Monday, July 2, 2012

ಬಿಲ್ವಪತ್ರೆಗೆ ಬಹಳ ಮಹತ್ವವಿದೆ

ಬಿಲ್ವಪತ್ರೆಗೆ ಬಹಳ ಮಹತ್ವವಿದೆ * ಡಾ. ಎಸ್.ಎನ್. ಶೈಲೇಶ್ ಬಾಣಾವಾರ


ಬಿಲ್ವಪತ್ರೆಗೆ ಬಹಳ ಮಹತ್ವವಿದೆ. ಸಾಮಾನ್ಯವಾಗಿ ಶಿವರಾತ್ರಿ ಹಬ್ಬ ಬಂದರಂತೂ ಇದರ ಮಹತ್ವ ಇನ್ನೂ ಹೆಚ್ಚುತ್ತದೆ. ಅಂದು ಈಶ್ವರನ ದೇವಸ್ಥಾನಗಳಲ್ಲಿ ಬಿಲ್ವಪತ್ರೆಯಿಂದ ಪೂಜಾರಾಧನೆ ಮಾಡುವುದು ವಾಡಿಕೆ. ಈಶ್ವರನಿಗೆ ಪ್ರತಿ ದಿನವೂ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ತುಂಬಾ ಶ್ರೇಷ್ಠ. ಈಶ್ವರನು ಜಲಪ್ರಿಯ ಹಾಗೂ ಬಿಲ್ವಪ್ರಿಯ. ಸಾಮಾನ್ಯವಾಗಿ ಈಶ್ವರನ ದೇವಾಲಯ ಇರುವ ಕಡೆ ಬಿಲ್ವಪತ್ರೆ ಮರವು ಇದ್ದೇ ಇರುತ್ತದೆ. ಈ ಬಿಲ್ವ ಪತ್ರೆ ಮರದಲ್ಲಿ ಮುಳ್ಳು ಏನಿದೆ ಅದು ಶಕ್ತಿ ಮಾತೆಯನ್ನು ಗಿಡದ ಕೊಂಬೆಗಳು. ವೇದಗಳನ್ನು ಮರದ ಬೇರುಗಳು ಈಶ್ವರನನ್ನು ಸೂಚಿಸುತ್ತದೆ. ಬಿಲ್ವಪತ್ರೆಯ ಮೂರು ದಳಗಳಿಂದ ಕೂಡಿ ಒಂದೊಂದು ದಳವು ಕೂಡಾ ಒಂದೊಂದು ಗುಣಗಳನ್ನು ಹೊಂದಿದೆ. ಅವು ಸತ್ವ, ರಜೋ, ತಮಾ ಗುಣಗಳನ್ನು ಸೂಚಿಸುತ್ತದೆ. ಈ ಮೂರು ದಳಗಳನ್ನು ಈಶ್ವರನ ಮೂರು ಕಣ್ಣುಗಳು ಎಂಬ ನಂಬಿಕೆ ಇದೆ.

'ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಂ, ತ್ರಿಜನ್ಮ ಪಾಪ ಸಂಹಾರಂ ಏಕಬಿಲ್ವಂ ಶಿವಾರ್ಪಣಂ' ಎಂಬ ಸ್ತೋತ್ರ ಇದೆ. ಅಂದರೆ ಮೂರು ದಳ, ಮೂರು ಆಕಾರ, ಮೂರು ಕಣ್ಣು ಹಾಗೂ ಮೂರು ಆಯುಧವನ್ನು ಹೊಂದಿರುವ ಒಂದು ಬಿಲ್ವಪತ್ರೆಯನ್ನು ಭಕ್ತಿಯಿಂದ ಈಶ್ವರನಿಗೆ ಸರ್ಮಪಿಸಿದರೆ ಮೂರು ಜನ್ಮದ ಪಾಪವು ಪರಿಹಾರವಾಗುತ್ತದೆ ಎಂದರ್ಥ.

ಬಿಲ್ವಪತ್ರೆಯನ್ನು ಹಿಂದೂ ಸಂಸ್ಕೃತಿಯಲ್ಲಿ ಬಹಳ ಶ್ರೇಷ್ಠ ಹಾಗೂ ಪರಮ ಪವಿತ್ರ ಎನ್ನಲಾಗುತ್ತದೆ. ಧರ್ಮಗ್ರಂಥಗಳಲ್ಲಿಯೂ ಬಿಲ್ವಪತ್ರೆಯ ಬಗ್ಗೆ ತಿಳಿಸಲಾಗಿದೆ. ಬಹುಕಾಲದವರೆಗೂ ಗಂಡ ಹೆಂಡತಿಗೆ ಸಂತಾನ ಪ್ರಾಪ್ತಿಯಾಗದೆ ಇದ್ದಾಗ ಒಂದು ಮಂಡಲ ಅಂದರೆ 48 ದಿನ ಬಿಲ್ವಪತ್ರೆಯ ಮರಕ್ಕೆ ಪೂಜೆ ಮಾಡಿದರೆ ಮಕ್ಕಳ ಫಲ ದೊರಕುವುದೆಂದು ಕೆಲವು ಗ್ರಂಥಗಳಲ್ಲಿ ತಿಳಿಸಲಾಗಿದೆ. ಮರಕ್ಕೆ ಪೂಜೆ ಸಲ್ಲಿಸಿ ಪತ್ರೆಯನ್ನು ಸೇವಿಸಿದರೆ ಶುಭವಾಗುತ್ತದೆ ಎನ್ನುವುದೂ ಸಹಾ ಒಂದು ನಂಬಿಕೆ. ಈ ಬಿಲ್ವಪತ್ರೆಯ ಮರಕ್ಕೆ ಶಿವದ್ರುಮ ಎಂಬ ಮತ್ತೊಂದು ಹೆಸರಿದೆ. ಶ್ರೀ ಮಹಾವಿಷ್ಣು ಅಲಂಕಾರ ಹಾಗೂ ತುಳಸಿ ಪ್ರಿಯನಾದರೆ ಈಶ್ವರನು ಜಲಪ್ರಿಯ ಹಾಗೂ ಬಿಲ್ವಪ್ರಿಯ. ಮಾನವನು ಮಾಡಿದ ಪಾಪ ಕರ್ಮಗಳು ಈ ಬಿಲ್ವಪತ್ರೆಯನ್ನು ಈಶ್ವರನಿಗೆ ಅರ್ಪಿಸುವುದರಿಂದ ನಾಶವಾಗುತ್ತದೆ ಎಂಬುದು ನಂಬಿಕೆ.

ಬಿಲ್ವಪತ್ರೆಯ ಮರವು ಶ್ರೀ ಮಹಾಲಕ್ಷ್ಮಿಯ ಬಲದ ಕೈಕಮಲದಿಂದ ಹುಟ್ಟಿದೆ ಎಂದು ಪುರಾಣಗಳು ತಿಳಿಸುತ್ತವೆ. ಈ ಮರಕ್ಕೆ ಶ್ರೀ ವೃಕ್ಷ ಎಂದೂ ಕರೆಯುತ್ತಾರೆ. ಹೋಮದ ಸಮಯದಲ್ಲಿ ಈ ಮರದ ಕಡ್ಡಿಗಳನ್ನು ಉಪಯೋಗಿಸಿದರೆ ಶುಭ ಫಲ ದೊರೆಯುತ್ತದೆ.

ಬಿಲ್ವಪತ್ರೆಯನ್ನು ಕ್ರಮವಾಗಿ ಸೇವಿಸಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಕಾರಣ ಬಿಲ್ವಪತ್ರೆಯ ಔಷಧಿ ಗುಣದಿಂದ ಕೂಡಿದೆ ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆಯ ಔಷಧಿಗುಣದಿಂದ ಕೂಡಿದ್ದು ಎಷ್ಟೋ ಕಾಯಿಲೆಗಳು ಈ ಬಿಲ್ವಪತ್ರೆ ಸೇವನೆಯಿಂದ ವಾಸಿಯಾಗಿದೆ. ಬಿಲ್ವಪತ್ರೆಯ ಹಣ್ಣಿನ ಸೇವನೆ ಮಾಡಿದರೆ ಅಜೀರ್ಣ, ಅತಿಸಾರ, ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ, ಕಡಿಮೆಯಾಗುತ್ತದೆ ಎಂದೂ ಪರಿಗಣಿಸಲಾಗುತ್ತದೆ.

ಶುಕ್ರವಾರದಂದು ಈ ಬಿಲ್ವ ಫಲವನ್ನು ಪೂಜಿಸಿ ಮನೆಯಲ್ಲಿ ಇಟ್ಟರೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ. ವ್ಯಾಪಾರ ವ್ಯವಹಾರಗಳು ಅಭಿವೃದ್ಧಿಯಾಗುತ್ತದೆ. ಆಯುರ್ವೇದದಲ್ಲಿ ಈ ಮರದ ಪ್ರತಿಯೊಂದು ಭಾಗವು ಔಷಧಿಯ ಗುಣದಿಂದ ಕೂಡಿದೆ ಎಂದು ಇದನ್ನು ಬೆಳೆಸುತ್ತಾರೆ. ಒಟ್ಟಿನಲ್ಲಿ ಎಲೆಯಿಂದ ಹಿಡಿದು ಪ್ರತಿಯೊಂದು ಭಾಗವು ಮಾನವನಿಗೆ ವರದಾನವಾಗಿ ದೊರಕಿದೆ.

ಮಳೆ ತರುವ ನಂದನ ಸಂವತ್ಸರ ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

ನಕ್ಷತ್ರಗಳನ್ನು ಸೂರ್ಯ ನಕ್ಷತ್ರ, ಮಳೆ ನಕ್ಷತ್ರ ಹಾಗೂ ಮಹಾ ನಕ್ಷತ್ರಗಳೆಂದು ವಿಂಗಡಿಸಲಾಗಿದೆ. ಅಶ್ವಿನಿಯಿಂದ ರೇವತಿ ನಕ್ಷತ್ರದವರೆಗೆ ರವಿಯು ಒಂದೊಂದೇ ನಕ್ಷತ್ರವನ್ನು ಕ್ರಮಿಸುತ್ತಾನೆ. ಮಳೆಯ ನಕ್ಷತ್ರಗಳನ್ನು ಮಳೆಗಾಲದಲ್ಲಿ ಮಳೆ ತರುವ ಮತ್ತು ಬೇಸಿಗೆಯಲ್ಲಿ ಮಳೆ ತರುವ ನಕ್ಷತ್ರಗಳೆಂದು ವಿಂಗಡಿಸಲಾಗಿದೆ.

ಅಶ್ವಿನಿ, ಭರಣಿ, ಕತ್ತಿಕಾ, ರೋಹಿಣೀ ಈ ನಾಲ್ಕು ನಕ್ಷತ್ರಗಳು ಬೇಸಿಗೆಯಲ್ಲಿ ಮಳೆ ಕೊಡುತ್ತವೆ. ರವಿಯು ಮಗಶಿರಾ ನಕ್ಷತ್ರ ಪ್ರವೇಶಿಸಿದ ಕೂಡಲೇ ಮಳೆಗಾಲ ಪ್ರಾರಂಭವಾಗುತ್ತದೆ. ಇದು ಅನುರಾಧ ನಕ್ಷತ್ರದವರೆಗೆ ಇರುತ್ತದೆ. ಮಗಶಿರಾ ನಕ್ಷತ್ರದಿಂದ ಹಸ್ತ ನಕ್ಷತ್ರದವರೆಗಿರುವ 9 ನಕ್ಷತ್ರಗಳು ಮಳೆಗಾಲದ ನಕ್ಷತ್ರಗಳು. ಕೆಲವು ನಕ್ಷತ್ರಗಳಲ್ಲಿ ಬೇಕಾದಷ್ಟು ಮಳೆ ಬರುತ್ತದೆ. ಇನ್ನು ಕೆಲವು ನಕ್ಷತ್ರಗಳಿಂದ ತೀವ್ರ ಅನಾವಷ್ಠಿಯೂ ಆಗಿದೆ. ಇದಕ್ಕೆ ಮಳೆ ನಕ್ಷತ್ರಗಳು ಪ್ರವೇಶ ಮಾಡುವ ಸಮಯವೇ ಕಾರಣ.

ಮಳೆ ಪತ್ತೆ ಹೇಗೆ?

ಮಳೆಯ ನಕ್ಷತ್ರವು ಪ್ರವೇಶವಾಗುವಾಗ ಇರುವ ನಿತ್ಯ ನಕ್ಷತ್ರವು ಪುರುಷ ಸಂಜ್ಞಕವೋ, ಸ್ತ್ರೀ ಸಂಜ್ಞಕವೋ, ನಪುಂಸಕ ಸಂಜ್ಞಕವೋ ಎಂಬುದನ್ನು ಮೊದಲು ಕಂಡು ಹಿಡಿಯಬೇಕು. ಇದರಿಂದ ಮಳೆ ಹೇಗೆ ಆಗುತ್ತದೆ ಎಂದು ತಿಳಿಯಬಹುದು. ಅಶ್ವಿನಿಯಿಂದ ರೇವತಿ ನಕ್ಷತ್ರಗಳಲ್ಲಿ ಪುರುಷ ನಕ್ಷತ್ರ, ಸ್ತ್ರೀ ನಕ್ಷತ್ರ, ನಪುಂಸಕ ನಕ್ಷತ್ರಗಳೆಂಬ ಮೂರು ಭಾಗಗಳಿವೆ. ಇವುಗಳನ್ನು ಈ ಕೆಳಗಿನಂತೆ ಕಂಡು ಹಿಡಿಯಬಹುದು. ಮೂಲಾ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಧನಿಷ್ಠಾ, ಶತಭಿಷಾ, ಪೂರ್ವಭಾದ್ರ, ಉತ್ತರಭಾದ್ರ, ರೇವತಿ, ಅಶ್ವಿನಿ, ಭರಣಿ, ಕತ್ತಿಕಾ, ರೋಹಿಣಿ, ಮಗಶಿರಾ ಈ 15 ನಕ್ಷತ್ರಗಳು ಪುರುಷ ನಕ್ಷತ್ರಗಳು. ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ, ಮಘಾ, ಹುಬ್ಬಾ, ಉತ್ತರಾ, ಹಸ್ತ, ಸ್ವಾತಿ. ಈ ಹತ್ತು ನಕ್ಷತ್ರಗಳು ಸ್ತ್ರೀ ನಕ್ಷತ್ರಗಳು. 'ಶಾಖಾ, ಅನುರಾಧ, ಜ್ಯೇಷ್ಠಾ ಈ ಮೂರು ನಕ್ಷತ್ರಗಳು ನಪುಂಸಕ ನಕ್ಷತ್ರಗಳು.

ಪುರುಷ ಸ್ತ್ರೀ ಯೋಗವಾಗಲೀ, ಸ್ತ್ರೀ ಪುರುಷ ಯೋಗವಾಗಲೀ ಆದರೆ ಒಳ್ಳೆಯ, ಭಾರೀ ಮಳೆ ಬರುತ್ತದೆ. ಎರಡು ಪುರುಷ ನಕ್ಷತ್ರ ಯೋಗವಾದರೆ ಮಳೆ ಕಡಿಮೆ ಆಗುತ್ತದೆ. ಎರಡು ಸ್ತ್ರೀ ಯೋಗವಾದರೆ ಗಾಳಿಯಿಂದ ಮಳೆ ಕಡಿಮೆಯಾಗುತ್ತದೆ. ಪುರುಷ, ನಪುಂಸಕ ಯೋಗವಾಗಲೀ, ಸ್ತ್ರೀ ನಪುಂಸಕ ಯೋಗವಾಗಲೀ ಆದರೆ ಮಧ್ಯಮ ಮಳೆ. ಎರಡು ನಪುಂಸಕ ಯೋಗಗಳಾದರೆ ಗಾಳಿಯಿಂದ ಮಳೆ ಕಡಿಮೆಯಾಗುತ್ತದೆ.

ಜೂನ್ 7 ರಂದು ಮಹಾ ನಕ್ಷತ್ರ ಮಗಶಿರಾ ಪ್ರವೇಶವಾಗುವುದು. ಈ ದಿನದ ನಿತ್ಯ ನಕ್ಷತ್ರ ಉತ್ತರಾಷಾಢ. ಮಹಾ ನಕ್ಷತ್ರ ಮತ್ತು ನಿತ್ಯ ನಕ್ಷತ್ರಗಳೆರಡು ಪುರುಷ ನಕ್ಷತ್ರಗಳು. ಇದರಿಂದ ಕಡಿಮೆ ಮಳೆ ಸುರಿಯುವುದು.ಜೂನ್ 21ರಿಂದ ಮಹಾನಕ್ಷತ್ರ ಆರ್ದ್ರಾ ಪ್ರವೇಶವಾಗುವುದು. ಈ ದಿನದ ನಿತ್ಯ ನಕ್ಷತ್ರ ಪುನರ್ವಸು. ಆರ್ದ್ರಾ ಸ್ತ್ರೀ ನಕ್ಷತ್ರ ಪುನರ್ವಸು. ಸ್ತ್ರೀ ನಕ್ಷತ್ರ ಇದರಿಂದ ಗಾಳಿ ಜಾಸ್ತಿ ಬಂದು ಮಳೆ ಕಡಿಮೆ ಸುರಿಯುವುದು.

ಜುಲೈ 5 ರಂದು ಮಹಾ ನಕ್ಷತ್ರ ಪುನರ್ವಸು ಪ್ರವೇಶವಾಗುವುದು. ಈ ದಿನದ ನಿತ್ಯ ನಕ್ಷತ್ರ ಶ್ರವಣ. ಪುನರ್ವಸು ಸ್ತ್ರೀ ನಕ್ಷತ್ರ. ಶ್ರವಣ ಪುರುಷ ನಕ್ಷತ್ರ. ಇದರಿಂದ ಒಳ್ಳೆಯ ರೀತಿಯಿಂದ ಮಳೆ ಸುರಿಯುತ್ತದೆ. ಜುಲೈ 19 ರಂದು ಮಹಾ ನಕ್ಷತ್ರ. ಪುಷ್ಯ ಪ್ರವೇಶ. ನಿತ್ಯ ನಕ್ಷತ್ರ ಪುಷ್ಯ. ಎರಡು ನಕ್ಷತ್ರಗಳು ಸ್ತ್ರೀ ನಕ್ಷತ್ರ. ಇದರಿಂದ ಗಾಳಿ ಜಾಸ್ತಿ ಹಾಗೂ ಮಳೆ ಕಡಿಮೆ.

ಆಗಸ್ಟ್ 2 ರಂದು ಆಶ್ಲೇಷಾ ಮಹಾ ನಕ್ಷತ್ರ ಪ್ರವೇಶ. ನಿತ್ಯ ನಿಕ್ಷತ್ರ ಶ್ರವಣ. ಆಶ್ಲೇಷಾ ಸ್ತ್ರೀ ನಕ್ಷತ್ರ. ಶ್ರವಣ ಪುರುಷ ನಕ್ಷತ್ರ. ಇದರಿಂದ ಉತ್ತಮ ಮಳೆಯಾಗುತ್ತದೆ. ಆಗಸ್ಟ್ 16 ರಂದು ಮಖ ಮಹಾ ನಕ್ಷತ್ರ ಪ್ರವೇಶ. ನಿತ್ಯ ನಕ್ಷತ್ರ ಆಶ್ಲೇಷಾ. ಮಖ ಸ್ತ್ರೀ ನಕ್ಷತ್ರ. ಆಶ್ಲೇಷಾ ಸ್ತ್ರೀ ನಕ್ಷತ್ರ. ಇದರಿಂದಾಗಿ ಗಾಳಿ ಜಾಸ್ತಿ, ಮಳೆ ಕಡಿಮೆ.

ಆಗಸ್ಟ್ 30 ರಂದು ಹುಬ್ಬಾ ಮಹಾ ನಕ್ಷತ್ರ ಪ್ರವೇಶ. ನಿತ್ಯ ನಕ್ಷತ್ರ ಧನಿಷ್ಠಾ. ಹುಬ್ಬಾ ಸ್ತ್ರೀ ನಕ್ಷತ್ರ. ಧನಿಷ್ಠಾ ಪುರುಷ ನಕ್ಷತ್ರ. ಇದರಿಂದ ಉತ್ತಮ ಮಳೆ ಬರುತ್ತದೆ. ಸಪ್ಟೆಂಬರ್ 13 ರಂದು ಉತ್ತರ ಮಹಾ ನಕ್ಷತ್ರ ಪ್ರವೇಶ. ನಿತ್ಯ ನಕ್ಷತ್ರ ಆಶ್ಲೇಷಾ. ಉತ್ತರ ಸ್ತ್ರೀ ನಕ್ಷತ್ರ. ಆಶ್ಲೇಷಾ ಸ್ತ್ರೀ ನಕ್ಷತ್ರ. ಇದರಿಂದ ಗಾಳಿಯಿಂದ ಕೂಡಿದ ಕಡಿಮೆ ಮಳೆ ಬರುತ್ತದೆ. ಸಪ್ಟೆಂಬರ್ 26 ರಂದು ಹಸ್ತ ಮಹಾ ನಕ್ಷತ್ರ ಪ್ರವೇಶ. ನಿತ್ಯ ನಕ್ಷತ್ರ ಧನಿಷ್ಠಾ. ಹಸ್ತ ಸ್ತ್ರೀ ನಕ್ಷತ್ರ. ಧನಿಷ್ಠಾ ಪುರುಷ ನಕ್ಷತ್ರ. ಇದರಿಂದ ಈ ವರ್ಷ ಸಾಮಾನ್ಯದಿಂದ ಸಾಧಾರಣ ಮಳೆಯಾಗುತ್ತದೆ.

ಉತ್ಕ್ರಾಂತಿ ವರ್ಷ ಪ್ರಳಯದ ಸಂಕೇತವಲ್ಲ * ವಿ. ನಾರಾಯಣ ಶೆಟ್ಟಿ ಪದ್ಮಶಾಲಿ

ಕ್ರಿ.ಪೂ. ಒಂದನೇ ವರ್ಷದಿಂದ ಮುಂದಿನ ಯಾವುದೇ ವರ್ಷಗಳಲ್ಲಿ ಸೂರ್ಯನು ಸಮಭಾಜಕ ವೃತ್ತದ ಮೇಲೆ ಹಾದುಹೋಗುವ, ಸಪ್ಟೆಂಬರ್ ತಿಂಗಳ 23 ರಂದು ಭಾನುವಾರ ಅಥವಾ ಸೋಮವಾರ ಬರುತ್ತದೆಯೋ ಅಂತಹ ವರ್ಷಗಳನ್ನು 'ಉತ್ಕ್ರಾಂತಿ ವರ್ಷಗಳೆಂದು ದೃಢೀಕರಿಸಲಾಗಿದೆ.

2012ನೇ ವರ್ಷವು ಅಕ ವರ್ಷವಾಗಿದ್ದು ಉತ್ಕ್ರಾಂತಿ ಅಕ ವರ್ಷ 1984 ವರ್ಷಕ್ಕೆ ಸರಿಸಮವಾಗಿರುತ್ತದೆ. ಇದನ್ನರಿತ ಭವಿಷ್ಯಕಾರರು 2012ನೇ ಉತ್ಕ್ರಾಂತಿ ವರ್ಷವು ಪ್ರಳಯದ ಸಂಕೇತ ಎಂದು ತಿಳಿಯ ಪಡಿಸುತ್ತಿದ್ದಾರೆಯೇ ಹೊರತು, 2012ರಲ್ಲಿ ಯಾವುದೇ ಪ್ರಳಯ ಸಂಭವಿಸಲಾರದು.

ಉತ್ಕ್ರಾಂತಿ ವರ್ಷಗಳನ್ನು ಗ್ರೆಗೋರಿಯನ್ ಕ್ಯಾಲೆಂಡರ್ಗಳ ಆಧಾರದಂತೆ ನಿರ್ಧರಿಸಲಾಗಿದೆ. ಅಂತಹ ವರ್ಷಗಳಲ್ಲಿ ಪ್ರಪಂಚದ ಮಹಾನ್ ವ್ಯಕ್ತಿಗಳ ಜನನ, ಮರಣ ಮತ್ತು ದುರ್ಮರಣದಂತಹ ದುರಂತಗಳು ಸಂಭವಿಸಿವೆ. ಈ ವರ್ಷಗಳನ್ನು ಘೋರ ಉತ್ಕ್ರಾಂತಿ ವರ್ಷಗಳೆಂದು ಹೇಳಬಹುದೇ ಹೊರತು ಇವು ಪ್ರಳಯದ ಸಂಕೇತಗಳಲ್ಲ. ಇದಕ್ಕೆ ಹಲವು ಉದಾಹರಣೆಗಳು ನಮ್ಮ ಎದುರಿವೆ.

ಉತ್ಕ್ರಾಂತಿ ವರ್ಷಗಳಲ್ಲಿ ಜನಿಸಿದ ಮತ್ತು ಮರಣಿಸಿದ ಮಹಾನ್ ವ್ಯಕ್ತಿಗಳು: ರೇಡಿಯಂ ಅನ್ವೇಷಕಿ ಪ್ರಥಮ ಮಹಿಳಾ ಮಹಾ ವಿಜ್ಞಾನಿ ಪೋಲೆಂಡಿನ ಮೇಡಂ ಕ್ಯೂರಿ (1867-1934), ಪ್ರಪಂಚದ ರಾಜಕೀಯ ಅಭಿನೇತ್ರಿ ಹಾಗೂ ಭಾರತದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾಗಾಂಧಿ (1917-1984), ಜರ್ಮನ್ ಡೈರೆಕ್ಟರ್ ಅಡಾಲ್ಫ್ ಹಿಟ್ಲರ್ (1889-1945), ಭಾರತದ ಮಹಾನ್ ಎಂಜಿನಿಯರ್ ಸರ್.ಎಂ. ವಿಶ್ವೇಶ್ವರಯ್ಯ (1861-1962), ವಿಜ್ಞಾನಿ ಲೂಯಿ ಪಾಶ್ಚರ್ (1822-1895).

ಉತ್ಕ್ರಾಂತಿ ವರ್ಷಗಳಲ್ಲಿ ಜನಿಸಿದ ಪ್ರಪಂಚದ ಮಹಾನ್ ವ್ಯಕ್ತಿಗಳು ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ (1934), ಭಾರತದ ಪ್ರಖ್ಯಾತ ಸಮಾಜ ಸೇವಕಿ ಸೋದರಿ ನಿವೇದಿತಾ (1967), ಭಾರತದ ಪ್ರಖ್ಯಾತ ರಸಾಯನ ಶಾಸ್ತ್ರಜ್ಞ ಡಾ. ಪ್ರಫುಲ್ಲ ಚಂದ್ರರಾಯ್ (1861), ನೊಬೆಲ್ ಪಾರಿತೋಷಕ ಸೃಷ್ಟಿಸಿದ ಸ್ವೀಡನ್ನ ಆಲ್ಫ್ರೆಡ್ ನೊಬೆಲ್ (1833), ಪ್ರಪಂಚದ ಪ್ರಖ್ಯಾತ ಭವಿಷ್ಯಕಾರ ನಾಸ್ತ್ರದಮಸ್ (1503), ಭಾರತದ ಪ್ರಖ್ಯಾತ ಚಲನಚಿತ್ರ ತಾರೆ ಊರ್ವಶಿ ಶಾರದಾ (1945), ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರ್ಲಾಲ್ ನೆಹರು (1889), ಪ್ರಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ (1973) ಮತ್ತು ಬೆಂಗಳೂರು ಸಂತ ರವಿಶಂಕರ್ ಗುರೂಜೀ (1956) ಉತ್ಕ್ರಾಂತಿ ವರ್ಷಗಳಲ್ಲಿಯೇ ಜನಿಸಿದ್ದಾರೆ.

ಉತ್ಕ್ರಾಂತಿಯ ಪಾತ್ರಗಳು..: ಪ್ರಪಂಚದ ಬಾಹ್ಯ-ಕ್ಷೇತ್ರದಲ್ಲಿ ಉತ್ಕ್ರಾಂತಿ ವರ್ಷಗಳು ಮಹತ್ತರ ಪಾತ್ರಗಳನ್ನು ವಹಿಸಲಿವೆ ಎಂದರೆ ತಪ್ಪಾಗಲಾರದು. ಉತ್ಕ್ರಾಂತಿ ವರ್ಷದಲ್ಲಿ 1973ರಲ್ಲಿ ಉಡಾವಣೆಗೊಂಡ-11 ಪಾಯಿನರ್ ಉಪಗ್ರಹವು ಸೂರ್ಯನಿಂದ 1.42 ದಶಲಕ್ಷ ಕಿಲೋಮೀಟರ್ಗಳು ದೂರದಲ್ಲಿರುವ ನಭೋ ಮಂಡಲದಲ್ಲಿಯೇ ಎರಡನೆಯ ಅತಿ ದೊಡ್ಡದಾದ ಶನಿ ಗ್ರಹವನ್ನು ಉತ್ಕ್ರಾಂತಿ ವರ್ಷದಲ್ಲಿ (1979)ಯೇ ಹತ್ತಿರದಿಂದ (20,880 ಕಿ.ಮೀ.) ಗುರುತಿಸಿತು. ನಭೋಮಂಡಲದಲ್ಲಿನ ಚಿದಂಬರ ರಹಸ್ಯಗಳನ್ನು ಅತಿಸೂಕ್ಷ್ಮವಾಗಿ ತಿಳಿಯಪಡಿಸುವ ಹಬಲ್ ಟೆಲಿಸ್ಕೋಪ್ 1990ರಲ್ಲಿ ಅನಾವರಣ ಮಾಡಲಾಯಿತು. ಭಾರತದ ಬಾಹ್ಯ ವಿಜ್ಞಾನಿ ರಾಕೇಶ್ ಶರ್ಮಾ ಪ್ರಥಮವಾಗಿ (1984)ರಲ್ಲಿ ಬಾಹ್ಯ ಪ್ರಯಾಣ ಕೈಗೊಂಡರು. 1979ರಲ್ಲಿ ಸೋವಿಯತ್ ನೆರವಿನಿಂದ ಭಾಸ್ಕರ-1, ಶ್ರೀ ಹರಿಕೋಟದಿಂದ ಎಸ್.ಎಲ್.ವಿ.-3 ಉಪಗ್ರಹಗಳನ್ನು ಉಡಾಯಿಸಲಾಯಿತು. ವಿಶ್ವಶಾಂತಿಗೆ ಭಾರತದ ಸಮಾಜ ಸೇವಕಿ ಮದರ್ ತೆರೆಸಾ ಅವರಿಗೆ ನೊಬೆಲ್ ಪ್ರಶಸ್ತಿ ದೊರೆತಿರುವುದು ಉತ್ಕ್ರಾಂತಿ ವರ್ಷದಲ್ಲಿಯೇ (1979).

ಪ್ರಳಯದ ಸಂಕೇತವಲ್ಲ: ಉತ್ಕ್ರಾಂತಿ ವರ್ಷಗಳು ಎಂದಿಗೂ ಪ್ರಳಯದ ಸಂಕೇತಗಳಲ್ಲ. ಈ ಶತಮಾನದಲ್ಲಿ ಸಂಭವಿಸಿದ ಮಹಾ ದುರಂತಗಳನ್ನು ಪರಾಮರ್ಶಿಸಿದಾಗ 1945, 1984 ಮತ್ತು 2001 ವರ್ಷಗಳನ್ನು ಅತಿ ಘೋರ ಉತ್ಕ್ರಾಂತಿ ವರ್ಷಗಳೆಂದು ಪರಿಗಣಿಸಲಾಗಿದೆ. 1945 ಉತ್ಕ್ರಾಂತಿ ವರ್ಷದಲ್ಲಿ ಪ್ರಪಂಚದ ರಾಜಕೀಯ ಕ್ಷೇತ್ರದಲ್ಲಿ ದುರ್ಘಟನೆಗಳು ಸಂಭವಿಸಿ ಪ್ರಥಮವಾಗಿ ಜಪಾನಿನ ಹಿರೋಷಿಮ ಮತ್ತು ನಾಗಸಾಕಿ ಪ್ರಾಂತ್ಯಗಳ ಮೇಲೆ ಅಣುಬಾಂಬ್ ಸಿಡಿಸಲಾಯಿತು. ಅದೇ ವರ್ಷದಲ್ಲಿ ಹಿಟ್ಲರ್ ದುರ್ಮರಣ ಆಯಿತು. 1984ರಲ್ಲಿ ಭಾರತದ ಭೂಪಾಲ್ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ಸಂಭವಿಸಿದ ಅನಿಲ ಸೋರಿಕೆಯಿಂದ ಸುಮಾರು 4000 ಮಂದಿಯ ದುರ್ಮರಣ ಆಯಿತು. ಅದೇ ವರ್ಷದಲ್ಲಿ (1984)ರಲ್ಲಿ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ದುರ್ಮರಣವಾಯಿತು. 2001 ಸಪ್ಟೆಂಬರ್ 11ರಂದು ಅಮೆರಿಕ ದೇಶವನ್ನೇ ತಲ್ಲಣಿಸುವಂತಹ ವಿಧ್ವಂಸಕ ವಿದ್ಯಮಾನಗಳು ಸಂಭವಿಸಿ ಪ್ರಪಂಚದ ಅತಿ ಎತ್ತರ ನ್ಯೂಯಾರ್ಕಿನ ಅವಳಿ ಟ್ರೇಡ್ ಸೆಂಟರ್ಗಳನ್ನು ಧ್ವಂಸ ಮಾಡಿ ಸಾವಿರಾರು ನಾಗರಿಕರ ಮಾರಣ ಹೋಮವಾಯಿತು. ಅದೇ ವರ್ಷದ ಡಿಸೆಂಬರ್ 13ರಂದು ಭಯೋತ್ಪಾದಕರು ಭಾರತದ ಸಂಸತ್ಭವನದ ಮೇಲೆ ದಾಳಿ ಮಾಡಿ 13 ಮಂದಿ ಕಾವಲುಗಾರರನ್ನು ಕೊಂದರು. 1990 ಇರಾನ್ ಗಿಲಾನ್ ಪ್ರಾಂತ್ಯದಲ್ಲಿ ಭೂಕಂಪ, 40,000ಕ್ಕೂ ಹೆಚ್ಚು ಸಾವು, 2001 ಭಾರತದ ಗುಜರಾತ್ನಲ್ಲಿ ಭೂಕಂಪ 20,000 ಹೆಚ್ಚು ಸಾವು, 2007ರಲ್ಲಿ ಸೊಲೋಮನ್ ದ್ವೀಪದಲ್ಲಿ ಸುನಾಮಿ. ಈ ವರ್ಷಗಳನ್ನು ಘೋರ ಉತ್ಕ್ರಾಂತಿ ವರ್ಷಗಳೆಂದು ಹೇಳಬಹುದೇ ಆಗಲಿ ಪ್ರಳಯದ ಸಂಕೇತಗಳಲ್ಲ.

ಹಲವು ಪ್ರಾಮುಖ್ಯತೆ: ಜ್ಯೋತಿಷ್ಯ ಶಾಸ್ತ್ರದಲ್ಲಿ ಉತ್ಕ್ರಾಂತಿ ವರ್ಷಗಳು ಪ್ರಾಮುಖ್ಯತೆಯನ್ನು ಪಡೆದಿವೆ. ಏಕೆಂದರೆ, ಸೂರ್ಯನು ಸಮಭಾಜಕ ವೃತ್ತವನ್ನು ದಾಟುವ ಕಾಲ (ಸೆಪ್ಟೆಂಬರ್ -23) ದಿನದ ವಿಶೇಷತೆ ಎಂದರೆ ಹಗಲು ರಾತ್ರಿ ಸರಿ ಸಮವಾಗಿ ಇರುತ್ತವೆ. ಅಂದು ಸೂರ್ಯನ ಪ್ರವೇಶವು ಉತ್ತರಾರ್ಧಗೋಳ ಮತ್ತು ದಕ್ಷಿಣಾರ್ಧಗೋಳದಲ್ಲಿ ಕಾಲಮಾನಗಳು ಬದಲಿಗೊಳ್ಳುತ್ತವೆ. ಇಂಥಹ ಶರತ್ಕಾಲದಲ್ಲಿ ಸೂರ್ಯನ ಚಲನ ಸಿದ್ಧಾಂತ ಮತ್ತು ಪೃಥ್ವಿಯ ಮೇಲ್ಮೈ ಆತ್ಮದಲ್ಲಿ ಸಂಭವಿಸುವ ಭೌತಿಕ ಗುಣಗಳನ್ನು ಪರಾಮರ್ಶಿಸಿದಾಗ, ಸೂರ್ಯನಿಂದ ಎರಕ ಹೊಯ್ಯುವ ನಭೋ ಪ್ರಭಾವಕ್ಕೂ ಪೃಥ್ವಿಯ ಮೇಲ್ಮೈ ಆತ್ಮದ ಭೌತಿಕ ಗುಣಗಳಿಗೂ ಸಂಬಂಧವಿರುವುದು ಕರಾರುವಾಕ್ಕಾಗಿ ತಿಳಿಯಬಹುದು. ಅಂದಿನ ಶರತ್ಕಾಲದಲ್ಲಿ ನಭೋಮಂಡಲದ ಎಲ್ಲಾ ಗ್ರಹಗಳು ಮತ್ತು ಉಪಗ್ರಹಗಳ ನಭೋ ಪ್ರಭಾವಗಳು, ದೆಸೆ, ಉಚ್ಚ ಹಾಗೂ ನೀಚವಾಗಿ ಪರಿವರ್ತನೆಗೊಳ್ಳಲಿವೆ. ಮುಂದುವರಿದ ಸಂಶೋಧನೆಗಳಿಂದ ಉತ್ಕ್ರಾಂತಿ ದಿನದ ಶರತ್ಕಾಲದಲ್ಲಿ ಸೂರ್ಯನು ತನ್ನ ನಭೋ ಪ್ರಭಾವವನ್ನು ಸರಿಸಮವಾಗಿ ಪೃಥ್ವಿಯ ಮೇಲೆ ಎರಕ ಹೊಯ್ಯುತ್ತಿರುತ್ತಾನೆ. ಅಂತಹ ನಭೋ ಪ್ರಭಾವ ಉತ್ಕ್ರಾಂತಿ ವರ್ಷದ ಎಲ್ಲಾ ದಿನಗಳ ಮೇಲೆ ಪ್ರಭಾವ ಬೀರುವುದು ಕಠೋರ ಸತ್ಯ.

ಸೂರ್ಯನು ನಭೋ ಮಂಡಲದತ್ತ ಎರಕ ಹೊಯ್ಯುವ ನಭೋ ಪ್ರಭಾವದಿಂದ ಪೃಥ್ವಿಯ ಮೇಲ್ಮೈ ಸಂಭವಿಸುವ ಉತ್ಕ್ರಾಂತಿ ಪ್ರಭಾವವನ್ನು ತಿಳಿಯಪಡಿಸುವುದು ಕಷ್ಟಕರ. ಏಕೆಂದರೆ ಸೂರ್ಯನಿಂದ ಹೊರಹೊಮ್ಮುವ ನಭೋ ಕಿರಣಗಳ ಭೌತಿಕ ಮತ್ತು ರಾಸಾಯನಿಕ ಗುಣಗಳು ಇಂದಿಗೂ ಚಿದಂಬರ ರಹಸ್ಯವಾಗಿಯೇ ಉಳಿದಿವೆ.

ಪುಣ್ಯ ತರುವ ಗುರು-ಪುಷ್ಕರ * ಆರ್. ಸೀತಾರಾಮಯ್ಯ

ಗುರು ಗ್ರಹವು ಒಂದು ರಾಶಿಯಿಂದ, ಇನ್ನೊಂದು ರಾಶಿಗೆ ಪ್ರವೇಶಿಸುತ್ತದೆ. ಈ ವೇಳೆ ಕೆಲ ನಿರ್ದಿಷ್ಟ ನದಿಗಳು ಸಕಲ ದೇವತೆಗಳ ಶಕ್ತಿಯನ್ನು ಪಡೆದುಕೊಳ್ಳುತ್ತವೆ. ಇದನ್ನು 'ಪುಷ್ಕರ'ದ ಅವಧಿ ಎನ್ನಲಾಗುತ್ತದೆ. ಪುಷ್ಕರ ಎಂದರೆ ಜಲದೇವತೆ. ಪುಷ್ಕರವಾದ ನದಿ ಹನ್ನೆರೆಡು ದಿನಗಳವರೆಗೆ ದೈವೀಶಕ್ತಿ ಹೊಂದಿರುತ್ತದೆ. ಈ ಅವಧಿಯಲ್ಲಿ ಸ್ನಾನ ಮಾಡಿದವರಿಗೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಪರಿಗಣಿಸಲಾಗಿದೆ.ಸಕಲ ಜೀವಿಗಳಿಗೆ ದೈವದತ್ತ ವರಗಳಲ್ಲಿ ನೀರು ಅತ್ಯಂತ ಶ್ರೇಷ್ಠವಾದದು. ನದಿ, ಸರೋವರಗಳು ದೇಶದ ಜೀವನಾಡಿಗಳು. ಪುರಾಣಗಳ ಪ್ರಕಾರ ತುಂದಿಲನೆಂಬ ಋಷಿ ಶಿವನನ್ನು ಕುರಿತು ತಪಸ್ಸು ಮಾಡಿ, ಶಿವನ ಅಂಶಗಳಲ್ಲಿ ಒಂದಾದ ನೀರೇ ಆಗಿ, ಪುಷ್ಕರ(ಜಲದೇವತೆ) ಎನಿಸಿಕೊಂಡರು.ಬ್ರಹ್ಮ ಜಗತ್ತನ್ನು ಸಷ್ಟಿಸುವಾಗ ಈ ಪುಷ್ಕರನ ಗೂ ದೇವತೆಗಳ ಮತ್ತು ಬಹಸ್ಪತಿಯ(ಗುರು) ಸಹಾಯ ಪಡೆದರು. ಬ್ರಹ್ಮ, ಪುಷ್ಕರ ಮತ್ತು ಗುರು ಈ ಮೂವರಲ್ಲಿ ಆದ ನಿಯಮಿತ ಒಪ್ಪಂದದಂತೆ, ಗುರು ಗ್ರಹವು ನಿರ್ದಿಷ್ಟವಾದ ರಾಶಿಗಳನ್ನು ಪ್ರವೇಶಿಸಿದಾಗ, ಪವಿತ್ರವಾದ ಹನ್ನೆರೆಡು ನದಿಗಳಲ್ಲಿ, ಒಂದೊಂದು ನದಿ ಪುಷ್ಕರವಾಗುತ್ತದೆ.

ಪುಷ್ಕರ ಆಗುವುದು ಯಾವಾಗ?

ಗುರು ಗ್ರಹವು, ಮೇಷ ರಾಶಿಗೆ ಪ್ರವೇಶಿಸಿದಾಗ ಗಂಗಾ ನದಿ, ವಷಭ ರಾಶಿಗೆ ಗುರು ಪ್ರವೇಶಿಸಿದಾಗ ನರ್ಮದಾ ನದಿ ಮಿಥುನ ರಾಶಿಗೆ ಪ್ರವೇಶಿಸಿದಾಗ ಸರಸ್ವತಿ ನದಿ ಮತ್ತು ಕಟಕ ರಾಶಿಗೆ ಪ್ರವೇಶಿಸಿದಾಗ ಯಮುನಾ ನದಿ ಪುಷ್ಕರವಾಗುತ್ತದೆ.

ಗುರುವು ಸಿಂಹ ರಾಶಿಗೆ ಪ್ರವೇಶಿಸಿದಾಗ ಗೋದಾವರಿ ನದಿ, ಕನ್ಯಾ ರಾಶಿಗೆ ಪ್ರವೇಶಿಸಿದಾಗ ಕಷ್ಣಾ ನದಿ, ತುಲಾ ರಾಶಿಗೆ ಪ್ರವೇಶಿಸಿದಾಗ ಕಾವೇರಿ ನದಿ ಪುಷ್ಕರವಾಗುತ್ತದೆ.

ಉಳಿದಂತೆ ಗುರು ಗ್ರಹ ವಶ್ಚಿಕ ರಾಶಿಗೆ ಪ್ರವೇಶಿಸಿದರೆ ತಾಮ್ರಪರ್ಣೀ ನದಿ, ಧನಸ್ಸು ರಾಶಿಗೆ ಪ್ರವೇಶಿಸಿದಾಗ ಸಿಂಧೂ ನದಿ, ಮಕರ ರಾಶಿಗೆ ಪ್ರವೇಶಿಸಿದಾಗ ತುಂಗಭದ್ರಾ ನದಿ, ಕುಂಭ ರಾಶಿಯಲ್ಲಿದ್ದಾಗ ಭೀಮಾ ನದಿ, ಮೀನ ರಾಶಿಗೆ ಪ್ರವೇಶಿಸಿದಾಗ, ತಪತೀ ನದಿ ಪುಷ್ಕರವಾಗುತ್ತದೆ.

ನರ್ಮದಾ ಪುಷ್ಕರ

ಗುರು ಗ್ರಹವು ಈ ವರ್ಷದ ಮೇ 17 ರಂದು ಭಾರತೀಯ ಕಾಲಮಾನ ಬೆಳಗ್ಗೆ 9 ಗಂಟೆ 34 ನಿಮಿಷಕ್ಕೆ ವಷಭ ರಾಶಿಗೆ ಪ್ರವೇಶಿಸುತ್ತದೆ. ಆಗ ನರ್ಮದಾ ನದಿ ಎಲ್ಲಾ ದೇವತೆಗಳ ಶಕ್ತಿಯನ್ನು ಪಡೆದುಕೊಂಡು ಪುಷ್ಕರವಾಗುತ್ತದೆ. ಈ ಪುಷ್ಕರದ ಅವಧಿ 12 ದಿವಸಗಳು. ಭಾರತದ ಸಪ್ತ ಪುಣ್ಯ ನದಿಗಳಲ್ಲಿ ನರ್ಮದಾ ಸಹ ಒಂದು. ನರ್ಮದಾ ನದಿಯ ಪ್ರದಕ್ಷಿಣೆ ಒಂದು ಅತಿ ಪಾವನಕಾರ್ಯ ಮತ್ತು ಪುಷ್ಕರ ಅವಧಿಯಲ್ಲಿ ನರ್ಮದಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಪುನಃ ಪುಷ್ಕರ ಬರಲು 12 ವರ್ಷ ಬೇಕಾಗುತ್ತದೆ.

ಅಪರೂಪದ ಶುಕ್ರ ಸಂಕ್ರಮಣದ ಫಲಾಫಲ

ಸೂರ್ಯಗ್ರಹಣ-ಚಂದ್ರಗ್ರಹಣಗಳು ಸ್ವಾಭಾವಿಕ. ಇದರ ಹೊರತಾಗಿ ಶುಕ್ರನ ಮೂಲಕವೂ ಗ್ರಹಣವಾಗುತ್ತದೆ. ಇದನ್ನು ಶುಕ್ರ ಸಂಕ್ರಮಣ ಎನ್ನುತ್ತಾರೆ. ಇದು 06-06-2012ನೇ ಬುಧವಾರದಂದು ನಡೆಯಲಿದೆ.

ಅಂದು ಮಧ್ಯರಾತ್ರಿ ಸರಿಸುಮಾರು 3.43ಕ್ಕೆ ಈ ಸಂಕ್ರಮಣ ನಡೆಯಲಿದೆ. ಶುಕ್ರನು ರವಿ ಗ್ರಹದ ಒಳಗೆ ಪ್ರವೇಶಿಸುತ್ತಾನೆ. ಅದೇ ದಿನ ಬೆಳಗ್ಗೆ 10.23ಕ್ಕೆ ನಿರ್ಗಮಿಸುತ್ತಾನೆ. ಇದನ್ನೇ ಶುಕ್ರಗ್ರಹಣ ಎಂದು ಹೇಳಿದರೂ, ರವಿಗ್ರಹದ ಒಳಗೆ ಪ್ರವೇಶಿಸುವುದರಿಂದ ಶುಕ್ರ ಸಂಕ್ರಮಣ ಎಂದು ಹೆಸರಿಸಲಾಗಿದೆ.

ಈ ದಿನ ಪೂರ್ಣ ಆಘಾಢ ನಿತ್ಯ ನಕ್ಷತ್ರ ಆಗಲಿದೆ. ವೃಷಭ ರಾಶಿಯಲ್ಲಿ ಶುಕ್ರನು ರೋಹಿಣಿ ನಕ್ಷತ್ರದಲ್ಲಿರುವನು. ಗ್ರಹಣದ ನೇರ ದೃಷ್ಟಿ ವೃಶ್ಚಿಕ ರಾಶಿಯ ಮೇಲೆ ಇರುವುದು. ಹಾಗಾಗಿ ಈ ಗ್ರಹಣ ದೋಷ ಧನು, ವೃಷಭ ಮತ್ತು ವೃಶ್ಚಿಕ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. ಈ ಫಲ ಸ್ತ್ರೀಯರ ಮೇಲೆ ಪರಿಣಾಮ ಬೀಳಲಿದೆ.

ಈ ಫಲದಂತೆ ಸ್ತ್ರೀಯರು ಇದ್ದಕ್ಕಿದ್ದಂತೆ ಕೋಪಿಷ್ಟರಾಗುವರು. ಸತಿ ಪತಿಯರ ಮಧ್ಯೆ ಕಲಹ ಉಂಟಾಗಬಹುದು. ವಿವಾಹ ನಿಶ್ಚಯ ಈ ಸಮಯದಲ್ಲಿ ಆದರೆ ಅದು ಮುರಿದು ಬೀಳಬಹುದು ಅಥವಾ ಮುಂದಕ್ಕೆ ಹೋಗಬಹುದು. ವಿಚ್ಛೇದನ ಆಗುವ ಸಾಧ್ಯತೆಯೂ ಇದೆ. ಕಫ, ಶೀತ, ಅಸ್ತಮಾ ಸಂಬಂಧ ರೋಗಗಳು ಕಾಡಬಹುದಾದ್ದರಿಂದ ಜಾಗ್ರತೆ ವಹಿಸಬೇಕು. ಆದಷ್ಟು ವಿಮಾನ ಪ್ರಯಾಣ ಮಾಡದಿರುವುದು ಉತ್ತಮ. 45 ವರ್ಷ ಮೀರಿದ ಸ್ತ್ರೀಯರಾಗಿದ್ದರೆ ಗರ್ಭದೋಷ ಸಂಬಂಧ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚು. ಹಾಗೆಯೇ ಈ ದಿನ ಪ್ರಥಮ ರಜಸ್ವತಿ ಆದರೆ ವೇದನೆ ಉಂಟಾಗುವ ಸಂಭವ. ಮಕ್ಕಳ ಜನನ ಕಾಲ ಆದರೆ ಕಷ್ಟವಾಗಬಹುದು.

ಇದಕ್ಕೆ ಪರಿಹಾರವೇನು?

ಗ್ರಹಣ ಆಚರಣೆ ಇಲ್ಲ. ಆದರೆ, ಗ್ರಹಣದ ಸಮಯದಲ್ಲಿ ಎಲ್ಲಾ ಸ್ತ್ರೀಯರು ಶ್ರೀ ದುರ್ಗಾ ಪರಮೇಶ್ವರಿ ಅಮ್ಮ ಅಥವಾ ಭಗವತಿ ಮಾತೆಯರ ಅಷ್ಟೋತ್ತರ ಶತಕ ಪಠಿಸತಕ್ಕದ್ದು. ಜೈನರಾದರೆ ಶ್ರೀ ಪದ್ಮಾವತಿ ಅಮ್ಮನವರ ಅಷ್ಟೋತ್ತರ ಹೇಳಬೇಕು. ಕ್ರಿಶ್ಚಿಯನ್ ಧರ್ಮೀಯರು ಮೇರಿ ಅಮ್ಮನವರನ್ನು ಸ್ಮರಿಸಬೇಕು. ಗ್ರಹಣ ಮುಗಿದನಂತರ ದುರ್ಗಾ ಮಾತೆಗೆ ಕುಂಕುಮ ಅರ್ಚನೆ ಅಥವಾ ಹೋಮ ಮಾಡುವುದು. ಜೈನರಾದರೆ ಪದ್ಮಾವತಿ ಅಮ್ಮನವರ ಸ್ಮರಣೆ ಮಾಡತಕ್ಕದ್ದು.

ಇಂತಹ ಅಪರೂಪವಾದ ಗ್ರಹಣ ಈ ಹಿಂದೆ 8-6-2004ರಲ್ಲಿ ಜರುಗಿತ್ತು. ಮುಂದೆ ಇದೇ ರೀತಿ ಗ್ರಹಣವು 11-12-2117ರಂದು ವೃಶ್ಚಿಕ ರಾಶಿಯಲ್ಲಿ ಆಗುವುದು. ಗ್ರಹಣದ ದಿನ ಎಂದರೆ 6-6-2012ರಂದು ಯಾವುದೇ ತರದ ಶುಭ ಕಾರ್ಯಗಳು ಸಲ್ಲದು. ರತ್ನರಾಜ ಜೈನ್

ಪೃಥ್ವಿಗಿಲ್ಲ ಕ್ಷುದ್ರಗ್ರಹಗಳ ಆತಂಕ

2013 ಫೆಬ್ರವರಿ 15 ರಂದು ಡಿ.ಎ-14 ಎಂಬ ಕ್ಷುದ್ರಗ್ರಹ ಪೃಥ್ವಿಗೆ ಡಿಕ್ಕಿ ಹೊಡೆಯುತ್ತದೆ ಎನ್ನಲಾಗುತ್ತಿದೆ. ಇದು ಕೇವಲ 0.001/ನಷ್ಟು ಸತ್ಯ. 'ನಿಬುರು' ಎಂಬ ಮತ್ತೊಂದು ಗ್ರಹ ಭೂ ಕಕ್ಷೆಗೆ ಬರುವುದು ಕೇವಲ ಪ್ರಚಾರದ ಊಹ-ಪೋಹವಷ್ಟೇ.

2013 ಫೆಬ್ರವರಿ 15 ರಂದು ಡಿ.ಎ-14 ಎಂಬ ಕ್ಷುದ್ರಗ್ರಹ ಪೃಥ್ವಿಗೆ ಡಿಕ್ಕಿ ಹೊಡೆಯುತ್ತದೆ ಎನ್ನಲಾಗುತ್ತಿದೆ. ಇದು ಕೇವಲ 0.001/ನಷ್ಟು ಸತ್ಯ. 'ನಿಬುರು' ಎಂಬ ಮತ್ತೊಂದು ಗ್ರಹ ಭೂ ಕಕ್ಷೆಗೆ ಬರುವುದು ಕೇವಲ ಪ್ರಚಾರದ ಊಹ-ಪೋಹವಷ್ಟೇ. ಬನ್ನಿ ಈ ಕುರಿತ ಸತ್ಯ ಏನು ಎಂಬುದನ್ನು ನೋಡೋಣ.

ನಭೋಮಂಡಲ ಚಿದಂಬರ ರಹಸ್ಯಗಳ ಆಗರವೇ ಸರಿ. ಬ್ರಹ್ಮಾಂಡದ ಸೃಷ್ಟಿಯು ನಿರ್ದಿಷ್ಟ ಆಯಕಟ್ಟುಗಳಿಂದ ರಚಿತವಾಗಿದೆ. ಯಾವುದೇ ಮೂಲಭೂತ ವಸ್ತು ಅಥವಾ ಶಕ್ತಿಯು ನಭೋ ಮಂಡಲದ ನಿರ್ದಿಷ್ಟ ಆಯಕಟ್ಟಿನ ನಭೋ ಪ್ರಾಂತೀಯ ಅಂತರದಲ್ಲಿಯೇ ಸೀಮಿತವಾಗಿ ಸ್ಥಿರಗೊಂಡಿರುತ್ತದೆ. ಸೌರಮಂಡಲದ ಹನ್ನೊಂದು ಗ್ರಹಗಳು ಹಾಗೂ 63 ಉಪಗ್ರಹಗಳು ಇದೇ ರೀತಿ ಸ್ಥಿರಗೊಂಡಿರುವುಗಳಾಗಿವೆ. ಮಿಲಿಯನ್ಗಟ್ಟಲೆ ಉಲ್ಕಶಿಲೆಗಳು, ಸಾವಿರಾರು ಧೂಮಕೇತುಗಳು, ಲಕ್ಷಗಟ್ಟಲೆ ಹೊಳಪಿನ ಗುರಿ ಇಡುವ ನಭೋ ವಸ್ತುಗಳು ಸಹಾ ಸೌರಮಂಡಲದಲ್ಲಿ ಸ್ಥಿರಪಟ್ಟಿರುತ್ತವೆ.

ಕ್ಷುದ್ರಗ್ರಹಗಳು, ಅವುಗಳ ಸ್ಥಿರತೆ ಮತ್ತು ರಚನೆ

778.3 ಮಿಲಿಯನ್ ಕಿಲೋ ಮೀಟರ್ಗಳ ದೂರದಲ್ಲಿರುವ ನಭೋಮಂಡಲದ ಅತಿ ದೊಡ್ಡಗ್ರಹ ಗುರುಗ್ರಹ ಮತ್ತು ಕೆಂಪು ವರ್ಣಮಯ ಮಂಗಳ ಗ್ರಹ 550 ಕಿಲೋ ಮೀಟರ್ಗಳ ಅಂತರದಲ್ಲಿ ಒಂದು ಕಿ.ಮೀ. ಉದ್ದನೆಯ ಒಂದು ಮಿಲಿಯನ್ ಉಲ್ಕೆ ಶಿಲೆಗಳ ಪದರವಿದ್ದು ನೆಪ್ಚೂನ್ ಮತ್ತು ಪ್ಲೂಟೋ ದೂರಗಾಮಿ ಗ್ರಹಗಳ ನಂತರದ ಕ್ಯೂಪಿಯರ್ ಪದರಲ್ಲಿ ಲಕ್ಷಗಟ್ಟಲೆ ಉಲ್ಕ ಶಿಲೆಗಳು, ನಭೋಮಂಡಲದ ಸ್ಥಿರವಲ್ಲದ ವ್ಯಾಪ್ತಿಯಲ್ಲಿ ಪ್ರಜ್ವಲಿಸುವ ಉದ್ದನೆಯ ಬಾಲವುಳ್ಳ ಬೃಹತ್ ತಲೆ ಆಕಾರದ ಸಾವಿರಾರು ಧೂಮಕೇತುಗಳು ಮತ್ತು ಅಧಿಕ ಪ್ರಕಾಶ ಹೊಂದಿರುವ ವೇಗವರ್ಧಕ ಲಕ್ಷಾನುಗಟ್ಟಲೆ ಗುರಿ ಇಡುವ ಆಕಾಶ ಕಾಯಗಳು ಸೌರಮಂಡಲದ ಕಕ್ಷೆಯಲ್ಲಿ ಸ್ಥಿರಪಡ್ಡಿರುತ್ತವೆ. ಇವುಗಳನ್ನು ಕ್ಷುತ್ರ ಗ್ರಹಗಳೆಂದು ನಿರ್ಧರಿಸಲಾಗಿದೆ.

ಮುಂದುವರಿದ ವೈಜ್ಞಾನಿಕ ಸಂಶೋಧನೆಗಳಿಂದ ಸೂರ್ಯನ ಹೊರಪದರದಲ್ಲಿ ಆಗಿಂದಾಗ್ಗೆ ಸಂಭವಿಸುವ ವಿಸ್ಮಯ ಸೌರೋದ್ರೇಕದಿಂದ ನಭೋಮಂಡಲದತ್ತ ಎರಕ ಹೊಯ್ಯುವ ಅಥವಾ ಹೊರಚಿಮ್ಮುವ ಮಹಾಶಕ್ತಿ ಸೌರ ಮಾರುತಗಳ ಹೊಡೆತಕ್ಕೆ ಸಿಕ್ಕಿ ಕ್ಷುದ್ರಗ್ರಹಗಳಲ್ಲಿ ಘರ್ಷಣೆ ಮತ್ತು ಡಿಕ್ಕಿಗಳು ಸಂಭವಿಸಿ ಲಕ್ಷಾನುಲಕ್ಷ ಕ್ಷುದ್ರಗ್ರಹಗಳು ಅನೇಕ ಭಾಗಗಳಾಗಿ ಛಿದ್ರಗೊಳ್ಳುತ್ತವೆ. ಅಂತಹ ಛಿದ್ರಗೊಂಡ ಕ್ಷುದ್ರ ವಸ್ತುಗಳು ಚಲನೆ ಸಿದ್ಧಾಂತದಲ್ಲಿ ಏರುಪೇರಾಗ ಸೌರಮಾರುತಗಳಿಂದ ತಮ್ಮ ಕಕ್ಷೆಯಿಂದ ಹೊರಬರುತ್ತಿರುತ್ತವೆ. ಅಂಥಹ ಕ್ಷುದ್ರ ವಸ್ತುಗಳು ನಭೋ ಮಂಡಲದ ನಾನಾ ಆಮ್ಲಗಳ ಪದಗಳಿಗೆ ಒಳಪಟ್ಟು ರಾಸಾಯನಿಕ ಮತ್ತು ಭೌತಿಕ ಗುಣಗಳಿಗೆ ಸಿಕ್ಕಿ ಸೌರಮಾರುತಗಳಿಂದ ಕರಕಲಾಗಿ ಬೂದಿ ಆಗುತ್ತವೆ. ಇಂಥಹ ವಿಸ್ಮಯಕಾರಿ ದೃಶ್ಯಗಳನ್ನು ಬರೀಕಣ್ಣಿನಿಂದ ನಿರ್ಮಲ ರಾತ್ರಿಯಲ್ಲಿ ನೋಡಬಹುದು. ಬೃಹತ್ ಗುರತ್ವಾಕರ್ಷಣೆಗೆ ಸಿಕ್ಕಿ ತಮ್ಮ ಕಕ್ಷೆಯಿಂದ ಕ್ಷುದ್ರಹಗಳು ಸೌರ ಮಂಡಲದಲ್ಲಿ ಹೊರಬರುತ್ತಲಿರುತ್ತವೆ.

ಘೋರಕ್ಷುದ್ರಗ್ರಹ: 1994, ಜುಲೈ 18 ರಿಂದ 21ರವರೆಗೆ ಸೌರ ಮಂಡಲದಲ್ಲಿಯೇ ಅತಿ ದೊಡ್ಡದಾದ 1,42,500 ಕಿ.ಮೀ. ವ್ಯಾಸವುಳ್ಳ ಗುರುಗ್ರಹಕ್ಕೆ 'ಷೂಮೇಕರ್ ಲೆವಿ' ಎಂಬ ಕ್ಷುದ್ರಗ್ರಹ ಡಿಕ್ಕಿ ಹೊಡೆಯಿತು. ಆ ಗ್ರಹದ ಮೇಲ್ಮೈ ಕಂಡರಿಯದ ಕಂದಕವು ಸೃಷ್ಟಿಗೊಂಡಿತು. ಅಂತಹ ಕ್ಷುದ್ರ ಗ್ರಹ ಪೃಥ್ವಿಗೆ ಡಿಕ್ಕಿಹೊಡೆದಿದ್ದರೆ ಪೃಥ್ವಿಯ ಮೇಲೆ ಯಾವುದೇ ಜೀವರಾಶಿ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಇಂಥಹ ವಿಸ್ಮಯಕಾರಿ ಡಿಕ್ಕಿಯನ್ನು ನಭೋಮಂಡಲದ ಮಹಾಘೋರ ಪ್ರಳಯವೆಂದು ನಿರ್ಧರಿಸಬಹುದು. ಆದರೆ,ಅಂತಹ ಕ್ಷುದ್ರ ಗ್ರಹಗಳು ಪೃಥ್ವಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಗಳು ಇಲ್ಲ. ಎಕೆಂದರೆ ಅಂತಹ ಕ್ಷುದ್ರ ಗ್ರಹವನ್ನು ಎಳೆದುಕೊಳ್ಳುವ ಗುರುತ್ವಾಕರ್ಷಣ ಶಕ್ತಿ ಪೃಥ್ವಿಗೆ ಇಲ್ಲವಾಗಿದೆ.

ಪೃಥ್ವಿಯ ಕಕ್ಷೆಗೆ ಇಂತಹ ಕ್ಷುದ್ರಗ್ರಹಗಳು ಮತ್ತು ಯಾವುದೇ ನಭೋ ವಸ್ತುಗಳು ಬರುತ್ತಿರುವುದನ್ನು ವೀಕ್ಷಿಸಲು 'ನಾಸಾ' ವೀಕ್ಷಣಾಲಯ 1990 ರಲ್ಲಿ ಹಬ್ಬಲ್ ಟೆಲಿಸ್ಕೂಪ್ ಅನ್ನು ಮತ್ತು ರೇಡಿಯೋ ಟೆಲಿಸ್ಕೂಪುಗಳನ್ನು ಅನಾವರಣ ಮಾಡಿದೆ. ಇಂದಿನವರೆವಿಗೂ ಅಂತಹ ಕ್ಷುದ್ರಗ್ರಹಗಳು ಪೃಥ್ವಿಯತ್ತ ಬರುತ್ತಿರುವುದು ಕಂಡು ಬಂದಿಲ್ಲ. ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವುದು ಕೇವಲ 0.032ರಷ್ಟು ಎಂದು ನಾಸಾ ಪ್ರಕಟಿಸಿದೆ.

ಸಂಶೋಧನೆಗಳು: 1970 ಮತ್ತು 1980ರಲ್ಲಿ ನಡೆದ ಮುಂದುವರಿದ ಸಂಶೋಧನೆಗಳಿಂದ ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಇಂತಹ ಯಾವುದೋ ಒಂದು ಕ್ಷುದ್ರಗ್ರಹ ಭೂಮಿ ಅಪ್ಪಳಿಸಿ ಹವಾಮಾನದಲ್ಲಿ ವ್ಯತ್ಯಾಸ ಉಂಟಾಗಿ ಡೈನೋಸರ್ಗಳು ಸರ್ವನಾಶ ಹೊಂದಿದವು ಎಂದು ತಿಳಿಸಿದ್ದಾರೆ. ಸ್ಟಡಿ ಸ್ಟೇಟ್ ಮತ್ತು ಬಿಗ್ಬ್ಯಾಂಗ್ ಥಿಯರಿಗಳು ಇದನ್ನು ಪ್ರತಿಪಾದಿಸುತ್ತಿವೆ. 50 ಸಾವಿರ ವರ್ಷಗಳ ಹಿಂದೆ ಯುನೈಟೆಡ್ ಸ್ಟೇಟ್ಸ್ ಅರಿಜೋನ ರಾಜ್ಯದಲ್ಲಿ ಕ್ಷುದ್ರಗ್ರಹ ಬಿದ್ದು 12 ಸಾವಿರ ಮೀಟರ್ಗಳಷ್ಟು ಕುಣಿ ಆಗಿದೆ. ಅಂತಹದ್ದೆ ಮಹಾರಾಷ್ಟ್ರದ ಲೋನಾರ್ ಲೇಕ್ನಲ್ಲಿ ಬಿದ್ದು ಚಿಕ್ಕದೊಂದು ಕುಣಿ ಆಗಿರುತ್ತದೆ ಎಂದು ತಿಳಿದುಬಂದಿದೆ.

ಶತಮಾನದ ಘಟನೆ: 1908, ಜೂನ್ 30ರ ಪ್ರಾತಃಕಾಲ ಸೈಬೀರಿಯಾದ ತುಂಗುಸ್ಕ ಪ್ರಾಂತ್ಯದಲ್ಲಿ 40 ಮೀಟರ್ ಉದ್ದನೆಯ 30,000 ಟನ್ ತೂಕದ ಕ್ಷುದ್ರ ವಸ್ತು ಒಂದು ಬಿದ್ದು ಸುಮಾರು 40 ಕಿ.ಮೀ.ಗಳ ಪ್ರಾಂತ್ಯದಲ್ಲಿ ಅಪಾಯ ಸಂಭವಿಸಿದೆ. ಆದರೆ, ಇದು ಮಂಜುಗಡ್ಡೆಯಂತಹ ನಭೋವಸ್ತು, ಅಂದಿನಿಂದ ಇಂದಿನವರೆಗೂ ಈ ಶತಮಾನದಲ್ಲಿ ಇಂತಹ ವಿಸ್ಮಯಕಾರಿ ಸಂಘಟನೆ ಸಂಭವಿಸಿಲ್ಲ.

ಯಾವುದೇ ಕ್ಷುದ್ರಗ್ರಹ ನಭೋಮಂಡಲದಿಂದ ಪೃಥ್ವಿಕಕ್ಷೆಗೆ ಸೇರುವ ಹೊತ್ತಿಗೆ ಅನೇಕ ಆಮ್ಲಗಳ ಪದರಗಳ ಭೌತಿಕ ಗುಣಗಳಿಗೆ ಸಿಕ್ಕಿ ತಮ್ಮ ಸ್ವರೂಪವನ್ನು ಕಳೆದುಕೊಂಡು ಕರಕಲಾಗುತ್ತವೆ. ಆಯತಪ್ಪಿದ ಕ್ಷುದ್ರಗ್ರಹಗಳು ಪೃಥ್ವಿಯ ಕಕ್ಷೆಗೆ ಬಂದರೂ ಅವುಗಳನ್ನು ಎಳೆಯುವ ಶಕ್ತಿ ಪೃಥ್ವಿಗೆ ಇರುವುದಿಲ್ಲ. ಪೃಥ್ವಿ ಮತ್ತು ಚಂದ್ರನ ಮಧ್ಯೆ ಗುರುತ್ವಾಕರ್ಷಣ ಶಕ್ತಿ ಇಲ್ಲದ ಪದರದಲ್ಲಿ ಸ್ಥಿರವಾಗುತ್ತವೆ. ಅಂತಹ ಪದರವನ್ನು ಕ್ರಮಿಸಿ ಬಂದರೂ ಪೃಥ್ವಿಯ ಮೇಲ್ಮೈ ಜಲ, ವಾಯು ಅಂತಹ ಕ್ಷುದ್ರಗ್ರಹಗಳನ್ನು ನಿಷ್ಕ್ರಿಯಗೊಳಿಸುತ್ತದೆ.

* ವಿ. ನಾರಾಯಣ ಶೆಟ್ಟಿ ಪದ್ಮಶಾಲಿ

ಹೆಬ್ಬೂರು ಶ್ರೀ ಕಾಮಾಕ್ಷಿ ಶಾರದಾಂಬ, ಶ್ರೀ ಚಕ್ರ ಮಂದಿರ * ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್.

ತುಮಕೂರಿನ ದಕ್ಷಿಣಕ್ಕೆ 23 ಕಿ.ಮೀ. ದೂರದಲ್ಲಿರುವ ಒಂದು ಸಣ್ಣ ಹಳ್ಳಿ ಹೆಬ್ಬೂರು. ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವೆಯ ಇತಿಹಾಸ ಇಲ್ಲಿದೆ. ಅಪೂರ್ವ ಶ್ರೀ ಚಕ್ರ ಮತ್ತು ಕಾಮಾಕ್ಷಿ ಶಾರದಾ ದೇವಿ ದೇವಸ್ಥಾನ ದೇಶದಲ್ಲಿನ ಪವಿತ್ರ ಯಾತ್ರಾಸ್ಥಳಗಳಲ್ಲಿ ಒಂದು.

ಸುಮಾರು 6-7ನೇ ಶತಮಾನದ ಗಂಗರಸರ ಕಾಲದಿಂದ ಹೆಬ್ಬುಲಿ ಎಂಬ ಹೆಸರು ಪಡೆದಿದ್ದ ಈ ಊರಿನಲ್ಲಿ 108 ದೇವಾಲಯಗಳು ಇದ್ದವು ಎಂದು ತಿಳಿದುಬಂದಿದೆ. ಆದರೆ ಕಾಲ ಉರುಳಿದಂತೆ ಜನರಲ್ಲಿ ಶ್ರದ್ಧಾ ಭಕ್ತಿ, ಉತ್ಸಾಹಗಳು ಕಡಿಮೆಯಾಗುತ್ತ ಬಂದವು. ಬೇರೆ ಕಾರಣದಿಂದಲೂ ದೇವಾಲಯಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಬರಲಾಗದೆ ಅನೇಕ ದೇವಾಲಯಗಳು ಮುಚ್ಚಿದವು. ಈಗ ಇಲ್ಲಿ 25-30ರಷ್ಟು ದೇವಾಲಯಗಳು ಮಾತ್ರ ಉಳಿದುಕೊಂಡಿವೆ.

ಭೂಪ್ರಸ್ತಾರ, ಮೇರು ಪ್ರಸ್ತಾರ ಮತ್ತು ಅರ್ಧ ಮೇರು ಪ್ರಸ್ತಾರ ಎಂದು ಶ್ರೀಚಕ್ರದಲ್ಲಿ ಮೂರು ವಿಧ. ಯಾವುದೇ ಶ್ರೀಚಕ್ರದಲ್ಲಿ 9 ಆವರಣಗಳಿರುವುದು ಸಾಮಾನ್ಯ. ಎಲ್ಲ ಆವರಣಗಳನ್ನು ದಳಗಳ ರೂಪದಲ್ಲಿ ಬರೆಯುತ್ತಾರೆ. 4, 5, 6, 7, 8ನೇ ಆವರಣಗಳನ್ನು, 9 ತ್ರಿಕೋನಗಳನ್ನು ಜೋಡಿಸಿ ರಚಿಸುತ್ತಾರೆ. ಒಂದು ತ್ರಿಕೋಣ, ಅಷ್ಟ ಕೋಣ ದಶದಳ, ಇನ್ನೊಂದು ದಶದಳ, ಹದಿನಾಲ್ಕು ದಳ, ಷೋಡಶ ದಳ ಭೂಪುರ ಹೀಗೆ ಒಂಬತ್ತು ಆವರಣಗಳಿರುತ್ತವೆ.

ದೇವತಾ ವಿಗ್ರಹಗಳೂ, ಮಂತ್ರಗಳು ಮತ್ತು ಆಧ್ಯಾತ್ಮಿಕ ಶಕ್ತಿಗಳ ಸಂಜ್ಞೆಯಾಗಿರುವಂತೆ ರೇಖಾಕೃತಿಗಳು ಈ ಶಕ್ತಿಗಳ ಸಂಕೇತ. ಇವುಗಳಿಗೆ ಯಂತ್ರವೆಂದು ಹೆಸರು. ಇಂತಹ ಯಂತ್ರಗಳಲ್ಲಿ ಶ್ರೀ ಚಕ್ರಕ್ಕಿಂತ ಉತ್ತಮವಾದ ಯಂತ್ರ ಇನ್ನೊಂದಿಲ್ಲವೆಂದು ಹೇಳಬಹುದು.

ಹೆಬ್ಬೂರಿನಲ್ಲಿರುವ ಶ್ರೀ ಚಕ್ರ ದೇವಾಲಯ ಮೇರುಪ್ರಸ್ತಾರ. ಅದ್ವೈತ ತತ್ತ್ವಾನುಯಾಯಿ ಶ್ರೀ ಕೋದಂಡಾಶ್ರಮದ ಶ್ರೀ ನಾರಾಯಣಾಶ್ರಮದ ಸ್ವಾಮಿಗಳು ಹೆಬ್ಬೂರು ಮಠದ ಶ್ರೀ ಕಾಮಾಕ್ಷಿ ಶಾರದಾಂಬ ಸನ್ನಿಧಿಯ ಸ್ಥಾಪನೆಗೆ ಕಾರಣರಾಗಿರುತ್ತಾರೆ.

ಶ್ರೀಚಕ್ರದ ಪೂರ್ವಾಪರ

ಶ್ರೀರಂಗಪಟ್ಟಣದ ಭಕ್ತರೊಬ್ಬರ ಪ್ರಾರ್ಥನೆಯಂತೆ ಅಂದಿನ ಶ್ರೀ ಕೋದಂಡಾಶ್ರಮ ಸ್ವಾಮಿಗಳು ಅವರ ಮನೆಗೆ ಭೇಟಿ ನೀಡಿ ಅವರ ಮನೆಯಲ್ಲಿದ್ದ ಅಪೂರ್ವವಾದ ಶ್ರೀ ಚಕ್ರವನ್ನು ವೀಕ್ಷಿಸಿದರು. ಆ ಶ್ರೀಚಕ್ರಕ್ಕೆ ದಿನವೂ ಪೂಜೆ ಸಲ್ಲುತ್ತಿದ್ದಿತಾದರೂ, ಶಾಸ್ತ್ರೀಯ ಪದ್ಧತಿಯಂತೆ ಅನುಷ್ಠಾನಗಳು ನಡೆಯುತ್ತಿರಲಿಲ್ಲವಾದ್ದರಿಂದ, ಸರಿಯಾದ ಪೂಜೆ ನಡೆಯದೇ ಹೋದರೆ ಸದ್ಗತಿ ಹೊಂದುವುದಿಲ್ಲವೆಂದೂ ಆ ಗೃಹಸ್ಥರು ತಮ್ಮಲ್ಲಿದ್ದ ಶ್ರೀಚಕ್ರವನ್ನು ಸ್ವಾಮಿಗಳಿಗೆ ಒಪ್ಪಿಸಿದರು. ಅದನ್ನು ಸ್ವಾಮೀಜಿಯವರು ಹೆಬ್ಬೂರಿನ ಶ್ರೀ ಮಠಕ್ಕೆ ತಂದು ಪೂಜೆ ನಡೆಸುತ್ತಿದ್ದರು. ಇದು ನಡೆದದ್ದು ಸುಮಾರು 150 ವರ್ಷಗಳ ಹಿಂದೆ. ಈ ಚಕ್ರವು ವಿಶೇಷ ಆಕಾರವುಳ್ಳದ್ದು. ಇದರದಲ್ಲಿ ಒಂದು ತ್ರಿಕೋಣ, ಪಂಚಕೋಣ, ಅಷ್ಟಕೋಣ, ದ್ವಾದಶಕೋಣ, ಅಷ್ಟದಶಕೋಣ, ಪಂಚವಿಂಶತಿ ಕೋಣ ಮತ್ತು ಪಂಚತ್ರಿಂಶತ್ ಕೋಣಗಳಿವೆ. ಇವು ಕೋಣಗಳಲ್ಲಿನ ವೈಶಿಷ್ಟ್ಯವಾಗಿದೆ.

ಅಲ್ಲದೆ ಇದು ಕೂರ್ಮ ಪೀಠ, ಅದರ ಮೇಲೆ ಅಷ್ಟ ದಿಗ್ಗಜಗಳೂ, ಅಷ್ಟ ದಿಗ್ನಾಗಗಳೂ, ಅಷ್ಟ ಶಕ್ತಿಗಳು ಇವೆ. ನಂತರ ಗೋಪುರ, 35, 25, 22, 18, 12, 8, 5, 3 ಮತ್ತು 1 ಈ ರೀತಿಯಾಗಿವೆ. ಇದನ್ನು ಚಿದಂಬರ ಶ್ರೀ ಚಕ್ರ ಎಂದೂ ಕರೆಯುತ್ತಾರೆ. ಬೆಂಗಳೂರಿನ ರಾಗಿ ಗುಡ್ಡ ದೇವಾಲಯ ಅಭಿವೃದ್ಧಿ ಪಡಿಸಿದ ವೇದಬ್ರಹ್ಮ ಶ್ರೀ ಗಣಪತಿ ಸೋಮಯಾಜಿಯವರು 14 ವರ್ಷಗಳ ಹಿಂದೆ ಈ ಮಠಕ್ಕೆ ಭೇಟಿ ನೀಡಿ, ಆ ಸ್ಥಾನದಲ್ಲಿ ಚಂಡಿ ಹೋಮ ನಡೆಯುತ್ತಿರುವ ಸಂದರ್ಭದಲ್ಲಿ ದೇವಿಯು ಅವರಿಗೆ ಈ ಚಕ್ರಾಕಾರದಲ್ಲಿಯೇ ದೇವಾಲಯ ಆಗಬೇಕು ಎಂದು ಆಜ್ಞೆ ನೀಡಿದ್ದಳು.

ಸ್ವಾಮಿಗಳು ಅದ್ವೈತ ಪರಂಪರೆಯ ಶ್ರೀ ಶಂಕರಾಚಾರ್ಯರ ತತ್ತ್ವ ಸಿದ್ಧಾಂತಗಳಿಗೆ ತಮ್ಮನ್ನು ತೊಡಗಿಸಿಕೊಂಡು, ಪೀಠಾಲಂಕೃತರಾಗಿ 1994 ರಿಂದ ಶ್ರೀ ಮಠದ ಮತ್ತು ತನ್ಮೂಲಕ ಜನಸೇವೆಯಲ್ಲಿ ತೊಡಗಿದ್ದರು. ಮಠದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ, ಧಾರ್ಮಿಕ ಸಮಾರಂಭಗಳಿಗೆ ಅಸಂಖ್ಯಾತ ಭಕ್ತರನ್ನು ಪ್ರತಿದಿನ ಆಕರ್ಷಿಸುತ್ತಿದೆ. ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಶಾಶ್ವತ ಭೋಜನ ವ್ಯವಸ್ಥೆ, ಭೋಜನಶಾಲೆ ನಿರ್ಮಾಣ, ಗುರುನಿವಾಸ, ಕಲ್ಯಾಣ ಭವನ ಇತ್ಯಾದಿ ಎಲ್ಲ ನಿರ್ಮಾಣಗಳ ಕಾರ್ಯಗಳ ವ್ಯವಸ್ಥೆಗಳಿಗೆ ಸ್ವಾಮಿಗಳೇ ತಳಹದಿಯಾಗಿದ್ದರು.

ಈಗ ಶ್ರೀ ಚಕ್ರ ದೇವಾಲಯವು ಮೊದಲು ಕೂರ್ಮ ಪೀಠ ಅದರ ಮೇಲೆ ಅಷ್ಟ ದಿಗ್ಗಜಗಳು ದಿಂಜ್ಞಾಗಗಳು, ಅಷ್ಟ ಶಕ್ತಿಗಳು ಗರ್ಭಗುಡಿಯ ಪೂರ್ವ ಭಾಗದಲ್ಲಿ ಎಡಗಡೆ ಕುಮಾರಸ್ವಾಮಿ, ಬಲಗಡೆ ಮಹಾಗಣಪತಿ ಮತ್ತು ಮೂರ ದಿಕ್ಕುಗಳಲ್ಲಿ ದಕ್ಷಿಣಾ ಮೂರ್ತಿ, ದತ್ತಾತ್ರೇಯ, ಕಾಲ ಭೈರವ, ಶ್ರೀ ವಿದ್ಯೆಗೆ ಸಂಬಂಧಿಸಿದ ವಿದ್ಯಾ ದೇವತೆಗಳು ಇಡಲ್ಪಟ್ಟಿವೆ. ಪೂಣಿಗೆಯ ಮೇಲೆ ಪಂಚ ಶಕ್ತಿ ದೇವತೆಗಳು ಅದಾದ ಮೇಲೆ ಭೂಪುರ ಅದರ ಮೇಲೆ 35, 24, 22, 18, 12, 8, 5, 3, 1 ಕೆತ್ತಲ್ಪಟ್ಟಿದೆ. ಶ್ರೀ ಚಕ್ರದ ಬಿಂದುವೇ ಶಿವ ಶಕ್ತೈಕ್ಯ ರೂಪವಾದ ಕಲಶವಾಗಿದೆ. ಇದೇ ದೇವಾಲಯ ವೈಶಿಷ್ಟ್ಯಪೂರ್ಣ.

ಶ್ರೀ ಚಕ್ರದ ಆಕಾರವೇ ಆಲಯದ ವಾಸ್ತು ಶಿಲ್ಪಕ್ಕೆ ರೂಪದರ್ಶಿಯಾಗಿದೆ. ದೇವಾಲಯವು ಅದೇ ಗರ್ಭಗುಡಿಯೂ ಅದೇ ಆಗಿದೆ. ಅದರೊಳಗೆ ಶ್ರೀ ಕಾಮಾಕ್ಷಿ ಶಾರದಾ ನಾಮಾಂಕಿತ ದೇವಿಯನ್ನು ವೈದಿಕ ವಿಧಿ ಪೂರ್ವಕವಾಗಿ ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯವು ಶ್ರೀ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳಾದ ಅಮೃತ ಹಸ್ತದಿಂದ ಪ್ರತಿಷ್ಠಾಪನೆ ಆಗಿದೆ.

ಇದೇ ಆವರಣದಲ್ಲಿ ಅಂದರೆ ಶ್ರೀ ಚಕ್ರ ದೇವಾಲಯದ ಬಲಭಾಗದಲ್ಲಿ ವಿನಾಯಕ, ಶ್ರೀ ಸತ್ಯನಾರಾಯಣ, ಶ್ರೀ ಶಂಕರ ಭಗವತ್ಪಾದರ ಮತ್ತು ಶ್ರೀ ಪೀಠದ ಯತಿ ಪರಂಪರೆಯ ಶ್ರೀ ಶ್ರೀಧರಾನಂದಶ್ರಮ ಸ್ವಾಮಿಗಳವರ ನಾಮಾಂಕಿತ ಅಧಿಷ್ಠಾನ ದೇವಾಲಯ ಇದೆ.

ಶ್ರೀ ಚಕ್ರಕ್ಕೆ ತ್ರಿಕಾಲ ಅಭಿಷೇಕ, ಪೂಜೆ ನಡೆಯುತ್ತಿದೆ. ದಿನನಿತ್ಯವೂ ಅನ್ನದಾನ ಇರುತ್ತದೆ. ಸಹಸ್ರಾರು ಭಕ್ತಾದಿಗಳು ಬಂದು ದೇವಿಯ ದರ್ಶನ ಪಡೆಯುತ್ತಾರೆ. ಇದು ಭಾರತದಲ್ಲೇ ಒಂದು ಅಪೂರ್ವ ದೇವಾಲಯ ಎಂದು ಹೇಳಬಹುದು

ತಿಲಕದ ಮಹಿಮೆ * ಡಾ. ಎಸ್.ಎನ್. ಶೈಲೇಶ್ ಬಾಣಾವರ, ಜ್ಯೋತಿಷಿ

ಸಾಮಾನ್ಯವಾಗಿ ಕೆಲವರು ಹಣೆಗೆ ವಿಭೂತಿ ಧರಿಸುತ್ತಾರೆ. ಇನ್ನು ಕೆಲವರು ವಿಭೂತಿಯ ಜತೆ ತಿಲಕ ಇಟ್ಟುಕೊಳ್ಳುತ್ತಾರೆ. ಆ ತಿಲಕಗಳಲ್ಲಿ ಹಲವಾರು ಬಣ್ಣಗಳಿರುತ್ತವೆ. ಒಂದೊಂದು ಪ್ರಾಂತ್ಯದವರು ಒಂದೊಂದು ರೀತಿಯ ತಿಲಕ ಧರಿಸುತ್ತಾರೆ. ತಿಲಕದ ಧಾರಣೆಯಿಂದ ಸಾಕಷ್ಟು ಅನುಕೂಲ ಹಾಗೂ ಶುಭವಾಗುತ್ತದೆ.

ಇತ್ತೀಚಿನ ಕೆಲ ಹೆಣ್ಣುಮಕ್ಕಳು ಕುಂಕುಮವಿಡುವುದಿಲ್ಲ. ಕೇಳಿದರೆ ಅದು ಹಳೇ ಪದ್ಧತಿ ಬಿಡಿ, ಇದು ಆಧುನಿಕ ಯುಗ ಎಂದು ಉತ್ತರ ಕೊಡುವವರೇ ಹೆಚ್ಚು. ಇದು ಬರೀ ಹೆಣ್ಣು ಮಕ್ಕಳ ವಿಚಾರವಷ್ಟೇ ಅಲ್ಲ, ಕೆಲವು ಗಂಡಸರದ್ದೂ ಇದೇ ಗೋಳು.

ಇನ್ನು ಕೆಲವರು ಮನೆಯಲ್ಲಿ ಪೂಜೆ ಮುಗಿಯುವವರೆಗೂ ಹಣೆಯಲ್ಲಿ ವಿಭೂತಿ, ಕುಂಕುಮ ಅಥವಾ ತಿಲಕ ಇಟ್ಟುಕೊಂಡು, ಮನೆಯಿಂದ ಹೊರಗೆ ಬಂದರೆ ಹಣೆಯಲ್ಲಿ ಏನೂ ಇರುವುದಿಲ್ಲ. ಎಲ್ಲ ಮಾಯವಾಗಿಬಿಟ್ಟಿರುತ್ತಾರೆ. ಇನ್ನು ಕೆಲವರಿಗೆ ಕೇಳಿದರೆ ಬೇರೆಯವರು ಆಡಿಕೊಳ್ಳುತ್ತಾರೆ ಎಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ಇದರ ಮಹತ್ವ ತಿಳಿದುಕೊಂಡ ಮೇಲೆ ಸ್ವಲ್ಪ ಸುಧಾರಣೆ ಕಂಡುಬರಬಹುದು. ಹಾಗಾದರೆ ಇನ್ನೇಕೆ ತಡ, ಬನ್ನಿ ಒಂದೊಂದೇ ತಿಲಕದ ಬಗ್ಗೆ ವಿಚಾರಗಳನ್ನು ತಿಳಿದುಕೊಳ್ಳೋಣ.

ಕೆಂಪು ಕುಂಕುಮ ಅಥವಾ ತಿಲಕ: ಕೆಂಪು ಕುಂಕುಮವನ್ನು ಅಮ್ಮನವರ ಕುಂಕುಮಾರ್ಚನೆಗೆ ಬಳಸುತ್ತಾರೆ. ಮುತ್ತೈದೆಯರಿಗೂ ಕೊಡುತ್ತಾರೆ. ಹೆಣ್ಣು ದೇವತೆಗಳಿಗೆ ನೀರು ಹಾಗೂ ಕುಂಕುಮವನ್ನು ಮಿಶ್ರಣ ಮಾಡಿ ಹಲವು ಕಡೆ ಅಭಿಷೇಕಕ್ಕೆ ಉಪಯೋಗಿಸುತ್ತಾರೆ. ಹಾಗೆ ಮಾಡಿದಾಗ ದೇವತೆಗಳು ಸಂತೃಪ್ತರಾಗುತ್ತಾರೆ ಎಂಬ ವಾಡಿಕೆ.

ಇನ್ನು ದೃಷ್ಟಿ ದೋಷಕ್ಕೆ ಸಂಬಂಧಿಸಿದಂತೆ ನಿಂಬೆಹಣ್ಣು ಅಥವಾ ಬೂದುಗುಂಬಳ ಕಾಯಿಯನ್ನು ಚಂದ್ರಿಕೆ ಹಾಕಿ ಅಂದರೆ ನಾಲ್ಕು ಭಾಗ ಮಾಡಿ ಅದರಲ್ಲಿ ಕುಂಕುಮ ತುಂಬಿ ನಿವಾಳಿಸಿ ಒಡೆದರೆ ದೃಷ್ಟಿ ದೋಷ ಪರಿಹಾರವಾಗುತ್ತದೆ. ಸಣ್ಣ ಮಕ್ಕಳಿಗೆ ಬಾಲಗ್ರಹಕ್ಕೆ ಸಂಬಂಸಿದಂತೆ ತೊಂದರೆಯಾದಾಗ ನೀರಿಗೆ ಕುಂಕುಮವನ್ನು ಮಿಶ್ರಣ ಮಾಡಿ ಅನ್ನದ ಜತೆ ಕುಂಕುಮವನ್ನು ಮಿಶ್ರಣ ಮಾಡಿ ಒಂದು ನಿಂಬೆಹಣ್ಣು, 3 ತರಹದ ಹೂವು ಹಾಗೂ 3 ಹಿಡಿ ಅಕ್ಕಿಯನ್ನು ನಿವಾಳಿಸಿ ಮೂರು ದಾರಿ ಸೇರುವ ಕಡೆ ಚೆಲ್ಲಿದರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.

ಗೋಪಿ ಚಂದನ: ಸಾಮಾನ್ಯವಾಗಿ ಗೋಪಿ ಚಂದನವನ್ನು ಅಭಿಷೇಕಕ್ಕೆ ಬಳಸುವರು ಹಾಗೂ ಇದು ಶ್ರೀ ಕೃಷ್ಣನಿಗೆ ಬಹಳ ಇಷ್ಟವಾದದ್ದು. ಇದರ ಧಾರಣೆಯಿಂದ ನೆಮ್ಮದಿ, ಶಾಂತಿ ದೊರೆಯುತ್ತದೆ. ಹಾಗೂ ವಶೀಕರಣವಾಗಲಿ ಅಥವಾ ಆಕರ್ಷಣೆ ಕೆಲಸ ಕಾರ್ಯಗಳಲ್ಲಿ ಇದನ್ನು ಬಳಸುವುದುಂಟು. ತಲೆನೋವು, ತಲೆಭಾರ, ರಕ್ತದೊತ್ತಡದಿಂದಾಗುವ ತೊಂದರೆಗಳು ನಿವಾರಣೆಯಾಗುತ್ತದೆ. ಒಟ್ಟಿನಲ್ಲಿ ಇದನ್ನು ಧಾರಣೆ ಮಾಡುವುದರಿಂದ ಎಲ್ಲ ತೊಂದರೆಗಳು ನಿವಾರಣೆಯಾಗಿ ಶುಭವಾಗುತ್ತದೆ.

ಕೇಸರಿ ತಿಲಕ: ಕೇಸರಿ ತಿಲಕದ ಧಾರಣೆಯಿಂದ ಮದುವೆಯಾಗದ ವಧು-ವರ ಯಾರೇ ಆಗಲಿ ಅಂತಹವರು ಧಾರಣೆ ಮಾಡಿದರೆ ಬೇಗನೆ ಮದುವೆ ಕಾರ್ಯ ನೆರವೇರುವುದು. ಹಾಗೂ ಮನಸ್ಸಿನ ಕಾರ್ಯಗಳು ಈಡೇರುವುದು. ಮಂಗಳಗೌರಿಯನ್ನು ಪೂಜೆ ಮಾಡುವಾಗ ಕೇಸರಿಯಿಂದ ಪೂಜೆ ಮಾಡಿದರೆ ತುಂಬಾ ಶ್ರೇಷ್ಠ ಹಾಗೂ ಅರ್ಚನೆಯನ್ನು ಶ್ರೀ ಕೃಷ್ಣ ಪರಮಾತ್ಮನಿಗೆ ಮತ್ತು ಶ್ರೀ ಮಹಾಲಕ್ಷ್ಮಿಗೆ ಮಾಡಿದರೆ ಕಾರ್ಯಸಿದ್ಧಿ, ಹಣ ಲಾಭ.

ಕರ್ಪೂರ ತಿಲಕ: ಕರ್ಪೂರ ತಿಲಕವನ್ನು ದಂತ ಮಂಜನವಾಗಿ ಉಪಯೋಗಿಸಿದರೆ ಕೆಟ್ಟ ವಾಸನೆ ದೂರವಾಗುತ್ತದೆ. ಸತ್ಪಾತ್ರರಿಗೆ ದಾನ ಮಾಡಿದರೆ ಗೌರವ, ಕೀರ್ತಿ ದೊರೆಯುತ್ತದೆ. ಗರ್ಭಕ್ಕೆ ಸಂಬಂಧಿಸಿದ ತೊಂದರೆಗಳು ಇದ್ದರೆ ಹಾಲಿನಲ್ಲಿ ಎರಡು ಹನಿ ಬೆರೆಸಿ ಕುಡಿದರೆ ನಿವಾರಣೆಯಾಗುತ್ತದೆ. ಶ್ರೀ ವೆಂಕಟೇಶ್ವರ ಸ್ವಾಮಿಗೆ ಈ ಕರ್ಪೂರ ತಿಲಕದಲ್ಲಿ ಪೂಜೆ ನೆರವೇರುತ್ತದೆ. ಇದರ ಧಾರಣೆಯಿಂದ ಶುಭವಾಗಿ, ಸುಖ, ಶಾಂತಿ, ನೆಮ್ಮದಿ ದೊರೆಯುತ್ತದೆ. ಸದಾ ಲಕ್ಷ್ಮಿಯ ಕೃಪೆ ಇರುತ್ತದೆ. ಶರೀರಕ್ಕೆ ಸಂಬಂಧಿಸಿದಂತೆ ತಲೆನೋವು, ಶೀತ ವಾಸಿಯಾಗುತ್ತದೆ, ಚರ್ಮ ನುಣುಪಾಗುತ್ತದೆ.

ಸಿಂಧೂರ ತಿಲಕ: ಶ್ರೀ ಹನುಮಂತ ದೇವರಿಗೆ ಸಿಂಧೂರದಿಂದ ಅಭಿಷೇಕ ಹಾಗೂ ಅಷ್ಟೋತ್ತರ ಮಾಡಿದರೆ ಪಾಪ ಪರಿಹಾರವಾಗುತ್ತದೆ. ಮನೆಯಲ್ಲಿ ನೆಮ್ಮದಿ, ಶಾಂತಿ, ಜಗಳ, ಕದನ, ಕಲಹವಿದ್ದಾಗ ಆರೋಗ್ಯದಲ್ಲಿ ತೊಂದರೆ, ಸಂಸಾರದಲ್ಲಿ ಜಗಳಗಳು ಇದ್ದಾಗ ಶ್ರೀ ಹನುಮಂತ ದೇವರಿಗೆ ಸಿಂಧೂರದಿಂದ ಪೂಜಿಸಿದರೆ ಅಥವಾ ಪೂಜೆ ಮಾಡಿಸಿದರೆ ಪರಿಹಾರ ದೊರಕುತ್ತದೆ. ಇನ್ನು ಆರೋಗ್ಯದ ವಿಚಾರದಲ್ಲಿ ಭಯ, ಭೀತಿ, ಬಾಲಗ್ರಹದ ತೊಂದರೆ, ರಕ್ತದೊತ್ತಡದ ತೊಂದರೆಯಾಗುತ್ತಿದ್ದರೆ ಮೇಲೆ ತಿಳಿಸಿದ ಹನುಮಂತ ದೇವರಿಗೆ ಸಿಂಧೂರ ಅರ್ಪಿಸಿದರೆ ಶುಭವಾಗುತ್ತದೆ.

ಹಳದಿ ತಿಲಕ: ಈ ತಿಲಕದ ಧಾರಣೆಯಿಂದ ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ. ಮುತ್ತೈದೆಯರಿಗೆ ನೀಡಿದಾಗ ಆಯಸ್ಸು, ಆರೋಗ್ಯ, ಐಶ್ವರ್ಯ ವೃದ್ಧಿಸುತ್ತದೆ.

ಅಕ್ಷಯ: ಹೊಸದಕ್ಕೆ ಮುನ್ನುಡಿ

ಸುವರ್ಣ ವ್ಯವಹಾರದ ಶುಭ ದಿನವೆಂದು ಅಕ್ಷಯ ತದಿಗೆಯನ್ನು ಕರೆಯಲಾಗುತ್ತಿದೆ. ಈ ದಿನದಲ್ಲಿ ಏನೇ ಕೊಂಡರೂ ಮಂಗಳಕರ ಎನ್ನಲಾಗುತ್ತಿದೆ. ಮುಹೂರ್ತ ನೋಡುವಾಗಲಂತೂ ವರ್ಷದ ಮೂರುವರೆ ಶುಭಯೋಗಗಳಲ್ಲಿ ಇದು ಒಂದಾದರೂ ಇದಕ್ಕಿರುವ ಮಹತ್ವ ಉಳಿದವುಗಳಿಗಿಲ್ಲ. ಹಾಗಾದರೆ ಅಕ್ಷಯ ತೃತೀಯ ಏನಿದರ ಮರ್ಮ ?

ವೈಶಾಖ ಶುಕ್ಲ ತೃತೀಯವು ಅಕ್ಷಯ ತೃತೀಯ ಎಂದೇ ಜನಜನಿತ. ಭಾರತೀಯ ಪರಂಪರೆಯಲ್ಲಿ ಯಾವುದೇ ಶುಭಾರಂಭಕ್ಕೆ ಯುಗಾದಿ ಹಾಗೂ ವಿಜಯದಶಮಿಯಷ್ಟೆ ಮಹತ್ವ ಪಡೆದಿರುವ ಇನ್ನೊಂದು ದಿನ ಇದು. ಕೃಷಿ ಚಟುವಟಿಕೆ ಆರಂಭಕ್ಕೂ ಇದೇ ದಿನ ಶ್ರೇಷ್ಠ. ಈ ದಿನದಂದು ಆಭರಣ, ವಾಹನ ಇನ್ನಿತರ ಸಂಪತ್ತು ಖರೀದಿಸಿದರೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬುದು ಬಲವಾದ ನಂಬಿಕೆ. ಗೃಹ ಪ್ರವೇಶ, ಮದುವೆ ಇತ್ಯಾದಿ ಶುಭ ಕಾರ್ಯಗಳಿಗೆ ಪ್ರಶಸ್ತವಾದ ದಿನ. ಈ ದಿನದಲ್ಲಿ ತೈಲ ಮಜ್ಜನವನ್ನು ಮಾಡಲಾಗುತ್ತದೆ.

ಅಕ್ಷಯ ತೃತೀಯ ಸತ್ಯಯುಗದ ಆರಂಭದ ದಿನ. ಅಂದರೆ ಕ್ರಿಸ್ತಪೂರ್ವ 4ರ ಸುಮಾರಿಗೆ ಯುಗಾದಿಯಂದು ಸಂಭವಿಸುತ್ತಿತ್ತು. ಪ್ರಾಚೀನ ಗ್ರಂಥಗಳಲ್ಲಿ ಇದಕ್ಕೆ ಮನ್ನಣೆ ದೊರೆಯಲು ಅದು ಮುಖ್ಯ ಕಾರಣ. ಕ್ರಮೇಣ ಭೂಚಲನೆಯಿಂದ ಯುಗಾದಿ ಹಿಂದಕ್ಕೆ ಹೋಯಿತು. ಆದರೆ ಈ ದಿನದ ಮಹತ್ವ ಹಾಗೇ ಉಳಿಯಿತು. ಯಾವ ಕಾರಣದಿಂದಾಗಲೀ ಯುಗಾದಿ ಆಚರಣೆ ಕೈತಪ್ಪಿಹೋದರೆ ಈ ದಿನ ಆಚರಿಸಬಹುದೆಂದು ಧರ್ಮಸಿಂಧುಕಾರರು ಅಭಿಪ್ರಾಯಪಡಲು ಇದೇ ಕಾರಣವಾಗಿದೆ.

ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ವಜ್ರ ವ್ಯಾಪಾರ ಬೃಹತ್ ಪ್ರಮಾಣದಲ್ಲಿ ನಡೆಯುತ್ತದೆ. ಈ ದಿನದಂದು ಆಭರಣ ಕೊಂಡರೆ ಶುಭಕರ ಎನ್ನುವುದು ವ್ಯಾಪಾರಕ್ಕೆ ಪುಷ್ಟಿ ನೀಡಿದೆ. ಈ ಕಾರಣದಿಂದ ನಗರಾದ್ಯಂತ ಇರುವ ಚಿನ್ನದ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ರಿಯಾಯಿತಿ ಅಮಿಷಗಳನ್ನು ಒಡ್ಡುತ್ತವೆ. ಇತ್ತೀಚಿನ ದಿನಗಳಲ್ಲಿ ಚಿನ್ನವನ್ನು ಕೊಳ್ಳುವವರ ಸಂಖ್ಯೆ ಜಾಸ್ತಿಯಾಗತೊಡಗಿದ್ದು, ಅಂಗಡಿಯ ಮಾಲೀಕರು ಕೂಡಾ ಗ್ರಾಹಕರನ್ನು ಸೆಳೆಯಲು ಸ್ಪರ್ಧೆಗೆ ಇಳಿದಿದ್ದಾರೆ.

ತೃತೀಯದ ಹಿಂದಿನ ನಂಬಿಕೆ

ವೈಶಾಖ ಮಾಸದ ಶುಕ್ಲ ಪಕ್ಷದ ತದಿಗೆಯನ್ನು ಅಕ್ಷಯ ತೃತೀಯೆ ಎಂದು ಕರೆಯುವರು. ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮುಗಿಯದಂತಹ (ಅ-ಕ್ಷಯ) ಮಂಗಳಕರವಾದ ಸಿದ್ದಿಗಳು ಉಂಟಾಗುವವು ಎಂಬ ನಂಬಿಕೆಯಿದೆ.

* ಇದು ಹಿಂದುಗಳು ಅತ್ಯಂತ ಶುಭಪ್ರದವೆಂದು ಪರಿಗಣಿಸುವ ಮೂರು ದಿನಗಳಲ್ಲಿ ಒಂದಾಗಿದೆ.

* ಕೃತಯುಗವು ಈ ದಿನದಂದು ಆರಂಭವಾಯಿತು.

* ಭಗೀರಥನ ಪ್ರಯತ್ನದಿಂದಾಗಿ ಗಂಗಾವತರಣವು ಈ ದಿನದಂದಾಯಿತು

* ವಿಷ್ಣುವು ಪರಶು-ರಾಮನಾಗಿ ಇಂದಿನ ದಿನ ಜನ್ಮ ತಾಳಿದನು

* ಮಹಾಭಾರತದ ಕಥೆಯಂತೆ, ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆಯನ್ನು ಕೊಟ್ಟನು.

* ಆಹಾರ ಸಮೃದ್ಧಿಗಾಗಿ, ಅನ್ನಪೂರ್ಣೆಯ ಪೂಜೆಯನ್ನು ಮಾಡುವರು ಇಂದಿನ ದಿನ ಮಾಡುವರು.

* ಧನಾಭಿವೃದ್ಧಿಗಾಗಿ ಸ್ವಲ್ಪ ಪ್ರಮಾಣದಲ್ಲಾದರೂ ಬಂಗಾರವನ್ನು ಇಂದಿನ ದಿನ ಕೊಂಡು ಕೊಳ್ಳುವರು

ಅಕ್ಷಯ ತೃತೀಯ- ಕೊಳ್ಳುವ, ದಾನ ಮಾಡುವ ದಿನ * ಎಂ. ಅಹಲ್ಯಾ

ಅಕ್ಷಯ ತೃತೀಯವೆಂದರೆ ತ್ರೇತಾಯುಗದ ಆರಂಭದ ದಿನ ಅನ್ನುವ ನಂಬಿಕೆ ಇದೆ. ವಿಷ್ಣು ಪರಶುರಾಮನಾಗಿ ಆರನೇ ಅವತಾರ ತಾಳಿದ್ದು , ವೇದವ್ಯಾಸ ಮತ್ತು ಗಣಪತಿ ಮಹಾಭಾರತ ಬರೆಯಲು ಆರಂಭಿಸಿದ್ದು, ಸತ್ಯಯುಗ ಆರಂಭವಾದದ್ದು, ಪಾಂಡವರು ವನವಾಸದಲ್ಲಿದ್ದಾಗ ಶ್ರೀ ಕೃಷ್ಣನು ಅಕ್ಷಯ ಪಾತ್ರೆಯನ್ನು ಕೊಟ್ಟದ್ದು, ಗಂಗಾಮಾತೆ ಭೂಮಿಗೆ ಇಳಿದದ್ದು, ಪರಶಿವನು ಬ್ರಹ್ಮನ ಶಾಪದಿಂದ ಮುಕ್ತವಾದದ್ದು, ಕುಚೇಲನು ಕೃಷ್ಣನಿಗೆ ಅವಲಕ್ಕಿ ಕೊಟ್ಟದ್ದು ಹಾಗೂ ಕುಚೇಲ ಕುಬೇರನಾದದ್ದು ಇದೇ ದಿನದಂದು ಎಂದು ಪುರಾಣಗಳಲ್ಲಿ ಉಲ್ಲೇಖ ಇದೆ.

ಹಿಂದೂ ಪಂಚಾಂಗದ ಪ್ರಕಾರ, ಯುಗಾದಿ, ವಿಜಯದಶಮಿ, ಬಲಿಪಾಡ್ಯಮಿ ಮತ್ತು ಅಕ್ಷಯ ತೃತೀಯಕ್ಕೆ ಹೆಚ್ಚಿನ ಮಹತ್ವ ಇದೆ. ಯಾವುದೇ ಪಂಚಾಂಗ ನೋಡದೆ ಈ ನಾಲ್ಕು ದಿನಗಳಂದು ಶುಭ ಕಾರ್ಯಗಳನ್ನು ಕೈಗೊಳ್ಳಬಹುದು ಎನ್ನಲಾಗುತ್ತದೆ. ಈ ನಾಲ್ಕರಲ್ಲೂ ಅಕ್ಷಯ ತೃತೀಯದಂದು ಚಿನ್ನಾಭರಣ, ವಾಹನ ಹಾಗೂ ಬೆಲೆಬಾಳುವ ವಸ್ತುಗಳನ್ನು ಖರೀದಿಸಿದರೆ, ಅದೃಷ್ಟ ದೊರೆಯುತ್ತದೆ. ಜತೆಗೆ ಮತ್ತಷ್ಟು ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಯೋಗ ಬರುತ್ತದೆ ಎಂದು ದೃಢವಾಗಿ ನಂಬಲಾಗಿದೆ. ಈ ದಿನದಂದು ಯಾವುದೇ ಕೆಲಸ ಆಂಭಿಸಿದರೂ ಅದರಲ್ಲಿ ಸಂಪೂರ್ಣ ಯಶಸ್ಸು ಸಿಕ್ಕಿಯೇ ಸಿಗುತ್ತದೆ ಎಂದು ಜನರು ನಂಬುತ್ತಾರೆ.

ಯೋಗಗಳು ಹಲವು

ಅಕ್ಷಯ ಎಂದರೆ, ಬಳಸಿದಷ್ಟು ವೃದ್ಧಿಯಾಗುತ್ತಲೇ ಇರುವುದು. ಪ್ರಸ್ತುತ ಏಪ್ರಿಲ್ 24 ರಂದು ಅಕ್ಷಯ ತೃತೀಯ ದಿನ. ಈ ದಿನ ಮಾಡಬೇಕಾದ ದಾನ ಮತ್ತು ಖರೀದಿಯಿಂದ ದೊರೆಯುವ ಯೋಗಾಯೋಗಗಳ ಬಗ್ಗೆ ಸಾಕಷ್ಟು ನಂಬಿಕೆಗಳು ಇವೆ. ಅರಶಿನ ಕುಂಕುಮ ಹಾಗೂ ತಾಂಬೂಲ ನೀಡಿದರೆ ರಾಜಯೋಗ ಲಭಿಸುತ್ತದೆ. ಹೊಸ ಬಟ್ಟೆ ದಾನ ಮಾಡಿದರೆ, ಆರೋಗ್ಯ ವೃದ್ಧಿಸುತ್ತದೆ. ತಾವರೆ ಹೂವು ದಾನ ಮಾಡಿದರೆ ಮಹಾವಿಷ್ಣುವಿನ ಕೃಪಾಕಟಾಕ್ಷದ ಸುಯೋಗ ಎನ್ನುವ ಪ್ರತೀತಿ ಇದೆ. ಅಲ್ಲದೆ ನವಧಾನ್ಯಗಳನ್ನು ದಾನ ಮಾಡುವುದರಿಂದ ಮೃತ್ಯುವಿನಂತಹ ದುರಂತಗಳು ದೂರವಾಗುತ್ತವೆ. ಮೊಸರನ್ನ ದಾನ ಮಾಡಿದರೆ ಆಯಸ್ಸು ವೃದ್ಧಿಸುತ್ತದೆ. ಗೋವಿಗೆ ಪೂಜೆ ಮಾಡಿ ಬಾಳೆ ಎಲೆಯಲ್ಲಿ ಸಿಹಿ ತಿನ್ನಿಸಿದರೆ ವಿವಾಹ ದೋಷಗಳು ಪರಿಹಾರವಾಗುವುದಾಗಿ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ಮಡಕೆಯಲ್ಲಿ ನೀರು ತುಂಬಿ ಅದರಲ್ಲಿ ಬಂಗಾರದ ನಾಣ್ಯವನ್ನು ಹಾಕಿ ದಾನ ಮಾಡುತ್ತಿದ್ದರು ಎನ್ನಲಾಗುತ್ತಿದ್ದು, ಇದು ಅತ್ಯಂತ ಶ್ರೇಷ್ಠ ದಾನ ಎನ್ನುವ ನಂಬಿಕೆಯೂ ಇತ್ತು.

ಹೀಗಾಗಿ ದಾನಧರ್ಮ ನೀಡುವ ಮೂಲಕ ಈ ದಿನವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ. ಅಂದು ಕೆಲವರು ಪರಮೇಶ್ವರ ಮತ್ತು ವಿಷ್ಣುವನ್ನು ಪೂಜಿಸಿದರೆ, ಮತ್ತೆ ಹಲವರು ಲಕ್ಷ್ಮೀ ಪೂಜೆ ಮಾಡುತ್ತಾರೆ. ಪೂರಿ ಜಗನ್ನಾಥನ 'ಖಂಡೋತ್ಸವ' ಕೂಡಾ ಇದೆ ದಿನದಂದು ನಡೆಯುತ್ತದೆ. ಈ ದಿನ ಸೂರ್ಯ ಚಂದ್ರರು ಉತ್ತುಂಗದಲ್ಲಿ ಇರುತ್ತಾರೆ.

ಸುವರ್ಣ ಯುಗದ ಆರಂಭ

ಈ ದಿನವನ್ನು ಸುವರ್ಣ ಯುಗದ ಆರಂಭದ ಘಟ್ಟ ಎನ್ನಲಾಗುತ್ತದೆ. ಹೀಗಾಗಿ ಯಾವುದೇ ಪೂಜೆ ಪುನಸ್ಕಾರಗಳು, ವೃತ, ದಾನ, ಧರ್ಮ ಮಾಡಿದರೆ ಪುಣ್ಯ ಲಭಿಸುತ್ತದೆ. ಅಕ್ಷಯ ಎಂದರೆ ಮುಗಿಯದ ಅನ್ನುವ ಅರ್ಥ ಇರುವುದರಿಂದ ಈ ದಿನ ಹೊಸ ಕೆಲಸ ಆರಂಭಿಸಿದರೆ, ಶುಭವಾಗುತ್ತದೆ ಮತ್ತು ಹೆಚ್ಚಿನ ಅಭ್ಯುದಯವಾಗುತ್ತದೆ. ಚಿನ್ನ ಕೊಂಡರೆ ಅಥವಾ ಧರಿಸಿದರೆ, ಉತ್ತಮ ಭವಿಷ್ಯ ಲಭಿಸುತ್ತದೆ ಎನ್ನಲಾಗಿದೆ.

ಪಂಚ ಜ್ಯೋತಿರ್ಲಿಂಗಗಳ ದರ್ಶನ ಪ್ರೊ.ಶಕುಂತಲಾ ಗುರುಸಿದ್ಧಯ್ಯ

ಭಾರತದ ಇತಿಹಾಸದಲ್ಲಿ ದೇವಸ್ಥಾನಗಳಿಗೆ ವಿಶೇಷ ಮಹತ್ವವಿರುವುದು ಯಾರೂ ಅಲ್ಲಗಳೆಯಲಾಗದ ಸಂಗತಿ. ಭಾರತದಲ್ಲಿ ಎಷ್ಟು ದೇವಾಲಯಗಳಿರಬಹುದು ಅಂತ ಬ್ರಿಟೀಷರು 1818ನೇ ಇಸವಿಯಲ್ಲೇ ಒಂದು ಸಮೀಕ್ಷೆ ನಡೆಸಿದ್ದುಂಟು. ಆಗ ಭರತಖಂಡದಲ್ಲಿ ಲೆಕ್ಕಕ್ಕೆ ಸಿಕ್ಕಿದ ದೇಗುಲಗಳ ಸಂಖ್ಯೆ ಐದು ಲಕ್ಷ! ಈ ಸಮೀಕ್ಷೆಯಾಗಿ ಇನ್ನು ಆರು ವರ್ಷ ಬಂದರೆ ಇನ್ನೂರು ವರ್ಷವಾಗುತ್ತದೆ. ಈ ಎರಡು ಶತಮಾನಗಳ ಅವಧಿಯಲ್ಲಿ ಇನ್ನೂ ಲಕ್ಷೋಪಲಕ್ಷ ದೇವಮಂದಿರಗಳು ಖಂಡಿತಾ ತಲೆಯೆತ್ತಿವೆ. ಶತಶತಮಾನಗಳಷ್ಟು ಹಿಂದೆಯೇ ಭಾರತಕ್ಕೆ ಬಂದಿದ್ದ ಚೀನಾದ ಪ್ರವಾಸಿ ಹ್ಯೂಯೆನ್ತ್ಸಾಂಗ್ ಕೂಡ ಭಾರತದ ದೇಗುಲಗಳ ಬಗ್ಗೆ ಸಾಕಷ್ಟು ವಿವರಿಸಿ, ವರ್ಣಿಸಿದ್ದಾನೆ.

ನಮ್ಮಲ್ಲಿ ಹೆಚ್ಚಿನವರು ದೇವಸ್ಥಾನಗಳೆಂದರೆ, ಅಲ್ಲಿರುವ ಶಿಲ್ಪಗಳನ್ನು ನೋಡಿ ಬಂದುಬಿಡುತ್ತಾರೆ. ಆದರೆ, ಭಾರತದ ಶಿಲ್ಪಕಲೆಯ ಮಹತ್ವವಿರುವುದು ಅವು ಸಾರುತ್ತಿರುವ ನಿಗಮ ಮತ್ತು ಆಗಮ ಶಾಸ್ತ್ರಗಳ ದೃಷ್ಟಿಯಿಂದ. ನಿಜ ಹೇಳಬೇಕೆಂದರೆ, ನಮ್ಮ ದೇಶವು ದರ್ಶನ ಶಾಸ್ತ್ರಗಳ ತವರುಮನೆ. ಆಗಮ ಸಂಸ್ಕೃತಿಯ ಚರಿತ್ರೆ ಹರಪ್ಪ-ಮೊಹೆಂಜೋದಾರೊ ಕಾಲದಷ್ಟು ಹಿಂದಕ್ಕೆ ಹೋಗುತ್ತಿದೆ. ಅಂದರೆ, ಏನಿಲ್ಲವೆಂದರೂ ಐದು ಸಾವಿರ ವರ್ಷದ ಚರಿತ್ರೆಯಾಯ್ತು! ಅದರಲ್ಲಿ ಮುಖ್ಯವಾಗಿ ಇರುವುದೆಂದರೆ ದೇವಾಲಯಗಳ ಸ್ಥಾಪನೆಯ ರೀತಿನೀತಿ, ವಿಗ್ರಹಗಳ ನಿರ್ಮಾಣ, ಅವುಗಳ ಪ್ರತಿಷ್ಠಾಪನೆಯ ಬಗೆ, ಪೂಜಾ-ಉತ್ಸವಗಳ ರೀತಿರಿವಾಜು, ಅಷ್ಟಾಂಗ ಯೋಗಸಾಧನೆ, ಪತಿ (ಈಶ್ವರ)- ಪಶು (ಮನುಷ್ಯರು) ಮತ್ತು ಪಾಶಗಳ (ಬಂಧನಗಳು) ಸ್ವರೂಪಗಳ ಪ್ರತಿಪಾದನೆ ಹಾಗೂ ಮನೋಜ್ಞ ವರ್ಣನೆ.

ನಮ್ಮಲ್ಲಿ ವೇದಕಾಲದಿಂದಲೂ ಸೂರ್ಯದೇವನಿಗೆ ಮೊದಲ ಮಣೆ. ಅವನು ನೀಡುವ ಬೆಳಕಿನಿಂದಲೇ ನಮ್ಮ ಬದುಕಿಗೊಂದು ಅರ್ಥ. ಹೀಗಾಗಿಯೇ ನಮ್ಮಲ್ಲಿ ಬೆಳಕಿನ ನಾನಾ ರೂಪಗಳಿವೆ- ಅಗ್ನಿ, ಜ್ಯೋತಿ, ದೀಪ, ಬೆಳಕು ಹೀಗೆ. ಈ ಜ್ಯೋತಿಸ್ವರೂಪಿ ಭಗವಂತನೇ ಜ್ಯೋತಿರ್ಲಿಂಗ. ಅಂದಹಾಗೆ, ನಮ್ಮ ದೇಶದಲ್ಲಿರುವ ಜ್ಯೋತಿರ್ಲಿಂಗ ಕ್ಷೇತ್ರಗಳು ಹನ್ನೆರಡು. ಅವೆಂದರೆ, ಸೌರಾಷ್ಟ್ರದ ಸೋಮನಾಥ, ಶ್ರೀಶೈಲದ ಮಲ್ಲಿಕಾರ್ಜುನ, ಉಜ್ಜಯಿನಿಯ ಮಹಾಕಾಳೇಶ್ವರ, ಓಂಕಾರ ಕ್ಷೇತ್ರದ ಮಮಲೇಶ್ವರ, ತಮಿಳುನಾಡಿನ ರಾಮೇಶ್ವರ, ಕಾಶಿಯ ವಿಶ್ವೇಶ್ವರ, ಹಿಮಾಲಯದ ತಪ್ಪಲಿನ ಕೇದಾರೇಶ್ವರ. ಇಲ್ಲಿಗೆ ಏಳಾಯ್ತು. ಇನ್ನು ಉಳಿದ ಐದು ಜ್ಯೋತಿರ್ಲಿಂಗಳು ಮಹಾರಾಷ್ಟ್ರವೊಂದರಲ್ಲೇ ಇವೆ. ಅವೆಂದರೆ- ಪುರಲಿಯ ವೈದ್ಯನಾಥ, ಡಾಕಿನಿಯ ಭೀಮಾಶಂಕರ, ದಾರುಕಾ ವನದ ನಾಗೇಶ್ವರ, ಗೌತಮೀ ತಟದ ತ್ರ್ಯಂಬಕೇಶ್ವರ ಮತ್ತು ವೇರೂಲಿನಲ್ಲಿರುವ ಘೃಷ್ಣೇಶ್ವರ.

*** ಮಹಾರಾಷ್ಟ್ರಕ್ಕೆ ಹೋಗಿ, ಅಲ್ಲಿರುವ ಐದು ಜ್ಯೋತಿರ್ಲಿಂಗ ಕ್ಷೇತ್ರಗಳನ್ನೂ ನೋಡಬೇಕೆಂಬುದು ನಮ್ಮ ಕನಸಾಗಿತ್ತು. ಇದಕ್ಕಾಗಿ ಏನಿಲ್ಲವೆಂದರೂ ಐದಾರು ದಿನಗಳ ಪ್ರವಾಸ ಹೊರಟರೆ ಚೆನ್ನ. ಇದು ನಮಗೆಲ್ಲ ನನಸಾಗುವಂತೆ ಮಾಡಿದ್ದು ಪೂನಾದಲ್ಲಿರುವ ನಮ್ಮ ಕುಟುಂಬದ ಗೆಳೆಯರಾದ ವಿಜೂ ದಾದಾಸಾಹೇಬ್ ಜಾಧವ್. ಅವರಂತೂ ಈ ಐದಾರು ದಿನ ಯಾವ್ಯಾವ ರೂಟ್ನಲ್ಲಿ, ಹೇಗ್ಹೇಗೆ ಪ್ರಯಾಣ ಮಾಡಬೇಕು, ಎಲ್ಲೆಲ್ಲಿ ಉಳಿದುಕೊಂಡರೆ ಏನೇನು ಸೌಕರ್ಯಗಳಿವೆ ಎನ್ನುವುದನ್ನೆಲ್ಲ ನಮಗೆ ಮನದಟ್ಟು ಮಾಡಿಕೊಟ್ಟಿದ್ದರು.

ದಾವಣಗೆರೆಯಿಂದ ನಮ್ಮ ಸವಾರಿ ಹೊರಟಿದ್ದು ಬೆಳಗ್ಗೆ 9ಕ್ಕೆ. ಹುಬ್ಬಳ್ಳಿ-ಬಿಜಾಪುರ ಮಾರ್ಗವಾಗಿ ಹೊರಟ ನಾವು ಗುಡ್ಡಾಪುರದಲ್ಲಿರುವ ದಾನಮ್ಮ ದೇವಿ ಕ್ಷೇತ್ರದ ದರ್ಶನ ಪಡೆದೆವು. ಅವತ್ತು ರಾತ್ರಿ ಅಲ್ಲೇ ವಾಸ್ತವ್ಯವೂ ಆಯ್ತು. ಮರುದಿನ ಬೆಳಗ್ಗೆ 80 ಕಿಲೋಮೀಟರ್ ಪ್ರಯಾಣ ಮಾಡಿ, ಫಂಡರಾಪುರ ನೋಡಿದೆವು. ಅಲ್ಲಿಂದ ನಾವು ಸೀದಾ ಹೊರಟಿದ್ದು ವೈದ್ಯನಾಥ ಜ್ಯೋತಿರ್ಲಿಂಗ ಕ್ಷೇತ್ರವಿರುವ ಪುರಲಿ ಹತ್ತಿರದ ಅಂಬೆಜೋಗಾಯಿ ಎಂಬ ಊರಿಗೆ. ಇದು ಬಾರ್ಸಿಯಿಂದ ನೂರೈವತ್ತು ಕಿಲೋಮೀಟರ್ ಅಷ್ಟೆ. ಹಿಂದೆ ಈ ಊರಿಗೆ ವೈಜಯಂತಿ ಮತ್ತು ಕಾಂತೀಪುರ ಎಂಬ ಹೆಸರುಗಳಿದ್ದವಂತೆ. ಇಲ್ಲಿ ಶಂಕರ-ಪಾರ್ವತಿ ಇಬ್ಬರಿಗೂ ಜತೆಯಲ್ಲೇ ಪೂಜೆ ಸಲ್ಲುತ್ತದೆ. ಭಗವಾನ್ ವಿಷ್ಣುವು ದೇವತೆಗಳಿಗೆ ಅಮೃತ ಕೊಟ್ಟ ಸ್ಥಳವಿದಂತೆ. ಇಲ್ಲಿ ವೈದ್ಯನಾಥನಿಗೆ ಮಹೇಶ್ವರ, ಅಮೃತೇಶ್ವರ, ಧನ್ವಂತರಿ ಎಂಬ ಹೆಸರುಗಳೂ ಇವೆ. ಸತ್ಯವಾನ್-ಸಾವಿತ್ರಿ ಮತ್ತು ಭಕ್ತ ಮಾರ್ಕಂಡೇಯನ ಕತೆಗಳು ಕೂಡ ಇಲ್ಲೇ ನಡೆದಿದ್ದೆನ್ನುವ ಐತಿಹ್ಯ ಇಲ್ಲುಂಟು.

ಇಲ್ಲಿಂದ ನಾವು ತಲುಪಿದ್ದು 140 ಕಿಲೋಮೀಟರು ದೂರದ ದಾರುಕಾ ವನವನ್ನು. ಅದು ನಾಗೇಶ್ವರನ ಮಹಿಮೆ ಇರುವ ಕ್ಷೇತ್ರ. ಅಂಬೆಜೋಗಾಯಿಯಿಂದ ಔಂಧ್-ಪರಬನಿ ಮೂಲಕ ರಸ್ತೆ ಚೆನ್ನಾಗಿದೆ. ಕಡಿದಾದ ಕಲ್ಲಿನ ಗುಹೆಯ ಮೇಲೆ ನಾಗೇಶ್ವರನಿರುವುದು ಇಲ್ಲಿಯ ವಿಶೇಷ. ದರ್ಶನಕ್ಕೆ ರಾತ್ರಿ ಒಂಬತ್ತು ಗಂಟೆಯವರೆಗೂ ಅವಕಾಶವಿದೆ. ಆದರೆ ಮಿಕ್ಕ ಕಡೆಗಳಂತೆ ಇಲ್ಲಿ ಈಶ್ವರನ ಎದುರು ನಂದಿಯ ಪ್ರತಿಮೆ ಇಲ್ಲ. ಇಲ್ಲಿ ನಂದಿಗೇ ಒಂದು ಬೇರೆ ದೇವಸ್ಥಾನ ಕಟ್ಟಲಾಗಿದೆ. ಇಲ್ಲಿಂದ ಔರಂಗಾಬಾದ್ಗೆ ತುಂಬಾ ದೂರವೇನಿಲ್ಲ. ಅಲ್ಲಿಗೆ ಹೋದರೆ, ಮಿನಿ ತಾಜ್ಮಹಲ್ ಎಂದೇ ಹೆಸರಾಗಿರುವ 'ಬೀಬೀ ಕಾ ಮಕಬರಾ' ನೋಡಬಹುದು.

ಇಲ್ಲಿಂದ ವೇರುಲ್ಗೆ ಬರೀ 30 ಕಿಲೋಮೀಟರು. ರಸ್ತೆ ತುಂಬಾ ಚೆನ್ನಾಗಿರುವುದರಿಂದ ಅರ್ಧಗಂಟೆಯಲ್ಲೇ ತಲುಪಬಹುದು. ಇಲ್ಲಿರುವುದೇ ಘೃಷ್ಣೇಶ್ವರ ಜ್ಯೋತಿರ್ಲಿಂಗ. ಯೇಲ್ಗಂಗಾ ನದಿ ಇಲ್ಲಿ ಹರಿಯುತ್ತದೆ. ಇದೊಂದು ಭವ್ಯ ದೇವಾಲಯವಾಗಿದ್ದು, ಅದಕ್ಕೆ ಚಿನ್ನದ ಶಿಖರವಿದೆ. ಅತ್ಯಂತ ಸುಂದರ ಕೆತ್ತನೆಯ 24 ಕಂಬಗಳ ಸಭಾಮಂಟಪವೂ ಇಲ್ಲಿದ್ದು, ಅದರಲ್ಲಿ ಸೂಕ್ಷ್ಮವಾದ ಕುಸುರಿ ಕೆಲಸವಿದೆ. 21 ಗಣೆಶನ ಮೂರ್ತಿ ಮತ್ತು ಲಕ್ಷ ವಿನಾಯಕ ಮೂರ್ತಿ ಕೂಡ ಇಲ್ಲುಂಟು.

ಇಲ್ಲಿಂದ ಜಗತ್ ಪ್ರಸಿದ್ಧ ಎಲ್ಲೋರಾ ಗುಹೆಗಳಿಗೆ ಕೇವಲ ಒಂದು ಕಿಲೋಮೀಟರ್! ಆದರೆ, ನಮಗೆ ಅದನ್ನು ನೋಡಲು ಸಾಧ್ಯವಾಗಲೇ ಇಲ್ಲ. ಹಾಗೆಯೇ ಪ್ರಸಿದ್ಧ ಯಾತ್ರಾಸ್ಥಳ ಶಿರಡಿಗೆ 90 ಕಿಲೋಮೀಟರ್. ಶಿರಡಿಯಲ್ಲಿ ಒಂದು ರಾತ್ರಿ ಇದ್ದ ನಾವು, ಮಾರನೆ ಬೆಳಗ್ಗೆ 200 ಕಿಲೋಮೀಟರ್ ಪ್ರಯಾಣಿಸಿ, ಡಾಕಿನಿ ಕಾಡು ತಲುಪಿದೆವು. ಇದಕ್ಕೆ ನಾವು ಆರಿಸಿಕೊಂಡಿದ್ದು ಬಬಲೇಶ್ವರ-ಲೋನಿಮ-ಸಂಗಮನೇರ್ ಮಾರ್ಗ. ಈ ಮಾರ್ಗದಲ್ಲಿ ಸಿಗುವ ಊರೇ ನಾರಾಯಣಗಾಂವ್. ಇಲ್ಲಿಂದ ಡಾಕಿನಿ ಕಾಡಿಗೆ 60 ಕಿ.ಮೀ. ಇಲ್ಲಿರುವುದೇ ಭೀಮಾಶಂಕರ ಜ್ಯೋತಿರ್ಲಿಂಗ. ಇದು ಭೀಮಾ ನದಿ ಹುಟ್ಟುವ ಸ್ಥಳವೂ ಹೌದು. ಇಲ್ಲಿ ನಮ್ಮನ್ನು ಸ್ವಾಗತಿಸುವುದು ಸಹ್ಯಾದ್ರಿ ಪರ್ವತ ಶ್ರೇಣಿ. ಹಿಂದೆ ಛತ್ರಪತಿ ಶಿವಾಜಿ ಮಹಾರಾಜ ಮತ್ತು ಅವನ ಮಗ ಇಬ್ಬರೂ ಈ ಜ್ಯೋತಿರ್ಲಿಂಗದ ದರ್ಶನಕ್ಕೆ ಬರುತ್ತಿದ್ದರಂತೆ. ಇಲ್ಲಿ ದಶಾವತಾರ ಮೂರ್ತಿಗಳ ಸುಂದರ ಕೆತ್ತನೆಯೂ ಇದೆ. ಇಲ್ಲಿಂದ 3000 ಅಡಿಗಳ ಎತ್ತರದ ಕೊಂಕಣ ತೀರವನ್ನು ವೀಕ್ಷಿಸುವುದೊಂದು ರೋಮಾಂಚಕ ಅನುಭವ. ಹಿಂದೆಲ್ಲ ಭೀಮಾಶಂಕರಕ್ಕೆ ಹೋಗುವುದು ತುಂಬಾ ಕಷ್ಟದ ವಿಚಾರವಾಗಿತ್ತು. ಆದರೆ ಈಗ ಸುಗಮ ಯಾತ್ರೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

ತ್ರ್ಯಂಬಕೇಶ್ವರ ಇರುವುದು ನಾಸಿಕ್ ಜಿಲ್ಲೆಯಲ್ಲಿ. ಇದು ಗೋದಾವರಿ ನದಿಯ ಉಗಮ ಸ್ಥಳ. ಪಂಚವಟಿ ಕ್ಷೇತ್ರವೂ ಇಲ್ಲಿದ್ದು, ರಾವಣನು ಸೀತೆಯನ್ನು ಇಲ್ಲಿಂದಲೇ ಅಪಹರಿಸಿದ ಎನ್ನುವ ಮಾತು ಚಾಲ್ತಿಯಲ್ಲುಂಟು. ತ್ರ್ಯಂಬಕೇಶ್ವರ ಮಂದಿರವಿರುವುದು ಇಲ್ಲಿನ ಬ್ರಹ್ಮಗಿರಿ ಪರ್ವತದಲ್ಲಿ. ಸಪ್ತರ್ಷಿಗಳಲ್ಲೊಬ್ಬರಾದ ಗೌತಮರ ತಪೋಭೂಮಿ ಈ ಬ್ರಹ್ಮಗಿರಿ. ಇದಕ್ಕೆ ಗೌತಮೀ ತಟವೆಂಬ ಹೆಸರೂ ಇದೆ. ಗೌತಮನು ತನ್ನ ಪತ್ನಿ ಅಹಲ್ಯೆಯ ಜೊತೆ, ತಪಸ್ಸಿಗೆ ಕೂತು ವರುಣನು ಪ್ರತ್ಯಕ್ಷವಾಗುವಂತೆ ಮಾಡಿದ ಸ್ಥಳವಿದು. ಇಲ್ಲಿಯ ವಿಶೇಷವೆಂದರೆ ಲಿಂಗದಲ್ಲಿ ಜಲಹರಿ ಇಲ್ಲ. ಬದಲಿಗೆ ಒರಳಿನಾಕಾರದ ಮೂರು ಕುಳಿಗಳಿದ್ದು, ಇದರಲ್ಲಿ ಮೂರು ಲಿಂಗಗಳಿವೆ. ಇವು ಬ್ರಹ್ಮ-ವಿಷ್ಣು-ಮಹೇಶ್ವರನ ಸಂಕೇತಗಳು. ತ್ರ್ಯಂಬಕೇಶ್ವರ ಎನ್ನುವ ಹೆಸರಿಗೆ ಇದೇ ಮೂಲ. ಇಲ್ಲೇ ಅಂಜಲಿ ಪರ್ವತವೂ ಇದೆ. ಇದು ಹನುಮಂತನ ತಾಯಿ ಅಂಜಲಿದೇವಿ ತಪಸ್ಸು ಮಾಡಿದ ಸ್ಥಳ.

ಈ ಜ್ಯೋತಿರ್ಲಿಂಗಳನ್ನು ಭಕ್ತರು ತಮ್ಮ ಕೈಯಿಂದಲೇ ಮುಟ್ಟಿ ಪೂಜೆ ಮಾಡಬಹುದು. ಯಾರಿಗೂ ಯಾವ ನಿರ್ಬಂಧವೂ ಇಲ್ಲ. ಕಾಣಿಕೆ ಹಾಕುವುದು, ಬಿಡುವುದು ಅವರವರ ಭಾವಕ್ಕೆ ಬಿಟ್ಟಿದ್ದು!

ವಿಸ್ಮಯ ಹುಟ್ಟಿಸುವ ಕಂಬಿಕಲ್ಲು ಗಣಪತಿ - ಜಾನ್ ಡಿಸೋಜ ಕುಂದಾಪುರ

ಕುಂದಾಪುರ: ದಟ್ಟಾರಣ್ಯದಲ್ಲಿ ಶಿಲೆಗಳ ನಡುವೆ ಹುದುಗಿರುವ ಈ ದೇಗುಲ ವಿಸ್ಮಯಗಳ ಆಗರ. ಕಂಬದಲ್ಲಿ ಗೋಚರಿಸಿದ ಗಣಪನಿಂದಾಗಿ ಈ ಪುಟ್ಟ ದೇಗುಲಕ್ಕೆ ಕಂಬಿಕಲ್ಲು ಗಣಪತಿ ದೇಗುಲ ಎಂದು ಕರೆಯಲಾಗುತ್ತಿದೆ. ಇಂದಿಗೂ ಅಜ್ಞಾತವಾಗಿ ಉಳಿದಿರುವ ಈ ದೇಗುಲ ಬಂಡೆಯೊಳಗೆ ಹುದುಗಿದೆ.

ತಾಲೂಕಿನ ಕಕ್ಕುಂಜೆ ಹಾಗೂ ವಂಡಾರು ನಡುವೆ ಸಿಗುವ ಕಂಬಿಕಲ್ಲು ಎಂಬ ಪುಟ್ಟ ಊರಿನ ಹಾಡಿಯಲ್ಲಿ ನೆಲೆಸಿರುವ ಈ ದೇಗುಲ ಅಚ್ಚರಿ ಹುಟ್ಟಿಸುತ್ತದೆ. ಬಂಡೆಯೊಂದರಲ್ಲಿ ಗಣಪತಿಯ ಸೊಂಡಿಲಾಕೃತಿ ಮೂಡಿರುವುದು ಗೋಚರಿಸಿದ ಮೇಲೆ ಇಲ್ಲಿ ದೇವಸಾನ್ನಿಧ್ಯ ಇರುವುದು ಪತ್ತೆಯಾಗಿತ್ತು. ಸರಿಸುಮಾರು 150 ವರ್ಷಗಳ ಹಿಂದೆ ಇದು ಗೋಚರಕ್ಕೆ ಬಂದಿತ್ತು. ದೇವಪ್ರಶ್ನೆಯಲ್ಲಿ ಇಲ್ಲಿ ಗಣಪತಿಯ ಸಾನ್ನಿಧ್ಯವಿರುವುದು ದೃಢೀಕರಣಗೊಂಡಿತ್ತು. ಕಂಬದಾಕೃತಿಯ ಶಿಲೆಯಲ್ಲಿ ಒಡಮೂಡಿದ ಗಣಪತಿಗೆ ಪೂಜೆಗಳು ನಡೆದು ಬಂದವು. ಶಿಲೆಗೆ ತಾಗಿಕೊಂಡು ಪುಟ್ಟ ಗರ್ಭಗುಡಿ ಕೂಡ ರಚಿಸಲಾಗಿದೆ.

ಗರ್ಭಗೃಹದ ಸುತ್ತಲೂ ಎತ್ತ ಕಣ್ಣು ಹಾಯಿಸಿದರೂ ಬಂಡೆಗಳ ರಾಶಿ. ಹಸಿರವನದಲ್ಲಿ ಹಾಸುಹೊಕ್ಕಾಗಿರುವ ಬಂಡೆಗಳು ವಿಶೇಷತೆಯಿಂದ ಮೈಗೂಡಿದೆ. ಆನೆ ಮಲಗಿದಂತೆ ಪ್ರತಿಯೊಂದು ಬಂಡೆಯೂ ಗೋಚರಿಸುತ್ತದೆ. ವಿಶೇಷ ಸಂದರ್ಭಗಳಲ್ಲಿ ಪೂಜೆ ನಡೆಯುವುದು ಬಿಟ್ಟರೆ ಉಳಿದ ದಿನಗಳಲ್ಲಿ ದೇಗುಲ ಒಂಟಿ. ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಕಂಬಿಕಲ್ಲು ಗಣಪತಿ ದೇಗುಲ ಅಜ್ಞಾತವಾಗಿ ಉಳಿದಿದ್ದರೂ ಊರವರ ಪಾಲಿಗೆ ರಕ್ಷಕದೇವರು. ಸಂತಾನ ಪ್ರಾಪ್ತಿಯ ದೇವರು. ಬಂಡೆಯೊಳಗೆ ಹುದುಗಿ ಪೊರೆಯುವ ದೇಗುಲವಿದು. ದಟ್ಟಾರಣ್ಯದ ನಡುವೆ ಪ್ರಾಕೃತಿಕ ಸೌಂದರ್ಯದ ನಡುವಿರುವ ಈ ದೇಗುಲದಲ್ಲಿ ಹೊತ್ತು ಕಳೆಯುವುದೇ ಪರಮಾನಂದ. ಉತ್ತಮ ಪ್ರವಾಸಿ ತಾಣ ಕೂಡ.

ಸಂತಾನ ಚಿಂತನೆಯಿಂದ ಬೆಳಕಿಗೆ ಬಂತು

ದೇಗುಲಕ್ಕೆ ನಿರ್ದಿಷ್ಟವಾದ ಇತಿಹಾಸ ಇಲ್ಲ. ಆದರೆ 150 ವರ್ಷಗಳ ಹಿಂದೆ ಊರಿನ ಬಂಟ ಸಮುದಾಯದ ಕುಟುಂಬವೊಂದಕ್ಕೆ ಸಂತಾನಭಾಗ್ಯ ಇರಲಿಲ್ಲ. ಈ ಬಗ್ಗೆ ದೇವಪ್ರಶ್ನೆ ಇಟ್ಟಾಗ ಊರಿನ ಕಾಡಿನಲ್ಲಿ ಗಣಪತಿಯ ಸಾನ್ನಿಧ್ಯವಿದೆ. ಅದಕ್ಕೆ ನಡೆದುಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಸಂದೇಶ ಸಿಕ್ಕಿತ್ತು. ಹುಡುಕಾಡಿದಾಗ ಕಂಬದಾಕೃತಿಯ ಶಿಲೆಯಲ್ಲಿ ಗಣಪತಿಯ ಸಾನ್ನಿಧ್ಯವಿರುವುದು ಬೆಳಕಿಗೆ ಬಂತು.

ಸಾನ್ನಿಧ್ಯಕ್ಕೆ ನಡೆದುಕೊಂಡಾಗ ಗಣಪತಿಯ ಅನುಗ್ರಹದಂತೆ ಬಂಟ ಕುಟುಂಬಕ್ಕೆ ಸಂತಾನ ಪ್ರಾಪ್ತಿಯಾಯಿತು. 1959ರಲ್ಲಿ ಕಕ್ಕುಂಜೆಯ ತಮ್ಮಯ್ಯ ನಾವಡರು ದೇಗುಲದ ಅಭಿವದ್ಧಿಗೆ ಶ್ರಮಿಸಿದ್ದರು. ಕಾರಣಾಂತರದಿಂದ ಅಭಿವದ್ಧಿ ಪೂರ್ಣ ಆಗಲಿಲ್ಲ. ಪುಟ್ಟಯ್ಯ ಭಟ್, ಸುಬ್ರಾಯ ಭಟ್ ದೇಗುಲದ ಅರ್ಚಕರಾಗಿ ಸೇವೆ ಸಲ್ಲಿಸಿದ್ದಾರೆ. ದೇಗುಲದಲ್ಲಿ ಯಾವ ಉತ್ಪತ್ತಿಯೂ ಇಲ್ಲ. ಆದರೆ ದೇಗುಲದ ಪರಿಸರ, ಕುರುಹುಗಳು ವಿಸ್ಮಯ ಹುಟ್ಟಿಸುವಂತಿದೆ. ಸೋಣೆ ಆರತಿ ವಿಶೇಷವಾಗಿ ನಡೆಯುತ್ತದೆ. ಸರಕಾರ ಗಮನಹರಿಸಿದರೆ ದೇಗುಲ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಉತ್ತಮ ತಾಣವನ್ನಾಗಿ ರೂಪಿಸಬಹುದಾಗಿದೆ ಎಂದು ಪ್ರಸ್ತುತ ಅರ್ಚನೆ ಕಾರ್ಯ ನಡೆಸುತ್ತಿರುವ ನರಸಿಂಹ ಭಟ್ಟ ಅವರ ಅನಿಸಿಕೆ.

ವಾಸ್ತು ಜಗತ್ತು : ಪಶ್ಚಿಮದ ಶಯನಗೃಹ ಜೆ.ಕೆ.ಜೈನ್, ವಾಸ್ತು ತಜ್ಞರು

ವಾಸ್ತುವಿನಲ್ಲಿ ಪಶ್ಚಿಮ ಎಂಬುದು ಶಾಂತಿಯ ಪ್ರತೀಕ. ಅಲ್ಲಿ ವರುಣನು ಆಶ್ರಯಿಸಿದ್ದಾನೆ. ಆತ ಪಂಚಭೂತಗಳಲ್ಲಿ ಒಂದಾದ ಜಲದೊಡೆಯ. ಹಾಗಾಗಿ ಜಗದೊಡೆಯ. ಕಾರಣ ಭೂಮಿಯಲ್ಲಿ ಮುಕ್ಕಾಲು ಭಾಗ ನೀರೇ ಆವರಿಸಿಕೊಂಡಿರುವುದು. ಅಂದರೆ ಇಲ್ಲಿ ಆತ ಹೆಚ್ಚು ಪ್ರಭಾವಿ ಎಂದಾಯಿತು. ಇನ್ನು ನವಗ್ರಹಗಳಲ್ಲಿ ಜನರು ಬಹುವಾಗಿ ಭೀತಿಯಿಂದ ಪ್ರೀತಿಸುವ ಶನಿದೇವರು ಇರುವುದು ಇಲ್ಲಿ. ಈತ ಆಯುಷ್ಯಕಾರಕ. ಅವನತಿ ಮತ್ತು ಉನ್ನತಿಯ ಪ್ರೇರಕ. ಇವನ ಹಿಡಿತಕ್ಕೆ ಸಿಕ್ಕಿದವರು ಆಗೋಚರವಾಗಲು ನಿಗದಿತ ಸಮಯ ಮಾತ್ರ ಸಾಕು. ಅಂತಹ ಬಹುಪ್ರತಾಪಿ ಈ ಸೂರ್ಯಪುತ್ರ. ಆತನ ಪೂರ್ತಿ ಕಟಾಕ್ಷ ಈ ದಿಸೆಯಲ್ಲಿದೆ.

ಪಶ್ಚಿಮದ ಕೋಣೆಯಲ್ಲಿ ಪೂರ್ವಕ್ಕೆ ಅಥವಾ ದಕ್ಷಿಣಕ್ಕೆ ಶಿರವನಿಟ್ಟು ಮಲಗಬೇಕು. ಮಲಗಲು ಮರದ ಮಂಚ ಶ್ರೇಷ್ಠ. ಆದರೆ ಪಶ್ಚಿಮದಲ್ಲಿ ಲೋಹದ ಮಂಚದಲ್ಲಿ ಮಲಗಬಹುದೆಂದು ಹೇಳಲಾಗಿದೆ. ಯಾಕೆಂದರೆ ಈ ದಿಕ್ಕಿನ ಪ್ರಭಾವ ಲೋಹದ ಮೇಲೆ ಹೆಚ್ಚು. ಅದರಲ್ಲೂ ಕಬ್ಬಿಣ ಶ್ರೇಷ್ಠ. ವೈಶ್ಯರಿಗೆ ಅಂದರೆ ವ್ಯಾಪಾರಿ ವರ್ಗಕ್ಕೆ ಇದು ಬಹಳ ಲಾಭದಾಯಕ. ವಾಣಿಜ್ಯ ವ್ಯವಹಾರದಲ್ಲಿರುವವರಿಗೆ ಈ ದಿಕ್ಕು ಹೆಚ್ಚು ಶುಭಫಲ ಕೊಡುವುದು. ಕೈಗಾರಿಕೋದ್ಯಮಿಗಳಿಗೆ ಪ್ರಶಸ್ತ.

ಪಶ್ಚಿಮದ ಕೋಣೆಯನ್ನು ಸೌಭಾಗ್ಯಶಾಲೆ ಎಂದು ಕರೆಯಲಾಗಿದೆ. ಇದು ಅನ್ನಕೊಡುವ ದಿಕ್ಕು. ಜೀವಜಲದೊಡೆಯನ ಅನುಗ್ರಹವಾದರೆ ಅನುಪಮ ಅಂತಸ್ತು ದೊರೆಯಬಹುದು. ಸಂಪತ್ತು ಗಳಿಸಬಹುದು. ರೋಗ ನಿವಾರಣ ಶಕ್ತಿ ಇಲ್ಲಿದೆ. ಎಂತಹ ದೀರ್ಘಕಾಲೀನ ಮತ್ತು ಗುಣವಾಗದ ಕಾಯಿಲೆ ಇದ್ದರೂ ಇಲ್ಲಿನ ಕೊಠಡಿಯಲ್ಲಿ ಮಲಗಿಸಿದರೆ ಬೇಗನೆ ರೋಗ ಮುಕ್ತರಾಗುವರು. ಅನುಪಾನ ಔಷಧಿಗೆ ಶೀಘ್ರ ಸ್ಪಂದಿಸುವ ಗುಣ ಈ ದಿಕ್ಕಿಗಿದೆ. ಹಾಗೇನೆ ರೋಗಿಗಳಿಗೆ ಮನೋಬಲ ಹೆಚ್ಚಿ ನೆಮ್ಮದಿ ದೊರೆಯುವುದು. ಒಟ್ಟಾರೆಯಾಗಿ ಶಾರೀರಿಕ ಕಾಯಿಲೆ ಮತ್ತು ಮಾನಸಿಕ ದೌರ್ಬಲ್ಯವನ್ನು ನಿವಾರಿಸಿ ಸುಖಿಗಳನ್ನಾಗಿ ಮಾಡುವ ಸಾಮರ್ಥ್ಯ ಈ ದಿಕ್ಕಿಗಿದೆ.

ಶಯನಗಹದ ಮಂಚದ ಹಿಂದುಗಡೆ ಯಾರೂ ಓಡಾಡಬಾರದು. ಹಾಗೆ ಮಾಡಲು ಅಲ್ಲಿ ಸ್ಥಳಾವಕಾಶ ಕೂಡಾ ಇರಬಾರದು. ಆ ಬದಿಯಲ್ಲಿ ಕಿಟಕಿ ಬಾಗಿಲುಗಳು ಇರಬಾರದು. ಮಲಗುವ ಮಂಚದ ತಲೆಯ ಭಾಗದಲ್ಲಿ ಎತ್ತರದ ರಕ್ಷಕ ತಡೆ ಇರಬೇಕು. ಈ ಕೋಣೆ ಯ ಬಾಗಿಲು ಮತ್ತು ಶೌಚಾಲಯದ ಬಾಗಿಲು ಸದಾ ಮುಚ್ಚಿಕೊಂಡಿರಬೇಕು. ಇಲ್ಲಿ ಮಲಗುವವರು ಅವರವರ ಲಗ್ನ ರಾಶಿಗಳಿಗೆ ಸಂಬಂಧ ಪಟ್ಟ ಗ್ರಹಗಳ ಬಣ್ಣ ಬಳಿದರೆ ಅಭಿವದ್ಧಿ ಹೆಚ್ಚು. ವಿಜಯ, ವಿಶ್ರಾಂತಿ ಮತ್ತು ರೋಗದಿಂದ ವಿಮುಕ್ತಿ ಇಲ್ಲಿನ ಫಲಭಾಗ.

ಶನಿ ಶಾಂತಿ

ಇನ್ನು ಶನೀಶ್ವರನ ಕಾಟದಿಂದ ಪರಮೇಶ್ವರನೂ ಬಚವಾಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಅಂತಹ ಶನಿ ಮಹಾತ್ಮನನ್ನು ಈ ದಿಕ್ಕಿನಲ್ಲಿ ಆರಾಧಿಸಿ ಅರ್ಚಿಸಿದರೆ ಬೇಗನೆ ಪ್ರಸನ್ನನಾಗುವನು. ನಂಬಿದವರನ್ನು ಅಸಹನೀಯ ಕಷ್ಟಕೋಟಲೆಗಳಿಂದ ಪಾರು ಮಾಡುವನು. ಹನುಮಾನ್ ಚಾಲೀಸವನ್ನು ಈ ದಿಕ್ಕಿನ ಕೋಣೆಯಲ್ಲಿ ಪಶ್ಚಿಮಕ್ಕೆ ಮುಖಮಾಡಿ ಕುಳಿತು ಪಠಿಸುತ್ತಿದ್ದರೆ ಬೇಗನೆ ಫಲಿತಾಂಶ ಸಿಗುವುದು. ಆದರೆ ಈ ನಿವೇದನಾ ಕಾರ್ಯಕ್ರಮ ಪೂರ್ವಾಹ್ನ ಸೂರ್ಯೋದಯದ ಮೊದಲು ಮಾಡಬೇಕು. ಸಾಧ್ಯವಾಗದಿದ್ದರೆ ಸಾಯಂಕಾಲ ಸೂರ್ಯಾಸ್ತದ ಬಳಿಕ ನೆರವೇರಿಸಬೇಕು. ಹಗಲು ಪೂಜೆ ಶನಿಗೆ ಇಷ್ಟವಲ್ಲ. ಹಾಗಾಗಿ ಶನಿಗೆ ರಾತ್ರಿ ಪೂಜೆ ಶ್ರೇಷ್ಠ.

ಕಿರು ಸಲಹೆ

*ಕೊಠಡಿಯಲ್ಲಿ ಅಳಿದು ಹೋದವರ ಭಾವಚಿತ್ರ ಇಟ್ಟುಕೊಳ್ಳಬಾರದು.

*ಕ್ರೂರ ಮಗ , ಆಯುಧಗಳ ಚಿತ್ರಗಳು, ಅವುಗಳ ಮಾದರಿಗಳನ್ನು ಇಟ್ಟುಕೊಳ್ಳುವುದು ಅನಿಷ್ಠಕಾರಕ.

*ನಸು ನೀಲಿ ಬಣ್ಣದ ದೀಪ ಬೆಳಗಿಸಿದರೆ ಮನಸ್ಸು ಆಹ್ಲಾದಕರವಾಗುವುದು.

*ಕೋಣೆಯೊಳಗೆ ಇಟ್ಟಿರುವ ವಸ್ತುಗಳು ಹೊರಗೆ ಕಾಣಬಾರದು. ಮಾತು ಕೇಳಬಾರದು.

ಮನೆ ಕಟ್ಟೋ ಮುನ್ನ ಸ್ವಲ್ಪ ಈ ಲೇಖನ ಓದಿ ಬಿಡಿ ಪ್ಲೀಸ್ * ಅರ್ಜುನ್ ಕುಮಾರ್

ಯಾರೇ ಆಗಲಿ ಮನೆ ಕಟ್ಟಲು ಪ್ರಾರಂಭಿಸುವ ಮೊದಲು ಕೆಲವು ವಿಧಿ ವಿಧಾನಗಳನ್ನು ಪಾಲಿಸುವುದು ಅವರಿಗೂ ಹಾಗೂ ಅವರ ನಂತರದ ತಲೆಮಾರಿನವರಿಗೂ ಅನುಕೂಲಕರ. ಕನಿಷ್ಠ ಕೆಲವು ಸರಳ ವಾಸ್ತು ನಿಯಮಗಳನ್ನು ಪಾಲಿಸುವುದು ಒಳಿತು.

* ಮೊದಲು ಜಾಗ ಶುದ್ಧ ಮಾಡಿ ಪಂಚಭೂತಗಳನ್ನು ಆಹ್ವಾನ ಮಾಡುವುದು.

* ಈಶಾನ್ಯದಲ್ಲಿ ಶಂಕು ಸ್ಥಾಪನೆ ನಂತರ ಆ ಜಾಗದಿಂದಲೇ ಮನೆ ಕಟ್ಟಲು ಪ್ರಾರಂಭಿಸುವುದು.

* ವಾಸ್ತು ಬಲವಿರುವ ನಿವೇಶನವು ಸ್ವಲ್ಪ ಬಲವಿದ್ದರೂ ಸಾಕು ಮನೆಯ ಒಡನೆಯನಿಗ ಬಹಳ ಒಳ್ಳೆಯದು.

* ನೈರುತ್ಯ ಮೂಲೆಯನ್ನು ತಗ್ಗು ಅಥವಾ ಎತ್ತರ ಮಾಡದೆ ಸರಿಯಾದ ಮಟ್ಟಕ್ಕೆ ಕಟ್ಟಿದರೆ ಆ ಮನೆಯು ಸಂಪತ್ತಿನಿಂದ ಕೂಡಿರುತ್ತದೆ.

* ಈಶಾನ್ಯದಲ್ಲಿ ಪಾಯ ತೋಡಿದರೆ ಯಾವ ಅಡೆತಡೆ ಇಲ್ಲದೆ ಬಹಳ ಬೇಗ ಮನೆ ನಿರ್ಮಾಣವಾಗಿ ಆನಂದದಿಂದ ವಾಸ ಮಾಡಬಹುದು.

* ನೈರುತ್ಯದಿಂದ ಗೋಡೆ ನಿರ್ಮಾಣ ಮಾಡಿದರೆ ಆ ಮನೆಗೆ ಶುಭದ ರಕ್ಷಣೆ.

* ಮನೆಯ ಸುತ್ತಲೂ ಕನಿಷ್ಠ ಎರಡು ಅಡಿ ಜಾಗ ಬಿಟ್ಟು ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಿದರೆ ಅಲ್ಲಿ ಅಷ್ಟದಿಕ್ಪಾಲರಿಂದ ರಕ್ಷಣೆ ಸಿಗುವುದು.

ಕೊಳವೆ ಬಾವಿ (ಬೋರ್ವೆಲ್) ಅಥವಾ ಬಾವಿ ತೋಡಿಸುವಾಗ ಅನುಸರಿಸಬೇಕಾದ ಕೆಲವು ಕನಿಷ್ಠ ಅಂಶಗಳು:

* ಪೂರ್ವ - ಸುಖದ ದಾರಿ.* ಪಶ್ಚಿಮ - ಮನೆಯ ಒಡೆಯನಿಗೆ ತೊಂದರೆ* ಉತ್ತರ - ನಾಲ್ಕಾರು ಜನರಿಗೆ ನೀರಿನ ದಾನ* ದಕ್ಷಿಣ - ಮನೆಯ ಒಡೆಯನ ಗಂಡು ಮಕ್ಕಳಿಗೆ ತೊಂದರೆ.

* ಆಗ್ನೇಯ - ಮನೆಯ ಒಡತಿಗೆ ಆರೋಗ್ಯದಲ್ಲಿ ವ್ಯತ್ಯಾಸ ಪದೇ ಪದೆ.* ಈಶಾನ್ಯ - ವಿಶೇಷವಾದ ಫಲಯೋಗ ಸಿದ್ಧಿ* ನೈರುತ್ಯ - ಸಾವಿಗೆ ಆಹ್ವಾನವಿಲ್ಲ.

* ವಾಯುವ್ಯ - ಸದಾ ಜಗಳದ ಭರಾಟೆ

* ಅರ್ಜುನ್ ಕುಮಾರ್

ಯಾರೇ ಆಗಲಿ ಮನೆ ಕಟ್ಟಲು ಪ್ರಾರಂಭಿಸುವ ಮೊದಲು ಕೆಲವು ವಿಧಿ ವಿಧಾನಗಳನ್ನು ಪಾಲಿಸುವುದು ಅವರಿಗೂ ಹಾಗೂ ಅವರ ನಂತರದ ತಲೆಮಾರಿನವರಿಗೂ ಅನುಕೂಲಕರ. ಕನಿಷ್ಠ ಕೆಲವು ಸರಳ ವಾಸ್ತು ನಿಯಮಗಳನ್ನು ಪಾಲಿಸುವುದು ಒಳಿತು.

* ಮೊದಲು ಜಾಗ ಶುದ್ಧ ಮಾಡಿ ಪಂಚಭೂತಗಳನ್ನು ಆಹ್ವಾನ ಮಾಡುವುದು.

* ಈಶಾನ್ಯದಲ್ಲಿ ಶಂಕು ಸ್ಥಾಪನೆ ನಂತರ ಆ ಜಾಗದಿಂದಲೇ ಮನೆ ಕಟ್ಟಲು ಪ್ರಾರಂಭಿಸುವುದು.

* ವಾಸ್ತು ಬಲವಿರುವ ನಿವೇಶನವು ಸ್ವಲ್ಪ ಬಲವಿದ್ದರೂ ಸಾಕು ಮನೆಯ ಒಡನೆಯನಿಗ ಬಹಳ ಒಳ್ಳೆಯದು.

* ನೈರುತ್ಯ ಮೂಲೆಯನ್ನು ತಗ್ಗು ಅಥವಾ ಎತ್ತರ ಮಾಡದೆ ಸರಿಯಾದ ಮಟ್ಟಕ್ಕೆ ಕಟ್ಟಿದರೆ ಆ ಮನೆಯು ಸಂಪತ್ತಿನಿಂದ ಕೂಡಿರುತ್ತದೆ.

* ಈಶಾನ್ಯದಲ್ಲಿ ಪಾಯ ತೋಡಿದರೆ ಯಾವ ಅಡೆತಡೆ ಇಲ್ಲದೆ ಬಹಳ ಬೇಗ ಮನೆ ನಿರ್ಮಾಣವಾಗಿ ಆನಂದದಿಂದ ವಾಸ ಮಾಡಬಹುದು.

* ನೈರುತ್ಯದಿಂದ ಗೋಡೆ ನಿರ್ಮಾಣ ಮಾಡಿದರೆ ಆ ಮನೆಗೆ ಶುಭದ ರಕ್ಷಣೆ.

* ಮನೆಯ ಸುತ್ತಲೂ ಕನಿಷ್ಠ ಎರಡು ಅಡಿ ಜಾಗ ಬಿಟ್ಟು ರಕ್ಷಣಾ ಗೋಡೆಯನ್ನು ನಿರ್ಮಾಣ ಮಾಡಿದರೆ ಅಲ್ಲಿ ಅಷ್ಟದಿಕ್ಪಾಲರಿಂದ ರಕ್ಷಣೆ ಸಿಗುವುದು.

ವಾಸ್ತು ಚೈತನ್ಯಕ್ಕೆ ಸದಾಚಾರ ಪಾಲನೆ ಸೂರ್ಯಕಾಂತ ಪಂಡಿತ

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ವಸತಿಯೂ ಒಂದು. ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು, ಮನೆಯು ಸುಖಮಯವಾಗಿರಲು ಇತ್ತೀಚೆಗೆ ಹಲವಾರು ಬಾಹ್ಯ ಸಾಧನಗಳ ಸಹಾಯವನ್ನು ಪಡೆಯಲಾಗುತ್ತಿದೆ. ಆದರೆ ವಾಸ್ತುವು ಚೈತನ್ಯದಾಯಕವಾಗಿದ್ದರೆ, ಆಧ್ಯಾತ್ಮಿಕ, ಅಂದರೆ ಸೂಕ್ಷ್ಮ ಸ್ತರದಲ್ಲಿ ಆಗುವ ಲಾಭಗಳು ಎಷ್ಟೋ ಪಟ್ಟು ಹೆಚ್ಚಾಗಿರುತ್ತವೆ. ವಾಸ್ತುವು ಚೈತನ್ಯದಾಯಕವಾಗಿರಲು ಅದನ್ನು ಸ್ವಚ್ಛ ಹಾಗೂ ಪರಿಶುದ್ಧವಾಗಿರಿಸುವುದು ಎಷ್ಟು ಮುಖ್ಯವೋ ಆ ವಾಸ್ತುವಿನಲ್ಲಿ ವಾಸ ಮಾಡುತ್ತಿರುವವರು ಆಚಾರ ಧರ್ಮವನ್ನು ಪಾಲಿಸುವುದೂ ಅಷ್ಟೇ ಪ್ರಮುಖವಾದದ್ದಾಗಿದೆ. ಆಚಾರವನ್ನು ಪಾಲಿಸುವುದರಿಂದ ಮನುಷ್ಯನ ಅಂತರಂಗದ ಶುದ್ಧಿಯಾಗುತ್ತಾ ಹೋಗುತ್ತದೆ. ಇದರ ಪರಿಣಾಮವು ವಾಸ್ತುವಿನ ಮೇಲೆಯೂ ಉಂಟಾಗುತ್ತದೆ. ಹೀಗಾಗಿ ವಾಸ್ತುಶುದ್ಧಿಯನ್ನು ಕಾಪಾಡಿಕೊಳ್ಳಲು ಈ ಕೆಲವು ಆಚಾರಗಳನ್ನು ಪಾಲಿಸಬಹುದು.

1. ದೀಪ ಪ್ರಜ್ವಾಲನೆ: ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೇವರ ಮುಂದೆ ತುಪ್ಪ ಅಥವಾ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಇದೇ ರೀತಿ ವಾಸ್ತುವಿನಲ್ಲಿ ವಿಶೇಷವಾಗಿ ಮನೆಯ ಪ್ರಧಾನ ದ್ವಾರದಲ್ಲಿ ದೀಪ ಬೆಳಗಿಸುವುದು ಉತ್ತಮ. ಇದರ ಪಾಲನೆಯಿಂದಲೂ ವಾಸ್ತುಶುದ್ಧಿ ಸಾಧ್ಯ. ಎಣ್ಣೆಯ ದೀಪವನ್ನು ಹಚ್ಚಲು ಎಳ್ಳೆಣ್ಣೆಯ ಉಪಯೋಗವು ಹೆಚ್ಚು ಲಾಭದಾಯಕವಾಗಿದೆ.

2. ತುಳಸಿಪೂಜೆ: ಸಂಜೆಯ ಹೊತ್ತು ಅಂಗಳದಲ್ಲಿನ ತುಳಸಿಯ ಮುಂದೆ ದೀಪವನ್ನು ಹಚ್ಚುವುದು. ತುಳಸಿಯು ಔಷಧೀಯ ವನಸ್ಪತಿ. ಅದರಿಂದ ಬೀಸುವ ಗಾಳಿ ಪರಿಶುದ್ಧವಾಗಿರುತ್ತದೆ. ಅದರ ಎಲೆ, ಬೇರು ಮತ್ತು ಬೀಜಗಳೂ ನಾನಾ ರೀತಿಯ ಔಷಧಿಗಳನ್ನು ತಯಾರಿಸಲಾಗುತ್ತದೆ. ಪವಿತ್ರ ವನಸ್ಪತಿಯೂ ಆಗಿರುವ ಇದರಲ್ಲಿ ಬೇರಿನಿಂದ ತುದಿಯ ತನಕ ಎಲ್ಲ ದೇವತೆಗಳು ವಾಸವಾಗಿರುತ್ತಾರೆ ಎಂಬ ನಂಬಿಕೆಯಿದೆ. ಈ ಬ್ರಹ್ಮಾಂಡದಲ್ಲಿರುವ ಸಾತ್ತ್ವಿಕ ತರಂಗಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯನ್ನು ತುಳಸಿ ಹೊಂದಿದೆ. ಇದು ಸದಾ ದೇವತೆಯ ತತ್ತ್ವವನ್ನು ಪ್ರಕ್ಷೇಪಿಸಿ ಸುತ್ತಮುತ್ತಲಿನ ವಾತಾವರಣವನ್ನು ಪವಿತ್ರಗೊಳಿಸುತ್ತದೆ.

3. ಸ್ತೋತ್ರ ಪಠಣ: ಸಂಜೆ ದೀಪವನ್ನು ಬೆಳಗಿಸಿದ ನಂತರ ಕುಟುಂಬದ ಸದಸ್ಯರೆಲ್ಲರೂ ಜತೆಯಾಗಿ ಕುಳಿತು ಪ್ರಾರ್ಥನೆ ಮಾಡಬೇಕು. ದೇವತೆಗಳ ಸ್ತೋತ್ರಗಳ ಪಠನೆಯೂ ವಾಸ್ತುಶುದ್ಧಿಗೆ ಸಹಕಾರಿಯಾಗುತ್ತದೆ.

4. ನಾಮಜಪ: ಸಂಜೆ ಕುಟುಂಬದ ಸದಸ್ಯರೆಲ್ಲರೂ ಜತೆಯಾಗಿ ಕುಳಿತು ಪ್ರಾರ್ಥನೆ ಮಾಡುವುದಕ್ಕೆ ಸಮನಾದದ್ದು ಎಂದರೆ ನಮ್ಮ ಇಷ್ಟದೇವರ ಜಪ. ಇಂದು ಮನೆಮನೆಗಳಲ್ಲೂ ಧಾರಾವಾಹಿಗಳ ದಾಸರೇ ಆಗಿಬಿಟ್ಟಿದ್ದಾರೆ. ಇಂಥ ಬಹುತೇಕ ಧಾರಾವಾಹಿಗಳು ನಮ್ಮಲ್ಲಿ ಋಣಾತ್ಮಕ ಗುಣವನ್ನು ಉಂಟುಮಾಡುತ್ತವೆ. ಇದರಿಂದ ದೂರವಿರಲು ನಾಮಜಪ ಬಹಳ ಮುಖ್ಯವಾದದ್ದಾಗಿದೆ.

ಈ ಮೇಲಿನ ಆಚಾರಗಳ ಪಾಲನೆಯಿಂದ ನಮ್ಮ ವಾಸ್ತುವಿನಲ್ಲಿ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿಯನ್ನು ಕಂಡುಕೊಳ್ಳಬಹುದು.

ಆಧುನಿಕ ವಾಸ್ತು, ವಿಜ್ಞಾನ * ಶರಣಕುಮಾರ ಹೇಡೆ

ವಾಸ್ತು ಶಬ್ದಕ್ಕೆ ವಾಸಿಸಲು ಯೋಗ್ಯವಾದಂತ ಒಂದು ಪ್ರದೇಶ ಎನ್ನುವ ಅರ್ಥ ಇದೆ. ವಾಸ್ತು ಎನ್ನುವ ಶಬ್ದವು ಜ್ಞಾನ ಮತ್ತು ವಿಜ್ಞಾನದ ಒಂದು ಆಳವಾದ ಅಧ್ಯಯನ ಹಾಗೂ ಭೂಮಿಯನ್ನು ಅಲಂಕರಿಸುವ ಒಂದು ಶಾಸ್ತ್ರವೂ ಹೌದು. ಈ ಭೂ ಅಲಂಕಾರದಲ್ಲಿ ಪಂಚಮಹಾಭೂತಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಅಳವಡಿಸಿಕೊಂಡು ಅಲಂಕರಿಸುವುದೇ ವಾಸ್ತುಶಾಸ್ತ್ರ. ಮೇಲೆ ತಿಳಿಸಿದಂತೆ ಪಂಚಭೂತಗಳನ್ನು ಅರಿತುಕೊಳ್ಳುವುದೇ ಜ್ಞಾನ ಹಾಗೂ ಈ ಅರಿತುಕೊಂಡ ಜ್ಞಾನವನ್ನು ಉಪಯೋಗಿಸಿಕೊಳ್ಳುವುದೇ ವಿಜ್ಞಾನ.

ಭೂಮಿಯು ಒಂದು ದುಂಡಾದ ಆಕೃತಿಯನ್ನು ಪ್ರತಿಬಿಂಬಿಸುತ್ತದೆ. ಹಾಗೂ ಉರುಳುತ್ತಿರುವ ಆಕೃತಿಯೇ ನಿಸರ್ಗ. ಸೂರ್ಯನ ಸುತ್ತ ಉರುಳುವಾಗ, ಸೂರ್ಯನ ಎದುರಿನ ಭಾಗ ಬೆಳಕು ಹಾಗೂ ಹಿಂದಿನಭಾಗ ನೆರಳನ್ನು ಹೊಂದಿರುತ್ತದೆ. ಈ ಆಕೃತಿಯನ್ನೇ ಚೀನಿಯರು ಫೇಂಗ್-ಸುಯೀ ಎಂಬ ವಾಸ್ತುವಿನ ಚೆಹ್ನೆಯಾಗಿ ಉಪಯೋಗಿಸಿಕೊಂಡಿದ್ದಾರೆ. ಅವರು ಈ ಚಿಹ್ನೆಯಲ್ಲಿ ಎರಡು ಭಾಗಗಳನ್ನಾಗಿಸಿಕೊಂಡು ಗಾಳಿ ಹಾಗೂ ನೀರನ್ನು ಈ ನಿಸರ್ಗವೆನ್ನುವರು. ಇದನ್ನು ನಮ್ಮ ಜೀವನದಲ್ಲಿ ಹೇಗೆ ಅವಳವಡಿಸಿಕೊಳ್ಳುವುದೆಂಬುದೇ ಈಗಿನ ಮುಂದಿನ ಪ್ರಶ್ನೆಯಾಗಿದೆ.

ವಾಸ್ತು ಅಭಿವೃದ್ಧಿ ಕಲೆಗಳು

ಪಾಶ್ಚಿಮಾತ್ಯ ಕಲಾವಿದರು ಹಾಗೂ ಭಾರತೀಯ ವಾಸ್ತುಶಾಸ್ತ್ರ ಮತ್ತು ಚೀನಿಯರ ಫೇಂಗ್-ಸುಯೀ ವಿದ್ಯೆಯನ್ನು ಅರಿತು ಸಾರ್ವಜನಿಕರ ಅಭಿವೃದ್ಧಿಗೆ ಕಲಾಕೃತಿಗಳನ್ನು ರಚಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುದು ತಿಳಿಯೋಣ.

ಸಾಮಾನ್ಯವಾಗಿ ಇಂದಿನ ಮನೆಗಳಲ್ಲಿ ಆಗ್ನೇಯದಲ್ಲಿ ಅಡುಗೆಮನೆ, ಕುಬೇರ ಮೂಲೆಯಲ್ಲಿ ದೇವರ ಮನೆ ಇರಿಸುವುದಷ್ಟೇ ವಾಸ್ತು ಎಂದು ಅರಿತುಕೊಂಡಿದ್ದಾರೆ. ಇದು ನಿಜವೇ ಹಾಗೂ ಇಂದಿನ ವಾಸ್ತು ಶಿಲ್ಪಿಗಳು ತಿಳಿಯುವುದು ಅದನ್ನಷ್ಟೇ. ಆದರೆ ಇದರ ಇನ್ನೂ ಸ್ವಲ್ಪ ಆಳವಾದ ಅಧ್ಯಯನದಿಂದ ತಿಳಿದುಬರುವುದು, ಆಗ್ನೇಯದಲ್ಲಿ ಅಗ್ನಿ ಇರುವುದಂತೂ ನಿಜ. ಆದರೆ ಅದನ್ನು ನೀರಿನೊಂದಿಗೆ ಸಮವಾಗಿ ತೂಗಬೇಕು. ಅದು ಸರಿಯಾದ ವಾಸ್ತುಶಾಸ್ತ್ರ.

ಪ್ರಥಮವಾಗಿ ಕೆನಡಾದ ಕಲಾವಿದ ಜೇನಿನ್ ಗ್ರಿಮ್ಸ್ರ ಕೆಲ ಕಲಾಕೃತಿಗಳ ಬಗ್ಗೆ ತಿಳಿಯೋಣ. ನವ್ಯ ಕಲಾಕೃತಿಗಳು ತಿಳಿದುಕೊಳ್ಳುವುದು ಕಷ್ಟ. ಅವುಗಳನ್ನು ಓದಬೇಕು. ನವ್ಯ ಕಲಾಕೃತಿಗಳಲ್ಲಿ ಒಂದು ಬಿಂದುವಿಗೂ ಅರ್ಥವಿರುತ್ತದೆ. ಅಲ್ಲದೆ ರೇಖಾ ಚಿತ್ರಗಳಿಗೂ ಆಳವಾದ ಅರ್ಥವಿರುತ್ತದೆ. ಇವರ ಕಲಾಕೃತಿಯು ವಾಸ್ತು ಅಳವಡಿಸಿದಂತಹ ಭೂ ದೃಶ್ಯ ಕಲಾಕೃತಿ. ಉಕ್ಕಿನಲ್ಲಿ ತಯಾರಿಸಿದಂತಹ ಈ ಕಲಾಕೃತಿಯನ್ನು ಮನೆಯ ವಾಯುವ್ಯ ಭಾಗದಲ್ಲಿ ನೇತುಹಾಕಬೇಕು. ಈ ಕಲಾಕೃತಿಯ ಗವಾಯಶಕ್ತಿಯನ್ನು ಇದರಿಂದ ವೃದ್ಧಿಸಲು ಸಹಾಯಕವಾಗುತ್ತದೆ. ಅದು ಪ್ರದಕ್ಷಿಣಾಕಾರವಾಗಿ ಮತ್ತು ಅಪ್ರದಕ್ಷಿಣಾಕಾರವಾಗಿ ತಿರುಗುತ್ತಿರುತ್ತದೆ.

ನಮ್ಮ ದೇಹವನ್ನು ಜಾಗೃತಗೊಳಿಸಲು ನಾವು ಹೇಗೆ ಯೋಗಾಭ್ಯಾಸ ಮಾಡುತ್ತೇವೆಯೋ ಹಾಗೇ ನಿರ್ಸಗದಲ್ಲಿನ ಶಕ್ತಿಗಳನ್ನು ನಮ್ಮ ಬಳಕೆಗೆ ಯೋಗ್ಯವಾಗುವಂತೆ ಮಾರ್ಪಡಿಸಿಕೊಳ್ಳಲು ಈ ಕಲಾಕೃತಿಯ ಶಕ್ತಿಯನ್ನು ಬಳಸಿಕೊಳ್ಳಬಹುದು. ಈ ಕಲಾಕೃತಿಗಳನ್ನು ಹೇಗೆ ಯಾವ ಜಾಗದಲ್ಲಿ ನೇತು ಹಾಕಬೇಕು, ಯಾವ ಬಣ್ಣವನ್ನು ಅವಕ್ಕೆ ಬಳಸಬೇಕು ಎಲ್ಲವನ್ನೂ ನಾವು

ಮನನಮಾಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ವಾಯುವ್ಯ ದಿಕ್ಕಿನ ಮೂಲಧಾತುಗಳು ಲೋಹ, ಬಿಳಿ ಮಿಶ್ರಿತ ಬೂದಿ ಬಣ್ಣ ಹಾಗೂ ವಾಯು, ವಾಯುವ್ಯ ದಿಕ್ಕನ್ನು ಲೋಹಮಿಶ್ರಿತ ಕಲಾಕೃತಿಗಳಿಂದ ಸೌಂದರ್ಯಿಸಿದರೆ ಮಕ್ಕಳ ಅಭಿವೃದ್ಧಿ, ಜವಾಬ್ದಾರಿ, ನಾಯಕತ್ವಗುಣ, ಕಲ್ಪನಾಶಕ್ತಿ ಹಾಗೂ ವಿದೇಶ ಯೋಗಗಳು ಬೆಳೆಯುತ್ತವೆ.

ಹಿಡನ್ ಎನರ್ಜಿ

ಪಿರಮಿಡ್ನಲ್ಲಿ ಉತ್ಪತ್ತಿಯಾಗುವಂತಹ ಶಕ್ತಿಯನ್ನು ಹಿಡನ್ ಎನರ್ಜಿ ಎಂದು ಕರೆಯುತ್ತಾರೆ. ಇಟ್ಟಿಗೆಗಳಿಂದ ನಿರ್ಮಿಸಿದ ಈ ಕಲಾಕೃತಿಯ ಮಧ್ಯಭಾಗ ಮಾತ್ರ ಸಿಡಿದೆದಂತೆ ನಿರ್ಮಿಸಬೇಕು. ಅಂದರೆ ಒಳಗಿನಿಂದ ಯಾವುದೋ ಒಂದು ಶಕ್ತಿ ಹೊರಬರಲು ಪ್ರಯತ್ನಿಸುತ್ತಿದೆ ಎಂದು ನೋಡುತ್ತಲೇ ಗೋಚರಿಸುವಂತಿರಬೇಕು. ಇದನ್ನು ನಾವು ಅಗ್ನಿಶಕ್ತಿ ಎಂದೂ ಕರೆಯಬಹುದು.

ನಿಮ್ ಮನೆ ವಾಸ್ತು ಹೀಗಿರಲಿ... * ಎಸ್.ಎನ್. ಶೈಲೇಶ್ ಬಾಣಾವರ

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕೆಂಬ ಆಸೆ ಇದ್ದೇ ಇರುತ್ತದೆ. ಆ ಮನೆ ದೊಡ್ಡದಿರಲಿ ಅಥವಾ ಚಿಕ್ಕದಿರಲಿ, ಲಕ್ಷಾಂತರ ರೂಪಾಯಿಗಳನ್ನು ಸುರಿದು ಮನೆ ಕಟ್ಟಿದ ಮೇಲೆ ಮನೆ ನೋಡಲು ಬಂದವರೆಲ್ಲ, ಅಡುಗೆಮನೆ ಅಲ್ಲಿರಬೇಕು, ರೂಂ ಇಲ್ಲಿರಬೇಕು ಎಂದು ತಮ್ಮ ಅನುಭವ ಹಂಚಿಕೊಂಡು ಮಾತನಾಡತೊಡಗುತ್ತಾರೆ. ಲಕ್ಷಾಂತರ ರೂಪಾಯಿ ಸುರಿದರೂ ಈ ಮನೆಗೆ ವಾಸ್ತು ಇಲ್ಲ ಎಂದರೆ ಏನು ಪ್ರಯೋಜನ ಎನ್ನುತ್ತಾರೆ.

ನಿಜ, ಮನೆ ಕಟ್ಟುವುದೇ ಆಗಿದ್ದಲ್ಲಿ ವಾಸ್ತುವಿನ ಪ್ರಕಾರ ಮನೆಯನ್ನು ಕಟ್ಟಿಸಬೇಕು. ಹಾಗಿದ್ದಲ್ಲಿ ಮಾತ್ರ ಖಂಡಿತವಾಗಿಯೂ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಗೆ ಕೊರತೆ ಇರುವುದಿಲ್ಲ. ಹಾಗಾದರೆ ವಾಸ್ತು ಎಂದರೇನು? ಭೂಮಿ, ಜಲ, ಅಗ್ನಿ, ವಾಯು ಹಾಗೂ ಆಕಾಶ-ಈ ಪಂಚಭೂತಗಳು ಕ್ರಮಬದ್ಧ ಪ್ರಮಾಣದ ಪರಸ್ಪರ ಸಂಬಂಧವನ್ನು ವಾಸ್ತು ಎನ್ನುತ್ತಾರೆ. ಪಂಚಭೂತಗಳ ಆಧಾರದ ಮೇಲೆ ರಚಿತವಾದ ಶಾಸ್ತ್ರವೇ ವಾಸ್ತ್ರುಶಾಸ್ತ್ರ.

ಮನೆಯಲ್ಲಿ ನವಗ್ರಹಗಳ ಸ್ಥಾನಗಳು

ಸೂರ್ಯ - ದೇವರ ಮನೆ ಚಂದ್ರ - ಸ್ನಾನದ ಮನೆ ಕುಜ - ಹಾಲ್ ಬುಧ - ಅಡುಗೆ ಮನೆ ಗುರು- ವಿದ್ಯಾಭ್ಯಾಸದ ಜಾಗ (ರೂಂ) ರಾಹು - ಮುಖ್ಯದ್ವಾರದ ಬಲ ಭಾಗ

ಕೇತು - ಮುಖ್ಯದ್ವಾರದ ಎಡ ಭಾಗ

ಪೂರ್ವ: ಈ ದಿಕ್ಕಿಗೆ ಪಿತೃಸ್ಥಾನ ಎನ್ನುತ್ತಾರೆ. ಪೂರ್ವದಿಕ್ಕಿನಲ್ಲಿ ಸೂರ್ಯ ಉದಯಿಸುವುದರಿಂದ ಅವನ ಕಿರಣಗಳು ದೇಹದ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ. ಈ ಕಿರಣಗಳಿಂದ ಅನೇಕ ರೀತಿಯ ಕಾಯಿಲೆಗಳು ವಾಸಿಯಾಗುತ್ತವೆ. ಆದ್ದರಿಂದ ಪೂರ್ವ ದಿಕ್ಕು ತಗ್ಗಾಗಿರಬೇಕು ಎನ್ನುತ್ತದೆ ವಾಸ್ತುಶಾಸ್ತ್ರ. ಒಂದು ವೇಳೆ ಈ ದಿಕ್ಕು ಉಳಿದ ಎಲ್ಲ ದಿಕ್ಕುಗಳಿಗಿಂತ ಎತ್ತರವಾಗಿದ್ದರೆ ಗಾಳಿ ಬೆಳಕಿಗೆ ತೊಂದರೆಯಾಗುತ್ತದೆ ಹಾಗೂ ಆಕರ್ಷಣಾ ಶಕ್ತಿಯ ಬಲ ಕುಂದುತ್ತದೆ. ಪೂರ್ವ ದಿಕ್ಕಿನಲ್ಲಿ ಮುಖ್ಯದ್ವಾರ, ಸ್ನಾನದ ಮನೆ, ಆಫೀಸ್, ಹಾಲ್ ಇತ್ಯಾದಿಗಳಿರುವುದು ಶುಭ.

ಪಶ್ಚಿಮ: ಈ ದಿಕ್ಕಿನ ಅಧಿಪತಿ ವರುಣ. ಈ ದಿಕ್ಕಿನಲ್ಲಿ ಹಸು ಸಾಕಾಣಿಕೆ, ದವಸ ಧಾನ್ಯ ಶೇಖರಣೆ, ಕೃಷಿಗೆ ಸಂಬಂಧಿಸಿದ ಉಪಕರಣಗಳು, ಮೆಟ್ಟಿಲುಗಳು, ಊಟದ ಮನೆ ಇವೆಲ್ಲ ಶುಭಪ್ರದವಾದವು.

ಉತ್ತರ: ಈ ದಿಕ್ಕಿಗೆ ಮಾತೃಸ್ಥಾನ ಎಂದು ಕರೆಯುತ್ತಾರೆ. ಕುಬೇರನೇ ಈ ದಿಕ್ಕಿನ ಅಧಿಪತಿ ಆಗಿರುವುದರಿಂದ ಯಶಸ್ಸು, ಅಭಿವೃದ್ಧಿ, ಧನಕನಕ, ಸಂಪತ್ತು, ಆರೋಗ್ಯ, ಬಲ ಇವುಗಳಿಗೆ ಇದು ಪ್ರಶಸ್ತವಾದುದು. ಆಫೀಸ್ ಹಾಲ್ಗಳು ಈ ದಿಕ್ಕಿಗೆ ಇರುವುದೂ ಶುಭ.

ದಕ್ಷಿಣ: ಈ ದಿಕ್ಕು ಮತ್ತು ಆಗ್ನೇಯಕ್ಕೆ ಅಗ್ನಿ ಅಧಿಪತಿ. ಆದ್ದರಿಂದ ಇದು ಅಡುಗೆಮನೆ ಹಾಗೂ ಸ್ಟೌವ್ ಉರಿಸಲು ಪ್ರಶಸ್ತವಾದುದು. ಬೆಂಕಿ ಹಾಗೂ ನೀರಿಗೆ ಹೊಂದಾಣಿಕೆ ಇಲ್ಲದಿರುವುದರಿಂದ ಆಗ್ನೇಯ ಮೂಲೆಯಲ್ಲಿ ಬಾವಿ, ನೀರಿನ ಪಂಪ್, ನೀರಿನ ತೊಟ್ಟಿ ಇರುವುದು ನಿಷೇಧ.

ನೈಋತ್ಯ: ನೈಋತ್ಯವು ಮನೆಯ ಯಜಮಾನನ ಆರೋಗ್ಯ, ಆಯುಷ್ಯ, ಕಂಟಕಗಳ ಬಗ್ಗೆ ತಿಳಿಸಲ್ಪಡುವ ದಿಕ್ಕಾಗಿದೆ.

ವಾಯವ್ಯ: ಈ ದಿಕ್ಕಿನಲ್ಲಿ ವೃತ್ತಿಗೆ ಸಂಬಂಧಿಸಿದ ವ್ಯಾಪಾರಗಳು ಹಾಗೂ ಅದರ ಅಭಿವೃದ್ಧಿಗೆ ಸಂಬಂಧಿಸಿದ್ದಾಗಿದೆ. ಧಾನ್ಯ ಸಂಗ್ರಹಣೆ, ದನದ ಕೊಟ್ಟಿಗೆ, ಶೌಚಾಲಯ, ಬಾತ್ರೂಂಗಳುಗೆ ಇದು ಪ್ರಶಸ್ತವಾದುದು.

ಈಶಾನ್ಯ: ಈ ದಿಕ್ಕು ಭಗವಂತನಿಗೆ ಸಂಬಂಧಿಸಿದ್ದು. ಹೀಗಾಗಿ ಇದಕ್ಕೆ ದೇವಮೂಲೆ ಎನ್ನುತ್ತಾರೆ. ಈ ದಿಕ್ಕು ಆರೋಗ್ಯ, ಸುಖ, ಶಾಂತಿ, ಏಳಿಗೆಗೆ ಸಂಬಂಧಿಸಿದ್ದಾಗಿದೆ. ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ, ವರಾಂಡ ಇದ್ದರೆ ಅತ್ಯುತ್ತಮ.

ಗೃಹ ಪ್ರವೇಶದ ಮಹತ್ವ ಅನಿಲಕುಮಾರ ಹ. ಸಂಗೊಂದಿ

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಗಾದೆಯೇ ಇದೆ. ಆ ಗಾದೆಯಂತೆ ಮನೆ ಕಟ್ಟಲು ಪ್ರಾರಂಭಿಸಿದಾಗಿನಿಂದಲೂ ಮನೆ ಕಟ್ಟಿ ಮುಗಿಯುವ ತನಕ ಅನೇಕ ರೀತಿಯ ಕಷ್ಟಗಳನ್ನು ಎದುರಿಸುತ್ತೇವೆ. ಅದರಲ್ಲಿ ಹಣ, ವಾಸ್ತು, ಅಗತ್ಯ ವಸ್ತುಗಳ ದುಬಾರಿ ಬೆಲೆ, ಕಾರ್ಮಿಕರ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಬಂದು ಹೋಗಿರುತ್ತವೆ. ಹೇಗೋ ಕಷ್ಟಪಟ್ಟು ಮನೆ ಮುಗಿಸುತ್ತಾರೆ. ಸಂಪೂರ್ಣವಾಗಿ ಮನೆ ಮುಗಿದ ಮೇಲೆ ಅಧಿಕೃತವಾಗಿ ಮನೆಯಲ್ಲಿ ವಾಸಿಸುವ ಮುನ್ನ ಗೃಹಪ್ರವೇಶ ಅಥಾ ವಾಸ್ತು ಶಾಂತಿ ಅಂತಾ ಒಂದು ಕಾರ್ಯಕ್ರಮ ಮಾಡುತ್ತಾರೆ.

ಗೃಹಪ್ರವೇಶದ ಮಹತ್ವದ ಕ್ರಿಯೆಗಳು

ಹೋಮ ಹವನ: ಅಂದು ದೇವರ ಕೋಣೆಯಲ್ಲಿ ಹೋಮ, ಹವನ, ಪೂಜೆ ಪುನಸ್ಕಾರ ಮಾಡುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ. ಮನೆಯ ಅಷ್ಟದಿಕ್ಪಾಲಕರು ಮನೆಯಲ್ಲಿ ಸುಖ- ಶಾಂತಿ ಕಾಪಾಡಲಿ ಎಂದು ಹವನ ಮಾಡುತ್ತಾರೆ.

ಗೋಮಾತೆ ಪ್ರವೇಶ: ಮುಕ್ಕೋಟಿ ದೇವರುಗಳು ಗೋಮಾತೆಯ ಉದರದಲ್ಲಿದ್ದಾರೆ ಎಂದು ಪುರಾತನ ಕಾಲದಿಂದಲೂ ನಂಬಿಕೊಂಡು ಬಂದಿರುವ ಸಂಗತಿ. ಹಾಗಾಗಿ ಮನೆಯಲ್ಲಿ ನೆಮ್ಮದಿ ನೆಲೆಸಲಿ ಎಂದು ಗೋಮಾತೆಯನ್ನು ಗೃಹ ಪ್ರವೇಶ ಮಾಡಿಸುತ್ತಾರೆ. ಗೋಮೂತ್ರ ಸಿಂಪರಣೆ: ಗೃಹ ಪ್ರವೇಶದಂದು ಮನೆ ತುಂಬೆಲ್ಲಾ ಗೋಮೂತ್ರ ಸಂಪರಣೆ ಮಾಡುತ್ತಾರೆ. ಇದಕ್ಕೆ ಧಾರ್ಮಿಕ ಕಾರಣ ಮನೆಯನ್ನು ಶುಚಿ ಮಾಡುವುದಾದರೆ, ವೈಜ್ಞಾನಿಕವಾಗಿ ಮನೆಯಲ್ಲಿ ಯಾವುದೇ ರೋಗ - ರುಜಿನ ಬರದಿರಲಿ ಎಂದು ಸಿಂಪರಣೆ ಮಾಡುತ್ತಾರೆ.

ಒಲೆ ಮೇಲೆ ಹಾಲು ಉಕ್ಕಿಸುವ ಪದ್ಧತಿ: ಈ ಮೇಲಿನ ಮೂರೂ ಕ್ರಿಯೆಗಳಷ್ಟೇ ಅಲ್ಲದೆ ಅಂದು ಒಲೆ ಮೇಲೆ ಹಾಲು ಉಕ್ಕಿಸುವ ಕ್ರಿಯೆಯನ್ನು ಮಾಡುತ್ತಾರೆ. ಕಾರಣ ಮನೆಯಲ್ಲಿ ಐಶ್ವರ್ಯ, ಸಂಪತ್ತು, ಕೀರ್ತಿಗಳು ಹಾಲು ಉಕ್ಕಿದ ಹಾಗೆ ಉನ್ನತ ಮಟ್ಟಕ್ಕೇರಲಿ ಎಂದು ಈ ಪದ್ಧತಿ ರೂಢಿಯಲ್ಲಿದೆ.

ಈ ಪ್ರಕ್ರಿಯೆಗಳು ಅಷ್ಟೇ ಅಲ್ಲದೆ ಆಯಾ ಪ್ರದೇಶಗಳಿಗನುಗುಣವಾಗಿ ಇನ್ನೂ ಹಲವಾರು ಪದ್ಧತಿಗಳು ಜಾರಿಯಲ್ಲಿವೆ. ಒಟ್ಟಾರೆ ಈ ಎಲ್ಲಾ ಪ್ರಕ್ರಿಯೆಗಳ ಮೂಲ ಉದ್ದೇಶ, ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಆಯುಷ್ಯ, ಹೆಚ್ಚು ಕಾಲ ಉಳಿಯಲಿ ಎಂದು ಮಾಡುತ್ತಾರೆ. ನಮ್ಮ ಹಿಂದಿನ ಹಿರಿಯರು ಹಾಕಿಕೊಟ್ಟ ಪ್ರತಿಯೊಂದು ಪದ್ದತಿಯೂ ಮಹತ್ವ ಪೂರ್ಣವಾಗಿವೆ. ಆಧುನಿಕತೆಯು ಎಷ್ಟೇ ಮುಂದುವರೆದರೂ ನೀತಿ ನಿಯಮಗಳನ್ನು ಎಂದಿಗೂ ಬಿಡಬಾರದು. ಈ ಜಗತ್ತು ನಂಬಿಕೆಯ ಮೇಲೆ ನಿಂತಿದೆ.

ವಿಭಿನ್ನ ವಾಸ್ತು ವಿಠ್ಠಲ ಎಸ್. ಅರೇರ

ಮನುಷ್ಯನು ತನ್ನ ಆರೋಗ್ಯ ಮತ್ತು ರಕ್ಷಣೆಯ ಸಲುವಾಗಿ ವಾತಾವರಣವನ್ನು ಆಧರಿಸಿ ಒಂದು ಪ್ರತ್ಯೇಕವಾದ ಪದ್ಧತಿ ಪ್ರಕೃತಿ ಸೂತ್ರ (ವಿಜ್ಞಾನ) ಗಳನ್ನು ತನ್ನ ಜೀವನದಲ್ಲಿ ಳವಡಿಸತೊಡಗಿದ. ಇದನ್ನೇ ಮುಂದಿನ ಪೀಳಿಗೆಯವರು ಅನುಸರಿಸಲಿ ಎಂದು ಕಟ್ಟು ನಿಯಮಗಳನ್ನು ಮಾಡಿ ಅದಕ್ಕೆ 'ವಾಸ್ತು' ಎಂದು ನಾಮಕರಣ ಮಾಡಿದ.

ನಮಗೆ ಗೊತ್ತಿಲ್ಲದೆಯೇ ಅತ್ಯಧಿಕವಾಗಿ ಪಂಚಭೂತಗಳ ಪ್ರಮೇಯವು ಮನೆಯ ಮೇಲೆ, ಮನೆಯ ವ್ಯಕ್ತಿ ಮೇಲೆ ಕೆಲಸ ಮಾಡುತ್ತದೆ. ಪ್ರಕೃತಿ ಮತ್ತು ಮನುಷ್ಯನ ಮಧ್ಯೆ ಸಮತೋಲನ ಇರುವಾಗಲೇ ಆ ಮನೆ ಆರೋಗ್ಯದಾಯಕವಾಗಿರುತ್ತದೆ. ಅಪಸವ್ಯವಾಗಿ ವಕ್ರವಾಗಿ ಕತ್ತಲೆಯನ್ನು ಒಟ್ಟಾಗಿಸುವಂತೆ ಇರುವಾಗ ಆ ಮನೆ ಅನೇಕ ರೋಗಗಳಿಗೆ ಮತ್ತೊಂದು ಹೆಸರಾಗುತ್ತದೆ. ಪಂಚಭೂತಗಳಿಗೆ ದೂರವಾದ ಮನೆ ಸಮಸ್ಯೆಗಳಿಗೆ ಹತ್ತಿರವಾಗುತ್ತದೆ. ಆಕೃತಿಯಲ್ಲಿನ ಪರಿಮಾಣ ಪ್ರಮಾಣದಲ್ಲಿ ಹೆಚ್ಚು ಕಡಿಮೆಯುಂಟಾದಾಗ ಆಕೃತಿ ವಿಕೃತಿಯಾಗುತ್ತದೆ.

ವಾಸ್ತುಶಾಸ್ತ್ರದಲ್ಲಿ ಮುಖ್ಯವಾಗಿ ಒಳ್ಳೆಯ ವಾತಾವರಣ ಎನ್ನುವುದು ಮುಖ್ಯ ಅಂಶ. ಬೆಟರ್ ಲಿವಿಂಗ್ ಮನುಷ್ಯನಿಗೆ ಅಗತ್ಯವಾದ್ದರಿಂದ ಅದನ್ನೇ ಪ್ರಕೃತಿಯಿಂದ ತೆಗೆದುಕೊಂಡು ಒಂದು ಸ್ಥಾನದಲ್ಲಿ ನಿಲ್ಲಿಸುತ್ತದೆ. ಆ ನಿಲ್ಲಿಸುವ ಕೆಲಸವನ್ನು ವಾಸ್ತು ಎಂಬ ವಾಹಕ ಮಾಡುತ್ತದೆ. ಆದ್ದರಿಂದ ಅದನ್ನು ಆಚರಿಸಬೇಕೆಂದು ಶಾಸ್ತ್ರ ಹೇಳುತ್ತವೆ. ಗೃಹನಿರ್ಮಾಣ ಒಂದು ಕ್ರಮ ಪದ್ಧತಿಯಲ್ಲಿ ಮುಂದುವರಿಯಬೇಕಾದ ಅಗತ್ಯವಿದೆ. ಏಕೆಂದರೆ ಮಾನವ ನಿರ್ಮಾಣ ಕೂಡಾ ಒಂದು ಕ್ರಮಾನುಗತವಾಗಿ ಸಾಗುತ್ತದೆ.

ಕೆಲವು ಶಾಸ್ತ್ರೀಯ ನಿಯಮಗಳು 1.ಬಾವಿ, ಬೋರಿಂಗ್, ನೀರು ಶೇಖರಿಸುವ ಗುಂಡಿ, ಪೂಜಾಗೃಹ, ಗೇಟು, ಬಾಗಿಲು, ಭೂಗೃಹ, ವರಾಂಡ, ಲಿವಿಂಗ್, ಡ್ರಾಯಿಂಗ್, ಪೋರ್ಟಿಕೋ

2.ಬಾವಿ, ಬೋರಿಂಗ್, ನೀರು ಶೇಖರಿಸುವ ಗುಂಡಿ, ಪೂಜಾಗೃಹ, ಟ್ಯಾಂಕು, ಗೋಬರ್ ಗ್ಯಾಸ್, ತುಳಸಿ, ಹೂವಿನ ಗಿಡಗಳು.

3.ಟ್ಯಾಂಕ್, ಗೋಬರ್ ಗ್ಯಾಸು, ಡೈನಿಂಗ್, ಸ್ಟೋರ್, ಪೂಜಾಗೃಹ, ತುಳಸಿ, ಸಣ್ಣಗಿಡಗಳು.

4.ಅಡುಗೆಮನೆ, ಬಾಯ್ಲರ್ಸ್, ಮೆಟ್ಟಲು, ಟಾಯ್ಲೆಟ್, ಬಾತ್ರೂಂ, ಗಿಡಗಳು.

5.ಅಡುಗೆಮನೆ, ಬಾಗಿಲು, ಗೇಟು, ಡ್ರಾಯಿಂಗ್, ಲಿವಿಂಗ್, ಆಫೀಸ್ ರೂಂ, ಟಾಯ್ಲೆಟ್, ಪೋರ್ಟಿಕೋ, ಗಿಡಗಳು, ಮರಗಳು, ಉಪಗೃಹ, ಭೂಮಿ ಮೇಲೆ ವಾಟರ್ ಟ್ಯಾಂಕ್.

6.ಬಾಗಿಲು, ಗೇಟು, ಮಲಗುವ ಮನೆ, ಡೈನಿಂಗ್, ಡ್ರಾಯಿಂಗ್, ಸ್ಟೋರ್ಸ್ ಮೆಟ್ಟಿಲುಗಳು ಟಾಯಿಲೆಟ್, ಗಿಡಮರಗಳು, ಉಪಗೃಹ.

7.ಮಲಗುವ ಮನೆ, ಟಾಯ್ಲೆಟ್ಸ್ ಸ್ಟೋರ್ಸ್, ಮೆಟ್ಟಲು, ಧಾನ್ಯದ ಕೋಣೆ, ಮರಗಳು.

8.ಮಲಗುವ ಮನೆ, ಸ್ಟೋರ್ಸ್, ಗೋಡೌನ್, ಆಫೀಸ್ ರೂಂ, ಮೆಟ್ಟಿಲುಗಳು, ಟ್ಯಾಂಕ್, ಉಪಗೃಹ, ದೊಡ್ಡ ಮರಗಳು, ಭೂಮಿ ಮೇಲೆ ವಾಟರ್ ಟ್ಯಾಂಕ್.

9.ಮಲಗುವ ಮನೆ, ಸ್ಟೋರ್, ಆಫೀಸ್ರೂಂ, ಮಷಿನರಿ, ಗೋಡೌನ್, ಒವರ ಹೆಡ್ ಟ್ಯಾಂಕ್ ಮೆಟ್ಟಿಲು, ಉಪಗೃಹ, ದೊಡ್ಡ ಮರಗಳು.

10.ಮಲಗುವ ಮನೆ, ಸ್ಟೋರ್, ಟಾಯ್ಲೆಟ್, ಮೆಟ್ಟಿಲುಗಳು, ಮರಗಳು.

11.ಬಾಗಿಲು, ಗೇಟು, ಡ್ರಾಯಿಂಗ್, ಡೈನಿಂಗ್, ಲಿವಿಂಗ್, ಟಾಯ್ಲೆಟ್, ಮೆಟ್ಟಿಲು ಮರಗಳು, ಉಪಗೃಹ, ಮಲಗುವ ಮನೆ.

12.ಬಾಗಿಲು, ಗೇಟು ಡ್ರಾಯಿಂಗ್, ಲಿವಿಂಗ್, ಟಾಯ್ಲೆಟ್, ಮಲಗುವ ಮನೆ, ಕೊಟ್ಟಿಗೆ, ಧಾನ್ಯದ ಮನೆ, ಅಡುಗೆ ಮನೆ, ಭೂಮಿ ಮೇಲೆ ವಾಟರ್ಟ್ಯಾಂಕ್.

13.ಅಡುಗೆ ಮನೆ, ಲಿವಿಂಗ್, ಟಾಯ್ಲೆಟ್, ಮಲಗುವ ಮನೆ, ಮೆಟ್ಟಲು, ಗಿಡಗಳು.

14.ಮಕ್ಕಳು ಮಲಗುವ ಮನೆ, ಡೈನಿಂಗ್-ಲಿವಿಂಗ್-ಸ್ಟಡಿ ರೂಂ, ಟಾಯ್ಲೆಟ್, ಗೋಬರ್ ಗ್ಯಾಸ್, ಗಿಡಿಗಳು, ಭೂಮಿ ಮೇಲೆ ವಾಟರ್ಟ್ಯಾಂಕ್.

15.ಬಾಗಿಲು, ಗೇಟು, ಡ್ರಾಯಿಂಗ್, ಲಿವಿಂಗ್, ಪೂಜಾಗೃಹ, ತುಳಸಿಗಿಡಗಳು.

16.ಬಾಗಿಲು, ಗೇಟು, ಬಾವಿ, ವರಾಂಡಾ, ಪೂಜಾಗೃಹ, ಲಿವಿಂಗ್, ಡ್ರಾಯಿಂಗ್.

ಈ ಬೇಸಿಗೆಯ ಬಿಸಿಲಿನಂತೆ ಬೆಲೆ ಏರುತ್ತಿರುವ ಈ ಸಮಯದಲ್ಲಿ ಎಲ್ಲಾ ವಾಸ್ತು ಶಾಸ್ತ್ರಗಳನ್ನು ಪಾಲಿಸುವುದು ಅಸಾಧ್ಯ.ಆದ್ದರಿಂದ ಇರುವ ಜಾಗದಲ್ಲಿ ಸಾಧ್ಯವಾದಷ್ಟು ವಾಸ್ತು ಶಾಸ್ತ್ರಗಳನ್ನು ಪಾಲಿಸಿ ಮನೆಕಟ್ಟುವುದು ಲೇಸು. ಮನೆಯ ಮುಖ್ಯದ್ವಾರ, ಅಡುಗೆಮನೆ, ಟಾಯ್ಲೆಟ್, ಬಾತ್ರೂಂ, ವಾಟರ್ ಟ್ಯಾಂಕ್, ದೇವರ ಮನೆ ಇಷ್ಟನ್ನು ಪಾಲಿಸಿದರೆ ಸಾಕು.

ಮಧುರ ಬಾಂಧವ್ಯಕ್ಕೆ ಫೆಂಗ್ ಶುಯ್ ವಾಸ್ತು ಯೋಗೀಶ ಹೊಳ್ಳ ಪುತ್ತೂರು

ಚೀನಾ ಮೂಲದ ಫೆಂಗ್ಶುಯಿ ಭಾರತದ ವಾಸ್ತುಶಾಸ್ತ್ರದಷ್ಟೇ ಪವಿತ್ರ ಮತ್ತು ಮಹತ್ವದ್ದು . ಈ ಬಗ್ಗೆ ಭಾರತೀಯ ರಿಯಲ್ ಎಸ್ಟೇಟ್ ಉದ್ಯಮ ಕೂಡ ಹೆಚ್ಚಿನ ಆಸಕ್ತಿ ತಳೆದಿವೆ.

ನಿಮ್ಮ ಕನಸಿನ ಮನೆ ಸರಳ, ಸುಂದರ ಹಾಗೂ ಪ್ರಶಾಂತವಾಗಿರಬೇಕೆಂದರೆ ಹೆಚ್ಚು ಶ್ರಮವಹಿಸಬೇಕಿಲ್ಲ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿಲ್ಲ. ಅಲ್ಪ ಮೊತ್ತದಲ್ಲೇ ಸುಂದರ ಹಾಗೂ ಓರಣವಾಗಿ ನಿರೂಪಿಸಬಹುದು. ಫೆಂಗ್ಶುಯಿ ಶಾಸ್ತ್ರ ತಿಳಿಸಿರುವ ಸಿಂಪಲ್ ಟೆಕ್ನಿಕ್ ಉಪಯೋಗಿಸಿದರೆ ಸಾಕು. ಫೆಂಗ್ಶುಯಿ ಎಂದರೆ ಗೊಂದಲ ರಹಿತ ಮನೆ ನಿರ್ಮಾಣ ಎಂದರ್ಥ.

ಫೆಂಗ್ಶುಯಿ ಆಧಾರದಲ್ಲಿ ಮನೆ ನಿರ್ಮಾಣ ಮಾಡುವುದರಿಂದ ಅಲ್ಲಿ ಸಮರಸವಾದ, ಸುಸಂಗತ, ಏಕಶ್ರುತಿಯಾಗಿ ಏಕೀಭವಿಸಿದ, ಭಿನ್ನಾಭಿಪ್ರಾಯವಿಲ್ಲದ, ವೈಷಮ್ಯವಿಲ್ಲದ, ಇಂಪಾದ, ಮಧುರವಾದ ಬಾಂಧವ್ಯ ಇರುತ್ತದೆ. ಮನೆಯೊಳಗೆ ಫಲಕಾರಿ, ಪರಿಣಾಮಕಾರಿ ಚಿಂತನೆ ಮೂಡುತ್ತದೆ. ನಿವಾಸಿಗಳ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆ, ಪರಸ್ಪರ ಒಲವು ಹೆಚ್ಚಾಗುತ್ತದೆ. ಅಂದರೆ ಗೊಂದಲ ರಹಿತ ಮನೆ ನಿರ್ಮಾಣ ಸಾಧ್ಯ. ಅಲ್ಲಿ ನೆಮ್ಮದಿ ಮನೆ ಮಾಡಿರುತ್ತದೆ.

ಒಬ್ಬ ವ್ಯಕ್ತಿಯ ಮನಸ್ಥಿತಿಯು ಅಲ್ಲಿನ ಪರಿಸರದ ಮೇಲೆ ಆಧಾರಿತವಾಗಿರುತ್ತದೆ. ಮನೆ ಅಥವಾ ಕೊಠಡಿಯೊಳಗೆ ಇರುವ ಎನರ್ಜಿಯ ಮೇಲೆ ವ್ಯಕ್ತಿಯ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ. ಇದು ಅವರ ಮಾನಸಿಕ ಒತ್ತಡ, ಸ್ಥಿಮಿತ, ಏಕಾಗ್ರತೆ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ವ್ಯಕ್ತಿ ಮಾನಸಿಕವಾಗಿ ಕುಗ್ಗಿದ್ದರೆ ಮತ್ತಷ್ಟು ದುಷ್ಪರಿಣಾಮ ಎದುರಿಸಬೇಕಾದ ಸಾಧ್ಯತೆ ಇದೆ. ಮನೆ, ಕೊಠಡಿಯೊಳಗೆ ಪ್ರವೇಶಿಸಿದ ವೇಳೆ ಅಲ್ಲಿನ ಪಾಸಿಟಿವ್ ಎನರ್ಜಿಗೆ ಆತನ ಚಹರೆಯನ್ನೇ ಬದಲಾಯಿಸುವ ಶಕ್ತಿ ಇರುತ್ತದೆ. ಇದರಿಂದಾಗಿ ಆತನ ನಡತೆಯೇ ಬದಲಾಗುವ ಸಾಧ್ಯತೆ ಇರುತ್ತದೆ. ಇಂತಹ ಪಾಸಿಟಿವ್ ಎನರ್ಜಿಯನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಫೆಂಗ್ಶುಯಿ ಶಾಸ್ತ್ರದ ಆಧಾರದಲ್ಲಿ ನಿರ್ಮಾಣ ಮಾಡಿರುವ ಮನೆಯಲ್ಲಿ ನೆಲೆಯಾಗಿರುತ್ತದೆ.

ಮನೆ ಪ್ರವೇಶ. ಎಲ್ಲ ರೀತಿಯ ಎನರ್ಜಿ ಈ ಬಾಗಿಲ ಮೂಲಕವೇ ಪ್ರವೇಶಿಸುತ್ತದೆ. ಫೆಂಗ್ಶುಯಿ ಪ್ರಕಾರ ಪ್ರಧಾನ ಬಾಗಿಲು ಬಾಯಿ ಇದ್ದ ಹಾಗೆ. ಇದರಿಂದಾಗಿ ಬಾಗಿಲ ಸನಿಹ ಯಾವುದೇ ಅನಗತ್ಯ ಸೊತ್ತುಗಳನ್ನು ಇಡಬಾರದು. ಬಾಗಿಲು ವಿಶಾಲವಾಗಿರಬೇಕು. ಯಾವುದೇ ಅಡ್ಡಗೋಡೆ ಇರಬಾರದು. ತ್ಯಾಜ್ಯಗಳು ಇರಲೇ ಬಾರದು.

ಅಡುಗೆ ಕೋಣೆಯು ಆರೋಗ್ಯವನ್ನು ಪ್ರತಿನಿಧಿಸುತ್ತದೆ. ಅದರಲ್ಲೂ ದೇಹದ ಲಿವರ್ಗೆ ಅಡುಗೆ ಕೋಣೆ ಸಮಾನ ಎಂಬುದು ಫೆಂಗ್ಶುಯಿ ಹೇಳುತ್ತದೆ. ಸ್ವಚ್ಛತೆ ಮತ್ತು ಸುವ್ಯವಸ್ಥೆಗೆ ಇಲ್ಲಿ ಪ್ರಧಾನ ಆದ್ಯತೆ ನೀಡಲಾಗಿದೆ. ನಿಮಗೆ ಬೇಸರವಾಗುವ ಸಂಗತಿಯನ್ನು ಮನೆಯಿಂದ ಹೊರಗೆ ಹಾಕಿದರೆ ಅದು ಮನಸ್ಸಿನಿಂದಲೂ ಹೊರಗೆ ಹೋಗುತ್ತದೆ ಎನ್ನುತ್ತದೆ ಫೆಂಗ್ ಶುಯಿ. ಆದ್ದರಿಂದ ಮನೆಗೆ, ಮನಕ್ಕೆ ಮುದ ನೀಡುವ ನಗು ತರುವ ಕೆಲವು ಫೋಟೋ ಫ್ರೇಂಗಳನ್ನು ಮನೆಯಲ್ಲಿ ತೂಗು ಹಾಕಿ. ಇದು ಅಲಂಕಾರಕ್ಕೂ ಚೆಂದ. ಮನಕ್ಕೂ ಶಾಂತಿ ನೀಡುತ್ತದೆ.

ಏನೇನಿರಲಿ ?

*ಉಲ್ಲಾಸಕ್ಕಿರಲಿ ಈ ಬಣ್ಣ ಕೆಲವು ಬಣ್ಣಗಳು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ ಎಂದಿದೆ ಫೆಂಗ್ಶುಯಿ. ಆದ್ದರಿಂದ ಮನೆಗೆ ತಿಳಿ ನೀಲಿ ಅಥವಾ ತಿಳಿ ಹಸಿರು ಬಣ್ಣವನ್ನು ಬಳಸಿದರೆ ಅದು ಧನಾತ್ಮಕ ಪರಿಣಾಮ ಬೀರುತ್ತದೆ ಎಂದಿದೆ. ವೈಜ್ಞಾನಿಕವಾಗಿ ಗಮನಿಸಿದರೆ ಮನಶಾಸ್ತ್ರದಲ್ಲೂ ಬಣ್ಣದ ಉಲ್ಲೇಖ ಇದೆ.

*ಸ್ಥಳಾವಕಾಶ

ಹೆಚ್ಚು ಇಕ್ಕಟ್ಟಿದ್ದರೆ ಮನಸ್ಸೂ ಕೂಡ ಸಮಸ್ಯೆಯ ಗೂಡಾಗುತ್ತದೆ. ಆದ್ದರಿಂದ ಮನೆಯ ಪೀಠೋಪಕರಣಗಳ ನಡುವೆ ಜಾಗವನ್ನು ಬಿಟ್ಟರೆ ಮನೆ ನೋಡಲೂ ಚೆಂದ, ಓಡಾಡಲೂ ಸರಾಗ, ಮನಸ್ಸೂ ವಿಶಾಲವಾಗುತ್ತದೆ ಎಂದು ತಿಳಿಸಿದೆ.

*ಚೆಂದದ ಗಿಡ, ಹೂವು

ನೈಸರ್ಗಿಕ ಅಂಶವನ್ನು ಮನೆಯಲ್ಲಿಟ್ಟರೆ ಅದು ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಆದ್ದರಿಂದ ಹೊಸ ಜೀವನ, ಬೆಳವಣಿಗೆ ಮತ್ತು ಜೀವಕುಲದ ಸಂಕೇತವಾಗಿರುವ ಗಿಡ, ಹೂವುಗಳನ್ನು ಮನೆಯಲ್ಲಿಟ್ಟರೆ ಮನೆ ಮನ ಹಸನಾಗಿರುತ್ತದೆ ಎಂದಿದೆ ಚೈನೀಸ್ ಭವಿಷ್ಯ.

*ಗಾಜಿನ ವಸ್ತುಗಳು

ನಿಮ್ಮ ಮನೆಯಲ್ಲಿ ಗಾಜಿನ ವಸ್ತುಗಳು, ಸೋಫಾ ಇನ್ನಿತರ ಮೆತ್ತಗಿನ ವಸ್ತುಗಳನ್ನೂ ಇಡಿ. ಗಾಜಿನ ವಸ್ತುಗಳು ಮನಸ್ಸಿನ ಪಾರದರ್ಶಕತೆಯ ಸಂಕೇತ. ಮೆತ್ತಗಿನ ವಸ್ತುಗಳು ನಿಮ್ಮ ಮನಸ್ಸನ್ನೂ ಮೆತ್ತಗಿರುವಂತೆ ಮಾಡುತ್ತದೆ ಎಂದಿದೆ ಭವಿಷ್ಯ.

ವಾಸ್ತು ಜಗತ್ತು: ಪೂರ್ವದ ಶಯನಗೃಹ

ಜೆ.ಕೆ. ಜೈನ್ ಅಷ್ಟ ದಿಕ್ಪಾಲಕರಿಗೆ ವಂದಿಸದೆ ಪೂಜಿಸದೆ ಯಾವುದೇ ಶುಭಕಾರ್ಯ ಪ್ರಾರಂಭಿಸುವುದಿಲ್ಲ. ಅವರು ಸರ್ವತ್ರ ರಕ್ಷಕರು ಎಂಬುದು ಇದರ ಅರ್ಥ. ಅವರನ್ನು ಗೌರವಿಸದಿದ್ದರೆ ಅನಾಹುತಕ್ಕೆ ದಾರಿಮಾಡಿಕೊಟ್ಟಂತೆ. ಹಾಗಾಗಿಯೆ ಪ್ರತಿದಿಕ್ಕಿನ ಕೊಠಡಿಗೂ ಅದರದ್ದೇ ಆದ ಪ್ರಭಾವ ಇದೆ ಎಂಬುದನ್ನು ಅನುಭವದಿಂದ ನಿರ್ಧರಿಸಲಾಗಿದೆ.

ಸರಿದಿಕ್ಕುಗಳಲ್ಲಿ ಶ್ರೇಷ್ಠವಾದದ್ದು ಮತ್ತು ಪವಿತ್ರವಾದದ್ದು ಪೂರ್ವ. ಈ ದಿಕ್ಕಿನ ಅಧಿಪತಿ ನವಗ್ರಹಗಳಲ್ಲಿ ಪರಮ ಪಾವನನಾದ ಸೂರ್ಯ. ಸ್ವರ್ಗದ ಒಡೆಯ ದೇವೇಂದ್ರ ಈ ದಿಕ್ಕಿನಲ್ಲಿಯೆ ಪೂಜಿಸಲ್ಪಡುವುದು. ಬೆಳಗ್ಗೆ ಎದ್ದ ಕೂಡಲೆ ಮಾಡುವ ಪ್ರಥಮ ಕೆಲಸ ಸೂರ್ಯ ನಮಸ್ಕಾರ. ಭಾನುವಿಗೆ ಭಕ್ತಿಯಿಂದ ಬಾಗಿದರೆ ಬಾಳು ಬೆಳಗುವುದು. ವಂಶ ಉದ್ಧಾರವಾಗುವುದು. ಆದಿತ್ಯನಿಗೆ ಅಭಿವಂದನೆ ಎಂದರೆ ಅಷ್ಟಾಂಗ ಯೋಗ ಮಾಡಬೇಕೆಂದು ಅರ್ಥ ಅಲ್ಲ. ಪ್ರಾತಃ ಕಾಲ ಹಾಸಿಗೆಯಿಂದ ಏಳುವಾಗಲೆ ಬಲದ ಕೈಯಿಂದ ನೆಲಮುಟ್ಟಿ ನಮಸ್ಕರಿಸಬೇಕು. ಆ ಮೇಲೆ ಪ್ರಥಮವಾಗಿ ಬಲದ ಕಾಲನ್ನು ನೆಲದ ಮೇಲೆ ಇಟ್ಟು ಹಾಸಿಗೆಯಿಂದ ಏಳಬೇಕು. ಬಳಿಕ ಪೂರ್ವಕ್ಕೆ ಮುಖಮಾಡಿ ಸೂರ್ಯಭಗವಾನನಿಗೆ ಭಕ್ತಿಯಿಂದ ನಮಸ್ಕರಿಸಬೇಕು. ಇದು ಪ್ರತಿಯೊಬ್ಬರು ಜಾತಿಮತ ಲಿಂಗ ಭೇದವಿಲ್ಲದೆ ಮಾಡಬಹುದಾದ ಮತ್ತು ಮಾಡಬೇಕಾಗಿರುವ ದಿನದ ಪ್ರಥಮ ಕರ್ತವ್ಯ.

ಈ ಕ್ರಿಯೆಯಿಂದಾಗಿ ಆ ದಿನ ಸುಖಪ್ರದ ಮತ್ತು ಸಲೀಸಾಗಿ ಸಾಗಿಹೋಗುವುದು. ಯಾವುದೇ ವಿಧದ ಒತ್ತಡಗಳಿಗೆ ಮನಸ್ಸು ಒಳಗಾಗುವುದಿಲ್ಲ. ನೆಮ್ಮದಿಯ ದಿನ ಅದಾಗುವುದು. ಪೂರ್ವಕ್ಕೆ ಶಿರವನಿಟ್ಟು ಮಲಗುವುದರಿಂದ ಶ್ರೇಯಸ್ಸು ಮತ್ತು ಅಭಿವದ್ಧಿ ದೊರೆಯುವುದು. ಅವಿಕಸಿತ ಪ್ರತಿಭೆ ಪ್ರಕಟಗೊಳ್ಳುವುದು ಇಲ್ಲಿಯೆ. ಅಂದರೆ ಮೊಗ್ಗರಳಿ ಹೂವಾದಂತೆ. ವಿದ್ಯಾರ್ಥಿಗಳು ಉನ್ನತ ಶ್ರೇಣಿ ಪಡೆಯಲಿಚ್ಛಿಸುವವರು ಇಲ್ಲಿ ಸಫಲರಾಗುವರು. ಹಠಬಿಡದ ಸಾಧನೆಗೆ ಎಡೆಮಾಡಿಕೊಡುವುದು ಈ ಸ್ಥಳ. ಇದು ಪವಿತ್ರವೂ, ಫಲಿತಾಂಶದಿಂದ ಕೂಡಿರುವುದೂ ಆಗಿದೆ.

ಈ ಕೋಣೆಯ ಪೂರ್ವದ ಕಿಟಕಿಯಲ್ಲಿ ಸುವಾಸನೆ ಭರಿತ ಯಾವುದೇ ಬಣ್ಣದ ಹೂವಿನ ಗಿಡವನ್ನಿಟ್ಟುಕೊಳ್ಳಬೇಕು. ಅದನ್ನು ಅತ್ಯಂತ ಶುಚಿಯಾಗಿಟ್ಟು ಬೆಳೆಸಿ ಜಾಗ್ರತೆಯಿಂದ ಕಾಪಾಡಿಕೊಂಡು ಬರಬೇಕು. ಇದರಿಂದ ಒಟ್ಟು ಫಲಿತಾಂಶ ಇಮ್ಮಡಿಯಾಗುವುದು. ಶುಭ್ರವಾದ ದೀಪ ಇಲ್ಲಿರಬೇಕು. ಸರಕಾರದಲ್ಲಿ ಉನ್ನತ ಹುದ್ದೆ, ರಾಜಕೀಯದಲ್ಲಿ ಹೆಚ್ಚಿನ ಸ್ಥಾನಮಾನ ಇವುಗಳನ್ನು ಪಡೆಯಲು ಇಲ್ಲಿನ ವಾಸ ಬಹಳ ಪ್ರಭಾವ ಬೀರುವುದು. ಅಧಿಕಾರ ಮತ್ತು ಪ್ರಸಿದ್ಧಿ ಸಮೇತ ಉತ್ತಮ ಬಾಳನ್ನು ಬಯಸುವವರು ಇಲ್ಲಿ ಶಯನಗಹ ಏರ್ಪಡಿಸಿಕೊಳ್ಳುವುದು ಶ್ರೇಷ್ಠ. ಇಂತಹವರು ಬರಡುಬಾಳನ್ನು ಬಂಗಾರವಾಗಿ ಬದಲಾಯಿಸಿಕೊಳ್ಳಬಹುದು.

ಅಮೃತ ಶಿಲೆ ನಿಷಿದ್ಧ ಮಲಗುವ ಕೋಣೆಯನ್ನು ಅರ್ಧ ಗೋಡೆ ಕಟ್ಟಿ ನಿರ್ಮಿಸಿಕೊಳ್ಳಬಾರದು. ಕೋಣೆಯ ಒಳಗೆ ನಿರ್ಮಿಸಿದ ಅಥವಾ ಎಲ್ಲಿಯೇ ಕಟ್ಟುವ ಸ್ನಾನದ ಮನೆಗೆ ಅಮತಶಿಲೆಯನ್ನು ಯಾವುದೇ ರೀತಿಯಲ್ಲಿ ಬಳಸಬಾರದು. ಮಾಡಿದರೆ ದೈವದ ಮುನಿಸಿಗೆ ತುತ್ತಾಗಬೇಕಾದೀತು. ಕಾರಣ ಅದು ದೇವ ಶಿಲೆ. ಪೂರ್ವಾರ್ಜಿತ ಪುಣ್ಯದ ಪೂರ್ತಿ ಫಲ ಪೂರ್ವದ ಕೋಣೆಯಲ್ಲಿ ವಾಸಮಾಡುವುದರಿಂದ ಲಭಿಸುವುದು. ಈ ದಿಕ್ಕಿನ ಕೋಣೆಯಲ್ಲಿ ಪೂರ್ವಕ್ಕೆ ಮುಖಮಾಡಿ ಆದಿತ್ಯ ಹೃದಯ ಪಾರಾಯಣ ಮಾಡಿದರೆ ಅತಿ ಹೆಚ್ಚಿನ ಪುಣ್ಯ ಪ್ರಾಪ್ತಿಯಾಗುವುದು. ಪಂಚಭೂತಗಳಿಗೂ ನವಗ್ರಹಗಳಿಗೂ ಆಧಿದೇವತೆಯಾದ ಭಗವಾನ್ ಸೂರ್ಯ ದೇವನು ಪ್ರಸನ್ನನಾದರೆ ಬಾಳು ನಂದನವಾಗುವುದು. ಇಲ್ಲವಾದರೆ ಜೀವನ ಪೂರ್ತಿ ಆಕ್ರಂದನವೇ ಆವರಿಸಿ ಬಿಟ್ಟೀತು. ಅಧಿಕಾರ ಅಂತಸ್ತು ಮತ್ತು ಶ್ರೇಯಸ್ಸು ಇಲ್ಲಿನ ಫಲಭಾಗ.

ನೆಮ್ಮದಿಯ ಬದುಕು ನಿರೂಪಿಸುವ ಧ್ವನಿಗತಿ ಶಾಸ್ತ್ರ - ಯೋಗೀಶ ಹೊಳ್ಳ ಪುತ್ತೂರು

ಅದೊಂದು ಕಟ್ಟಡ. ಸಂಜೆಯಾಗುತ್ತಲೇ ಭಯಾನಕ ಧ್ವನಿ. ವಿಚಿತ್ರ ಧ್ವನಿ. ಎಲ್ಲೋ ಯಾರೋ ಕೂಗಿದ ಅನುಭವ. ಮಧ್ಯರಾತ್ರಿಯಾಗುತ್ತಿದ್ದಂತೆ ಕಿಟಕಿಯ ಹೊರಗೆ, ಒಳಗೆ ಯಾರೋ ಹರಿದಾಡಿದ ಅನುಭವ. ಬಾಗಿಲು ಬಡಿದ ಅನುಭವ. ಇಂತಹ ಮನೆಯಲ್ಲಿ ನೆಮ್ಮದಿಯಾದರೂ ಹೇಗಿರಲು ಸಾಧ್ಯ. ಮನೆಯಲ್ಲಿ ಎಲ್ಲರಿಗೂ ಅಶಾಂತಿ. ಜೀವನ ನಡೆಸಲು ಹೆದರಿಕೆ. ಅಂಜಿಕೆ. ದುಗುಡ. ಎಷ್ಟು ಹೊತ್ತಿಗೆ ಯಾವ ರೀತಿಯ ಧನಿ ಕೇಳುತ್ತದೆ ಎಂಬ ಅಂಜಿಕೆ. ಯಾಕಾದರೂ ಇಂತಹ ಮನೆಯನ್ನು ಖರೀದಿ ಮಾಡಿದೆ ಎಂಬ ಚಿಂತೆ. ಕೊನೆಗೆ ಮನೆಯನ್ನು ಮೂರು ಕಾಸಿಗೆ ಮಾರಾಟ ಮಾಡಿ ಕೈ ತೊಳೆಯುವ ಪರಿಸ್ಥಿತಿ.

ಇಂತಹ ನೈಜ ಕಥೆ ಪ್ರತಿಯೊಂದು ಊರಿನಲ್ಲೂ ಇರುತ್ತದೆ. ಅದರಲ್ಲೂ ಪ್ರಮುಖವಾಗಿ ಅತ್ಯಕ ಗಾಳಿ ಬೀಸುವ ಪ್ರದೇಶಗಳಲ್ಲಿ ಇವು ಸಾಮಾನ್ಯವಾಗಿವೆ. ಕೊನೆಗೆ ಇಂತಹ ಮನೆಗಳಿಗೆ ಭೂತದ ಬಂಗೆಲೆ ಎಂಬ ಹೆಸರನ್ನು ಕಟ್ಟಿ ಬಿಡುತ್ತಾರೆ. ಮಾನಸಿಕ ನೆಮ್ಮದಿ ಹಾಗೂ ಆರೋಗ್ಯಕ್ಕೆ ಅವಿನಾಭಾವ ಸಂಬಂಧ. ಹೆದರಿಕೆ, ಅಂಜಿಕೆ ಎಂಬುದು ಮನುಷ್ಯನನ್ನೇ ಬಲಿ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಇಂತಹ ಮನೆಯಲ್ಲಿ ವಾಸಿಸುವವರು ಮಾನಸಿಕವಾಗಿ ಕೊರಗಿ ಕೊನೆಗೆ ದೈಹಿಕ ಅನಾರೋಗ್ಯಕ್ಕೀಡಾಗುತ್ತಾರೆ. ಇದಕ್ಕೆ ಪ್ರಮುಖ ಕಾರಣ ಧ್ವನಿಗತಿ ಶಾಸ್ತ್ರ. ಧ್ವನಿಗತಿ ಶಾಸ್ತ್ರವನ್ನು ಸಂಪೂರ್ಣವಾಗಿ ಅಧ್ಯಯನ ನಡೆಸದೆ ಕಟ್ಟಡ ನಿರ್ಮಾಣ ಮಾಡಿದರೆ ಇಂತಹ ಸಮಸ್ಯೆ ಎದುರಿಸಬೇಕಾಗುತ್ತದೆ.ಸುಂದರ ಮನೆ. ಅಲ್ಲೊಂದು ಪುಟ್ಟ ಸಂಸಾರ. ನೆಮ್ಮದಿಯ ಬದುಕು. ಮನಸ್ಸಿಗೆ ಅಹ್ಲಾದಕರ ವಾತಾವರಣ ಸಿಗಬೇಕು. ಅಲ್ಲಿ ಶಾಂತಿ, ನೆಮ್ಮದಿ ಸದಾ ನಲಿಯುತಿರಬೇಕು ಎಂದರೆ ಧ್ವನಿಗತಿ ಶಾಸ್ತ್ರದ ಆಧಾರದಲ್ಲಿರಬೇಕು. ಧ್ವನಿಗತಿ ಶಾಸ್ತ್ರಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ. ಧ್ವನಿಶಾಸ್ತ್ರ ಎಂಬುದು ತನ್ನ ಕಾಲ ಮೇಲೆಯೇ ನಿಲ್ಲುವಂತಹ ವಿಜ್ಞಾನ.ಪ್ರಸ್ತುತ ಸಮಾಜದಲ್ಲಿ ವಾಸ್ತುಶಾಸ್ತ್ರ, ವಿನ್ಯಾಸ, ಒಳಾಂಗಣ ವಿನ್ಯಾಣ, ಬಣ್ಣದ ಬಗ್ಗೆ ಚಿಂತನೆ, ಮರು ಚಿಂತನೆ ನಡೆಸುತ್ತಾರೆ. ಆದರೆ ಧ್ವನಿಗತಿ ಶಾಸ್ತ್ರದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಮನೆಯಲ್ಲಿ ಶಾಂತಿ ನೆಮ್ಮದಿ ಕಾಣಬೇಕಾದರೆ ಎಲ್ಲವೂ ಸರಿ ಇರಬೇಕು. ಒಂದು ಕೊರತೆ ಇದ್ದರೂ ಅದು ಮಾನಸಿಕ ಅಶಾಂತಿಗೆ ಕಾರಣ ವಾಗಬಹುದು. ಮನೆ ನಿರ್ಮಾಣ ಅಥವಾ ಖರೀದಿ ಮಾಡುವಾಗ ಕಟ್ಟಡದ ವಾಸ್ತು, ಗಾಳಿ, ಬೆಳಕಿನ ಹರಿವು, ಧ್ವನಿಗಳ ಸ್ಪಷ್ಟತೆ, ಅಚ್ಚುಕಟ್ಟುತನವನ್ನು ಗಮನಿಸಬೇಕಾಗುತ್ತದೆ. ಎಲ್ಲರೂ ವಾಸ್ತು ವಿಚಾರದಲ್ಲಿ ಚಿಂತನೆ, ಚರ್ಚೆ ನಡೆಸುತ್ತಾರೆ. ಹತ್ತು ಹಲವು ವಾಸ್ತು ತಜ್ಞರ ಬಳಿಗೆ ಭೇಟಿ ನೀಡುತ್ತಾರೆ. ಅವರ ಸಲಹೆ ಸೂಚನೆಗಳನ್ನು ಪಾಲಿಸುತ್ತಾರೆ. ಆದರೆ ಧ್ವನಿಗತಿ ಶಾಸ್ತ್ರದ ಬಗ್ಗೆ ಯಾರೂ ಚಿಂತಿಸುವುದಿಲ್ಲ.ಧ್ವನಿ ಇಡೀಗ ಮನುಷ್ಯನ ಸಂವಹನ ಕ್ರೀಯೆಯ ಪ್ರಮುಖ ವಿಚಾರ. ಧ್ವನಿಯಲ್ಲಿ ಅಲ್ಪ ಏರುಪೇರಾದರೂ ಶ್ರುತಿ ತಪ್ಪುತ್ತದೆ. ಶ್ರುತಿ ಎಂಬುದು ಕೇವಲ ಸಂಗೀತಕ್ಕೆ ಮಾತ್ರ ಇರುವುದಲ್ಲ?. ಜೀವನದಲ್ಲೂ ಶ್ರುತಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅಪಶ್ರುತಿಯಾದರೆ ಸಂಗೀತ ಕೇಳಲು ಸಾಧ್ಯವಿಲ್ಲ, ಮನಸ್ಸಿಗೆ ಮುದ ನೀಡುವ ಸಂಗೀತವೂ ಕರ್ಕಶವಾಗಬಹುದು. ಕೇಳಲು ಇಂಪಾಗಿ ಮನಸ್ಸಿಗೆ ನೆಮ್ಮದಿ ನೀಡುವ ಸಂಗೀತವೂ ಮನಸ್ಸಿಗೆ ಕಿರಿಕಿರಿಯಾಗಬಹುದು. ಸಂಗೀತ ಸುಶ್ರಾವ್ಯವಾಗಬೇಕಾದರೆ ಧ್ವನಿ ಸರಿಯಾಗಿರಬೇಕು. ಹಾಡುಗಾರನ ಧ್ವನಿ, ಪರಿಸರ, ಧ್ವನಿ ವರ್ಧಕವು ಸಂಗೀತದ ಗತಿಯನ್ನು ನಿರ್ಧರಿಸುತ್ತದೆ. ಎಷ್ಟೇ ಒಳ್ಳೆಯ ಹಾಡುಗಾರನಿದ್ದರೂ ಆತನಿಗೆ ಸೂಕ್ತ ಪರಿಸರ ಇಲ್ಲದಿದ್ದರೆ ಪ್ರತಿಧ್ವನಿ ಕೇಳಬಹುದು. ಅಷ್ಟೊತ್ತಿಗೆ ಸುಮಧುರ ಸಂಗೀತ ಕೇಳುಗನಿಗೆ ಇಂಪಾಗಿರುವುದಿಲ್ಲ?. ಅದೇ ರೀತಿ ಮಾತನಾಡುವ ಧ್ವನಿಯೂ ಮನಸ್ಸಿಗೆ ಉಲ್ಲಾಸಿತವಾಗಬೇಕು. ಅಲ್ಲಿ ಸ್ಪಷ್ಟತೆ ಇರಬೇಕು. ಯಾವುದೇ ಡಿಸ್ಟರ್ಬ್ ಇರಬಾರದು. ಹಾಗಿದ್ದಲ್ಲಿ ಅಲ್ಲಿ ಎಲ್ಲವೂ ಸರಿಯಾಗಿರುತ್ತದೆ.ಮನೆ ಅಥವಾ ಕಚೇರಿ ಆಯ್ಕೆಯ ವೇಳೆ ಧ್ವನಿಗತಿ ಶಾಸ್ತ್ರದ ಆಧಾರದಲ್ಲಿ ನಿರ್ಮಾಣ ಮಾಡಬೇಕು. ಎಲ್ಲೂ ಪ್ರತಿಧ್ವನಿ ಇರದಂತೆ ನೋಡಬೇಕು. ಧ್ವನಿಗತಿ ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡಿದರೆ ಅಲ್ಲಿ ಎಲ್ಲ ಧ್ವನಿಗಳು ಅಸ್ಪಷ್ಟತೆ ಇರುತ್ತದೆ. ಮೆಲ್ಲಗೆ ಮಾತನಾಡಿದರೂ ಜೋರಾಗಿ ಕೇಳುವುದು, ಜೋರಾಗಿ ಮಾತನಾಡಿದರೂ ಮೆಲ್ಲಗೆ ಕೇಳಿಸುವುದು, ಮಾತುಗಳು ಅಸ್ಪಷ್ಟವಾಗಿ ಕೇಳುವುದು, ಪ್ರತಿಧ್ವನಿ ಕೇಳುವುದು... ಹೀಗೆ ಯಾವುದೇ ಸಮಸ್ಯೆ ಇದ್ದರೂ ಅಲ್ಲಿ ಏನೋ ಮನಸ್ಸಿಗೆ ಮುದ ಸಿಗುವುದಿಲ್ಲ.ಕೊಠಡಿ ಅಥವಾ ಮನೆಯೊಳಗೆ ಧ್ವನಿಯ ಶಕ್ತಿಯ ಒಳ ಹರಿವು ಎಷ್ಟಿರುತ್ತದೆ ಎಂಬುದು ಕೊಠಡಿ ಅಥವಾ ಮನೆಯ ಕಾಂತ ಕ್ಷೇತ್ರಗಳಿಂದ ಆಗಬಹುದಾದ ಅನಪೇಕ್ಷಿತ ಪರಿಣಾಮಗಳನ್ನು ಎಷ್ಟು ಪ್ರಮಾಣದಲ್ಲಿ ಹೀರುತ್ತದೆ ಎಂಬುದರ ಆಧಾರದಲ್ಲಿರುತ್ತದೆ. ಧ್ವನಿಯ ಹೀರುವಿಕೆಯಲ್ಲಿ ಎರಡು ವಿಭಾಗಗಳಿರುತ್ತದೆ. ಅಂದರೆ ಕೊಠಡಿ ಅಥವಾ ಮನೆಯ ಸುತ್ತ ಇರುವ ಗೋಡೆ -ಮೇಲ್ಚಾವಣಿ-ಕೆಳಚಾವಣಿ, ಕೊಠಡಿಯೊಳಗಿನ ಪೀಠೋಪಕರಣ, ಸಲಕರಣೆ ಎಷ್ಟು ಪ್ರಮಾಣದಲ್ಲಿ ಧ್ವನಿಯನ್ನು ಗ್ರಹಿಸುತ್ತದೆ ಮತ್ತು ಕೊಠಡಿಯಿಂದ ಹೊರಕ್ಕೆ ಹರಿದುಹೋಗುವ ಧ್ವನಿಯ ಪ್ರಮಾಣ ಪ್ರಮುಖ ಪಾತ್ರ ವಹಿಸುತ್ತದೆ. (ಇದಕ್ಕೆ ಉದಾಹರಣೆ ಎಂಬಂತೆ ಕೆಲವೊಂದು ಸಭಾಂಗಣಗಳಲ್ಲಿ ಧ್ವನಿ ಸರಿಯಾಗಿ ಕೇಳದಿದ್ದರೆ ಸಭಾಂಗಣದ ಮೇಲ್ಬಾಗದಲ್ಲಿ ಮಣ್ಣಿನ ಮಡಕೆ ಕಟ್ಟುತ್ತಾರೆ. ಕೆಲವರು ಕಾರ್ಪೆಟ್, ಮೃದು ಪೀಠೋಪಕರಣ, ಕರ್ಟನ್ ಕಟ್ಟಿರುತ್ತಾರೆ).ಕೊಠಡಿಯಲ್ಲಿನ ಪೀಠೋಪಕರಣ ಅಥವಾ ಸಲಕರಣೆಗಳು ಬೇರೆ ಬೇರೆ ರೀತಿಯ ಧ್ವನಿಗಳ ಟ್ಯೂನ್ ಹೀರುವಿಕೆಯ ಸಾಮರ್ಥ್ಯ ಇರುತ್ತದೆ. ಇದರಿಂದಾಗಿ ಕೊಠಡಿಯೊಳಗಿನ ಸಲಕರಣೆ ಜೋಡಿಸುವಾಗ ಸರಿಯಾಗಿ ಗಮನಿಸಬೇಕಾಗುತ್ತದೆ. ಮಾತ್ರವಲ್ಲದೆ ಸರಿಯಾಗಿ ಜೋಡಿಸಿರಬೇಕಾಗುತ್ತದೆ. ಒಂದು ಕಟ್ಟಡ ನಿರ್ಮಾಣ ಮಾಡಬೇಕಾದರೆ ಧ್ವನಿಶಾಸ್ತ್ರದ ಅಧ್ಯಯನ ಅಥವಾ ತಜ್ಞರಿಂದ ಅಭಿಪ್ರಾಯ ಪಡೆದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.

ವಾಸ್ತು : ಮನೆಯ ಮೇಲೆ ಮಾರ್ಗದ ಪ್ರಭಾವ * ಜೆ.ಕೆ. ಜೈನ್

ಮಾನವ- ಮನೆ- ಮಾರ್ಗ; ಇವು ಒಂದರ ಮೇಲೊಂದು ಪ್ರಭಾವಿತಗೊಂಡಿರುವ ಪ್ರಮುಖ ಮೂರು ವಾಸ್ತುವಿನ ವಾಸ್ತವಾಂಶಗಳು. ಇವು ಒಂದನ್ನೊಂದು ಬಿಟ್ಟಿರಲಾರವು. ಪರಸ್ಪರ ಪ್ರಭಾವ ಬೀರದೆ ತಮ್ಮ ಅಸ್ಥಿತ್ವವನ್ನು ಸ್ಥಿರಗೊಳಿಸಲಾರವು. ದಾರಿಗೂ ನೀತಿ ನಿಯಮಗಳಿಗೂ ಹತ್ತಿರದ ನಂಟು. ವಕ್ರಬುದ್ಧಿಯವರನ್ನು ದಾರಿ ತಪ್ಪಿದ ಮಗ ಎಂದು ಕರೆಯುವುದು ಸಾಮಾನ್ಯ. ಹಾಗೇನೆ ಮಾರ್ಗದ ನಡೆ ಮನೆಯಲ್ಲಿ ವಾಸಿಸುವವರ ಜೀವನದ ಮೇಲೆ ಬಹತ್ ಪ್ರಭಾವ ಬೀರುತ್ತದೆ. ಇದು ನಂಬಲು ಕಷ್ಟವಾದರೂ ಸತ್ಯ ಸಂಗತಿ. ಹೀಗೇನೆ ಪ್ರಪಂಚದಲ್ಲಿ ಎಲ್ಲವೂ ನಿಗೂಢತೆಯಿಂದ ಕೂಡಿದೆ. ಇದನ್ನು ಭೇದಿಸಲು ಮಾನವ ಇನ್ನೂ ಸಮರ್ಥನಾಗಿಲ್ಲ. ತನ್ನ ಗುಟ್ಟನ್ನು ಯಾರಿಗೂ ಬಿಟ್ಟು ಕೊಡದೆ ಇರುವುದೇ ಈ ಜಗತ್ತಿನ ನಿಜವಾದ ವೈಶಿಷ್ಟ್ಯತೆ. ಇದನ್ನು ಅರಿಯುವ ವಿಧಾನಕ್ಕೆ ವಿದೇಶೀಯರು ಮಿಸ್ಟಿಕ್ ಸಾಯನ್ಸ್ ಎಂದು ಕರೆದರು. ಅಂದರೆ, ನಿಗೂಢ ವಿಜ್ಞಾನ ಎಂದು ಅರ್ಥ.

ನಿವೇಶನದ ಅಥವಾ ಮನೆಯ ರಸ್ತೆ ದಕ್ಷಿಣದಿಂದ ಉತ್ತರಕ್ಕೆ ಇಳಿಜಾರಾಗಿ ಹರಿದರೆ ಅತಿಶ್ರೇಷ್ಠಪಲ. ಇಂತಹ ಮಾರ್ಗದ ನಡೆಯ ಎದುರು ಪೂರ್ವ ಅಭಿಮುಖವಾಗಿ ನಿರ್ಮಿಸಿದ ಕಟ್ಟಡಗಳು ಬಹಳ ಪ್ರಸಿದ್ಧಿ ಪಡೆದು ಅತಿ ಉನ್ನತಮಟ್ಟದಲ್ಲಿ ಅಭಿವದ್ಧಿಯನ್ನು ಹೊಂದುತ್ತವೆ. ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿ ರಸ್ತೆ ಮುನ್ನಡೆದರೂ ಶುಭಪಲವುಂಟು. ಉತ್ತಮ ಅಭಿವದ್ಧಿಗೆ ತೊಂದರೆ ಇಲ್ಲ. ಆದರೆ ನಿವೇಶನದ ಮೂಲೆಯಲ್ಲಿ ಅಡ್ಡವಾಗಿ ನಿರ್ಮಿಸಿದ ರಸ್ತೆಗಳು ಹೆಚ್ಚಿನ ಲಾಭವನ್ನು ಕೊಡುವುದಿಲ್ಲ. ಕೆಲವೊಮ್ಮೆ ವಿಶೇಷ ತೊಂದರೆ ಒದಗಿಬರುವುದೂ ಇದೆ.

ಶುಭ ದಿಕ್ಕಿನಲ್ಲಿ ಹರಿಯುವ ರಸ್ತೆಯ ಎದುರಿನ ಆವರಣದ ಗೋಡೆಗೆ ಗ್ರಿಲ್ ಅಳವಡಿಸಬೇಕು. ಇದರಿಂದ ರಸ್ತೆಯ ಶುಭ ವಾಸ್ತುಪ್ರಭಾವ ಎದುರಿನ ಮನೆಗೆ ಲಭಿಸುವುದು. ಅಶುಭದಿಕ್ಕಿನಲ್ಲಿ ರಸ್ತೆ ಇದ್ದರೆ, ಅಥವಾ ಉತ್ತರದಿಂದ ದಕ್ಷಿಣಕ್ಕೆ, ಪೂರ್ವದಿಂದ ಪಶ್ಚಿಮಕ್ಕೆ ತಗ್ಗಾಗಿ ಹರಿದರೆ ಎದುರಿನ ಕಟ್ಟಡದ ನಿವಾಸಿಗಳಿಗೆ ತೊಂದರೆಯೆ ಹೆಚ್ಚು. ಇದನ್ನು ನಿವಾರಿಸಲು ಆವರಣದ ಗೋಡೆಯನ್ನು ಬಾಕಿದಿಕ್ಕಿಗಿಂತ ಸ್ವಲ್ಪ ಎತ್ತರ ಹಾಗೂ ದಪ್ಪವಾಗಿ ಕಟ್ಟಬೇಕು. ಗ್ರಿಲ್ ಅಥವಾ ಕಿಂಡಿಗಳನ್ನು ಈ ದಿಕ್ಕಿನ ಗೋಡೆಗಳಿಗೆ ಅಳವಡಿಸಬಾರದು.

1.ಮನೆಯ ನಾಲ್ಕು ಬದಿಗಳಲ್ಲಿ ರಸ್ತೆ ಇದ್ದರೆ ಶುಭ. 2. ಮನೆಯ ನಾಲ್ಕು ಬದಿಗಳ ನಡುವಿನಲ್ಲಿ ರಸ್ತೆಗಳಿದ್ದರೆ ಮಧ್ಯಮಪಲ.

3. ಶುಭ ಅಲ್ಲ. ಮೂರು ಮಾರ್ಗ ಸೇರುವಲ್ಲಿ ಎದುರಿಗಿರುವ ನಿವೇಶನ - ಶುಭ ಅಲ್ಲ.

4. ಇಂಗ್ಲಿಷ್ 'ವೈ' ಆಕಾರದ ರಸ್ತೆಯ ಎಡೆಯಲ್ಲಿರುವ ನಿವೇಶನ ಅಥವಾ ಮನೆ ಅಭಿವೃದ್ಧಿ ಆಗುವುದಿಲ್ಲ. ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತಹ ಬಾಳು ಬಾಳ ಬೇಕಾಗುತ್ತದೆ. ಇಂತಹ ನಿವೇಶನ ಬಿಟ್ಟುಬಿಡಬೇಕು.

5. ಗೋಮುಖ ಆಕಾರದ ನಿವೇಶನ ರಸ್ತೆಯ ಎದುರಿಗಿದ್ದರೆ - ಗೋಮುಖ. ಮನೆ ನಿರ್ಮಾಣಕ್ಕೆ ಅಡ್ಡಿಯಿಲ್ಲ.

6. ವ್ಯಾಘ್ರಮುಖ ಆಕಾರದ ನಿವೇಶನ ರಸ್ತೆಯ ಎದುರಿಗಿದ್ದರೆ, ವ್ಯಾಘ್ರಮುಖ ವ್ಯಾಪಾರಿ ಸಂಸ್ಥೆಗಳನ್ನು ನಿರ್ಮಿಸಬಹುದು.

7. 'ಟಿ' ಜಂಕ್ಸ್ನ್ ಎದುರಿಗಿರುವ ನಿವೇಶನದ ಪ್ರಭಾವ ದಿಕ್ಕು ಮತ್ತು ಮಾರ್ಗದ ಗಾತ್ರವನ್ನು ಹೊಂದಿಕೊಂಡಿದೆ. ಶುಭದಿಕ್ಕಿನಲ್ಲಿ ಈ ಇಂಗ್ಲಿಷ್ ಖಿ ಆಕಾರದ ರಸ್ತೆಯ ಎದುರು ಮನೆ ನಿರ್ಮಾಣ ತೊಂದರೆ ಇಲ್ಲ. ವಾಹನಗಳು ಎದುರಿನಿಂದ ವೇಗದಿಂದ ಬಂದು ಮನೆಗೆ ನುಗ್ಗುವಂತೆ ಕಾಣುತ್ತಿದ್ದರೆ ಅಲ್ಲಿ ಎತ್ತರವಾದ ಆವರಣ ಗೋಡೆ ನಿರ್ಮಿಸಿದರೆ ದೋಷ ಪರಿಹಾರ ಆಗುತ್ತದೆ. ಈ 'ಟಿ' ಜಂಕ್ಸ್ನ್ ಎಂಬುದು ಹತ್ತಿರದ ಮನೆಗಳಿಗೆ ಕೇವಲ ಸಂಪರ್ಕ ಮಾರ್ಗವಾಗಿದ್ದಲ್ಲಿ ಯಾವುದೇ ದೋಷ ಇಲ್ಲ.

ವಾಸ್ತು ಶಾಸ್ತ್ರದಲ್ಲಿ ಯಾವುದೇ ದೋಷಗಳನ್ನು ಪರಿಹರಿಸಿಕೊಳ್ಳಲು ಸಾಕಷ್ಟು ಅವಕಾಶಗಳಿರುವ ಕಾರಣ ಯಾರೂ ಹೆದರುವ ಅಗತ್ಯ ಇಲ್ಲ. ಆದರೆ ನಿವೇಶನ ಖರೀದಿಗೆ ಮೊದಲು, ಅಥವಾ ಕನಿಷ್ಟ ಮನೆ ನಿರ್ಮಿಸಲು ಪ್ರಾರಂಭಿಸುವುದಕ್ಕೆ ಮೊದಲು ಅನುಭವಿ ವಾಸ್ತು ತಜ್ಞರ ಸಲಹೆ ಪಡೆಯುವುದು ಅಗತ್ಯ. ಇದರಿಂದ ಹಣ ಶ್ರಮ ಉಳಿತಾಯ ಆಗುವುದು. ಮಾನಸಿಕ ಕಿರಿಕಿರಿ ತಪ್ಪಿಸಿಕೊಳ್ಳಬಹುದು. ಹೊಸಮನೆಯಲ್ಲಿ ನವಜೀವನ ಪ್ರಾರಂಭಿಸಿ ಶಾಂತಿ ನೆಮ್ಮದಿಯಿಂದ ಬಾಳಬಹುದು.

ಅಪರೂಪದ ಶುಕ್ರ ಸಂಕ್ರಮಣದ ಫಲಾಫಲ

ಸೂರ್ಯಗ್ರಹಣ-ಚಂದ್ರಗ್ರಹಣಗಳು ಸ್ವಾಭಾವಿಕ. ಇದರ ಹೊರತಾಗಿ ಶುಕ್ರನ ಮೂಲಕವೂ ಗ್ರಹಣವಾಗುತ್ತದೆ. ಇದನ್ನು ಶುಕ್ರ ಸಂಕ್ರಮಣ ಎನ್ನುತ್ತಾರೆ. ಇದು 06-06-2012ನೇ ಬುಧವಾರದಂದು ನಡೆಯಲಿದೆ.

ಅಂದು ಮಧ್ಯರಾತ್ರಿ ಸರಿಸುಮಾರು 3.43ಕ್ಕೆ ಈ ಸಂಕ್ರಮಣ ನಡೆಯಲಿದೆ. ಶುಕ್ರನು ರವಿ ಗ್ರಹದ ಒಳಗೆ ಪ್ರವೇಶಿಸುತ್ತಾನೆ. ಅದೇ ದಿನ ಬೆಳಗ್ಗೆ 10.23ಕ್ಕೆ ನಿರ್ಗಮಿಸುತ್ತಾನೆ. ಇದನ್ನೇ ಶುಕ್ರಗ್ರಹಣ ಎಂದು ಹೇಳಿದರೂ, ರವಿಗ್ರಹದ ಒಳಗೆ ಪ್ರವೇಶಿಸುವುದರಿಂದ ಶುಕ್ರ ಸಂಕ್ರಮಣ ಎಂದು ಹೆಸರಿಸಲಾಗಿದೆ.

ಈ ದಿನ ಪೂರ್ಣ ಆಘಾಢ ನಿತ್ಯ ನಕ್ಷತ್ರ ಆಗಲಿದೆ. ವೃಷಭ ರಾಶಿಯಲ್ಲಿ ಶುಕ್ರನು ರೋಹಿಣಿ ನಕ್ಷತ್ರದಲ್ಲಿರುವನು. ಗ್ರಹಣದ ನೇರ ದೃಷ್ಟಿ ವೃಶ್ಚಿಕ ರಾಶಿಯ ಮೇಲೆ ಇರುವುದು. ಹಾಗಾಗಿ ಈ ಗ್ರಹಣ ದೋಷ ಧನು, ವೃಷಭ ಮತ್ತು ವೃಶ್ಚಿಕ ರಾಶಿಯವರ ಮೇಲೆ ಪ್ರಭಾವ ಬೀರುತ್ತದೆ. ಈ ಫಲ ಸ್ತ್ರೀಯರ ಮೇಲೆ ಪರಿಣಾಮ ಬೀಳಲಿದೆ.

ಈ ಫಲದಂತೆ ಸ್ತ್ರೀಯರು ಇದ್ದಕ್ಕಿದ್ದಂತೆ ಕೋಪಿಷ್ಟರಾಗುವರು. ಸತಿ ಪತಿಯರ ಮಧ್ಯೆ ಕಲಹ ಉಂಟಾಗಬಹುದು. ವಿವಾಹ ನಿಶ್ಚಯ ಈ ಸಮಯದಲ್ಲಿ ಆದರೆ ಅದು ಮುರಿದು ಬೀಳಬಹುದು ಅಥವಾ ಮುಂದಕ್ಕೆ ಹೋಗಬಹುದು. ವಿಚ್ಛೇದನ ಆಗುವ ಸಾಧ್ಯತೆಯೂ ಇದೆ. ಕಫ, ಶೀತ, ಅಸ್ತಮಾ ಸಂಬಂಧ ರೋಗಗಳು ಕಾಡಬಹುದಾದ್ದರಿಂದ ಜಾಗ್ರತೆ ವಹಿಸಬೇಕು. ಆದಷ್ಟು ವಿಮಾನ ಪ್ರಯಾಣ ಮಾಡದಿರುವುದು ಉತ್ತಮ. 45 ವರ್ಷ ಮೀರಿದ ಸ್ತ್ರೀಯರಾಗಿದ್ದರೆ ಗರ್ಭದೋಷ ಸಂಬಂಧ ಅನಾರೋಗ್ಯ ಕಾಡುವ ಸಾಧ್ಯತೆ ಹೆಚ್ಚು. ಹಾಗೆಯೇ ಈ ದಿನ ಪ್ರಥಮ ರಜಸ್ವತಿ ಆದರೆ ವೇದನೆ ಉಂಟಾಗುವ ಸಂಭವ. ಮಕ್ಕಳ ಜನನ ಕಾಲ ಆದರೆ ಕಷ್ಟವಾಗಬಹುದು.

ಇದಕ್ಕೆ ಪರಿಹಾರವೇನು?

ಗ್ರಹಣ ಆಚರಣೆ ಇಲ್ಲ. ಆದರೆ, ಗ್ರಹಣದ ಸಮಯದಲ್ಲಿ ಎಲ್ಲಾ ಸ್ತ್ರೀಯರು ಶ್ರೀ ದುರ್ಗಾ ಪರಮೇಶ್ವರಿ ಅಮ್ಮ ಅಥವಾ ಭಗವತಿ ಮಾತೆಯರ ಅಷ್ಟೋತ್ತರ ಶತಕ ಪಠಿಸತಕ್ಕದ್ದು. ಜೈನರಾದರೆ ಶ್ರೀ ಪದ್ಮಾವತಿ ಅಮ್ಮನವರ ಅಷ್ಟೋತ್ತರ ಹೇಳಬೇಕು. ಕ್ರಿಶ್ಚಿಯನ್ ಧರ್ಮೀಯರು ಮೇರಿ ಅಮ್ಮನವರನ್ನು ಸ್ಮರಿಸಬೇಕು. ಗ್ರಹಣ ಮುಗಿದನಂತರ ದುರ್ಗಾ ಮಾತೆಗೆ ಕುಂಕುಮ ಅರ್ಚನೆ ಅಥವಾ ಹೋಮ ಮಾಡುವುದು. ಜೈನರಾದರೆ ಪದ್ಮಾವತಿ ಅಮ್ಮನವರ ಸ್ಮರಣೆ ಮಾಡತಕ್ಕದ್ದು.

ಇಂತಹ ಅಪರೂಪವಾದ ಗ್ರಹಣ ಈ ಹಿಂದೆ 8-6-2004ರಲ್ಲಿ ಜರುಗಿತ್ತು. ಮುಂದೆ ಇದೇ ರೀತಿ ಗ್ರಹಣವು 11-12-2117ರಂದು ವೃಶ್ಚಿಕ ರಾಶಿಯಲ್ಲಿ ಆಗುವುದು. ಗ್ರಹಣದ ದಿನ ಎಂದರೆ

6-6-2012ರಂದು ಯಾವುದೇ ತರದ ಶುಭ ಕಾರ್ಯಗಳು ಸಲ್ಲದು.

ರತ್ನರಾಜ ಜೈನ್

ಗೃಹ ನಿರ್ಮಾಣಕ್ಕೆ ಹೊಸ ತೋರಣ * ಬಸವರಾಜ ಕೆ.ಜಿ.

ದಿನಬಳಕೆ ವಸ್ತುಗಳು, ಇಂಧನ, ಭೂಮಿ, ಕಟ್ಟಡ ನಿರ್ಮಾಣ ಸಾಮಗ್ರಿ ಇವೆಲ್ಲದರ ಬೆಲೆ ದಿನೇ ದಿನೆ ಏರುತ್ತಲೇ ಇದೆ. ಇದರೊಂದಿಗೆ ಬದಲಾಗುತ್ತಿರುವ ಟ್ರೆಂಡ್, ಹಾಗೂ ಹೊಸ ಹೊಸ ವಿನ್ಯಾಸಗಳು ಗೃಹ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿವೆ. ನಿರ್ಮಾಣ ಕ್ಷೇತ್ರದಲ್ಲಿನ ಪರಿವರ್ತನೆಗಳಿಗೆ ಅನುಗುಣವಾಗಿ ಹಾಗೂ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಮನೆ ನಿರ್ಮಿಸಿಕೊಡುವುದು ಗೃಹ ನಿಮಾತಗಳ ಮುಂದಿರುವ ದೊಡ್ಡ ಸವಾಲು. ಅದಕ್ಕೆಲ್ಲಾ ಪರಿಹಾರ ಆಧುನಿಕ ಗೃಹ ನಿರ್ಮಾಣದ ಪರಿಕಲ್ಪನೆ.

ಆಧುನಿಕ ಗೃಹ ನಿರ್ಮಾಣ ಎಂದರೆ ಪ್ರಸ್ತುತ ಸನ್ನಿವೇಶಗಳಿಗೆ ಅನುಗುಣವಾಗಿ ಮನೆ ನಿರ್ಮಿಸುವುದು. ಅಂದರೆ ಕಡಿಮೆ ವೆಚ್ಚ, ಶಕ್ತಿ ದಕ್ಷತೆ, ಸುಖಕರ, ಆರೋಗ್ಯದಾಯಕ, ಹಸಿರು ಮತ್ತು ಸುಸ್ಥಿರ ತಂತ್ರಜ್ಞಾನ, ಇವೆಲ್ಲ ಅಂಶಗಳೂ ಅಂಥ ಮನೆಗಳಲ್ಲಿ ಇರಬೇಕಾಗುತ್ತದೆ. ಹೀಗಾಗಿ ಇವುಗಳನ್ನು ಹೊಸ ಯುಗದ ಮನೆಗಳು ಎಂತಲೇ ಕರೆಯಬಹುದು.

ಗ್ರಾಹಕರ ಅನುಕೂಲಕ್ಕಾಗಿ ಇವೆಲ್ಲ ಅಂಶಗಳನ್ನು ಒಳಗೊಂಡ ಮನೆಗಳನ್ನು ನಿರ್ಮಿಸುವಲ್ಲಿ ಗೃಹ ನಿರ್ಮಾತೃಗಳು ಯಶಸ್ವಿಯಾಗಿದ್ದಾರೆ. ಜತೆಗೆ ವಿಭಿನ್ನವಾದ ವಿನ್ಯಾಸವನ್ನೂ ನೀಡುತ್ತಿರುವುದರಿಂದ ಹೊಸ ಯುಗದ ಮನೆಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇಂಥ ಮನೆಗಳಲ್ಲಿ ಒಂದಷ್ಟು ವಿಧದ ಪರಿಕಲ್ಪನೆಗಳಿವೆ.

ಹಸಿರು ಮನೆ ಪರಿಕಲ್ಪನೆ

ಹಸಿರು ಮನೆ ಎಂದರೆ ಮನೆ ಸುತ್ತ ಗಿಡ ನೆಟ್ಟು ಬೆಳೆಸುವುದೆಂದಲ್ಲ ಅಥವಾ ಗೋಡೆಗೆ ಬಳ್ಳಿ ಹಬ್ಬಿಸುವುದಲ್ಲ. ಬದಲಾಗಿ ಇದು ಒಂದು ಪರಿಸರ ಸ್ನೇಹಿ ಪರಿಕಲ್ಪನೆ. ಗ್ರಾಹಕರ ಜೇಬಿಗೆ ಹೊರೆಯಾಗದ, ಪರಿಸರ, ವಾತಾವರಣಕ್ಕೆ ಯಾವುದೇ ಹಾನಿ ಮಾಡದ ಮತ್ತು ನೈಸರ್ಗಿಕ ಶಕ್ತಿಯನ್ನು ಬಳಸಿಕೊಂಡು, ಕತಕ ಶಕ್ತಿ ಬಳಕೆ ತಗ್ಗಿಸುವ, ಆ ಮೂಲಕ ಪರಿಸರದ ಮೇಲಾಗುವ ಒತ್ತಡ ಕಡಿಮೆ ಮಾಡುವಂತಹ ಕಟ್ಟಡಗಳನ್ನು ನಿರ್ಮಿಸುವುದು ಹಸಿರು ಮನೆ ಪರಿಕಲ್ಪನೆಯ ಪ್ರಮುಖ ಉದ್ದೇಶ.

ಈ ಮನೆಗಳಲ್ಲಿನ ವಿಶೇಷತೆ ಏನೆಂದರೆ ಇವು ಬಹುತೇಕ ತೆರೆದ ಮನೆಗಳಾಗಿದ್ದು, ಗಾಳಿ ಬೆಳಕು ಒಳ ಪ್ರವೇಶಿಸಲು ಹೆಚ್ಚು ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಇಲ್ಲಿ ಗಾಜಿನ ಬಳಕೆ ಹೆಚ್ಚಾಗಿರುವುದು ಸಾಮಾನ್ಯ. ಇದರೊಂದಿಗೆ ಸೌರಶಕ್ತಿಯ ಬಳಕೆ, ಕಡಿಮೆ ನಿರ್ವಹಣೆ ವೆಚ್ಚದಂತಹ ಗುಣಲಕ್ಷಣಗಳು ಹಸಿರು ಮೆನೆಗಳನ್ನು ಪರಿಸರ ಸ್ನೇಹಿಯಾಗಿಸುತ್ತವೆ. ಈ ರೀತಿಯ ಮನೆಗಳಿಂದ ಶಕ್ತಿ ಹಾಗೂ ಹಣದ ಉಳಿತಾಯವಾಗುವುದರಿಂದ ಇವು ಗ್ರಾಹಕರಿಗೆ ಪ್ರಿಯವಾಗುತ್ತವೆ.

ಸ್ಥಳ ಕಡಿಮೆ, ಸರಳತೆ ಹೆಚ್ಚು

ದೊಡ್ಡ, ವಿಶಾಲವಾದ ಮನೆ ಕಟ್ಟಿಸಿ ಬೀಗುತ್ತಿದ್ದ ಕಾಲ ಎಂದೋ ಮರೆಯಾಗಿದೆ. ಈಗೇನಿದ್ದರೂ ಚಿಕ್ಕ, ಚೊಕ್ಕ ಮನೆಗಳಿಗೆ ಬೇಡಿಕೆ ಹೆಚ್ಚು. ಜತೆಗೆ ಇರುವ ಕಡಿಮೆ ಸ್ಥಳವನ್ನೇ ಸಮರ್ಥವಾಗಿ ಬಳಸಿಕೊಂಡು ವಿಶಾಲವಾದ ಮನೆ ನಿರ್ಮಿಸುತ್ತಿರುವುದು ಇಂದಿನ ಆರ್ಕಿಟೆಕ್ಟ್ಗಳ ಚಾಕಚಕ್ಯತೆಗೆ ಸಾಕ್ಷಿ. ಹಾಗೆಯೇ ಈ ಚಾಕಚಕ್ಯತೆ ಸುಮ್ಮನೇ ಬರುವಂಥದಲ್ಲ, ಇದಕ್ಕೆ ಹಲವು ವರ್ಷಗಳ ಅನುಭವದ ಅಗತ್ಯವಿದೆ. ಇದೂ ಕೂಡ ಹಸಿರು ಮನೆಗಳ ಒಂದು ವೈಶಿಷ್ಟತೆಯಾಗಿದ್ದು, ಕಡಿಮೆ ಸ್ಥಳದಲ್ಲಿ, ಕಡಿಮೆ ವೆಚ್ಚದಲ್ಲಿ, ಬಿಸಿಲ ಬೇಗೆಯನ್ನು ಕಡಿಮೆ ಮಾಡುವ ಮನೆಗಳು ನಿರ್ಮಾಣವಾಗುತ್ತವೆ.

ಇದೇ ವಿಶೇಷ

* ತೆರೆದ ಫ್ಲೋರ್ ವಿನ್ಯಾಸ (ಸಾಧ್ಯವಾದಷ್ಟು ಕಡಿಮೆ ಗೋಡೆ ನಿರ್ಮಾಣ)* ಹಾಲ್ ಪ್ರದೇಶ ಕಡಿತ (ಟ್ರಾಫಿಕ್ ವಿಧಾನದ ಅಭಿವದ್ಧಿ)

* ಸ್ಥಳದ ಬಹುವಿಧ ಉಪಯೋಗ* ಲಭ್ಯವಿರುವ ಸ್ಥಳದ ಸಮರ್ಪಕ ಬಳಕೆ* ನೆಲ ಅಥವಾ ಗೋಡೆಗಳಲ್ಲಿ ಪೀಠೋಪಕರಣ ಕೆತ್ತನೆ ಮೂಲಕ ಸ್ಥಳದ ಉಳಿತಾಯ

* ನೈಸರ್ಗಿಕ ಗಾಳಿ, ಬೆಳಕಿಗೆ ಅವಕಾಶ * ಸೌರ ಶಕ್ತಿಯ ಸಮರ್ಥ ಬಳಕೆ

ಶಕ್ತಿ ದಕ್ಷತೆಯ ಗೃಹ ವಿನ್ಯಾಸ

ಮೊದಲೇ ಹೇಳಿದಂತೆ ಈ ವಿಧದ ಮನೆಗಳಲ್ಲಿ ನೈಸರ್ಗಿಕ ಶಕ್ತಿ ಹಾಗೂ ಬೆಳಕಿಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಓಪನ್ ಫ್ಲೋರ್ ವಿನ್ಯಾಸ, ಕಡಿಮೆ ಗೋಡೆಗಳ ಕಟ್ಟುವಿಕೆ, ಗಾಜಿನ ಹೆಚ್ಚು ಬಳಕೆ ಮತ್ತು ಸೌರಶಕ್ತಿಯಂತಹ ನೈಸರ್ಗಿಕ ಶಕ್ತಿ ಸಂಪನ್ಮೂಲಗಳನ್ನು ಬಳಸುವುದು ಈ ಗೃಹ ನಿರ್ಮಾಣ ಪರಿಕಲ್ಪನೆಯ ವಿಶೇಷತೆ.

ಈ ರೀತಿಯ ಮನೆಗಳಲ್ಲಿ ಗಾಳಿ ಬೆಳಕು ನೈಸರ್ಗಿಕವಾಗೇ ದೊರೆಯುವುದರಿಂದ ಹಗಲು ವೇಳೆ ವಿದ್ಯುತ್ ದೀಪ, ಫ್ಯಾನ್ಗಳ ಬಳಕೆಗೆ ಸಂಪೂರ್ಣ ಕಡಿವಾಣ ಹಾಕಬಹುದು. ಇದರಿಂದ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯ ಉಳಿತಾಯವಾಗಲಿದೆ. ಮನೆಗಳ ತೆರೆದ ವಿನ್ಯಾಸವು ಒಳಭಾಗದಲ್ಲಿ ಹೆಚ್ಚು ಸ್ಥಳಾವಕಾಶ ಕಲ್ಪಿಸುವ ಜತೆಗೆ ರಗೋಡೆಗಳ ಅಗತ್ಯವನ್ನು ತಗ್ಗಿಸುತ್ತದೆ.

ಸೋಲಾರ್ ಹೌಸ್

ಈ ವಿಧದ ವಿನ್ಯಾಸಗಳಲ್ಲಿ ಕಟ್ಟಡದ ಮಏಲೆ ಸೂರ್ಯನ ಕಿರಣಗಳಿಂದ ಗರಿಷ್ಠ ಪ್ರಮಾಣದ ಪ್ರತಿಕೂಲ ಪರಿಣಮ ಉಂಟಾಗುತ್ತದೆ. ಇಲ್ಲಿ ಕೋಣೆಗಳನ್ನು ಸೂರ್ಯ ಹುಟ್ಟುವ ಮತ್ತು ಮುಳುಗುವ ಸಮಯಕ್ಕೆ ಅನುಗುಣವಾಗಿ ನಿರ್ಮಿಸಲಾಗುತ್ತದೆ. ಕಾರಣ ದಿನದ ಎಲ್ಲ ಅವಧಿಯಲ್ಲೂ ಕೋಣೆಯೊಳಗೆ ಸಮ ಪ್ರಮಾಣದ ಬೆಳಕು ಬರುವಂತೆ ಮಾಡುವುದಾಗಿದೆ.

ಸಾಮಾನ್ಯವಾಗಿ ಇಂಥ ಮನೆಗಳನ್ನು ಪೂರ್ವಕ್ಕೆ ಅಭಿಮುಖವಾಗಿ ನಿರ್ಮಿಸಲಾಗುತ್ತದೆ. ಬೆಳಕು ಒಳ ಪ್ರವೇಶಿಸಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸುವುದರಿಂದ ಸೂರ್ಯ ಪೂರ್ವದಿಂದ ಪಶ್ಚಿಮದತ್ತ ಚಲಿಸುವಾಗ ಬಳಕಿನಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅತಿ ಮುಖ್ಯ ಅಂಶವೇನೆಂದರೆ ಮನೆ ನಿರ್ಮಿಸುವ ನಿವೇಷನವನ್ನು ಸೂರ್ಯನ ಬೆಳಕಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುವುದು. ತೆರೆದ, ವಿಶಾಲ ಪ್ರದೇಶ ಹೆಚ್ಚು ಸೂಕ್ತ.

ಈ ಎಲ್ಲ ಗೃಹ ವಿನ್ಯಾಸಗಳ ಮೂಲ ಉದ್ದೇಶ ಒಂದೇ, ಅದು ಶಕ್ತಿ, ಸ್ಥಳ ಮತ್ತು ಹಣದ ಉಳಿತಾಯ. ಹೀಗಾಗಿ ಎಲ್ಲ ವಿನ್ಯಾಸಗಳಲ್ಲಿನ ವಿಶೇಷತೆಗಳು ಸಾಮಾನ್ಯ ಎನಿಸುತ್ತವೆ. ಇತ್ತೀಚೆಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಭೂಮಿಯೊಳಗೆ ಮನೆ ನಿರ್ಮಿಸಿಕೊಳ್ಳುವ ಹೊಸ ವಿಧಾನವೊಂದು ಕುಡಿಯೊಡೆಯುತ್ತಿದೆ. ಹಿಂದೆ ಆದಿಮಾನವರು ವಾಸಿಸುತ್ತಿದ್ದ ಗುಹೆಗಳ ಮಾದರಿಯಲ್ಲಿ ಈ ಮನೆಗಳನ್ನು ನಿರ್ಮಿಸಲಾಗುತ್ತದೆ. ಸುರಂಗ ಕೊರೆದು ಕಟ್ಟುವ ಈ ಕಟ್ಟಡಗಳಲ್ಲಿ ಪೀಠೋಪಕರಣಗಳೆಲ್ಲಾ ಕೆತ್ತನೆ ಮೂಲಕ ಮೂಡುತ್ತವೆ. ಜತೆಗೆ ಬೇಸಿಗೆಯಲ್ಲೂ ತಂಪೆರೆಯುವ ಈ ಮನೆಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಮನೆ’ ಸೆಳೆವ ಹೂ ರಂಗೋಲಿ

ಜೀವನ ಶೈಲಿ ಬದಲಾದಂತೆಲ್ಲ ಪ್ರತಿಯೊಂದಕ್ಕೂ ಪರ್ಯಾಯ ವವಸ್ಥೆ ಮಾಡಿಕೊಳ್ಳುವ ಹಾಗೆ ಈಗ ಈ ಹೂರಂಗೋಲಿ ಮನೆಯೆದುರು ಮನ ಸೆಳೆಯುತ್ತದೆ. ಮನೆಯ ಸುತ್ತ ಮುತ್ತ ಇನ್ನೇನು ಬಾಡಿ ಬಿದ್ದು ಹಾಳಾಗುತ್ತದೆ ಎನ್ನುವ ಹೂವುಗಳನ್ನು ತಂದು ಕುಂಡದಲ್ಲಿ ಹಾಕಿದ ನೀರಿನ ಮೇಲೆ ಅಥವಾ ತಟ್ಟೆಯಲ್ಲಿ ನೀರಿಟ್ಟು ವಿವಿಧ ವಿನ್ಯಾಸದಲ್ಲಿ ತೇಲುವಂತೆ ಮಾಡಿ ಸುಮಾರು ಎರಡು ಮೂರು ದಿನ 'ಹೂ ರಂಗೋಲಿ'ಯ ಸೊಬಗನ್ನು ಮನೆಯೆದುರು ತೋರಿಸಬಹುದು.-------------------

ರಂಗೋಲಿ, ಚುಕ್ಕಿ-ಸಾಲುಗಳಿಂದ ಮನೆ ಅಂಗಳವ ಕಂಗೊಳಿಸುವ ಜಾನಪದ ಕಲೆ ಎಂದರೂ ತಪ್ಪಲ್ಲ. ನಿತ್ಯ ಮನೆಯೆದುರು ಸಗಣಿಯಿಂದ ನೆಲ ಸಾರಿಸಿ ಕಪ್ಪು-ಹಸಿರು ಮಿಶ್ರಿತ ಹಸಿ ಹಸಿ ಜಾಗದ ಮೇಲೆ ಬಿಳಿ ರಂಗೋಲಿ ಹಾಕುವುದು ಸಂಪ್ರದಾಯ. ಇದು ಸಂಪ್ರದಾಯಸ್ಥರ ಮನೆಯಲ್ಲಿ ಇಂದಿಗೂ ಇದೆ. ಚುಕ್ಕಿ ಇಟ್ಟು ಮಾಡುವ ರಂಗೋಲಿ ಹೆಂಗಸರದ್ದಾದರೆ, ತಗಡಿನಲ್ಲಿ ರಂಧ್ರ ಮಾಡಿ ವಿನ್ಯಾಸ ಮಾಡಿದ ಕೊಳವೆಯಾಕಾರದ ಸಾಧನದಲ್ಲಿ ರಂಗೋಲಿ ಹಿಟ್ಟು ತುಂಬಿ ನೆಲದ ಮೇಲೆ ಉರುಳಿಸುತ್ತ ಗಂಡಸರೂ ರಂಗೋಲಿಗೆ ಕೈ ಓಡಿಸುತ್ತಿದ್ದ ಕಾಲವೂ ಇತ್ತು!

ಇನ್ನು ಹಬ್ಬ - ಹರಿದಿನ, ಮುಂಜಿ-ಮದುವೆ ಇತ್ಯಾದಿ ಶುಭ ಕಾರ್ಯಗಳಲ್ಲಿ ದೊಡ್ಡ ಅಂಗಳದಲ್ಲಿ ಹೆಂಗೆಳೆಯರು ಸೇರಿ ನಾನಾ ತರಹದ ರಂಗೋಲಿ ಹಾಕುವುದೂ ಇದೆ.

ಆದರೆ ಇಂದು ಸಿಮೆಂಟ್, ಟೈಲ್ಸ್, ಗ್ರಾನೈಟ್ ಅಂಗಳದ ಮೇಲೆ ರಂಗೋಲಿ ಇಟ್ಟ ಒಳ ಬರುತ್ತಿದ್ದಂತೆಯೇ ಗಾಳಿಗೆ ಅದರ ಆಕಾರ ಬದಲಾಗಿರುತ್ತದೆ. ಹಾರದ ರಂಗೋಲಿ ಇರಲೆಂದು ರಂಗೋಲಿ ಚಿತ್ರ ಇರುವ ಸ್ಟಿಕರ್ ಅಂಟಿಸುವುದು ಚಾಲ್ತಿಯಲ್ಲಿದೆ. ದುಡಿವ ಮಹಿಳೆ, ಅವಸರದ ಆಧುನಿಕ ಜೀವನ ಶೈಲಿ ಕೂಡಾ ರಂಗೋಲಿ ಕಲೆಯನ್ನು ಮನೆಯಂಗಳದಿಂದ ದೂರ ಮಾಡಿ ಪ್ರದರ್ಶನಗಳಲ್ಲಿ ರಂಗು ತುಂಬಿಕೊಂಡು, ಹೂವಿನ ಎಸಳು ಹಾಸಿಕೊಂಡು ಕಾಣುವಂತೆ ಮಾಡಿದೆ.

ಜೀವನ ಶೈಲಿ ಬದಲಾದಂತೆಲ್ಲ ಪ್ರತಿಯೊಂದಕ್ಕೂ ಪರ್ಯಾಯ ವವಸ್ಥೆ ಮಾಡಿಕೊಳ್ಳುವ ಹಾಗೆ ಈಗ ಈ ಹೂರಂಗೋಲಿ ಮನೆಯೆದುರು ಮನ ಸೆಳೆಯುತ್ತದೆ.

ಮನೆಯ ಸುತ್ತ ಮುತ್ತ ಇನ್ನೇನು ಬಾಡಿ ಬಿದ್ದು ಹಾಳಾಗುತ್ತದೆ ಎನ್ನುವ ಹೂವುಗಳನ್ನು ತಂದು ಕುಂಡದಲ್ಲಿ ಹಾಕಿದ ನೀರಿನ ಮೇಲೆ ಅಥವಾ ತಟ್ಟೆಯಲ್ಲಿ ನೀರಿಟ್ಟು ವಿವಿಧ ವಿನ್ಯಾಸದಲ್ಲಿ ತೇಲುವಂತೆ ಮಾಡಿ ಸುಮಾರು ಎರಡು ಮೂರು ದಿನ 'ಹೂ ರಂಗೋಲಿ'ಯ ಸೊಬಗನ್ನು ಮನೆಯೆದುರು ತೋರಿಸಬಹುದು.

ಇದಕ್ಕಾಗಿ ಮನೆಯ ಪಕ್ಕದ ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬೆಳೆಯುವ ನಿತ್ಯ ಪುಷ್ಪ, ನೆಲದ ಮೇಲೆ ಹೂವನ್ನು ಉದುರಿಸುವ ಪಾರಿಜಾತ, ಹತ್ತಿರದ ಪಾರ್ಕಿಗೆ ಹೋಗುವ ದಾರಿಯಲ್ಲಿ ಆಗ ತಾನೆ ಬಿದ್ದ ಮೇ ಪ್ಲವರ್ ಗೊಂಚಲಿನಿಂದ ಆಯ್ದ ಎಸಳುಗಳು, ಹೀಗೆ ತೇಲುವ ಯಾವುದೇ ಹೂವನ್ನು ಸಹ ಆರಿಸಿಕೊಳ್ಳಬಹುದು. ಆಗ ತಾನೆ ಬಿದ್ದ ಹೂವು ಕಾಲಿಗೆ ಸಿಕ್ಕಿ ಹಾಳಾಗುವುದನ್ನು ತಪ್ಪಿಸಿ ಮನೆಗೆ ತಂದು ನೀರಲ್ಲಿಟ್ಟು ಜೀವ ತುಂಬಿ ಹೊಸ ಕಳೆ ನೀಡಿ ಆನಂದಿಸಬಹುದು. ಹೀಗೆ ವಿನ್ಯಾಸಗೊಳಿಸಲು ಹೊಸ ತಟ್ಟೆಯೇ ಬೇಕೆಂದಿಲ್ಲ, ಹಳೆ ತಟ್ಟೆಯನ್ನು ಸ್ವಚ್ಚಗೊಳಿಸಿ ನೀರು ತುಂಬಿ ಉಪಯೋಗಿಸಬಹುದು.

ಯಾವುದೇ ಖರ್ಚಿಲ್ಲದೆ ಹತ್ತಿರದಲ್ಲೆ ಸಿಗುವ ವ್ಯರ್ಥವಾಗುವ ಹೂಗಳನ್ನು ಬಳಸಿ ನಿಮ್ಮ ಮನೆಯೆದುರು ನಿಮಗೆ ಬೇಕಾದಲ್ಲಿ ಇಟ್ಟು ನಿಮ್ಮ 'ಮನೆ' ಸೆಳೆಯುವಂತೆ ಮಾಡುವ ಶಕ್ತಿ ಈ ಹೂ ರಂಗೋಲಿಗೆ ಇದೆ. ರಂಗೋಲಿ ಹಾಕುವ ಸಂಪ್ರದಾಯವಿಲ್ಲದವರೂ ಸಹ ಈ ಸೊಬಗಿನ ಹೂರಂಗೋಲಿ ಮಾಡಿ ಆನಂದಿಸಬಹುದು.

* ಬಿ.ಎಸ್.ವೆಂಕಟಾಚಲ ಭಟ್ಟ

ಉಯಿಲು ಬರೆಯಿರಿ; ಆಸ್ತಿ ಹಸ್ತಾಂತರ ಸುಲಭ

ವ್ಯಕ್ತಿಯು ಕರಾರು, ಒಪ್ಪಂದ ವ್ಯವಹಾರಗಳನ್ನು ಸಮರ್ಥವಾಗಿ ನಿಭಾಯಿಸಲು ಇವು ಸಹಕಾರಿಯಾಗುತ್ತವೆ . ವಿಲ್ ಅಥವಾ ಮೃತ್ಯುಪತ್ರ ಬರೆಯುವ ಮೂಲಕ ವ್ಯಕ್ತಿಯು ತನ್ನ ಇಷ್ಟದಂತೆ ಷೇರು, ನಗದು, ಒಡವೆ ಸೇರಿದಂತೆ ತನ್ನ ಆಸ್ತಿಗಳನ್ನು ಯಾರಿಗೆ ಬೇಕಾದರೂ ಸರಳವಾಗಿ ಹಂಚಿಕೆ ಮಾಡಬಹುದು.

ವಿಲ್ ಅನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ಶುಭ್ರ ಬಿಳಿ ಹಾಳೆಯಲ್ಲಿ ಬರೆಯಲಾಗುತ್ತದೆ. ವಿಲ್ ಕರ್ತೃ ಯಾರು ಎಂಬುದನ್ನೂ ಸ್ಪಷ್ಟವಾಗಿ ವಿವರಿಸಿರುತ್ತದೆ. ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನೂ ನಿಖರವಾಗಿ ಹೆಸರಿಸಲಾಗಿರುತ್ತದೆ. ವಿಲ್ ಪ್ರಕ್ರಿಯೆ ಕೂಡ ಬಹು ಸರಳ. ಇದನ್ನು ನೋಂದಣಿ ಮಾಡಿಸಬೇಕಾದ ಅಗತ್ಯವಿಲ್ಲ. ನೋಂದಣಿ ಮಾಡಬೇಕೆನಿಸಿದರೆ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾಡಿಸಲು ಅವಕಾಶವಿದೆ. ನೋಂದಣಿ ಮಾಡಿಸಿಟ್ಟಲ್ಲಿ ಆಸ್ತಿ ವಿವಾದ, ವ್ಯಾಜ್ಯಗಳಿಗೆ ಅವಕಾಶವಾಗದೆ ವಿಲ್ ಹೆಚ್ಚು ವಿಶ್ವಾಸಾರ್ಹವಾಗಿರುತ್ತದೆ.

ವಿಲ್ ಬರೆದಿರುವವರು ಮೃತಪಟ್ಟ ಬಳಿಕವಷ್ಟೇ ವಿಲ್ ಜಾರಿಗೆ ಬರುವುದು. ವಿಲ್ ಕರ್ತೃ ಜೀವಂತವಾಗಿರುವ ತನಕ ಯಾವುದೇ ಕಾರಣಕ್ಕೂ ಜಾರಿಗೆ ಬರದು. ಒಮ್ಮೆ ವಿಲ್ ಮಾಡಿಸಿಟ್ಟು ಬಳಿಕ ಅದರಲ್ಲಿ ಬದಲಾವಣೆ ತರಲು ಇಲ್ಲವೇ ರದ್ದುಪಡಿಸಲು ಕೂಡ ಅವಕಾಶವಿದೆ. ಮಾಡಿಸಿಟ್ಟವರ ಸಹಿಯ ಜತೆಗೆ ಇನ್ನಿಬ್ಬರು ದೃಢೀಕೃತ ಸಾಕ್ಷಿಗಳ ಸಹಿಯನ್ನೂ ವಿಲ್ ಒಳಗೊಂಡಿರುತ್ತದೆ.

ವಿಲ್ ಗೆ ಒಬ್ಬ ಕಾರ್ಯ ನಿರ್ವಾಹಕನನ್ನೂ ನೇಮಕಗೊಳಿಸಲಾಗುತ್ತದೆ. ಈ ವ್ಯಕ್ತಿ ವಿಲ್ ಪ್ರಕಾರ ಆಸ್ತಿ ಹಂಚಿಕೆಯಾಗುವಂತೆ ನೋಡಿಕೊಳ್ಳುತ್ತಾನೆ.

ಒಬ್ಬ ವ್ಯಕ್ತಿ ವಿಲ್ ಅನ್ನು ಎಷ್ಟು ಬಾರಿ ಬೇಕಾದರೂ ಬದಲಿಸಿಕೊಳ್ಳಬಹುದು. ವಾರಸುದಾರರ ಹೆಸರನ್ನೇ ತೆಗೆದುಬಿಡಬಹುದು ಇಲ್ಲವೇ ಆಸ್ತಿಯಲ್ಲಿ ಭಾಗ ನೀಡಿಕೆ ಪ್ರಮಾಣವನ್ನು ಬದಲಿಸಿಕೊಳ್ಳಬಹುದು, ಅದೇ ರೀತಿ ಆಸ್ತಿ ಹಂಚಿಕೆ ವಿಧಾನವನ್ನೇ ಬದಲಾಯಿಸಿಕೊಳ್ಳಲೂ ಸ್ವಾತಂತ್ರ್ಯವಿದೆ. ಕರಾರಿಗೆ ಸಣ್ಣಪುಟ್ಟ ತಿದ್ದುಪಡಿ ತರುವ ಹಾಗೂ ಇಡೀ ವಿಲ್ ಅನ್ನು ಮರು ಬರೆಯುವ ಅವಕಾಶವಿದೆ.

ಪಿತ್ರಾರ್ಜಿತವಾಗಿ ಬಂದಿರುವ ಆಸ್ತಿಗೆ ಸಂಬಂಧಿಸಿದಂತೆ ಉತ್ತರಾಧಿಕಾರಿಯ ನೇಮಕದಲ್ಲಿ ವಿಲ್ ಪರಿಣಾಮ ಬೀರದು. ಹೀಗಾಗಿ ಪರಂಪರಾಗತ ಆಸ್ತಿಯಲ್ಲಿ ತನ್ನ ಪಾಲನ್ನು ತನಗಿಷ್ಟ ಬಂದವರಿಗೆ ನೀಡುವಂತೆ ಮಾತ್ರ ವಿಲ್ ಬರೆಯಬಹುದು. ಉಳಿದ ಆಸ್ತಿ ಕಾನೂನು ಪ್ರಕಾರವಾಗಿ ವಾರಸುದಾರರಿಗೆ ಲಭಿಸುತ್ತದೆ.

ಆಸ್ತಿ ಹೇಗೆ ವಿಲ್ ಪ್ರಕಾರ ನಾಮಿನಿಗೆ ಸೇರುವುದೋ ಅದೇ ರೀತಿ ಬ್ಯಾಂಕ್ ಖಾತೆ, ಜೀವವಿಮೆ ಪಾಲಿಸಿ, ಮ್ಯೂಚುವಲ್ ಫಂಡ್ ಮತ್ತಿತರ ಉಳಿತಾಯ ಯೋಜನೆಗಳು ಕೂಡ ವಿಲ್ನಲ್ಲಿ ನಮೂದಿತ ವಾರಸುದಾರನಿಗೆ ವರ್ಗಾವಣೆಗೊಳ್ಳುತ್ತದೆ. ಆದರೆ ಇವೆಲ್ಲ ಆಸ್ತಿಗೆ ಏಕೈಕ ವ್ಯಕ್ತಿಯನ್ನು ನಾಮಿನಿ ಮಾಡಲಾಗದು. ಏಕೆಂದರೆ ಉಳಿದವರು ಕಾನೂನು ಪ್ರಕಾರ ಹಕ್ಕು ಸಾಧಿಸಲು ಅವಕಾಶವಿರುತ್ತದೆ. ಆಸ್ತಿಯಲ್ಲಿ ಭಾಗವನ್ನು ನೀಡುವಲ್ಲಿ ಕಾನೂನು ಉಯಿಲನ್ನು ಪರಿಗಣಿಸುತ್ತದೆಯೇ ಹೊರತು ಸಮಗ್ರ ಆಸ್ತಿಯ ವಾರಸುದಾರಿಕೆಯನ್ನಲ್ಲ ಎಂಬುದನ್ನು ವಿಲ್ ಮಾಡುವಾಗ ಗಮನಿಸಬೇಕಾಗುತ್ತದೆ.

ಒಂದು ವೇಳೆ ಆಸ್ತಿಗೆ ಉಯಿಲು ಬರೆದಿಡದಿದ್ದರೆ ಕಾನೂನು ಪ್ರಕಾರ ಹಂಚಿಕೆ, ಉತ್ತರಾಧಿಕಾರತ್ವ ನಿರ್ಣಯಗೊಳ್ಳುತ್ತದೆ. ತಂದೆಯೇನಾದರೂ ತನ್ನ ಅಪ್ರಾಪ್ತ ವಯಸ್ಕ ಮಗುವಿಗೆ ಆಸ್ತಿ ನೀಡಿ ವಿಲ್ ಬರೆದಿದ್ದರೆ ಅದಕ್ಕೆ ಒಬ್ಬ ಪೋಷಕನನ್ನೂ ನೇಮಕಗೊಳಿಸಬಹುದು. ಒಂದು ವೇಳೆ ನೇಮಕಗೊಳಿಸಿಲ್ಲವಾದರೂ ವ್ಯತಿರಿಕ್ತ ಪರಿಣಾಮ ಬೀರದು. ಏಕೆಂದರೆ ವಿಲ್ ಬರೆದಿದ್ದವನ ಪತ್ನಿ ಸಹಜವಾಗಿಯೇ ತಾಯಿಯಾಗಿದ್ದು ಮಗುವಿನ ಪೋಷಕರ ಸ್ಥಾನದಲ್ಲಿರುತ್ತಾಳೆ. ಬಳಿಕ ತಾಯಿ ಮಾತ್ರ ಅಪ್ರಾಪ್ತ ಮಗುವಿನ ಹೆಸರಿಗೆ ವಿಲ್ ಬರೆಯಬೇಕಾಗಿ ಬಂದಾಗ ಪೋಷಕರೊಬ್ಬರನ್ನು ನೇಮಕಗೊಳಿಸಬೇಕಾಗುತ್ತದೆ. ಹೀಗೆ ನೇಮಕಗೊಂಡವರು ಮಗು ಪ್ರೌಢ ವಯಸ್ಸಿಗೆ ಬರುವ ವರೆಗೆ ಮಾತ್ರ ಕಾರ್ಯ ನಿರ್ವಹಿಸಬೇಕು ಅಷ್ಟೆ.

ಮಕ್ಕಳ ಓದುವ ಕೋಣೆ; ಹೀಗಿರಲಿ ನಿರ್ವಹಣೆ

ಮಕ್ಕಳಿಗಿದು ಪರೀಕ್ಷಾ ಸಮಯವಾಗಿರುವುದರಿಂದ ಉದ್ವೇಗರಹಿತ, ನಿಶಬ್ದ ಹಾಗೂ ಪ್ರಶಾಂತ ವಾತಾವರಣ ಮುಖ್ಯ. ಮಕ್ಕಳು ಓದುವ ಕೋಣೆ ಹೇಗಿರಬೇಕೆಂಬುದರ ಬಗ್ಗೆ ಹೆಚ್ಚು ಆಸ್ಥೆ ವಹಿಸುವುದು ಪೋಷಕರ ಕರ್ತವ್ಯ. ಉದ್ವೇಗ, ಒತ್ತಡ, ನಿಶಕ್ತಿ , ಭೀತಿ ಇವೆಲ್ಲವೂ ಮಕ್ಕಳನ್ನು ಹೈರಾಣಾಗಿಸಲು ಅವಕಾಶ ಮಾಡಿಕೊಡದಿರುವುದರಲ್ಲಿದೆ ಪೋಷಕರ ಜಾಣ್ಮೆ . ಮಕ್ಕಳ ಅಭ್ಯಾಸದ ಸಂದರ್ಭ ದಲ್ಲಿ ಅವರ ಓದಿಗೆ ಪೂರಕ ವಾತಾವರಣ ಕಲ್ಪಿಸುವ ಹೊಣೆ ಪೋಷಕರದ್ದು .

ಸ್ಟಡಿ ರೂಮ್ ಹೇಗಿರಬೇಕು ಮತ್ತ ಹೇಗಿಡಬೇಕೆಂಬುದರ ಬಗ್ಗೆ 'ಟಿಪ್ ಟಿಪ್ ಟಿಪ್ಸ್ ' ಇಲ್ಲಿವೆ.

* ಮಕ್ಕಳ ಓದುವಾಗ ಅವರ ಕುರ್ಚಿಯನ್ನು ಪೂರ್ವಾಭಿಮುಖವಾಗಿರಿಸಬೇಕು.

* ಕೋಣೆಯಲ್ಲಿ ತುಂಬಾ ಸ್ಥಳಾವಕಾಶವಿದ್ದು , ಶುದ್ಧ ಗಾಳಿ , ಬೆಳಕು ಹೆಚ್ಚು ಬರುವಂತಿರಬೇಕು.

* ಬೆಡ್ಶೀಟ್, ದಿಂಬು ಬಟ್ಟೆ , ಪರದೆ ಬಟ್ಟೆಗಳು ಮಕ್ಕಳ ಮನಸ್ಸನ್ನು ಶುಭ್ರವಾಗಿರಿಸುವಂತಿರಬೇಕು.

* ತಕ್ಷಣಕ್ಕೆ ಕೋಣೆಯ ಗೋಡೆ ಬಣ್ಣ ಬದಲಿಸುವುದು ಸಾಧ್ಯವಿಲ್ಲವಾದರೂ ನೀಲಿ ಅಥವಾ ಹಸಿರಿನಂಥ ಬಣ್ಣ ಬಳಿದಿದ್ದರೆ ಉತ್ತಮ.

* ಕೋಣೆಯಲ್ಲಿ ವಸ್ತುಗಳನ್ನು ಅಲ್ಲಲ್ಲಿ ಚೆಲ್ಲಾಡದೆ ಒಪ್ಪ ವಾಗಿ ಜೋಡಿಸಬೇಕು. ಆದಷ್ಟು ಕಡಿಮೆ ವಸ್ತುಗಳಿದ್ದರೆ ಒಳ್ಳೆಯದು.

* ಮಕ್ಕಳಿಗೆ ಸಂಬಂಧಪಡದ ವಸ್ತುಗಳನ್ನು ಆ ಕೋಣೆಯಿಂದ ತೆಗೆಸುವುದೇ ಒಳ್ಳೆಯದು.

* ಓದುವ ಟೇಬಲ್, ಕುಳಿತುಕೊಳ್ಳುವ ಚೇರ್, ಮುಂಜಾವು ಹಾಗೂ ರಾತ್ರಿಗೆ ಟೇಬಲ್ ಲ್ಯಾಂಪ್ ಸಮರ್ಪಕವಾಗಿರಬೇಕು.

* ಟೇಬಲ್ ಮೇಲೆ ಕುಡಿಯುವ ನೀರಿನ ಬಾಟಲ್ ಇಡುವುದನ್ನು ಮರೆಯದಿರಿ.

* ಮಕ್ಕಳ ಓದಿನ ವಿರಾಮಕ್ಕೆ ಅವಕಾಶವಾಗುವಂತೆ ಲಘು ಸಂಗೀತವನ್ನು ಪ್ಲೇ ಮಾಡಿ. ಸೌಂಡ್ ವಾಲ್ಯೂಮ್ ತೀರಾ ಕಡಿಮೆ ಇಡಿ.

* ಕೋಣೆಯು ಸುಗಂಧಮಯವಾಗಿಡಲು ಹೂವು, ಗಿಡಗಳು ಹಾಗೂ ಸಣ್ಣಮಟ್ಟದ ಜಲಪಾತದ ಕ್ರಿಯೇಶನ್ ಮಾಡಿಕೊಳ್ಳಬಹುದು.

* ಏಕಾಗ್ರತೆ ದೃಷ್ಟಿಯಿಂದ ಮಕ್ಕಳ ಪೇವರಿಟ್ ಸ್ಟಾರ್ಗಳ ಪೋಸ್ಟರ್ಗಳು ಕೋಣೆಯೊಳಗಿದ್ದರೆ ಸದ್ಯಕ್ಕೆ ಹೊರಗಿಡುವುದು ಒಳಿತು.

* ಧ್ಯಾನಾಸಕ್ತ ಬುದ್ಧನ ವಿಗ್ರಹ ಅಥವಾ ಹಣ್ಣುಗಳ ಪೇಂಟಿಂಗ್ಗಳು ಮಕ್ಕಳ ಓದಿಗೆ ಪೂರಕವಾಗಬಹುದು.

* ಓದುವ ಕೋಣೆ ರಸ್ತೆ ಬದಿಯ ಗಲಾಟೆ, ವಾಹನಗಳ ಹೊಗೆ , ಕಿರಿಕಿರಿಯಿಂದ ಮುಕ್ತವಾಗಿರಲಿ.

* ಮೇಧಾವಿಗಳ, ತತ್ವಜ್ಞಾನಿಗಳ ಸಂದೇಶ ಫಲಕಗಳಿದ್ದರೆ ಓದುವ ಕೊಣೆಯಲ್ಲಿಡಿ.

* ಕೋಣೆಯಲ್ಲಿ ವಸ್ತುಗಳನ್ನು ಅಲ್ಲಲ್ಲಿ ಚೆಲ್ಲಾಡದೆ ಒಪ್ಪ ವಾಗಿ ಜೋಡಿಸಬೇಕು. ಆದಷ್ಟು ಕಡಿಮೆ ವಸ್ತುಗಳಿದ್ದರೆ ಒಳ್ಳೆಯದು.

* ಮಕ್ಕಳಿಗೆ ಸಂಬಂಧಪಡದ ವಸ್ತುಗಳನ್ನು ಆ ಕೋಣೆಯಿಂದ ತೆಗೆಸುವುದೇ ಒಳ್ಳೆಯದು.

* ಓದುವ ಟೇಬಲ್, ಕುಳಿತುಕೊಳ್ಳುವ ಚೇರ್, ಮುಂಜಾವು ಹಾಗೂ ರಾತ್ರಿಗೆ ಟೇಬಲ್ ಲ್ಯಾಂಪ್ ಸಮರ್ಪಕವಾಗಿರಬೇಕು.

* ಟೇಬಲ್ ಮೇಲೆ ಕುಡಿಯುವ ನೀರಿನ ಬಾಟಲ್ ಇಡುವುದನ್ನು ಮರೆಯದಿರಿ.

* ಮಕ್ಕಳ ಓದಿನ ವಿರಾಮಕ್ಕೆ ಅವಕಾಶವಾಗುವಂತೆ ಲಘು ಸಂಗೀತವನ್ನು ಪ್ಲೇ ಮಾಡಿ. ಸೌಂಡ್ ವಾಲ್ಯೂಮ್ ತೀರಾ ಕಡಿಮೆ ಇಡಿ.

* ಕೋಣೆಯು ಸುಗಂಧಮಯವಾಗಿಡಲು ಹೂವು, ಗಿಡಗಳು ಹಾಗೂ ಸಣ್ಣಮಟ್ಟದ ಜಲಪಾತದ ಕ್ರಿಯೇಶನ್ ಮಾಡಿಕೊಳ್ಳಬಹುದು.

* ಏಕಾಗ್ರತೆ ದೃಷ್ಟಿಯಿಂದ ಮಕ್ಕಳ ಪೇವರಿಟ್ ಸ್ಟಾರ್ಗಳ ಪೋಸ್ಟರ್ಗಳು ಕೋಣೆಯೊಳಗಿದ್ದರೆ ಸದ್ಯಕ್ಕೆ ಹೊರಗಿಡುವುದು ಒಳಿತು.

* ಧ್ಯಾನಾಸಕ್ತ ಬುದ್ಧನ ವಿಗ್ರಹ ಅಥವಾ ಹಣ್ಣುಗಳ ಪೇಂಟಿಂಗ್ಗಳು ಮಕ್ಕಳ ಓದಿಗೆ ಪೂರಕವಾಗಬಹುದು.

* ಓದುವ ಕೋಣೆ ರಸ್ತೆ ಬದಿಯ ಗಲಾಟೆ, ವಾಹನಗಳ ಹೊಗೆ , ಕಿರಿಕಿರಿಯಿಂದ ಮುಕ್ತವಾಗಿರಲಿ.

* ಮೇಧಾವಿಗಳ, ತತ್ವಜ್ಞಾನಿಗಳ ಸಂದೇಶ ಫಲಕಗಳಿದ್ದರೆ ಓದುವ ಕೊಣೆಯಲ್ಲಿಡಿ.

ಬಾಡಿ’ ನೋಡಿ ಜ್ಯೋತಿಷ್ಯ ಹೇಳಿ * ಸ್ಟೀವನ್ ರೇಗೋ

ಮಾನವನ ದೇಹ ರಚನೆಯೇ ಒಂದು ಅದ್ಭುತ ಪವಾಡ ಎನ್ನುವ ಸತ್ಯ ಎಲ್ಲರಿಗೂ ಗೊತ್ತು. ಈ ದೇಹರಚನೆಯನ್ನು ಇಟ್ಟುಕೊಂಡು ನಡೆದ ಬಹಳಷ್ಟು ಸಂಶೋಧನೆಗಳು ಈ ವಿಚಾರಗಳಿಗೇ ಪುಷ್ಠಿ ನೀಡಿವೆ. ಮಾನವನ ದೇಹದ ಪ್ರಮುಖ ಭಾಗಗಳಿಂದ ಆತನ ಆರೋಗ್ಯ, ವ್ಯಕ್ತಿತ್ವ ನಿರ್ಮಾಣ, ಮಾನಸಿಕ ಸ್ಥಿತಿ, ಸ್ನೇಹಿತರ ನಡುವೆ ಆತ ನಡೆದುಕೊಳ್ಳುವ ರೀತಿಯನ್ನು ಕೂಡ ಅಧ್ಯಯನ ಮಾಡಲು ಸಾಧ್ಯ ಎಂಬುದು ಗೊತ್ತೇ?

ಅಮೆರಿಕಾದ ವಿಶ್ವವಿದ್ಯಾಲಯವೊಂದು, ದೇಹದ ರಚನೆಯಲ್ಲಿರುವ ಭಾಗಗಳು ಕೆಲವೊಂದು ಅದ್ಭುತ ಸತ್ಯವನ್ನು ಬಯಲು ಮಾಡುತ್ತವೆ ಎನ್ನುವ ಸಂಶೋಧನೆಯೊಂದನ್ನು ತೀರಾ ಇತ್ತೀಚೆಗೆ ಕೈಗೊಂಡಿದೆ. ಇದರ ಆಧಾರದಲ್ಲಿ ಮಾನವನ ದೇಹದ ಪ್ರತಿಯೊಂದು ಅಂಗವೂ ಒಂದೊಂದು ವಿಚಾರವನ್ನು ಹೇಳುತ್ತದೆಯಂತೆ ! ಇದಕ್ಕಾಗಿ ಅಮೆರಿಕಾದ ವಿ.ವಿ. ಒಂದು ಸಾವಿರಕ್ಕೂ ಅಧಿಕ ಮಂದಿಯನ್ನು ಸಂಶೋಧನೆ ಮಾಡಿ ಈ ವಿಚಾರವನ್ನು ಬಯಲು ಮಾಡಿದೆ.

ಕಂದು ಬಣ್ಣದ ಕಣ್ಣು:

ಲ್ಯೂಯಿಸ್ಟಿಲ್ ವಿವಿ ನಡೆಸಿದ ಸಂಶೋಧನೆಯ ಪ್ರಕಾರ ಕಂದು ಬಣ್ಣದ ಕಣ್ಣು ಹೊಂದಿದವರು ತ್ವರಿತಗತಿಯಲ್ಲಿ ಪ್ರತಿಕ್ರಿಯೆ ನೀಡುವುದರ ಜತೆಗೆ ವೇಗದ ಗತಿಯ ಚಟುವಟಿಕೆಯಲ್ಲಿ ಹೆಚ್ಚು ಸಮರ್ಥರಂತೆ ಕಂಡು ಬಂದಿದ್ದಾರೆ. ಅದಕ್ಕಾಗಿ ಈ ಸಂಶೋಧನೆಗೆ ಗಾಲ್ಫ್ ಆಟಗಾರರು, ಅಥ್ಲೀಟ್ಗಳು, ಬಾಕ್ಸರ್ಗಳನ್ನು ಆಯ್ಕೆ ಮಾಡಿಕೊಂಡು ಭವಿಷ್ಯ ಹೇಳಲಾಗಿದೆ.

ಸಣ್ಣ ಕಿವಿ: ವ್ಯಕ್ತಿಯಲ್ಲಿರುವ ಕಿವಿಯ ಗಾತ್ರವನ್ನು ನೋಡಿ ಆರೋಗ್ಯದ ಕುರಿತಾಗಿ ಭವಿಷ್ಯ ಹೇಳಬಹುದು. ಆತನ ಕಿವಿ ಅಗಲವಾಗಿದ್ದರೆ ಆತನಿಗೆ ಹೃದಯಕ್ಕೆ ಸಂಬಂಧಿತ ಕಾಯಿಲೆಗಳು ಕಡಿಮೆ. ಅದೇ ರೀತಿ ಆತನ ಕಿವಿ ಸಣ್ಣ ಗಾತ್ರದಲ್ಲಿದ್ದರೆ ಹೃದಯ ಸಂಬಂಧಿ ಕಾಯಿಲೆಗಳ ಪ್ರಮಾಣ ಜಾಸ್ತಿ.

ಕಾಲುಗಳು: ಸಂಶೋಧನಾ ವರದಿಯ ಪ್ರಕಾರ ಸಣ್ಣ ಕಾಲುಗಳನ್ನು ಹೊಂದಿದವರು ಯಕೃತ್ ಸಂಬಂಧಿತ ಕಾಯಿಲೆ, ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಾರೆ. ಆದರೆ ಈ ಸಣ್ಣ ಕಾಲು ಹೊಂದಿದವರು ಇಳಿವಯಸ್ಸಿನಲ್ಲಿ ಮೂಳೆ ಮುರಿತಕ್ಕೆ ಬೇಗನೆ ಒಳಗಾಗುವುದಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಅವರ ಮೂಳೆಗಳು ದಪ್ಪವಾಗಿರುತ್ತದೆ.

ಸೀನುವಿಕೆ: ಸೀನುವಿಕೆಯ ರೀತಿಯಲ್ಲಿ ಒಂದು ಭಿನ್ನವಾದ ಧ್ವನಿ ತಂದರೆ ಅನುವಂಶಿಕ ಲಕ್ಷಣಗಳನ್ನು ತೋರಿಸುತ್ತದೆ. ಅದರಲ್ಲೂ ಅನುವಂಶಿಕ ಕಾಯಿಲೆಗಳು ಬಂದಿದೆ ಎನ್ನುವ ಅರ್ಥವನ್ನು ಹೊರಸೂಸುತ್ತದೆ.

ತುಟಿ: ತೆಳುವಾದ ತುಟಿ, ಪೂರ್ಣವಾದ ತುಟಿಗಳನ್ನು ಹೊಂದಿರುವ ಮಹಿಳೆಯರು ದೀರ್ಘಕಾಲ ಬದುಕುತ್ತಾರೆ. ಕೌಟುಂಬಿಕ ಸಂಬಂಧಗಳಿಗೆ ಬೆಲೆ ಕೊಡುವ ವಿಚಾರದಲ್ಲಿ ಇವರೇ ಮೊದಲಿಗರು. ಜನಪ್ರಿಯತೆಯಲ್ಲಿ ಇವರನ್ನು ಮೀರಿಸುವವರು ಯಾರೂ ಇಲ್ಲ.

ತಲೆ ಹೊಟ್ಟು: ತಲೆಹೊಟ್ಟು ಇದ್ದರೆ ಶಿಲೀಂಧ್ರಗಳ ಜತೆ ಹೋರಾಡಲು ನಿಮ್ಮ ದೇಹ ಸಂಪೂರ್ಣ ವಿಫಲವಾಗಿರುತ್ತದೆ. ಅದರಲ್ಲೂ ಮುಖ್ಯವಾಗಿ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ಬಹಳ ಕುಗ್ಗಿರುತ್ತದೆ. ಬದುಕಿನ ಎಲ್ಲ ಮಜಲುಗಳಲ್ಲಿ ತೀವ್ರತರದ ಒತ್ತಡಗಳಿಂದ ಬಳಲುತ್ತಾರೆ.

ತುಂಬಿದ ಗಲ್ಲ: ತುಂಬಿದ ಗಲ್ಲ ಹೊಂದಿದವರು ನಂಬಿಕೆಗೆ ಅಷ್ಟೊಂದು ಅರ್ಹರಲ್ಲ. ಯಾಕೆಂದರೆ ಇವರು ಮತ್ತೊಬ್ಬರನ್ನು ಮೋಸ ಮಾಡುವುದರಲ್ಲಿ ಮುಂದಿರುತ್ತಾರಂತೆ ! ಸಣ್ಣ ಗಲ್ಲ ಹೊಂದಿದವರಿಗೆ ನಾಚಿಕೆ ಜಾಸ್ತಿ. ನಿರ್ಣಯದ ವಿಚಾರದಲ್ಲೂ ಇವರಿಗೆ ಗೊಂದಲಗಳು ಹೆಚ್ಚು.

ತೊಡೆಯ ಗಾತ್ರ: ವ್ಯಕ್ತಿಯಲ್ಲಿರುವ ತೊಡೆಯ ಗಾತ್ರದ ಆಧಾರದಲ್ಲಿ ವ್ಯಕ್ತಿಯ ಸಾವು ನಿರ್ಧಾರ ಮಾಡಬಹುದು. ದಪ್ಪ ತೊಡೆ ಹೊಂದಿದವರಿಗೆ ಹೃದಯ ಸಂಬಂಧಿ ಕಾಯಿಲೆಗಳು ಕಡಿಮೆ.

ಬೋಳು ತಲೆ: ಬೋಳು ತಲೆ ಹೊಂದಿರುವವರ ಐಕ್ಯೂ ಪ್ರಮಾಣ ಜಾಸ್ತಿಯಾಗಿರುತ್ತದೆ. ಇತರರ ಜತೆಯಲ್ಲಿ ಅವರನ್ನು ಪರೀಕ್ಷೆಗೆ ಇಳಿಸಿದರೆ ಎಲ್ಲರಿಗಿಂತಲೂ ಮುಂದೆ ಅವರು ಜಯಶೀಲರಾಗುತ್ತಾರಂತೆ !

ಮೂಗು: ದೊಡ್ಡ ಮೂಗುಗಳನ್ನು ಹೊಂದಿದವರಿಗೆ ಅಲರ್ಜಿಯ ಪ್ರಮಾಣ ಜಾಸ್ತಿ. ಅವರು ಶೀತ, ಪ್ಲೂನಿಂದ ಪದೇ ಪದೆ ಕಂಗಾಲಾಗಿರುತ್ತಾರೆ. ದೊಡ್ಡ ಮೂಗು ಹೊಂದಿದವರಿಗೆ ಮಾಲಿನ್ಯಕಾರಕಗಳ ದಾಳಿ ಕೂಡ ಜಾಸ್ತಿಎನ್ನುತ್ತದೆ ಈ ಸಂಶೋಧನೆ.

ಮಕ್ಕಳ ಫಲವಿಲ್ಲದ್ದಕ್ಕೆ ಹಲವು ಕಾರಣಗಳು * ಡಾ. ಎಸ್.ಎನ್. ಶೈಲೇಶ್ ಬಾಣಾವರ

ಸ್ನೇಹಿತರು ಅಥವಾ ಸಂಬಂಧಿಕರು ಜೊತೆ ಸೇರಿದಾಗ ಲೋಕರೂಢಿಯಂತೆ ನಿಮಗೆ ಮಕ್ಕಳೆಷ್ಟು? ಏನು ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆ ಹಾಕುವುದು ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಇದಕ್ಕೆ ಉತ್ತರ ಇನ್ನೂ ಆಗಿಲ್ಲ ಎನ್ನುವುದಾಗಿರುತ್ತದೆ. ಕೆಲವಕು ಕಣ್ಣೀರಿಂದಲೇ ಉತ್ತರಿಸುತ್ತಾರೆ. 'ನೋಡಿ ನಮಗೆ ಮದುವೆಯಾಗಿ 8 ವರ್ಷವಾಯಿತು. ಇನ್ನೂ ಕೂಡಾ ಮಕ್ಕಳಾಗಿಲ್ಲ ಎಂದು ಹೇಳಿದರೆ, ಕೆಲವರು ದೇವರ ಮೊರೆ ಹೋದೆವು, ಹಲವಾರು ವೈದ್ಯರುಗಳನ್ನು ಭೇಟಿಯಾಗಿ ಅವರು ಹೇಳಿದ ಎಲ್ಲ ಪರೀಕ್ಷೆಗಳನ್ನು ಮಾಡಿಸಿದೆವು. ಆದರೂ ಮಕ್ಕಳಾಗಲಿಲ್ಲ . ಕೆಲವರು ಜ್ಯೋತಿಷಿಗಳ ಬಳಿ ಕುಂಡಲಿಗಳನ್ನು ಪರಿಶೀಲಿಸಿ, ಅವರು ಹೇಳಿದ ಪೂಜೆ ಪುನಸ್ಕಾರಗಳನ್ನೆಲ್ಲಾ ಮಾಡಿದರೂ ಮಕ್ಕಳಾಗಲಿಲ್ಲ ಎನ್ನುವುದ ಹತ್ತು ಹಲವಾರು ಸಮಸ್ಯೆಗಳನ್ನು ತಿಳಿಸುತ್ತಾರೆ.

ಇತ್ತೀಚಿನ ದಿನಗಳಲ್ಲಿ ಮದುವೆ ಮೊದಲು ಸಾಲಾವಳಿ ಕೇಳುವುದು ಕಡಿಮೆಯಾಗಿದೆ. ಹಿಂದಿನ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಗಳ ಅಥವಾ ಮಗನ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸುತ್ತಿದ್ದರು. ಜಾತಕ ಇಲ್ಲದವರು ಹೆಸರು ಬಲದ ಮೇಲೆ ಸಾಲಾವಳಿ ಬರುವುದು ಇಲ್ಲವೋ ಎಂದು ಪರೀಕ್ಷಿಸುತ್ತಿದ್ದರು. ಇನ್ನು ಕೆಲವರು ದೇವರ ಅಪ್ಪಣೆ ಕೇಳಿ ವಿವಾಹ ಕಾರ್ಯ ನೆರವೇರಿಸುತ್ತಿದ್ದರು. ಕೆಲವರು ಈ ಪದ್ಧತಿಯನ್ನು ಈಗಲೂ ಮುಂದುವರಿಸಿದ್ದಾರೆ. ಆದರೆ, ಹೆಚ್ಚಿನವರು ಅದರಿಂದ ದೂರ ಹೋಗಿದ್ದಾರೆ.

ದೋಷಗಳ ಪರಿಹಾರ

ಜಾತಕದಲ್ಲಿ ಕುಜ ದೋಷ ಹಾಗೂ ಬೇರೆ ಇನ್ನೇನಾದರೂ ತೊಂದರೆ ಇದ್ದರೆ ಅದಕ್ಕೆ ಪರಿಹಾರ ಸೂಜಿಗೆ ಸಾಲಾವಳಿ ವಿಚಾರದಲ್ಲಿ 18 ಗುಣ ಮೇಲ್ಪಟ್ಟು ಬಂದಾಗ ವಿವಾಹ ನಡೆಸಬಹುದೆಂದು ಎಲ್ಲಾ ತರಹದ ವಿಚಾರ ವಿನಿಮಯ ಮಾಡಿದರೂ ಕೂಡ ಒಂದೊಂದು ಸಲ ಮಕ್ಕಳ ಫಲ ಆಗುವುದಿಲ್ಲ. ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರ.

ಮೊದಲನೆಯದು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲಗಳು. ಅದರ ಜೊತೆ ಪ್ರೇತಶಾಪ, ಗುರುಶಾಪ, ಪಿತೃಶಾಪ, ಸರ್ಪಶಾಪ, ಮಾತೃಶಾಪ ಹೀಗೆ ಮುಂತಾದ ಶಾಪಗಳನ್ನು ಮಾಡಿದ ತಪ್ಪಿಗೆ ಹಾಗೂ ಈ ಯಾವುದಾದರೂ ಶಾಪಗಳ ಪಾಪದಿಂದ ಮಕ್ಕಳ ಫಲಗಳಾಗುವುದಿಲ್ಲ. ಈ ವಿಚಾರವನ್ನು ಕುಂಡಲಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಚಾರಗಳನ್ನು ತಿಳಿದುಕೊಳ್ಳಬಹುದು. ಹೀಗೆ ಪೂರ್ವಜನ್ಮದ ಪಾಪದ ಫಲದಿಂದ ಮಕ್ಕಳ ಭಾಗ್ಯವಿಲ್ಲವೆಂದು ಅನುಭವಿ ಜ್ಯೋತಿಷಿಗಳಿಂದ ತಿಳಿದುಕೊಂಡ ನಂತರ ಸಂಬಂಧ ಪಟ್ಟ ಶಾಪದ ಫಲಗಳನ್ನು ಪೂಜೆ, ಹೋಮ ಮುಂತಾದವುಗಳನ್ನು ಕ್ರಮಬದ್ಧವಾಗಿ ಆಚರಣೆ ಮಾಡಿ ಮಕ್ಕಳ ಭಾಗ್ಯ ಪಡೆಯಬಹುದು. ಇನ್ನು ಎರಡನೆಯ ಕಾರಣವೇನೆಂದರೆ ಕೆಲವು ವೈಜ್ಞಾನಿಕ ರೀತಿಯ ಮಕ್ಕಳ ಭಾಗ್ಯ ದೊರಕದೇ ಇರಬಹುದು ಅದು ಜ್ಯೋತಿಷ್ಯ ಶಾಸ್ತ್ರದ ಮೂಲಕ ಇದೇನು ವೈಜ್ಞಾನಿಕಕ್ಕೂ ಜ್ಯೋತಿಷ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಅಲ್ಲದೆ ಅದಕ್ಕೆ ಉತ್ತರ ಜ್ಯೋತಿಷ್ಯ ಶಾಸ್ತ್ರವೂ ಕೂಡ ವಿಜ್ಞಾನವಾಗಿದೆ.

ಇನ್ನು ವೈಜ್ಞಾನಿಕವಾಗಿ ಎರಡು ಭಾಗಗಳಾಗಿ ವಿಂಗಡಿಸಿದಾಗ ಪಕ್ಷ ಪಾತದ ಬಂಜೆತನ ಹಾಗೂ ನಪುಂಸಕತ್ವದಿಂದ ಮಕ್ಕಳ ಫಲ ದೊರಕದೆ ಇರಬಹುದು. ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಹೆಣ್ಣಿನಲ್ಲಿ ತೊಂದರೆ ಇರಬಹುದು ಅಥವಾ ಗಂಡಿನಲ್ಲಿ ತೊಂದರೆ ಇರಬಹುದು ಅಂತಹ ಸಂದರ್ಭಗಳಲ್ಲಿ ಕೆಲವು ಔಷಧಿಗಳಿಂದ ಮಕ್ಕಳಾಗುವ ಸಂಭವ ಇರುತ್ತದೆ. ಒಂದು ವೇಳೆ ಔಷಧಿಯಿಂದಲೂ ಸಂತಾಲ ಫಲ ದೊರಕದೆ ಇದ್ದಾಗ ದತ್ತು ಪಡೆದುಕೊಳ್ಳಬೇಕಾದ ಪ್ರಸಂಗವು ಬರಬಹುದು.

ಕುಂಡಲಿಗಳಲ್ಲಿ ಗೋಚರ

ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ.

1. ಐದನೆಯ ಭಾವಾಧಿಪತಿ ಪುರುಷ ರಾಶಿ ಹಾಗೂ ಪುರುಷ ನವಾಂಶದಲ್ಲಿದ್ದರೆ ಗಂಡು ಮಗುವಿನ ಫಲ ದೊರಕುತ್ತದೆ.

2. ಐದನೆಯ ಭಾವಾಧಿಪತಿ ನಪುಂಸಕ ರಾಶಿ ಹಾಗೂ ನಪುಂಸಕ ನವಾಂಶದಲ್ಲಿದ್ದರೆ ಅಂತವರಿಗೆ ನಪುಂಸಕ ಮಗುವಿನ ಫಲ ದೊರೆಯುತ್ತದೆ.

3. ಐದನೆಯ ಭಾವಾಧಿಪತಿ ಸ್ತ್ರೀ ರಾಶಿ ಹಾಗೂ ಸ್ತ್ರೀ ನವಾಂಶದಲ್ಲಿದ್ದರೆ ಅಂತವರಿಗೆ ಹೆಣ್ಣು ಮಗುವಿನ ಫಲ ದೊರೆಯುತ್ತದೆ.

4. ಐದನೆಯ ಭಾವಾಧಿಪತಿ ದ್ವಿಸ್ವಭಾವ ರಾಶಿ ಹಾಗೂ ದ್ವಿಸ್ವಭಾವ ನವಾಂಶದಲ್ಲಿದ್ದರೆ ಅಂತವರಿಗೆ ಅವಳಿ ಜವಳಿ ಮಕ್ಕಳ ಫಲ ಪ್ರಾಪ್ತಿಯಾಗುತ್ತದೆ.

ಇನ್ನೂ ಅನೇಕ ಗ್ರಂಥಗಳಾದ ಸತ್ಯ ಜಾತಕ, ಪಲಾಧಿಪತಿ, ಸರ್ವಧ ಚಿಂತಾಮಣಿ ಬೃಹತ್ ಪರಾಶರ ಹೋರಾ ಶಾಸ್ತ್ರ, ಜಾತಕ ಪಾರಿಜಾತಕ, ಮಂತ್ರೇಶ್ವರ ಕೃತಿ, ಸಂಕೇತ ನಿಧಿ, ಹೀಗೆ ಹಲವು ಗ್ರಂಥಗಳಲ್ಲಿ ಮಕ್ಕಳು ನಿಧಾನವಾಗಿ ಆಗುವುದಕ್ಕೆ ಹಾಗೂ ಮಕ್ಕಳ ಫಲ ಇಲ್ಲದಿರುವುದಕ್ಕೆ ಕಾರಣಗಳೂ ಹಾಗೂ ಹೇಗೆ ಗ್ರಹಗತಿಗಳಿಂದ ಆಗುತ್ತಿದೆ ಎಂಬ ವಿಚಾರಗಳನ್ನು ತಿಳಿಸಿದೆ.

1. ಐದನೆಯ ಭಾವದಲ್ಲಿ ಅಂಗಾರಕನ ಜೊತೆ (ಕುಜ) ಪಾಪಗ್ರಹಗಳಿದ್ದರೆ ಮಕ್ಕಳು ಮರಣ ಹೊಂದುತ್ತವೆ ಹಾಗೂ ಗರ್ಭನಿಲ್ಲುವುದಿಲ್ಲ.

2. ಐದನೆಯ ಭಾವವು ಶನೇಶ್ವರ (ಶನಿ)ನಿಂದ ದೃಷ್ಟಿ ಹೊಂದಿದ್ದರೆ ಮಕ್ಕಳಾಗುವುದಿಲ್ಲ.

3. ಐದನೆಯ ಭಾವದಲ್ಲಿ ರಾಹು ಇದ್ದರೆ ಹಾಗೂ ಅಂಗಾರಕನ (ಕುಜ) ದೃಷ್ಟಿ ಇದ್ದರೆ ಸಂತಾನಫಲವಿಲ್ಲ.

4. ಐದನೆಯ ಭಾವ ಹಾಗೂ ಅಧಿಪತಿ ಗ್ರಹದ ತೊಂದರೆಗೆ ಒಳಗಾಗಿದ್ದಾಗ ಸಂತಾನ ಫಲವಿಲ್ಲ.

5. ಐದನೆಯ ಭಾವದಲ್ಲಿ ಪಾಪ ಗ್ರಹಗಳು ಹಾಗೂ ಭಾವಾಧಿಪತಿ ಪಾಪಗ್ರಹಗಳೊಡನೆ ಇದ್ದರೆ ಸಂತಾನಕಾರಕ ಗುರು ಐದನೆಯ ಭಾವದಲ್ಲಿದ್ದಾಗ ಪುತ್ರಶೋಕ ನಿರಂತರಂ.

6. ಅಂಗಾರಕ (ಕುಜ) ಹಾಗೂ ಶನೇಶ್ವರ (ಶನಿ) ಐದನೆಯ ಬಾವದಲ್ಲಿದ್ದರೆ ಹಾಗೂ ಐದನೆಯ ಭಾವದಿಂದ 6, 8, 12ರಲ್ಲಿ ಪಾಪಗ್ರಹಗಳಿದ್ದರೆ ಎದನೇಯ ಭಾವಾಧಿಪತಿ ಪಾಪಗ್ರಹಗಳೊಡನೆ ಅಥವಾ ಶತ್ರುಗಳೊಂದಿಗೆ ಇದ್ದರೆ ಸಂತಾನಫಲವಿರುವುದಿಲ್ಲ.

7. ಪಂಚಮಾಧಿಪತಿ ಹಾಗೂ ಸಪ್ತಮಾಧಿಪತಿ ಯುತಿಯಲ್ಲಿದ್ದರೆ ಅಥವಾ ರಾಶಿ ಪರಿವರ್ತನೆ ಹೊಂದಿದ್ದರೆ ಮಕ್ಕಳ ಫಲವಿಲ್ಲ.

8. ಐದನೆಯ ಭಾವ ಮತ್ತು ಲಗ್ನ ಅಗ್ನಿರಾಶಿಯಾಗಿದ್ದು ಐದನೆಯ ಬಾವಾಧಿಪತಿ 6, 8, 12ರಲ್ಲಿದ್ದರೆ ಸಂತಾನ ಫಲವಿಲ್ಲ.

9. ಸಂತಾನ ಭಾಗ್ಯ ಕೊಡುವ ಭಾವಾಧಿಪತಿಗಳು ಶತ್ರುಸ್ಥಾನ, ನೀಚಸ್ಥಾನ, ದ್ವಿಸ್ಥಾನದಲ್ಲಿ ಬಲಹೀನರಾಗಿದ್ದರೆ ಸಂತಾನಫಲವಿಲ್ಲ.

ಸರ್ಪಶಾಪ ಐದನೆಯ ಭಾವದಲ್ಲಿ ಕುಜನ ರಾಶಿಯಾಗಿದ್ದು ಅದರಲ್ಲಿ ರಾಹು ಸ್ಥಿತನಿದ್ದರೆ ಹಾಗೂ ಅಂಗಾರಕನ ದೃಷ್ಠಿಗೆ ಒಳಗಾಗಿದ್ದರೆ ಮಕ್ಕಳಾಗುವುದಿಲ್ಲ.

ಪಿತೃಶಾಪ ಐದನೇ ಭಾವವು ನೀಚ ಸೂರ್ಯನಾಗಿದ್ದು (ರವಿ) ಹಾಗೂ ಸೂರನ್ಯನು (ರವಿ) ಪಾಪಕೃರ್ತ ಯೋಗದಲ್ಲಿದ್ದರೆ ಹಾಗೂ ಆ ಸೂರ್ಯನು (ರವಿ) ಶನಿಯ ನವಾಂಶದಲ್ಲಿದ್ದರೆ, ರಾಹು ಶನಿ ಯುತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ.

ಮಾತೃಶಾಪ ಐದನೇ ಭಾವವು ನೀಚ ಚಂದ್ರನಾಗಿದ್ದು ಹಾಗೂ ಚಂದ್ರನು ಪಾಪ ಕರ್ತರಿಯೋಗದಲ್ಲಿದ್ದು ಶನಿಯ ನವಾಂಶದಲ್ಲಿ ಆ ಚಂದ್ರನಿದ್ದರೆ ಹಾಗೂ ಶನಿ ಅಥವಾ ರಾಹು ಯತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ.

ಭ್ರಾತೃಶಾಪ ಮೂರನೆಯ ಭಾವದಲ್ಲಿ ಲಗ್ನಾಧಿಪತಿಯಿದ್ದು ಅಂಗಾರಕ ರಾಹು ಎದನೆಯ ಭಾವದಲ್ಲಿದ್ದರೆ ಮೂರನೆಯ ಭಾವದಲ್ಲಿ ಎಂಟರ ಭಾವಾಧಿಪತಿಯಿದ್ದು ಹಾಗೂ ಐದನೆಯ ಭಾವದಲ್ಲಿ ರಾಹು ಅಂಗಾರಕನೊಡನೆ ಇದ್ದರೆ ಮಕ್ಕಳಾಗುವುದಿಲ್ಲ.

ಪ್ರೇತಶಾಪ ಲಗ್ನದಿಂದ ಐದನೇ ಶನಿಗೂ ಹಾಗೂ ಸ್ಥಾನಾಧಿಪತಿಗೂ ಕೂಡಾ ಮಾಂದ್ಯ ದೃಷ್ಠಿಯಿದ್ದು ಲಗ್ನದಿಂದ ಐದನೇ ಸ್ಥಾನದಲ್ಲಿ ಶನಿ ಮಾಂದ್ಯರು ಕೂಡಿದ್ದರೂ ಮಕ್ಕಳಾಗುವುದಿಲ್ಲ.

ಬ್ರಹ್ಮಶಾಪ ಗುರು, ಶನಿ, ಅಂಗಾರಕ ನವಾಂಶದಲ್ಲಿದ್ದರೆ ಲಗ್ನದಿಂದ ಐದನೇ ಸ್ಥಾನಾಧಿಪನು ಅಂಗಾರಕ, ಗುರು, ಶನಿ, ರಾಹುವಿನಿಂದ ಕೂಡಿ ಲಗ್ನದಿಂದ 6, 8, 12ನೇ ಸ್ಥಾನದಲ್ಲಿ ದುರ್ಬಲರಾಗಿದ್ದರೆ ಮಕ್ಕಳಾಗುವುದಿಲ್ಲ.

ಗುರುಶಾಪ ಶನಿ ಅಥವಾ ರಾಹು ಯತಿಯಲ್ಲಿದ್ದರೆ ನವಾಂಶದಲ್ಲಿ ಗುರು, ಶನಿಯಿದ್ದರೆ ಲಗ್ನದಿಂದ ಐದನೇ ಭಾವವು ನೀಚ ಗುರುವುನದ್ದು ಆಗಿದ್ದ ಗುರು ಪಾಪಕರ್ತರಿ ಯೋಗದಲ್ಲಿದ್ದರೆ ಮಕ್ಕಳಾಗುವುದಿಲ್ಲ.

ಆದ್ದರಿಂದ ಯಾರೇ ಆಗಲಿ ಮಕ್ಕಳ ಫಲವಿಲ್ಲದಿದ್ದಾಗ ಅನುಭವಿ ಜ್ಯೋತಿಷ್ಯರಿಂದ ಜಾತಕವನ್ನು ಪರಿಶೀಲಿಸಿ ಸಂಬಂಧ ಪಟ್ಟ ತೊಂದರೆ ಹಾಗೂ ಶಾಪದ ಫಲಗಳನ್ನು ತಿಳಿದು ಅದಕ್ಕೆ ಸಂಬಂಧಿಸಿದ ಪೂಜೆ, ಹೋಮ, ಜಪತಪಗಳಿಂದ ಮಕ್ಕಳ ಫಲ ಪಡೆದು ಸುಖ ಸಂತೋಷದಿಂದ ಬಾಳಬಹುದು.

ಪುಷ್ಕರ ಯೋಗ - ಆರ್. ಸೀತಾರಾಮಯ್ಯ

ನಿರ್ದಿಷ್ಟವಾದ ವಾರ, ತಿಥಿ ಮತ್ತು ನಕ್ಷತ್ರಗಳು ಕೂಡಿ ಬಂದಾಗ ಪುಷ್ಕರಯೋಗ ಉಂಟಾಗುತ್ತದೆ. ಈ ಪುಷ್ಕರಯೋಗದಲ್ಲಿ ಎರಡು ವಿಧ. ದ್ವಿಪುಷ್ಕರ ಯೋಗ ಮತ್ತು ತ್ರಿಪುಷ್ಕರಯೋಗ.

ಶನಿವಾರ, ಭಾನುವಾರ ಮತ್ತು ಮಂಗಳವಾರ ದಿವಸ, ಭದ್ರಾ ತಿಥಿಯೊಂದಿಗೆ (2, 7 ಮತ್ತು 12ನೇ ತಿಥಿ) ದ್ವಿಪಾದಿ ನಕ್ಷತ್ರಗಳಾದ, ಮೃಗಶಿರಾ, ಚಿತ್ತಾ, ಧನಿಷ್ಟಾ ನಕ್ಷತ್ರ ಬಂದಾಗ ದ್ವಿಪುಷ್ಕರಯೋಗ ಉಂಟಾಗುತ್ತದೆ. ಉದಾಹರಣೆಗೆ ಶನಿವಾರ ದಿವಸ ಸಪ್ತಮಿ ತಿಥಿ ಹಾಗೂ ಧನಿಷ್ಟಾ ನಕ್ಷತ್ರ ಬಂದರೆ ಅಥವಾ ಶನಿವಾರ ದ್ವಿತೀಯ ತಿಥಿ, ಚಿತ್ತಾ ನಕ್ಷತ್ರ ಬಂದರೆ ದ್ವಿಪುಷ್ಕರಯೋಗ ಉಂಟಾಗುತ್ತದೆ. ಈ ರೀತಿ ಒಟ್ಟು 27 ರೀತಿಯ ದ್ವಿಪುಷ್ಕರಯೋಗ ಉಂಟಾಗುತ್ತದೆ.

ಶನಿವಾರ, ಭಾನುವಾರ ಮತ್ತು ಮಂಗಳವಾರ ದಿವಸ, ಭದ್ರಾ ತಿಥಿಯೊಂದಿಗೆ (2, 7 ಮತ್ತು 12ನೇ ತಿಥಿ) ತ್ರಿಪಾದಿ ನಕ್ಷತ್ರಗಳಾದ ಕೃತ್ತಿಕೆ, ಉತ್ತರ, ಉತ್ತರಾಷಾಡ, ಪುನರ್ವಸು, ವಿಶಾಖ, ಪೂರ್ವಾಭಾದ್ರ ನಕ್ಷತ್ರಗಳು ಬಂದಾಗ ತ್ರಿಪುಷ್ಕರಯೋಗ ಉಂಟಾಗುತ್ತದೆ. ಉದಾಹರಣೆಗೆ ಭಾನುವಾರ ದಿವಸ ದ್ವಿತೀಯ ತಿಥಿ ಉತ್ತರಾ ನಕ್ಷತ್ರ ಬಂದಾಗ ತ್ರಿಪುಷ್ಕರಯೋಗ. ಈ ರೀತಿ ಒಟ್ಟು 54 ವಿಧಧ ತ್ರಿಪುಷ್ಕರಯೋಗಗಳು ಉಂಟಾಗುತ್ತವೆ.

ದ್ವಿಪುಷ್ಕರಯೋಗ ಮತ್ತು ತ್ರಿಪುಷ್ಕರಯೋಗಗಳಲ್ಲಿ ಪ್ರಮುಖವಾಗಿ ಮೃತ್ಯು, ವಿನಾಶ ಮತ್ತು ವೃದ್ಧಿಯ ಸಂಕೇತವಿದೆ. ದ್ವಿಪುಷ್ಕರಯೋಗಗಳಲ್ಲಿ ಮೃತ್ಯು, ವಿನಾಶ ಹಾಗೂ ವೃದ್ಧಿ ಘಟನೆಗಳು ಎರಡು ಬಾರಿ ಪುನರಾವರ್ತನೆಯಾದರೆ, ತ್ರಿಪುಷ್ಕರಯೋಗದಲ್ಲಿ ಘಟನೆಗಳು ಮೂರು ಬಾರಿ ಪುನರಾವರ್ತನೆಯಾಗುತ್ತದೆ. ದ್ವಿಪುಷ್ಕರಯೋಗದಲ್ಲಿ ಯಾರಾದರೂ ಮೃತಪಟ್ಟರೆ ಆ ಕುಟುಂಬದಲ್ಲಿ ಇನ್ನೊಬ್ಬರು ಮೃತರಾಗುತ್ತಾರೆ. ತ್ರಿಪುಷ್ಕರಯೋಗದಲ್ಲಿ ಇಂಥ ಘಟನೆಗಳು ಸಂಭವಿಸಿದರೆ ಒಟ್ಟು ಮೂರು ವ್ಯಕ್ತಿಗಳು ಮೃತಪಡುತ್ತಾರೆ. ಮನೆಯಲ್ಲೇನಾದರೂ ಕಳ್ಳತನವಾದರೆ ಅಥವಾ ವಸ್ತುಗಳು ಕಳೆದು ಹೋದರೆ; ದ್ವಿಪುಷ್ಕರಯೋಗದಲ್ಲಿ ಎರಡು ಬಾರಿ, ತ್ರಿಪುಷ್ಕರಯೋಗದಲ್ಲಿ ಮೂರು ಬಾರಿ ಕಳ್ಳತನವಾಗುತ್ತದೆ ಅಥವಾ ವಸ್ತುಗಳು ಕಳೆದುಹೋಗುತ್ತವೆ. ಶುಭ ಕಾರ್ಯಗಳನ್ನು ಮಾಡಿದರೆ ಅವುಗಳೂ ಪುನರಾವರ್ತನೆಯಾಗುತ್ತಿರುತ್ತವೆ.

ಈ ಯೋಗಗಳಲ್ಲಿ ವಿವಾಹ, ಗೃಹಪ್ರವೇಶಗಳನ್ನು ಮಾಡಬಾರದು. ವಿವಾಹ ಮಾಡಿದರೆ ಎರಡನೆ ಅಥವಾ ಮೂರನೆ ವಿವಾಹವಾಗುತ್ತದೆ. ಗೃಹಪ್ರವೇಶ ಮಾಡಿದರೆ ತೊಂದರೆಯುಂಟಾಗಿ ಪುನಃ ಬೇರೆ ಮನೆ ಗೃಹಪ್ರವೇಶ ಮಾಡಬೇಕಾಗುತ್ತದೆ. ಸಾಲ ಪಡೆಯುವುದಾಗಲೀ ಅಥವಾ ಸಾಲ ಕೊಡುವುದಾಗಲೀ ಮಾಡಬಾರದು. ಸಾಲ ಪಡೆದರೆ ಪುನಃ ಸಾಲ ಪಡೆಯುತ್ತಿದ್ದು, ಸಾಲ ತೀರಿಸಲಾಗದೆ ಬಡ್ಡಿ ಹೆಚ್ಚಾಗಿ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಸಾಲ ಕೊಟ್ಟರೆ, ಕೊಡುತ್ತಲೇ ಇರಬೇಕಾಗುತ್ತದೆ. ಮರಳಿ ಸಾಲದ ಹಣ ವಾಪಾಸ್ ಬರುವುದಿಲ್ಲ. ಯಾವುದೇ ವಸ್ತುಗಳನ್ನು ಕೊಳ್ಳಬಾರದು. ಆ ವಸ್ತು ಹಾಳಾಗಿ ಅದೇ ವಸ್ತುವನ್ನು ಪುನಃ ಕೊಳ್ಳಬೇಕಾಗುತ್ತದೆ.

ಆದ್ದರಿಂದ ನಾವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಬೇಕಾದರೆ, ದ್ವಿಪುಷ್ಕರಯೋಗ ಮತ್ತು ತ್ರಿಪುಷ್ಕರಯೋಗಗಳನ್ನು ಹೊರತುಪಡಿಸಿ ಮಾಡಬೇಕಾಗುತ್ತದೆ.

No comments: