Tuesday, July 3, 2012
ಭಾವ-ಬುದ್ಧಿ-ಮನಕೊಪ್ಪುವ ಸಖ್ಯ...
ಭಾವ-ಬುದ್ಧಿ-ಮನಕೊಪ್ಪುವ ಸಖ್ಯ... ಲಿವ್ಇನ್ ರಿಲೇಶನ್ ಎನ್ನುವುದು ಅರ್ಥೇಚ, ಕಾಮೇಚ... ಎನ್ನುವುದಕ್ಕಷ್ಟೇ ಸೀಮಿತವಾಗಿದೆ ಎನ್ನುವುದು ಸಾಕ್ಷ್ಯಗಳ ಮೂಲಕ ಸ್ಪಷ್ಟವಾಗುತ್ತಿದ್ದರೂ ಎಷ್ಟೋ ಜೋಡಿಗಳು ಇದಕ್ಕೆ ಅಪವಾದವೆಂಬಂತಿದ್ದಾರೆ. ಸಿನಿಮಾ, ಸಂಗೀತ, ಕಲೆ ಹೀಗೆ ಮುಂತಾದ ರಂಗಗಳಲ್ಲಿರುವವರು ಈ ಲಿವ್ಇನ್ ರಿಲೇಶನ್ಗೆ ನೀಡುವ 'ವ್ಯಾಖ್ಯಾನ' ಅವರವರ ವೈಯಕ್ತಿಕ; ಇದು ಭಾವ-ಬುದ್ಧಿಗೆ ಸಂಬಂಧಿಸಿದ ಮತ್ತು ಮನಕ್ಕೊಪ್ಪುವ ಸಖ್ಯ. ಬೆಂಗಳೂರಿನ ಅರ್ಚನಾ ಕಥಕ್ ಕಲಾವಿದೆ.
'ನನಗೀಗ ಮೂವತ್ಮೂರು. ಇಪ್ಪತ್ತು ವರ್ಷದವಳಿದ್ದಾಗಲೇ ನನಗನ್ನಿಸತೊಡಗಿತು... ಮದುವೆ ಶಾಸ್ತ್ರದ ಮೂಲಕ ನಾನು ಯಾರ ನಿಯಂತ್ರಣದೊಳಗೂ ಇರಬಾರದು. ಆಡಂಬರ, ಪ್ರತಿಷ್ಠೆಗೆ ಪಲ್ಲಂಗದಂತಾಗಿರುವ ಈ ಮದುವೆ ಹಣ ಅಳೆಯುವ ಯಂತ್ರದಂತೆ. ಸಂಬಂಧದಲ್ಲಿ ಮನಸುಗಳು ಒಂದಾಗುವುದು ಮುಖ್ಯ. ಆ ಮೂಲಕ ಎರಡೂ ಕುಟುಂಬಗಳು...
'ಮೂರು ವರ್ಷದ ಕೆಳಗೆ ಜೊತೆಗಾರ ಸಿಕ್ಕಿದ್ದು, ಗ್ರಾಫಿಕ್ ಕಲಾವಿದ. ಉತ್ತರದ ಕಡೆಯವನು. ಕಷ್ಟ-ಸುಖಗಳುಂಡವನು. ಒಟ್ಟಾಗಿ ಬಾಳ್ವೆ ನಡೆಸಲು ಬೇಕಾಗಿರುವ ವೌಲ್ಯಗಳು ಏನು ಎನ್ನುವುದರ ಅರಿವು ಇಬ್ಬರಲ್ಲೂ ಇದೆ.ಜೊತೆಯಾಗಿ ಬಾಳಲು ಬೇಕಿರುವುದು ದೊಡ್ಡ ಬಂಗಲೆ, ಕಾರು ಅಲ್ಲ. ಆಡಂಬರದ ಜೀವನಶೈಲಿಯಲ್ಲ. ಪರಸ್ಪರ ಗೌರವ. ನಮ್ಮನಮ್ಮ ಆಶಯಕ್ಕೆ ತಕ್ಕಂತೆ ಸಣ್ಣ-ಪುಟ್ಟ ತ್ಯಾಗಗಳು, ಜವಾಬ್ದಾರಿ ಹಂಚಿಕೊಳ್ಳುವಿಕೆ... ನಮ್ಮಲ್ಲಿದೆ.
'ಮಕ್ಕಳಲ್ಲಿ ಒಂದು ವಯಸ್ಸಿನ ನಂತರ ಅವರವರವ ಸ್ವಾತಂತ್ರ, ಆಯ್ಕೆ ಅವರದೇ. ಒಂದು ಹಂತದವರೆಗೆ ಮೂಲ ಸಂಸ್ಕಾರ ಧಾರೆಯೆರೆದು ಸುಮ್ಮನಾಗಿಬಿಡಬೇಕು. ನಂತರ ಪ್ರಕೃತಿಯೇ ಅವರನ್ನು ಸಲಹುತ್ತದೆ. ನಮ್ಮಿಬ್ಬರ ವಿಷಯವಾಗಿ ಸಿಂಪಲ್ ಆಗಿಯಾದರೂ ಮದುವೆ ಶಾಸ್ತ್ರ ಮುಗಿಸೋಣ ಎಂದು ಅಮ್ಮ ಮೊದಮೊದಲು ಹೇಳುತ್ತಿದ್ದರು. ಆದರೆ ಈಗವರು ನನ್ನ ಜೊತೆಗಾರನನ್ನು ಅಳಿಯನಂತೆ ಸ್ವೀಕರಿಸಿದ್ದಾರೆ.'
ಅಗತ್ಯ ಪೂರೈಕೆ ಅಗತ್ಯಗಳ ಪೂರೈಕೆ ಮನುಷ್ಯರಲ್ಲೂ ಇರುತ್ತದೆ, ಪ್ರಾಣಿಗಳಲ್ಲೂ ಇರುತ್ತದೆ. ಮನುಷ್ಯ ವ್ಯಕ್ತಿವಿಕಾಸ ಪ್ರಕ್ರಿಯೆಗೆ ಒಳಪಡುತ್ತಾನೆ. ಪ್ರಾಣಿಗಳಲ್ಲಿ ಅದಿಲ್ಲ. ಆದರೂ ಪ್ರಾಣಿಗಳ ಲೈಂಗಿಕ ತೃಷೆ ನಿರ್ದಿಷ್ಟ ಋತುಮಾನಕ್ಕೆ ಒಳಪಡುತ್ತದೆ. ಆದ್ದರಿಂದಲೇ 'ಅಗತ್ಯ' ಎನ್ನುವುದು ಅವುಗಳಲ್ಲೂ ನಿಯಂತ್ರಣಕ್ಕೊಳಪಟ್ಟಿದೆ. ಆದರೆ ಮನುಷ್ಯನ ವಿಕಾಸಕ್ಕೆ ಅವನ ಸೃಜನಶೀಲತೆಯೇ ಸಾಕ್ಷಿ. ಅದರ ಅನುಭವಗಳೂ ಹೊಸತು. ಹಾಗೆಯೇ ಈ ಲಿವ್ಇನ್ ರಿಲೇಶನ್ನ ಕೇವಲ ಅಗತ್ಯ ಪೂರೈಸುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಮನುಷ್ಯನ ಬದುಕಿಗೆ ಅರ್ಥ ಕೊಡುವಲ್ಲಿ ಸೋಲುತ್ತದೆ. ಮಾನವೀಯ ಮೂಲೋದ್ದೇಶಗಳಿಗೆ ಧಕ್ಕೆ ತರುವ ಸಾಧ್ಯತೆಗಳೇ ಹೆಚ್ಚು.
ನಾವು ಕಟ್ಟಿಕೊಂಡ ನಿಯಮದ ವಿರುದ್ಧವಾಗಿ ಏನೇ ನಡೆದರೂ ಧಕ್ಕೆ ಕಟ್ಟಿಟ್ಟದ್ದೇ. ಉದಾಹರಣೆಗೆ ಲಿವ್ ಇನ್ ಸಂಬಂಧದಲ್ಲಿರುವ ಮತ್ತು ಬಾಂಧವ್ಯವೇ ಗಟ್ಟಿಗೊಳ್ಳದ ಜೋಡಿಗೆ ಅಕಸ್ಮಾತ್ ಮಗು ಹುಟ್ಟಿದರೆ ಏನು ಮಾಡಬೇಕು? ಆಗ ಅವರಿಗೆದುರಾಗುವುದು ಸಂಕಷ್ಟವೇ ಅಲ್ಲವೆ? ಅಗತ್ಯಗಳ ಪೂರೈಕೆಗೆ ಅನ್ಯಮಾರ್ಗವಿಲ್ಲದೆ ಅನಾದಿ ಕಾಲದಲ್ಲಿ ಕಂಡುಕೊಂಡ ಈ ಪದ್ಧತಿಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುವುದು ಪ್ರಸ್ತುತವೆ? -ಡಾ. ಎಂ.ಎಸ್. ತಿಮ್ಮಪ್ಪ, ಮನೋವಿಜ್ಞಾನಿ.
ಜೀವನ ಸಂಜೀವನ ಎರಡು ಜೀವಗಳು ಒಂದಾಗಿ ಬದುಕುವುದು ಕಲೆಯೂ; ಧ್ಯಾನವೂ. ಒಟ್ಟಾಗಿ ಬದುಕಲು ಬೇಕಿರುವುದು ಬದ್ಧತೆ. ಆ ಬದ್ಧತೆ ಕೇವಲ 'ಮದುವೆ' ಎನ್ನುವ ಶಾಸ್ತ್ರದಿಂದ ಬರುವಂಥದ್ದಲ್ಲ. ಪರಸ್ಪರ ತಿಳಿವಳಿಕೆ, ಹೊಂದಾಣಿಕೆ, ಬುದ್ಧಿ-ಭಾವದ ಮಟ್ಟಗಳನ್ನು ಅವಲಂಬಿಸಿರುತ್ತದೆ. ಯಾವುದೇ ಸಂಬಂಧ ಸಣ್ಣ-ಪುಟ್ಟ ತ್ಯಾಗಗಳೊಂದಿಗೆ ವ್ಯಕ್ತಿ ಸ್ವಾತಂತ್ರ್ಯದ ತೆಳುಗೆರೆ ಉಳಿಸಿಕೊಂಡು ಸಾಗಬೇಕು. ಲೈಂಗಿಕತೆಯೇ ಅಳತೆಗೋಲಲ್ಲ. ಬೇರೆ ಬೇರೆ ಸಂಸ್ಕಾರಗಳಿಂದ ಪೋಷಿಸಲ್ಪಟ್ಟ ಮನಸ್ಸುಗಳು ಒಟ್ಟಾಗಿ ವಾಸಿಸಲು, ಅರ್ಥ ಮಾಡಿಕೊಳ್ಳಲು ಸಮಯ ಬೇಕು. ಇದ್ದಕ್ಕಿದ್ದಂತೆ ನಿರ್ಧಾರ ತೆಗೆದುಕೊಂಡು ಹತಾಶರಾಗುವುದು, ಬೇರೊಬ್ಬ ಸಂಗಾತಿ ಅರಸಿ ಹೋಗುವುದು ಸಲ್ಲದು. ಆಯ್ಕೆ ಸಂದರ್ಭದಲ್ಲೇ ಮನಸ್ಸು ಜಾಗೃತವಾಗಿದ್ದರೆ ಎಲ್ಲವೂ ಸುರಳಿತ. ಇದು ಪ್ರೀತಿಯೋ, ಆಕರ್ಷಣೆಯೋ, ಮೋಹವೋ ಎಂಬುದನ್ನು ನಿರ್ಧರಿಸುವಷ್ಟು ಸಾಮರ್ಥ್ಯ ನಿಮ್ಮದಾಗಿದ್ದರೆ ಜೀವನ ಸಂಜೀವನ.
ಜೀವನ ಸಂಜೀವನ ಶ್ರೀದೇವಿ ಅಂಬೆಕಲ್ಲು
ವಿವಾಹ ಅನ್ನೋದು ಗಂಡು-ಹೆಣ್ಣು ಇಬ್ಬರ ಜೀವನಕ್ಕೆ ಒಂದು ಹೊಸ ತಿರುವು ತಂದುಕೊಡುತ್ತದೆ. ಗಂಡು ಹೆಣ್ಣುಗಳಿಬ್ಬರೂ ಜೀವನದ ಪ್ರತಿ ಹೆಜ್ಜೆಗೂ ಜತೆಯಾಗುತ್ತೇವೆ ಎಂದು ಅಗ್ನಿಸಾಕ್ಷಿಯಾಗಿ ಮದುವೆಯಾಗಿರುತ್ತಾರೆ. ಆದರೂ ಕೆಲವೊಮ್ಮೆ ಮದುವೆಯಾಗಿ ಒಂದು ವಾರದಲ್ಲೇ ಇಬ್ಬರ ನಡುವೆ ವಿರಸ ಮೂಡುತ್ತದೆ. ಕಾರಣ ತುಂಬಾ ಸಿಂಪಲ್ ಆಗಿರುತ್ತದೆ. ಇಬ್ಬರ ನಡುವೆ ಸಣ್ಣ ಭಿನ್ನಾಭಿಪ್ರಾಯ ಡಿವೋರ್ಸ್ವರೆಗೆ ಬಂದು ನಿಂತಿರುತ್ತದೆ. ಹೊಸದಾಗಿ ಮದುವೆಯಾದ ಇಬ್ಬರೂ ಹೊರಗಡೆ ಹೋಗಿ ಜಾಬ್ ಮಾಡುವವರು. ಇಬ್ಬರಿಗೂ ಕೆಲಸದ ಒತ್ತಡ. ಇಬ್ಬರಿಗೂ ಜತೆಗೆ ಕಳೆಯುವುದಕ್ಕೆ ಸಮಯ ಸಾಲುತ್ತಿಲ್ಲ. ಮದುವೆಯಾಗೋದಕ್ಕೆ ಮೊದಲು ನನ್ನ ಗಂಡ ಅಷ್ಟೊಂದು ಮಾತಾಡ್ತಾ ಇದ್ದ, ತಲೆನೋವು ಅಂದ್ರೆ ಸಾಕು ಹಾಗೆ ಮಾಡು ಹೀಗೆ ಮಾಡು ಅಂತಿದ್ದವನು ಈಗೀಗ ಬದಲಾಗಿದ್ದಾನೆ. ಒಂದಷ್ಟು ಹೊತ್ತು ನನ್ನ ಜತೆ ಕಳೆಯುವುದಕ್ಕು ಸಮಯ ಇಲ್ಲ ಅವನಿಗೆ . ಮನೆಗೆ ಬಂದರೂ ಆಫೀಸ್ ಕೆಲಸದಲ್ಲೇ ಬ್ಯುಸಿಯಾಗಿರುತ್ತಾನೆ. ಅದರಿಂದ ಅವಳು ಬೇಸರಗೊಳ್ಳುತ್ತಾಳೆ. ಗಂಡನ ಬಗ್ಗೆ ಅನುಮಾನ ಶುರುವಾಗತ್ತದೆ. ಅಷ್ಟೇ ಅಲ್ಲ. ಸಾಮಾನ್ಯವಾಗಿ ಗಂಡ ಹೆಂಡತಿ ಮಧ್ಯೆ ಹಣಕಾಸಿನ ವಿಷಯದಲ್ಲಿ ಆಗಾಗ ಜಗಳ ಜಾಸ್ತಿ. ಇಂದು ಸಣ್ಣ ಪುಟ್ಟ ವಿಷಯಗಳಿಗೆ ದಾಂಪತ್ಯ ಬಹು ಬೇಗ ಹಳಸಿ ಹೋಗಿ ಡಿವೋರ್ಸ್ನಲ್ಲಿ ಕೊನೆಗೊಳ್ಳುತ್ತಿದೆ.
ಬದುಕಿನ ಎಲ್ಲ ಜಂಜಾಟಗಳಿಂದ ಮುಕ್ತಿ ಪಡೆದು ನೆಮ್ಮದಿಯ ದಾಂಪತ್ಯ ನಮ್ಮದಾಗಿಸಿಕೊಳ್ಳಬೇಕಾದರೆ ಹೊಂದಾಣಿಕೆ ಮುಖ್ಯ. ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಆರ್ಥಿಕ ಸಮಸ್ಯೆಗಳಿಲ್ಲದೆ ಸಾಮರಸ್ಯದ ಬದುಕು ನಿಮ್ಮದಾಗಿಸಿಕೊಳ್ಳಬೇಕೆಂದಿದ್ದರೆ ಪ್ರಿ ಪ್ಲಾನ್ ಮಾಡಿಕೊಳ್ಳುವುದು ಮುಖ್ಯ. ಇಷ್ಟು ಕಾಲ ಒಟ್ಟಿಗಿದ್ದರೇನು ಅರಿತೆವೇನು ಬೆರೆತೆವೇನು? ಕಡಲ ದೋಣಿ ನೀರ ಮೇಲೆ ಎಷ್ಟು ದೂರ ಸಾಗಿದರೇನು ಬಂತು, ಹಡಗಿಗೆ ಕಡಲಿನಾಳ ತಿಳಿಯುವುದೇನು? ಎಂಬುದಾಗಿ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ಕವನವೊಂದರಲ್ಲಿ ಹೇಳುತ್ತಾರೆ. ಹೀಗಾಗಬಾರದು ಗಂಡ ಹೆಂಡತಿಯ ದಾಂಪತ್ಯ. ಇಬ್ಬರ ನಡುವೆ ಎಷ್ಟೇ ಅಂತರ ಬೇಕಾದರೂ ಇರಲಿ. ಆದರೆ ಮನಸ್ಸಿನಾಳ ತಿಳಿದಿರಲಿ. ಸಂಸಾರ ಅಂದರೆ ಗಂಡ ಹೆಂಡತಿ ನಡುವಿನ ಸಂಬಂಧ, ಹಾಗಾಗಿ ಅವರ ನಡುವೆ ಇರಲೇಬೇಕು some ಸಾgU some ಬಂಧ.
*ಇಬ್ಬರ ಸಾಂಗತ್ಯ ಕೇವಲ ಲೈಂಗಿಕ ಸುಖಕ್ಕೆ ಮಾತ್ರ ಸೀಮಿತ ಆಗದಿರಲಿ, ಪ್ರೀತಿಯ ಹಂಚಿಕೆ, ಭಾವನೆಗಳನ್ನು ಗಿಫ್ಟ್ ಕೊಡುವುದರ ಮೂಲಕ, ಒಳ್ಳೆಯ ಕಮೆಂಟ್ಸ್ ಹೇಳಿಕೊಳ್ಳುವುದರ ಮೂಲಕ ಹಂಚಿಕೊಳ್ಳಿ.
* ಎಷ್ಟೇ ಬ್ಯುಸಿಯಾಗಿದ್ದರೂ ಒದಷ್ಟು ಹೊತ್ತು ಒಟ್ಟಿಗೇ ಹೊರಗಡೆ ಒಂದು ವಾಕ್ ಹೋಗಿ ಬನ್ನಿ.
*ಆಫೀಸ್, ಕುಟುಂಬ ಹಾಗೂ ವೈಯುಕ್ತಿಕ ಜೀವನದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ.
*ಮನೆಗೆ ಬಂದ ಕೂಡಲೇ ಗಂಡನಿಗೆ ಒತ್ತಡ ತರಬೇಡಿ. ಆತ ಒತ್ತಡ ನಿವಾರಣೆಗೆ ಯಾವುದಾದರೂ ಕೆಟ್ಟ ಚಟಕ್ಕೆ ಬಲಿಯಾಗುತ್ತಾನೆ.
* ಡಿಮ್ಯಾಂಡ್ ಮಾಡಬೇಡಿ. ಸಾಲ ಮಾಡುವುದಕ್ಕೆ ಪ್ರೇರೇಪಿಸಲೇಬೇಡಿ. ಇಲ್ಲದುದುರ ಬಗ್ಗೆ ಮತಾಡುವುದಕ್ಕಿಂತ ಇರುವುದರಲ್ಲಿ ಹೆಚ್ಚು ಸುಖ ಪಡಿ.
* ಗಂಡ ಮಾತ್ರ ದುಡಿಯುವವನಾಗಿದ್ದರೆ, ಹೆಂಡತಿಗೆ ಖರ್ಚಿಗೆ ಕೊಟ್ಟ ಹಣವನ್ನು ಕೂಡಿಟ್ಟುಕೊಳ್ಳಿ. ಹಣ ಕೂಡಿಡುವ ವಿಷಯವನ್ನು ನೆರೆಮನೆಯವರೊಂದಿಗೆ ಹಂಚಿಕೊಳ್ಳಬೇಡಿ.
* ನೆರೆಮನೆಯವರು ನಿಮಗೆ ಮಾದರಿಯಾಗದಿರಲಿ. ನಿಮ್ಮ ಆದಾಯ ಮತ್ತು ಖರ್ಚನ್ನು ಸಮತೋಲನದಲ್ಲಿಟ್ಟುಕೊಳ್ಳಿ. ಅವರ ಮನೆಯಲ್ಲಿರುವುದು ನಮ್ಮ ಮನೆಯಲ್ಲಿಲ್ಲವಲ್ಲ ಎಂದು ಕೊರಗಬೇಡಿ.
*ಪರಸ್ಪರ ವೀಕ್ನೆಸ್ಗಳನ್ನೇ ಪದೇ ಪದೇ ಹೇಳಿ ಅವಮಾನಿಸಬೇಡಿ. ಇಬ್ಬರ ನಡುವೆ ಕೆಲವೊಂದು ವಿಷಯಗಳಿಗೆ ಹೊಂದಾಣಿಕೆ ಇರಲಿ.
*ಹೊಸದಾಗಿ ಮದುವೆಯಾಗಿರುವ ಹುಡುಗ ಅಥವಾ ಹುಡುಗಿ ಇಬ್ಬರೂ ತಮ್ಮ ಆದಾಯ, ಹೂಡಿಕೆ ಖರ್ಚು ವೆಚ್ಚ, ಸಾಲ, ಮೊದಲಾದ ಆರ್ಥಿಕ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುವುದು ಒಳ್ಳೆಯದು. ಇಂತಹ ವಿಚಾರಗಳನ್ನು ಗಂಡ-ಹೆಂಡತಿ ಪರಸ್ಪರ ಮುಚ್ಚಿಡುವಂತಿಲ್ಲ.
*ಭವಿಷ್ಯದ ಆರ್ಥಿಕ ಯೋಜನೆಗಳ ಕುರಿತು ಒಟ್ಟಿಗೇ ಕುಳಿತು ಚರ್ಚಿಸಿಕೊಳ್ಳಿ.
*ಹಣ ಉಳಿತಾಯ ಮಾಡಲು ಲೈಫ್ ಇನ್ಸ್ಯೂರೆನ್ಸ್ ಮಾಡಿಸಿಕೊಳ್ಳಿ. ಮದುವೆವರೆಗೂ ಪೋಷಕರನ್ನು ಅವಲಂಬಿತರಾಗಿದ್ದ ಹುಡುಗ ಹುಡುಗಿ ಭವಿಷ್ಯದಲ್ಲಿ ಹಣಕಾಸಿಗೆ ಪೊಷಕರನ್ನು ಅವಲಂಬಿಸುವಂತಿಲ್ಲ. *ಇಬ್ಬರೂ ಉದ್ಯೋಗಿಗಳಾಗಿದ್ದಲ್ಲಿ ಮೆಡಿಕಲ್ ಇನ್ಶ್ಯೂರೆನ್ಸ್ ಇದ್ದೇ ಇರುತ್ತದೆ.
* ಮ್ಯೂಚುವಲ್ ಪಂಡ್, ಷೇರು, ಬ್ಯಾಂಕ್ ಖಾತೆಗಳಲ್ಲಿ ಹಣ ಹೂಡಿಕೆ ಮಾಡುವುದು ಒಳ್ಳೆಯದು. ಅವು ಭವಿಷ್ಯದ ಹಣಕಾಸು ಸಮಸ್ಯೆಗಳಿಗೆ ನೆರವಾಗಬಲ್ಲುದು. *ಮದುವೆಯ ಮುಂದಿನ ಜೀವನದಲ್ಲಿ ಸವಾಲನ್ನು ಸ್ವೀಕರಿಸಿ. * ನಿಮ್ಮ ಜೀವನ ಸಂಗಾತಿಗೆ ನೀವೊಬ್ಬ ಒಳ್ಳೆಯ ಗೆಳೆಯ/ಗೆಳತಿ ಆಗಿ.
*ಇಬ್ಬರ ನಡುವೆ ಇರುವ ಸಮಾನ ಅಂಶಗಳನ್ನು ಒಪ್ಪಿಕೊಳ್ಳವುದು ಮಾತ್ರವಲ್ಲದೆ, ಇಬ್ಬರ ನಡುವಿನ ಅಸಮಾನತೆಗಳನ್ನು ಒಪ್ಪಿಕೊಂಡು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ
Subscribe to:
Post Comments (Atom)
No comments:
Post a Comment