Tuesday, July 3, 2012
ಅರ್ಧ ತಲೆನೋವು: ಸರಳ ಪರಿಹಾರ
ಅರ್ಧ ತಲೆನೋವು: ಸರಳ ಪರಿಹಾರ ಡಾ. ವೆಂಕಟ್ರಮಣ ಹೆಗಡೆ
ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಅರ್ಧ ತಲೆನೋವು ಒಂದು. ವಾಕರಿಕೆ, ವಾಂತಿ, ಸುಸ್ತು ಇವುಗಳೊಂದಿಗೆ ತಲೆಯ ಎಡ ಅಥವಾ ಬಲಭಾಗದಲ್ಲಿ ಅತಿಯಾದ ನೋವು ಕಾಡುತ್ತದೆ.
ಯೋಗ ಹಾಗೂ ನಿಸರ್ಗ ಚಿಕಿತ್ಸೆಗಳು ಬಹುತೇಕ ಮಂದಿಗೆ ಯಶಸ್ವಿ ಪರಿಹಾರ ನೀಡಬಲ್ಲವು.
ವಮನದೌತಿ ಕ್ರಿಯಾ
ಇದು ಯೋಗ ಶಾಸ್ತ್ರದ ಒಂದು ವಿಧಾನ. ಅರ್ಧ ತಲೆನೋವು, ದಮ್ಮು, ಕಫ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾರದಲ್ಲಿ ಎರಡು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 7-8 ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ 2-3 ಚಮಚ ಉಪ್ಪು ಸೇರಿಸಿ ಗಟಗಟನೆ ವೇಗವಾಗಿ ಕುಡಿಯಬೇಕು. ಕೂಡಲೇ ಎದ್ದುನಿಂತು ಎಡಗೈಯಲ್ಲಿ ಹೊಟ್ಟೆಗೆ ಒತ್ತಡ ಹಾಕುತ್ತ, ಬಲಗೈ ಬೆರಳುಗಳನ್ನು ಗಂಟಲಿಗೆ ಹಾಕಿ ವಾಂತಿ ಮಾಡಬೇಕು. ಮೊದಮೊದಲು 2-3 ವಾರದಲ್ಲಿ ಸರಿಯಾಗಿ ವಾಂತಿ ಆಗದೇ ಇರಬಹುದು. ಕೆಲವರಿಗೆ ಸ್ವಲ್ಪ ಭೇದಿ ಕೂಡ ಆಗಬಹುದು. ಇದು ಸಾಮಾನ್ಯ. ಹೀಗೆ ವಮನ ಕ್ರಿಯೆ ನಡೆಸಿದ ದಿನ ಉಪ್ಪು, ಹುಳಿ, ಖಾರ ಕಡಿಮೆ ಸೇವಿಸಬೇಕು.
ಆಹಾರ ಕ್ರಮ
ಹಣ್ಣು, ತರಕಾರಿ, ಮೊಳಕೆ ಕಾಳು, ಮಜ್ಜಿಗೆ, ಎಳನೀರು, ತಾಜಾ ತರಕಾರಿ ರಸ, ಹಣ್ಣಿನ ರಸ ಹೆಚ್ಚೆಚ್ಚು ಸೇವಿಸಬೇಕು. ಪ್ರತಿದಿನ ಕನಿಷ್ಟ 2-3 ಲೀಟರ್ ನೀರು ಕುಡಿಯಲೇಬೇಕು.1-2 ತಿಂಗಳ ಮಟ್ಟಿಗೆ ರಾತ್ರಿ ಊಟದ ಬದಲು ಹಸಿ ತರಕಾರಿ, ಹಣ್ಣು, ಮೊಳಕೆ ಕಾಳು, ಸೂಪ್ ಮಾತ್ರ ಸೇವಿಸಿ. ಖಾರ, ಮಸಾಲೆ, ಕರಿದ ಆಹಾರ, ಬೇಕರಿ ತಿನಿಸು, ತಂಪು ಪಾನೀಯ, ಐಸ್ಕ್ರೀಮ್ ಕಡಿಮೆ ಮಾಡಿ.
ಪ್ರಾಣಾಯಾಮ
ತಜ್ಞರಿಂದ ಯೋಗ ಕಲಿತು ಪ್ರತಿದಿನ ಅರ್ಧಗಂಟೆಯಾದರೂ ಯೋಗಾಸನ ಮಾಡಿ. ಇದು ಉತ್ತಮ ಫಲಿತಾಂಶ ನೀಡುತ್ತದೆ.
ತಲೆನೋವಿಗೆ ಮಾತ್ರೆ ಬಿಡಿ; ಮನೆ ಮದ್ದು ಕೊಡಿ
ದಿನ ಬೆಳಗಾದ್ರೆ ಶನಿಯಂತೆ ಕಾಡೋದು ತಲೆನೋವು. ಹಾಗೆ ಬಂದು ಹೀಗೆ ಹೋಗುವ ತಲೆನೋವಿಗೆ ಕಂಡ ಕಂಡ ಮಾತ್ರೆ ತೆಗೆದುಕೊಳ್ಳುತ್ತೀರಿ. ಇವೆಲ್ಲ ಆರಂಭದಲ್ಲಿ ನೋವು ನಿವಾರಕವಾಗಿ ಕಂಡರೂ ಕೊನೆಗೆ ಅದೇ ಅಭ್ಯಾಸವಾಗಿ ಬಿಡುತ್ತದೆ. ಅದು ಇನ್ಯಾವುದೋ ಸಮಸ್ಯೆಯನ್ನು ತಂದಿಡಬಹುದು. ಅದರ ಬದಲು ಮನೆಮದ್ದಿನಿಂದಲೇ ತಲೆನೋವು ಓಡಿಸಿ. *ಒಂದು ವಾರ ನಿರಂತರವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣಿನ ಜತೆ ಸ್ವಲ್ಪ ಉಪ್ಪು ಸೇರಿಸಿಕೊಂಡು ತಿನ್ನಿ. *ಕುದಿಯುವ ನೀರಿನಲ್ಲಿ ತಾಜಾ ಶುಂಠಿ ಅಥವಾ ಒಣ ಶುಂಠಿ ಪುಡಿಯನ್ನು ಸೇರಿಸಿ ಹಬೆ ತೆಗೆದುಕೊಳ್ಳಿ.
*ನಿಂಬೆರಸವನ್ನು ಹಣೆಗೆ ಹಚ್ಚಿ. *ಶುಂಠಿಯನ್ನು ಜಜ್ಜಿ ಹಣೆಗೆ ಹಚ್ಚಿಕೊಳ್ಳಿ.
*ಬಿಸಿ ನೀರು ತುಂಬಿದ ಒಂದು ಬಕೆಟ್ನಲ್ಲಿ ನಿಮ್ಮ ಕಾಲುಗಳನ್ನು 15 ನಿಮಿಷಗಳ ಕಾಲ ಇಳಿಬಿಡಬೇಕು. ಎರಡು ಮೂರು ವಾರಗಳ ಕಾಲ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ. *ಬಿಸಿ ನೀರಿನಲ್ಲಿ ನೀಲಗಿರಿ ತೈಲದ 10 ಹನಿಗಳನ್ನು ಹಾಕಿ ಹಬೆ ತೆಗೆದುಕೊಳ್ಳಿ.
*ಅರ್ಧ ಚಮಚ ದಾಲ್ಚಿನಿ ಪುಡಿಯನ್ನು ನೀರಿನೊಂದಿಗೆ ಸೇರಿಸಿ ಹಣೆಗೆ ಹಚ್ಚಿಕೊಳ್ಳಿ
ಆರೋಗ್ಯ ಸಲಹೆಗಳು
* ಕರಿಬೇವಿನ ಕಡ್ಡಿಯ ರಸವನ್ನು ಕಣ್ಣುಗಳ ಕೆಳಭಾಗದಲ್ಲಿ ಲೇಪಿಸಿದಲ್ಲಿ ಕಲೆಗಳು ಮಾಯವಾಗುತ್ತವೆ.
* ಜೇನುತುಪ್ಪಕ್ಕೆ ಈರುಳ್ಳಿ ರಸವನ್ನು ಬೆರೆಸಿ ಕುಡಿದಲ್ಲಿ ಗಂಟಲುನೋವು ಕಡಿಮೆಯಾಗುವುದು.
* ಮೊಟ್ಟೆ ಹಳದಿ ಭಾಗಕ್ಕೆ ಆಲಿವ್ ಎಣ್ಣೆ ಮಿಶ್ರ ಮಾಡಿ ಫೇಸ್ ಪ್ಯಾಕ್ ಮಾಡಿ ತೊಳೆದಲ್ಲಿ ಮುಖ ಕಾಂತಿಯುಕ್ತವಾಗುವುದು.
* ಬಾದಾಮಿ ಪೇಸ್ಟ್, ನಿಂಬೆರಸ ಹಾಗೂ ಹಾಲಿನ ಕೆನೆ ಮಿಶ್ರ ಮಾಡಿ ಹಚ್ಚುವುದರಿಂದ ಕೈಗಳ ಬಣ್ಣ ಹೊಳಪಾಗುತ್ತದೆ.
* ಜೇನುತುಪ್ಪ, ನಿಂಬೆರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ತೊಳೆದಲ್ಲಿ ಮೊಡವೆಗಳು ಕಡಿಮೆಯಾಗುತ್ತವೆ.
* ಕರರ್ಬೂಜ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಆಗಾಗ್ಗೆ ಸ್ವಲ್ಪವೇ ತೆಗೆದುಕೊಂಡು ನೀರಿನಲ್ಲಿ ಕಲಸಿ ಫೇಸ್ ಪ್ಯಾಕ್ ಮಡಿ. ನೆರಿಗೆಗಳು ಮಾಯವಾಗುತ್ತವೆ.
* ಕೆಸುವಿನ ಗೆಡ್ಡೆ , ಗೊರಂಟಿ ಸೊಪ್ಪಿನೊಂದಿಗೆ ಅರೆದು ಮೊಟ್ಟೆಯ ಹಳದಿ ಭಾಗದೊಂದಿಗೆ ಮಿಶ್ರ ಮಾಡಿ ಕೂದಲಿಗೆ ಪ್ಯಾಕ್ ಮಾಡಿ. ಕೆಲಸಮಯದ ನಂತರ ತಲೆ ಸ್ನಾನ ಮಾಡಿ. ಹೀಗೆ ಆಗಾಗ್ಗೆ ಮಾಡುವುದರಿಂದ ಒರಟಾದ ಕೂದಲು ಮೃದಯವಾಗುತ್ತದೆ.
ಆರೋಗ್ಯ ಹೆಚ್ಚಿಸುವ ಬಾದಾಮಿ
ಪ್ರತಿದಿನ ಬಾದಾಮಿ ತಿನ್ನಿ, ಆರೋಗ್ಯವಾಗಿರಿ ಎಂದು ಹಿರಿಯರು ಹೇಳುವ ಮಾತು ಖಂಡಿತಾ ನಿಜ. ಯಾಕೆಂದರೆ ಇದು ಆರೋಗ್ಯವನ್ನು ಹೆಚ್ಚಿಸುತ್ತದೆ ಮಾತ್ರವಲ್ಲ , ಸಾಮಾನ್ಯ ಕಾಯಿಲೆಗಳಿಗೆ ದಿವ್ಯೌಷಧ. ಇದರಲ್ಲಿ ಶೇ. 41 ರಷ್ಟು ಜಿಡ್ಡು ಹಾಗೂ ಶೇ. 16 ರಷ್ಟು ಪ್ರೊಟೀನ್ ಅಡಕವಾಗಿದೆ.
* ಬಾದಾಮಿಯಲ್ಲಿ ವಿಟಮಿನ್ ಡಿ ಹೇರಳವಾಗಿರುವುದರಿಂದ ಬಾದಾಮಿ ಎಣ್ಣೆಯ ಮಸಾಜ್ ಮಗುವಿನ ಚರ್ಮವನ್ನು ಮೃದುಗೊಳಿಸುವುದರ ಜತೆ ಎಲುಬನ್ನು ಸಧೃಡಗೊಳಿಸಿಸುತ್ತದೆ.
* ಪ್ರತಿದಿನ ನಿಗದಿತ ಪ್ರಮಾಣದ ಬಾದಾಮಿ ತೈಲ ಸೇವನೆಯು ಕೊಲೆಸ್ಟಾರ್ ಪ್ರಮಾಣ ಇಳಿಸುತ್ತದೆ. ಹೃದಯ ಸ್ವಾಸ್ಥ್ಯವನ್ನು ಕಾಪಾಡುತ್ತದೆ.
* ಸಿಹಿ ಬಾದಾಮಿ ತೈಲವನ್ನು ಮಸಾಜ್ ಮಾಡಿದರೆ ಸ್ನಾಯು ಸೆಳೆತ ಕಡಿಮೆಯಾಗುತ್ತದೆ.
* ತಲೆಕೂದಲಿಗೆ ಹಚ್ಚುವುದರಿಂದ ಕೂದಲ ಹೊಳಪು ಹೆಚ್ಚುವುದಲ್ಲದೆ, ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಬಾಲ್ಡ್ಹೆಡ್ ಸಮಸ್ಯೆನಾ...? ನಿಮ್ಮಲ್ಲೇ ಇದೆ ಪರಿಹಾರ
ಇತ್ತೀಚಿನ ದಿನಗಳಲ್ಲಿ ಬಾಲ್ಡ್ನೆಸ್ ಒಂದು ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಯುವಕರು ಕೂಡಾ ಕೂದಲುದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿನವೂ ಬೇಸರ, ಮಾನಸಿಕ ಒತ್ತಡ, ಅನಿಯಮಿತ ಆಹಾರ ಪದ್ಧತಿಯಿಂದ ನಿಮ್ಮ ಕೂದಲು ಉದುರಿ ಬೊಕ್ಕ ತಲೆಯುಂಟಾಗಬಹುದು. ಕೂದಲು ಉದುರುವಿಕೆಗೆ ಕಾರಣಗಳು ಅನೇಕ. ಆ ಕಾರಣಗಳನ್ನು ತಿಳಿದುಕೊಂಡರೆ ಬೊಕ್ಕ ತಲೆಯ ಸಮಸ್ಯೆಯಿಂದ ಪಾರಾಗಬಹುದು.
ಬಾಲ್ಡ್ನೆಸ್ಗೆ ಕಾರಣಗಳು * ಕಲುಷಿತ ಹೊಗೆ. * ಸೂರ್ಯನ ಕಿರಣಗಳು ನೇರವಾಗಿ ತಲೆ ಮೇಲೆ ಬೀಳುವುದು. * ನಿದ್ರಾಹೀನತೆ, ಮಾನಸಿಕ ಒತ್ತಡ.
* ಜಾಸ್ತಿ ಕಣ್ಣೀರು ಹಾಕುವುದರಿಂದ ಅಥವಾ ಕಣ್ಣೀರನ್ನು ತಡೆದುಕೊಳ್ಳುವುದರಿಂದ.* ಜಾಸ್ತಿ ಉಪ್ಪು , ಮಸಾಲೆ ವಸ್ತುಗಳ ಸೇವನೆ.
* ವಂಶಪಾರಂಪರ್ಯವಾಗಿಯೂ ಬೊಕ್ಕ ತಲೆ ಬರುವ ಸಾಧ್ಯತೆ ಇದೆ.
ಪರಿಹಾರ
* ಹಗಲು ನಿದ್ದೆ ಮಾಡುವುದನ್ನು ತಪ್ಪಿಸಿ. ನೀವು ರಾತ್ರಿ ಕೆಲಸಕ್ಕೆ ಹೋಗುವವರಾದರೆ ಪರ್ವಾಗಿಲ್ಲ, ಅನಿವಾರ್ಯವಾಗಿ ಹಗಲು ನಿದ್ದೆ ಮಾಡಲೇಬೇಕು.
* ಯೋಗದ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. * ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
* ಆಲ್ಕೋಹಾಲ್ ಮತ್ತು ತಂಬಾಕು ವಸ್ತುಗಳಿಂದ ದೂರ ಇರಿ. * ಸರಿಯಾದ ಕೂದಲು ನಿರ್ವಹಣೆಯ ಟೆಕ್ನಿಕ್ಸ್ನ್ನು ಬಳಸಿ.
* ಹೆಚ್ಚು ಖಾರ, ಉಪ್ಪು ಇರುವ ಪದಾರ್ಥಗಳನ್ನು ಸೇವಿಸಬಾರದು. ಸಮತೋಲಿತ ಆಹಾರ ಕ್ರಮವನ್ನು ಪಾಲಿಸಿ.
* ತುಂಬಾ ಬಿಸಿಯಾದ ನೀರಿನಲ್ಲಿ ಕೂದಲನ್ನು ತೊಳೆಯಬೇಡಿ. ಕೊಠಡಿಯ ಉಷ್ಣತೆಗೆ ಅನುಗುಣವಾದ ಬಿಸಿ ನೀರನ್ನು ತಲೆ ಸ್ನಾನಕ್ಕೆ ಬಳಸಿ.
* ತಲೆ ಕೂದಲಿಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಳಸಿ.
ಬ್ಯೂಟಿ ಟಿಪ್ಸ್
* ಸ್ನಾನಕ್ಕೆ ಹೋಗುವ ಅರ್ಧ ಗಂಟೆ ಮೊದಲು ಮೈ-ಕೈಗೆ ಕೊಬ್ಬರಿ ಎಣ್ಣೆ ಹಚ್ಚಿ , ಕೊಂಚ ಮಸಾಜ್ ಮಾಡಿಕೊಂಡು ಸ್ನಾನ ಮಾಡಿ. ಚರ್ಮ ಸುಕೋಮಲವಾಗುವುದು. ಕಾಂತಿಯುಕ್ತವಾಗುವುದು.
* ಪ್ರತಿವಾರಕ್ಕೊಮ್ಮೆ ನಿಮ್ಮ ಉಗುರುಗಳನ್ನು ನೀಟಾಗಿ ಕತ್ತರಿಸಿ, ಕಟ್ಟರ್ನಲ್ಲಿ ಶೇಪ್ ನೀಡಿ. ನಿಂಬೆರಸವನ್ನು ಉಗುರುಗಳ ಮೇಲೆ ಉಜ್ಜಿ. ನಂತರ ಕೊಂಚ ಉಗುರು ಬೆಚ್ಚಗಿನ ನೀರಿನಲ್ಲಿ ಒಂದೈದು ನಿಮಿಷ ಇರಿಸಿ ನಂತರ ತೊಳೆಯಿರಿ. ಉಗುರುಗಳು ಆರೋಗ್ಯಕರವಾಗಿರುತ್ತವೆ.
* ನಿಮ್ಮ ಹುಬ್ಬು ಗಾಢ ಕಪ್ಪು ಬಣ್ಣ ಹಾಗೂ ದಪ್ಪನಾಗಬೇಕೆ? ಹೀಗೆ ಮಾಡಿ. ಪ್ರತಿರಾತ್ರಿ ಮಲಗುವ ಮುನ್ನ, ಬೆರಳ ತುದಿಯಲ್ಲಿ ಕೊಂಚ ಹರಳೆಣ್ಣೆ ತೆಗೆದುಕೊಂಡು ಹುಬ್ಬಿನ ಕೂದಲಿರುವ ಉಲ್ಟಾ ದಿಕ್ಕಿನಲ್ಲಿ ಸವರಿ. ಹುಬ್ಬಿನ ಕೂದಲು ಬೇಗಬೇಗನೆ ಬೆಳೆಯುವುದಲ್ಲದೆ, ಕಪ್ಪು ಬಣ್ಣಕ್ಕೆ ತಿರುಗುವುದು.
* ಯಾವುದೇ ಕಾರಣಕ್ಕೂ ಇತರರು ಬಳಸಿದ ಪೌಡರ್ ಸ್ಪಾಂಜ್ ಬಫ್ ಅನ್ನು ಮುಖಕ್ಕೆ ಬಳಸಬೇಡಿ. ಇದರಿಂದ ಮೊಡವೆ ಇಲ್ಲವೇ, ಚರ್ಮ ವ್ಯಾದಿ ಅಂಟಬಹುದು.
* ಕುಂಕುಮ ಹಚ್ಚುವ ಅಭ್ಯಾಸವಿರುವವರು ಉತ್ತಮ ಗುಣಮಟ್ಟದ ರಾಸಾಯನಿಕ ಅಂಶವಿಲ್ಲದ್ದನ್ನು ಬಳಸಿ. ಇಲ್ಲವಾದಲಿ ಅದನ್ನು ಹಚ್ಚುವ ಜಾಗದಲ್ಲಿ ಬಿಳಿ ಇಲ್ಲವೇ ಕಪ್ಪು ಕಲೆಯಾಗಬಹುದು. ರಾತ್ರಿ ವೇಳೆ ಅದನ್ನು ಒದ್ದೆ ಬಟ್ಟೆಯಿಂದ ಒರೆಸಿ, ನಂತರ ಮಲಗಿ.
Subscribe to:
Post Comments (Atom)
No comments:
Post a Comment