Tuesday, July 3, 2012
ಗಂಡೋ ? ಹೆಣ್ಣೋ ??: ನಿಮಗೆ ಯಾವ ಮಕ್ಕಳು ಬೇಕು?
ಗಂಡೋ ? ಹೆಣ್ಣೋ ??: ನಿಮಗೆ ಯಾವ ಮಕ್ಕಳು ಬೇಕು? ವಿದ್ವಾನ್ ನಾಗಪತಿ ಎಮ್ಮೆಗುಂಡಿ
ದಂಪತಿಗಳಿಗೆ ತಮಗೆ ಇಷ್ಟವಾದ ಮಗುಬೇಕೆಂಬ ಇಚ್ಚೆ ಸಹಜ. ಆದರೆ ಕೆಲವರಿಗೆ ಗಂಡು ಸಂತಾನದ ಬಯಕೆ ಇದ್ದರೆ ಹೆಣ್ಣು ಮಗುವೂ ಆಗಬಹುದು. ಹೆಣ್ಣುಬೇಕೆನ್ನುವವರಿಗೆ ಗಂಡುಕೂಸಾಗಬಹುದು. ಆದರೆ ಜ್ಯೋತಿಶ್ಯಾಸ್ತ್ರದಲ್ಲಿ ಹೇಳಿದ ಪ್ರಕಾರ ನಡೆದುಕೊಂಡರೆ ತಮಗೆ ಬೇಕಾದ ಮಗುವನ್ನೇ ಪಡೆಯಬಹುದು. ಗರ್ಭಾದಾನವನ್ನು ಅಂದರೆ ಪತಿಪತ್ನಿಗಳಿಬ್ಬರ ಸೇರುವಿಕೆ ಯಾವಾಗ ನಡೆಯಬೇಕೆಂಬುದನ್ನು ಶಾಸ್ತ್ರ ಹೇಳುತ್ತದೆ. ಸ್ತ್ರೀಯು ರಜಸ್ವತಿಯಾದ ಮೂರು ದಿವಸದ ನಂತರ ಅಂದರೆ ನಾಲ್ಕನೆಯ ದಿವಸದಿಂದ ಸಂಗಮಕ್ಕೆ ಸ್ತ್ರೀ ಅರ್ಹಳಾಗುವಳು.
ನಾಲ್ಕನೆಯ ರಾತ್ರಿ ಪತಿಯ ಸಂಗಮವಾದರೆ ಅಲ್ಪಾಯುವಾದ ಮಗನು ಜನಿಸುತ್ತಾನೆ. ಐದನೆಯ ರಾತ್ರಿಯಲ್ಲಿ ದಂಪತಿಗಳು ಕೂಡಿದರೆ ಸ್ತ್ರೀ ಸಂತಾನ. ಆರನೆಯ ರಾತ್ರಿಯಲ್ಲಿ ಸಂಗಮವಾದರೆ ಮಗನು ಜನಿಸುವನು. ಏಳನೇ ರಾತ್ರಿಯಲ್ಲಿ ಗರ್ಭಾಧಾನವಾದರೆ ಹೆಣ್ಣುಮಗಳು ಹುಟ್ಟುತ್ತಾಳೆ. ಆದರೆ ಹುಟ್ಟಿದ ಮಗಳು ಮುಂದೆ ಬಂಜೆಯಾಗುವಳೆಂದು ಹೇಳುತ್ತಾರೆ. ಎಂಟನೆ ರಾತ್ರಿಯಲ್ಲಿ ಸಂಗಮಿಸಿದರೆ ಗಂಡು ಮಗು ಜನಿಸುವುದು. ಆದರೆ ಈ ಮಗುವಿಗೂ ಮುಂದೆ ಸಂತಾನವಿರುವುದಿಲ್ಲ ಎನ್ನುತ್ತಾರೆ ಜ್ಯೋತಿಶಾಸ್ತ್ರ.
ಒಂಭತ್ತನೆಯ ರಾತ್ರಿ ಪ್ರಶಸ್ತವಾಗಿದೆ. ಈ ರಾತ್ರಿಯಲ್ಲಿ ಸಂಗಮವಾದರೆ ಸುಂದರಿಯಾದ ಮಗಳು ಜನಿಸುತ್ತಾಳೆ. ಹತ್ತನೇ ರಾತ್ರಿ ಇನ್ನೂ ಪ್ರಶಸ್ತ. ಈ ರಾತ್ರಿಯಲ್ಲಿ ಗರ್ಭಧಾನವಾದರೆ ಒಳ್ಳೆಯ ಪ್ರಭುತ್ವಶಕ್ತಿಯುಳ್ಳ ಮಗನು ಹುಟ್ಟುವನು. ಹನ್ನೊಂದನೇ ರಾತ್ರಿಯಲ್ಲಾದರೆ ಸುಂದರಿಯಲ್ಲದ ಪುತ್ರಿಯ ಜನನ. ಹನ್ನೆರಡನೇ ರಾತ್ರಿಯಲ್ಲಾದರೆ ಪುತ್ರ ಪುತ್ರ ಜನನ. ಮುಂದೆ ಈತ ಶ್ರೀಮಂತನಾಗುತ್ತಾನೆ. ಹದಿಮೂರನೇ ರಾತ್ರಿ ಪಾಪವನ್ನು ಆಚರಿಸುವ ಮಗಳು ಹುಟ್ಟುತ್ತಾಳೆ.
ಹದಿನಾಲ್ಕನೇ ರಾತ್ರಿ ಧರ್ಮಿಷ್ಟನಾದ ಮಗನ ಜನನವಾಗುವುದು. ಹದಿನೈದನೇ ರಾತ್ರಿ ಸಂಗಮವಾಗಿ ಗರ್ಭಿಣಿಯಾದರೆ ಧರ್ಮಿಷ್ಟಳಾದರೆ ಮಗಳ ಜನ್ಮವಾಗುವುದು. ಹದಿನಾರನೇ ರಾತ್ರಿ ಸಂಗಮವಾಗಲಾಗಿ ಸರ್ವವನ್ನೂ ತಿಳಿದಿರುವ ಮಹಾಜ್ಞಾನಿಯಾದ ಸರ್ವಸಂಪನ್ನಪುತ್ರನ ಜನನವಾಗುವುದು. ಅನಂತರದ ರಾತ್ರಿಗಳು ಗರ್ಭಾಧಾನಕ್ಕೆ ಪ್ರಶಸ್ತಕಾಲವಲ್ಲ. ಪುತ್ರ, ಪುತ್ರೀ ಬಯಕೆಉಳ್ಳವರು ಈ ರೀತಿ ಕ್ರಮವನ್ನು ಅನುಸರಿಸಬೇಕು. ಹಾಗಿದ್ದರೂ ಸಂತಾನಕ್ಕೆ ದೈವಾನುಗ್ರಹವೂ ಬೇಕು. ಹಾಗಾಗಿ ಸಂತಾನ ಯೋಗ - ದೈವಾನುಗ್ರಹ ಇವೆರಡೂ ಇದ್ದಾಗ ಈ ರೀತಿಯಾದ ಕ್ರಮವನ್ನು ಅನುಸರಿಸುವುದರಿಂದ ತಮಗೆ ಇಚ್ಚೆಯುಳ್ಳ ಸಂತಾನವನ್ನು ಪಡೆಯಬಹುದು.
ಸಂತಾನ ಯೋಗ
ಜನನ ಲಗ್ನದಿಂದ ದ್ವಾದಶ ಬಾವಗಳಲ್ಲಿ ಪಂಚಮ ಭಾವವು ವಿಶೇಷವಾಗಿ ಬುದ್ದಿವಂತಿಕೆ, ವಿದ್ಯೆ ಹಾಗೂ ಸಂತಾನಗಳ ಕುರಿತು ವಿಚಾರಮಾಡುವ ಭಾವವಾಗಿದೆ. ಲಗ್ನಾಧಿಪತಿ ಶುಭನಾಗಿ ಪಂಚಮಸ್ಥಾನದಲ್ಲಿದ್ದರೆ, ಪಂಚಮದ ಅಧಿಪತಿಯೂ ಪಂಚಮ ಅಥವಾ ಕೇಂದ್ರ ತ್ರಿಕೋಣದಲ್ಲಿದ್ದರೆ ಜಾತಕನಿಗೆ ಪುತ್ರರ ಪೂರ್ಣಸುಖ ಸಿಗುತ್ತದೆ. ಜಾತಕದಲ್ಲಿ ಬಲಯುತರಾದ ಗುರು, ಶುಕ್ರ, ಬುಧ, ಇವರು ಪಂಚಮಭಾವವನ್ನು ನೋಡಿದರೆ ಹಾಗೆಯೇ ಪಂಚಮಾಧಿಪತಿಯೂ ಬಲಿಷ್ಟನಾಗಿದ್ದರೆ ಬಹುಪುತ್ರಸಂತಾನಯೋಗವೆಂದು ಹೇಳುತ್ತಾರೆ. ಪಂಚಮೇಶನಾದ ಗ್ರಹನು ಉಚ್ಚನಾಗಿದ್ದರೆ ಹಾಗೂ ಲಗ್ನದಿಂದ ಅದು ದ್ವಿತೀಯ, ತೃತೀಯ, ಪಂಚಮವಾಗಿದ್ದರೆ ಅದಕ್ಕೆ ಗುರುಯುಲೆ ಅಥವಾ ದೃಷ್ಟಿ ಇದ್ದರೆ ಒಳ್ಳೆಯ ಪುತ್ರನ ಯೋಗವು. ಐದನೆಯ ಭಾವವು ಮಿಥುನ, ಕನ್ಯೆಯಾದರೆ ಅಥವಾ, ಮಕರ ಕುಂಭವಾದರೆ, ಶನಿ ಮಾಂದಿಯುಕ್ತನಾಗಿದ್ದರೆ ಅವರಿಗೆ ದತ್ತು ಸ್ವೀಕಾರ ಮಾಡಬೇಕಾಗುವುದು.
ಸಂತಾನ ಯಾವಾಗ?
ಪಂಚಮದಲ್ಲಿ ಗುರುವಿದ್ದು ಪಂಚಮದ ಅಧಿಪತಿ ಶುಕ್ರ ಸಹಿತನಾಗಿದ್ದರೆ ಮೂವತ್ತೆರಡು ಅಥವಾ ಮೂವತ್ತ್ಮೂರನೆಯ ವರ್ಷದಲ್ಲಿ ಸಂತಾನ ಪ್ರಾಪ್ತಿಯಾಗುವುದು. ಪಂಚಮಾಧಿಪತಿ ಕೇಂದ್ರದಲ್ಲಿ ಗುರುವಿನೊಡನಿದ್ದರೆ ಮೂವತ್ತಾರು ಅಥವಾ ಮೂವತ್ತನೆಯ ವರ್ಷದಲ್ಲಿ ಪುತ್ರನ ಜನನವಾಗುವುದು. ಅಥವಾ ಗುರುವಿನಿಂದ ಐದನೇ ಭಾವದಲ್ಲಿ ಶನಿ ಅಥವಾ ಪಾಪಗ್ರಹಗಳಿದ್ದರೆ ಒಬ್ಬನೇ ಮಗನು ಹುಟ್ಟುತ್ತಾನೆ. ಕರ್ಕರಾಶಿ ಪಂಚಮ ಭಾವವಾಗಿ ಅಲ್ಲಿ ಗುರುವಿದ್ದರೆ ಬಹುಪುತ್ರಿಯರ ಸಂತಾನವಾಗುತ್ತದೆ.
ಸಂತಾನಕಾರಕ ಗುರು, ಹಾಗಾಗಿ ಸಂತಾನವಿಷಯದಲ್ಲಿ ಗುರುವಿನ ಸ್ಥಾನ ಅತಿ ಪ್ರಧಾನಾದದ್ದಾಗಿದೆ. ಗುರುವು ಬಲಯುತನಾಗಿ ಪಂಚಮದಲ್ಲೊ ಅಥವಾ ಸಪ್ತಮ - ಪ್ರಥಮ ಭಾವಗಳಲ್ಲಿಯೋ ಇದ್ದು ಪಾಪದೃಷ್ಟಿ ಇಲ್ಲದಿದ್ದರೆ ಒಳ್ಳೆಯ ಸಂತಾನವಾಗುವುದು. ಹಾಗೆಯೇ ಪಂಚಮಾಧಿಪತಿ ಬಲಿಷ್ಠನಾಗಿ ಶುಭಗ್ರಹಗಳ ಮಧ್ಯದಲ್ಲಿದ್ದರೆ ಅಥವಾ ಶುಭಗ್ರಹರ ದೃಷ್ಟಿ ಅವನಿಗಿದ್ದರೆ ಒಳ್ಳೆಯ ಸಂತಾನವಾಗುವುದು. ಕೆಲವರು ಪುತ್ರಕಾರಕನಾದ ಗುರುವು ಪಂಚಮದಲ್ಲಿದ್ದರೆ ಕಾರಕತ್ವ ಫಲಿಸುವುದಿಲ್ಲ ಎನ್ನುತ್ತಾರೆ.
ಮಕ್ಕಳಿಲ್ಲದಿರುವುದಕ್ಕೆ ಅವರವರ ಕರ್ಮದೋಷಗಳೇ ಕಾರಣವಾಗುತ್ತವೆ. ಅದನ್ನು ಅನುಸರಿಸಿಯೇ ಪಿತೃಶಾಪ, ಮಾತೃಶಾಪ, ಸರ್ಪದೋಷ, ದೇವಶಾಪ ಮುಂತಾದ ಕಾರಣಗಳನ್ನು ಹೇಳುತ್ತಾರೆ. ಆದರೆ ಇವಕ್ಕೆಲ್ಲ ಪರಿಹಾರ ಮಾಡಿಕೊಂಡರೆ ಖಂಡಿತವಾಗಿಯೂ ಮಕ್ಕಳನ್ನು ಪಡೆಯಬಹುದು. ಹಾಗೆಯೇ ಅದಕ್ಕನುಗುಣವಾಗಿ ತಜ್ಞ ವೈದ್ಯರ ಚಿಕಿತ್ಯೆಯೂ ಅಗತ್ಯ. ಕೇವಲ ಬಾವಿ ತೋಡಿದ ಮಾತ್ರಕ್ಕೆ ನೀರು ಸಿಗುವುದಿಲ್ಲವಲ್ಲ. ಭಾವಿಯಿಂದ ನೀರನ್ನು ಸ್ವಪ್ರಯತ್ನದಿಂದಲೇ ಸೇದಬೇಕಷ್ಟೆ!
ಮಕ್ಕಳ ಫಲವಿಲ್ಲದ್ದಕ್ಕೆ ಹಲವು ಕಾರಣಗಳು ಡಾ. ಎಸ್.ಎನ್. ಶೈಲೇಶ್ ಬಾಣಾವರ
ಸ್ನೇಹಿತರು ಅಥವಾ ಸಂಬಂಧಿಕರು ಜೊತೆ ಸೇರಿದಾಗ ಲೋಕರೂಢಿಯಂತೆ ನಿಮಗೆ ಮಕ್ಕಳೆಷ್ಟು? ಏನು ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆ ಹಾಕುವುದು ಸಾಮಾನ್ಯವಾಗಿದೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಇದಕ್ಕೆ ಉತ್ತರ ಇನ್ನೂ ಆಗಿಲ್ಲ ಎನ್ನುವುದಾಗಿರುತ್ತದೆ. ಕೆಲವಕು ಕಣ್ಣೀರಿಂದಲೇ ಉತ್ತರಿಸುತ್ತಾರೆ. 'ನೋಡಿ ನಮಗೆ ಮದುವೆಯಾಗಿ 8 ವರ್ಷವಾಯಿತು. ಇನ್ನೂ ಕೂಡಾ ಮಕ್ಕಳಾಗಿಲ್ಲ ಎಂದು ಹೇಳಿದರೆ, ಕೆಲವರು ದೇವರ ಮೊರೆ ಹೋದೆವು, ಹಲವಾರು ವೈದ್ಯರುಗಳನ್ನು ಭೇಟಿಯಾಗಿ ಅವರು ಹೇಳಿದ ಎಲ್ಲ ಪರೀಕ್ಷೆಗಳನ್ನು ಮಾಡಿಸಿದೆವು. ಆದರೂ ಮಕ್ಕಳಾಗಲಿಲ್ಲ . ಕೆಲವರು ಜ್ಯೋತಿಷಿಗಳ ಬಳಿ ಕುಂಡಲಿಗಳನ್ನು ಪರಿಶೀಲಿಸಿ, ಅವರು ಹೇಳಿದ ಪೂಜೆ ಪುನಸ್ಕಾರಗಳನ್ನೆಲ್ಲಾ ಮಾಡಿದರೂ ಮಕ್ಕಳಾಗಲಿಲ್ಲ ಎನ್ನುವುದ ಹತ್ತು ಹಲವಾರು ಸಮಸ್ಯೆಗಳನ್ನು ತಿಳಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಮದುವೆ ಮೊದಲು ಸಾಲಾವಳಿ ಕೇಳುವುದು ಕಡಿಮೆಯಾಗಿದೆ. ಹಿಂದಿನ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಗಳ ಅಥವಾ ಮಗನ ಜಾತಕವನ್ನು ಜ್ಯೋತಿಷಿಗಳ ಬಳಿ ತೋರಿಸುತ್ತಿದ್ದರು. ಜಾತಕ ಇಲ್ಲದವರು ಹೆಸರು ಬಲದ ಮೇಲೆ ಸಾಲಾವಳಿ ಬರುವುದು ಇಲ್ಲವೋ ಎಂದು ಪರೀಕ್ಷಿಸುತ್ತಿದ್ದರು. ಇನ್ನು ಕೆಲವರು ದೇವರ ಅಪ್ಪಣೆ ಕೇಳಿ ವಿವಾಹ ಕಾರ್ಯ ನೆರವೇರಿಸುತ್ತಿದ್ದರು. ಕೆಲವರು ಈ ಪದ್ಧತಿಯನ್ನು ಈಗಲೂ ಮುಂದುವರಿಸಿದ್ದಾರೆ. ಆದರೆ, ಹೆಚ್ಚಿನವರು ಅದರಿಂದ ದೂರ ಹೋಗಿದ್ದಾರೆ.
ದೋಷಗಳ ಪರಿಹಾರ
ಜಾತಕದಲ್ಲಿ ಕುಜ ದೋಷ ಹಾಗೂ ಬೇರೆ ಇನ್ನೇನಾದರೂ ತೊಂದರೆ ಇದ್ದರೆ ಅದಕ್ಕೆ ಪರಿಹಾರ ಸೂಜಿಗೆ ಸಾಲಾವಳಿ ವಿಚಾರದಲ್ಲಿ 18 ಗುಣ ಮೇಲ್ಪಟ್ಟು ಬಂದಾಗ ವಿವಾಹ ನಡೆಸಬಹುದೆಂದು ಎಲ್ಲಾ ತರಹದ ವಿಚಾರ ವಿನಿಮಯ ಮಾಡಿದರೂ ಕೂಡ ಒಂದೊಂದು ಸಲ ಮಕ್ಕಳ ಫಲ ಆಗುವುದಿಲ್ಲ. ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರ.
ಮೊದಲನೆಯದು ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಫಲಗಳು. ಅದರ ಜೊತೆ ಪ್ರೇತಶಾಪ, ಗುರುಶಾಪ, ಪಿತೃಶಾಪ, ಸರ್ಪಶಾಪ, ಮಾತೃಶಾಪ ಹೀಗೆ ಮುಂತಾದ ಶಾಪಗಳನ್ನು ಮಾಡಿದ ತಪ್ಪಿಗೆ ಹಾಗೂ ಈ ಯಾವುದಾದರೂ ಶಾಪಗಳ ಪಾಪದಿಂದ ಮಕ್ಕಳ ಫಲಗಳಾಗುವುದಿಲ್ಲ. ಈ ವಿಚಾರವನ್ನು ಕುಂಡಲಿಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಚಾರಗಳನ್ನು ತಿಳಿದುಕೊಳ್ಳಬಹುದು. ಹೀಗೆ ಪೂರ್ವಜನ್ಮದ ಪಾಪದ ಫಲದಿಂದ ಮಕ್ಕಳ ಭಾಗ್ಯವಿಲ್ಲವೆಂದು ಅನುಭವಿ ಜ್ಯೋತಿಷಿಗಳಿಂದ ತಿಳಿದುಕೊಂಡ ನಂತರ ಸಂಬಂಧ ಪಟ್ಟ ಶಾಪದ ಫಲಗಳನ್ನು ಪೂಜೆ, ಹೋಮ ಮುಂತಾದವುಗಳನ್ನು ಕ್ರಮಬದ್ಧವಾಗಿ ಆಚರಣೆ ಮಾಡಿ ಮಕ್ಕಳ ಭಾಗ್ಯ ಪಡೆಯಬಹುದು. ಇನ್ನು ಎರಡನೆಯ ಕಾರಣವೇನೆಂದರೆ ಕೆಲವು ವೈಜ್ಞಾನಿಕ ರೀತಿಯ ಮಕ್ಕಳ ಭಾಗ್ಯ ದೊರಕದೇ ಇರಬಹುದು ಅದು ಜ್ಯೋತಿಷ್ಯ ಶಾಸ್ತ್ರದ ಮೂಲಕ ಇದೇನು ವೈಜ್ಞಾನಿಕಕ್ಕೂ ಜ್ಯೋತಿಷ್ಯಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಇಲ್ಲಿ ಬರುತ್ತದೆ. ಅಲ್ಲದೆ ಅದಕ್ಕೆ ಉತ್ತರ ಜ್ಯೋತಿಷ್ಯ ಶಾಸ್ತ್ರವೂ ಕೂಡ ವಿಜ್ಞಾನವಾಗಿದೆ.
ಇನ್ನು ವೈಜ್ಞಾನಿಕವಾಗಿ ಎರಡು ಭಾಗಗಳಾಗಿ ವಿಂಗಡಿಸಿದಾಗ ಪಕ್ಷ ಪಾತದ ಬಂಜೆತನ ಹಾಗೂ ನಪುಂಸಕತ್ವದಿಂದ ಮಕ್ಕಳ ಫಲ ದೊರಕದೆ ಇರಬಹುದು. ವೈದ್ಯಕೀಯ ಪರೀಕ್ಷೆಗೆ ಒಳಗಾದ ನಂತರ ಹೆಣ್ಣಿನಲ್ಲಿ ತೊಂದರೆ ಇರಬಹುದು ಅಥವಾ ಗಂಡಿನಲ್ಲಿ ತೊಂದರೆ ಇರಬಹುದು ಅಂತಹ ಸಂದರ್ಭಗಳಲ್ಲಿ ಕೆಲವು ಔಷಧಿಗಳಿಂದ ಮಕ್ಕಳಾಗುವ ಸಂಭವ ಇರುತ್ತದೆ. ಒಂದು ವೇಳೆ ಔಷಧಿಯಿಂದಲೂ ಸಂತಾಲ ಫಲ ದೊರಕದೆ ಇದ್ದಾಗ ದತ್ತು ಪಡೆದುಕೊಳ್ಳಬೇಕಾದ ಪ್ರಸಂಗವು ಬರಬಹುದು.
ಕುಂಡಲಿಗಳಲ್ಲಿ ಗೋಚರ
ಈಗ ಜ್ಯೋತಿಷ್ಯ ಶಾಸ್ತ್ರದಲ್ಲಿ ಮಕ್ಕಳ ಫಲವನ್ನು ನವಾಂಶ ಮತ್ತು ಸಪ್ತಾಂಶ ಕುಂಡಲಿಗಳನ್ನು ನೋಡಿದಾಗ ಮಕ್ಕಳ ಭಾಗ್ಯದ ವಿಚಾರ ಗೋಚರವಾಗುತ್ತದೆ.
1. ಐದನೆಯ ಭಾವಾಧಿಪತಿ ಪುರುಷ ರಾಶಿ ಹಾಗೂ ಪುರುಷ ನವಾಂಶದಲ್ಲಿದ್ದರೆ ಗಂಡು ಮಗುವಿನ ಫಲ ದೊರಕುತ್ತದೆ.
2. ಐದನೆಯ ಭಾವಾಧಿಪತಿ ನಪುಂಸಕ ರಾಶಿ ಹಾಗೂ ನಪುಂಸಕ ನವಾಂಶದಲ್ಲಿದ್ದರೆ ಅಂತವರಿಗೆ ನಪುಂಸಕ ಮಗುವಿನ ಫಲ ದೊರೆಯುತ್ತದೆ.
3. ಐದನೆಯ ಭಾವಾಧಿಪತಿ ಸ್ತ್ರೀ ರಾಶಿ ಹಾಗೂ ಸ್ತ್ರೀ ನವಾಂಶದಲ್ಲಿದ್ದರೆ ಅಂತವರಿಗೆ ಹೆಣ್ಣು ಮಗುವಿನ ಫಲ ದೊರೆಯುತ್ತದೆ.
4. ಐದನೆಯ ಭಾವಾಧಿಪತಿ ದ್ವಿಸ್ವಭಾವ ರಾಶಿ ಹಾಗೂ ದ್ವಿಸ್ವಭಾವ ನವಾಂಶದಲ್ಲಿದ್ದರೆ ಅಂತವರಿಗೆ ಅವಳಿ ಜವಳಿ ಮಕ್ಕಳ ಫಲ ಪ್ರಾಪ್ತಿಯಾಗುತ್ತದೆ.
ಇನ್ನೂ ಅನೇಕ ಗ್ರಂಥಗಳಾದ ಸತ್ಯ ಜಾತಕ, ಪಲಾಧಿಪತಿ, ಸರ್ವಧ ಚಿಂತಾಮಣಿ ಬೃಹತ್ ಪರಾಶರ ಹೋರಾ ಶಾಸ್ತ್ರ, ಜಾತಕ ಪಾರಿಜಾತಕ, ಮಂತ್ರೇಶ್ವರ ಕೃತಿ, ಸಂಕೇತ ನಿಧಿ, ಹೀಗೆ ಹಲವು ಗ್ರಂಥಗಳಲ್ಲಿ ಮಕ್ಕಳು ನಿಧಾನವಾಗಿ ಆಗುವುದಕ್ಕೆ ಹಾಗೂ ಮಕ್ಕಳ ಫಲ ಇಲ್ಲದಿರುವುದಕ್ಕೆ ಕಾರಣಗಳೂ ಹಾಗೂ ಹೇಗೆ ಗ್ರಹಗತಿಗಳಿಂದ ಆಗುತ್ತಿದೆ ಎಂಬ ವಿಚಾರಗಳನ್ನು ತಿಳಿಸಿದೆ.
1. ಐದನೆಯ ಭಾವದಲ್ಲಿ ಅಂಗಾರಕನ ಜೊತೆ (ಕುಜ) ಪಾಪಗ್ರಹಗಳಿದ್ದರೆ ಮಕ್ಕಳು ಮರಣ ಹೊಂದುತ್ತವೆ ಹಾಗೂ ಗರ್ಭನಿಲ್ಲುವುದಿಲ್ಲ.
2. ಐದನೆಯ ಭಾವವು ಶನೇಶ್ವರ (ಶನಿ)ನಿಂದ ದೃಷ್ಟಿ ಹೊಂದಿದ್ದರೆ ಮಕ್ಕಳಾಗುವುದಿಲ್ಲ.
3. ಐದನೆಯ ಭಾವದಲ್ಲಿ ರಾಹು ಇದ್ದರೆ ಹಾಗೂ ಅಂಗಾರಕನ (ಕುಜ) ದೃಷ್ಟಿ ಇದ್ದರೆ ಸಂತಾನಫಲವಿಲ್ಲ.
4. ಐದನೆಯ ಭಾವ ಹಾಗೂ ಅಧಿಪತಿ ಗ್ರಹದ ತೊಂದರೆಗೆ ಒಳಗಾಗಿದ್ದಾಗ ಸಂತಾನಫಲವಿಲ್ಲ.
5. ಐದನೆಯ ಭಾವದಲ್ಲಿ ಪಾಪ ಗ್ರಹಗಳು ಹಾಗೂ ಭಾವಾಧಿಪತಿ ಪಾಪಗ್ರಹಗಳೊಡನೆ ಇದ್ದರೆ ಸಂತಾನಕಾರಕ ಗುರು ಐದನೆಯ ಭಾವದಲ್ಲಿದ್ದಾಗ ಪುತ್ರಶೋಕ ನಿರಂತರಂ.
6. ಅಂಗಾರಕ (ಕುಜ) ಹಾಗೂ ಶನೇಶ್ವರ (ಶನಿ) ಐದನೆಯ ಬಾವದಲ್ಲಿದ್ದರೆ ಹಾಗೂ ಐದನೆಯ ಭಾವದಿಂದ 6, 8, 12ರಲ್ಲಿ ಪಾಪಗ್ರಹಗಳಿದ್ದರೆ ಎದನೇಯ ಭಾವಾಧಿಪತಿ ಪಾಪಗ್ರಹಗಳೊಡನೆ ಅಥವಾ ಶತ್ರುಗಳೊಂದಿಗೆ ಇದ್ದರೆ ಸಂತಾನಫಲವಿರುವುದಿಲ್ಲ.
7. ಪಂಚಮಾಧಿಪತಿ ಹಾಗೂ ಸಪ್ತಮಾಧಿಪತಿ ಯುತಿಯಲ್ಲಿದ್ದರೆ ಅಥವಾ ರಾಶಿ ಪರಿವರ್ತನೆ ಹೊಂದಿದ್ದರೆ ಮಕ್ಕಳ ಫಲವಿಲ್ಲ.
8. ಐದನೆಯ ಭಾವ ಮತ್ತು ಲಗ್ನ ಅಗ್ನಿರಾಶಿಯಾಗಿದ್ದು ಐದನೆಯ ಬಾವಾಧಿಪತಿ 6, 8, 12ರಲ್ಲಿದ್ದರೆ ಸಂತಾನ ಫಲವಿಲ್ಲ.
9. ಸಂತಾನ ಭಾಗ್ಯ ಕೊಡುವ ಭಾವಾಧಿಪತಿಗಳು ಶತ್ರುಸ್ಥಾನ, ನೀಚಸ್ಥಾನ, ದ್ವಿಸ್ಥಾನದಲ್ಲಿ ಬಲಹೀನರಾಗಿದ್ದರೆ ಸಂತಾನಫಲವಿಲ್ಲ.
ಸರ್ಪಶಾಪ
ಐದನೆಯ ಭಾವದಲ್ಲಿ ಕುಜನ ರಾಶಿಯಾಗಿದ್ದು ಅದರಲ್ಲಿ ರಾಹು ಸ್ಥಿತನಿದ್ದರೆ ಹಾಗೂ ಅಂಗಾರಕನ ದೃಷ್ಠಿಗೆ ಒಳಗಾಗಿದ್ದರೆ ಮಕ್ಕಳಾಗುವುದಿಲ್ಲ.
ಪಿತೃಶಾಪ
ಐದನೇ ಭಾವವು ನೀಚ ಸೂರ್ಯನಾಗಿದ್ದು (ರವಿ) ಹಾಗೂ ಸೂರನ್ಯನು (ರವಿ) ಪಾಪಕೃರ್ತ ಯೋಗದಲ್ಲಿದ್ದರೆ ಹಾಗೂ ಆ ಸೂರ್ಯನು (ರವಿ) ಶನಿಯ ನವಾಂಶದಲ್ಲಿದ್ದರೆ, ರಾಹು ಶನಿ ಯುತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ.
ಮಾತೃಶಾಪ
ಐದನೇ ಭಾವವು ನೀಚ ಚಂದ್ರನಾಗಿದ್ದು ಹಾಗೂ ಚಂದ್ರನು ಪಾಪ ಕರ್ತರಿಯೋಗದಲ್ಲಿದ್ದು ಶನಿಯ ನವಾಂಶದಲ್ಲಿ ಆ ಚಂದ್ರನಿದ್ದರೆ ಹಾಗೂ ಶನಿ ಅಥವಾ ರಾಹು ಯತಿಯಲ್ಲಿದ್ದರೆ ಮಕ್ಕಳಾಗುವುದಿಲ್ಲ.
ಭ್ರಾತೃಶಾಪ
ಮೂರನೆಯ ಭಾವದಲ್ಲಿ ಲಗ್ನಾಧಿಪತಿಯಿದ್ದು ಅಂಗಾರಕ ರಾಹು ಎದನೆಯ ಭಾವದಲ್ಲಿದ್ದರೆ ಮೂರನೆಯ ಭಾವದಲ್ಲಿ ಎಂಟರ ಭಾವಾಧಿಪತಿಯಿದ್ದು ಹಾಗೂ ಐದನೆಯ ಭಾವದಲ್ಲಿ ರಾಹು ಅಂಗಾರಕನೊಡನೆ ಇದ್ದರೆ ಮಕ್ಕಳಾಗುವುದಿಲ್ಲ.
ಪ್ರೇತಶಾಪ
ಲಗ್ನದಿಂದ ಐದನೇ ಶನಿಗೂ ಹಾಗೂ ಸ್ಥಾನಾಧಿಪತಿಗೂ ಕೂಡಾ ಮಾಂದ್ಯ ದೃಷ್ಠಿಯಿದ್ದು ಲಗ್ನದಿಂದ ಐದನೇ ಸ್ಥಾನದಲ್ಲಿ ಶನಿ ಮಾಂದ್ಯರು ಕೂಡಿದ್ದರೂ ಮಕ್ಕಳಾಗುವುದಿಲ್ಲ.
ಬ್ರಹ್ಮಶಾಪ
ಗುರು, ಶನಿ, ಅಂಗಾರಕ ನವಾಂಶದಲ್ಲಿದ್ದರೆ ಲಗ್ನದಿಂದ ಐದನೇ ಸ್ಥಾನಾಧಿಪನು ಅಂಗಾರಕ, ಗುರು, ಶನಿ, ರಾಹುವಿನಿಂದ ಕೂಡಿ ಲಗ್ನದಿಂದ 6, 8, 12ನೇ ಸ್ಥಾನದಲ್ಲಿ ದುರ್ಬಲರಾಗಿದ್ದರೆ ಮಕ್ಕಳಾಗುವುದಿಲ್ಲ.
ಗುರುಶಾಪ
ಶನಿ ಅಥವಾ ರಾಹು ಯತಿಯಲ್ಲಿದ್ದರೆ ನವಾಂಶದಲ್ಲಿ ಗುರು, ಶನಿಯಿದ್ದರೆ ಲಗ್ನದಿಂದ ಐದನೇ ಭಾವವು ನೀಚ ಗುರುವುನದ್ದು ಆಗಿದ್ದ ಗುರು ಪಾಪಕರ್ತರಿ ಯೋಗದಲ್ಲಿದ್ದರೆ ಮಕ್ಕಳಾಗುವುದಿಲ್ಲ.
ಆದ್ದರಿಂದ ಯಾರೇ ಆಗಲಿ ಮಕ್ಕಳ ಫಲವಿಲ್ಲದಿದ್ದಾಗ ಅನುಭವಿ ಜ್ಯೋತಿಷ್ಯರಿಂದ ಜಾತಕವನ್ನು ಪರಿಶೀಲಿಸಿ ಸಂಬಂಧ ಪಟ್ಟ ತೊಂದರೆ ಹಾಗೂ ಶಾಪದ ಫಲಗಳನ್ನು ತಿಳಿದು ಅದಕ್ಕೆ ಸಂಬಂಧಿಸಿದ ಪೂಜೆ, ಹೋಮ, ಜಪತಪಗಳಿಂದ ಮಕ್ಕಳ ಫಲ ಪಡೆದು ಸುಖ ಸಂತೋಷದಿಂದ ಬಾಳಬಹುದು.
Subscribe to:
Post Comments (Atom)
No comments:
Post a Comment