Monday, July 2, 2012

ಸಂಧಿವಾತಕ್ಕೆ ಸರಳ ಪರಿಹಾರ

ಸಂಧಿವಾತಕ್ಕೆ ಸರಳ ಪರಿಹಾರ ಡಾ. ವೆಂಕಟ್ರಮಣ ಹೆಗಡೆ


ಸಂಧಿವಾತ ಎಂದರೆ ಸಂಧಿಗಳಲ್ಲಿ ಕಂಡುಬರುವ ಬಾವು. ಇದರಲ್ಲಿ ಸಂಧಿವಾತ ಹಾಗೂ ಆಮವಾತ ಎಂದು ಎರಡು ವಿಧ. ನೋವು ಮತ್ತು ಬಿಗಿತ ಇವುಗಳ ಮುಖ್ಯ ಲಕ್ಷಣ. ವ್ಯಾಯಾಮ, ದೈಹಿಕ ಶ್ರಮದ ನಂತರ ನೋವು ಹೆಚ್ಚಾಗಿರುತ್ತದೆ. ಆಮವಾತವು ಒಂದಕ್ಕಿಂತ ಹೆಚ್ಚು ಸಂಧಿಗಳಲ್ಲಿ ಉಂಟಾಗುತ್ತದೆ. ಇದರ ಮುಖ್ಯ ಲಕ್ಷಣ, ನೋವು ಹಾಗೂ ಬಿಗಿತ ಬೆಳಗಿನ ಜಾವದಲ್ಲಿ ಹೆಚ್ಚಾಗಿರುತ್ತದೆ. ಆಮವಾತದಿಂದ ಉಂಟಾಗುವ ಬಾವು ಹಂತ ಹಂತವಾಗಿ ಹೆಚ್ಚಾಗುತ್ತ, ಇಡೀ ದೇಹವನ್ನು ವ್ಯಾಪಿಸುತ್ತದೆ. ನಂತರ ಶಾಶ್ವತವಾಗಿ ಉಳಿಯುವಂತಹ ವೈಕಲ್ಯ ಸೃಷ್ಟಿಸುತ್ತದೆ. ಸಂಧಿವಾತ ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುತ್ತದೆ. ದೇಹದ ತೂಕ ಹೊರುವ ಸಂಧಿಗಳಲ್ಲೇ ಜಾಸ್ತಿ.

ಪರಿಹಾರೋಪಾಯಗಳು

ಆಲೂಗಡ್ಡೆ ರಸ: ಆಲೂಗಡ್ಡೆಯನ್ನು ಸಿಪ್ಪೆ ಸಹಿತ ಸಣ್ಣಗೆ ಹೆಚ್ಚಿ , ಒಂದು ರಾತ್ರಿ ತಣ್ಣೀರಿನಲ್ಲಿ ನೆನೆಸಿಡಿ. ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು.

ಅನಾನಸ್ ಜ್ಯೂಸ್ : ಇದು ಬಾವು ಕಡಿಮೆ ಮಾಡುವಲ್ಲಿ ಸಹಕಾರಿ. ಬೀಟರೂಟ್, ಕ್ಯಾರೇಟ್ ಮತ್ತು ಹಸಿರು ಸೊಪ್ಪುಗಳ ರಸವನ್ನೂ ಸಮಾನ ಭಾಗದಲ್ಲಿ ಸೇರಿಸಿ ಸೇವಿಸುವುದು ಪರಿಣಾಮಕಾರಿ.

ಸಾಸಿವೆ ಕಾಳು : ಒಂದು ಚಮಚ ಸಾಸಿವೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ, ಬೆಳಗಿನ ಜಾವ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ಇದು ನೋವನ್ನು ಮಟ್ಟಹಾಕುತ್ತದೆ.

ಬೆಳ್ಳುಳ್ಳಿ : ಇದನ್ನು ಹಾಗೆಯೇ ತೆಗೆದುಕೊಳ್ಳಬಹುದು. ಊತ ನಿವಾರಿಸುವ ಗುಣ ಬೆಳ್ಳುಳ್ಳಿಯಲ್ಲಿದೆ.

ಲಿಂಬು : ಇದರ ಜ್ಯೂಸನ್ನು ಬೆಳಗಿನಜಾವ ಖಾಲಿಹೊಟ್ಟೆಯಲ್ಲಿ ಸೇವಿಸಬೇಕು.

ಇತರ ವಿಧಾನಗಳು * ಬಿಸಿ ನೀರಿನ ಎನಿಮಾ * ಜಾನು ಸಂಧಿಗಳಿಗೆ ಬಿಸಿನೀರಿನ ಪಟ್ಟಿ * ಬಿಸಿಯಾದ ಹುತ್ತದ ಮಣ್ಣಿನ ಲೇಪ

* ಎಣ್ಣೆಯ ಮಸಾಜ್ ಮತ್ತು ಆವಿ ಸ್ನಾನ * ಅಕ್ಯುಪಂಕ್ಚರ್ * ಯೋಗಾಸನಗಳು

ಹೊಳೆಯುವ ಕೂದಲಿಗೆ ಮನೆ ಮದ್ದು

ಭುಜದ ಮೇಲೆ ಹಾರಾಡುವಂಥ ಹೊಳಪಿನ ಕೂದಲು ಬೇಕು ಅಂತಾನೇ ಆಸೆ. ಆದ್ರೆ ಕೆಲವೇ ಕ್ಷಣಗಳಲ್ಲಿ ಸಿಕ್ಕುಸಿಕ್ಕಾಗುವ ಕೂದಲ ಮೇಲೆ ವಿಪರೀತ ಸಿಟ್ಟಾಗುತ್ತೀರ. ಒರಟಾದ ಹಾಗೂ ಕಳೆಗುಂದಿದ ಕೂದಲ ಬಗ್ಗೆ ಬೇಸರಿಸಬೇಡಿ. ನಿಮ್ಮ ಕೂದಲನ್ನು ಕೂಡ ಹೊಳಪಾಗಿಸಿಕೊಳ್ಳಬಹುದು. ಆದ್ರೆ ಒಂದಿಷ್ಟು ಮುತುವರ್ಜಿ ವಹಿಸಬೇಕು. ಹೊಳಪಾಗಿಸುವ ಮನೆಮದ್ದುಗಳನ್ನು ಕೂಡ ಟ್ರೈ ಮಾಡಿ. ಆಗಾಗ ಹರಳೆಣ್ಣೆಯನ್ನು ಹಚ್ಚಿದರೆ ಕೂದಲು ಸುಂದರವಾಗಿ ಬೆಳೆಯುತ್ತದೆ ಮತ್ತು ಅದರ ಆರೋಗ್ಯಕ್ಕೂ ಒಳ್ಳೆಯದು.

ತೆಂಗಿನೆಣ್ಣೆ ಜತೆ ದಾಸವಾದ ಎಲೆ ಹಾಕಿ ಕುದಿಸಿ ಆ ಎಣ್ಣೆಯನ್ನು ಉಪಯೋಗಿಸಿದರೆ ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯುತ್ತದೆ.

ಸೀಗೆಕಾಯಿ ಪುಡಿಗೆ ಸ್ವಲ್ಪ ಲಿಂಬು ಹಿಂಡಿ, ಆ ಮಿಶ್ರಣದಿಂದ ತಲೆ ತೊಳೆದರೆ ಕೂದಲು ಆಕರ್ಷಕವಾಗಿ ಕಾಣುತ್ತದೆ.

ಲೋಳೆಸರದ ರಸವನ್ನು ತೆಗೆದು ತಲೆಗೆ ಹಚ್ಚಿ . ಸ್ವಲ್ಪ ಹೊತ್ತಿನ ನಂತರ ಸ್ನಾನ ಮಾಡಿ. ಕೂದಲಿಗೆ ಇದು ಒಳ್ಳೆಯ ಕಂಡಿಷ್ನರ್.

ಆಹಾ ಎಳನೀರು, ಆರೋಗ್ಯದ ಪನ್ನೀರು

ತಲೆ ಕೆಂಡದಂತೆ ಬಿಸಿಯಾಗಿರುತ್ತದೆ. ನಿಂತಲ್ಲೇ ಬೆವೆತು ಹೋಗುತ್ತೀರ. ದೇಹಕ್ಕೆ ನಿತ್ರಾಣ. ಮನಸ್ಸಿಗೂ ಯಾಕೋ ಕಿರಿಕಿರಿ.

ಬೇಸಿಗೆಯಲ್ಲಿ ಇವೆಲ್ಲ ಇದ್ದದ್ದೆ. ಆದ್ರೂ ಈ ಬಾಯಾರಿಕೆ ಅನ್ನೋದು ಇದೆಯಲ್ಲ , ಅದು ಮಾತ್ರ ದಿನಪೂರ್ತಿ ಕಾಡಿ ಬಿಡುತ್ತದೆ. ಕ್ಷಣಕ್ಷಣಕ್ಕೂ ಗಂಟಲ ಪಸೆ ಆರಿ ಹೋದಂಥ ಅನುಭವ. ಬಾಯಿ ಪಾನೀಯಕ್ಕಾಗಿ ತೆರೆದುಕೊಂಡಿರುತ್ತದೆ. ಆ ಕ್ಷಣಕ್ಕೆ ಎಲ್ಲೋ ಒಂದು ಕಡೆ ಪಾನೀಯ ಅಂತೇನಾದ್ರೂ ಕಂಡರೆ ನೀವು ಪರಮ ಸುಖಿ ಅಂದುಕೊಂಡೇ ಗಂಟಲಿಗಿಳಿಸುತ್ತೀರ. ಆದರೆ ಅದು ಇನ್ಯಾವತ್ತೋ ಅದ್ರ ಅಡ್ಡ ಪರಿಣಾಮ ಬೀರಬಹುದು. ವಿಪರೀತ ಆರೋಗ್ಯ ಕಾಳಜಿ ಇರುವವರು ತಮ್ಮ ಬಳಿ ಯಾವಾಗಲೂ ಶುದ್ಧ ನೀರಿಟ್ಟುಕೊಂಡಿರುತ್ತಾರೆ. ಇಲ್ಲ ಅಂತಾದ್ರೆ ಅವರು ಎಳನೀರು ಬಿಟ್ಟು ಇನ್ನೇನೂ ಕುಡಿಯುವುದಿಲ್ಲ. ಆದ್ರೆ ನಿತ್ಯ ಒಂದೇ ರುಚಿಯ ಎಳನೀರು ಕೂಡ ಬೇಜಾರ್ ಅಂದೆನಿಸುತ್ತದೆ. ಬದಲಾಗದ ಎಳನೀರು ರುಚಿಯಲ್ಲಿ ಬದಲಾವಣೆ ಅಸಾಧ್ಯ ಅಂದುಕೊಳ್ಳಬೇಡಿ.

ವೈವಿಧ್ಯ ರುಚಿ

ಎಳನೀರಿನಲ್ಲಿ ಕೂಡ ವೈವಿಧ್ಯ ರುಚಿ ಸವಿಯಬಹುದು ಅಂದ್ರೆ ನಂಬ್ತೀರಾ? ಕಬ್ಬಿನ ಹಾಲಲ್ಲಿ ನಾನಾ ಸ್ವಾದಗಳಿವೆಯಲ್ಲ, ಅದೇ ರೀತಿ ಇದೀಗ ಎಳನೀರಲ್ಲೂ ಸಾಧ್ಯ. ಪುದಿನಾ, ಜೇನು, ಕಿತ್ತಳೆ, ಏಲಕ್ಕಿ, ಮಸಾಲ, ಲಿಂಬು ಇನ್ನೂ ನಾನಾ ಬಗೆಯ 18 ಸ್ವಾದಗಳಿರುವ ಎಳನೀರು ಕುಡಿಯಬಹುದು. ಹಾಗಂತ ಎಲ್ಲ ಎಳನೀರು ಅಂಗಡಿಗಳಲ್ಲಿ ಇಂಥದ್ದೊಂದು ರುಚಿ ಸಿಗುತ್ತದೆ ಅಂದುಕೊಳ್ಳಬೇಡಿ. ಅಪರೂಪದ ರುಚಿ ಜತೆ ಆರೋಗ್ಯವರ್ಧಕ ಪಾನೀಯಗಳ ಸೇವನೆಗೊಂದು ವೇದಿಕೆ ಕಲ್ಪಿಸಿ ನೈಸರ್ಗಿಕ ಪದಾರ್ಥಗಳನ್ನು ಮಾತ್ರ ಗ್ರಾಹಕರಿಗೆೆ ತಲುಪಿಸಲು ಐದು ಯುವಕರ ತಂಡ ಸದಾ ಶ್ರಮಿಸುತ್ತಿದೆ.

ಉತ್ಸಾಹಿ ತಂಡ

ರೈತರು ಬೆಳೆದ ಬೆಳೆಗೆ ಮಾರುಕಟ್ಟೆ ಒದಗಿಸುವುದರ ಜತೆ ಗ್ರಾಹಕರಿಗೆ ಏನಾದರೂ ಹೊಸತು ನೀಡುವ ತುಡಿತ ಸಾಫ್ಟ್ವೇರ್, ವೈದ್ಯ ಸೇರಿದಂತೆ ಇನ್ನಿತರ ಕ್ಷೇತ್ರದ ಈ ಉತ್ಸಾಹಿ ಯುವಕರಿಗಿತ್ತು. ಅದರ ಪರಿಣಾಮವೇ ಶುರುವಾದ ಪುಟ್ಟದೊಂದು ವೇದಿಕೆ ನೇಚರ್ ಫುಡ್. ಎಳನೀರಷ್ಟೆ ಅಲ್ಲ, ಡಯಾಬೀಟಿಸ್, ಹೃದಯ ಸಮಸ್ಯೆ ಮತ್ತಿತರ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ ಆಗುವ ನೈಸರ್ಗಿಕ ವಸ್ತುಗಳನ್ನು ಐಸ್ಕ್ರೀಂ, ಜ್ಯೂಸ್ಗಳಲ್ಲಿ ಬಳಸಿ ಗ್ರಾಹಕರ ಒದಗಿಸುತ್ತಾರೆ. 'ಎಳನೀರು ಮಾರುವುದು ಕೇವಲ ವ್ಯಾಪಾರ ಅಥವಾ ಹೊಟ್ಟೆಪಾಡು. ಆದ್ರೆ ಜನ ಏನೋ ಬದಲಾವಣೆ ಬಯಸುತ್ತಿರುತ್ತಾರೆ. ಹೊಸತನದ ಜತೆ ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನಲ್ಲಿ ಇತ್ತೀಚೆಗೆ ರಾಜಾಜಿನಗರ ಹಾಗೂ ಜಯನಗರದಲ್ಲಿ ಮಳಿಗೆ ಆರಂಭಿಸಲಾಗಿದೆ' ಅಂತಾರೆ ನೇಚರ್ ಫುಡ್ನ ನಿರ್ದೇಶಕ ಆನಂದ್ ಕುಮಾರ್.

ನೈಸರ್ಗಿಕ ಆಹಾರದ ಬಗ್ಗೆ ಅರಿವು

ಕಾಫಿ, ಟಿ ಇನ್ಯಾವುದೋ ಜಂಕ್ ಫುಡ್ಗಳ ನೆರಳೂ ಬೀಳದಂತೆ ಕೇವಲ ನೈಸರ್ಗಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಎಳನೀರು ಹಾಗೂ ಜ್ಯೂಸ್ ಅಂಗಡಿ ಆರಂಭಿಸಿದ ಈ ಯುವಕರು ಹೇಳುವುದೊಂದೇ ಮಾತು. ಬಾಯಾರಿದ್ರೆ ಎಳನೀರು ಕುಡಿಯಿರಿ. ಹಸಿವಾದ್ರೆ ಮೊಳಕೆಕಾಳು ತಿನಿ.್ನ ವಿಪರೀತ ಲಾಭದ ಉದ್ದೇಶವೂ ಇಲ್ಲ. ಆದರೆ ಗುಣಮಟ್ಟ, ಶುದ್ಧತೆ ವಿಷಯದಲ್ಲಿ ರಾಜಿಯೇ ಇಲ್ಲ. ನೈಸರ್ಗಿಕ ಆಹಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ. ರಾಜಾಜಿನಗರದ ನೇಚರ್ ನೆಸ್ಟ್ ಮುಖ್ಯಸ್ಥ ಜವಾಹರ್ ಪ್ರಕಾರ 'ಹೊಟ್ಟೆ ತುಂಬಿಸಿಕೊಳ್ಳಲಿಕ್ಕಾಗಿ ಆರೋಗ್ಯಕ್ಕೆ ಅಹಿತಕರವಾದಂಥ ಪದಾರ್ಥಗಳನ್ನು ಸೇವಿಸುವುದಕ್ಕಿಂತ ನೈಸರ್ಗಿಕವಾಗಿ ದೊರೆಯುವ ತರಕಾರಿ, ಹಣ್ಣುಗಳನ್ನು ಹಾಗೂ ಯಾವುದೇ ರಾಸಾಯನಿಕ ಪ್ರಕ್ರಿಯೆಗೆ ಒಳಪಡಿಸದೆ ಅವುಗಳಿಂದ ತಯಾರಾದ ಪದಾರ್ಥ ಸೇವಿಸುವುದು ಒಳ್ಳೆಯದು.'

ವಿಶೇಷ

ಜ್ಯೂಸ್, ಐಸ್ಕ್ರೀಂ ಎಲ್ಲಾದರೂ ಸಿಗುತ್ತವೆ. ಆದ್ರೆ ಇಲ್ಲಿ ಐಸ್ಕ್ರಿಮ್ಗೆ ಕೃತಕ ಫ್ಲೇವರ್ ಬಳಸುವುದಿಲ್ಲ. ಜ್ಯೂಸ್ಗೆ ಸಕ್ಕರೆ, ನೀರ ಹನಿಯೂ ಬೀಳಲು ಕೊಡುವುದಿಲ್ಲ. 18 ಬಗೆಯ ಮೊಳಕೆ ಕಾಳುಗಳಿಂದ ತಯಾರಿಸಿದ ಹರೀರ ಇಲ್ಲಿಯ ಸ್ಪೆಷಲ್.

ಬೆನ್ನು ನೋವಿಗೆ ಮನೆಯಲ್ಲೇ ಇದೆ ಪರಿಹಾರ

ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದ ಕೆಲಸ ನಿಮಗೆ. ಸಾಲದ್ದಕ್ಕೆ ಆಗಾಗ ವಿಚಿತ್ರ ನೋವೊಂದು ನಿಮ್ಮ ಬೆನ್ನೇರುತ್ತದೆ. ಹಾಗೆ ಬೆನ್ನು ಹತ್ತಿದ ನೋವು ಬಿಡುವುದೇ ಇಲ್ಲ. ಆಗಾಗ ಕಿರಿಕಿರಿ ಉಂಟು ಮಾಡುತ್ತಿರುತ್ತದೆ.ಖಿನ್ನತೆ, ಒತ್ತಡ, ಆತಂಕದ ಮುನ್ಸೂಚನೆ ಇರಬಹುದು. ವಂಶಪಾರಂಪರಗತವಾಗಿಯೂ ಬಂದಿರಬಹುದು. ಬಂದ ದಾರಿ ಯಾವುದೇ ಇರಲಿ, ಬಂದಂತೂ ಆಗಿದೆ. ಈಗ ಬೇಕಿರುವುದು ಪರಿಹಾರ ಮಾತ್ರ. ಆ ಕ್ಷಣಕ್ಕೆ ಯಾವುದೋ ನೋವು ನಿವಾರಕ ಔಷಧ ಬೆನ್ನಿಗೆ ಹಚ್ಚುತ್ತೀರ. ಮಾತ್ರ ಸೇವಿಸುತ್ತೀರ. ಆ ಕ್ಷಣಕ್ಕೆ ಅದು ಮಾಯವಾದರೂ ನಾಳೆ ಬೆಳಗ್ಗೆ ಪುನಃ ಅದು ಹಿಂಬಾಲಿಸುತ್ತದೆ. ಅದರ ಮೇಲೆ ವಿಪರೀತ ಅವಲಂಬಿತರಾಗುತ್ತೀರ. ಜತೆಗೆ ಅಡ್ಡ ಪರಿಣಾಮಗಳಿಗೂ ನೀವೆ ದಾರಿ ಮಾಡಿ ಕೊಡುತ್ತೀರ. ಎಷ್ಟುದಿನ ಅಂತ ಯಾವುದ್ಯಾವುದೋ ಔಷಧ ಹಚ್ಚುತ್ತೀರ. ಮಾತ್ರೆಗಳನ್ನು ನುಂಗುವುದಂತೂ ಬೇಡವೇಬೇಡ. ಹಾಗಂತ ನೋವು ಸಹಿಸಿಕೊಂಡು ಬಿಡಿ ಅಂತಲ್ಲ. ಮನೆಮದ್ದು ಟ್ರೈ ಮಾಡಿ.- ಬೆನ್ನು ನೋವಿದ್ದಾಗ ಬಿಸಿಬಿಸಿಯಾಗಿ ತಿನ್ನಿ. ತಿನ್ನುವ ಪದಾರ್ಥದಲ್ಲಿ ಶುಂಠಿ ಇದ್ದರೆ ಒಳ್ಳೆಯದು.

- ನೋವಿರುವ ಭಾಗಕ್ಕೆ ಬೆಚ್ಚಗಿನ ನೀರಿನ ಶಾಖ ನೀಡಿ. - ಪುದಿನಾ ಎಣ್ಣೆಗಳಂಥ ನೈಸರ್ಗಿಕ ಎಣ್ಣೆಗಳಿಂದ ಮಸಾಜ್ ಮಾಡಿ. - ಪ್ರತಿನಿತ್ಯ ಶುಂಠಿ ಸೇವಿಸಿ.

- ವಿಟಮಿನ್ ಸಿ ಒಳಗೊಂಡಿರುವ ಹಣ್ಣು, ತರಕಾರಿ ಹೆಚ್ಚು ಸೇವಿಸಿ. - ಲಿಂಬೆರಸಕ್ಕೆ ಉಪ್ಪು ಸೇರಿಸಿ ಜ್ಯೂಸ್ ತಯಾರಿಸಿ ಕುಡಿಯಿರಿ.

ಸುಂದರ ಕೂದಲಿಗೆ ಮೆಂತ್ಯ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಲು ಕೂದಲ ಆರೋಗ್ಯ ಕೂಡ ಪರೋಕ್ಷವಾಗಿ ಸಹಕರಿಸುತ್ತದೆ ಎಂಬುದನ್ನು ಮರೆಯದಿರಿ. ಯಾಕಂದ್ರೆ, ಒಣಗಿದ ಕೂದಲು ಯಾವುದೇ ಕಾರಣಕ್ಕೂ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಆಗಾಗ್ಗೆ ಕಂಡಿಷನಿಂಗ್ ಮಾಡುವುದು ಅತ್ಯಗತ್ಯ. ರಾಸಾಯನಿಕ ಪದಾರ್ಥಗಳಿಂದ ಕಂಡಿಷನಿಂಗ್ ಮಾಡುವುದು ಸುಲಭ ಏನಿಸಿದರೂ, ತಕ್ಷಣಕ್ಕೆ ನಿಮ್ಮ ಕೂದಲು ನಳನಳಿಸಿದಂತೆ ಕಂಡರೂ, ಮುಂದೊಮ್ಮೆ ಉದುರುವ ಸಾಧ್ಯತೆಯೇ ಹೆಚ್ಚು.

ನ್ಯಾಚುರಲ್ ಹೇರ್ಕಂಡಿಷನರ್

ನಿಮ್ಮ ಅಡುಗೆಮನೆಯಲ್ಲಿ ಅತಿ ಸುಲಭವಾಗಿ ಲಭ್ಯವಿರುವ ಮೆಂತ್ಯ ಹೇರ್ ಕಂಡಿಷನಿಂಗ್ ಕೆಲಸ ಮಾಡುತ್ತದೆ. ಇದನ್ನು ಆಗಾಗ್ಗೆ ಬಳಸುವುದರಿಂದ ನಿಮ್ಮ ಕೂದಲ ನೈಜ ಸೌಂದರ್ಯ ಹಾಳಾಗದು. ಮಾತ್ರವಲ್ಲ, ದೇಹ ಕೂಡ ತಂಪಾಗಿರುತ್ತದೆ.

ಹೊಳೆಯುವ ಕೂದಲಿಗೆ

ನಿಮ್ಮ ಕೂದಲಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಮೆಂತ್ಯ ಪುಡಿ ಮಾಡಿಕೊಳ್ಳಿ. ಅರ್ಧ ಕಪ್ ಮೊಸರಿನಲ್ಲಿ ಕಲಸಿ. ಇದಕ್ಕೆ ನಾಲೈದು ಹನಿ ನಿಂಬೆರಸ ಹಾಕಿ. ಇದನ್ನು ನಿಮ್ಮ ಕೂದಲಿಗೆ ಪ್ಯಾಕ್ ಹಾಕಿ. ಇದು ಕಂಡಿಷನರ್ನಂತೆ ಕಾರ್ಯ ನಿರ್ವಹಿಸುತ್ತದೆ. ಕೊಂಚ ಸಮಯದ ನಂತರ ತಣ್ಣಿರಿನಲ್ಲಿ ತೊಳೆಯಿರಿ.

ಹೊಟ್ಟಿರುವ ಕೂದಲಿಗೆ

ರಾತ್ರಿಯಿಡಿ ಮೆಂತ್ಯವನ್ನು ನೀರಿನಲ್ಲಿ ನೆನೆಸಿ. ಬೆಳಗ್ಗೆ ಇದನ್ನು ನುಣ್ಣಗೆ ರುಬ್ಬಿ. ತಲೆ ಬುರಡೆಗೆ ಲೇಪಿಸಿ. 30 ನಿಮಿಷಗಳ ವರೆಗೆ ಹಾಗೆಯೇ ಬಿಡಿ. ನಂತರ ಶ್ಯಾಂಪೂವಿನಿಂದ ಸ್ನಾನ ಮಾಡಿ.

ಬಲು ಮುಖ್ಯ ಬಾಯಿಯ ಆರೋಗ್ಯ ಡಾ. ಎಸ್.ಎಸ್. ಅಂಗಡಿ

ಇಂದಿನ ನಮ್ಮ ಜೀವನಶೈಲಿ ತುಂಬಾ ಬದಲಾಗಿದೆ. ಉಡುಗೆ, ತೊಡುಗೆ, ಆಚಾರ, ಆಹಾರ, ವಿಹಾರ ಯಾವುದೂ ಮೊದಲಿನಂತಿಲ್ಲ. ಪಿಜ್ಜಾ, ಬರ್ಗರ್, ಚಾಕಲೇಟ್, ಐಸ್ಕ್ರೀಂ, ಕೇಕ್ ಇತ್ಯಾದಿ ಜಂಕ್ ಫುಡ್ಸ್ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ. ಬರೀ ಆಹಾರದ ರುಚಿ ನೋಡಿದರೆ ಸಾಲದು, ಅದರ ಅಡ್ಡ ಪರಿಣಾಮಗಳ ಬಗ್ಗೆಯೂ ವಿಚಾರ ಮಾಡಬೇಕು. ಇಂಥ ಆಹಾರಗಳಿಂದ ಬಾಯಿ ಸಂಬಂಧಿ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉದಾ: ಹುಳುಕು ಹಲ್ಲು, ಬಾಯಿ ಹುಣ್ಣು, ವಸಡಿನ ರೋಗಗಳು ಇತ್ಯಾದಿ.

ಹಾಗಾದರೆ ಇಂಥ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯವೆ? ಖಂಡಿತಾ ಸಾಧ್ಯವಿದೆ. ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಕೆಲವು ನಿಯಮಗಳನ್ನು ಪಾಲಿಸಬೇಕಷ್ಟೇ.

ಮಂಜನ : ಔಷಧ ದ್ರವ್ಯಗಳನ್ನು ಬೆರಳಿನ ತುದಿಯಲ್ಲಿ ತೆಗೆದುಕೊಂಡು ವಸಡು ಮತ್ತು ಹಲ್ಲಿನ ಮೇಲೆ ನಿಧಾನವಾಗಿ ಉಜ್ಜುವುದು. ಮಂಜನಕ್ಕೋಸ್ಕರ ನಾಲ್ಕು ವಿಧದ ಔಷಧ ದ್ರವ್ಯಗಳನ್ನು ಉಪಯೋಗಿಸಲಾಗುತ್ತದೆ. ಪುಡಿ, ಕಲ್ಕ, ಅವಲೇಹ ಮತ್ತು ಜೇನುತುಪ್ಪ. ಈ ರೀತಿ ಮಾಡುವುದರಿಂದ ವಸಡು ಮತ್ತು ಹಲ್ಲಿನ ಮೇಲಿನ ಕೊಳೆ ಹೋಗಲಾಡಿಸಿ, ಅವುಗಳ ಸಂರಕ್ಷಣೆ ಮಾಡಬಹುದು. ಇಲ್ಲದಿದ್ದರೆ ಪ್ರತಿ ದಿನ ಸ್ವಲ್ಪ ಸ್ವಲ್ಪ ಕೊಳೆ ಶೇಖರಗೊಂಡು ಗಟ್ಟಿಯಾಗಿ, ವಸಡು ಮತ್ತು ಹಲ್ಲಿನ ರೋಗಗಳಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ಬಾಯಿಯ ದುರ್ವಾಸನೆಯೂ ಬರುವುದಿದೆ.ಗಂಡೂಷ: ಕೆಲವು ಔಷಧ ದ್ರವಗಳನ್ನು ಬಾಯಿಯಲ್ಲಿ ತುಂಬಿಕೊಂಡು 10-15 ನಿಮಿಷಗಳ ವರೆಗೆ ಶಾಂತಚಿತ್ತದಿಂದ ಕುಳಿತುಕೊಳ್ಳುವುದು. ನಂತರ ಉಗುಳುವುದು. ಉದಾ- ಎಳ್ಳೆಣ್ಣೆ, ಜೇನುತುಪ್ಪ, ಗಂಜಿ, ಬಿಸಿನೀರು ಇತ್ಯಾದಿ.ಮುಕ್ಕಳಿಸುವುದು: ಔಷಧ ದ್ರವಗಳನ್ನು ಬಾಯಿಯಲ್ಲಿ ತುಂಬಿಕೊಂಡು ಬಾಯಿ ಮುಕ್ಕಳಿಸಬೇಕು. ತ್ರಿಫಲಾ ಕಷಾಯ, ಪಂಚವಲ್ಕಲ ಕಷಾಯ, ಬಿಸಿನೀರು ಇತ್ಯಾದಿಗಳನ್ನು ಇದಕ್ಕೆ ಬಳಸಬಹುದು. ಈ ರೀತಿಯ ಚಿಕಿತ್ಸಾ ವಿಧಾನದಲ್ಲಿ ಸ್ನೇಹನ, ಪ್ರಸಾದನ, ಶೋಧನ ಮತ್ತು ರೋಪಣ ಎಂದು ನಾಲ್ಕು ಉಪಭೇದಗಳಿವೆ.ಈ ಚಿಕಿತ್ಸಾ ವಿಧಾನಗಳಿಂದ ಬಾಯಿಹುಣ್ಣು, ಹುಳುಕುಹಲ್ಲು, ಗಂಟಲುಬೇನೆ, ಬಾಯಿ ಒಣಗುವುದು, ದಾಹವಾಗುವುದು, ರುಚಿ ಇಲ್ಲದಿರುವುದು, ನೆಗಡಿ, ಕಿವಿ ಕಾಯಿಲೆಗಳು, ತಲೆನೋವು ಇತ್ಯಾದಿ ಸಮಸ್ಯೆಗಳನ್ನು ತಡೆಗಟ್ಟಬಹುದು.

ಪಥ್ಯ ಮಾಡಿ

ಗೋಧಿ, ಜೋಳ, ಹಳೆ ಅಕ್ಕಿ, ಹೆಸರು ಕಾಳು, ಹುರಳಿಕಾಳು, ಹಾಗಲಕಾಯಿ, ಪಾಲಕ್, ಮೂಲಂಗಿ, ಪಡವಲಕಾಯಿ, ಗಜ್ಜರಿ, ಬೀಟ್ರೂಟ್ ಇತರೆ ಹಸಿರು ಕಾಯಿಪಲ್ಲೆ, ಮೋಸಂಬಿ, ನಿಂಬೆಹಣ್ಣು, ನೆಲ್ಲಿಕಾಯಿ, ಟೊಮೇಟೊ, ತಾಂಬೂಲ, ಬೆಣ್ಣೆ ಸೇವಿಸಬಹುದು.ಹುಳಿಮೊಸರು, ಬೆಲ್ಲ ಮತ್ತು ಅದರಿಂದ ತಯಾರಿಸಿದ ಸಿಹಿಪದಾರ್ಥಗಳು, ಉದ್ದು, ತಣ್ಣೀರು, ಗಟ್ಟಿಯಾದ ಆಹಾರ, ಮೀನು ಮಾಂಸ, ದನ ಮತ್ತು ಹಂದಿ ಮಾಂಸ, ಕಬ್ಬಿನ ಹಾಲು, ಹಗಲು ನಿದ್ರೆ, ತಲೆ ಕೆಳಗೆ ಮಾಡಿ ಮಲಗುವುದು ಇವೆಲ್ಲ ನಿಷಿದ್ಧ.

ಅರ್ಧ ತಲೆನೋವು: ಸರಳ ಪರಿಹಾರ ಡಾ. ವೆಂಕಟ್ರಮಣ ಹೆಗಡೆ

ಮಹಿಳೆಯರಲ್ಲಿ ತುಂಬಾ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ಅರ್ಧ ತಲೆನೋವು ಒಂದು. ವಾಕರಿಕೆ, ವಾಂತಿ, ಸುಸ್ತು ಇವುಗಳೊಂದಿಗೆ ತಲೆಯ ಎಡ ಅಥವಾ ಬಲಭಾಗದಲ್ಲಿ ಅತಿಯಾದ ನೋವು ಕಾಡುತ್ತದೆ.ಯೋಗ ಹಾಗೂ ನಿಸರ್ಗ ಚಿಕಿತ್ಸೆಗಳು ಬಹುತೇಕ ಮಂದಿಗೆ ಯಶಸ್ವಿ ಪರಿಹಾರ ನೀಡಬಲ್ಲವು.

ವಮನದೌತಿ ಕ್ರಿಯಾ

ಇದು ಯೋಗ ಶಾಸ್ತ್ರದ ಒಂದು ವಿಧಾನ. ಅರ್ಧ ತಲೆನೋವು, ದಮ್ಮು, ಕಫ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾರದಲ್ಲಿ ಎರಡು ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 7-8 ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ 2-3 ಚಮಚ ಉಪ್ಪು ಸೇರಿಸಿ ಗಟಗಟನೆ ವೇಗವಾಗಿ ಕುಡಿಯಬೇಕು. ಕೂಡಲೇ ಎದ್ದುನಿಂತು ಎಡಗೈಯಲ್ಲಿ ಹೊಟ್ಟೆಗೆ ಒತ್ತಡ ಹಾಕುತ್ತ, ಬಲಗೈ ಬೆರಳುಗಳನ್ನು ಗಂಟಲಿಗೆ ಹಾಕಿ ವಾಂತಿ ಮಾಡಬೇಕು. ಮೊದಮೊದಲು 2-3 ವಾರದಲ್ಲಿ ಸರಿಯಾಗಿ ವಾಂತಿ ಆಗದೇ ಇರಬಹುದು. ಕೆಲವರಿಗೆ ಸ್ವಲ್ಪ ಭೇದಿ ಕೂಡ ಆಗಬಹುದು. ಇದು ಸಾಮಾನ್ಯ. ಹೀಗೆ ವಮನ ಕ್ರಿಯೆ ನಡೆಸಿದ ದಿನ ಉಪ್ಪು, ಹುಳಿ, ಖಾರ ಕಡಿಮೆ ಸೇವಿಸಬೇಕು.

ಆಹಾರ ಕ್ರಮ

ಹಣ್ಣು, ತರಕಾರಿ, ಮೊಳಕೆ ಕಾಳು, ಮಜ್ಜಿಗೆ, ಎಳನೀರು, ತಾಜಾ ತರಕಾರಿ ರಸ, ಹಣ್ಣಿನ ರಸ ಹೆಚ್ಚೆಚ್ಚು ಸೇವಿಸಬೇಕು. ಪ್ರತಿದಿನ ಕನಿಷ್ಟ 2-3 ಲೀಟರ್ ನೀರು ಕುಡಿಯಲೇಬೇಕು.1-2 ತಿಂಗಳ ಮಟ್ಟಿಗೆ ರಾತ್ರಿ ಊಟದ ಬದಲು ಹಸಿ ತರಕಾರಿ, ಹಣ್ಣು, ಮೊಳಕೆ ಕಾಳು, ಸೂಪ್ ಮಾತ್ರ ಸೇವಿಸಿ. ಖಾರ, ಮಸಾಲೆ, ಕರಿದ ಆಹಾರ, ಬೇಕರಿ ತಿನಿಸು, ತಂಪು ಪಾನೀಯ, ಐಸ್ಕ್ರೀಮ್ ಕಡಿಮೆ ಮಾಡಿ.

ಪ್ರಾಣಾಯಾಮ

ತಜ್ಞರಿಂದ ಯೋಗ ಕಲಿತು ಪ್ರತಿದಿನ ಅರ್ಧಗಂಟೆಯಾದರೂ ಯೋಗಾಸನ ಮಾಡಿ. ಇದು ಉತ್ತಮ ಫಲಿತಾಂಶ ನೀಡುತ್ತದೆ.

ಆರೋಗ್ಯ ಸಲಹೆಗಳು

* ಕರಿಬೇವಿನ ಕಡ್ಡಿಯ ರಸವನ್ನು ಕಣ್ಣುಗಳ ಕೆಳಭಾಗದಲ್ಲಿ ಲೇಪಿಸಿದಲ್ಲಿ ಕಲೆಗಳು ಮಾಯವಾಗುತ್ತವೆ. * ಜೇನುತುಪ್ಪಕ್ಕೆ ಈರುಳ್ಳಿ ರಸವನ್ನು ಬೆರೆಸಿ ಕುಡಿದಲ್ಲಿ ಗಂಟಲುನೋವು ಕಡಿಮೆಯಾಗುವುದು. * ಮೊಟ್ಟೆ ಹಳದಿ ಭಾಗಕ್ಕೆ ಆಲಿವ್ ಎಣ್ಣೆ ಮಿಶ್ರ ಮಾಡಿ ಫೇಸ್ ಪ್ಯಾಕ್ ಮಾಡಿ ತೊಳೆದಲ್ಲಿ ಮುಖ ಕಾಂತಿಯುಕ್ತವಾಗುವುದು.

* ಬಾದಾಮಿ ಪೇಸ್ಟ್, ನಿಂಬೆರಸ ಹಾಗೂ ಹಾಲಿನ ಕೆನೆ ಮಿಶ್ರ ಮಾಡಿ ಹಚ್ಚುವುದರಿಂದ ಕೈಗಳ ಬಣ್ಣ ಹೊಳಪಾಗುತ್ತದೆ. * ಜೇನುತುಪ್ಪ, ನಿಂಬೆರಸ ಮಿಶ್ರ ಮಾಡಿ ಮುಖಕ್ಕೆ ಹಚ್ಚಿ ತೊಳೆದಲ್ಲಿ ಮೊಡವೆಗಳು ಕಡಿಮೆಯಾಗುತ್ತವೆ. * ಕರರ್ಬೂಜ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಆಗಾಗ್ಗೆ ಸ್ವಲ್ಪವೇ ತೆಗೆದುಕೊಂಡು ನೀರಿನಲ್ಲಿ ಕಲಸಿ ಫೇಸ್ ಪ್ಯಾಕ್ ಮಡಿ. ನೆರಿಗೆಗಳು ಮಾಯವಾಗುತ್ತವೆ. * ಕೆಸುವಿನ ಗೆಡ್ಡೆ , ಗೊರಂಟಿ ಸೊಪ್ಪಿನೊಂದಿಗೆ ಅರೆದು ಮೊಟ್ಟೆಯ ಹಳದಿ ಭಾಗದೊಂದಿಗೆ ಮಿಶ್ರ ಮಾಡಿ ಕೂದಲಿಗೆ ಪ್ಯಾಕ್ ಮಾಡಿ. ಕೆಲಸಮಯದ ನಂತರ ತಲೆ ಸ್ನಾನ ಮಾಡಿ. ಹೀಗೆ ಆಗಾಗ್ಗೆ ಮಾಡುವುದರಿಂದ ಒರಟಾದ ಕೂದಲು ಮೃದಯವಾಗುತ್ತದೆ.

ಆರೋಗ್ಯ ಹೆಚ್ಚಿಸುವ ಬಾದಾಮಿ

ಪ್ರತಿದಿನ ಬಾದಾಮಿ ತಿನ್ನಿ, ಆರೋಗ್ಯವಾಗಿರಿ ಎಂದು ಹಿರಿಯರು ಹೇಳುವ ಮಾತು ಖಂಡಿತಾ ನಿಜ. ಯಾಕೆಂದರೆ ಇದು ಆರೋಗ್ಯವನ್ನು ಹೆಚ್ಚಿಸುತ್ತದೆ ಮಾತ್ರವಲ್ಲ , ಸಾಮಾನ್ಯ ಕಾಯಿಲೆಗಳಿಗೆ ದಿವ್ಯೌಷಧ. ಇದರಲ್ಲಿ ಶೇ. 41 ರಷ್ಟು ಜಿಡ್ಡು ಹಾಗೂ ಶೇ. 16 ರಷ್ಟು ಪ್ರೊಟೀನ್ ಅಡಕವಾಗಿದೆ.* ಬಾದಾಮಿಯಲ್ಲಿ ವಿಟಮಿನ್ ಡಿ ಹೇರಳವಾಗಿರುವುದರಿಂದ ಬಾದಾಮಿ ಎಣ್ಣೆಯ ಮಸಾಜ್ ಮಗುವಿನ ಚರ್ಮವನ್ನು ಮೃದುಗೊಳಿಸುವುದರ ಜತೆ ಎಲುಬನ್ನು ಸಧೃಡಗೊಳಿಸಿಸುತ್ತದೆ.* ಪ್ರತಿದಿನ ನಿಗದಿತ ಪ್ರಮಾಣದ ಬಾದಾಮಿ ತೈಲ ಸೇವನೆಯು ಕೊಲೆಸ್ಟಾರ್ ಪ್ರಮಾಣ ಇಳಿಸುತ್ತದೆ. ಹೃದಯ ಸ್ವಾಸ್ಥ್ಯವನ್ನು ಕಾಪಾಡುತ್ತದೆ.* ಸಿಹಿ ಬಾದಾಮಿ ತೈಲವನ್ನು ಮಸಾಜ್ ಮಾಡಿದರೆ ಸ್ನಾಯು ಸೆಳೆತ ಕಡಿಮೆಯಾಗುತ್ತದೆ.* ತಲೆಕೂದಲಿಗೆ ಹಚ್ಚುವುದರಿಂದ ಕೂದಲ ಹೊಳಪು ಹೆಚ್ಚುವುದಲ್ಲದೆ, ತಲೆ ಹೊಟ್ಟು ನಿವಾರಣೆಯಾಗುತ್ತದೆ.

ಬಾಲ್ಡ್ಹೆಡ್ ಸಮಸ್ಯೆನಾ...? ನಿಮ್ಮಲ್ಲೇ ಇದೆ ಪರಿಹಾರ

ಇತ್ತೀಚಿನ ದಿನಗಳಲ್ಲಿ ಬಾಲ್ಡ್ನೆಸ್ ಒಂದು ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಯುವಕರು ಕೂಡಾ ಕೂದಲುದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದಿನವೂ ಬೇಸರ, ಮಾನಸಿಕ ಒತ್ತಡ, ಅನಿಯಮಿತ ಆಹಾರ ಪದ್ಧತಿಯಿಂದ ನಿಮ್ಮ ಕೂದಲು ಉದುರಿ ಬೊಕ್ಕ ತಲೆಯುಂಟಾಗಬಹುದು. ಕೂದಲು ಉದುರುವಿಕೆಗೆ ಕಾರಣಗಳು ಅನೇಕ. ಆ ಕಾರಣಗಳನ್ನು ತಿಳಿದುಕೊಂಡರೆ ಬೊಕ್ಕ ತಲೆಯ ಸಮಸ್ಯೆಯಿಂದ ಪಾರಾಗಬಹುದು.

ಬಾಲ್ಡ್ನೆಸ್ಗೆ ಕಾರಣಗಳು * ಕಲುಷಿತ ಹೊಗೆ. * ಸೂರ್ಯನ ಕಿರಣಗಳು ನೇರವಾಗಿ ತಲೆ ಮೇಲೆ ಬೀಳುವುದು. * ನಿದ್ರಾಹೀನತೆ, ಮಾನಸಿಕ ಒತ್ತಡ.

* ಜಾಸ್ತಿ ಕಣ್ಣೀರು ಹಾಕುವುದರಿಂದ ಅಥವಾ ಕಣ್ಣೀರನ್ನು ತಡೆದುಕೊಳ್ಳುವುದರಿಂದ.* ಜಾಸ್ತಿ ಉಪ್ಪು , ಮಸಾಲೆ ವಸ್ತುಗಳ ಸೇವನೆ.

* ವಂಶಪಾರಂಪರ್ಯವಾಗಿಯೂ ಬೊಕ್ಕ ತಲೆ ಬರುವ ಸಾಧ್ಯತೆ ಇದೆ.

ಪರಿಹಾರ

* ಹಗಲು ನಿದ್ದೆ ಮಾಡುವುದನ್ನು ತಪ್ಪಿಸಿ. ನೀವು ರಾತ್ರಿ ಕೆಲಸಕ್ಕೆ ಹೋಗುವವರಾದರೆ ಪರ್ವಾಗಿಲ್ಲ, ಅನಿವಾರ್ಯವಾಗಿ ಹಗಲು ನಿದ್ದೆ ಮಾಡಲೇಬೇಕು.

* ಯೋಗದ ಮೂಲಕ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. * ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

* ಆಲ್ಕೋಹಾಲ್ ಮತ್ತು ತಂಬಾಕು ವಸ್ತುಗಳಿಂದ ದೂರ ಇರಿ. * ಸರಿಯಾದ ಕೂದಲು ನಿರ್ವಹಣೆಯ ಟೆಕ್ನಿಕ್ಸ್ನ್ನು ಬಳಸಿ.

* ಹೆಚ್ಚು ಖಾರ, ಉಪ್ಪು ಇರುವ ಪದಾರ್ಥಗಳನ್ನು ಸೇವಿಸಬಾರದು. ಸಮತೋಲಿತ ಆಹಾರ ಕ್ರಮವನ್ನು ಪಾಲಿಸಿ.

* ತುಂಬಾ ಬಿಸಿಯಾದ ನೀರಿನಲ್ಲಿ ಕೂದಲನ್ನು ತೊಳೆಯಬೇಡಿ. ಕೊಠಡಿಯ ಉಷ್ಣತೆಗೆ ಅನುಗುಣವಾದ ಬಿಸಿ ನೀರನ್ನು ತಲೆ ಸ್ನಾನಕ್ಕೆ ಬಳಸಿ.

* ತಲೆ ಕೂದಲಿಗೆ ಶುದ್ಧ ಕೊಬ್ಬರಿ ಎಣ್ಣೆಯನ್ನು ಬಳಸಿ.

ಬ್ಯೂಟಿ ಟಿಪ್ಸ್

* ಸ್ನಾನಕ್ಕೆ ಹೋಗುವ ಅರ್ಧ ಗಂಟೆ ಮೊದಲು ಮೈ-ಕೈಗೆ ಕೊಬ್ಬರಿ ಎಣ್ಣೆ ಹಚ್ಚಿ , ಕೊಂಚ ಮಸಾಜ್ ಮಾಡಿಕೊಂಡು ಸ್ನಾನ ಮಾಡಿ. ಚರ್ಮ ಸುಕೋಮಲವಾಗುವುದು. ಕಾಂತಿಯುಕ್ತವಾಗುವುದು.

* ಪ್ರತಿವಾರಕ್ಕೊಮ್ಮೆ ನಿಮ್ಮ ಉಗುರುಗಳನ್ನು ನೀಟಾಗಿ ಕತ್ತರಿಸಿ, ಕಟ್ಟರ್ನಲ್ಲಿ ಶೇಪ್ ನೀಡಿ. ನಿಂಬೆರಸವನ್ನು ಉಗುರುಗಳ ಮೇಲೆ ಉಜ್ಜಿ. ನಂತರ ಕೊಂಚ ಉಗುರು ಬೆಚ್ಚಗಿನ ನೀರಿನಲ್ಲಿ ಒಂದೈದು ನಿಮಿಷ ಇರಿಸಿ ನಂತರ ತೊಳೆಯಿರಿ. ಉಗುರುಗಳು ಆರೋಗ್ಯಕರವಾಗಿರುತ್ತವೆ.

* ನಿಮ್ಮ ಹುಬ್ಬು ಗಾಢ ಕಪ್ಪು ಬಣ್ಣ ಹಾಗೂ ದಪ್ಪನಾಗಬೇಕೆ? ಹೀಗೆ ಮಾಡಿ. ಪ್ರತಿರಾತ್ರಿ ಮಲಗುವ ಮುನ್ನ, ಬೆರಳ ತುದಿಯಲ್ಲಿ ಕೊಂಚ ಹರಳೆಣ್ಣೆ ತೆಗೆದುಕೊಂಡು ಹುಬ್ಬಿನ ಕೂದಲಿರುವ ಉಲ್ಟಾ ದಿಕ್ಕಿನಲ್ಲಿ ಸವರಿ. ಹುಬ್ಬಿನ ಕೂದಲು ಬೇಗಬೇಗನೆ ಬೆಳೆಯುವುದಲ್ಲದೆ, ಕಪ್ಪು ಬಣ್ಣಕ್ಕೆ ತಿರುಗುವುದು.

* ಯಾವುದೇ ಕಾರಣಕ್ಕೂ ಇತರರು ಬಳಸಿದ ಪೌಡರ್ ಸ್ಪಾಂಜ್ ಬಫ್ ಅನ್ನು ಮುಖಕ್ಕೆ ಬಳಸಬೇಡಿ. ಇದರಿಂದ ಮೊಡವೆ ಇಲ್ಲವೇ, ಚರ್ಮ ವ್ಯಾದಿ ಅಂಟಬಹುದು.

* ಕುಂಕುಮ ಹಚ್ಚುವ ಅಭ್ಯಾಸವಿರುವವರು ಉತ್ತಮ ಗುಣಮಟ್ಟದ ರಾಸಾಯನಿಕ ಅಂಶವಿಲ್ಲದ್ದನ್ನು ಬಳಸಿ. ಇಲ್ಲವಾದಲಿ ಅದನ್ನು ಹಚ್ಚುವ ಜಾಗದಲ್ಲಿ ಬಿಳಿ ಇಲ್ಲವೇ ಕಪ್ಪು ಕಲೆಯಾಗಬಹುದು. ರಾತ್ರಿ ವೇಳೆ ಅದನ್ನು ಒದ್ದೆ ಬಟ್ಟೆಯಿಂದ ಒರೆಸಿ, ನಂತರ ಮಲಗಿ.

No comments: