Tuesday, July 3, 2012

ಮಲಬದ್ಧತೆ ಮನೆ ಮದ್ದು

ಮಲಬದ್ಧತೆ ಮನೆ ಮದ್ದು ದೇಹವಷ್ಟೆ ಅಲ್ಲ, ಮನಸ್ಸು ಕೂಡ ಕಿರಿಕಿರಿ ಅನುಭವಿಸುವ ಹೊತ್ತದು. ಇಂಥದ್ದೇ ಅಂಥ ಹೇಳಿಕೊಳ್ಳಲಾರದ ವಿಚಿತ್ರ ವೇದನೆ ಹುಟ್ಟಿಸುವ ಮಲಬದ್ಧತೆ ಅನ್ನೋದು ಆಗಾಗ ಹಿಂಸೆ ನೀಡ್ತಾ ಇದೆಯಾ? ಅದಕ್ಕೆ ಅಂತ ಪದೇಪದೆ ವೈದ್ಯರ ಬಳಿ ಓಡಬೇಕಿಲ್ಲ. ಸಮೀಪದ ಔಷಧ ಅಂಗಡಿಯಲ್ಲಿ ವೈದ್ಯರ ಚೀಟಿ ತೋರಿಸದೆ ಕಂಡಕಂಡ ಔಷಧ ಅಥವಾ ಮಾತ್ರೆ ಖರೀದಿಸುವ ಅಗತ್ಯವಿಲ್ಲ. ಸಮತೋಲನ ಆಹಾರ ಪದ್ಧತಿ ಇಂಥದ್ದೊಂದು ಸಮಸ್ಯೆಯಿಂದ ಪಾರು ಮಾಡಬಹುದು. ಆದ್ರೂ ಮಲಬದ್ಧತೆ ನಿಮ್ಮನ್ನು ಕಾಡುತ್ತಿದ್ದರೆ ಮನೆಮದ್ದು ಇದ್ದೇ ಇದೆ. ಟ್ರೈ ಮಾಡಿ ನೋಡಿ. * ದಿನದಲ್ಲಿ ಕೆಲವು ಬಾರಿ ಒಂದು ಚಮಚದಂತೆ ಜೇನುತುಪ್ಪ ಸೇವಿಸುತ್ತಿರಿ * ಆಗಾಗ ಬಾಳೆಹಣ್ಣು ತಿನ್ನಿ. * ಸಾಧ್ಯವಾದಷ್ಟು ನೀರು ಕುಡಿಯಿರಿ. * ನಾರಿನಾಂಶವಿರುವ ತರಕಾರಿ ಸೇವಿಸಿ. * ಮಾವಿನ ಹಣ್ಣು ಕೂಡ ಮಲಬದ್ಧತೆಗೆ ಪರಿಣಾಮಕಾರಿ. * ಅರ್ಧ ಕಪ್ ಕ್ಯಾಬೀಜ್ ಜ್ಯೂಸ್ ಅನ್ನು ದಿನದಲ್ಲಿ ಎರಡು ಬಾರಿ ಸೇವಿಸಿ. * ಹಾಲಿನ ಜತೆ ಖರ್ಚಿರ ಸೇರಿಸಿಕೊಂಡು ಕುಡಿಯಿರಿ. ಲಿವ್ಇನ್ ರಿಲೇಶನ್: ಅಗತ್ಯವೆ? ಅನಿವಾರ್ಯವೆ? ಶ್ರೀದೇವಿ ಕಳಸದ ಇಪ್ಪತ್ತೆಂಟರ ಸಾಫ್ಟ್ವೇರ್ ಎಂಜಿನಿಯರ್ ಮುಂದಿರುವುದು ಕಂಪ್ಯೂಟರ್ ಟೇಬಲ್ ಅಲ್ಲ. ಕೌನ್ಸೆಲಿಂಗ್ ಟೇಬಲ್. ಬಿಗಿದ ಗಂಟಲು ಸಡಿಲಗೊಂಡು, ಕಣ್ಣೀರ ಸುರಿವು ನಿಂತಾಗ ನಿಧಾನ ಮಾತು ಹೊರಡಿತು. 'ಆಕೆ ಬಡಕುಟುಂಬದಿಂದ ಬಂದವಳು. ಕಷ್ಟ-ನಷ್ಟ ಅನುಭವಿಸಿದವಳಿಗೆ ಸತ್ಯ ಮತ್ತು ಪ್ರೀತಿಯ ಅರಿವಿರುತ್ತದೆ ಎಂದುಕೊಂಡೆ. ಆದರೆ ಹಾಗಾಗಲಿಲ್ಲ'. ಅವನ ಮುಟ್ಟಿಗೆಗಳು ಬಿಗಿಗೊಂಡವು... ಆಫೀಸಿಗೆ ಹೋಗೋವಾಗ ಸಣ್ಣ ರಸ್ತೆ ಅಪಘಾತವಾಯಿತು. ವಾರಗಟ್ಟಲೆ ಆಸ್ಪತ್ರೆ ವಾಸ. ದೇಹದ ಗಾಯಕ್ಕೆ, ಮನಸಿಗೆ ನಿಲುಕಿದವಳು ಅಸ್ಸಾಂ ಮೂಲದ ನರ್ಸ್ ಬೊಂಧಿತಾ. ಎರಡೇ ತಿಂಗಳಲ್ಲಿ ವಯಸ್ಸಿನ ಕಾವಿಗೂ ತಂಪಾಗಿಬಿಟ್ಟಳು. ಲಿವ್ಇನ್ ರಿಲೇಶನ್ಗೆ ಮನಸ್ಸಿನೊಳಗೇ ಸಹಿ ಹಾಕಿಕೊಂಡರು. ಆರು ತಿಂಗಳುತನಕ ಎಲ್ಲವೂ ವಸಂತಪರ್ವವೇ. ಇವನಿಗೆ ಮನೆಯಲ್ಲಿ ಮದುವೆಗಾಗಿ ಒತ್ತಾಯಿಸತೊಡಗಿದಾಗ ಅವಳಲ್ಲಿ ಪ್ರಸ್ತಾಪಿಸಿದ. ಆದರೆ ಅಷ್ಟರೊಳಗೇ ಆಕೆ ತನ್ನೊಳಗಿಲ್ಲ ಎಂಬ ಕಹಿವಾಸನೆ ಇವನಿಗೆ ಬಡಿಯತೊಡಗಿತು. ಅವಳ ಜಾಡನ್ನು ಹಿಂಬಾಲಿಸಿದರೆ ಆಕೆ ಬೇರೊಬ್ಬನ ಸ್ನೇಹ ಮತ್ತು ಸಂಬಂಧಕ್ಕೆ ಬಿದ್ದಿರುವುದು ತಿಳಿಯಿತು. ಆದರೂ ಅವ ಅವಳಲ್ಲಿ ಮದುವೆ ಪ್ರಸ್ತಾಪ ಮಾಡಿದ. ಆಗ ಆಕೆ ತನ್ನ ತಂದೆ-ತಾಯಿಗಳ ಒಪ್ಪಿಗೆ ಬೇಕು ಎಂದಳು. ಈ ಮಧ್ಯೆ ಸ್ವಲ್ಪ ದಿನಗಳ ಮಟ್ಟಿಗೆ ರಜೆ ಹಾಕಿ ಊರಿಗೂ ಹೊರಟುಹೋದಳು. ಅವನ ಕರೆಗಳನ್ನು ಸ್ವೀಕರಿಸದ ಆಕೆಯನ್ನು ಭೇಟಿ ಮಾಡಲು ಅವ ಅವಳ ಊರಿಗೇ ಹೊರಟ... ಅಸ್ಸಾಂನ ದಿಬ್ರುಗಢ್ ಸಮೀಪದ ಹಳ್ಳಿಗೆ ಹೋದ ಅವನನ್ನು ಆ ಡಿಸೆಂಬರ್ ಚಳಿಯೂ ನಡುಗಿಸಿರಲಿಲ್ಲ. ಮದುವೆಯನ್ನೋ ದೃಢನಿರ್ಧಾರಕ್ಕೆ ಅವನ ಮನಸ್ಸು , ಮೆದುಳು ಸಿದ್ಧಗೊಂಡಂತಿದ್ದವು... ಹೇಗೋ ಅವಳ ಮನೆ ಪತ್ತೆಮಾಡಿದ. ಅವಳೊಂದಿಗೆ ಮತ್ತು ಅವಳ ಮನೆಯವರೊಂದಿಗೆ ಮಾತನಾಡಿ ಮದುವೆ ನಿರ್ಧಾರಕ್ಕೆ ಬರಬೇಕೆಂದುಕೊಂಡವನಿಗೆ ಬುಟ್ಟಿ ಮಣ್ಣು ಒಮ್ಮೆಲೆ ಕಣ್ಣಿಗೆ ತೂರಿದಂತಾಗಿತ್ತು. ಮದುವೆಯಾಗಲು ಬಂದವನನ್ನು ಹೊಡೆದು, ಅವನ ವಿರುದ್ಧವೇ ಕೇಸ್ ದಾಖಲಿಸಲಾಯಿತು. ಆದರೆ ಹಣವುಳ್ಳ ಇವ ಮುಚ್ಚಳಿಕೆಯ ಜೊತೆ ಪೊಲೀಸರಿಗೆ ಕೈ ಬೆಚ್ಚಗೆ ಮಾಡಿ ಬೆಂಗಳೂರಿಗೆ ಬಂದು ಬದುಕಿಕೊಂಡ. ಆದರೆ ಅವಳ ಹಂಬಲ ಇವನನ್ನು ಬಿಟ್ಟಿಲ್ಲ... ಇವರೇನು ಹೇಳುತ್ತಾರೆ? 'ಈ ಯುವಕ ಒಂದೇ ಸಲ ನನ್ನ ಬಳಿ ಬಂದಿದ್ದು. ಅವನು ಮಾತಿನೊಂದಿಗೆ ಅವನ ದೇಹಭಾಷೆಯನ್ನೂ ಗಮನಿಸುತ್ತಿದ್ದೆ. ಅವನದು ಪ್ರಾಮಾಣಿಕ ಪ್ರೀತಿ ಎನ್ನಿಸಿತು. ಬಡತನದ ಹಿನ್ನೆಲೆಯಿಂದ ಬಂದ ಅವನ ಸಂಗಾತಿಗೆ ಮದುವೆ ಬೇಡ ಆದರೆ, ಭೌತಿಕ ಸುಖ ಬೇಕಿತ್ತು. ಸುಮಾರು ಒಂದೂವರೆ ವರ್ಷ ಒಟ್ಟಿಗೆ ವಾಸಿಸಿದ ಅವರಲ್ಲಿ ಹೊಂದಾಣಿಕೆ, ವಿಶ್ವಾಸ ಚಿಗುರಲೇ ಇಲ್ಲ. ವರ್ಷದೊಳಗೆ ಮೈ ಕಾವು ಕರಗಿತು. ಆಕೆ ಮತ್ತೊಬ್ಬನ ಸೆಳೆತ, ಸಂಬಂಧ ಹಣಕ್ಕೆ ಬಿದ್ದಳು. ಎಲ್ಲ ವಿಷಯಗಳಲ್ಲೂ ಇವನಿಗಿಂತ ಚೆನ್ನಾಗಿರುವ ಜೊತೆಗಾರ ಸಿಕ್ಕಿದ್ದಾನೆ ಎಂದು ಅವಳಿಗೆ ಅನ್ನಿಸತೊಡಗಿತು... 'ಯಾವುದೇ ಸಂಬಂಧದ ಮಧ್ಯೆ ವಿಶ್ವಾಸ ಎನ್ನುವುದು ಮೊಳಕೆಯೊಡೆಯದಿದ್ದರೆ ಅದು ಅಲ್ಪಾಯುಷಿ. ಈಗ ಇಬರಿಬ್ಬರ ಪ್ರಕರಣದಲ್ಲೂ ಹೀಗೇ ಆಗಿರುವುದು. ನಮ್ಮ ದೇಶದಲ್ಲಿ ಈ ಲಿವ್ಇನ್ ರಿಲೇಶನ್ ಇನ್ನೂ ಶೈಶವಾವಸ್ಥೆಯಲ್ಲೇ ಇದೆ. ಕೋರ್ಟ್ ಒಪ್ಪಿದರೂ ಸಮಾಜ ಒಪ್ಪುತ್ತಿಲ್ಲ. ಸಮಾಜ ಒಪ್ಪಲಿ ಬಿಡಲಿ ಆದರೆ ಲಿವ್ಇನ್ ರಿಲೇಷನ್ನಲ್ಲಿದ್ದವರಿಗೆ ಸ್ಥಿರತೆ, ಹೊಂದಾಣಿಕೆ, ವಿಶ್ವಾಸದ ಕೊರತೆಯಂತೂ ಇದ್ದೇ ಇದೆ ಎನ್ನುವುದಕ್ಕೆ ಇಂಥ ತುಂಡರಿಸಿದ ನೂರಾರು ಸಂಬಂಧಗಳು ಸಾಕ್ಷಿ' -ಆಪ್ತಸಲಹೆಗಾರ, ದೇವೇಂದ್ರ ಎಕ್ಕುಂಡಿ. ಯಾವುದೇ ಒಂದು ಪದ್ಧತಿ ಸಮಾಜದ ಮುಖ್ಯವಾಹಿನಿಯೊಳಗೆ ಬೆರೆಯುವ ಮೊದಲು ಅದು ಗುಪ್ತಗಾಮಿನಿಯಂತೆ ಹರಿಯುತ್ತಿರುತ್ತದೆ. ಯಾವಾಗ ಅದು ಸಾಮಾಜಿಕವಾಗಿ ನೇತ್ಯಾತ್ಮಕ ದೃಷ್ಟಿಯಿಂದ ಬಿಂಬಿತವಾಗುತ್ತದೋ ಆಗ ಚರ್ಚೆಗೆ ಗ್ರಾಸವಾಗುತ್ತದೆ. ಈ ಹೊತ್ತಿಗೆ ಮೊನ್ನೆಮೊನ್ನೆ ನಡೆದ ಪ್ರಕರಣ ನೆನಪಾಗುತ್ತಿದೆ. ದೆಹಲಿಯಲ್ಲಿ ವಾಸಿಸುತ್ತಿದ್ದ ಮಿಜೋರಾಂನ ಮಹಿಳೆ ನೈಜಿರಿಯಾ ಮೂಲದ ಲಿವಿಂಗ್ ಪಾರ್ಟನರ್ನನ್ನು ಕೊಲೆ ಮಾಡಿದ್ದಾಳೆ. ಕೊಲೆ ನಡೆದಿರುವುದು ಹಣದ ವಿಷಯಕ್ಕಾಗಿ. ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಸುರೀಂದರ್ ಎಸ್. ರಾಠಿ ಈ ಸಂದರ್ಭದಲ್ಲಿ ನೀಡಿದ ಅಭಿಪ್ರಾಯ ಹೀಗಿದೆ; ಇದು ನಗರಪ್ರದೇಶದವರು ಕಂಡುಕೊಂಡ ಅನೈತಿಕ ಚಾಳಿ'. ಅಲ್ಲಿ ಹರಿದು ಇಲ್ಲಿ ಸೇರಿದ್ದು ... ಪಾಶ್ಚಾತ್ಯದೇಶದ ಸಾಮ್ರಾಜ್ಯಶಾಹಿಗಳು ವಸಾಹತು ಸ್ಥಾಪನೆಗಾಗಿ ದೊಡ್ಡ ಪ್ರಮಾಣದಲ್ಲೇ ದಂಡೆತ್ತಿ ಹೋಗುತ್ತಿದ್ದ ಕಾಲ. ಯುದ್ಧಗಳಲ್ಲಿ ಭಾಗವಹಿಸುವವರೆಲ್ಲರೂ ಹದಿನೆಂಟರಿಂದ ಐವತ್ತರೊಳಗಿನವರು. ತಿಂಗಳುಗಳ ಗಟ್ಟಲೆ ವಲಸೆ ಹೋಗುತ್ತಿದ್ದ ಸಂದರ್ಭ ಬಂದಾಗ ತಮ್ಮ ದೈನಂದಿನ ಅಗತ್ಯ ಪೂರೈಕೆಗೆ ಕಂಡುಕೊಂಡ ಮಾರ್ಗವೇ ಮುಕ್ತ ಲೈಂಗಿಕ ಪದ್ಧತಿ ಮತ್ತು ಅದರ ಮುಂದುವರಿದ ಭಾಗ ಲಿವಿಂಗ್ ರಿಲೇಶನ್. ಜವಾಬ್ದಾರಿ, ಚೌಕಟ್ಟಿಲ್ಲದೇ ಸಾಂದರ್ಭಿಕವಾಗಿ ಅಗತ್ಯ ಪೂರೈಸಿಕೊಂಡು ಹೋಗುವ ಸರಳ ಮಾರ್ಗದಂತೆ ಇದು ಆಗ ಕಂಡಿದ್ದು ನಿಜ. ಆದರೆ ಮುಂದುವರಿದ ಅದು ಸಾಮಾಜಿಕ ಅಂಗವಾಗಿ, ಹಕ್ಕು-ಬೇಡಿಕೆಗಳನ್ನು ಸಮರ್ಥಿಸಿಕೊಳ್ಳುವಷ್ಟು ವಿಸ್ತೃತತೆಯನ್ನೂ ಪಡೆದುಕೊಂಡಿದೆ. ಮುಕ್ತ ಶಿಕ್ಷಣ, ಮುಕ್ತ ಆರ್ಥಿಕ ವ್ಯವಸ್ಥೆ, ಔದ್ಯೋಗಿಕ ಕ್ರಾಂತಿಗಳ ಕೊಡುಗೆ ಎಂದೂ ಹೇಳಬಹುದು. ಅಮೆರಿಕದಂಥ ರಾಷ್ಟ್ರಗಳಲ್ಲಿ ಕೆಲವರು ಜೀವನಾಂಶಕ್ಕಾಗಿಯೇ ಮದುವೆಯನ್ನು ವಿಚ್ಛೇದನದ ಕೊಕ್ಕೆಗೆ ಹಾಕುವುದನ್ನು ಕಸುಬಾಗಿಸಿಕೊಂಡಾಗ ಲಿವಿನ್ ರಿಲೇಶನ್ ಸುಲಭೋಪಾಯವೆನಿಸಿತು. ಸಾಮಾಜಿಕ ಪದ್ಧತಿಗಳ ಬಗ್ಗೆ ಅಗೌರವ ತೋರುವವರು, ಮುಕ್ತ ಆರ್ಥಿಕತೆ ಬೆಂಬಲಿಸುವವರು, ಅನಿವಾರ್ಯತೆಗೆ ಒತ್ತು ಕೊಡದ ಕೆಲವರಿಂದ ಈ ಪದ್ಧತಿ ನಮ್ಮ ಮಣ್ಣಿನೊಳಗು ಇಳಿಯತೊಡಗಿತು. ಆರು ತಿಂಗಳು ಇಲ್ಲಿದ್ದು, ಇನ್ನಾರು ತಿಂಗಳು ವಿದೇಶದಲ್ಲಿರುವ ಕೆಲ ಮಂದಿಗೆ ಕಾನೂನಿನ ಚೌಕಟ್ಟಿಲ್ಲದೇ ಬದುಕಲು ಸುಖಮಾರ್ಗವಾಯಿತು. ಈಗ ಇದು ಉನ್ನತ ಶಿಕ್ಷಣಕ್ಕೆಂದು ಪರರಾಜ್ಯ-ದೇಶಗಳಿಂದ ಬರುವ ವಿದ್ಯಾರ್ಥಿಗಳ ತಾತ್ಕಾಲಿಕ ಮೋಜು-ಮೇಜವಾನಿಗೂ ಸರಹದ್ದಿಲ್ಲದ ಮೈದಾನವೂ ಆಗಿದೆ. ಲಿವ್ಇನ್ ರಿಲೇಶನ್ಗೆ ಕೋರ್ಟ್ ಅಸ್ತು ಎನ್ನುವತನಕ ಇದು ಅಪರಾಧವೆಂಬಂತೆ ಪರಿಗಣಿತವಾಗಿತ್ತು. ಸಂಪ್ರದಾಯವಾದಿಗಳ ಮತ್ತು ವಿಚಾರವಾದಿಗಳ ನಡುವಿನ ಈ ಚರ್ಚೆ ಬೂದಿಯೊಳಗಿನ ಕೆಂಡದಂತೆ; ಗಾಳಿ ಬೀಸಿದಾಗ ಕಿಡಿ, ಇಲ್ಲದಿದ್ದರೆ ಇಲ್ಲ.

No comments: