Monday, July 2, 2012
ಸಂಧಿವಾತಕ್ಕೆ ಸರಳ ಪರಿಹಾರ
ಸಂಧಿವಾತಕ್ಕೆ ಸರಳ ಪರಿಹಾರ ಡಾ. ವೆಂಕಟ್ರಮಣ ಹೆಗಡೆ
ಸಂಧಿವಾತ ಎಂದರೆ ಸಂಧಿಗಳಲ್ಲಿ ಕಂಡುಬರುವ ಬಾವು. ಇದರಲ್ಲಿ ಸಂಧಿವಾತ ಹಾಗೂ ಆಮವಾತ ಎಂದು ಎರಡು ವಿಧ. ನೋವು ಮತ್ತು ಬಿಗಿತ ಇವುಗಳ ಮುಖ್ಯ ಲಕ್ಷಣ. ವ್ಯಾಯಾಮ, ದೈಹಿಕ ಶ್ರಮದ ನಂತರ ನೋವು ಹೆಚ್ಚಾಗಿರುತ್ತದೆ. ಆಮವಾತವು ಒಂದಕ್ಕಿಂತ ಹೆಚ್ಚು ಸಂಧಿಗಳಲ್ಲಿ ಉಂಟಾಗುತ್ತದೆ. ಇದರ ಮುಖ್ಯ ಲಕ್ಷಣ, ನೋವು ಹಾಗೂ ಬಿಗಿತ ಬೆಳಗಿನ ಜಾವದಲ್ಲಿ ಹೆಚ್ಚಾಗಿರುತ್ತದೆ. ಆಮವಾತದಿಂದ ಉಂಟಾಗುವ ಬಾವು ಹಂತ ಹಂತವಾಗಿ ಹೆಚ್ಚಾಗುತ್ತ, ಇಡೀ ದೇಹವನ್ನು ವ್ಯಾಪಿಸುತ್ತದೆ. ನಂತರ ಶಾಶ್ವತವಾಗಿ ಉಳಿಯುವಂತಹ ವೈಕಲ್ಯ ಸೃಷ್ಟಿಸುತ್ತದೆ. ಸಂಧಿವಾತ ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುತ್ತದೆ. ದೇಹದ ತೂಕ ಹೊರುವ ಸಂಧಿಗಳಲ್ಲೇ ಜಾಸ್ತಿ.
ಪರಿಹಾರೋಪಾಯಗಳು
ಆಲೂಗಡ್ಡೆ ರಸ: ಆಲೂಗಡ್ಡೆಯನ್ನು ಸಿಪ್ಪೆ ಸಹಿತ ಸಣ್ಣಗೆ ಹೆಚ್ಚಿ , ಒಂದು ರಾತ್ರಿ ತಣ್ಣೀರಿನಲ್ಲಿ ನೆನೆಸಿಡಿ. ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು.
ಅನಾನಸ್ ಜ್ಯೂಸ್ : ಇದು ಬಾವು ಕಡಿಮೆ ಮಾಡುವಲ್ಲಿ ಸಹಕಾರಿ. ಬೀಟರೂಟ್, ಕ್ಯಾರೇಟ್ ಮತ್ತು ಹಸಿರು ಸೊಪ್ಪುಗಳ ರಸವನ್ನೂ ಸಮಾನ ಭಾಗದಲ್ಲಿ ಸೇರಿಸಿ ಸೇವಿಸುವುದು ಪರಿಣಾಮಕಾರಿ.
ಸಾಸಿವೆ ಕಾಳು : ಒಂದು ಚಮಚ ಸಾಸಿವೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ, ಬೆಳಗಿನ ಜಾವ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ಇದು ನೋವನ್ನು ಮಟ್ಟಹಾಕುತ್ತದೆ.
ಬೆಳ್ಳುಳ್ಳಿ : ಇದನ್ನು ಹಾಗೆಯೇ ತೆಗೆದುಕೊಳ್ಳಬಹುದು. ಊತ ನಿವಾರಿಸುವ ಗುಣ ಬೆಳ್ಳುಳ್ಳಿಯಲ್ಲಿದೆ.
ಲಿಂಬು : ಇದರ ಜ್ಯೂಸನ್ನು ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು.
ಇತರ ವಿಧಾನಗಳು * ಬಿಸಿ ನೀರಿನ ಎನಿಮಾ * ಜಾನು ಸಂಧಿಗಳಿಗೆ ಬಿಸಿನೀರಿನ ಪಟ್ಟಿ * ಬಿಸಿಯಾದ ಹುತ್ತದ ಮಣ್ಣಿನ ಲೇಪ
* ಎಣ್ಣೆಯ ಮಸಾಜ್ ಮತ್ತು ಆವಿ ಸ್ನಾನ * ಅಕ್ಯುಪಂಕ್ಚರ್ * ಯೋಗಾಸನಗಳು
ಹೊಳೆಯುವ ಕೂದಲಿಗೆ ಮನೆ ಮದ್ದು
ಭುಜದ ಮೇಲೆ ಹಾರಾಡುವಂಥ ಹೊಳಪಿನ ಕೂದಲು ಬೇಕು ಅಂತಾನೇ ಆಸೆ. ಆದ್ರೆ ಕೆಲವೇ ಕ್ಷಣಗಳಲ್ಲಿ ಸಿಕ್ಕುಸಿಕ್ಕಾಗುವ ಕೂದಲ ಮೇಲೆ ವಿಪರೀತ ಸಿಟ್ಟಾಗುತ್ತೀರ. ಒರಟಾದ ಹಾಗೂ ಕಳೆಗುಂದಿದ ಕೂದಲ ಬಗ್ಗೆ ಬೇಸರಿಸಬೇಡಿ. ನಿಮ್ಮ ಕೂದಲನ್ನು ಕೂಡ ಹೊಳಪಾಗಿಸಿಕೊಳ್ಳಬಹುದು. ಆದ್ರೆ ಒಂದಿಷ್ಟು ಮುತುವರ್ಜಿ ವಹಿಸಬೇಕು. ಹೊಳಪಾಗಿಸುವ ಮನೆಮದ್ದುಗಳನ್ನು ಕೂಡ ಟ್ರೈ ಮಾಡಿ. ಆಗಾಗ ಹರಳೆಣ್ಣೆಯನ್ನು ಹಚ್ಚಿದರೆ ಕೂದಲು ಸುಂದರವಾಗಿ ಬೆಳೆಯುತ್ತದೆ ಮತ್ತು ಅದರ ಆರೋಗ್ಯಕ್ಕೂ ಒಳ್ಳೆಯದು.
ತೆಂಗಿನೆಣ್ಣೆ ಜತೆ ದಾಸವಾದ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ.
ಸೀಗೆಕಾಯಿ ಪುಡಿಗೆ ಸ್ವಲ್ಪ ಲಿಂಬು ಹಿಂಡಿ, ಆ ಮಿಶ್ರಣದಿಂದ ತಲೆ ತೊಳೆದರೆ ಕೂದಲು ಆಕರ್ಷಕವಾಗಿ ಕಾಣುತ್ತದೆ.
ಲೋಳೆಸರದ ರಸವನ್ನು ತೆಗೆದು ತಲೆಗೆ ಹಚ್ಚಿ . ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡಿ. ಕೂದಲಿಗೆ ಇದು ಒಳ್ಳೆಯ ಕಂಡಿಷ್ನರ್.
ಆಹಾ ಎಳನೀರು, ಆರೋಗ್ಯದ ಪನ್ನೀರು
ತಲೆ ಕೆಂಡದಂತೆ ಬಿಸಿಯಾಗಿರುತ್ತದೆ. ನಿಂತಲ್ಲೇ ಬೆವೆತು ಹೋಗುತ್ತೀರ. ದೇಹಕ್ಕೆ ನಿತ್ರಾಣ. ಮನಸ್ಸಿಗೂ ಯಾಕೋ ಕಿರಿಕಿರಿ.
ಬೇಸಿಗೆಯಲ್ಲಿ ಇವೆಲ್ಲ ಇದ್ದದ್ದೆ. ಆದ್ರೂ ಈ ಬಾಯಾರಿಕೆ ಅನ್ನೋದು ಇದೆಯಲ್ಲ , ಅದು ಮಾತ್ರ ದಿನಪೂರ್ತಿ ಕಾಡಿ ಬಿಡುತ್ತದೆ. ಕ್ಷಣಕ್ಷಣಕ್ಕೂ ಗಂಟಲ ಪಸೆ ಆರಿ ಹೋದಂಥ ಅನುಭವ. ಬಾಯಿ ಪಾನೀಯಕ್ಕಾಗಿ ತೆರೆದುಕೊಂಡಿರುತ್ತದೆ. ಆ ಕ್ಷಣಕ್ಕೆ ಎಲ್ಲೋ ಒಂದು ಕಡೆ ಪಾನೀಯ ಅಂತೇನಾದ್ರೂ ಕಂಡರೆ ನೀವು ಪರಮ ಸುಖಿ ಅಂದುಕೊಂಡೇ ಗಂಟಲಿಗಿಳಿಸುತ್ತೀರ. ಆದರೆ ಅದು ಇನ್ಯಾವತ್ತೋ ಅದ್ರ ಅಡ್ಡ ಪರಿಣಾಮ ಬೀರಬಹುದು. ವಿಪರೀತ ಆರೋಗ್ಯ ಕಾಳಜಿ ಇರುವವರು ತಮ್ಮ ಬಳಿ ಯಾವಾಗಲೂ ಶುದ್ಧ ನೀರಿಟ್ಟುಕೊಂಡಿರುತ್ತಾರೆ. ಇಲ್ಲ ಅಂತಾದ್ರೆ ಅವರು ಎಳನೀರು ಬಿಟ್ಟು ಇನ್ನೇನೂ ಕುಡಿಯುವುದಿಲ್ಲ. ಆದ್ರೆ ನಿತ್ಯ ಒಂದೇ ರುಚಿಯ ಎಳನೀರು ಕೂಡ ಬೇಜಾರ್ ಅಂದೆನಿಸುತ್ತದೆ. ಬದಲಾಗದ ಎಳನೀರು ರುಚಿಯಲ್ಲಿ ಬದಲಾವಣೆ ಅಸಾಧ್ಯ ಅಂದುಕೊಳ್ಳಬೇಡಿ.
ವೈವಿಧ್ಯ ರುಚಿ
ಎಳನೀರಿನಲ್ಲಿ ಕೂಡ ವೈವಿಧ್ಯ ರುಚಿ ಸವಿಯಬಹುದು ಅಂದ್ರೆ ನಂಬ್ತೀರಾ? ಕಬ್ಬಿನ ಹಾಲಲ್ಲಿ ನಾನಾ ಸ್ವಾದಗಳಿವೆಯಲ್ಲ, ಅದೇ ರೀತಿ ಇದೀಗ ಎಳನೀರಲ್ಲೂ ಸಾಧ್ಯ. ಪುದಿನಾ, ಜೇನು, ಕಿತ್ತಳೆ, ಏಲಕ್ಕಿ, ಮಸಾಲ, ಲಿಂಬು ಇನ್ನೂ ನಾನಾ ಬಗೆಯ 18 ಸ್ವಾದಗಳಿರುವ ಎಳನೀರು ಕುಡಿಯಬಹುದು. ಹಾಗಂತ ಎಲ್ಲ ಎಳನೀರು ಅಂಗಡಿಗಳಲ್ಲಿ ಇಂಥದ್ದೊಂದು ರುಚಿ ಸಿಗುತ್ತದೆ ಅಂದುಕೊಳ್ಳಬೇಡಿ. ಅಪರೂಪದ ರುಚಿ ಜತೆ ಆರೋಗ್ಯವರ್ಧಕ ಪಾನೀಯಗಳ ಸೇವನೆಗೊಂದು ವೇದಿಕೆ ಕಲ್ಪಿಸಿ ನೈಸರ್ಗಿಕ ಪದಾರ್ಥಗಳನ್ನು ಮಾತ್ರ ಗ್ರಾಹಕರಿಗೆೆ ತಲುಪಿಸಲು ಐದು ಯುವಕರ ತಂಡ ಸದಾ ಶ್ರಮಿಸುತ್ತಿದೆ.
ಉತ್ಸಾಹಿ ತಂಡ
ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವುದರ ಜತೆ ಗ್ರಾಹಕರಿಗೆ ಏನಾದರೂ ಹೊಸತು ನೀಡುವ ತುಡಿತ ಸಾಫ್ಟ್ವೇರ್, ವೈದ್ಯ ಸೇರಿದಂತೆ ಇನ್ನಿತರ ಕ್ಷೇತ್ರದ ಈ ಉತ್ಸಾಹಿ ಯುವಕರಿಗಿತ್ತು. ಅದರ ಪರಿಣಾಮವೇ ಶುರುವಾದ ಪುಟ್ಟದೊಂದು ವೇದಿಕೆ ನೇಚರ್ ಫುಡ್. ಎಳನೀರಷ್ಟೆ ಅಲ್ಲ, ಡಯಾಬೀಟಿಸ್, ಹೃದಯ ಸಮಸ್ಯೆ ಮತ್ತಿತರ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ ಆಗುವ ನೈಸರ್ಗಿಕ ವಸ್ತುಗಳನ್ನು ಐಸ್ಕ್ರೀಂ, ಜ್ಯೂಸ್ಗಳಲ್ಲಿ ಬಳಸಿ ಗ್ರಾಹಕರ ಒದಗಿಸುತ್ತಾರೆ. 'ಎಳನೀರು ಮಾರುವುದು ಕೇವಲ ವ್ಯಾಪಾರ ಅಥವಾ ಹೊಟ್ಟೆಪಾಡು. ಆದ್ರೆ ಜನ ಏನೋ ಬದಲಾವಣೆ ಬಯಸುತ್ತಿರುತ್ತಾರೆ. ಹೊಸತನದ ಜತೆ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಇತ್ತೀಚೆಗೆ ರಾಜಾಜಿನಗರ ಹಾಗೂ ಜಯನಗರದಲ್ಲಿ ಮಳಿಗೆ ಆರಂಭಿಸಲಾಗಿದೆ' ಅಂತಾರೆ ನೇಚರ್ ಫುಡ್ನ ನಿರ್ದೇಶಕ ಆನಂದ್ ಕುಮಾರ್.
ನೈಸರ್ಗಿಕ ಆಹಾರದ ಬಗ್ಗೆ ಅರಿವು
ಕಾಫಿ, ಟಿ ಇನ್ಯಾವುದೋ ಜಂಕ್ ಫುಡ್ಗಳ ನೆರಳೂ ಬೀಳದಂತೆ ಕೇವಲ ನೈಸರ್ಗಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಎಳನೀರು ಹಾಗೂ ಜ್ಯೂಸ್ ಅಂಗಡಿ ಆರಂಭಿಸಿದ ಈ ಯುವಕರು ಹೇಳುವುದೊಂದೇ ಮಾತು. ಬಾಯಾರಿದ್ರೆ ಎಳನೀರು ಕುಡಿಯಿರಿ. ಹಸಿವಾದ್ರೆ ಮೊಳಕೆಕಾಳು ತಿನಿ.್ನ ವಿಪರೀತ ಲಾಭದ ಉದ್ದೇಶವೂ ಇಲ್ಲ. ಆದರೆ ಗುಣಮಟ್ಟ, ಶುದ್ಧತೆ ವಿಷಯದಲ್ಲಿ ರಾಜಿಯೇ ಇಲ್ಲ. ನೈಸರ್ಗಿಕ ಆಹಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ. ರಾಜಾಜಿನಗರದ ನೇಚರ್ ನೆಸ್ಟ್ ಮುಖ್ಯಸ್ಥ ಜವಾಹರ್ ಪ್ರಕಾರ 'ಹೊಟ್ಟೆ ತುಂಬಿಸಿಕೊಳ್ಳಲಿಕ್ಕಾಗಿ ಆರೋಗ್ಯಕ್ಕೆ ಅಹಿತಕರವಾದಂಥ ಪದಾರ್ಥಗಳನ್ನು ಸೇವಿಸುವುದಕ್ಕಿಂತ ನೈಸರ್ಗಿಕವಾಗಿ ದೊರೆಯುವ ತರಕಾರಿ, ಹಣ್ಣುಗಳನ್ನು ಹಾಗೂ ಯಾವುದೇ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸದೆ ಅವುಗಳಿಂದ ತಯಾರಾದ ಪದಾರ್ಥ ಸೇವಿಸುವುದು ಒಳ್ಳೆಯದು.'
ವಿಶೇಷ
ಜ್ಯೂಸ್, ಐಸ್ಕ್ರೀಂ ಎಲ್ಲಾದರೂ ಸಿಗುತ್ತವೆ. ಆದ್ರೆ ಇಲ್ಲಿ ಐಸ್ಕ್ರಿಮ್ಗೆ ಕೃತಕ ಫ್ಲೇವರ್ ಬಳಸುವುದಿಲ್ಲ. ಜ್ಯೂಸ್ಗೆ ಸಕ್ಕರೆ, ನೀರ ಹನಿಯೂ ಬೀಳಲು ಕೊಡುವುದಿಲ್ಲ. 18 ಬಗೆಯ ಮೊಳಕೆ ಕಾಳುಗಳಿಂದ ತಯಾರಿಸಿದ ಹರೀರ ಇಲ್ಲಿಯ ಸ್ಪೆಷಲ್.
ಬೆನ್ನು ನೋವಿಗೆ ಮನೆಯಲ್ಲೇ ಇದೆ ಪರಿಹಾರ
ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದ ಕೆಲಸ ನಿಮಗೆ. ಸಾಲದ್ದಕ್ಕೆ ಆಗಾಗ ವಿಚಿತ್ರ ನೋವೊಂದು ನಿಮ್ಮ ಬೆನ್ನೇರುತ್ತದೆ. ಹಾಗೆ ಬೆನ್ನು ಹತ್ತಿದ ನೋವು ಬಿಡುವುದೇ ಇಲ್ಲ. ಆಗಾಗ ಕಿರಿಕಿರಿ ಉಂಟು ಮಾಡುತ್ತಿರುತ್ತದೆ.ಖಿನ್ನತೆ, ಒತ್ತಡ, ಆತಂಕದ ಮುನ್ಸೂಚನೆ ಇರಬಹುದು. ವಂಶಪಾರಂಪರಗತವಾಗಿಯೂ ಬಂದಿರಬಹುದು. ಬಂದ ದಾರಿ ಯಾವುದೇ ಇರಲಿ, ಬಂದಂತೂ ಆಗಿದೆ. ಈಗ ಬೇಕಿರುವುದು ಪರಿಹಾರ ಮಾತ್ರ. ಆ ಕ್ಷಣಕ್ಕೆ ಯಾವುದೋ ನೋವು ನಿವಾರಕ ಔಷಧ ಬೆನ್ನಿಗೆ ಹಚ್ಚುತ್ತೀರ. ಮಾತ್ರ ಸೇವಿಸುತ್ತೀರ. ಆ ಕ್ಷಣಕ್ಕೆ ಅದು ಮಾಯವಾದರೂ ನಾಳೆ ಬೆಳಗ್ಗೆ ಪುನಃ ಅದು ಹಿಂಬಾಲಿಸುತ್ತದೆ. ಅದರ ಮೇಲೆ ವಿಪರೀತ ಅವಲಂಬಿತರಾಗುತ್ತೀರ. ಜತೆಗೆ ಅಡ್ಡ ಪರಿಣಾಮಗಳಿಗೂ ನೀವೆ ದಾರಿ ಮಾಡಿ ಕೊಡುತ್ತೀರ. ಎಷ್ಟುದಿನ ಅಂತ ಯಾವುದ್ಯಾವುದೋ ಔಷಧ ಹಚ್ಚುತ್ತೀರ. ಮಾತ್ರೆಗಳನ್ನು ನುಂಗುವುದಂತೂ ಬೇಡವೇಬೇಡ. ಹಾಗಂತ ನೋವು ಸಹಿಸಿಕೊಂಡು ಬಿಡಿ ಅಂತಲ್ಲ. ಮನೆಮದ್ದು ಟ್ರೈ ಮಾಡಿ.- ಬೆನ್ನು ನೋವಿದ್ದಾಗ ಬಿಸಿಬಿಸಿಯಾಗಿ ತಿನ್ನಿ. ತಿನ್ನುವ ಪದಾರ್ಥದಲ್ಲಿ ಶುಂಠಿ ಇದ್ದರೆ ಒಳ್ಳೆಯದು.
- ನೋವಿರುವ ಭಾಗಕ್ಕೆ ಬೆಚ್ಚಗಿನ ನೀರಿನ ಶಾಖ ನೀಡಿ. - ಪುದಿನಾ ಎಣ್ಣೆಗಳಂಥ ನೈಸರ್ಗಿಕ ಎಣ್ಣೆಗಳಿಂದ ಮಸಾಜ್ ಮಾಡಿ. - ಪ್ರತಿನಿತ್ಯ ಶುಂಠಿ ಸೇವಿಸಿ.
- ವಿಟಮಿನ್ ಸಿ ಒಳಗೊಂಡಿರುವ ಹಣ್ಣು, ತರಕಾರಿ ಹೆಚ್ಚು ಸೇವಿಸಿ. - ಲಿಂಬೆರಸಕ್ಕೆ ಉಪ್ಪು ಸೇರಿಸಿ ಜ್ಯೂಸ್ ತಯಾರಿಸಿ ಕುಡಿಯಿರಿ.
ಸುಂದರ ಕೂದಲಿಗೆ ಮೆಂತ್ಯ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಲು ಕೂದಲ ಆರೋಗ್ಯ ಕೂಡ ಪರೋಕ್ಷವಾಗಿ ಸಹಕರಿಸುತ್ತದೆ ಎಂಬುದನ್ನು ಮರೆಯದಿರಿ. ಯಾಕಂದ್ರೆ, ಒಣಗಿದ ಕೂದಲು ಯಾವುದೇ ಕಾರಣಕ್ಕೂ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಆಗಾಗ್ಗೆ ಕಂಡಿಷನಿಂಗ್ ಮಾಡುವುದು ಅತ್ಯಗತ್ಯ. ರಾಸಾಯನಿಕ ಪದಾರ್ಥಗಳಿಂದ ಕಂಡಿಷನಿಂಗ್ ಮಾಡುವುದು ಸುಲಭ ಏನಿಸಿದರೂ, ತಕ್ಷಣಕ್ಕೆ ನಿಮ್ಮ ಕೂದಲು ನಳನಳಿಸಿದಂತೆ ಕಂಡರೂ, ಮುಂದೊಮ್ಮೆ ಉದುರುವ ಸಾಧ್ಯತೆಯೇ ಹೆಚ್ಚು.
ನ್ಯಾಚುರಲ್ ಹೇರ್ಕಂಡಿಷನರ್
ನಿಮ್ಮ ಅಡುಗೆಮನೆಯಲ್ಲಿ ಅತಿ ಸುಲಭವಾಗಿ ಲಭ್ಯವಿರುವ ಮೆಂತ್ಯ ಹೇರ್ ಕಂಡಿಷನಿಂಗ್ ಕೆಲಸ ಮಾಡುತ್ತದೆ. ಇದನ್ನು ಆಗಾಗ್ಗೆ ಬಳಸುವುದರಿಂದ ನಿಮ್ಮ ಕೂದಲ ನೈಜ ಸೌಂದರ್ಯ ಹಾಳಾಗದು. ಮಾತ್ರವಲ್ಲ, ದೇಹ ಕೂಡ ತಂಪಾಗಿರುತ್ತದೆ.
ಹೊಳೆಯುವ ಕೂದಲಿಗೆ
ನಿಮ್ಮ ಕೂದಲಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಮೆಂತ್ಯ ಪುಡಿ ಮಾಡಿಕೊಳ್ಳಿ. ಅರ್ಧ ಕಪ್ ಮೊಸರಿನಲ್ಲಿ ಕಲಸಿ. ಇದಕ್ಕೆ ನಾಲೈದು ಹನಿ ನಿಂಬೆರಸ ಹಾಕಿ. ಇದನ್ನು ನಿಮ್ಮ ಕೂದಲಿಗೆ ಪ್ಯಾಕ್ ಹಾಕಿ. ಇದು ಕಂಡಿಷನರ್ನಂತೆ ಕಾರ್ಯ ನಿರ್ವಹಿಸುತ್ತದೆ. ಕೊಂಚ ಸಮಯದ ನಂತರ ತಣ್ಣಿರಿನಲ್ಲಿ ತೊಳೆಯಿರಿ.
ಹೊಟ್ಟಿರುವ ಕೂದಲಿಗೆ
ರಾತ್ರಿಯಿಡಿ ಮೆಂತ್ಯವನ್ನು ನೀರಿನಲ್ಲಿ ನೆನೆಸಿ. ಬೆಳಗ್ಗೆ ಇದನ್ನು ನುಣ್ಣಗೆ ರುಬ್ಬಿ. ತಲೆ ಬುರಡೆಗೆ ಲೇಪಿಸಿ. 30 ನಿಮಿಷಗಳ ವರೆಗೆ ಹಾಗೆಯೇ ಬಿಡಿ. ನಂತರ ಶ್ಯಾಂಪೂವಿನಿಂದ ಸ್ನಾನ ಮಾಡಿ.
ಬಲು ಮುಖ್ಯ ಬಾಯಿಯ ಆರೋಗ್ಯ ಡಾ. ಎಸ್.ಎಸ್. ಅಂಗಡಿ
ಇಂದಿನ ನಮ್ಮ ಜೀವನಶೈಲಿ ತುಂಬಾ ಬದಲಾಗಿದೆ. ಉಡುಗೆ, ತೊಡುಗೆ, ಆಚಾರ, ಆಹಾರ, ವಿಹಾರ ಯಾವುದೂ ಮೊದಲಿನಂತಿಲ್ಲ. ಪಿಜ್ಜಾ, ಬರ್ಗರ್, ಚಾಕಲೇಟ್, ಐಸ್ಕ್ರೀಂ, ಕೇಕ್ ಇತ್ಯಾದಿ ಜಂಕ್ ಫುಡ್ಸ್ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ. ಬರೀ ಆಹಾರದ ರುಚಿ ನೋಡಿದರೆ ಸಾಲದು, ಅದರ ಅಡ್ಡ ಪರಿಣಾಮಗಳ ಬಗ್ಗೆಯೂ ವಿಚಾರ ಮಾಡಬೇಕು. ಇಂಥ ಆಹಾರಗಳಿಂದ ಬಾಯಿ ಸಂಬಂಧಿ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉದಾ: ಹುಳುಕು ಹಲ್ಲು, ಬಾಯಿ ಹುಣ್ಣು, ವಸಡಿನ ರೋಗಗಳು ಇತ್ಯಾದಿ.
ಹಾಗಾದರೆ ಇಂಥ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯವೆ? ಖಂಡಿತಾ ಸಾಧ್ಯವಿದೆ. ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಕೆಲವು ನಿಯಮಗಳನ್ನು ಪಾಲಿಸಬೇಕಷ್ಟೇ.
ಮಂಜನ : ಔಷಧ ದ್ರವ್ಯಗಳನ್ನು ಬೆರಳಿನ ತುದಿಯಲ್ಲಿ ತೆಗೆದುಕೊಂಡು ವಸಡು ಮತ್ತು ಹಲ್ಲಿನ ಮೇಲೆ ನಿಧಾನವಾಗಿ ಉಜ್ಜುವುದು. ಮಂಜನಕ್ಕೋಸ್ಕರ ನಾಲ್ಕು ವಿಧದ ಔಷಧ ದ್ರವ್ಯಗಳನ್ನು ಉಪಯೋಗಿಸಲಾಗುತ್ತದೆ. ಪುಡಿ, ಕಲ್ಕ, ಅವಲೇಹ ಮತ್ತು ಜೇನುತುಪ್ಪ. ಈ ರೀತಿ ಮಾಡುವುದರಿಂದ ವಸಡು ಮತ್ತು ಹಲ್ಲಿನ ಮೇಲಿನ ಕೊಳೆ ಹೋಗಲಾಡಿಸಿ, ಅವುಗಳ ಸಂರಕ್ಷಣೆ ಮಾಡಬಹುದು. ಇಲ್ಲದಿದ್ದರೆ ಪ್ರತಿ ದಿನ ಸ್ವಲ್ಪ ಸ್ವಲ್ಪ ಕೊಳೆ ಶೇಖರಗೊಂಡು ಗಟ್ಟಿಯಾಗಿ, ವಸಡು ಮತ್ತು ಹಲ್ಲಿನ ರೋಗಗಳಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ಬಾಯಿಯ ದುರ್ವಾಸನೆಯೂ ಬರುವುದಿದೆ.ಗಂಡೂಷ: ಕೆಲವು ಔಷಧ ದ್ರವಗಳನ್ನು ಬಾಯಿಯಲ್ಲಿ ತುಂಬಿಕೊಂಡು 10-15 ನಿಮಿಷಗಳ ವರೆಗೆ ಶಾಂತಚಿತ್ತದಿಂದ ಕುಳಿತುಕೊಳ್ಳುವುದು. ನಂತರ ಉಗುಳುವುದು. ಉದಾ- ಎಳ್ಳೆಣ್ಣೆ, ಜೇನುತುಪ್ಪ, ಗಂಜಿ, ಬಿಸಿನೀರು ಇತ್ಯಾದಿ.ಮುಕ್ಕಳಿಸುವುದು: ಔಷಧ ದ್ರವಗಳನ್ನು ಬಾಯಿಯಲ್ಲಿ ತುಂಬಿಕೊಂಡು ಬಾಯಿ ಮುಕ್ಕಳಿಸಬೇಕು. ತ್ರಿಫಲಾ ಕಷಾಯ, ಪಂಚವಲ್ಕಲ ಕಷಾಯ, ಬಿಸಿನೀರು ಇತ್ಯಾದಿಗಳನ್ನು ಇದಕ್ಕೆ ಬಳಸಬಹುದು. ಈ ರೀತಿಯ ಚಿಕಿತ್ಸಾ ವಿಧಾನದಲ್ಲಿ ಸ್ನೇಹನ, ಪ್ರಸಾದನ, ಶೋಧನ ಮತ್ತು ರೋಪಣ ಎಂದು ನಾಲ್ಕು ಉಪಭೇದಗಳಿವೆ.ಈ ಚಿಕಿತ್ಸಾ ವಿಧಾನಗಳಿಂದ ಬಾಯಿಹುಣ್ಣು, ಹುಳುಕುಹಲ್ಲು, ಗಂಟಲುಬೇನೆ, ಬಾಯಿ ಒಣಗುವುದು, ದಾಹವಾಗುವುದು, ರುಚಿ ಇಲ್ಲದಿರುವುದು, ನೆಗಡಿ, ಕಿವಿ ಕಾಯಿಲೆಗಳು, ತಲೆನೋವು ಇತ್ಯಾದಿ ಸಮಸ್ಯೆಗಳನ್ನು ತಡೆಗಟ್ಟಬಹುದು.
ಪಥ್ಯ ಮಾಡಿ
ಗೋಧಿ, ಜೋಳ, ಹಳೆ ಅಕ್ಕಿ, ಹೆಸರು ಕಾಳು, ಹುರಳಿಕಾಳು, ಹಾಗಲಕಾಯಿ, ಪಾಲಕ್, ಮೂಲಂಗಿ, ಪಡವಲಕಾಯಿ, ಗಜ್ಜರಿ, ಬೀಟ್ರೂಟ್ ಇತರೆ ಹಸಿರು ಕಾಯಿಪಲ್ಲೆ, ಮೋಸಂಬಿ, ನಿಂಬೆಹಣ್ಣು, ನೆಲ್ಲಿಕಾಯಿ, ಟೊಮೇಟೊ, ತಾಂಬೂಲ, ಬೆಣ್ಣೆ ಸೇವಿಸಬಹುದು.ಹುಳಿಮೊಸರು, ಬೆಲ್ಲ ಮತ್ತು ಅದರಿಂದ ತಯಾರಿಸಿದ ಸಿಹಿಪದಾರ್ಥಗಳು, ಉದ್ದು, ತಣ್ಣೀರು, ಗಟ್ಟಿಯಾದ ಆಹಾರ, ಮೀನು ಮಾಂಸ, ದನ ಮತ್ತು ಹಂದಿ ಮಾಂಸ, ಕಬ್ಬಿನ ಹಾಲು, ಹಗಲು ನಿದ್ರೆ, ತಲೆ ಕೆಳಗೆ ಮಾಡಿ ಮಲಗುವುದು ಇವೆಲ್ಲ ನಿಷಿದ್ಧ.
ಅರ್ಧ ತಲೆನೋವು: ಸರಳ ಪರಿಹಾರ ಡಾ. ವೆಂಕಟ್ರಮಣ ಹೆಗಡೆ
ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಅರ್ಧ ತಲೆನೋವು ಒಂದು. ವಾಕರಿಕೆ, ವಾಂತಿ, ಸುಸ್ತು ಇವುಗಳೊಂದಿಗೆ ತಲೆಯ ಎಡ ಅಥವಾ ಬಲಭಾಗದಲ್ಲಿ ಅತಿಯಾದ ನೋವು ಕಾಡುತ್ತದೆ.ಯೋಗ ಹಾಗೂ ನಿಸರ್ಗ ಚಿಕಿತ್ಸೆಗಳು ಬಹುತೇಕ ಮಂದಿಗೆ ಯಶಸ್ವಿ ಪರಿಹಾರ ನೀಡಬಲ್ಲವು.
ವಮನದೌತಿ ಕ್ರಿಯಾ
ಇದು ಯೋಗ ಶಾಸ್ತ್ರದ ಒಂದು ವಿಧಾನ. ಅರ್ಧ ತಲೆನೋವು, ದಮ್ಮು, ಕಫ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾರದಲ್ಲಿ ಎರಡು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 7-8 ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ 2-3 ಚಮಚ ಉಪ್ಪು ಸೇರಿಸಿ ಗಟಗಟನೆ ವೇಗವಾಗಿ ಕುಡಿಯಬೇಕು. ಕೂಡಲೇ ಎದ್ದುನಿಂತು ಎಡಗೈಯಲ್ಲಿ ಹೊಟ್ಟೆಗೆ ಒತ್ತಡ ಹಾಕುತ್ತ, ಬಲಗೈ ಬೆರಳುಗಳನ್ನು ಗಂಟಲಿಗೆ ಹಾಕಿ ವಾಂತಿ ಮಾಡಬೇಕು. ಮೊದಮೊದಲು 2-3 ವಾರದಲ್ಲಿ ಸರಿಯಾಗಿ ವಾಂತಿ ಆಗದೇ ಇರಬಹುದು. ಕೆಲವರಿಗೆ ಸ್ವಲ್ಪ ಭೇದಿ ಕೂಡ ಆಗಬಹುದು. ಇದು ಸಾಮಾನ್ಯ. ಹೀಗೆ ವಮನ ಕ್ರಿಯೆ ನಡೆಸಿದ ದಿನ ಉಪ್ಪು, ಹುಳಿ, ಖಾರ ಕಡಿಮೆ ಸೇವಿಸಬೇಕು.
ಆಹಾರ ಕ್ರಮ
ಹಣ್ಣು, ತರಕಾರಿ, ಮೊಳಕೆ ಕಾಳು, ಮಜ್ಜಿಗೆ, ಎಳನೀರು, ತಾಜಾ ತರಕಾರಿ ರಸ, ಹಣ್ಣಿನ ರಸ ಹೆಚ್ಚೆಚ್ಚು ಸೇವಿಸಬೇಕು. ಪ್ರತಿದಿನ ಕನಿಷ್ಟ 2-3 ಲೀಟರ್ ನೀರು ಕುಡಿಯಲೇಬೇಕು.1-2 ತಿಂಗಳ ಮಟ್ಟಿಗೆ ರಾತ್ರಿ ಊಟದ ಬದಲು ಹಸಿ ತರಕಾರಿ, ಹಣ್ಣು, ಮೊಳಕೆ ಕಾಳು, ಸೂಪ್ ಮಾತ್ರ ಸೇವಿಸಿ. ಖಾರ, ಮಸಾಲೆ, ಕರಿದ ಆಹಾರ, ಬೇಕರಿ ತಿನಿಸು, ತಂಪು ಪಾನೀಯ, ಐಸ್ಕ್ರೀಮ್ ಕಡಿಮೆ ಮಾಡಿ.
ಪ್ರಾಣಾಯಾಮ
ತಜ್ಞರಿಂದ ಯೋಗ ಕಲಿತು ಪ್ರತಿದಿನ ಅರ್ಧಗಂಟೆಯಾದರೂ ಯೋಗಾಸನ ಮಾಡಿ. ಇದು ಉತ್ತಮ ಫಲಿತಾಂಶ ನೀಡುತ್ತದೆ.
ಆರೋಗ್ಯ ಸಲಹೆಗಳು
* ಕರಿಬೇವಿನ ಕಡ್ಡಿಯ ರಸವನ್ನು ಕಣ್ಣುಗಳ ಕೆಳಭಾಗದಲ್ಲಿ ಲೇಪಿಸಿದಲ್ಲಿ ಕಲೆಗಳು ಮಾಯವಾಗುತ್ತವೆ. * ಜೇನುತುಪ್ಪಕ್ಕೆ ಈರುಳ್ಳಿ ರಸವನ್ನು ಬೆರೆಸಿ ಕುಡಿದಲ್ಲಿ ಗಂಟಲುನೋವು ಕಡಿಮೆಯಾಗುವುದು. * ಮೊಟ್ಟೆ ಹಳದಿ ಭಾಗಕ್ಕೆ ಆಲಿವ್ ಎಣ್ಣೆ ಮಿಶ್ರ ಮಾಡಿ ಫೇಸ್ ಪ್ಯಾಕ್ ಮಾಡಿ ತೊಳೆದಲ್ಲಿ ಮುಖ ಕಾಂತಿಯುಕ್ತವಾಗುವುದು.
* ಬಾದಾಮಿ ಪೇಸ್ಟ್, ನಿಂಬೆರಸ ಹಾಗೂ ಹಾಲಿನ ಕೆನೆ ಮಿಶ್ರ ಮಾಡಿ ಹಚ್ಚುವುದರಿಂದ ಕೈಗಳ ಬಣ್ಣ ಹೊಳಪಾಗುತ್ತದೆ. * ಜೇನುತುಪ್ಪ, ನಿಂಬೆರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ತೊಳೆದಲ್ಲಿ ಮೊಡವೆಗಳು ಕಡಿಮೆಯಾಗುತ್ತವೆ. * ಕರರ್ಬೂಜ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಆಗಾಗ್ಗೆ ಸ್ವಲ್ಪವೇ ತೆಗೆದುಕೊಂಡು ನೀರಿನಲ್ಲಿ ಕಲಸಿ ಫೇಸ್ ಪ್ಯಾಕ್ ಮಡಿ. ನೆರಿಗೆಗಳು ಮಾಯವಾಗುತ್ತವೆ. * ಕೆಸುವಿನ ಗೆಡ್ಡೆ , ಗೊರಂಟಿ ಸೊಪ್ಪಿನೊಂದಿಗೆ ಅರೆದು ಮೊಟ್ಟೆಯ ಹಳದಿ ಭಾಗದೊಂದಿಗೆ ಮಿಶ್ರ ಮಾಡಿ ಕೂದಲಿಗೆ ಪ್ಯಾಕ್ ಮಾಡಿ. ಕೆಲಸಮಯದ ನಂತರ ತಲೆ ಸ್ನಾನ ಮಾಡಿ. ಹೀಗೆ ಆಗಾಗ್ಗೆ ಮಾಡುವುದರಿಂದ ಒರಟಾದ ಕೂದಲು ಮೃದಯವಾಗುತ್ತದೆ.
ಆರೋಗ್ಯ ಹೆಚ್ಚಿಸುವ ಬಾದಾಮಿ
ಪ್ರತಿದಿನ ಬಾದಾಮಿ ತಿನ್ನಿ, ಆರೋಗ್ಯವಾಗಿರಿ ಎಂದು ಹಿರಿಯರು ಹೇಳುವ ಮಾತು ಖಂಡಿತಾ ನಿಜ. ಯಾಕೆಂದರೆ ಇದು ಆರೋಗ್ಯವನ್ನು ಹೆಚ್ಚಿಸುತ್ತದೆ ಮಾತ್ರವಲ್ಲ , ಸಾಮಾನ್ಯ ಕಾಯಿಲೆಗಳಿಗೆ ದಿವ್ಯೌಷಧ. ಇದರಲ್ಲಿ ಶೇ. 41 ರಷ್ಟು ಜಿಡ್ಡು ಹಾಗೂ ಶೇ. 16 ರಷ್ಟು ಪ್ರೊಟೀನ್ ಅಡಕವಾಗಿದೆ.* ಬಾದಾಮಿಯಲ್ಲಿ ವಿಟಮಿನ್ ಡಿ ಹೇರಳವಾಗಿರುವುದರಿಂದ ಬಾದಾಮಿ ಎಣ್ಣೆಯ ಮಸಾಜ್ ಮಗುವಿನ ಚರ್ಮವನ್ನು ಮೃದುಗೊಳಿಸುವುದರ ಜತೆ ಎಲುಬನ್ನು ಸಧೃಡಗೊಳಿಸಿಸುತ್ತದೆ.* ಪ್ರತಿದಿನ ನಿಗದಿತ ಪ್ರಮಾಣದ ಬಾದಾಮಿ ತೈಲ ಸೇವನೆಯು ಕೊಲೆಸ್ಟಾರ್ ಪ್ರಮಾಣ ಇಳಿಸುತ್ತದೆ. ಹೃದಯ ಸ್ವಾಸ್ಥ್ಯವನ್ನು ಕಾಪಾಡುತ್ತದೆ.* ಸಿಹಿ ಬಾದಾಮಿ ತೈಲವನ್ನು ಮಸಾಜ್ ಮಾಡಿದರೆ ಸ್ನಾಯು ಸೆಳೆತ ಕಡಿಮೆಯಾಗುತ್ತದೆ.* ತಲೆಕೂದಲಿಗೆ ಹಚ್ಚುವುದರಿಂದ ಕೂದಲ ಹೊಳಪು ಹೆಚ್ಚುವುದಲ್ಲದೆ, ತಲೆ ಹೊಟ್ಟು ನಿವಾರಣೆಯಾಗುತ್ತದೆ.
ಬಾಲ್ಡ್ಹೆಡ್ ಸಮಸ್ಯೆನಾ...? ನಿಮ್ಮಲ್ಲೇ ಇದೆ ಪರಿಹಾರ
ಇತ್ತೀಚಿನ ದಿನಗಳಲ್ಲಿ ಬಾಲ್ಡ್ನೆಸ್ ಒಂದು ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಯುವಕರು ಕೂಡಾ ಕೂದಲುದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿನವೂ ಬೇಸರ, ಮಾನಸಿಕ ಒತ್ತಡ, ಅನಿಯಮಿತ ಆಹಾರ ಪದ್ಧತಿಯಿಂದ ನಿಮ್ಮ ಕೂದಲು ಉದುರಿ ಬೊಕ್ಕ ತಲೆಯುಂಟಾಗಬಹುದು. ಕೂದಲು ಉದುರುವಿಕೆಗೆ ಕಾರಣಗಳು ಅನೇಕ. ಆ ಕಾರಣಗಳನ್ನು ತಿಳಿದುಕೊಂಡರೆ ಬೊಕ್ಕ ತಲೆಯ ಸಮಸ್ಯೆಯಿಂದ ಪಾರಾಗಬಹುದು.
ಬಾಲ್ಡ್ನೆಸ್ಗೆ ಕಾರಣಗಳು * ಕಲುಷಿತ ಹೊಗೆ. * ಸೂರ್ಯನ ಕಿರಣಗಳು ನೇರವಾಗಿ ತಲೆ ಮೇಲೆ ಬೀಳುವುದು. * ನಿದ್ರಾಹೀನತೆ, ಮಾನಸಿಕ ಒತ್ತಡ.
* ಜಾಸ್ತಿ ಕಣ್ಣೀರು ಹಾಕುವುದರಿಂದ ಅಥವಾ ಕಣ್ಣೀರನ್ನು ತಡೆದುಕೊಳ್ಳುವುದರಿಂದ.* ಜಾಸ್ತಿ ಉಪ್ಪು , ಮಸಾಲೆ ವಸ್ತುಗಳ ಸೇವನೆ.
* ವಂಶಪಾರಂಪರ್ಯವಾಗಿಯೂ ಬೊಕ್ಕ ತಲೆ ಬರುವ ಸಾಧ್ಯತೆ ಇದೆ.
ಪರಿಹಾರ
* ಹಗಲು ನಿದ್ದೆ ಮಾಡುವುದನ್ನು ತಪ್ಪಿಸಿ. ನೀವು ರಾತ್ರಿ ಕೆಲಸಕ್ಕೆ ಹೋಗುವವರಾದರೆ ಪರ್ವಾಗಿಲ್ಲ, ಅನಿವಾರ್ಯವಾಗಿ ಹಗಲು ನಿದ್ದೆ ಮಾಡಲೇಬೇಕು.
* ಯೋಗದ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. * ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.
* ಆಲ್ಕೋಹಾಲ್ ಮತ್ತು ತಂಬಾಕು ವಸ್ತುಗಳಿಂದ ದೂರ ಇರಿ. * ಸರಿಯಾದ ಕೂದಲು ನಿರ್ವಹಣೆಯ ಟೆಕ್ನಿಕ್ಸ್ನ್ನು ಬಳಸಿ.
* ಹೆಚ್ಚು ಖಾರ, ಉಪ್ಪು ಇರುವ ಪದಾರ್ಥಗಳನ್ನು ಸೇವಿಸಬಾರದು. ಸಮತೋಲಿತ ಆಹಾರ ಕ್ರಮವನ್ನು ಪಾಲಿಸಿ.
* ತುಂಬಾ ಬಿಸಿಯಾದ ನೀರಿನಲ್ಲಿ ಕೂದಲನ್ನು ತೊಳೆಯಬೇಡಿ. ಕೊಠಡಿಯ ಉಷ್ಣತೆಗೆ ಅನುಗುಣವಾದ ಬಿಸಿ ನೀರನ್ನು ತಲೆ ಸ್ನಾನಕ್ಕೆ ಬಳಸಿ.
* ತಲೆ ಕೂದಲಿಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಳಸಿ.
ಬ್ಯೂಟಿ ಟಿಪ್ಸ್
* ಸ್ನಾನಕ್ಕೆ ಹೋಗುವ ಅರ್ಧ ಗಂಟೆ ಮೊದಲು ಮೈ-ಕೈಗೆ ಕೊಬ್ಬರಿ ಎಣ್ಣೆ ಹಚ್ಚಿ , ಕೊಂಚ ಮಸಾಜ್ ಮಾಡಿಕೊಂಡು ಸ್ನಾನ ಮಾಡಿ. ಚರ್ಮ ಸುಕೋಮಲವಾಗುವುದು. ಕಾಂತಿಯುಕ್ತವಾಗುವುದು.
* ಪ್ರತಿವಾರಕ್ಕೊಮ್ಮೆ ನಿಮ್ಮ ಉಗುರುಗಳನ್ನು ನೀಟಾಗಿ ಕತ್ತರಿಸಿ, ಕಟ್ಟರ್ನಲ್ಲಿ ಶೇಪ್ ನೀಡಿ. ನಿಂಬೆರಸವನ್ನು ಉಗುರುಗಳ ಮೇಲೆ ಉಜ್ಜಿ. ನಂತರ ಕೊಂಚ ಉಗುರು ಬೆಚ್ಚಗಿನ ನೀರಿನಲ್ಲಿ ಒಂದೈದು ನಿಮಿಷ ಇರಿಸಿ ನಂತರ ತೊಳೆಯಿರಿ. ಉಗುರುಗಳು ಆರೋಗ್ಯಕರವಾಗಿರುತ್ತವೆ.
* ನಿಮ್ಮ ಹುಬ್ಬು ಗಾಢ ಕಪ್ಪು ಬಣ್ಣ ಹಾಗೂ ದಪ್ಪನಾಗಬೇಕೆ? ಹೀಗೆ ಮಾಡಿ. ಪ್ರತಿರಾತ್ರಿ ಮಲಗುವ ಮುನ್ನ, ಬೆರಳ ತುದಿಯಲ್ಲಿ ಕೊಂಚ ಹರಳೆಣ್ಣೆ ತೆಗೆದುಕೊಂಡು ಹುಬ್ಬಿನ ಕೂದಲಿರುವ ಉಲ್ಟಾ ದಿಕ್ಕಿನಲ್ಲಿ ಸವರಿ. ಹುಬ್ಬಿನ ಕೂದಲು ಬೇಗಬೇಗನೆ ಬೆಳೆಯುವುದಲ್ಲದೆ, ಕಪ್ಪು ಬಣ್ಣಕ್ಕೆ ತಿರುಗುವುದು.
* ಯಾವುದೇ ಕಾರಣಕ್ಕೂ ಇತರರು ಬಳಸಿದ ಪೌಡರ್ ಸ್ಪಾಂಜ್ ಬಫ್ ಅನ್ನು ಮುಖಕ್ಕೆ ಬಳಸಬೇಡಿ. ಇದರಿಂದ ಮೊಡವೆ ಇಲ್ಲವೇ, ಚರ್ಮ ವ್ಯಾದಿ ಅಂಟಬಹುದು.
* ಕುಂಕುಮ ಹಚ್ಚುವ ಅಭ್ಯಾಸವಿರುವವರು ಉತ್ತಮ ಗುಣಮಟ್ಟದ ರಾಸಾಯನಿಕ ಅಂಶವಿಲ್ಲದ್ದನ್ನು ಬಳಸಿ. ಇಲ್ಲವಾದಲಿ ಅದನ್ನು ಹಚ್ಚುವ ಜಾಗದಲ್ಲಿ ಬಿಳಿ ಇಲ್ಲವೇ ಕಪ್ಪು ಕಲೆಯಾಗಬಹುದು. ರಾತ್ರಿ ವೇಳೆ ಅದನ್ನು ಒದ್ದೆ ಬಟ್ಟೆಯಿಂದ ಒರೆಸಿ, ನಂತರ ಮಲಗಿ.
ತಲೆನೋವಿಗೆ ಮಾತ್ರೆ ಬಿಡಿ; ಮನೆ ಮದ್ದು ಕೊಡಿ
ದಿನ ಬೆಳಗಾದ್ರೆ ಶನಿಯಂತೆ ಕಾಡೋದು ತಲೆನೋವು. ಹಾಗೆ ಬಂದು ಹೀಗೆ ಹೋಗುವ ತಲೆನೋವಿಗೆ ಕಂಡ ಕಂಡ ಮಾತ್ರೆ ತೆಗೆದುಕೊಳ್ಳುತ್ತೀರಿ. ಇವೆಲ್ಲ ಆರಂಭದಲ್ಲಿ ನೋವು ನಿವಾರಕವಾಗಿ ಕಂಡರೂ ಕೊನೆಗೆ ಅದೇ ಅಭ್ಯಾಸವಾಗಿ ಬಿಡುತ್ತದೆ. ಅದು ಇನ್ಯಾವುದೋ ಸಮಸ್ಯೆಯನ್ನು ತಂದಿಡಬಹುದು. ಅದರ ಬದಲು ಮನೆಮದ್ದಿನಿಂದಲೇ ತಲೆನೋವು ಓಡಿಸಿ. *ಒಂದು ವಾರ ನಿರಂತರವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣಿನ ಜತೆ ಸ್ವಲ್ಪ ಉಪ್ಪು ಸೇರಿಸಿಕೊಂಡು ತಿನ್ನಿ. *ಕುದಿಯುವ ನೀರಿನಲ್ಲಿ ತಾಜಾ ಶುಂಠಿ ಅಥವಾ ಒಣ ಶುಂಠಿ ಪುಡಿಯನ್ನು ಸೇರಿಸಿ ಹಬೆ ತೆಗೆದುಕೊಳ್ಳಿ. *ನಿಂಬೆರಸವನ್ನು ಹಣೆಗೆ ಹಚ್ಚಿ. *ಶುಂಠಿಯನ್ನು ಜಜ್ಜಿ ಹಣೆಗೆ ಹಚ್ಚಿಕೊಳ್ಳಿ.
*ಬಿಸಿ ನೀರು ತುಂಬಿದ ಒಂದು ಬಕೆಟ್ನಲ್ಲಿ ನಿಮ್ಮ ಕಾಲುಗಳನ್ನು 15 ನಿಮಿಷಗಳ ಕಾಲ ಇಳಿಬಿಡಬೇಕು. ಎರಡು ಮೂರು ವಾರಗಳ ಕಾಲ ರಾತ್ರಿ ಮಲಗುವ ಮುನ್ನ ಹೀಗೆ ಮಾಡಿ. *ಬಿಸಿ ನೀರಿನಲ್ಲಿ ನೀಲಗಿರಿ ತೈಲದ 10 ಹನಿಗಳನ್ನು ಹಾಕಿ ಹಬೆ ತೆಗೆದುಕೊಳ್ಳಿ. *ಅರ್ಧ ಚಮಚ ದಾಲ್ಚಿನಿ ಪುಡಿಯನ್ನು ನೀರಿನೊಂದಿಗೆ ಸೇರಿಸಿ ಹಣೆಗೆ ಹಚ್ಚಿಕೊಳ್ಳಿ.
ಸೌಂದರ್ಯಕ್ಕೆ ಮೊಟ್ಟೆ
ಮೊಟ್ಟೆ ತಿನ್ನುವುದರಿಂದ ಆರೋಗ್ಯ ವೃದ್ಧಿಸುತ್ತದೆ, ಶಕ್ತಿ ಹೆಚ್ಚುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾದರೆ, ಒಂದು ಮೊಟ್ಟೆ ಹೆಣ್ಣಿನ ಬಾಹ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂಬುದು ಸೌಂದರ್ಯ ತಜ್ಞರ ಉವಾಚ.* ಒಂದು ಮೊಟ್ಟೆಗೆ ಒಂದೆರೆಡು ಚಮಚ ಜೇನುತುಪ್ಪ ಹಾಗೂ ಆಲಿವ್ ಆಯಿಲ್ ಸೇರಿಸಿ, ಮಿಶ್ರ ಮಾಡಿ. ಮುಖದಿಂದ ಕುತ್ತಿಗೆಯವರೆಗೂ ಲೇಪಿಸಿ. ಒಣಗಿದ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದು ನಿಮ್ಮ ನಿಸ್ತೇಜ ಚರ್ಮವನ್ನು ಟೋನ್ ಮಾಡುತ್ತದೆ.
* ಒಂದು ಮೊಟ್ಟೆಗೆ ಕಡಲೆಹಿಟ್ಟು ಹಾಗೂ ಬಾಳೆಹಣ್ಣು ಸೇರಿಸಿ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ ೧೫ ನಿಮಿಷಗಳ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ ಕಲೆ ನಿವಾರಣೆಯಾಗುತ್ತದೆ.* ಮೊಟ್ಟೆಯ ಬಿಳಿಭಾಗವನ್ನು ತೆಗೆದುಕೊಂಡು, ಸ್ವಲ್ಪ ಓಟ್ಮಿಲ್ ಸೇರಿಸಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ . ಒಣಗಿದ ನಂತರ ತಣ್ಣಿರಿನಲ್ಲಿ ತೊಳೆಯಿರಿ. ಮುಖ ಕಾಂತಿಯುತವಾಗುತ್ತದೆ.* ಒಂದು ಮೊಟ್ಟೆಯ ಲೊಳೆಗೆ ಕೊಂಚ ಆಲಿವ್ ಎಣ್ಣೆ ಮಿಶ್ರ ಮಾಡಿ, ಕೊಂಚ ನೀರನ್ನು ಸೇರಿಸಿ ತಲೆಯ ಕೂದಲಿನ ಬುಡಕ್ಕೆ ಹಚ್ಚಿ. ಮಸಾಜ್ ಮಾಡಿ. ಒಂದೆರೆಡು ಗಂಟೆಯ ನಂತರ ತಲೆ ತೊಳೆಯಿರಿ. ಕೂದಲು ಮಿರ ಮಿರ ಮಿಂಚುವುದು.
ಉದ್ದ ಕೂದಲು ಉಳಿಸಿಕೊಳ್ಳುವುದು ಹೇಗೆ?
ಗಿಡ್ಡ ಕೂದಲವಳಿಗೆ ಉದ್ದವಾಗಿಲ್ಲ ಅನ್ನೋ ಚಿಂತೆ. ಉದ್ದ ಕೂದಲ ಹುಡುಗಿಗೆ ನಿರ್ವಹಣೆಯೇ ಕಷ್ಟವಂತೆ!ಆದ್ರೂ ಇತ್ತೀಚೆಗೆ ಹುಡುಗಿಯರು ಕೂದಲಿಗೆ ಸಿಕ್ಕಾಪಟ್ಟೆ ಕತ್ತರಿ ಹಾಕಲು ಮನಸ್ಸು ಮಾಡುತ್ತಿಲ್ಲ. ಉದ್ದ ಕೂದಲೇ ಫ್ಯಾಷನ್ ಅಂತಾರೆ. ಕೂದಲನ್ನು ಉದ್ದುದ್ದವಾಗಿ ಹಾಗೇ ಕೆಲವು ವರ್ಷ ಉಳಿಸಿಕೊಳ್ಳಬೇಕು ಅಂದರೆ ಆರೈಕೆಗೆ ಹೆಚ್ಚು ಗಮನ ನೀಡಬೇಕು. ಇಲ್ಲದಿದ್ದರೆ ಹಲವು ಬಗೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೇವಲ ಕೊಬ್ಬರಿ ಎಣ್ಣೆ ಹಚ್ಚಿ, ಸದಾ ಸಿಕ್ಕು ಬಿಡಿಸುತ್ತಿದ್ದಾಕ್ಷಣ ಕೂದಲು ಆರೋಗ್ಯವಾಗಿರುತ್ತದೆ ಅಂತೇನೂ ಅಲ್ಲ. ನೀವು ಸೇವಿಸುವ ಆಹಾರದ ಮೇಲೂ ಕೂದಲ ಬೆಳವಣಿಗೆ ಅವಲಂಬಿಸಿದೆ.ಹಸಿರು ತರಕಾರಿ, ಕಾಳುಗಳು, ಮೊಟ್ಟೆ, ಕ್ಯಾರೆಟ್ ಸೇವನೆ ಕೂದಲ ಆರೋಗ್ಯಕ್ಕೆ ಒಳ್ಳೆಯದು. ಪ್ರತಿ ಆರೆಂಟು ವಾರಗಳಿಗೊಮ್ಮೆ ಕವಲೊಡೆದ ಕೂದಲ ತುದಿಯನ್ನು ಕತ್ತರಿಸಿ. ಇದರಿಂದ ಉಳಿದ ಕೂದಲು ಹಾನಿಗೀಡಾಗುವುದನ್ನು ತಪ್ಪಿಸಬಹುದು. *ಹೇರ್ ಡ್ರೈ ಮಾಡಬೇಡಿ. *ಒದ್ದೆ ಕೂದಲನ್ನು ಬಾಚಬೇಡಿ. *ಕಂಡಕಂಡ ಶಾಂಪೂ ಬಳಸಬೇಡಿ.*ಹಾನಿಕಾರಕ ರಾಸಾಯನಿಕ ಅಂಶವಿರುವ ವಸ್ತುಗಳ ಬಳಕೆ ಕೂದಲ ಆರೋಗ್ಯಕ್ಕೆ ಒಳ್ಳೆಯದಲ್ಲ.*ವಿಪರೀತ ಡಯಟ್ ಮಾಡಬೇಡಿ. ಏಕೆಂದರೆ ಇದರಿಂದ ಅಗತ್ಯ ಪೋಷಕಾಂಶ ನಿಮ್ಮ ಕೂದಲಿಗೆ ಸಿಗದೆ ಹೋಗಬಹುದು.
ಹರೆಯದ ಗರ್ಭ ಭವಿಷ್ಯಕ್ಕೆ ಹೊರೆ ಶುಭಾ ವಿಕಾಸ್
ನೋಟಕ್ಕೆ ಬೆರಗಾದಳು ಹುಡುಗಿ. ಮಾತಿಗೆ ಮನಸೋತವಳು ಪ್ರೀತಿ ಪ್ರೇಮ ಅಂತೆಲ್ಲ ಓಡಾಡಿದಳು. ಆತನ ತೆಕ್ಕೆಯಲ್ಲಿ ಮೈಮನ ಮರೆತಳು. ಇಲ್ಲಿಯತನಕ ಕಂಡು ಕೇಳರಿಯದ ಖುಷಿ ಅನುಭವಿಸಿದಳು. ಜಗತ್ತಿನಲ್ಲಿ ಎಲ್ಲೂ ಸಿಗದ ಸುಖ ಆತನದ್ದೊಂದು ಮಾತು, ಸ್ಪರ್ಶದಲ್ಲಿ ಇದೆ ಅಂತಾನೆ ನಂಬಿದಳು. ಅದನ್ನೇ ಪದೇಪದೆ ನೆನೆದು ಪುಳುಕಗೊಳ್ಳುತ್ತಿದ್ದವಳನ್ನು ಭಯ ಬೀಳಿಸಿದ್ದು ತಿಂಗಳಿಗೆ ಬಾರದ ಮುಟ್ಟು.ಹತ್ತಾರು ದಿನ ಕಾದಾಗಲೂ ಅದು ಬರಲಿಲ್ಲ. ಬದಲಿಗೆ ದೇಹದಲ್ಲಾದ ಚಿಕ್ಕಪುಟ್ಟ ಬದಲಾವಣೆಗೆ ಮತ್ತಷ್ಟು ಕಂಗಾಲಾದಳು ಹುಡುಗಿ. ಇದು ಅವತ್ತಿನ ಪರಿಣಾಮ ಇರಬಹುದು ಎಂದು ಊಹಿಸುವಷ್ಟು ಜಾಣೆ. ಆದರೆ ಮೊದಲೇ ಎಚ್ಚರ ವಹಿಸಬೇಕು ಅನ್ನುವುದು ತಿಳಿಯಲಿಲ್ಲವಾ ಅಥವಾ ನಿರ್ಲಕ್ಷ್ಯವೋ ಅವಳಂತೂ ಇದೀಗ ತಿಂಗಳ ಗರ್ಭಿಣಿ. ವಯಸ್ಸಿನ್ನೂ ೧೫ ಮೀರಿಲ್ಲ!ಮದುವೆಗೆ ನಿಗದಿತ ವಯಸ್ಸು ಇದೆ. ಆದರೆ ಗರ್ಭಧಾರಣೆಗೆ ಋತುಚಕ್ರ ಆರಂಭವಾದರೆ ಸಾಕಷ್ಟೆ. ಅದು ವಯಸ್ಸು ಹನ್ನೆರಡೋ, ಹದಿನಾಲ್ಕೋ ಆಗಿರಬಹುದು. ಹಾಗಾಗಿಯೇ ಹರಯದಲ್ಲಿ ಗರ್ಭಧರಿಸುವ ಹಾಗೂ ಗರ್ಭಪಾತ ಪ್ರಮಾಣ ಹೆಚ್ಚುತ್ತಿದೆ. ಮುಚ್ಚಟೆಯಾಗಿ ನಡೆಯುವ ವ್ಯವಹಾರವಾದ್ದರಿಂದ ಇಂತಿಷ್ಟೆ ಅಂತ ಲೆಕ್ಕಚಾರ ಸಿಗುತ್ತಿಲ್ಲ. ಆದ್ರೆ ವೈದ್ಯ ಮೂಲದ ಪ್ರಕಾರ, ಹೈಸ್ಕೂಲ್ನಿಂದ ಪಿಯುಸಿಯವರೆಗಿನ ಹುಡುಗಿಯರು ಆಗಾಗ ಗರ್ಭಪಾತಕ್ಕೆ ವೈದ್ಯರ ಸಹಾಯ ಕೋರುತ್ತಾರೆ. ಅದರಲ್ಲಿ ಬಡವರು, ಶ್ರೀಮಂತರು ಅನ್ನುವ ಭೇದವಿಲ್ಲ. ಆದ್ರೆ ಬಹುತೇಕ ಪ್ರಕರಣಗಳು ಪೋಷಕರ ಗಮನಕ್ಕೆ ಬರುವುದೇ ಇಲ್ಲ.
ಮಾನಸಿಕ ಸ್ಥಿತಿ
ಇಷ್ಟಕ್ಕೆಲ್ಲ ಕಾರಣನಾದ ಹುಡುಗ ಸಂಬಂಧವೇ ಇಲ್ಲ ಅಂತ ಎದ್ದು ಹೋದರೆ ಅವಕಾಶ ಉಪಯೋಗಿಸಿಕೊಂಡ ಪ್ರೇಮಿಯ ಮೇಲೆ ಕೋಪ. ಮನೆಯಲ್ಲಿ ಗೌಪ್ಯ ಕಾಪಾಡಿಕೊಳ್ಳಬೇಕಾದ ಅನಿವಾರ್ಯದ ನಡುವೆ ಅವಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ. ಆ ಕ್ಷಣಕ್ಕೆ ಆಗಬಾರದ್ದು ಆಗಿ ಹೋಗಿರಬಹುದು. ಆದು ಆಕಸ್ಮಿಕವೇ ಇರಬಹುದು, ಆದರೆ ಅದರ ಪರಿಣಾಮ ಮಾತ್ರ ಕೇವಲ ದೇಹದ ಮೇಲಾಗುವುದಿಲ್ಲ. ಮಾನಸಿಕವಾಗಿ ವಿಪರೀತ ಪರಿತಪಿಸುತ್ತಾರೆ. ಅದ್ಯಾವುದೋ ಘಳಿಗೆಯಲ್ಲಿ ತಪ್ಪು ನಡೆದು ಹೋಯಿತು ಅನ್ನೋ ಗಿಲ್ಟ್ ಜೀವನಪೂರ್ತಿ ಕಾಡುತ್ತದೆ. ಇದು ಒತ್ತಡ ಉಂಟು ಮಾಡಬಹುದು. ಓದಿನಲ್ಲಿ ಆಸಕ್ತಿ ಕಳೆದು ಹೋಗುವುದರ ಜತೆ ಆತ್ಮವಿಶ್ವಾಸದ ಕೊರತೆ ಜತೆ ವಿವಾಹದ ನಂತರವೂ ಲೈಂಗಿಕ ಸಂಗತಿ ಬಗ್ಗೆ ಭಯದ ವಾತಾವರಣ ನಿರ್ಮಾಣವಾಗಬಹುದು.
ಮಹಾನಗರಗಳಲ್ಲಿ ಹೆಚ್ಚು
ವಿದೇಶಗಳಲ್ಲಷ್ಟೆ ಅಲ್ಲ, ಭಾರತದಲ್ಲೂ ಹರಯದಲ್ಲಿ ಗರ್ಭ ಧರಿಸುವ ಪ್ರಮಾಣ ಹೆಚ್ಚಾಗಿಯೇ ಇದೆ. ಮಹಾನಗರಗಳಲ್ಲಿ ಇದರ ಪ್ರಮಾಣ ಅತ್ಯಧಿಕ. ೧೪ರಿಂದ ೧೯ ವರ್ಷದೊಳಗಿನ ಹುಡುಗಿಯರು ಹೆಚ್ಚು ಸ್ತ್ರೀರೋಗ ತಜ್ಞರನ್ನು ಭೇಟಿ ಆಗುತ್ತಾರೆ. ಪದೇಪದೆ ಗರ್ಭಪಾತದ ಪರಿಣಾಮ ಅಥವಾಜಾಗೃತಿ ಅದ್ಯಾವುದನ್ನೂ ಕೇಳಲಿಕ್ಕೆ ಇಷ್ಟ ಪಡದ ಹುಡುಗಿಯರಿಗೆ ಆ ಕ್ಷಣಕ್ಕೆ ಬೇಡದ ಮಗುವನ್ನು ತೆಗೆದುವುದಷ್ಟೆ ಬೇಕಿರುವುದು. ಕೆಲವರಂತೂ ವೈದ್ಯರ ಬಳಿ ಬರಲು ಹಿಂಜರಿಯುತ್ತಾರೆ. ಅವೈಜ್ಞಾನಿಕ ವಿಧಾನದ ಮೂಲಕ ಗರ್ಭಪಾತ ಮಾಡಿಸುವುದು ಸಾವಿಗೆ ಕಾರಣವಾಗಬಹುದು. ಯುನಿಸೆಫ್ ವರದಿ ಪ್ರಕಾರ, ಜಗತ್ತಿನಾದ್ಯಂತ ೧೫ರಿಂದ ೧೯ ವರ್ಷದೊಳಗಿನ ೭೦ ಸಾವಿರ ಹುಡುಗಿಯರು ಗರ್ಭಪಾತ, ಹೆರಿಗೆಗೆ ಸಂಬಂಧಪಟ್ಟ ಕಾರಣಗಳಿಂದ ಮರಣ ಹೊಂದುತ್ತಾರೆ.
ಎಚ್ಚರಿಕೆಯೇ ಪರಿಹಾರ
ಕೌಟುಂಬಿಕ ವಾತಾವರಣ, ಮಾಧ್ಯಮಗಳ ಪ್ರಭಾವ, ಲೈಂಗಿಕ ವಿಷ್ಯದ ಬಗ್ಗೆ ಅರೆಬರೆ ತಿಳುವಳಿಕೆಗಳೆಲ್ಲವೂ ವಯಸ್ಸಲ್ಲದ ವಯಸ್ಸಲ್ಲಿ ಎಡವಟ್ಟು ಮಾಡಿಕೊಳ್ಳಲು ಕಾರಣ. ಆದರೆ ಲೈಂಗಿಕ ಶಿಕ್ಷಣ ಕೊರತೆಯಿಂದ ಹೀಗೆಲ್ಲ ಆಗುತ್ತಿದೆ ಅನ್ನುವುದು ಕೆಲವು ಪ್ರಮಾಣದಲ್ಲಿ ಮಾತ್ರ ವಾಸ್ತವ. ಏಕೆಂದರೆ ಬಹುತೇಕ ಹರಯದವರಿಗೆ ಈ ಬಗ್ಗೆ ಜ್ಞಾನ ಇದ್ದೇ ಇರುತ್ತದೆ. ಗರ್ಭ ನಿರೋಧಗಳ ಬಗ್ಗೆ ಕೂಡ ಸಾಕಷ್ಟು ತಿಳಿವಳಿಕೆ ಇರುತ್ತದೆ. ಆದರೆ ಅವು ಕೈಕೊಟ್ಟಾಗ ಗರ್ಭಪಾತಕ್ಕೆ ವೈದ್ಯರನ್ನು ಸಂಪರ್ಕಿಸುತ್ತಾರೆ ಅಂತಾರೆ ಕೆಲವು ಸ್ತ್ರೀ ರೋಗ ತಜ್ಞರು. ಇದೇನು ಪರಿಹಾರವಿಲ್ಲದ ಸಮಸ್ಯೆಯಲ್ಲ. ಗರ್ಭಪಾತದ ನಂತರ ಎಲ್ಲವೂ ಮುಗಿದು ಹೋಗುತ್ತದೆ ಅಂತಲ್ಲ. ಮುಂದೊಂದು ದಿನ ತಾಯ್ತನ ಬಯಸಿದರೂ ಬಾರದೆ ಹೋಗಬಹುದು. ಇನ್ಯಾವುದೋ ಲೈಂಗಿಕ ಸಮಸ್ಯೆ ಕಾಡಬಹುದು. ಲೈಂಗಿಕ ಚಟುವಟಿಕೆಯಲ್ಲಿ ತೊಡಗುವ ಮುನ್ನ ಲೈಂಗಿಕ ಕ್ರಿಯೆ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀಳಬಹುದು ಅನ್ನುವುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಪೋಷಕರು ಮಕ್ಕಳ ಮೇಲೆ ಕಿಂಚಿತ್ತಾದರೂ ನಿಗಾ ವಹಿಸುವುದು ಒಳ್ಳೆಯದು. ತಪ್ಪು ನಡೆದು ಹೋದರೆ ಮತ್ತೆ ಮಾಡದಂತೆ ಬುದ್ಧಿ ಹೇಳಿ.
ಅಪಾಯ ಜಾಸ್ತಿ
ಹರಯದಲ್ಲಿ ಗರ್ಭ ಧಾರಣೆ ಭವಿಷ್ಯಕ್ಕೆ ಒಳ್ಳೆಯದಲ್ಲ. ಪದೇಪದೆ ಗರ್ಭಪಾತದಿಂದ ಗರ್ಭನಾಳ ಮುಚ್ಚಬಹುದು. ಸೋಂಕು ತಗುಲಬಹುದು. ಬಂಜೆತನ ಕೂಡ ಬರಬಹುದು. ಒಂದಕ್ಕಿಂತ ಹೆಚ್ಚು ವ್ಯಕ್ತಿಯೊಂದಗಿನ ಲೈಂಗಿಕ ಸಂಪರ್ಕದಿಂದ ಏಡ್ಸ್ ಮತ್ತಿತರ ಲೈಂಗಿಕ ರೋಗಗಳನ್ನು ಹರಡಬಹುದು. ಗರ್ಭಕೊರಳಿನ ಕ್ಯಾನ್ಸರ್ಗೆ ಕೂಡ ಕಾರಣವಾಗಬಹುದು. ಸುರಕ್ಷಿತ ಲೈಂಗಿಕ ಸಂಪರ್ಕದ ಜತೆ ಗರ್ಭ ನಿರೋಧಕಗಳ ಬಗ್ಗೆ ಅರಿತರೆ ಗರ್ಭಪಾತದಿಂದ ದೂರ ಇರಬಹುದು. -ಡಾ. ಕಾಮಿನಿ ರಾವ್, ಸ್ತ್ರೀರೋಗ ತಜ್ಞೆ
ಹೀಗೆ ಮಾಡಬೇಡಿ
ಹದಿಹರಯದ ಹೆಣ್ಣು ಮಕ್ಕಳಲ್ಲಿ ಫಲವತ್ತತೆ ಹೆಚ್ಚು. ಆದ್ದರಿಂದ ಬಹುಬೇಗ ಗರ್ಭ ಧರಿಸಬಹುದು. ಬೇಡದ ಗರ್ಭವನ್ನು ವೈದ್ಯರ ಸಲಹೆ ಇಲ್ಲದೆ ಮಾತ್ರೆ ಇನ್ನಿತರ ಔಷಧಗಳ ಮೂಲಕ ತೆಗೆದು ಹಾಕುವ ಪ್ರಯತ್ನ ಕೂಡ ಕೆಲವು ಸಲ ಫಲ ಕೊಡುವುದಿಲ್ಲ. ರಕ್ತಸ್ರಾವದಲ್ಲೇ ಎಲ್ಲವೂ ಮುಗಿದು ಹೋಯಿತು ಅಂದುಕೊಂಡರೆ ಅದು ತಪ್ಪು. ಭ್ರೂಣ ಉಳಿದು ಹೋಗಿ ಪುನಃ ಬೆಳೆದುಕೊಳ್ಳಬಹುದು ಅಥವಾ ಸೋಂಕು, ಗರ್ಭನಾಳ ಮುಚ್ಚುವಂಥ ಸಮಸ್ಯೆ ಕಾಡಗಬಹುದು. - ಡಾ. ಮಂಜುಳಾ, ಸ್ತ್ರೀರೋಗ ತಜ್ಞೆ
ಕಣ್ಣಿಗೊಪ್ಪದು ಕಪ್ಪು ವರ್ತುಲ
ಮುಖದ ಅಂದ ಹೆಚ್ಚಿಸುವಲ್ಲಿ ಕಣ್ಣು ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಇಂಥ ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಅವೇ ಮುಖದಲ್ಲಿ ಎದ್ದು ಕಾಣುತ್ತವೆ.
ಕಲೆಗೆ ಕಾರಣ
ಖಿನ್ನತೆ, ನಿದ್ರಾಹೀನತೆ, ಒತ್ತಡ, ಪೋಷಕಾಂಶದ ಕೊರತೆ, ಅಸಮತೋಲಿತ ಡಯೆಟ್, ಸೂರ್ಯನ ಕಿರಣಗಳು ನೇರವಾಗಿ ಬೀಳುವುದು, ಅತಿಯಾದ ಮಾದಕ ವಸ್ತುಗಳ ಸೇವನೆ ಮೊದಲಾದವುಗಳಿಂದ ಕಣ್ಣಿನ ಸುತ್ತ ಕಪ್ಪು ಕಲೆಗಳಾಗುತ್ತವೆ. ಇವುಗಳನ್ನು ಹೋಗಲಾಡಿಸಲು ಮನೆ ಮದ್ದು ಮಾಡಿ ಪರಿಹಾರ ಕಂಡುಕೊಳ್ಳಬಹುದು. *ಪ್ರತಿದಿನವೂ ಕನಿಷ್ಟ 6-8 ಗಂಟೆ ನಿದ್ದೆ ಮಾಡಿ. *ಸಾಕಷ್ಟು ನೀರು ಕುಡಿಯಿರಿ
*ಒಂದು ಚಮಚ ಟೊಮ್ಯಾಟೋ ಜ್ಯೂಸ್, ಅರ್ಧ ಚಮಚ ನಿಂಬೆ ರಸ, ಸ್ವಲ್ಪ ಅರಿಸಿನ ಪುಡಿ, ಸ್ವಲ್ಪ ಕಡ್ಲೆ ಹಿಟ್ಟು ಬಳಸಿ ಪೇಸ್ಟ್ ಮಾಡಿ ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿಕೊಳ್ಳಿ. ಹತ್ತು ನಿಮಿಷ ಹಾಗೇ ಬಿಟ್ಟು, ತೊಳೆದುಕೊಳ್ಳಿ. *ಹತ್ತಿಯನ್ನು ಸೌತೆಕಾಯಿ ರಸದಲ್ಲಿ ಮುಳುಗಿಸಿ ಕಪ್ಪು ಕಲೆಗಳಿರುವ ಭಾಗಕ್ಕೆ ದಿನಕ್ಕೆ ಎರಡು ಬಾರಿ ಹಚ್ಚಿಕೊಳ್ಳಬಹುದು. * ಪುದೀನಾ, ನಿಂಬೆ, ಟೊಮ್ಯಾಟೋ ಜ್ಯೂಸ್ಗಳ ಕುಡಿಯುತ್ತಿರಿ. *ಹೊರಗಡೆ ಹೋಗುವಾಗ ಸನ್ಗ್ಲಾಸ್ ಬಳಸಿ.
*ಅನಾನಸು ಮತ್ತು ಅರಿಸಿನ ಪುಡಿ ಮಿಶ್ರ ಮಾಡಿ ಹಚ್ಚಿಕೊಳ್ಳಿ. *ಕಣ್ಣಿನ ಸುತ್ತ ಮೂಡಿರುವ ಕಪ್ಪು ಕಲೆಗೆ ಪ್ರತಿದಿನ ಬಾದಾಮಿ ಎಣ್ಣೆ ಹಚ್ಚಿಕೊಳ್ಳಿ.
*ಪಪ್ಪಾಯಿ ಹಣ್ಣನ್ನು ಕಣ್ಣಿನ ಸುತ್ತ ಹಚ್ಚಿಕೊಳ್ಳುವುದರಿಂದಲೂ ಕಲೆ ಕಡಿಮೆಯಾಗುತ್ತದೆ.
ಮೈ-ಮುಖದ ಅಂದಕ್ಕೆ ಮೃತ್ತಿಕಾ ಚಿಕಿತ್ಸೆ ಶ್ರೀದೇವಿ ಅಂಬೆಕಲ್ಲು
ಪಂಚಭೂತಗಳಲ್ಲಿ ಒಂದಾಗಿರುವ ಮಣ್ಣನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚಾಗಿ ನ್ಯಾಚುರೋಪತಿ ಟ್ರೀಟ್ಮೆಂಟ್ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಕೃತಿಕವಾಗಿರುವ ಮಣ್ಣಿನಲ್ಲೂ ಔಷಧೀಯ ಅಂಶಗಳು ಇರುತ್ತವೆ ಎಂಬುದನ್ನು ನ್ಯಾಚುರೋಪತಿ ಸಾಬೀತು ಪಡಿಸಿದೆ. ಮಡ್ ಥೆರಫಿಗೆ ಅಥವಾ ಮೃತ್ತಿಕಾ ಚಿಕಿತ್ಸೆಗೆ ಆಯರ್ವೇದದಲ್ಲೂ ಮಹತ್ವದ ಸ್ಥಾನ. ಕಡಿಮೆ ಖರ್ಚಿನಲ್ಲಿ ಈ ಚಿಕಿತ್ಸೆ ಮಾಡಿಸಿಕೊಳ್ಳಬಹುದು.ಮೃತ್ತಿಕಾ ಚಿಕಿತ್ಸೆಯಲ್ಲಿ ಪ್ರಾಕೃತಿಕವಾಗಿ ದೊರೆಯುವ ಮಣ್ಣನ್ನು ಸಂಸ್ಕರಿಸಿ ಳಸಲಾಗುತ್ತದೆ. ಮುಖ್ಯವಾಗಿ ಕಪ್ಪು ಮಣ್ಣನ್ನು ಚರ್ಮರೋಗಗಳಿಗೆ, ಕೆಂಪು ಮಣ್ಣನ್ನು ಉದರ ಶೂಲೆ, ಗಂಟು ಬೇನೆಗೆ, ಹುತ್ತದ ಮಣ್ಣನ್ನು ಚರ್ಮ ರೋಗ ಗುಣ ಪಡಿಸಲು ಮತ್ತು ಬಿಳಿ ಮಣ್ಣನ್ನು ಯಕೃತ್ ತೊಂದರೆ ನಿವಾರಿಸಲು ಹಾಗೂ ಹಳದಿ ಮಣ್ಣನ್ನು ಪಚನ ಕ್ರಿಯೆ ತೊಂದರೆ ಮತ್ತು ಮಧುಮೇಹ ಸಮಸ್ಯೆ ಇರುವವರಿಗೆ ಬಳಸಲಾಗುತ್ತದೆ.
ಮಡ್ಪ್ಯಾಕ್
ಕಣ್ಣಿನ ಮೇಲ್ಭಾಗದಲ್ಲಿ ಮಣ್ಣಿನ ಪ್ಯಾಕ್ ಹಾಕಿಸಿಕೊಳ್ಳುವುದರಿಂದ ಕಣ್ಣುರಿ, ತುರಿಕೆ ಗ್ಲುಕೋಮಾ ಇರುವವರಿಗೂ ಒಳ್ಳೆಯದು. ಸೋಸಿ ಸಂಗ್ರಹಿಸಿಟ್ಟ ಹುತ್ತದ ಮಣ್ಣಿಗೆ ನೀರು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ಬರುವುದಿಲ್ಲ. ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.
ಮೃತ್ತಿಕಾ ಸ್ನಾನ: ಆಯುರ್ವೇದ ಚಿಕಿತ್ಸಾ ಕೇಂದ್ರಗಳಲ್ಲಿ ಮಡ್ಥೆರಪಿ ನೀಡಲಾಗುತ್ತದೆ. ಮಣ್ಣಿನ ಲೇಪ ಹಚ್ಚಿದ ನಂತರ ಅದು ಒಣಗುವವರೆಗೆ ಸುಮಾರು 20ರಿಂದ 30 ನಿಮಿಷಗಳ ಕಾಲ ಬಿಸಿಲಿನಲ್ಲಿ ಮೈಯೊಡ್ಡಬೇಕು. ಈ ಚಿಕಿತ್ಸೆ ಚರ್ಮದ ಅಂಗಾಂಶಗಳು ಕ್ರಿಯಾಶೀಲವಾಗಿರುವಂತೆ, ರಕ್ತ ಸಂಚಾರ ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.
ಉಪಯೋಗಗಳು
ಗಾಯ ಮತ್ತು ಚರ್ಮ ರೋಗಗಳಿಗೆ ಮಣ್ಣಿನಿಂದಲೇ ಬ್ಯಾಂಡೇಜ್ ಹಾಕಿಸಿಕೊಳ್ಳಬಹುದು. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮಡ್ಬಾತ್ ಮಾಡಿಸುತ್ತಾರೆ. ಮಡ್ ಥೆರಪಿಯನ್ನು ಸೌಂದರ್ಯ ಹೆಚ್ಚಿಸಿಕೊಳ್ಳಲು ಮಾತ್ರ ಅಲ್ಲ, ಬೆನ್ನು, ಸ್ನಾಯು ಜಾಯಿಂಟ್ ನೋವು , ಅಸ್ಥಿ ಸಂಧಿವಾತವನ್ನು ಕಡಿಮೆ ಮಾಡಿಕೊಳ್ಳಲು ಬಳಸುತ್ತಾರೆ. ಮಲಬದ್ಧತೆ, ತಲೆನೋವು, ರಕ್ತದೊತ್ತಡ, ಚರ್ಮರೋಗ ಸಮಸ್ಯೆಗೆ ಮಡ್ಬಾತ್ನಿಂದ ಪರಿಹಾರ ಕಂಡುಕೊಳ್ಳಬಹುದು. ಮಡ್ ಥೆರಪಿಯನ್ನು ನ್ಯಾಚುರೋಪತಿ ಚಿಕಿತ್ಸೆಯಲ್ಲಿ ಬಳಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೌಂದರ್ಯ ವರ್ಧಕ ವಸ್ತುವಾಗಿಯೂ ಬಳಸಲಾಗುತ್ತಿದೆ. ನುರಿತ ವೈದ್ಯರ ಸಲಹೆ ಪಡೆದು ಈ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದು.
ಮಣ್ಣಿನ ಚಿಕಿತ್ಸೆಯ ಪ್ರಯೋಜನಗಳು: -ಮೃತ್ತಿಕಾ ಸ್ನಾನದಿಂದ ದೇಹ ರಿಫ್ರೆಶ್ ಆಗುತ್ತದೆ.
-ಮಣ್ಣಿನ ಪ್ಯಾಕ್ ಹಾಕಿಸಿಕೊಂಡರೆ ತಣ್ಣೀರಿನ ಪ್ಯಾಕ್ ಹಾಕಿಸಿಕೊಳ್ಳುವದಕ್ಕಿಂತಲೂ ಹೆಚ್ಚಾಗಿ, ದೇಹದಲ್ಲಿ ನೀರಿನಂಶ ದೀರ್ಘ ಕಾಲ ಉಳಿಯುತ್ತದೆ.
-ಚರ್ಮದ ಪಿಎಚ್ ಮೌಲ್ಯವನ್ನು ಸರಿಯಾಗಿರಿಸುತ್ತದೆ. -ದೇಹದಲ್ಲಿ ಸುಗಮ ರಕ್ತ ಸಂಚಾರಕ್ಕೆ ಎಡೆ ಮಾಡಿಕೊಡುತ್ತದೆ.
-ಮಡ್ ಥೆರಪಿಯಿಂದ ಮೊಡವೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೊಡವೆಯಿಂದ ಉಂಟಾದ ಕಲೆಯನ್ನು ಹೋಗಲಾಡಿಸುತ್ತದೆ.
-ಚರ್ಮವನ್ನು ನುಣುಪಾಗಿರಿಸುತ್ತದೆ. -ಕಣ್ಣಿನ ಆಯಾಸವನ್ನು ಕಡಿಮೆ ಮಾಡುತ್ತದೆ.
-ಉರಿಯೂತವನ್ನು ತಡೆಯುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಸತ್ತ ಚರ್ಮವನ್ನು ನಾಶ ಮಾಡಿ ಹೊಸ ಚರ್ಮ ಬೆಳೆಯುವುದಕ್ಕೆ ಸಹಕರಿಸುತ್ತದೆ.
-ಕಜ್ಜಿ, ಸಣ್ಣ ಗುಳ್ಳೆಗಳಿಂದ ದೇಹದಲ್ಲಾದ ಕಲೆಗಳನ್ನು ಮಡ್ಥೆರಪಿಯಿಂದ ಬಹು ಬೇಗ ಕಡಿಮೆ ಮಾಡಿಕೊಳ್ಳಬಹುದು.
-ಕುಷ್ಠರೋಗ, ಅಲರ್ಜಿ, ಸೋರಿಯಾಸಿಸ್ ಹಾಗೂ ಇತರ ಚರ್ಮರೋಗಗಳಿಗೆ ಮಡ್ ಥೆರಪಿಯಿಂದ ಪರಿಹಾರ ಕಂಡುಕೊಳ್ಳಬಹುದು.
-ಸಾಮಾನ್ಯ ವೀಕ್ನೆಸ್, ನರ ದುರ್ಬಲತೆಯನ್ನು ಸರಿಪಡಿಸಲು ಮಡ್ ಥೆರಪಿ ಮಾಡುತ್ತಾರೆ.
-ಅಜೀರ್ಣ ಆಗಿದ್ದರೆ ಹೊಟ್ಟೆಯ ಮೇಲ್ಭಾಗದಲ್ಲಿ ಮಣ್ಣಿನ ಪ್ಯಾಕ್ ಹಾಕಿಸಿಕೊಳ್ಳಬಹುದು. ಸಣ್ಣ ಕರುಳಿನ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ವಿಪರೀತ ತಲೆನೋವಿಗೆ ತಲೆಗೆ ಮಣ್ಣಿನ ಪ್ಯಾಕ್ ಹಾಕಿಸಿಕೊಳ್ಳಬಹುದು. ಇದರಿಂದ ನೋವು ಬಹುಬೇಗ ಶಮನಗೊಳ್ಳುತ್ತದೆ.
ಮಣ್ಣನ್ನು ಎರಡು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಸರ್ವಾಂಗ ಲೇಪನ ಮತ್ತು ಸ್ಥಾನಿಕ ತೊಂದರೆಗಳಿಗೆ ಉಪಯೋಗಿಸಿಕೊಳ್ಳಲಾಗುತ್ತದೆ. ಮೃತ್ತಿಕಾ ಮಣ್ಣು ಹಾಕಿಸಿಕೊಳ್ಳುವುದರಲ್ಲಿ ಕೂಡಎರಡು ವಿಧ. 1. ನೇರವಾಗಿ ಮಣ್ಣನ್ನು ಲೇಪಿಸುವುದು ಮತ್ತು 2. ಮಣ್ಣನ್ನು ಬಟ್ಟೆಯಲ್ಲಿ ಕಟ್ಟಿ ದೇಹದ ನಿರ್ದಿಷ್ಟ ಭಾಗದ ಮೇಲೆ ಕಟ್ಟುವುದು.
ಹೇಗೆ ಚಿಕಿತ್ಸೆ?
ರೋಗ ಲಕ್ಷಣಕ್ಕೆ ಅನುಗುಣವಾಗಿ ಮಣ್ಣು ದೊರೆಯುವ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ಮೂರು ಅಡಿ ಆಳದಿಂದ ಮಣ್ಣನ್ನು ತೆಗೆದು ಶೇಖರಿಸಿದ ಮಣ್ಣಿನಿಂದ ಕಲ್ಲು, ಬೇರನ್ನು ಬೇರ್ಪಡಿಸಿ ಚೆನ್ನಾಗಿ ಪುಡಿ ಮಾಡಿ, ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಮಣ್ಣನ್ನು ಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಮಣ್ಣಿನ ಲೇಪ ಹಾಕಿಕೊಂಡು 20-30 ನಿಮಿಷ ಕಾಲ ಒಣಗಲು ಹಾಗೆಯೇ ಬಿಡಬೇಕು. ಮೃತ್ತಿಕಾ ಚಿಕಿತ್ಸೆಯ 24 ತಾಸುಗಳ ಮೊದಲು; ಸಂಗ್ರಹಿಸಿದ ಮಣ್ಣನ್ನು ನೀರಿನಲ್ಲಿ ನೆನೆಸಿಡಬೇಕು. ಅದನ್ನು ನೇರವಾಗಿ ಬಳಸಬಹುದುದು ಅಥವಾ ಬಿಳಿ ಬಟ್ಟೆಯಲ್ಲಿ ಸುತ್ತಿ ದೇಹದ ಭಾಗಕ್ಕೆ ಹಚ್ಚಬಹುದು. ಇತ್ತೀಚಿನ ದಿನಗಳಲ್ಲಿ ಮೃತ್ತಿಕಾ ಚಿಕಿತ್ಸೆಯನ್ನು ಶಾರೀರಿಕ ತೊಂದರೆಗಳನ್ನು ನಿವಾರಿಸಲು ಮಾತ್ರವಲ್ಲದೆ, ಸೌಂದರ್ಯ ವರ್ಧಕವಾಗಿಯೂ ಬಳಸಲಾಗುತ್ತಿದೆ. - ಡಾ. ಜಯವಾಣಿ ಲೀಲಾಧರ್, ಸುಳ್ಯ.
ಶ್ವೇತ ತ್ವಚೆ; ಬೆಳ್ಳಗಾಗಲು ಬವಣೆ ಏಕೆ?
ಎದುರಿಗೆ ಹೇಳದಿದ್ದರೂ ಬೆನ್ನಹಿಂದೆ ಯಾರೋ 'ಅವಳು ಕಪ್ಪು' ಅಂತೆಲ್ಲ ಆಡಿಕೊಳ್ಳುವ ಮಾತು ಕಿವಿಗೆ ಬಿದ್ದಿದೆ. ಕೇವಲ ಬಣ್ಣದಿಂದಲೇ ವ್ಯಕ್ತಿತ್ವ ಅಳೆದು ಬಿಡುತ್ತಾರಲ್ಲ ಅಂತೆಲ್ಲ ಮನಸ್ಸು ಬೇಸರಿಸಿದೆ. ಆದರೂ ಅಂಥ ಮಾತುಗಳನ್ನು ನಿರ್ಲಕ್ಷಿಸಬೇಕು ಅಂದೆನಿಸುವುದಿಲ್ಲ. ಹೇಗಾದರೂ ಮಾಡಿ ಚರ್ಮದ ಬಣ್ಣ ಬೆಳ್ಳಗಾಗಲಿ ಅಂತ ಪರದಾಡಿಬಿಡುತ್ತಾಳೆ ಅವಳು.
ಅವಳು ಅಂತಲ್ಲ , ಬೆಳ್ಳಗಿರೋದೇ ಸೌಂದರ್ಯ ಎಂದು ನಂಬೋ ಮಂದಿ ಆಗಷ್ಟೇ ಅಂಬೆಗಾಲಿಡುವ ಮಗುವನ್ನೂ ಬಿಡುವುದಿಲ್ಲ. ಬೆಳ್ಳಗಾಗಿಸಲಿಕ್ಕೆ ಹರಸಾಹಸ ಮಾಡುತ್ತಾರೆ. ಹಾಗಂತ ಕಂಡಕಂಡ ಔಷಧ ಅಥವಾ ಕ್ರೀಮ್ಗಳನ್ನು ತ್ವಚೆಗೆ ತಗುಲಿಸುವ ಅಗತ್ಯವಿಲ್ಲ. ದೇಹದ ವರ್ಣವನ್ನು ಸಂಪೂರ್ಣ ಬದಲಾಯಿಸುವುದೆಲ್ಲ ಸಾಧ್ಯವಿಲ್ಲ. ಆದರೂ ಅಂಥದ್ದೊಂದು ನಂಬಿಕೆ ಹಿಂದೆ ನೀವು ಬಿದ್ದಿದ್ದರೆ ರಾಸಾಯನಿಕಯುಕ್ತ ಕ್ರೀಮ್ಗಳನ್ನು ಬಳಸುವ ಬದಲು ಮನೆಯಲ್ಲೇ ಸಿಗಬಹುದಾದ ವಸ್ತುಗಳನ್ನು ಟ್ರೈ ಮಾಡಿ ನೋಡಿ. ಇದರಿಂದ ಚರ್ಮದ ಬಣ್ಣವೇ ಬದಲಾಗಿ ಹೋಗುವುದಿಲ್ಲ. ಆದರೆ ತಿಳಿವರ್ಣಕ್ಕೆ ಬರುತ್ತದೆ ಅನ್ನೋದು ನೆನಪಿರಲಿ.
* ಬಾದಾಮಿ ಎಣ್ಣೆ ಯಿಂದ ಮಸಾಜ್ ಮಾಡಿ. * ನಿಂಬೆ ರಸ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಸೇರಿಸಿ ಮುಖಕ್ಕೆ ಹಚ್ಚಿ.
* ಲಿಂಬೆರಸವನ್ನು ಚರ್ಮದ ಮೇಲೆ ಉಜ್ಜಿದರೆ ತ್ವಚೆ ಸ್ವಚ್ಛವಾಗುವುದರ ಜತೆ ತಿಳಿಬಣ್ಣಕ್ಕೆ ಬರುತ್ತದೆ.
* ಆಲೂಗಡ್ಡೆಯನ್ನು ಬೇಯಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. * ಟೊಮೇಟೊ ರಸವನ್ನು ಮುಖಕ್ಕೆ ಹಚ್ಚಿದರೆ ಗುಲಾಬಿ ಬಣ್ಣ ನಿಮ್ಮದಾಗುತ್ತದೆ.
* ಸೌತೆಕಾಯಿ ರಸದ ಜತೆ ಲಿಂಬೆರಸವನ್ನು ಸೇರಿಸಿ ಮುಖಕ್ಕೆ ಹಚ್ಚಿ. * ಪಪ್ಪಾಯಿ, ಹಾಲು ಹಾಗೂ ಜೇನುತುಪ್ಪದ ಮಿಶ್ರಣವನ್ನು ಮುಖಕ್ಕೆ ಹಚ್ಚಿ.
* ಫೈನಾಪಲ್ ರಸವನ್ನು ಮುಖಕ್ಕೆ ಲೇಪಿಸಿಕೊಳ್ಳಿ.
ಮಲಬದ್ಧತೆ ಮನೆ ಮದ್ದು
ದೇಹವಷ್ಟೆ ಅಲ್ಲ, ಮನಸ್ಸು ಕೂಡ ಕಿರಿಕಿರಿ ಅನುಭವಿಸುವ ಹೊತ್ತದು. ಇಂಥದ್ದೇ ಅಂಥ ಹೇಳಿಕೊಳ್ಳಲಾರದ ವಿಚಿತ್ರ ವೇದನೆ ಹುಟ್ಟಿಸುವ ಮಲಬದ್ಧತೆ ಅನ್ನೋದು ಆಗಾಗ ಹಿಂಸೆ ನೀಡ್ತಾ ಇದೆಯಾ? ಅದಕ್ಕೆ ಅಂತ ಪದೇಪದೆ ವೈದ್ಯರ ಬಳಿ ಓಡಬೇಕಿಲ್ಲ. ಸಮೀಪದ ಔಷಧ ಅಂಗಡಿಯಲ್ಲಿ ವೈದ್ಯರ ಚೀಟಿ ತೋರಿಸದೆ ಕಂಡಕಂಡ ಔಷಧ ಅಥವಾ ಮಾತ್ರೆ ಖರೀದಿಸುವ ಅಗತ್ಯವಿಲ್ಲ. ಸಮತೋಲನ ಆಹಾರ ಪದ್ಧತಿ ಇಂಥದ್ದೊಂದು ಸಮಸ್ಯೆಯಿಂದ ಪಾರು ಮಾಡಬಹುದು. ಆದ್ರೂ ಮಲಬದ್ಧತೆ ನಿಮ್ಮನ್ನು ಕಾಡುತ್ತಿದ್ದರೆ ಮನೆಮದ್ದು ಇದ್ದೇ ಇದೆ. ಟ್ರೈ ಮಾಡಿ ನೋಡಿ.
* ದಿನದಲ್ಲಿ ಕೆಲವು ಬಾರಿ ಒಂದು ಚಮಚದಂತೆ ಜೇನುತುಪ್ಪ ಸೇವಿಸುತ್ತಿರಿ * ಆಗಾಗ ಬಾಳೆಹಣ್ಣು ತಿನ್ನಿ. * ಸಾಧ್ಯವಾದಷ್ಟು ನೀರು ಕುಡಿಯಿರಿ.
* ನಾರಿನಾಂಶವಿರುವ ತರಕಾರಿ ಸೇವಿಸಿ. * ಮಾವಿನ ಹಣ್ಣು ಕೂಡ ಮಲಬದ್ಧತೆಗೆ ಪರಿಣಾಮಕಾರಿ.
* ಅರ್ಧ ಕಪ್ ಕ್ಯಾಬೀಜ್ ಜ್ಯೂಸ್ ಅನ್ನು ದಿನದಲ್ಲಿ ಎರಡು ಬಾರಿ ಸೇವಿಸಿ. * ಹಾಲಿನ ಜತೆ ಖರ್ಚಿರ ಸೇರಿಸಿಕೊಂಡು ಕುಡಿಯಿರಿ.
ಲಿವ್ಇನ್ ರಿಲೇಶನ್: ಅಗತ್ಯವೆ? ಅನಿವಾರ್ಯವೆ? ಶ್ರೀದೇವಿ ಕಳಸದ
ಇಪ್ಪತ್ತೆಂಟರ ಸಾಫ್ಟ್ವೇರ್ ಎಂಜಿನಿಯರ್ ಮುಂದಿರುವುದು ಕಂಪ್ಯೂಟರ್ ಟೇಬಲ್ ಅಲ್ಲ. ಕೌನ್ಸೆಲಿಂಗ್ ಟೇಬಲ್. ಬಿಗಿದ ಗಂಟಲು ಸಡಿಲಗೊಂಡು, ಕಣ್ಣೀರ ಸುರಿವು ನಿಂತಾಗ ನಿಧಾನ ಮಾತು ಹೊರಡಿತು. 'ಆಕೆ ಬಡಕುಟುಂಬದಿಂದ ಬಂದವಳು. ಕಷ್ಟ-ನಷ್ಟ ಅನುಭವಿಸಿದವಳಿಗೆ ಸತ್ಯ ಮತ್ತು ಪ್ರೀತಿಯ ಅರಿವಿರುತ್ತದೆ ಎಂದುಕೊಂಡೆ. ಆದರೆ ಹಾಗಾಗಲಿಲ್ಲ'. ಅವನ ಮುಟ್ಟಿಗೆಗಳು ಬಿಗಿಗೊಂಡವು... ಆಫೀಸಿಗೆ ಹೋಗೋವಾಗ ಸಣ್ಣ ರಸ್ತೆ ಅಪಘಾತವಾಯಿತು. ವಾರಗಟ್ಟಲೆ ಆಸ್ಪತ್ರೆ ವಾಸ. ದೇಹದ ಗಾಯಕ್ಕೆ, ಮನಸಿಗೆ ನಿಲುಕಿದವಳು ಅಸ್ಸಾಂ ಮೂಲದ ನರ್ಸ್ ಬೊಂಧಿತಾ. ಎರಡೇ ತಿಂಗಳಲ್ಲಿ ವಯಸ್ಸಿನ ಕಾವಿಗೂ ತಂಪಾಗಿಬಿಟ್ಟಳು. ಲಿವ್ಇನ್ ರಿಲೇಶನ್ಗೆ ಮನಸ್ಸಿನೊಳಗೇ ಸಹಿ ಹಾಕಿಕೊಂಡರು. ಆರು ತಿಂಗಳುತನಕ ಎಲ್ಲವೂ ವಸಂತಪರ್ವವೇ. ಇವನಿಗೆ ಮನೆಯಲ್ಲಿ ಮದುವೆಗಾಗಿ ಒತ್ತಾಯಿಸತೊಡಗಿದಾಗ ಅವಳಲ್ಲಿ ಪ್ರಸ್ತಾಪಿಸಿದ. ಆದರೆ ಅಷ್ಟರೊಳಗೇ ಆಕೆ ತನ್ನೊಳಗಿಲ್ಲ ಎಂಬ ಕಹಿವಾಸನೆ ಇವನಿಗೆ ಬಡಿಯತೊಡಗಿತು. ಅವಳ ಜಾಡನ್ನು ಹಿಂಬಾಲಿಸಿದರೆ ಆಕೆ ಬೇರೊಬ್ಬನ ಸ್ನೇಹ ಮತ್ತು ಸಂಬಂಧಕ್ಕೆ ಬಿದ್ದಿರುವುದು ತಿಳಿಯಿತು. ಆದರೂ ಅವ ಅವಳಲ್ಲಿ ಮದುವೆ ಪ್ರಸ್ತಾಪ ಮಾಡಿದ. ಆಗ ಆಕೆ ತನ್ನ ತಂದೆ-ತಾಯಿಗಳ ಒಪ್ಪಿಗೆ ಬೇಕು ಎಂದಳು. ಈ ಮಧ್ಯೆ ಸ್ವಲ್ಪ ದಿನಗಳ ಮಟ್ಟಿಗೆ ರಜೆ ಹಾಕಿ ಊರಿಗೂ ಹೊರಟುಹೋದಳು. ಅವನ ಕರೆಗಳನ್ನು ಸ್ವೀಕರಿಸದ ಆಕೆಯನ್ನು ಭೇಟಿ ಮಾಡಲು ಅವ ಅವಳ ಊರಿಗೇ ಹೊರಟ... ಅಸ್ಸಾಂನ ದಿಬ್ರುಗಢ್ ಸಮೀಪದ ಹಳ್ಳಿಗೆ ಹೋದ ಅವನನ್ನು ಆ ಡಿಸೆಂಬರ್ ಚಳಿಯೂ ನಡುಗಿಸಿರಲಿಲ್ಲ. ಮದುವೆಯನ್ನೋ ದೃಢನಿರ್ಧಾರಕ್ಕೆ ಅವನ ಮನಸ್ಸು , ಮೆದುಳು ದ್ಧಗೊಂಡಂತಿದ್ದವು... ಹೇಗೋ ಅವಳ ಮನೆ ಪತ್ತೆಮಾಡಿದ. ಅವಳೊಂದಿಗೆ ಮತ್ತು ಅವಳ ಮನೆಯವರೊಂದಿಗೆ ಮಾತನಾಡಿ ಮದುವೆ ನಿರ್ಧಾರಕ್ಕೆ ಬರಬೇಕೆಂದುಕೊಂಡವನಿಗೆ ಬುಟ್ಟಿ ಮಣ್ಣು ಒಮ್ಮೆಲೆ ಕಣ್ಣಿಗೆ ತೂರಿದಂತಾಗಿತ್ತು. ಮದುವೆಯಾಗಲು ಬಂದವನನ್ನು ಹೊಡೆದು, ಅವನ ವಿರುದ್ಧವೇ ಕೇಸ್ ದಾಖಲಿಸಲಾಯಿತು. ಆದರೆ ಹಣವುಳ್ಳ ಇವ ಮುಚ್ಚಳಿಕೆಯ ಜೊತೆ ಪೊಲೀಸರಿಗೆ ಕೈ ಬೆಚ್ಚಗೆ ಮಾಡಿ ಬೆಂಗಳೂರಿಗೆ ಬಂದು ಬದುಕಿಕೊಂಡ. ಆದರೆ ಅವಳ ಹಂಬಲ ಇವನನ್ನು ಬಿಟ್ಟಿಲ್ಲ...
ಇವರೇನು ಹೇಳುತ್ತಾರೆ? 'ಈ ಯುವಕ ಒಂದೇ ಸಲ ನನ್ನ ಬಳಿ ಬಂದಿದ್ದು. ಅವನು ಮಾತಿನೊಂದಿಗೆ ಅವನ ದೇಹಭಾಷೆಯನ್ನೂ ಗಮನಿಸುತ್ತಿದ್ದೆ. ಅವನದು ಪ್ರಾಮಾಣಿಕ ಪ್ರೀತಿ ಎನ್ನಿಸಿತು. ಬಡತನದ ಹಿನ್ನೆಲೆಯಿಂದ ಬಂದ ಅವನ ಸಂಗಾತಿಗೆ ಮದುವೆ ಬೇಡ ಆದರೆ, ಭೌತಿಕ ಸುಖ ಬೇಕಿತ್ತು. ಸುಮಾರು ಒಂದೂವರೆ ವರ್ಷ ಒಟ್ಟಿಗೆ ವಾಸಿಸಿದ ಅವರಲ್ಲಿ ಹೊಂದಾಣಿಕೆ, ವಿಶ್ವಾಸ ಚಿಗುರಲೇ ಇಲ್ಲ. ವರ್ಷದೊಳಗೆ ಮೈ ಕಾವು ಕರಗಿತು. ಆಕೆ ಮತ್ತೊಬ್ಬನ ಸೆಳೆತ, ಸಂಬಂಧ ಹಣಕ್ಕೆ ಬಿದ್ದಳು. ಎಲ್ಲ ವಿಷಯಗಳಲ್ಲೂ ಇವನಿಗಿಂತ ಚೆನ್ನಾಗಿರುವ ಜೊತೆಗಾರ ಸಿಕ್ಕಿದ್ದಾನೆ ಎಂದು ಅವಳಿಗೆ ಅನ್ನಿಸತೊಡಗಿತು... 'ಯಾವುದೇ ಸಂಬಂಧದ ಮಧ್ಯೆ ವಿಶ್ವಾಸ ಎನ್ನುವುದು ಮೊಳಕೆಯೊಡೆಯದಿದ್ದರೆ ಅದು ಅಲ್ಪಾಯುಷಿ. ಈಗ ಇಬರಿಬ್ಬರ ಪ್ರಕರಣದಲ್ಲೂ ಹೀಗೇ ಆಗಿರುವುದು. ನಮ್ಮ ದೇಶದಲ್ಲಿ ಈ ಲಿವ್ಇನ್ ರಿಲೇಶನ್ ಇನ್ನೂ ಶೈಶವಾವಸ್ಥೆಯಲ್ಲೇ ಇದೆ. ಕೋರ್ಟ್ ಒಪ್ಪಿದರೂ ಸಮಾಜ ಒಪ್ಪುತ್ತಿಲ್ಲ. ಸಮಾಜ ಒಪ್ಪಲಿ ಬಿಡಲಿ ಆದರೆ ಲಿವ್ಇನ್ ರಿಲೇಷನ್ನಲ್ಲಿದ್ದವರಿಗೆ ಸ್ಥಿರತೆ, ಹೊಂದಾಣಿಕೆ, ವಿಶ್ವಾಸದ ಕೊರತೆಯಂತೂ ಇದ್ದೇ ಇದೆ ಎನ್ನುವುದಕ್ಕೆ ಇಂಥ ತುಂಡರಿಸಿದ ನೂರಾರು ಸಂಬಂಧಗಳು ಸಾಕ್ಷಿ' -ಆಪ್ತಸಲಹೆಗಾರ, ದೇವೇಂದ್ರ ಎಕ್ಕುಂಡಿ. ಯಾವುದೇ ಒಂದು ಪದ್ಧತಿ ಸಮಾಜದ ಮುಖ್ಯವಾಹಿನಿಯೊಳಗೆ ಬೆರೆಯುವ ಮೊದಲು ಅದು ಗುಪ್ತಗಾಮಿನಿಯಂತೆ ಹರಿಯುತ್ತಿರುತ್ತದೆ. ಯಾವಾಗ ಅದು ಸಾಮಾಜಿಕವಾಗಿ ನೇತ್ಯಾತ್ಮಕ ದೃಷ್ಟಿಯಿಂದ ಬಿಂಬಿತವಾಗುತ್ತದೋ ಆಗ ಚರ್ಚೆಗೆ ಗ್ರಾಸವಾಗುತ್ತದೆ. ಈ ಹೊತ್ತಿಗೆ ಮೊನ್ನೆಮೊನ್ನೆ ನಡೆದ ಪ್ರಕರಣ ನೆನಪಾಗುತ್ತಿದೆ. ದೆಹಲಿಯಲ್ಲಿ ವಾಸಿಸುತ್ತಿದ್ದ ಮಿಜೋರಾಂನ ಮಹಿಳೆ ನೈಜಿರಿಯಾ ಮೂಲದ ಲಿವಿಂಗ್ ಪಾರ್ಟನರ್ನನ್ನು ಕೊಲೆ ಮಾಡಿದ್ದಾಳೆ. ಕೊಲೆ ನಡೆದಿರುವುದು ಹಣದ ವಿಷಯಕ್ಕಾಗಿ. ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಸುರೀಂದರ್ ಎಸ್. ರಾಠಿ ಈ ಸಂದರ್ಭದಲ್ಲಿ ನೀಡಿದ ಅಭಿಪ್ರಾಯ ಹೀಗಿದೆ; ಇದು ನಗರಪ್ರದೇಶದವರು ಕಂಡುಕೊಂಡ ಅನೈತಿಕ ಚಾಳಿ'.
ಅಲ್ಲಿ ಹರಿದು ಇಲ್ಲಿ ಸೇರಿದ್ದು ... ಪಾಶ್ಚಾತ್ಯದೇಶದ ಸಾಮ್ರಾಜ್ಯಶಾಹಿಗಳು ವಸಾಹತು ಸ್ಥಾಪನೆಗಾಗಿ ದೊಡ್ಡ ಪ್ರಮಾಣದಲ್ಲೇ ದಂಡೆತ್ತಿ ಹೋಗುತ್ತಿದ್ದ ಕಾಲ. ಯುದ್ಧಗಳಲ್ಲಿ ಭಾಗವಹಿಸುವವರೆಲ್ಲರೂ ಹದಿನೆಂಟರಿಂದ ಐವತ್ತರೊಳಗಿನವರು. ತಿಂಗಳುಗಳ ಗಟ್ಟಲೆ ವಲಸೆ ಹೋಗುತ್ತಿದ್ದ ಸಂದರ್ಭ ಬಂದಾಗ ತಮ್ಮ ದೈನಂದಿನ ಅಗತ್ಯ ಪೂರೈಕೆಗೆ ಕಂಡುಕೊಂಡ ಮಾರ್ಗವೇ ಮುಕ್ತ ಲೈಂಗಿಕ ಪದ್ಧತಿ ಮತ್ತು ಅದರ ಮುಂದುವರಿದ ಭಾಗ ಲಿವಿಂಗ್ ರಿಲೇಶನ್.
ಜವಾಬ್ದಾರಿ, ಚೌಕಟ್ಟಿಲ್ಲದೇ ಸಾಂದರ್ಭಿಕವಾಗಿ ಅಗತ್ಯ ಪೂರೈಸಿಕೊಂಡು ಹೋಗುವ ಸರಳ ಮಾರ್ಗದಂತೆ ಇದು ಆಗ ಕಂಡಿದ್ದು ನಿಜ. ಆದರೆ ಮುಂದುವರಿದ ಅದು ಸಾಮಾಜಿಕ ಅಂಗವಾಗಿ, ಹಕ್ಕು-ಬೇಡಿಕೆಗಳನ್ನು ಸಮರ್ಥಿಸಿಕೊಳ್ಳುವಷ್ಟು ವಿಸ್ತೃತತೆಯನ್ನೂ ಪಡೆದುಕೊಂಡಿದೆ. ಮುಕ್ತ ಶಿಕ್ಷಣ, ಮುಕ್ತ ಆರ್ಥಿಕ ವ್ಯವಸ್ಥೆ, ಔದ್ಯೋಗಿಕ ಕ್ರಾಂತಿಗಳ ಕೊಡುಗೆ ಎಂದೂ ಹೇಳಬಹುದು. ಅಮೆರಿಕದಂಥ ರಾಷ್ಟ್ರಗಳಲ್ಲಿ ಕೆಲವರು ಜೀವನಾಂಶಕ್ಕಾಗಿಯೇ ಮದುವೆಯನ್ನು ವಿಚ್ಛೇದನದ ಕೊಕ್ಕೆಗೆ ಹಾಕುವುದನ್ನು ಕಸುಬಾಗಿಸಿಕೊಂಡಾಗ ಲಿವಿನ್ ರಿಲೇಶನ್ ಸುಲಭೋಪಾಯವೆನಿಸಿತು.
ಸಾಮಾಜಿಕ ಪದ್ಧತಿಗಳ ಬಗ್ಗೆ ಅಗೌರವ ತೋರುವವರು, ಮುಕ್ತ ಆರ್ಥಿಕತೆ ಬೆಂಬಲಿಸುವವರು, ಅನಿವಾರ್ಯತೆಗೆ ಒತ್ತು ಕೊಡದ ಕೆಲವರಿಂದ ಈ ಪದ್ಧತಿ ನಮ್ಮ ಮಣ್ಣಿನೊಳಗು ಇಳಿಯತೊಡಗಿತು. ಆರು ತಿಂಗಳು ಇಲ್ಲಿದ್ದು, ಇನ್ನಾರು ತಿಂಗಳು ವಿದೇಶದಲ್ಲಿರುವ ಕೆಲ ಮಂದಿಗೆ ಕಾನೂನಿನ ಚೌಕಟ್ಟಿಲ್ಲದೇ ಬದುಕಲು ಸುಖಮಾರ್ಗವಾಯಿತು. ಈಗ ಇದು ಉನ್ನತ ಶಿಕ್ಷಣಕ್ಕೆಂದು ಪರರಾಜ್ಯ-ದೇಶಗಳಿಂದ ಬರುವ ವಿದ್ಯಾರ್ಥಿಗಳ ತಾತ್ಕಾಲಿಕ ಮೋಜು-ಮೇಜವಾನಿಗೂ ಸರಹದ್ದಿಲ್ಲದ ಮೈದಾನವೂ ಆಗಿದೆ. ಲಿವ್ಇನ್ ರಿಲೇಶನ್ಗೆ ಕೋರ್ಟ್ ಅಸ್ತು ಎನ್ನುವತನಕ ಇದು ಅಪರಾಧವೆಂಬಂತೆ ಪರಿಗಣಿತವಾಗಿತ್ತು. ಸಂಪ್ರದಾಯವಾದಿಗಳ ಮತ್ತು ವಿಚಾರವಾದಿಗಳ ನಡುವಿನ ಈ ಚರ್ಚೆ ಬೂದಿಯೊಳಗಿನ ಕೆಂಡದಂತೆ; ಗಾಳಿ ಬೀಸಿದಾಗ ಕಿಡಿ, ಇಲ್ಲದಿದ್ದರೆ ಇಲ್ಲ.
ಭಾವ-ಬುದ್ಧಿ-ಮನಕೊಪ್ಪುವ ಸಖ್ಯ... ಲಿವ್ಇನ್ ರಿಲೇಶನ್ ಎನ್ನುವುದು ಅರ್ಥೇಚ, ಕಾಮೇಚ... ಎನ್ನುವುದಕ್ಕಷ್ಟೇ ಸೀಮಿತವಾಗಿದೆ ಎನ್ನುವುದು ಸಾಕ್ಷ್ಯಗಳ ಮೂಲಕ ಸ್ಪಷ್ಟವಾಗುತ್ತಿದ್ದರೂ ಎಷ್ಟೋ ಜೋಡಿಗಳು ಇದಕ್ಕೆ ಅಪವಾದವೆಂಬಂತಿದ್ದಾರೆ. ಸಿನಿಮಾ, ಸಂಗೀತ, ಕಲೆ ಹೀಗೆ ಮುಂತಾದ ರಂಗಗಳಲ್ಲಿರುವವರು ಈ ಲಿವ್ಇನ್ ರಿಲೇಶನ್ಗೆ ನೀಡುವ 'ವ್ಯಾಖ್ಯಾನ' ಅವರವರ ವೈಯಕ್ತಿಕ; ಇದು ಭಾವ-ಬುದ್ಧಿಗೆ ಸಂಬಂಧಿಸಿದ ಮತ್ತು ಮನಕ್ಕೊಪ್ಪುವ ಸಖ್ಯ. ಬೆಂಗಳೂರಿನ ಅರ್ಚನಾ ಕಥಕ್ ಕಲಾವಿದೆ.
'ನನಗೀಗ ಮೂವತ್ಮೂರು. ಇಪ್ಪತ್ತು ವರ್ಷದವಳಿದ್ದಾಗಲೇ ನನಗನ್ನಿಸತೊಡಗಿತು... ಮದುವೆ ಶಾಸ್ತ್ರದ ಮೂಲಕ ನಾನು ಯಾರ ನಿಯಂತ್ರಣದೊಳಗೂ ಇರಬಾರದು. ಆಡಂಬರ, ಪ್ರತಿಷ್ಠೆಗೆ ಪಲ್ಲಂಗದಂತಾಗಿರುವ ಈ ಮದುವೆ ಹಣ ಅಳೆಯುವ ಯಂತ್ರದಂತೆ. ಸಂಬಂಧದಲ್ಲಿ ಮನಸುಗಳು ಒಂದಾಗುವುದು ಮುಖ್ಯ. ಆ ಮೂಲಕ ಎರಡೂ ಕುಟುಂಬಗಳು...
'ಮೂರು ವರ್ಷದ ಕೆಳಗೆ ಜೊತೆಗಾರ ಸಿಕ್ಕಿದ್ದು, ಗ್ರಾಫಿಕ್ ಕಲಾವಿದ. ಉತ್ತರದ ಕಡೆಯವನು. ಕಷ್ಟ-ಸುಖಗಳುಂಡವನು. ಒಟ್ಟಾಗಿ ಬಾಳ್ವೆ ನಡೆಸಲು ಬೇಕಾಗಿರುವ ವೌಲ್ಯಗಳು ಏನು ಎನ್ನುವುದರ ಅರಿವು ಇಬ್ಬರಲ್ಲೂ ಇದೆ.ಜೊತೆಯಾಗಿ ಬಾಳಲು ಬೇಕಿರುವುದು ದೊಡ್ಡ ಬಂಗಲೆ, ಕಾರು ಅಲ್ಲ. ಆಡಂಬರದ ಜೀವನಶೈಲಿಯಲ್ಲ. ಪರಸ್ಪರ ಗೌರವ. ನಮ್ಮನಮ್ಮ ಆಶಯಕ್ಕೆ ತಕ್ಕಂತೆ ಸಣ್ಣ-ಪುಟ್ಟ ತ್ಯಾಗಗಳು, ಜವಾಬ್ದಾರಿ ಹಂಚಿಕೊಳ್ಳುವಿಕೆ... ನಮ್ಮಲ್ಲಿದೆ.
'ಮಕ್ಕಳಲ್ಲಿ ಒಂದು ವಯಸ್ಸಿನ ನಂತರ ಅವರವರವ ಸ್ವಾತಂತ್ರ, ಆಯ್ಕೆ ಅವರದೇ. ಒಂದು ಹಂತದವರೆಗೆ ಮೂಲ ಸಂಸ್ಕಾರ ಧಾರೆಯೆರೆದು ಸುಮ್ಮನಾಗಿಬಿಡಬೇಕು. ನಂತರ ಪ್ರಕೃತಿಯೇ ಅವರನ್ನು ಸಲಹುತ್ತದೆ. ನಮ್ಮಿಬ್ಬರ ವಿಷಯವಾಗಿ ಸಿಂಪಲ್ ಆಗಿಯಾದರೂ ಮದುವೆ ಶಾಸ್ತ್ರ ಮುಗಿಸೋಣ ಎಂದು ಅಮ್ಮ ಮೊದಮೊದಲು ಹೇಳುತ್ತಿದ್ದರು. ಆದರೆ ಈಗವರು ನನ್ನ ಜೊತೆಗಾರನನ್ನು ಅಳಿಯನಂತೆ ಸ್ವೀಕರಿಸಿದ್ದಾರೆ.'
ಅಗತ್ಯ ಪೂರೈಕೆ ಅಗತ್ಯಗಳ ಪೂರೈಕೆ ಮನುಷ್ಯರಲ್ಲೂ ಇರುತ್ತದೆ, ಪ್ರಾಣಿಗಳಲ್ಲೂ ಇರುತ್ತದೆ. ಮನುಷ್ಯ ವ್ಯಕ್ತಿವಿಕಾಸ ಪ್ರಕ್ರಿಯೆಗೆ ಒಳಪಡುತ್ತಾನೆ. ಪ್ರಾಣಿಗಳಲ್ಲಿ ಅದಿಲ್ಲ. ಆದರೂ ಪ್ರಾಣಿಗಳ ಲೈಂಗಿಕ ತೃಷೆ ನಿರ್ದಿಷ್ಟ ಋತುಮಾನಕ್ಕೆ ಒಳಪಡುತ್ತದೆ. ಆದ್ದರಿಂದಲೇ 'ಅಗತ್ಯ' ಎನ್ನುವುದು ಅವುಗಳಲ್ಲೂ ನಿಯಂತ್ರಣಕ್ಕೊಳಪಟ್ಟಿದೆ. ಆದರೆ ಮನುಷ್ಯನ ವಿಕಾಸಕ್ಕೆ ಅವನ ಸೃಜನಶೀಲತೆಯೇ ಸಾಕ್ಷಿ. ಅದರ ಅನುಭವಗಳೂ ಹೊಸತು. ಹಾಗೆಯೇ ಈ ಲಿವ್ಇನ್ ರಿಲೇಶನ್ನ ಕೇವಲ ಅಗತ್ಯ ಪೂರೈಸುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಮನುಷ್ಯನ ಬದುಕಿಗೆ ಅರ್ಥ ಕೊಡುವಲ್ಲಿ ಸೋಲುತ್ತದೆ. ಮಾನವೀಯ ಮೂಲೋದ್ದೇಶಗಳಿಗೆ ಧಕ್ಕೆ ತರುವ ಸಾಧ್ಯತೆಗಳೇ ಹೆಚ್ಚು.
ನಾವು ಕಟ್ಟಿಕೊಂಡ ನಿಯಮದ ವಿರುದ್ಧವಾಗಿ ಏನೇ ನಡೆದರೂ ಧಕ್ಕೆ ಕಟ್ಟಿಟ್ಟದ್ದೇ. ಉದಾಹರಣೆಗೆ ಲಿವ್ ಇನ್ ಸಂಬಂಧದಲ್ಲಿರುವ ಮತ್ತು ಬಾಂಧವ್ಯವೇ ಗಟ್ಟಿಗೊಳ್ಳದ ಜೋಡಿಗೆ ಅಕಸ್ಮಾತ್ ಮಗು ಹುಟ್ಟಿದರೆ ಏನು ಮಾಡಬೇಕು? ಆಗ ಅವರಿಗೆದುರಾಗುವುದು ಸಂಕಷ್ಟವೇ ಅಲ್ಲವೆ? ಅಗತ್ಯಗಳ ಪೂರೈಕೆಗೆ ಅನ್ಯಮಾರ್ಗವಿಲ್ಲದೆ ಅನಾದಿ ಕಾಲದಲ್ಲಿ ಕಂಡುಕೊಂಡ ಈ ಪದ್ಧತಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುವುದು ಪ್ರಸ್ತುತವೆ? -ಡಾ. ಎಂ.ಎಸ್. ತಿಮ್ಮಪ್ಪ, ಮನೋವಿಜ್ಞಾನಿ.
ಜೀವನ ಸಂಜೀವನ ಎರಡು ಜೀವಗಳು ಒಂದಾಗಿ ಬದುಕುವುದು ಕಲೆಯೂ; ಧ್ಯಾನವೂ. ಒಟ್ಟಾಗಿ ಬದುಕಲು ಬೇಕಿರುವುದು ಬದ್ಧತೆ. ಆ ಬದ್ಧತೆ ಕೇವಲ 'ಮದುವೆ' ಎನ್ನುವ ಶಾಸ್ತ್ರದಿಂದ ಬರುವಂಥದ್ದಲ್ಲ. ಪರಸ್ಪರ ತಿಳಿವಳಿಕೆ, ಹೊಂದಾಣಿಕೆ, ಬುದ್ಧಿ-ಭಾವದ ಮಟ್ಟಗಳನ್ನು ಅವಲಂಬಿಸಿರುತ್ತದೆ. ಯಾವುದೇ ಸಂಬಂಧ ಸಣ್ಣ-ಪುಟ್ಟ ತ್ಯಾಗಗಳೊಂದಿಗೆ ವ್ಯಕ್ತಿ ಸ್ವಾತಂತ್ರ್ಯದ ತೆಳುಗೆರೆ ಉಳಿಸಿಕೊಂಡು ಸಾಗಬೇಕು. ಲೈಂಗಿಕತೆಯೇ ಅಳತೆಗೋಲಲ್ಲ. ಬೇರೆ ಬೇರೆ ಸಂಸ್ಕಾರಗಳಿಂದ ಪೋಷಿಸಲ್ಪಟ್ಟ ಮನಸ್ಸುಗಳು ಒಟ್ಟಾಗಿ ವಾಸಿಸಲು, ಅರ್ಥ ಮಾಡಿಕೊಳ್ಳಲು ಸಮಯ ಬೇಕು. ಇದ್ದಕ್ಕಿದ್ದಂತೆ ನಿರ್ಧಾರ ತೆಗೆದುಕೊಂಡು ಹತಾಶರಾಗುವುದು, ಬೇರೊಬ್ಬ ಸಂಗಾತಿ ಅರಸಿ ಹೋಗುವುದು ಸಲ್ಲದು. ಆಯ್ಕೆ ಸಂದರ್ಭದಲ್ಲೇ ಮನಸ್ಸು ಜಾಗೃತವಾಗಿದ್ದರೆ ಎಲ್ಲವೂ ಸುರಳಿತ. ಇದು ಪ್ರೀತಿಯೋ, ಆಕರ್ಷಣೆಯೋ, ಮೋಹವೋ ಎಂಬುದನ್ನು ನಿರ್ಧರಿಸುವಷ್ಟು ಸಾಮರ್ಥ್ಯ ನಿಮ್ಮದಾಗಿದ್ದರೆ ಜೀವನ ಸಂಜೀವನ.
ಜೀವನ ಸಂಜೀವನ ಶ್ರೀದೇವಿ ಅಂಬೆಕಲ್ಲು
ವಿವಾಹ ಅನ್ನೋದು ಗಂಡು-ಹೆಣ್ಣು ಇಬ್ಬರ ಜೀವನಕ್ಕೆ ಒಂದು ಹೊಸ ತಿರುವು ತಂದುಕೊಡುತ್ತದೆ. ಗಂಡು ಹೆಣ್ಣುಗಳಿಬ್ಬರೂ ಜೀವನದ ಪ್ರತಿ ಹೆಜ್ಜೆಗೂ ಜತೆಯಾಗುತ್ತೇವೆ ಎಂದು ಅಗ್ನಿಸಾಕ್ಷಿಯಾಗಿ ಮದುವೆಯಾಗಿರುತ್ತಾರೆ. ಆದರೂ ಕೆಲವೊಮ್ಮೆ ಮದುವೆಯಾಗಿ ಒಂದು ವಾರದಲ್ಲೇ ಇಬ್ಬರ ನಡುವೆ ವಿರಸ ಮೂಡುತ್ತದೆ. ಕಾರಣ ತುಂಬಾ ಸಿಂಪಲ್ ಆಗಿರುತ್ತದೆ. ಇಬ್ಬರ ನಡುವೆ ಸಣ್ಣ ಭಿನ್ನಾಭಿಪ್ರಾಯ ಡಿವೋರ್ಸ್ವರೆಗೆ ಬಂದು ನಿಂತಿರುತ್ತದೆ. ಹೊಸದಾಗಿ ಮದುವೆಯಾದ ಇಬ್ಬರೂ ಹೊರಗಡೆ ಹೋಗಿ ಜಾಬ್ ಮಾಡುವವರು. ಇಬ್ಬರಿಗೂ ಕೆಲಸದ ಒತ್ತಡ. ಇಬ್ಬರಿಗೂ ಜತೆಗೆ ಕಳೆಯುವುದಕ್ಕೆ ಸಮಯ ಸಾಲುತ್ತಿಲ್ಲ. ಮದುವೆಯಾಗೋದಕ್ಕೆ ಮೊದಲು ನನ್ನ ಗಂಡ ಅಷ್ಟೊಂದು ಮಾತಾಡ್ತಾ ಇದ್ದ, ತಲೆನೋವು ಅಂದ್ರೆ ಸಾಕು ಹಾಗೆ ಮಾಡು ಹೀಗೆ ಮಾಡು ಅಂತಿದ್ದವನು ಈಗೀಗ ಬದಲಾಗಿದ್ದಾನೆ. ಒಂದಷ್ಟು ಹೊತ್ತು ನನ್ನ ಜತೆ ಕಳೆಯುವುದಕ್ಕು ಸಮಯ ಇಲ್ಲ ಅವನಿಗೆ . ಮನೆಗೆ ಬಂದರೂ ಆಫೀಸ್ ಕೆಲಸದಲ್ಲೇ ಬ್ಯುಸಿಯಾಗಿರುತ್ತಾನೆ. ಅದರಿಂದ ಅವಳು ಬೇಸರಗೊಳ್ಳುತ್ತಾಳೆ. ಗಂಡನ ಬಗ್ಗೆ ಅನುಮಾನ ಶುರುವಾಗತ್ತದೆ. ಅಷ್ಟೇ ಅಲ್ಲ. ಸಾಮಾನ್ಯವಾಗಿ ಗಂಡ ಹೆಂಡತಿ ಮಧ್ಯೆ ಹಣಕಾಸಿನ ವಿಷಯದಲ್ಲಿ ಆಗಾಗ ಜಗಳ ಜಾಸ್ತಿ. ಇಂದು ಸಣ್ಣ ಪುಟ್ಟ ವಿಷಯಗಳಿಗೆ ದಾಂಪತ್ಯ ಬಹು ಬೇಗ ಹಳಸಿ ಹೋಗಿ ಡಿವೋರ್ಸ್ನಲ್ಲಿ ಕೊನೆಗೊಳ್ಳುತ್ತಿದೆ.
ಬದುಕಿನ ಎಲ್ಲ ಜಂಜಾಟಗಳಿಂದ ಮುಕ್ತಿ ಪಡೆದು ನೆಮ್ಮದಿಯ ದಾಂಪತ್ಯ ನಮ್ಮದಾಗಿಸಿಕೊಳ್ಳಬೇಕಾದರೆ ಹೊಂದಾಣಿಕೆ ಮುಖ್ಯ. ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಆರ್ಥಿಕ ಸಮಸ್ಯೆಗಳಿಲ್ಲದೆ ಸಾಮರಸ್ಯದ ಬದುಕು ನಿಮ್ಮದಾಗಿಸಿಕೊಳ್ಳಬೇಕೆಂದಿದ್ದರೆ ಪ್ರಿ ಪ್ಲಾನ್ ಮಾಡಿಕೊಳ್ಳುವುದು ಮುಖ್ಯ. ಇಷ್ಟು ಕಾಲ ಒಟ್ಟಿಗಿದ್ದರೇನು ಅರಿತೆವೇನು ಬೆರೆತೆವೇನು? ಕಡಲ ದೋಣಿ ನೀರ ಮೇಲೆ ಎಷ್ಟು ದೂರ ಸಾಗಿದರೇನು ಬಂತು, ಹಡಗಿಗೆ ಕಡಲಿನಾಳ ತಿಳಿಯುವುದೇನು? ಎಂಬುದಾಗಿ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ಕವನವೊಂದರಲ್ಲಿ ಹೇಳುತ್ತಾರೆ. ಹೀಗಾಗಬಾರದು ಗಂಡ ಹೆಂಡತಿಯ ದಾಂಪತ್ಯ. ಇಬ್ಬರ ನಡುವೆ ಎಷ್ಟೇ ಅಂತರ ಬೇಕಾದರೂ ಇರಲಿ. ಆದರೆ ಮನಸ್ಸಿನಾಳ ತಿಳಿದಿರಲಿ. ಸಂಸಾರ ಅಂದರೆ ಗಂಡ ಹೆಂಡತಿ ನಡುವಿನ ಸಂಬಂಧ, ಹಾಗಾಗಿ ಅವರ ನಡುವೆ ಇರಲೇಬೇಕು some ಸಾgU some ಬಂಧ.
*ಇಬ್ಬರ ಸಾಂಗತ್ಯ ಕೇವಲ ಲೈಂಗಿಕ ಸುಖಕ್ಕೆ ಮಾತ್ರ ಸೀಮಿತ ಆಗದಿರಲಿ, ಪ್ರೀತಿಯ ಹಂಚಿಕೆ, ಭಾವನೆಗಳನ್ನು ಗಿಫ್ಟ್ ಕೊಡುವುದರ ಮೂಲಕ, ಒಳ್ಳೆಯ ಕಮೆಂಟ್ಸ್ ಹೇಳಿಕೊಳ್ಳುವುದರ ಮೂಲಕ ಹಂಚಿಕೊಳ್ಳಿ.
* ಎಷ್ಟೇ ಬ್ಯುಸಿಯಾಗಿದ್ದರೂ ಒದಷ್ಟು ಹೊತ್ತು ಒಟ್ಟಿಗೇ ಹೊರಗಡೆ ಒಂದು ವಾಕ್ ಹೋಗಿ ಬನ್ನಿ.*ಆಫೀಸ್, ಕುಟುಂಬ ಹಾಗೂ ವೈಯುಕ್ತಿಕ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ.*ಮನೆಗೆ ಬಂದ ಕೂಡಲೇ ಗಂಡನಿಗೆ ಒತ್ತಡ ತರಬೇಡಿ. ಆತ ಒತ್ತಡ ನಿವಾರಣೆಗೆ ಯಾವುದಾದರೂ ಕೆಟ್ಟ ಚಟಕ್ಕೆ ಬಲಿಯಾಗುತ್ತಾನೆ.* ಡಿಮ್ಯಾಂಡ್ ಮಾಡಬೇಡಿ. ಸಾಲ ಮಾಡುವುದಕ್ಕೆ ಪ್ರೇರೇಪಿಸಲೇಬೇಡಿ. ಇಲ್ಲದುದುರ ಬಗ್ಗೆ ಮತಾಡುವುದಕ್ಕಿಂತ ಇರುವುದರಲ್ಲಿ ಹೆಚ್ಚು ಸುಖ ಪಡಿ.* ಗಂಡ ಮಾತ್ರ ದುಡಿಯುವವನಾಗಿದ್ದರೆ, ಹೆಂಡತಿಗೆ ಖರ್ಚಿಗೆ ಕೊಟ್ಟ ಹಣವನ್ನು ಕೂಡಿಟ್ಟುಕೊಳ್ಳಿ. ಹಣ ಕೂಡಿಡುವ ವಿಷಯವನ್ನು ನೆರೆಮನೆಯವರೊಂದಿಗೆ ಹಂಚಿಕೊಳ್ಳಬೇಡಿ.* ನೆರೆಮನೆಯವರು ನಿಮಗೆ ಮಾದರಿಯಾಗದಿರಲಿ. ನಿಮ್ಮ ಆದಾಯ ಮತ್ತು ಖರ್ಚನ್ನು ಸಮತೋಲನದಲ್ಲಿಟ್ಟುಕೊಳ್ಳಿ. ಅವರ ಮನೆಯಲ್ಲಿರುವುದು ನಮ್ಮ ಮನೆಯಲ್ಲಿಲ್ಲವಲ್ಲ ಎಂದು ಕೊರಗಬೇಡಿ.*ಪರಸ್ಪರ ವೀಕ್ನೆಸ್ಗಳನ್ನೇ ಪದೇ ಪದೇ ಹೇಳಿ ಅವಮಾನಿಸಬೇಡಿ. ಇಬ್ಬರ ನಡುವೆ ಕೆಲವೊಂದು ವಿಷಯಗಳಿಗೆ ಹೊಂದಾಣಿಕೆ ಇರಲಿ.*ಹೊಸದಾಗಿ ಮದುವೆಯಾಗಿರುವ ಹುಡುಗ ಅಥವಾ ಹುಡುಗಿ ಇಬ್ಬರೂ ತಮ್ಮ ಆದಾಯ, ಹೂಡಿಕೆ ಖರ್ಚು ವೆಚ್ಚ, ಸಾಲ, ಮೊದಲಾದ ಆರ್ಥಿಕ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುವುದು ಒಳ್ಳೆಯದು. ಇಂತಹ ವಿಚಾರಗಳನ್ನು ಗಂಡ-ಹೆಂಡತಿ ಪರಸ್ಪರ ಮುಚ್ಚಿಡುವಂತಿಲ್ಲ.*ಭವಿಷ್ಯದ ಆರ್ಥಿಕ ಯೋಜನೆಗಳ ಕುರಿತು ಒಟ್ಟಿಗೇ ಕುಳಿತು ಚರ್ಚಿಸಿಕೊಳ್ಳಿ.*ಹಣ ಉಳಿತಾಯ ಮಾಡಲು ಲೈಫ್ ಇನ್ಸ್ಯೂರೆನ್ಸ್ ಮಾಡಿಸಿಕೊಳ್ಳಿ. ಮದುವೆವರೆಗೂ ಪೋಷಕರನ್ನು ಅವಲಂಬಿತರಾಗಿದ್ದ ಹುಡುಗ ಹುಡುಗಿ ಭವಿಷ್ಯದಲ್ಲಿ ಹಣಕಾಸಿಗೆ ಪೊಷಕರನ್ನು ಅವಲಂಬಿಸುವಂತಿಲ್ಲ. *ಇಬ್ಬರೂ ಉದ್ಯೋಗಿಗಳಾಗಿದ್ದಲ್ಲಿ ಮೆಡಿಕಲ್ ಇನ್ಶ್ಯೂರೆನ್ಸ್ ಇದ್ದೇ ಇರುತ್ತದೆ.* ಮ್ಯೂಚುವಲ್ ಪಂಡ್, ಷೇರು, ಬ್ಯಾಂಕ್ ಖಾತೆಗಳಲ್ಲಿ ಹಣ ಹೂಡಿಕೆ ಮಾಡುವುದು ಒಳ್ಳೆಯದು. ಅವು ಭವಿಷ್ಯದ ಹಣಕಾಸು ಸಮಸ್ಯೆಗಳಿಗೆ ನೆರವಾಗಬಲ್ಲುದು. *ಮದುವೆಯ ಮುಂದಿನ ಜೀವನದಲ್ಲಿ ಸವಾಲನ್ನು ಸ್ವೀಕರಿಸಿ. * ನಿಮ್ಮ ಜೀವನ ಸಂಗಾತಿಗೆ ನೀವೊಬ್ಬ ಒಳ್ಳೆಯ ಗೆಳೆಯ/ಗೆಳತಿ ಆಗಿ.
*ಇಬ್ಬರ ನಡುವೆ ಇರುವ ಸಮಾನ ಅಂಶಗಳನ್ನು ಒಪ್ಪಿಕೊಳ್ಳವುದು ಮಾತ್ರವಲ್ಲದೆ, ಇಬ್ಬರ ನಡುವಿನ ಅಸಮಾನತೆಗಳನ್ನು ಒಪ್ಪಿಕೊಂಡು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ.
ಪಾದದ ಬಿರುಕು ಪರದಾಟ ಬೇಡ
ಎಲ್ಲರ ಎದುರು ಕಾಲು ಚಾಚಿ ಕುಳಿತುಕೊಳ್ಳಲು ಏನೋ ಒಂದು ರೀತಿ ಸಂಕೋಚ. ಹಿಮ್ಮಡಿ ಕಾಣಿಸುವ ಚಪ್ಪಲಿ ಹಾಕಿಕೊಳ್ಳಲು ಮನಸ್ಸು ಹಿಂದೇಟು ಹಾಕುತ್ತದೆ. ಚಳಿಗೆ ಪಾದಗಳು ಬಿರುಕು ಬಿಟ್ಟಿವೆ. ಸೌಂದರ್ಯ ಕೆಡಿಸಿದ್ದಲ್ಲದೆ, ಅದರಿಂದ ಆಗಾಗ ಸೋರುವ ರಕ್ತ, ನೋವು ಬಹಳ ಯಾತನೆ ನೀಡುತ್ತವೆ. ಚಳಿಗಾಲ ಬಹುಬೇಗ ಮುಗಿದುಬಿಡಲಿ ಎನಿಸಿಬಿಡುತ್ತದೆ. ಕೇವಲ ಪಾದಗಳ ಬಿರುಕಿಗೆ ಅಷ್ಟೆಲ್ಲ ಪರದಾಡಬೇಕಿಲ್ಲ. ಮನಸ್ಸು ಮಾಡಿದರೆ ಅದರಿಂದ ಮುಕ್ತರಾಗಬಹುದು.
ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ನಿಂಬೆರಸ ಸೇರಿಸಿ ೧೦ ನಿಮಿಷ ಕಾಲ ಅದರೊಳಗೆ ಪಾದಗಳನ್ನು ಇಟ್ಟುಕೊಳ್ಳಿ. ಇದರಿಂದ ತ್ವಚೆ ಮೃದುವಾಗುತ್ತದೆ. ಸಿ ವಿಟಮಿನ್ ಅಂಶವಿರುವ ನಿಂಬೆಯು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಪಾದಗಳ ಬಿರುಕುಗಳನ್ನು ತೆಗೆಯಲು ಹಾಗೂ ಸತ್ವರಹಿತ ಚರ್ಮಗಳನ್ನು ಹೋಗಲಾಡಿಸಲು ಪ್ಯೂಮಿಕ್ ಸ್ಟೋನ್ನಿಂದ ಪಾದಗಳನ್ನು ಉಜ್ಜಿ. ಬಾಳೆಹಣ್ಣಿನ ತಿರುಳುಗಳನ್ನು ಒಣಗಿದ ಹಾಗೂ ಸ್ವಚ್ಛವಾಗಿರುವ ಪಾದಗಳ ಮೇಲೆ ಹಚ್ಚಿ ೧೦ ನಿಮಿಷ ಹಾಗೆ ಬಿಟ್ಟು, ಅನಂತರ ತೊಳೆದುಕೊಳ್ಳಿ.
ಮೂರು ಚಮಚ ಗ್ಲಿಸರಿನ್ಗೆ ಒಂದು ಚಮಚ ರೋಸ್ ವಾಟರ್ ಸೇರಿಸಿ, ಒಡೆದ ಪಾದಗಳಿಗೆ ಹಚ್ಚಿಕೊಳ್ಳಿ. ಇದರಿಂದ ಪಾದಗಳು ಮೃದುವಾಗುತ್ತವೆ.
ದಮ್ಮು, ಆಸ್ತಮಾ: ಆಹಾರದಲ್ಲಿದೆ ಔಷಧ ಡಾ. ವೆಂಕಟ್ರಮಣ ಹೆಗಡೆ
ಚಳಿಗಾಲ ಶುರುವಾಗುತ್ತಿದ್ದಂತೆ ಎಲ್ಲರಿಗೂ ಒಂದು ಹೊಸ ಜೀವನೋತ್ಸಾಹ ಬರುತ್ತದೆ. ಕೆಲವರಿಗೆ ಮಾತ್ರ ಈ ಕಾಲ ಬಂದರೆ ಭಯ. ಆಸ್ತಮಾದಿಂದ ಬಳಲುತ್ತಿರುವವರು ಸಮಸ್ಯೆ ಎದುರಿಸಬೇಕಾಗಿ ಬರಬಹುದು. ಆಸ್ತಮಾ ಸಾಮಾನ್ಯ ಸಮಸ್ಯೆ. ಶೇ. ಎರಡರಿಂದ ಎಂಟು ಮಂದಿಯಲ್ಲಿ ಕಂಡುಬರುತ್ತದೆ. ಉಬ್ಬಸ, ಗೂರಲು, ದಮ್ಮು ಎಂದೂ ಇದನ್ನು ಕರೆಯಲಾಗುತ್ತದೆ.ಆಸ್ತಮಾ ಮುಖ್ಯ ಲಕ್ಷಣ ಎಂದರೆ ಉಸಿರಾಟ ಕಷ್ಟವಾಗುವುದು, ಕೆಮ್ಮು ಹಾಗೂ ಉಸಿರಾಡುವಾಗ ಗೊರ್ ಗೊರ್ ಶಬ್ದ ಬರುವುದು. ಈ ಲಕ್ಷಣಗಳು ರಾತ್ರಿ ಹೊತ್ತು ಹೆಚ್ಚು ಕಾಣುತ್ತವೆ. ದೈಹಿಕ ಶ್ರಮದ ಕಾರ್ಯ ಮಾಡಿದಾಗ ಆಸ್ತಮಾ ಕೂಡ ಹೆಚ್ಚಾಗುತ್ತದೆ.ಅಲರ್ಜಿ ಕಾರಕ ವಸ್ತುಗಳ ಸಂಪರ್ಕದಿಂದ ಆಸ್ತಮಾ ಕೂಡ ಉಲ್ಬಣಗೊಳ್ಳುತ್ತದೆ. ಧೂಳು, ಪರಾಗ, ಬೂಸ್ಟ್ , ರಾಸಾಯನಿಕ ಪದಾರ್ಥಗಳು, ನಾಯಿ-ಬೆಕ್ಕಿನಂಥ ಸಾಕುಪ್ರಾಣಿಗಳ ಕೂದಲು ಮೊದಲಾದ ಅಂಶಗಳು ಅಲರ್ಜಿ ಹಾಗೂ ಆಸ್ತಮಾ ಉಲ್ಬಣಕ್ಕೆ ಕಾರಣವಾಗುತ್ತವೆ.
ಪ್ರಕೃತಿ ಚಿಕಿತ್ಸೆ ಪೂರಕ
* ಆಸ್ತಮಾ ತೊಂದರೆ ಇರುವವರು ಪ್ರತಿದಿನ ಎರಡು ಬಾರಿ ೨೦ ನಿಮಿಷಗಳ ಕಾಲ ಎದೆಗೆ ತಣ್ಣೀರಿನ ಪಟ್ಟಿ ಕಟ್ಟಿ, ಮೇಲಿನಿಂದ ಉಲ್ಲನ್ ಬಟ್ಟೆ ಸುತ್ತಿಕೊಳ್ಳಬೇಕು.
* ಕುದಿಯುವ ನೀರಿಗೆ ನೀಲಗಿರಿ ಎಲೆಗಳನ್ನು ಹಾಕಿ, ಆವಿಯನ್ನು ಮುಖಕ್ಕೆ ತೆಗೆದುಕೊಳ್ಳಬೇಕು. * ಉಗಿಸ್ನಾನ ಕೂಡ ಪರಿಣಾಮಕಾರಿ.
* ಎದೆ ಹಾಗೂ ಬೆನ್ನಿನ ಭಾಗಗಳಿಗೆ ಆಯುರ್ವೇದ ತೈಲಗಳನ್ನು ಬಳಸಿ ಮಸಾಜ್ ಮಾಡಿ, ಇನ್ಪ್ರಾ ರೆಡ್ ಕಿರಣಗಳನ್ನು ನೀಡುವುದರಿಂದ, ಸಂಕುಚಿತ ಶ್ವಾಸನಾಳಗಳು ವಿಕಸಿತಗೊಳ್ಳುತ್ತವೆ. ಕಫ ಕರಗುತ್ತದೆ. * ಅತಿಯಾದ ಮಾನಸಿಕ ಒತ್ತಡ ಕೂಡ ಆಸ್ತಮಾವನ್ನು ಉಲ್ಬಣಗೊಳಿಸುತ್ತದೆ. ಹಾಗಾಗಿ ಯೋಗ ಚಿಕಿತ್ಸೆ, ಸರಳ ಆಸನಗಳು, ವಿಶ್ರಾಂತಿ ಕ್ರಿಯೆ, ಪ್ರಾಣಾಯಾಮ, ಧ್ಯಾನ, ಪ್ರಾರ್ಥನೆ ಇವೆಲ್ಲ ಆಸ್ತಮಾವನ್ನು ಸಂಪೂರ್ಣವಾಗಿ ಹತೋಟಿಗೆ ತರಬಲ್ಲವು.
* ಸೂಜಿ ಚಿಕಿತ್ಸೆಯಿಂದಲೂ ಪ್ರಾಣಶಕ್ತಿ ಉದ್ದೀಪನಗೊಳ್ಳುತ್ತದೆ, ಪ್ರಕೃತಿದತ್ತ ಕೆಲವು ರಾಸಾಯನಿಕಗಳ ಬಿಡುಗಡೆಯಾಗುತ್ತದೆ, ಆಸ್ತಮಾ ಗುಣವಾಗಲು ಅನುವು ಮಾಡಿಕೊಡುತ್ತದೆ. * ಆಯಸ್ಕಾಂತದ ಆಸ್ತಮಾ ಬೆಲ್ಟ್ ಬಳಸುವುದರಿಂದ ಹಾಗೂ ದಕ್ಷಿಣ ಧ್ರುವದಲ್ಲಿ ಚಾರ್ಜ ಮಾಡಿದ ನೀರನ್ನು ಸೇವಿಸುವುದರಿಂದ ಆಸ್ತಮಾ ಗುಣ ಕಾಣುತ್ತದೆ. * ಆಸ್ತಮಾ ಪೀಡಿತರು ಆಹಾರದ ಬಗೆಗೆ ಹೆಚ್ಚು ಲಕ್ಷ್ಯ ವಹಿಸಬೇಕಾಗುತ್ತದೆ. ಕರಿದ ತಿನಿಸು, ಅತಿಯಾದ ಸಿಹಿ, ಬೇಕರಿ ಆಹಾರ, ಭರ್ಜರಿ ಭೋಜನ ಹಾಗೂ ಕೆಲ ರೀತಿಯ ಮಾಂಸಗಳನ್ನು ವರ್ಜಿಸಲೇಬೇಕು. ಪ್ರಕೃತಿ ಚಿಕಿತ್ಸೆ ಪ್ರಕಾರ, ಆಹಾರವೇ ಔಷಧವಾಗಬೇಕು. ಯಾವ ವೇಳೆಯಲ್ಲಿ ಯಾವ ಆಹಾರವನ್ನು ಎಷ್ಟು ಮತ್ತು ಹೇಗೆ ತೆಗೆದುಕೊಳ್ಳಬೇಕು ಎನ್ನುವುದು ಮುಖ್ಯ. ಪ್ರಕೃತಿದತ್ತ ಸರಳ ಮಿತವ್ಯಯೀ ವಿಧಾನಗಳಿಂದ ಆಸ್ತಮಾವನ್ನು ಸಂಪೂರ್ಣವಾಗಿ ಹತೋಟಿಗೆ ತರಲು ಸಾಧ್ಯವಿದೆ.
ಆರೋಗ್ಯಕ್ಕೆ ಹತ್ತು ಹವ್ಯಾಸಗಳು ಪರಮೇಶ್ವರಯ್ಯ ಸೊಪ್ಪಿಮಠ
ಕೆಲಸದ ಸ್ಥಳಕ್ಕೆ ನಡಿಗೆ
ಕೆಲಸದ ಸ್ಥಳ ಹತ್ತಿರವಿದ್ದರೆ ನಡೆದುಕೊಂಡೇ ಹೋಗಬೇಕು. ವಾಹನದಲ್ಲಿ ಬಂದಿದ್ದರೆ ಕಚೇರಿಯಲ್ಲಿ ಲಿಫ್ಟ್ ಬದಲು ಮೆಟ್ಟಿಲುಗಳನ್ನು ಬಳಸಿ. ಸರಿಯಾದ ರೀತಿಯಲ್ಲಿ ಆಲೋಚಿಸಿ, ತಾಳ್ಮೆ ಮತ್ತು ಬದ್ಧತೆಯಿಂದ ಸತತವಾಗಿ ದೇಹ ದಂಡಿಸಿದರೆ ಹೆಚ್ಚು ಸದೃಢರಾಗಿರಲು ಸಾಧ್ಯ. ಯಾವುದೇ ಕೆಲಸ ಮಾಡುವಾಗ ಒಂದೇ ಭಂಗಿಯಲ್ಲಿ ಇರಬಾರದು. ನಡು ನಡುವೆ ಏಳುವುದು, ಕುಳಿತುಕೊಳ್ಳುವುದು, ಓಡಾಡುವುದು ಅಗತ್ಯ.
ದೇಹ ಪಳಗಿಸಿ
ನಮ್ಮ ದೇಹದ ಮೇಲೆ ನಮಗೆ ಅಭಿಮಾನ, ಕಾಳಜಿ ಇರಬೇಕು. ವಾರಕ್ಕೆ ಕನಿಷ್ಠ ೧೫೦ನಿಮಿಷವಾದರೂ ವ್ಯಾಯಾಮ ಅಗತ್ಯ. ಎಲ್ಲರಿಗೂ ಒಂದೇ ರೀತಿಯ ವ್ಯಾಯಾಮ ಸರಿ ಹೊಂದುತ್ತದೆ ಎನ್ನಲಾಗದು. ಅವರವರ ದೇಹ ಪ್ರಕೃತಿಗೆ ತಕ್ಕಂತೆ ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಡಿಗೆ ಮಾತ್ರ ಎಲ್ಲರಿಗೂ ಯೋಗ್ಯವಾಗಿರುವಂಥದ್ದು.
ಕೈಲಿ ನೀರಿರಲಿ
ನೀರಿನ ಬಾಟಲಿಯೊಂದು ಸದಾ ನಿಮ್ಮ ಕೈಲಿರಲಿ. ಅದು ಫ್ಯಾಷನ್ ಗಲ್ಲ. ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರಿರುವುದು ಮುಖ್ಯ. ಸ್ವಲ್ಪ ಕಡಿಮೆಯಾದರೂ ನಿಶ್ಯಕ್ತಿ ಕಾಡುತ್ತದೆ, ಕೆಲಸಕ್ಕೆ ಸೂರ್ತಿ ಇಲ್ಲದಂತಾಗುತ್ತದೆ. ದೇಹದಲ್ಲಿ ಸೆಳೆತ, ನೋವು ಕಾಣಿಸಿಕೊಳ್ಳುತ್ತವೆ. ಪ್ರತಿನಿತ್ಯ ಕನಿಷ್ಟ ಎಂದರೂ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಲೇಬೇಕು. ಚೆನ್ನಾಗಿ ತೊಳೆದ ತಾಮ್ರದ ಪಾತ್ರೆಯಲ್ಲಿ ರಾತ್ರಿ ನೀರಿಟ್ಟು, ಮುಂಜಾನೆ ಅದನ್ನು ಕುಡಿವುದು ಹೆಚ್ಚು ಪ್ರಯೋಜನಕಾರಿ.
ಸಂತೃಪ್ತ ನಿದ್ರೆ
ಒತ್ತಡದ ಈ ದಿನಗಳಲ್ಲಿ ಅನೇಕರು ಕೆಲಸಕ್ಕಾಗಿ ನಿದ್ರೆ ತೊರೆಯುತ್ತಾರೆ. ಅದು ಒಳ್ಳೆಯದಲ್ಲ. ಉತ್ತಮ ನಿದ್ರೆ ಮಾಡಬೇಕು ಎಂಬುದನ್ನು ಎಲ್ಲ ಸಂಶೋಧನೆಗಳೂ ಬಲವಾಗಿ ಪ್ರತಿಪಾದಿಸಿವೆ. ಅರೆ ನಿದ್ರೆಯಾದರೆ ಅದರಿಂದಾಗುವ ಅನಾಹುತಗಳು ಬಹಳ. ದಿನದ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ವೇಳಾಪಟ್ಟಿ ಸಿದಟಛಿಪಡಿಸಿಕೊಳ್ಳಿ. ಅದಕ್ಕೆ ತಕ್ಕನಾಗಿ ಕೆಲಸ ಸಾಗುತ್ತಿದ್ದರೆ ಸಂತೃಪ್ತ ನಿದ್ರೆಗೂ ಸಮಯ ಲಭಿಸುತ್ತದೆ.
ಊಟ ಆರೋಗ್ಯಕರವಾಗಿರಲಿ
ಕೆಲವರಿಗೆ ದಿನಕ್ಕೆ ನಾಲ್ಕಾರು ಬಾರಿ ಆಹಾರ ಸೇವಿಸುವ ರೂಢಿ ಇರುತ್ತದೆ. ಊಟದ ಬಗೆಗೂ ಸರಿಯಾದ ಯೋಜನೆ ರೂಪಿಸಿಕೊಳ್ಳಬೇಕು. ನಿಮ್ಮ ಜೀರ್ಣಶಕ್ತಿಗೆ ತಕ್ಕಂತೆ ಆಹಾರದ ಪ್ರಮಾಣ ನಿರ್ಧರಿಸಿಕೊಳ್ಳಿ. ಬೆಳಿಗ್ಗೆ ಸೇವಿಸುವ ಆಹಾರ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಆ ದಿನದ ಚಟುವಟಿಕೆಗಳ ಮೇಲೂ ಇದು ಪ್ರಭಾವ ಬೀರುತ್ತದೆ. ಅಧ್ಯಯನಗಳ ಪ್ರಕಾರ ಬೆಳಗಿನ ತಿಂಡಿಯು ದೈಹಿಕ ಮತ್ತು ಮಾನಸಿಕವಾಗಿ ಪ್ರೇರಣೆ ನೀಡುತ್ತದೆ. ಹಾಗಾಗಿ ಸೇವಿಸುವ ಆಹಾರವು ಸಮತೋಲನದಿಂದ ಕೂಡಿರಲಿ.
ಉಸಿರಾಟ ಕೂಡ ಒಂದು ಕಲೆ
ಉಸಿರಾಟಕ್ಕೂ ಭಾವನೆಗಳಿಗೂ ನೇರ ಸಂಬಂಧವಿದೆ. ಉಸಿರಾಟವನ್ನು ಕಲೆಯನ್ನಾಗಿಸಿದರೆ ಭಾವನೆಗಳನ್ನು ನಿಯಂತ್ರಿಸಬಹುದು. ಸಿಟ್ಟುಗೊಂಡಾಗ, ಹೆದರಿದಾಗ ನಮ್ಮ ಉಸಿರಾಟ ವೇಗವಾಗುತ್ತದೆ. ಹೃದಯದ ಬಡಿತದ ಜತೆಗೆ ರಕ್ತ ಸಂಚಾರ ತೀವ್ರವಾಗುತ್ತದೆ. ಉಸಿರನ್ನು ನಿಯಂತ್ರಿಸುವುದರಿಂದ ಈ ಕ್ರಿಯೆಗಳನ್ನು ಹತೋಟಿಯಲ್ಲಿ ಇಡಬಹುದು. ವೇಗವಾಗಿ ಉಸಿರಾಡಿದಾಗ ದೇಹಕ್ಕೆ ಕಡಿಮೆ ಪ್ರಮಾಣದಲ್ಲಿ ಆಮ್ಲಜನಕ ಸಿಗುತ್ತದೆ. ಅದರಿಂದ ಮೆದುಳು ಮತ್ತು ದೇಹಕ್ಕೆ ಅಡಚಣೆ ಉಂಟಾಗುತ್ತದೆ. ಹಾಗಾಗಿ ಆಳ ಉಸಿರಾಟ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬೇಕು. ಅದರಿಂದ ನಮ್ಮ ನಡವಳಿಕೆ ಬದಲಾಗಿ, ಮನಸ್ಸಿನ ತಳಮಳ ಕಡಿಮೆಯಾಗುತ್ತದೆ. ಪ್ರಾಣಾಯಾಮ ಮಾಡುವುದು ಹೆಚ್ಚು ಅನುಕೂಲ.
ಮನ ತುಂಬಿ ನಗಬೇಕು
ಯಾವಾಗಲೂ ಮುಖ ಗಂಟಿಕ್ಕಿಕೊಂಡು ಇದ್ದರೆ ಇತರರಿಗೆ ಮುಜುಗರ ತರುತ್ತದೆ. ಹಾಗೆಂದು ಒಳಗೊಳಗೇ ನಗುವುದೂ ತರವಲ್ಲ. ನಕ್ಕಾಗ ನಮ್ಮ ಮುಖದಲ್ಲಿನ ಸ್ನಾಯುಗಳಿಗೆ ಉತ್ತೇಜನ ಸಿಗುತ್ತದೆ. ನಗುವಿನ ಮುಖಾಂತರ ಎಂತಹವರನ್ನಾದರೂ ಆಕರ್ಷಿಸಬಹುದು. ಮುಕ್ತ ನಗು ಬಹಳ ಅನುಕೂಲ. ನಗುವನ್ನು ಇತರರೊಡನೆ ಹಂಚಿಕೊಂಡರೆ ಅದು ಹೆಚ್ಚು ಪರಿಣಾಮ ಬೀರುತ್ತದೆ. ಮನುಷ್ಯನ ವ್ಯಕ್ತಿತ್ವಕ್ಕೆ ನಗುವಿಗಿಂತ ಬೇರೆ ಅಲಂಕಾರ ಇಲ್ಲ. ಹಾಸ್ಯಪ್ರಜ್ಞೆ ರೂಢಿಸಿಕೊಂಡ ವ್ಯಕ್ತಿ ಯಾವ ಪ್ರದೇಶದಲ್ಲಾದರೂ ನೆಮ್ಮದಿಯಿಂದ ಜೀವನ ಸಾಗಿಸುತ್ತಾನೆ. ನಿತ್ಯ ಬದುಕಿನಲ್ಲಿ ಹಲವು ಹಾಸ್ಯ ಪ್ರಸಂಗಗಳು ಕಾಣುತ್ತವೆ. ಅವುಗಳನ್ನು ಗರುತಿಸುವ ಕಲೆ ಬೆಳೆಸಿಕೊಳ್ಳಬೇಕು. ಹಂಚಿಕೊಳ್ಳಬೇಕು.
ಬೇಗ ಮಲಗಿ, ಬೇಗ ಏಳಿ
ಹಣದ ಹಿಂದೆ ಓಡುತ್ತಿರುವುದರಿಂದ ಆರೋಗ್ಯದ ಬಗ್ಗೆ ಚಿಂತನೆ ನಡೆಸಲು ಅವಕಾಶ ಇಲ್ಲದಂತಾಗುತ್ತಿದೆ. ನಮ್ಮ ಹಿರಿಯರು 'ಬೇಗ ಮಲಗು, ಬೇಗ ಏಳು' ಎಂಬ ಸೂತ್ರ ನೀಡಿದ್ದಾರೆ. ಅದು ವೈಜ್ಞಾನಿಕವಾಗಿಯೂ ಸರಿಯಾಗಿರುವಂಥದ್ದು. ಬೆಳಗಿನ ಜಾವ ಸೂರ್ಯ ಉದಯಿಸುವ ಮುಂಚೆ ಪ್ರಕೃತಿ ಅತ್ಯಂತ ಶಾಂತವಾಗಿದ್ದು, ಹೆಚ್ಚು ಆಮ್ಲಜನಕ ನೀಡುತ್ತದೆ. ಅದನ್ನು ಸೇವಿಸುವುದರಿಂದ ಹೆಚ್ಚು ಕ್ರೀಯಾಶೀಲತೆ ಬರುತ್ತದೆ. ಆದರೆ ಇಂದು ನಾವು ರಾತ್ರಿ ಟಿವಿ ವೀಕ್ಷಿಸುತ್ತ ಅಥವಾ ಇನ್ನೇನೋ ಮಾಡುತ್ತ ರಾತ್ರಿ ತಡವಾಗಿ ಮಲಗುತ್ತೇವೆ. ಸೂರ್ಯ ನೆತ್ತಿಗೆ ಬಂದಾಗ ಏಳುತ್ತೇವೆ. ಇದು ನಾನಾ ಕಾಯಿಲೆಗಳಿಗೆ ಈಡು ಮಾಡುತ್ತದೆ.
ಮನರಂಜನೆ
ಬಳಲಿದ ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ಅಗತ್ಯ. ಮನಸ್ಸು ತುಂಬಾ ದುಗುಡ, ಒತ್ತಡ, ಆತಂಕ, ನಿರುತ್ಸಾಹಗೊಂಡಾಗ ಇಷ್ಟವಾದ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಪುಸ್ತಕ ಓದುವುದು, ಸಂಗೀತ, ಸಿನಿಮಾ ವೀಕ್ಷಣೆ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಹೀಗೆ ಮನರಂಜನೆ ಯಾವುದೇ ರೀತಿ ಇರಬಹುದು.ಆದರೆ ಅದು ಒತ್ತಡದ ಮನಸ್ಸಿಗೆ ಮುದ ನೀಡುವಂತಿರಬೇಕೇ ಹೊರತು ಮತ್ತಷ್ಟು ಉದ್ವಿಗ್ನತೆ ಸೃಷ್ಟಿಸಬಾರದು. ಮನರಂಜನೆ ಒಬ್ಬೊಬ್ಬರಲ್ಲೂ ಭಿನ್ನ.
ಚಟಗಳಿಂದ ದೂರವಿರಿ
ಅನೇಕರು ತಮ್ಮ ಮನಸ್ಸಿನ ಮೇಲೆ ಹತೋಟಿ ಕಳೆದುಕೊಂಡು ಮದ್ಯ, ಧೂಮಪಾನ, ಜೂಜು, ತಂಬಾಕು ಸೇವನೆಯಂಥ ಚಟಗಳಿಗೆ ದಾಸರಾಗುತ್ತಾರೆ. ಆರಂಭದಲ್ಲಿ ಅದು ಅಲ್ಪ ತೃಪ್ತಿ ನೀಡಬಹುದು. ನಂತರ ಅದರಿಂದಾಗುವ ಅನಾಹುತ ಲೆಕ್ಕವಿಲ್ಲದಷ್ಟು. ಬಿಡಬೇಕು ಎಂದರೂ ಹೊರಬರಲಾರದಂತಹ ಚಕ್ರವ್ಯೂಹದಲ್ಲಿ ಸಿಲುಕಿರುತ್ತಾರೆ. ಕೆಲವರಿಗಂತೂ ಚಟ ಕೂಡ ಫ್ಯಾಷನ್ ಎನಿಸಿಕೊಂಡುಬಿಟ್ಟಿದೆ. ವಾಸ್ತವವಾಗಿ ಅವುಗಳಿಂದ ಎಷ್ಟು ದೂರವಿರುತ್ತೀರೋ ಜೀವನ ಅಷ್ಟು ಸುಂದರವಾಗಿರುತ್ತದೆ.
ಹಣ್ಣು ತಿಂದರೆ ಹತ್ತಿರವಿರದು ತೊಂದರೆ ಡಾ. ವೆಂಕಟ್ರಮಣ ಹೆಗಡೆ
ಮಾನವನ ಶರೀರ ಒಂದು ಕಾರ್ಖಾನೆ ಇದ್ದಂತೆ. ಇಲ್ಲಿ ೨೪ ಗಂಟೆಗಳ ಕಾಲ ನಿರಂತರ ರಾಸಾಯನಿಕ ಕ್ರಿಯೆಗಳು ನಡೆಯುತ್ತಿರುತ್ತವೆ. ಸೇವಿಸಿದ ಆಹಾರವನ್ನು ಜೀರ್ಣ ಮಾಡುವುದು ಪ್ರಮುಖ ಕಾರ್ಯ. ದೇಹದಲ್ಲಿನ ಕ್ರಿಯೆಗಳಿಂದ ಪ್ರೀರ್ಯಾಡಿಕಲ್ಸ್ ಉತ್ಪತ್ತಿಯಾಗುತ್ತವೆ. ಇವು ಎಷ್ಟು ಹಾನಿಕಾರಕ ಗಳು ಎಂದರೆ, ಕ್ಯಾನ್ಸರ್ಗೂ ಕಾರಣವಾಗಿ ಬಿಡಬಲ್ಲವು. ಜೀವಕೋಶಗಳಿಗೆ ಹಾನಿ ಮಾಡಿ ವ್ಯಕ್ತಿಯ ಸಾವಿಗೂ ಕಾರಣ ವಾಗಬಹುದು. ಇಂಥ ಹತ್ತು ಸಾವಿರಕ್ಕೂ ಹೆಚ್ಚು ಪ್ರೀರ್ಯಾಡಿಕಲ್ ಗಳು ಪ್ರತಿದಿನ ನಮ್ಮ ಜೀವಕೋಶಗಳ ಮೇಲೆ ದಾಳಿ ಮಾಡುತ್ತಿರುತ್ತವೆ.
ದುಷ್ಪರಿಣಾಮ * ಅಕಾಲ ಮುಪ್ಪು * ಪಾರ್ಕಿನ್ಸನ್ ಕಾಯಿಲೆ * ಕೀಲುಗಳ ನೋವು * ಮಲ್ಟಿಪಲ್ ಸ್ಕ್ಲಿರೋಸಿಸ್ * ಕ್ಯಾನ್ಸರ್* ಹೃದಯ ಕಾಯಿಲೆ * ನರ ರೋಗಗಳು * ಆಲ್ಜಿಮರ್ಸ್ ಕಾಯಿಲೆ* ಕಣ್ಣಿನ ದೋಷಗಳುಈ ದುಷ್ಪರಿಣಾಮಗಳನ್ನು ತಡೆಯುವ ಮತ್ತು ನಿಷ್ಕ್ರಿಯಗೊಳಿಸುವ ಶಕ್ತಿ ನಮ್ಮ ಪ್ರಕೃತಿ ಯಲ್ಲಿನ ಹಲವು ಪರಿಕರಗಳಿಗಿದೆ. ದೇಹದಲ್ಲಿ ಉತ್ಪತ್ತಿಯಾಗುವ ಕೆಲವು ಆಂಟಿ ಆಕ್ಸಿಡೆಂಟ್ ಗಳು ಪ್ರೀರ್ಯಾಡಿಕಲ್ಗಳನ್ನು ನಿಷ್ಕ್ರಿಯಗೊಳಿಸಿ, ಆರೋಗ್ಯವನ್ನು ಕಾಪಾಡು ತ್ತವೆ. ಹಣ್ಣು, ತರಕಾರಿಗಳಲ್ಲಿ ಹೆಚ್ಚಾಗಿ ಆಂಟಿ ಆಕ್ಸಿಡೆಂಟ್ ಗಳಿವೆ. ಅದಕ್ಕೆ ಪೂರಕವಾಗಿ ಎ, ಸಿ ಮತ್ತು ಇ ಜೀವಸತ್ವಗಳಿರುವ ಆಹಾರ ಸೇವಿಸಿದರೆ ಹಲವು ಕಾಯಿಲೆಗಳಿಂದ ದೂರವಿರಬಹುದು.
ಇ ಜೀವಸತ್ವದ ಪದಾರ್ಥ * ಸೂರ್ಯಕಾಂತಿ, ಕಸುಬೆ, ತಾಳೆ ಎಣ್ಣೆಗಳು * ಬಾದಾಮ್ * ದ್ವಿದಳ ಧಾನ್ಯಗಳು * ಬಟಾಣಿ * ತರಕಾರಿಗಳು
ಸಿ ಜೀವಸತ್ವದ ಪದಾರ್ಥ ಕಿತ್ತಳೆ, ಮೊಳಕೆ ಕಾಳು, ಎಲೆಕೋಸು, ಟೊಮೆಟೊ, ಹೂಕೋಸು, ಮೂಸಂಬಿ, ಲಿಂಬೆ, ಸೀಬೆ, ಪಪ್ಪಾಯಿ,
ಎ ಜೀವಸತ್ವದ ಪದಾರ್ಥ ಗಜ್ಜರಿ, ಬಸಳೆ, ಸಿಹಿ ಕುಂಬಳಕಾಯಿ, ಸೊಪ್ಪು, ಗೆಣಸು, ಕರಬೂಜ, ಎಲೆಕೋಸು
ಗಟ್ಟಿ ಆರೋಗ್ಯಕ್ಕೆ ಪಟ್ಟಿ ಕಟ್ಟಿ
ಪ್ರಕೃತಿ ಚಿಕಿತ್ಸೆ ಅಂದರೇ ಹಾಗೆ. ಅರಿವಿದ್ದರೆ ಮನೆಯಲ್ಲೂ ಮಾಡಿಕೊಳ್ಳಬಹುದು, ಅಗತ್ಯಬಿದ್ದರೆ ವೈದ್ಯರ ನೆರವೂ ಪಡೆಯಬಹುದು. ಪ್ರಕೃತಿಗೆ ಪೂರಕವಾದ ಕ್ರಮಗಳು ಇಲ್ಲಿರುವುದರಿಂದ ಯಾವುದೇ ಅಪಾಯ, ದುಷ್ಪರಿಣಾಮಗಳ ಭಯ ತೀರಾ ಕಡಿಮೆ. ಪ್ರಯೋಜನ ಮಾತ್ರ ಅಧಿಕ. ಅಂಥ ಪ್ರಮುಖ ಚಿಕಿತ್ಸೆಗಳಲ್ಲಿ ಪಟ್ಟಿ ಕಟ್ಟುವಿಕೆ ಕುಡ ಒಮದು.
ಜಿ.ಎಚ್. ಪಟ್ಟಿ ಬಿಸಿ ನೀರಿನ ಚೀಲ (ಬ್ಯಾಗ್)ವನ್ನು ಹೊಟ್ಟೆಯ ಭಾಗದಲ್ಲಿ, ಮಂಜುಗಡ್ಡೆ ಚೀಲವನ್ನು ಬೆನ್ನಿನ ಕೆಳಭಾಗದಲ್ಲಿ ಇಟ್ಟು, ಹೊಟ್ಟೆ ಮತ್ತು ಬೆನ್ನಿನ ಭಾಗ ಮುಚ್ಚುವಂತೆ ಈ ಚೀಲಗಳ ಮೇಲೆ ಬಟ್ಟೆ ಕಟ್ಟಿ. ಅದರ ಮೇಲೆ ಉಣ್ಣೆ ಬಟ್ಟೆ ಸುತ್ತಬೇಕು. ಅವಧಿ: 20 ನಿಮಿಷ.
ಉಪಯೋಗಗಳು * ಮಧುಮೇಹ ದೂರಾಗುವುದು *ಲಿವರ್ನ ತೊಂದರೆಗಳು ಕಡಿಮೆಯಾಗುತ್ತವೆ. *ಅಜೀರ್ಣ ಸಮಸ್ಯೆ ಇರದು. *ಹೊಟ್ಟೆನೋವು ಮಾಯವಾಗುವುದು *ಅತಿಸಾರದ ಭಯ ಇಲ್ಲ
ಕಿಡ್ನಿ ಪಟ್ಟಿ ಬಿಸಿ ನೀರಿನ ಚೀಲವನ್ನು ಬೆನ್ನಿನ ಕೆಳಭಾಗದಲ್ಲಿ, ಮಂಜುಗಡ್ಡೆ ಚೀಲವನ್ನು ಹೊಟ್ಟೆ ಭಾಗದ ಮೇಲಿಟ್ಟು ಬಟ್ಟೆಯಿಂದ ಮುಚ್ಚಿ. ಅದರ ಮೇಲೆ ಉಣ್ಣೆ ಬಟ್ಟೆ ಸುತ್ತಬೇಕು. ಅವಧಿ: 30 ನಿಮಿಷಗಳು.
ಉಪಯೋಗಗಳು: *ಬೆನ್ನು ನೋವು ಮಾಯವಾಗುವುದು *ಕಿಡ್ನಿಯ ತೊಂದರೆಗಳು ದೂರಾಗುತ್ತವೆ *ಅಲ್ಸರ್ ಕಾಡದು *ಅಸಿಡಿಟಿ ಇರದು *ಮೂತ್ರಪಿಂಡದಲ್ಲಿ ಕಲ್ಲಿನ ಭಯ ಇರದು *ಉರಿ ಮೂತ್ರ ಬರದು
ತಣ್ಣೀರಿನ ಪಟ್ಟಿಇದನ್ನು ಮುಖ್ಯವಾಗಿ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಉಪಯೋಗಿಸಲಾಗುತ್ತದೆ. ಖಾದಿ ಬಟ್ಟೆಯ ಪಟ್ಟಿಯನ್ನು ತಣ್ಣೀರಿನಲ್ಲಿ ಅದ್ದಿ ಎದೆ ಅಥವಾ ಹೊಟ್ಟೆ ಭಾಗಕ್ಕೆ ಸುತ್ತಿಕೊಳ್ಳಿ. ಅದರ ಮೇಲೆ ಉಣ್ಣೆ ಬಟ್ಟೆಯನ್ನು ಸುತ್ತುವುದು. ಇದು ಪ್ರಚೋದಕ ಪಟ್ಟಿ. ಅವಧಿ: 15ರಿಂದ 30 ನಿಮಿಷಗಳು.
ಪ್ರಯೋಜನ: *ತಣ್ಣೀರಿನ ಎದೆ ಪಟ್ಟಿಯು ಅಧಿಕ ರಕ್ತದೊತ್ತಡ ವಿವಾರಿಸುತ್ತದೆ. *ತಣ್ಣೀರಿನ ಹೊಟ್ಟೆ ಪಟ್ಟಿಯು ಲಿವರ್, ಕಿಡ್ನಿ, ಹೊಟ್ಟೆ ಪ್ರಚೋದಕ. *ಬೊಜ್ಜುತನ ದೂರಾಗುವುದು * ಅಧಿಕ ಉಷ್ಣತೆ ಸಮಸ್ಯೆ ಕಾಡದು. * ಮಧುಮೇಹ, ಅಜೀರ್ಣ, ಜ್ವರ ಕಡಿಮೆಯಾಗುವುವು.
ಬೆಚ್ಚನೆಯ ನೀರಿನ ಪಟ್ಟಿ ಇದನ್ನು ಮುಖ್ಯವಾಗಿ ಎದೆಯ ಭಾಗಕ್ಕೆ ಹಾಗೂ ನೋವಿರುವ ಭಾಗಕ್ಕೆ ಬಳಸಲಾಗುತ್ತದೆ. ಅವಧಿ: 20 ನಿಮಿಷಗಳು. ಉಪಯೋಗಗಳು * ಆಸ್ತಮಾ, ಕೀಲುನೋವು, ನರ ಸೆಳೆತ, ಮಾಂಸಖಂಡಗಳ ನೋವು ಕಡಿಮೆಯಾಗುತ್ತವೆ.
ಮಂಜುಗಡ್ಡೆ ಪಟ್ಟಿ ಮಂಜುಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ, ದೇಹದ ಭಾಗಕ್ಕೆ ಇರಿಸುವುದು. ಅವಧಿ: 5ರಿಂದ 10 ನಿಮಿಷಗಳು.
ಉಪಯೋಗಗಳು * ಬಿದ್ದ ತಕ್ಷಣದ ನೋವು, ಅತಿಯಾದ ನೋವು, ಬಾವು, ಉರಿಯೂತ, ರಕ್ತಸ್ರಾವ, ಗೌಟ್ ಕಡಿಮೆಯಾಗುತ್ತವೆ.
ಕಿಡ್ನಿ ರಕ್ಷಿಸಿಕೊಳ್ಳಲು
ಮೂತ್ರಪಿಂಡ ಸಮಸ್ಯೆಯು ಮೌನ ಕೊಲೆಗಾರ ಎಂದೇ ಗುರುತಿಸಿಕೊಂಡಿದೆ. ಒಟ್ಟಾರೆ ಜೀವನ ಮಟ್ಟವನ್ನೇ ಇದು ಹದಗೆಡಿಸಿಬಿಡುತ್ತದೆ. ಕೆಲವು ಕ್ರಮಗಳನ್ನು ಕೈಗೊಂಡರೆ ಮೂತ್ರಪಿಂಡ ಸಮಸ್ಯೆ ಹೆಚ್ಚಾಗುವುದು, ಮಧುಮೇಹ ಹಾಗೂ ಹೃದ್ರೋಗಗಳಿಂದ ಬಚಾವಾಗಬಹುದು: * ಚಟುವಟಿಕೆಯ ಜೀವನ: ನಿತ್ಯವೂ ವ್ಯಾಯಾಮ ಮಾಡಿ. ಸದಾ ಕುಳಿತೇ ಇರುವ ಬದಲು ಚಟುವಟಿಕೆಯ ಕೆಲಸಗಳಲ್ಲಿ ತೊಡಗಿಕೊಳ್ಳಿ.* ಮಧುಮೇಹ ನಿಯಂತ್ರಣದಲ್ಲಿರಲಿ: ಮಧುಮೇಹ ಇಲ್ಲದಿದ್ದರೆ ಸಂತೋಷ. ಇದ್ದರೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಬಗ್ಗೆ ಗಮನ ಕೊಡಿ. ಮಧುಮೇಹ ಹೊಂದಿರುವ ಅರ್ಧಕರ್ಧ ಮಂದಿಯಲ್ಲಿ ಮಧುಮೇಹ ಸಮಸ್ಯೆ ಇರುವುದು ಕಂಡುಬರುತ್ತಿದೆ. ಹಾಗಾಗಿ ಮಧುಮೇಹ ಮತ್ತು ಕಿಡ್ನಿ ಕುರಿತು ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.* ರಕ್ತದೊತ್ತಡ ನಿಯಂತ್ರಣದಲ್ಲಿರಲಿ: ನಿಗದಿತ ಅವಧಿಗೆ ಅನುಗುಣವಾಗಿ ರಕ್ತದೊತ್ತ ಪರೀಕ್ಷಿಸಿಕೊಳ್ಳಿ. ಅಗತ್ಯ ಬಿದ್ದರೆ ಆಹಾರ ಕ್ರಮ ಮತ್ತು ಜೀವನ ಶೈಲಿ ಬದಲಾಯಿಸಿಕೊಳ್ಳಿ.* ಆಹಾರದ ಕಡೆ ಗಮನ ಇರಲಿ: ಆರೋಗ್ಯಕರ ಆಹಾರ ಸೇವನೆ ಮುಖ್ಯ. ಆ ಮೂಲಕ ದೇಹದ ತೂಕ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಉಪ್ಪಿನ ಸೇವನೆ ಕಡಿಮೆ ಇರಲಿ.* ಧೂಮಪಾನ ತ್ಯಜಿಸಿ: ಧೂಮಪಾನವು ಮೂತ್ರಪಿಂಡಕ್ಕೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಪರಿಣಾಮ, ಮೂತ್ರಪಿಂಡದ ಕಾರ್ಯಸಾಮರ್ಥ್ಯ ಕುಸಿಯುತ್ತದೆ. ಕಿಡ್ನಿ ಕ್ಯಾನ್ಸರ್ ಕೂಡ ಬರಬಹುದು.
* ಮಾತ್ರೆಯೇ ಆಹಾರ ಆಗದಿರಲಿ: ಯಾವುದೇ ಮಾತ್ರೆಗಳನ್ನಾದರೂ ನಿರಂತರವಾಗಿ ಹಾಗೂ ಅತಿಯಾಗಿ ಸೇವಿಸಬಾರದು. ಕಾಯಿಲೆ ಗುಣಪಡಿಸಲು ನುಂಗುವ ಮಾತ್ರೆಯೇ ಕಾಯಿಗಳಿಗೆ ಕಾರಣವಾಗುವಂತೆ ಇರಬಾರದು. ನೋವು ನಿವಾರಕ ಮಾತ್ರೆ ಸೇವಿಸುವಾಗ ಎಚ್ಚರಿಕೆ ಅಗತ್ಯ. ಹೆಚ್ಚು ಕಾಲದ ವರೆಗೆ ಇಂಥ ಮಾತ್ರೆ ಸೇವಿಸಬೇಕಾಗಿ ಬಂದಾಗ ವೈದ್ಯರ ಮಾರ್ಗದರ್ಶನ ಅಗತ್ಯ.
ಸರ್ಪಸುತ್ತು ಉಷ್ಣ ಕಾಲದ ರೋಗ * ಡಾ. ಹರಿಪ್ರಸಾದ್ ಸುವರ್ಣ
ಉಷ್ಣಕಾಲದಲ್ಲಿ ವೈರಸ್ಗಳಿಂದ ಬಾಧಿಸುವ ಸಮಸ್ಯೆ ಇದು. ಪಿತ್ತ ವೃದ್ಧಿಯಾಗಿ ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈವೈರಾಣು ದೇಹ ಪ್ರವೇಶಿಸಬಹುದು. ಮೊದಲೇ ದೇಹಸ್ಥಿತ ರೋಗಾಣುಗಳ ಪ್ರಭಾವಕ್ಕೆ ಒಳಗಾಗಿದ್ದರೂ ಸರ್ಪಸುತ್ತು ಕಂಡು ಬರುತ್ತದೆ.ತ್ವಚೆ ಮೇಲೆ ಕೆಂಪನೆ ಚಿಕ್ಕಚಿಕ್ಕ ನೀರ್ಗುಳ್ಳೆಗಳು ಪಟ್ಟೆಯಾಕಾರದಲ್ಲಿ ದೇಹದ ಒಂದು ಪಾರ್ಶ್ವದಲ್ಲಿ ಕಂಡುಬರುತ್ತವೆ. ಈ ನೀರ್ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ, ನವೆ ಊಂಟಾಗುತ್ತವೆ. ನರತಂತುಗಳ ಜಾಲಗಳಲ್ಲಿ ಇವು ಪಸರಿಸುತ್ತವೆ. ಇದನ್ನು ಜನಸಾಮಾನ್ಯರು ಸರ್ಪದ ಚರ್ಮ ಅಥವಾ ಹೆಡೆಯ ರೂಪವನ್ನು ಕಲ್ಪಿಸಿಕೊಂಡು, ಸರ್ಪ ದೋಷದಿಂದ ಬರುವ ಸಮಸ್ಯೆ ಎಂದು ಪರಿಗಣಿಸುತ್ತಾರೆ, ಸರ್ಪದ ಬಗ್ಗೆ ಇರುವ ಸಹಜ ಭಯ ಮತ್ತು ದೇವತಾರೂಪಿ ನಂಬಿಕೆಯಿಂದ ದೇವರು ಮುನಿದ ಎಂಬ ಆತಂಕದ ಛಾಯೆ ಆವರಿಸುವುದೂ ಉಂಟು. ಇದಕ್ಕಾಗಿ ಸರ್ಪದೋಷ ಪರಿಹಾರ ಅಥವಾ ರೋಗ ವಾಸಿ ಮಾಡುವ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಾರೆ. ಇದರಿಂದ ಕಾಯಿಲೆ ವಾಸಿಯಾಗುವುದರ ಬದಲು, ಉಪದ್ರವ ಜಾಸ್ತಿಯಾಗುತ್ತದೆ.
ಲಕ್ಷಣಗಳೇನು?
* ಒಂದು ಪಾರ್ಶ್ವದಲ್ಲಿ ತುರಿಕೆ, ನೋವು, ಉರಿ, ನವೆಯ ಅನುಭವ, ಚರ್ಮದಲ್ಲಿ ಕೆಂಪಗಿನ ದದ್ದುಗಳು ಗೋಚರಿಸುವುದು. ಒತ್ತೋತ್ತಾಗಿರುವ ಸಣ್ಣ ಸಣ್ಣ ನೀರ್ಗುಳ್ಳೆಗಳು ಮೂಡುತ್ತವೆ.* ದದ್ದುಗಳು ಸಾಮಾನ್ಯವಾಗಿ ಪಟ್ಟೆಯಾಕಾರದಲ್ಲಿ ಬೆನ್ನುಮೂಳೆಯ ಒಂದು ಪಾರ್ಶ್ವದಿಂದ ಹೊಟ್ಟೆ ಎದೆಯ ಭಾಗಕ್ಕೆ ಚಲಿಸುತ್ತವೆ. ದೇಹದ ಯಾವುದೇ ಒಂದು ಪಾರ್ಶ್ವದಲ್ಲಿ ಅಥವಾ ಎಲ್ಲಾ ಭಾಗಗಳಿಗೆ ಅಂದರೆ ಮುಖ, ಕಣ್ಣು, ಕಿವಿ, ಬಾಯಿ, ಹಣೆ, ಕೈಕಾಲು, ಜನನಾಂಗಗಳಲ್ಲಿ ಇದು ಪಿಸಬಹುದು.* ದೇಹದಲ್ಲಿ ಸರ್ಪಸುತ್ತು ಗೋಚರಿಸುವ ಒಂದೆರಡು ವಾರಗಳ ಮೊದಲಿನಿಂದ ವೈರಸ್ ಸೋಂಕು ಕ್ರೀಯಾಶೀಲವಾಗಿರುತ್ತದೆ. ನಂತರ ಸಂಪೂರ್ಣವಾಗಿ ದೇಹದಲ್ಲಿ ಪ್ರಕಟಗೊಳ್ಳುತ್ತವೆ. 2ರಿಂದ 3 ವಾರಗಳಲ್ಲಿ ನೀರ್ಗುಳ್ಳೆಗಳು ಒಡೆದು, ಕಪ್ಪು ಪದರ ಮೂಡುತ್ತದೆ. ನಂತರ ಅದು ಒಣಗಿ, ಉದುರಿ ಬೀಳುತ್ತದೆ.* ಸೋಂಕು ಯಾಶೀಲವಾಗಿರುವ ಸಮಯದಲ್ಲಿ ಪೂರಕ ಲಕ್ಷಣಗಳಾಗಿ ಹೊಟ್ಟೆನೋವು, ಚಳಿ, ಜ್ವರ, ತಲೆನೋವು, ಬೆನ್ನುನೋವು, ಸಂಧಿ ನೋವು, ಸುಸ್ತು, ಸ್ನಾಯು ಸೆಳೆತ ಕಾಣಿಸಿಕೊಳ್ಳುತ್ತವೆ. ಮುಖ ಅಥವಾ ಬಾಯಿಯಲ್ಲಾದರೆ ಮುಖ ವಕ್ರತೆ, ಕತ್ತಿನ ಗ್ರಂಥಿ ಊತ, ಕಣ್ಣಲ್ಲಾದರೆ ಕಣ್ಣಿನ ಊತ, ದೃಷ್ಟಿ ದೋಷ, ಕಿವಿಯಲ್ಲಾದರೆ ಶ್ರವಣ ದೋಷ ಕಾಣಿಸಿಕೊಳ್ಳುವುದು.
ವಿಧಗಳು * ಹರ್ಪಿಸ್ಝೋಸ್ಟರ್-ದೇಹದ ಅಧಿಕ ಭಾಗವನ್ನು ಆಶ್ರಯಿಸುತ್ತದೆ. * ಹರ್ಪಿಸ್ಸಿಂಪ್ಲೆಕ್ಸ್-ಕಡಿಮೆ ಭಾಗವನ್ನು ಆಶ್ರಯಿಸುತ್ತದೆ. (ಕೇವಲ 1 ರಿಂದ 2 ಸೆಂಟಿಮೀಟರ್ ಸುತ್ತಳತೆಯಲ್ಲಿ ವ್ಯಾಪ್ತಿ.) ಸೋಂಕಿತ ಭಾಗಗಳಿಗೆ ಆನುಗುಣವಾಗಿ ಮುಖಗತ ಸರ್ಪಸುತ್ತು, ಜನನಾಂಗಗತ ಸರ್ಪಸುತ್ತು, ಕಣ್ಣಿನ ಸರ್ಪಸುತ್ತು, ಮೆದುಳಿನ ಸರ್ಪಸುತ್ತು ಹಾಗೂ ನವಜಾತ ಶಿಶುಗಳ ಸರ್ಪಸುತ್ತು ಎಂದು ವಿಂಗಡಿಸಬಹುದು.
ಬರುವುದ್ಯಾಕೆ?
ಸಾಮಾನ್ಯವಾಗಿ ಪಿತ್ತ ವಿಕೃತಿಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ ಉಂಟಾಗುತ್ತದೆ. ರೋಗ ಬಾಧಿತ ವ್ಯಕ್ತಿಗಳ ನೇರ ಸಂಪರ್ಕದಿಂದ ಬರಬಹುದು. ಹಿಂದೆಂದೋ ಕಾಡಿದ ಕ್ಯಾನ್ಸರ್, ಸಿಡುಬಿನಂಥ ಸಮಸ್ಯೆಗಳು ಪೂರ್ತಿ ಗುಣವಾಗದೇ ಇದ್ದವರಲ್ಲೂ ಸರ್ಪಸುತ್ತು ಬಾಧಿಸುವುದಿದೆ. ಬಾಧಿತ ವ್ಯಕ್ತಿಗಳೊಂದಿಗಿನ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ. ಪ್ರಸವ ಕಾಲದಲ್ಲಿ ತಾಯಿಯು ಜನನಾಂಗದ ಸರ್ಪಸುತ್ತಿನಿಂದ ಬಳಲುತಿದ್ದರೆ, ನವಜಾತ ಶಿಶು ತೀರ್ವತರದ ಸರ್ಪಸುತ್ತಿಂದ ಬಳಲುತ್ತದೆ.
ತೊಂದರೆಗಳು
ಒಮ್ಮೆಗೆ ಗುಣಮುಖರಾಗಿ ಪುನಃ ಬಾಧಿಸುವುದು, ಅಂಧತ್ವ, ಕಿವುಡು, ಸ್ರಾವಯುಕ್ತ ಹುಣ್ಣು, ಬೇಕ್ಟೀರಿಯಾ ಸೋಂಕು, ಮೆದುಳು ಜ್ವರ, ಮುಖಗತ ಪಾರ್ಶ್ವವಾತ, ಆಲ್ಜಿಮಿರ್ಸ್ ಸಮಸ್ಯೆ ಬಾಧಿಸುವ ಸಾಧ್ಯತೆ ಇರುತ್ತದೆ. ಸರ್ಪಸುತ್ತು ಬಾಧಿತ ಮಹಿಳೆಯರಲ್ಲಿ ಅದು ಪೂರ್ತಿ ಗುಣವಾಗದ ಕಾಲದಲ್ಲಿ ಗರ್ಭ ಧರಿಸಿದರೆ ಗರ್ಭಸ್ರಾವ ಉಂಟಾಗುತ್ತದೆ.
ಸರ್ಪಸುತ್ತು ತನ್ನಿಂತಾನೇ ಗುಣಮುಖ ಹೊಂದುವ ಒಂದು ವಿಶಿಷ್ಟ ರೋಗ. ಆದರೆ ಅಪಥ್ಯ ಉಂಟಾದರೆ, ಇತರ ರೋಗಗಳೊಂದಿಗೆ ಸಂಯೋಗ ಹೊಂದಿ, ರೋಗವನ್ನು ಸರಿಯಾಗಿ ನಿರ್ಣಯ ಮಾಡಿಕೊಳ್ಳದೇ ಚಿಕಿತ್ಸಾ ವ್ಯತ್ಯಾಸ ಉಂಟಾದರೆ, ನವಜಾತ ಶಿಶುಗಳಲ್ಲಿ ಹಾಗೂ ವಯೋವೃದ್ಧರಲ್ಲಿ ಮೃತ್ಯುಕಾರಕವೂ ಆಗಬಹುದು.
ಚಿಕಿತ್ಸೆ
ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಚಿದೆ. ಹಳೆ ಅಕ್ಕಿ ಗಂಜಿ, ಬೇಯಿಸಿದ ಹೆಸರು ನೀರು, ಕೊತ್ತಂಬರಿ ಹಿಮ, ಎಳನೀರು ಸೇವಿಸಬೇಕು. ಇದರ ಜತೆಗೆ ಕೆಲವು ಔಷಧೋಪಚಾರ ಕೂಡ ಅಗತ್ಯ.
Subscribe to:
Post Comments (Atom)
No comments:
Post a Comment