾಗಿದ್ದು, ನಿರ್ಮಾಣ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಆದಲ್ಲಿ ವಿದ್ಯಾಮಂದಿರ ಜ್ಞಾನದೇಗುಲ ಆಗುವುದರಲ್ಲಿ ಯಾವುದೇ ಸಂಶಯ ಬೇಡ.
-ಜೆ.ಕೆ. ಜೈನ್
ನವರತ್ನ ಮಾಲಿಕೆ: ಶತ್ರು ನಾಶಕ್ಕೆ ಹವಳ
ಆಭರಣಗಳೊಂದಿಗೆ ರತ್ನಗಳನ್ನು ಬೆಸೆದು ಧಾರಣೆ ಮಾಡುವುದು ನಮ್ಮ ಸಂಪ್ರದಾಯಗಳಲ್ಲಿ ಒಂದು. ರತ್ನ ಧಾರಣೆಯಿಂದ ಆರೋಗ್ಯ ಸುಧಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಜ್ಯೋತಿಷ್ಯಶಾಸ್ತ್ರ ರೀತ್ಯ ಒಂಬತ್ತು ಗ್ರಹಗಳಿರುವಂತೆ ಗ್ರಹಗಳ ವರ್ಣಧಾತುವಿಗೆ ಸಂಬಂಧಿಸಿದಂತೆ ರತ್ನಗಳಿವೆ. ನಾವು ಈಗಾಗಲೇ ಮುತ್ತು ಮತ್ತು ಮಾಣಿಕ್ಯವನ್ನು ಧಾರಣೆ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಂಡಿದ್ದೇವೆ. ನಾವಿಂದು ಹವಳದ ಬಗ್ಗೆ ತಿಳಿದುಕೊಳ್ಳೋಣ.
ಹವಳವನ್ನು ಆಂಗ್ಲಭಾಷೆಯಲ್ಲಿ ಕೋರಲ್ ಎಂದು ಕರೆಯುತ್ತಾರೆ. ಹವಳವು ಸಮುದ್ರದಲ್ಲಿ ವಾಸಿಸುವ ಅಕಶೇರುಕಗಳಿಂದ ಸಿಗುತ್ತದೆ. ಈ ಬಗೆಯ ಅಕಶೇರುಕಗಳು ಉಷ್ಣವಲಯದಲ್ಲಿರುವ ಸಾಗರಗಳಲ್ಲಿ ವಾಸಿಸುತ್ತವೆ. ತಮ್ಮ ಅಸ್ಥಿಗಳಿಂದ ಕ್ಯಾಲ್ಷಿಯಂ ಕಾರ್ಬನೇಟ್ ರಾಸಾಯನಿಕವನ್ನು ಸ್ರವಿಸುತ್ತವೆ. ಕೆಂಪು ಹವಳಗಳು ನಳಿಕೆಯಂತೆ ಒಂದಕ್ಕೊಂದು ಕೂಡಿಕೊಂಡಿರುತ್ತವೆ. ಹವಳದಲ್ಲಿ ಕೆಂಪು ಹವಳಕ್ಕೆ ಹೆಚ್ಚು ಪ್ರಾಶಸ್ತ್ಯ. ಇನ್ನುಳಿದಂತೆ ಗುಲಾಬಿ ಬಣ್ಣದಲ್ಲೂ ಲಭ್ಯವಾಗುತ್ತದೆ. ಹವಳವನ್ನು ಲತಾಮಹ, ಅಂಗಾರಕಮಣಿ, ರಕ್ತಾಂಗ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಸಮುದ್ರದಲ್ಲಿ ಸಿಗುವ ಹವಳಗಳ ತೂಕ ಅಷ್ಟಾಗಿ ಇರುವುದಿಲ್ಲ. ಮೇಲಾಗಿ ಅಸಲಿ ಹವಳವನ್ನು ನೆಲ ಅಥವಾ ಯಾವುದೇ ಹೊರಮೈಗೆ ಉಜ್ಜಿದಾಗ ಶಬ್ದ ಬರುವುದಿಲ್ಲ.
ಹವಳದ ವಿಧಗಳು :
ಹವಳವನ್ನು ವರ್ಣಗಳ ಆಧಾರದ ಮೇಲೆ ವಿಂಗಡಿಸಲಾಗಿದೆ.
1. ಬ್ರಾಹ್ಮಣ ಹವಳ : ರಕ್ತದಂತೆ ಕೆಂಪಾಗಿರುತ್ತದೆ.
2. ಕ್ಷತ್ರಿಯ ಹವಳ : ಸಿಂಧೂರ ವರ್ಣವುಳ್ಳದ್ದಾಗಿದ್ದು ಗಡುಸಾಗಿರುತ್ತದೆ.
3 ವೈಶ್ಯ ಹವಳ : ಹಳದಿ ಅಥವಾ ಗುಲಾಬಿ ಬಣ್ಣವನ್ನು ಹೊಂದಿರುತ್ತದೆ. ಅಷ್ಟೇನು ಕಾಂತಿಯುಕ್ತವಾಗಿರುವುದಿಲ್ಲ.
4. ಶೂದ್ರ ಹವಳ : ಕಮಲದ ಬಣ್ಣವನ್ನು ಹೊಂದಿದ್ದು ಕಠಿಣವಾಗಿರುತ್ತದೆ.
ಯಾರು ಧರಿಸಿದರೆ ಶುಭ?
ಹವಳವು ಮಂಗಳ (ಕುಜ) ಗ್ರಹವನ್ನು ಪ್ರತಿನಿಧಿಸುತ್ತದೆ. ಯಾರ ಜಾತಕದಲ್ಲಿ ಕುಜನು ಶುಭಸ್ಥಾನದಲ್ಲಿರುತ್ತಾನೋ ಅಂತಹವರು ಹವಳವನ್ನು ಧರಿಸಿದರೆ ಶುಭಪ್ರದವಾಗುತ್ತದೆ.
1. ಮೇಷ ರಾಶಿ : ಮೇಷರಾಶಿಯವರಿಗೆ ಕುಜನು ರಾಶ್ಯಾಧಿಪತಿಯಾಗಿದ್ದಾನೆ. ಹಾಗಾಗಿ ಈ ರಾಶಿಯವರು ಹವಳವನ್ನು ಧರಿಸುವುದರಿಂದ ಆಯಸ್ಸು ವೃದ್ಧಿ, ಉತ್ತಮ ಆರೋಗ್ಯ, ಕೀರ್ತಿಯನ್ನು ಪಡೆಯುತ್ತಾರೆ.
2. ಕಟಕ ರಾಶಿ : ಕಟಕ ರಾಶಿಯವರಿಗೆ ಕುಜನು 5 ಮತ್ತು 10 ಸ್ಥಾನದ ಅಧಿಪತಿಯಾಗಿರುತ್ತಾನೆ. ಕಟಕ ರಾಶಿಯ ರಾಶ್ಯಾಧಿಪತಿ ಚಂದ್ರ. ಚಂದ್ರ ಮತ್ತು ಕುಜ ಮಿತ್ರರು. ಕಟಕರಾಶಿಯವರು ಹವಳವನ್ನು ಧರಿಸುವುದರಿಂದ ಒಳ್ಳೆಯ ಫಲಗಳನ್ನು ಪಡೆಯುತ್ತಾರೆ. ಸಂತಾನ ಲಾಭ, ಯಶಸ್ಸು, ಕೀರ್ತಿ ಲಭ್ಯವಾಗುತ್ತದೆ.
3. ಸಿಂಹ ರಾಶಿ : ಸಿಂಹ ರಾಶಿಯವರಿಗೆ ಕುಜನು 4 ಮತ್ತು 9ನೇ ಮನೆಯ ಅಧಿಪತಿಯಾಗಿದ್ದಾನೆ. ಸಿಂಹರಾಶಿಯ ರಾಶ್ಯಾಧಿಪತಿ ರವಿ. ರವಿ ಮತ್ತು ಕುಜ ಸ್ನೇಹಿತರು. ಸಿಂಹರಾಶಿಯವರು ಹವಳ ಧರಿಸುವುದರಿಂದ ಮಾನಸಿಕ ಶಾಂತಿ, ಭೂಮಿ, ಗೃಹ ಲಾಭವನ್ನು ಪಡೆಯುವರು. ಇನ್ನುಳಿದಂತೆ ಕಳತ್ರ ಸೌಖ್ಯ, ಮಾತೃ ಭಾಗ್ಯ, ಯಶಸ್ಸು ಲಭಿಸುವುದು.
4 ವೃಶ್ಚಿಕ ರಾಶಿ : ವೃಶ್ಚಿಕರಾಶಿಯ ರಾಶ್ಯಾಧಿಪತಿ ಕುಜ. ಈ ರಾಶಿಯವರು ಹವಳವನ್ನು ಧರಿಸುವುದರಿಂದ ಆಯುರ್ ವೃದ್ಧಿ, ಆರೋಗ್ಯ ಭಾಗ್ಯ, ಕೀರ್ತಿ ಲಭಿಸುವುದು.
5. ಧನಸ್ಸು ರಾಶಿ : ಧನಸ್ಸು ರಾಶಿಯವರಿಗೆ ಕುಜನು 5 ಮತ್ತು 12ನೇ ಮನೆಯ ಅಧಿಪತಿಯಾಗುತ್ತಾನೆ. ಧನಸ್ಸು ರಾಶಿಯ ರಾಶ್ಯಾಧಿಪತಿ ಗುರು. ಗುರು ಮತ್ತು ಕುಜ ಮಿತ್ರರು. ಆದ್ದರಿಂದ ಈ ರಾಶಿಯವರು ಹವಳವನ್ನು ಧರಿಸಬಹುದು. ಸಂತಾನ, ಆರೋಗ್ಯ ಲಾಭಗಳು ಉಂಟಾಗುತ್ತವೆ. ಅದರಲ್ಲೂ ಕುಜದೆಸೆ ನಡೆಯುವಾಗ ಹವಳದ ಉಂಗುರ ಧರಿಸುವುದರಿಂದ ಹೆಚ್ಚಿನ ಲಾಭ ಸಿಗುತ್ತದೆ.
6. ಮಕರ ರಾಶಿ : ಮಕರ ರಾಶಿಯವರಿಗೆ ಕುಜನು 4 ಮತ್ತು 11ನೇ ಮನೆಯ ಅಧಿಪತಿಯಾಗಿದ್ದಾನೆ. ಮಕರ ರಾಶಿಯ ಅಧಿಪತಿ ಶನಿ. ಶನಿ ಮತ್ತು ಕುಜ ಸಮಾನರು. ಹಾಗಾಗಿ ಈ ರಾಶಿಯವರು ಹವಳವನ್ನು ಧರಿಸುವುದರಿಂದ ಸಾಧಾರಣ ಫಲವನ್ನು ನಿರೀಕ್ಷಿಸಬಹುದು.
7. ಮೀನ ರಾಶಿ : ಮೀನರಾಶಿಯವರಿಗೆ ಕುಜನು 2 ಮತ್ತು 9ನೇ ಮನೆಯ ಅಧಿಪತಿಯಾಗಿದ್ದಾನೆ. ಮೀನರಾಶಿಯ ಅಧಿಪತಿ ಗುರುವಾಗಿದ್ದಾನೆ. ಕುಜನಿಗೆ ಗುರು ಮಿತ್ರನಾಗಿರುವುದರಿಂದ ಹವಳ ಧರಿಸುವುದರಿಂದ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು.
ಧಾರಣೆ ಹೇಗೆ?
ಹವಳವನ್ನು ಹಸುವಿನ ಹಾಲಿನಲ್ಲಿ ಮಂಗಳವಾರ ಸ್ವಲ್ಪ ಕಾಲ ನೆನೆ ಹಾಕಬೇಕು. ನಂತರ ಹವಳವನ್ನು ಕೆಂಪು ಅಕ್ಷತೆ, ಕುಂಕುಮ, ಕೆಂಪು ಕಣಗಿಲ ಹೂವಿನಿಂದ ಪೂಜಿಸಬೇಕು. ನಂತರ ಕುಜ ದೇವರ ಪ್ರೀತ್ಯರ್ಥವಾಗಿ ಓಂ ಕುಜಾಯ ನಮಃ ಎಂಬ ಮಂತ್ರವನ್ನು ಏಳು ಸಾವಿರ ಬಾರಿ ಜಪಿಸಬೇಕು. ನಂತರವಷ್ಟೇ ಹವಳದ ಉಂಗುರವನ್ನು ಧರಿಸಬೇಕು.
-ಮಂಡಗದ್ದೆ ಪ್ರಕಾಶ್ ಬಾಬು
ದಾಂಪತ್ಯದಲ್ಲಿ ಹೊಂದಾಣಿಕೆಗೆ ರಜ್ಜು ಕೂಟ
'ನೋಡ್ರಿ ಹೇಗಾಯ್ತು ಅವರ ಸಂಸಾರ! ಇನ್ನೂ ಮದುವೆಯಾಗಿ ಆರು ತಿಂಗಳಾಗಿಲ್ಲ... ಕೇದಾರನಾಥದಲ್ಲಿ ಕಟ್ಟಡ ಉರುಳಿದಂತೆ ಉರುಳಿ ಹೋಯ್ತಲ್ರಿ' ಶಾಲಿನಿ ಪಕ್ಕದ ಮನೆಯವರ ಜತೆ ಒಂದೇ ಸಮನೆ ಗೊಣಗ್ತಾ ಇದ್ದಳು .
ಅಲ್ರೀ ಅವರಿಗೇನಾಗಿತ್ತು.. ಮೊದಲೇ ಜೋಯಿಸ್ರ ಕುಟುಂಬದವರು... ಸರಿಯಾಗಿ ಜಾತಕ ತೋರ‌್ಸಿ ಮದುವೆ ಆಗಬಾರದಿತ್ತಾ! ಅದೇನೋ ಹೇಳ್ತಾರಲ್ಲಾ ... ಗ್ರಹ ಸಾಮ್ಯತೆ ಇರ‌್ಲಿಲ್ವೇನೋ! ಅದೇನೋ ಅಂದ್ರು ನಮ್ ಮಲ್ಲಿ... ಒಳ್ಳೇ ಮಲ್ಲಿಗೆಯಂತ ಹುಡುಗಿ ಕಣ್ರಿ. ಅವಳ ಬಾಳು ಹೀಗಾಗಬಾರದಿತ್ತು... ಛೇ... ಕಮಲಮ್ಮನದು ಅದೇ ವ್ಯಂಗ್ಯನೋಟ.
ಇಲ್ರೀ.. ಕಮಲಮ್ಮ, ಅವರೂ ಜಾತಕ ತೋರಿಸಿ, ಅದೇನೋ ಕವಡೆ ಪ್ರಶ್ನೆ, ಮನೆ ದೇವರ ಮುಂದೆ ನಂದಾದೀಪದ ಪ್ರಶ್ನೆ ಇಟ್ಟ ನಂತರವೇ ಮುಂದುವರಿದದ್ದು... ಈ ಜಾತಕ, ಜ್ಯೋತಿಷ್ಯ ಅವರಿಗೇನು ಹೊಸದಲ್ಲ ಬಿಡಿ.... ಅಷ್ಟೆಲ್ಲಾ ನೋಡಿದ್ರೂ ,,,,, ಶಾಲಿನಿಯದು ಮತ್ತದೇ ರಾಗ.
ಹೌದು, ಈಚಿನ ದಿನಗಳಲ್ಲಿ ವಧು-ವರರ ಜನ್ಮಕುಂಡಲಿಗಳು ಕೂಡಿಬಂದು ವಿವಾಹ ಆದರೂ, ವಿವಾಹ ಸಂಬಂಧ ಮುರಿದು ಬೀಳುತ್ತಿವೆ. ಒಂದಾಗ ಬೇಕಿದ್ದ ಕುಟುಂಬಗಳು ಪರಸ್ಪರ ಬೇರೆ ಬೇರೆಯಾಗುತ್ತಿವೆ. ಸತಿ-ಪತಿಯರು ದೂರವಾಗುತ್ತಿದ್ದಾರೆ. ಪ್ರತಿನಿತ್ಯ ಇಂತಹ ಅನೇಕ ಪ್ರಸಂಗಗಳು ನಮ್ಮ ಮುಂದೆ ಕಾಣಿಸುತ್ತಿವೆ. ಯಾಕೆ ಹೀಗಾಯ್ತು? ಅಂತ ಕೊರಗೋ ಬದಲು ಮತ್ತೊಮ್ಮೆ ಜಾತಕ ಪರಿಶೀಲಿಸಿ. ವಧೂ-ವರರ ರಜ್ಜುಕೂಟದಲ್ಲಿ ಸಾಮ್ಯತೆ ಇದೆಯೇ ಎಂದು ನೋಡಿ. ಇದನ್ನೇ ಕಾಲ ಪ್ರಕಾಶಕ ಗ್ರಂಥದಲ್ಲಿ, 'ರಜ್ಜುರ್ ಮಾಂಗಲ್ಯ ವೃದ್ಧಿಶ್ಚ' ಎಂದು ಉಲ್ಲೇಖಿಸಲಾಗಿದೆ.
ಏನಿದು ರಜ್ಜುಕೂಟ?
ಗ್ರಹ ಕೂಟಗಳಿಗೆ ಇರುವಂತೆ ಇದಕ್ಕೆ ಅಂಕ ಇಲ್ಲ. 27 ನಕ್ಷತ್ರಗಳನ್ನು ಕಾಲ ಪ್ರಕಾಶಕ ಅಂಗಾಂಗಳ ರೂಪದಲ್ಲಿ ತೋರಿಸಲಾಗಿದೆ. ಆ ಅಂಗಾಂಗಳೇ ಪಾಕ, ಕಟಿ, ಉದರ, ಕಂಠ ಮತ್ತು ಶಿರಗಳಾಗಿವೆ. ಆ ವಿವರಗಳನ್ನು ಕೆಳಗೆ ಕೊಡಲಾಗಿದೆ.
ಪಾದ : ಅಶ್ವಿನಿ, ಆಶ್ಲೇಷ, ಮಖ, ಜ್ಯೇಷ್ಠ, ಮೂಲ ಮತ್ತು ರೇವತಿ
ಕಟಿ (ಸೊಂಟ) : ಭರಣಿ, ಪುಷ್ಯ, ಪುಬ್ಬ, ಅನುರಾಧಾ, ಪೂರ್ವಾಷಾಢ ಮತ್ತು ಉತ್ತರಾಭಾದ್ರ
ಉದರ (ಹೊಟ್ಟೆ) : ಕೃತ್ತಿಕೆ, ಪುನರ್ವಸು, ಉತ್ತರೆ, ವಿಶಾಖ, ಉತ್ತಾರಾಷಾಢ ಮತ್ತು ಪೂರ್ವಾಭಾದ್ರ
ಕಂಠ (ಕುತ್ತಿಗೆ) : ರೋಹಿಣಿ, ಆರಿದ್ರಾ, ಹಸ್ತ, ಸ್ವಾತಿ, ಶತಭಿಷ
ಶಿರ ( ತಲೆ) : ಮೃಗಶಿರ, ಚಿತ್ತ ಮತ್ತು ಧನಿಷ್ಠ
ಆಗುವ ತೊಂದರೆಯೇನು?
ವಧೂ-ವರರ ರಜ್ಜು ಒಂದೇ ಇರಬಾರದು. ಅಂತಹವರು ಪರಸ್ಪರ ಜಗಳವಾಡುತ್ತಾರೆ. ಶಿರ ರಜ್ಜು ಇದ್ದರೆ ಪತಿಗೆ ಮಾರಕ. ಕಂಠ ರಜ್ಜುವಿದ್ದರೆ ಪತ್ನಿಗೆ ಮಾರಕ, ಉದರ ರಜ್ಜುವಿದ್ದರೆ ಸಂತಾನ ಹೀನತೆ, ಕಟಿ ರಜ್ಜು ಇದ್ದರೆ ಬಡತನ, ಪಾದರಜ್ಜು ಇದ್ದರೆ ಸತಿ-ಪತಿಯರಿಬ್ಬರೂ ಉದ್ಯೋಗದಲ್ಲಿದ್ದರೆ ಬೇರೆ ಬೇರೆ ಊರುಗಳಲ್ಲಿರುತ್ತಾರೆ. ಇಬ್ಬರೂ ಒಂದಾಗುವುದು ಅಪರೂಪ.
ಶಾಸ್ತ್ರ ಸಮ್ಮತ ವಿಷಯ
ಆದರೆ ಕೆಲವೊಂದು ವಿಷಯದಲ್ಲಿ ರಜ್ಜು ಒಂದೇ ಇದ್ದರೂ ಕೂಡಿ ಬರುತ್ತದೆ. ಸತಿ-ಪತಿಯರ ನಕ್ಷತ್ರ, ರಾಶಿ ಒಂದೇ ಆಗಿದ್ದರೆ, ಸಮ ಸಪ್ತದಲ್ಲಿದ್ದರೆ, ಗ್ರಹ ಮಿತ್ರತ್ವವಿದ್ದರೆ ವಿವಾಹವನ್ನು ಮಾಡಬಹುದು ಎಂದು ಕಾಲ ಪ್ರಕಾಶಕ ಗ್ರಂಥದಲ್ಲಿ ಹೇಳಲಾಗಿದೆ. ಅದೇ ರೀತಿ ರಾಶಿ, ಗ್ರಹ ಮಿತ್ರತ್ವ, ದಿನಕೂಟ ಮತ್ತು ಮಹೇಂದ್ರ ಕೂಟಗಳಲ್ಲಿ ಸಾಮ್ಯತೆ ಕಂಡು ಬಂದರೂ, ರಜ್ಜುಕೂಟದಲ್ಲಿ ದೋಷವಿದ್ದರೂ ಪರವಾಗಿಲ್ಲ. ಈ ಅಂಶವನ್ನು ಮುಹೂರ್ತ ದರ್ಪಣ ಗ್ರಂಥದಲ್ಲಿ ನೋಡಬಹುದು.
ಫಲಾಫಲಗಳು
ಆದರೆ ಇತ್ತೀಚೆಗಿನ ವಿಜ್ಞಾನ ಆಧಾರದಂತೆ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಪಾದದ ನಕ್ಷತ್ರದವರಿಗೆ ಸಾಡೇಸಾತ್ ಕಂಡು ಬಂದಾಗ, ವಿನಾಕಾರಣ ತಿರುಗಾಟ ಕಂಡು ಬರುತ್ತದೆ. ನೌಕರ ವರ್ಗದವರಾಗಿದ್ದರೆ ವರ್ಗಾವಣೆ ಸನ್ನಿಹಿತವಾಗುತ್ತದೆ. ಅಂತೆಯೇ ಕಟಿ ವರ್ಗಕ್ಕೆ ಸೇರಿದ ನಕ್ಷತ್ರದವರಿಗೆ ನಕ್ಷತ್ರ ದಶಾ ಕಾಲದಲ್ಲಿ ಸೊಂಟ ನೋವು ಉಂಟಾಗುತ್ತದೆ. ಉದರ ವರ್ಗಕ್ಕೆ ಸೇರಿದ ನಕ್ಷತ್ರದವರಿಗೆ, ಮಹಿಳೆಯರಾದರೆ ಜನನ ಕಾಲದಲ್ಲಿ ಕಷ್ಟ ಉಂಟಾಗುತ್ತದೆ. ಕಂಠ ವರ್ಗಕ್ಕೆ ಸೇರಿದ ನಕ್ಷತ್ರದವರಿಗೆ ಗ್ರಹದೋಷವಿದ್ದ ಕಾಲದಲ್ಲಿ ಗಂಟಲು, ಥೈರಾಯ್ಡ್ ಸಂಬಂಧ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಶಿರ ಸಂಬಂಧ ನಕ್ಷತ್ರದವರಿಗೆ ಕುಜರಾಹು ಸಂಧಿಕಾಲದಲ್ಲಿ ಅವಘಡ ಉಂಟಾಗಿ ತಲೆಗೆ ಪೆಟ್ಟು ತಗಲುವ ಸಾಧ್ಯತೆ ಹೆಚ್ಚು.
ಪರಿಹಾರ ಹೇಗೆ?
ರಜ್ಜು ಕೂಟ ದೋಷ ಪರಿಹಾರಕ್ಕಾಗಿ ಹಿಂದೂ ಧರ್ಮೀಯರು ಬುಧವಾರ ವಿಷ್ಣು ಸಹಸ್ರನಾಮ ಪಠಿಸಬೇಕು. ಜೈನರಾದರೆ, ಪ್ರತಿನಿತ್ಯ ಭಕ್ತಾಂಗುರ ಪೂಜೆ ಮಾಡಬೇಕು. ಇತರ ಧರ್ಮೀಯರಾದರೆ, ನವರತ್ನ ಉಂಗುರವನ್ನು ಮಧ್ಯದ ಬೆರಳಿನಲ್ಲಿ ಧರಿಸುವುದರಿಂದ ಫಲ ಕಾಣಬಹುದು. ಪುರುಷರು ಬಲಗೈಯಲ್ಲಿ ಧರಿಸಬೇಕು, ಸ್ತ್ರೀಯರು ಎಡಗೈಯಲ್ಲಿ ಧರಿಸುವುದು ಒಳ್ಳೆಯದು. ನವರತ್ನ ಉಂಗುರ ಧರಿಸುವಾಗ ನೀಲರತ್ನ ಮೇಲ್ಬದಿಯಲ್ಲಿರುವಂತೆ ನೋಡಿಕೊಳ್ಳಬೇಕು.
-ರತ್ನರಾಜ್ ಜೈನ್
Subscribe to:
Comments (Atom)