Tuesday, July 3, 2012

ಸ್ತನ ಕ್ಯಾನ್ಸರ್ :

ಸ್ತನ ಕ್ಯಾನ್ಸರ್ : ಇದು ಹತ್ತು ಕಾಯಿಲೆಗಳ ಸಂಗಮ ಲಂಡನ್: ಸ್ತನ ಕ್ಯಾನ್ಸರ್ ಎಂಬುದು ಕೇವಲ ಒಂದು ಕಾಯಿಲೆ ಅಲ್ಲ, ಇದು ಹತ್ತು ವಿಭಿನ್ನ ಕಾಯಿಲೆಗಳ ಸಮಾಗಮ ಎಂದು ಹೊಸ ಮಹತ್ವಪೂರ್ಣ ಸಂಶೋಧನೆಯೊಂದು ಸಾಬೀತುಪಡಿಸಿದೆ. ಈ ಸಂಶೋಧನೆ ಈ ಮಾರಕ ರೋಗ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಬಲ್ಲದು ಎಂದು ಆಶಿಸಲಾಗಿದೆ. ಸುಮಾರು 2,000ಕ್ಕೂ ಹೆಚ್ಚು ಸ್ತನ ಕ್ಯಾನ್ಸರ್ ರೋಗಿಗಳನ್ನು ಅಧ್ಯಯನ ಮಾಡಿರುವ ಅಂತಾರಾಷ್ಟ್ರೀಯ ಸಂಶೋಧಕರ ತಂಡ ಈ ಮಹತ್ವಪೂರ್ಣ ವಿಷಯವನ್ನು ಹೊರಹಾಕಿದೆ. ರೋಗಿ ಯಾವ ಬಗೆಯ ಸ್ತನ ಕ್ಯಾನ್ಸರ್ನ ಬಾಧೆಗೆ ಒಳಗಾಗಿದ್ದಾರೆ ಎಂಬುದನ್ನು ವರ್ಗೀಕರಣ ಮಾಡುವ ಮೂಲಕ ಆತನಿಗೆ ಸರಿಯಾಗಿ ಒಪ್ಪುವ ಔಷಧ/ ಚಿಕಿತ್ಸೆಯನ್ನು ನಿಗದಿ ಮಾಡಬಹುದು ಎಂದು ಇವರು ಹೇಳುತ್ತಾರೆ. ಜತೆಗೆ ರೋಗಿ ಈ ರೋಗದಿಂದ ಮುಕ್ತರಾಗುವರೇ ಎಂಬುದನ್ನು ಸಹ ಕರಾರುವಾಕ್ ಆಗಿ ಹೇಳಬಹುದಾಗಿದೆ ಎಂದು ಇವರು ತಿಳಿಸಿದ್ದಾರೆ. ಈ ಸಂಶೋಧನೆಯ ಫಲಿತಾಂಶಗಳನ್ನು ಆಸ್ಪತ್ರೆಯಲ್ಲಿ ಪ್ರಯೋಗಿಸಲು(ರೋಗಿಗಳಿಗೆ ಇದರ ಲಾಭ ದೊರೆಯುವಂತಾಗಲು) ಕನಿಷ್ಠ ಮೂರು ವರ್ಷ ಬೇಕಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ನೇಚರ್ ನಿಯತಕಾಲಿಕೆಯಲ್ಲಿ ಸಂಶೋಧನೆಯ ವಿವರಗಳು ಪ್ರಕಟವಾಗಿವೆ. ಬ್ರಿಟನ್ ಮತ್ತು ಕೆನಡಾದ 2,000ಕ್ಕೂ ಹೆಚ್ಚು ರೋಗಿಗಳ ಘನೀಕೃತ ಮಾದರಿಗಳನ್ನು ವಿಶ್ಲೇಷಣೆಗೆ ಬಳಸಲಾಗಿತ್ತು. ಕ್ಯಾನ್ಸರ್ ಕೋಶಗಳ ವಂಶವಾಹಿಗಳ ಬಗ್ಗೆ ವಿಜ್ಞಾನಿಗಳು ಗಮನ ಹರಿಸಿದ್ದಾರೆ. ಯಾವ ವಂಶವಾಹಿ ವಿಕೃತಗೊಂಡಿದೆ, ಯಾವುದು ಅತಿಯಾಗಿ ಶ್ರಮಿಸುತ್ತಿದೆ ಮತ್ತು ಯಾವುದು ಕೆಲಸ ಸ್ಥಗಿತಗೊಳಿಸಿದೆ ಎಂಬುದನ್ನು ಪರಿಶೀಲಿಸಲಾಯಿತು. ಕ್ಯಾನ್ಸರ್ ಸೋಂಕಿನ ನಂತರ ಈ ಕೋಶಗಳು ವಿಭಿನ್ನ ಪ್ರಕಾರಗಳಲ್ಲಿ ಬದಲಾಗಿವೆ ಎಂಬುದನ್ನು ಕಂಡುಕೊಂಡ ವಿಜ್ಞಾನಿಗಳು ಇವನ್ನು 10 ವಿಭಾಗಗಳಲ್ಲಿ ವರ್ಗೀಕರಣ ಮಾಡಿದರು. ಪ್ರತ್ಯೇಕ ಗಡ್ಡೆಯ ವಂಶವಾಹಿ ಒಂದೇ ಗುಂಪಿಗೆ ಸೇರಿದ್ದು ಇದೇ ಮಾದರಿಯ ವಂಶವಾಹಿಯನ್ನು ಹೊಂದಿದ್ದ ಮಹಿಳೆಯರಲ್ಲಿ ಇದೇ ಮಾದರಿಯ ರೋಗಪ್ರತಿರೋಧಕ ಗುಣವನ್ನು ಹೊಂದಿದ್ದವು. ಸ್ತನ ಕ್ಯಾನ್ಸರ್ ಎಂಬುದು ಕೇವಲ ಒಂದು ರೋಗ ಅಲ್ಲ. ಬದಲಿಗೆ ಅವು ಹತ್ತು ವಿಭಿನ್ನ ರೋಗಗಳಾಗಿವೆ ಎಂದು ಮುಖ್ಯ ಸಂಶೋಧಕ ಪ್ರೊ. ಕಾರ್ಲೊಸ್ ಕ್ಯಾಲ್ಡಾಸ್ ಹೇಳಿದ್ದಾರೆ. ನಮ್ಮ ಈ ಸಂಶೋಧನೆ ನಂತರ ಭವಿಷ್ಯದಲ್ಲಿ ವೈದ್ಯರು, ಮಹಿಳೆ ಯಾವ ಬಗೆಯ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾಳೆ ಎಂಬುದನ್ನು ನಿರ್ಧರಿಸಿ, ಯಾವ ಬಗೆಯ ನಿರ್ದಿಷ್ಟ ಔಷಧ ಬಳಸಬೇಕು ಎಂಬ ತೀರ್ಮಾನಕ್ಕೆ ಬರುವುದು ಸುಲಭವಾಗುತ್ತದೆ. ಸದ್ಯ ಚಾಲ್ತಿಯಲ್ಲಿರುವ ವ್ಯವಸ್ಥೆಗಿಂತಲೂ ಇದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ಅವರು ಹೇಳುತ್ತಾರೆ. ಗರ್ಭಾವಸ್ಥೆ - ತಿನ್ನಲು ಗಡಿಬಿಡಿ ಬೇಡ ತಿಂದಷ್ಟು ಹೊಟ್ಟೆ ತುಂಬುವುದೇ ಇಲ್ಲ ಅಂದೆನಿಸುವ ಹೊತ್ತು. ಕಂಡಕಂಡಿದ್ದು ತಿಂದು ವಾಂತಿಯಾದರೂ ಅದೊಂಥರ ಸಂಭ್ರಮ. ಏಕೆಂದರೆ ಅದು ಬಸಿರಿನ ಆರಂಭದ ದಿನಗಳು. ಯಾವತ್ತೂ ಇಲ್ಲದ ಆಸೆಗಳು ರಾಶಿರಾಶಿಯಾಗಿ ಕಾಡುವುದು ಕೂಡ ಇದೇ ಸಮಯದಲ್ಲಿ. ತಿನ್ನುವ ವಿಷ್ಯದಲ್ಲಂತೂ ಮಣ್ಣಿನಿಂದ ಹಿಡಿದು ದಾರಿ ಬದಿಯಲ್ಲಿ ಮಾರಾಟವಾಗುವ ತಿನಿಸುಗಳನ್ನು ಬಿಡಬೇಕು ಅಂದೆನಿಸುವುದಿಲ್ಲ. ಗರ್ಭಾವಸ್ಥೆಯಲ್ಲಿ ದೇಹಕ್ಕೆ ಹೆಚ್ಚು ಆಹಾರ ಅತ್ಯಗತ್ಯ. ಹಾಗಂತ ಕಂಡಕಂಡಿದ್ದು ತಿಂದು ಹೊಟ್ಟೆ ತುಂಬಿಸಿಕೊಳ್ಳಬೇಕು ಅಂತಲ್ಲ, ಸಮತೋಲಿತ ಆಹಾರ ಪದ್ಧತಿ ಈ ಸಂದರ್ಭದಲ್ಲೂ ಅತ್ಯವಶ್ಯ. ಪೋಷಕಾಂಶ, ಜೀವಸತ್ವ ಮತ್ತು ಖನಿಜಾಂಶಗಳನ್ನು ಆಹಾರ ಪದಾರ್ಥಗಳ ಮೂಲಕ ಅಗತ್ಯವಾಗಿ ತೆಗೆದುಕೊಳ್ಳಲೇಬೇಕು. ತಿನ್ನಬಾರದ್ದು ಗರ್ಭಾವಸ್ಥೆಯಲ್ಲಿ ಕೆಲವು ತಿನ್ನಬಾರದ ಆಹಾರ ಪದಾರ್ಥಗಳಿವೆ. ಪಪ್ಪಾಯ, ಅನಾನಸ್, ಬಾಳೆ, ಮಾವು, ಮೀನು, ಮೊಟ್ಟೆ, ಶೇಂಗಾ, ಕಡಲೆ, ರಾಗಿ, ಬದನೆಕಾಯಿಗಳನ್ನು ತಿನ್ನಲೇಬಾರದು ಅಂತಾರೆ. ಇವುಗಳನ್ನು ತಿಂದರೆ ಗರ್ಭಪಾತ ಉಂಟಾಗಬಹುದು ಅನ್ನುವ ನಂಬಿಕೆ. ಹಿಂದಿನ ಕಾಲದಲ್ಲಿ ಗರ್ಭಪಾತ ಮಾಡಲಿಕ್ಕಾಗಿಯೇ ಕೆಲವು ಬೀಜಗಳನ್ನು ಬಳಸಲಾಗುತ್ತಿತ್ತು. ಆದ್ದರಿಂದ ಅಂಥದ್ದೊಂದು ನಂಬಿಕೆ ಉಳಿದು ಹೋಗಿದೆ. ಆದ್ರೂ ಎಳ್ಳು, ಶೇಂಗಾಗಳಂಥ ಬೀಜ ಹಾಗೂ ಒಣ ಹಣ್ಣುಗಳ ಸೇವನೆಗೆ ಹೆಚ್ಚು ಪ್ರಾಮುಖ್ಯ ನೀಡುವುದಿಲ್ಲ. ಏಕೆಂದರೆ ಇವು ಹೆಚ್ಚು ಉಷ್ಣ ಮಾಡುತ್ತವೆ. ಹಾಗಂತ ತಿನ್ನಲೇಬಾರದು ಅಂತೇನೂ ಅಲ್ಲ. ಆದ್ರೆ ಮೊದಲ ಮೂರು ತಿಂಗಳು ಉಷ್ಣ ಉಂಟು ಮಾಡುವಂಥ ಆಹಾರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದಲ್ಲ ಅಂತಾರೆ ವೈದ್ಯರು. ಸಮೀಕ್ಷೆಯೊಂದರ ಪ್ರಕಾರ, ಕೆಫೀನ್ ಅಂಶವಿರುವ ಪಾನೀಯಗಳನ್ನು ನಿತ್ಯ ಸೇವಿಸುವುದರಿಂದ ಹುಟ್ಟುವ ಮಗು ತೂಕ ಕಡಿಮೆಯಾಗಬಹುದು ಅಥವಾ ಜನನ ಸಂಬಂಧ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೀಗೆ ಮಾಡಿ.. * ಬೇಯಿಸದ ಅಥವಾ ಸರಿಯಾಗಿ ಬೇಯಿಸದ ಮಾಂಸ ತಿನ್ನಬೇಡಿ. ಸ್ವಚ್ಛವಿಲ್ಲದ ಅಂಗಡಿಗಳಿಂದ ಕೂಡ ಖರೀದಿಸಬೇಡಿ. ಅದು ಗರ್ಭಿಣಿಯ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರಬಹುದು. ಅದಲ್ಲದೆ ಗರ್ಭಪಾತದ ಅಪಾಯ ಕೂಡ ಎದುರಾಗಬಹುದು. * ಮಲಿನಗೊಂಡ ನೀರಿನಿಂದ ಮೀನು, ಏಡಿಗಳನ್ನು ಹಿಡಿದು ತಂದು ತಿನ್ನಬೇಡಿ. ನೀರಿನೊಳಗಿನ ರಾಸಾಯನಿಕ ಆಹಾರದ ಮೂಲಕ ನಿಮ್ಮ ದೇಹ ಸೇರಬಹುದು. * ಅಂಗಡಿಯಿಂದ ಖರೀದಿಸಿದ ಬೆಣ್ಣೆ ಅಥವಾ ಗಿಣ್ಣು ತಿನ್ನುವಾಗ ಎಚ್ಚರವಹಿಸಿ. ಇದರಲ್ಲಿರುವ ಲಿಸ್ಟೀರಿಯಾ ಎಂಬ ಬ್ಯಾಕ್ಟೀರಿಯಾ ಗರ್ಭಪಾತಕ್ಕೆ ಕಾರಣವಾಗಬಹುದು ಅಥವಾ ಸೋಂಕು ಉಂಟು ಮಾಡಬಹುದು. ಹೆಚ್ಚು ಸಮಯ ಪ್ರಿಜ್ನಲ್ಲಿಟ್ಟ ಮಾಂಸದಲ್ಲಿ ಕೂಡ ಲಿಸ್ಟೀರಿಯಾ ಇರುತ್ತದೆ. ಹೀಗಾಗಿ ಇದು ಕೂಡ ಗರ್ಭಾವಸ್ಥೆಯಲ್ಲಿ ಒಳ್ಳೆಯದಲ್ಲ. * ಕೆಫೀನ್ ಅಂಶವಿರುವ ಪದಾರ್ಥಗಳ ಸೇವನೆ ತಪ್ಪಿಸಿ. * ಧೂಮಪಾನ, ಮದ್ಯಪಾನದಿಂದ ದೂರ ಇರುವುದೇ ಒಳ್ಳೆಯದು. * ಸರಿಯಾಗಿ ತೊಳೆಯದ ಹಣ್ಣು, ತರಕಾರಿಗಳ ಸೇವನೆ ಬೇಡ.* ಹೆಚ್ಚು ಖಾರವಾದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. * ಸಾಧ್ಯವಾದಷ್ಟು ಮನೆಯಲ್ಲೇ ಶುದ್ಧ ವಾತಾವರಣದಲ್ಲಿ ತಯಾರಿಸಿದ ಆಹಾರ ಪದಾರ್ಥ ಸೇವಿಸಿ. * ಮೈದಾದಿಂದ ತಯಾರಿಸಿದ ಹಾಗೂ ಹೆಚ್ಚು ಸಕ್ಕರೆ ಅಂಶವಿರುವ ಪದಾರ್ಥ ಕೂಡ ಒಳ್ಳೆಯದಲ್ಲ.

No comments: