Tuesday, July 3, 2012
ಚಂದ್ರನಿಂದ ಮಾತೃತ್ವ
ಚಂದ್ರನಿಂದ ಮಾತೃತ್ವ ಆರ್.ಸೀತಾರಾಮಯ್ಯ
ಚಂದ್ರನು ಮನಸ್ಸಿನ ಕಾರಕ. 'ಚಂದ್ರಮಾ ಮನಸೋ ಜಾತಃ' ಎಂಬುದು ಪುರುಷಸೂಕ್ತದ ಪ್ರಸಿದ್ಧ ವಾಕ್ಯ. ಜತೆಗೆ ಚಂದ್ರನು ಮಾತೃಕಾರಕನಾಗಿದ್ದಾನೆ. ಮತ್ತು ಸ್ತ್ರೀಯರ ಋತುಚಕ್ರಕಾರಕನೂ ಆಗಿದ್ದಾನೆ. ಜೆಕೊಸ್ಲಾವಾಕಿಯಾ ದೇಶದ ಮನಃಶಾಸ್ತ್ರಜ್ಞರಾದ ಡಾ.ಯುಜನ್ ಜೋನಸ್ ಎಂಬುವವರು ಪ್ರಾಚೀನ ಗ್ರಂಥಗಳ ಶೋಧನೆ ಪ್ರವೃತ್ತಿಯುಳ್ಳವರು. ಕೆಲವು ವರ್ಷಗಳ ಹಿಂದೆ ಪ್ರಾಚೀನ ಗ್ರಂಥಗಳ ಸಂಶೋಧನೆಯಲ್ಲಿ ತೊಡಗಿದ್ದ ಇವರಿಗೆ, ಬೆಬಿಲೋನಿಯಾದ ಕೆಲವು ಪ್ರಾಚೀನ ಹಸ್ತಪ್ರತಿಗಳಲ್ಲಿ, ಚಂದ್ರನ ಕಾಲಚಕ್ರದ ಗತಿಯಿಂದ ಸ್ತ್ರೀಯರು ಗರ್ಭ ಧರಿಸುತ್ತಾರೆ ಎಂಬ ಸಂಗತಿ ತಿಳಿಯಿತು. ಅದರಲ್ಲಿ ಬರೆದಿದ್ದನ್ನು ಇವರು ಪುನಃ ಸಂಶೋಧನೆ ನಡೆಸಿ, ಚಂದ್ರನ ಕಾಲಚಕ್ರದ ಮೇಲೆ ಕೆಲವು ಅಂಶಗಳನ್ನು ಕಂಡುಹಿಡಿದರು. ಕಾಲಚಕ್ರದಲ್ಲಿ ಚಂದ್ರನ ಚಲನೆಯು ಸ್ತ್ರೀಯ ಕುಂಡಲಿಯಲ್ಲಿರುವ ಚಂದ್ರನ ಅವಸ್ಥೆಗೆ (ಸ್ಥಿತಿಗೆ) ಬಂದಾಗ ಶೇಕಡಾ 70 ರಿಂದ 85 ಸ್ತ್ರೀಯರು ಗರ್ಭ ಧರಿಸುತ್ತಾರೆ. ಶೇಕಡ 15 ರಿಂದ 30 ಸ್ತ್ರೀಯರ ಗರ್ಭಧಾರಣೆ ಮಾತ್ರ ಅಂಡೋತ್ಪತ್ತಿಯ ಅವಸ್ಥೆಯಲ್ಲಿ ಜರುಗುತ್ತದೆ. ವಿದೇಶಗಳಲ್ಲಿ ಗರ್ಭಧಾರಣೆಯನ್ನು ಹೆಚ್ಚಾಗಿ ತಡೆಗಟ್ಟುವುದರಿಂದ ಅಲ್ಲಿ ಕ್ರಮಬದ್ಧ ಋತುಚಕ್ರ ಚಲನೆಯ ಕ್ರಮ ಅನಿಶ್ಚಿತಗೊಳ್ಳುತ್ತದೆ. ಸ್ತ್ರೀಯರಲ್ಲಿ ಅಂಡೋತ್ಪತ್ತಿಯ ಕಾಲಚಕ್ರ ಹಾಗೂ ಜ್ಯೋತಿಷದಲ್ಲಿ ಗರ್ಭಧಾರಣೆಯ ಕಾಲ ಒಂದೇ ಸಮನಾಗಿರುವುದು. ಈ ಎರಡೂ ಕಾಲಚಕ್ರಗಳು ಜೊತೆಗೆ ಸೇರಿದಾಗ, ತಾಯ್ತನವು ಉಂಟಾಗುತ್ತದೆ. ಇದನ್ನು ಸರಳವಾಗಿ ಹೇಳಬೇಕೆಂದರೆ, ಚಂದ್ರನ ಅವಸ್ಥೆಯು ತಾಯಿಯ ಕುಂಡಲಿಯಲ್ಲಿರುವ ಚಂದ್ರನ ಅವಸ್ಥೆಗೆ ಸಮನಾದಾಗ ಗರ್ಭಧಾರಣೆಯ ಅವಕಾಶವು ಒದಗಿಬರುತ್ತದೆ. ಉದಾಹರಣೆಗೆ ಸ್ತ್ರೀಯು ಹುಣ್ಣಿಮೆ ದಿವಸ ಜನಿಸಿದ್ದರೆ, ಗರ್ಭಧಾರಣೆಯ ಸಮಯವು ಹುಣ್ಣಿಮೆಯಾಗಿರುತ್ತದೆ. ಜನನ ಸಮಯದಲ್ಲಿ ಚಂದ್ರನು ನಕ್ಷತ್ರದ ಯಾವ ಪಾದದಲ್ಲಿರುತ್ತಾನೋ ಆ ಪಾದದಲ್ಲಿಯೇ ಗರ್ಭಧಾರಣೆಯಾಗುತ್ತದೆ ಎಂದು ಡಾ. ಯುಜನ್ ಸಂಶೋಧಿಸಿದರು. ಡಾ. ಯುಜನ್ ಜೋನಸ್ ಅವರು ಇನ್ನೂ ಒಂದು ಮುಖ್ಯವಾದ ವಿಷಯವನ್ನು ಸಂಶೋಧಿಸಿದರು. ಗರ್ಭಧಾರಣೆಯ ಸಮಯದಲ್ಲಿ ಚಂದ್ರನು; ಪುರುಷ ರಾಶಿಗಳಾದ ಮೇಷ, ಮಿಥುನ, ಸಿಂಹ, ತುಲಾ, ಧನಸ್ಸು ಅಥವಾ ಕುಂಭ ರಾಶಿಯಲ್ಲಿದ್ದರೆ ಗಂಡು ಸಂತಾನವಾಗುತ್ತದೆ. ಚಂದ್ರನು;ಸ್ತ್ರೀ ರಾಶಿಗಳಾದ ವೃಷಭ, ಕಟಕ, ಕನ್ಯಾ, ವೃಶ್ಚಿಕ, ಮಕರ ಅಥವಾ ಮೀನ ರಾಶಿಯಲ್ಲಿದ್ದರೆ ಹೆಣ್ಣು ಸಂತಾನವಾಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಚಂದ್ರನು ರಾಶಿ ಬದಲಾಯಿಸುವ ವೇಳೆಯಾಗಿದ್ದರೆ, ಅವಳಿ ಮಕ್ಕಳಾಗುತ್ತವೆ ಎಂಬುದೇ ಆ ಸಂಶೋಧನೆಯಾಗಿದೆ.
ಗ್ರಹಗಳ ಆಧಿಪತ್ಯ ವಿದ್ವಾನ್ ನಾಗಪತಿ ಭಟ್
ನಾವೆಲ್ಲರೂ ಹುಟ್ಟುವ ಸಮಯದಲ್ಲಿ ನಮಗೆ ಸಂಬಂಧಿಸಿರುವ ನಕ್ಷತ್ರಗಳ ಸ್ಥಾನಕ್ಕೆ ಅನುಗುಣವಾಗಿ ನಮ್ಮ ಭವಿಷ್ಯ ನಿರ್ಮಾಣವಾಗುತ್ತದೆ. ಜನ್ಮಕಾಲದಲ್ಲಿರುವ ನಕ್ಷತ್ರಗಳನ್ನು ಜನ್ಮನಕ್ಷತ್ರವೆನ್ನುತ್ತೇವೆ. ಈ ನಕ್ಷತ್ರಗಳು ಯಾವ ರಾಶಿಯಲ್ಲಿರುವುದೊ ಅದನ್ನು ಅನುಸರಿಸಿ ರಾಶಿಗಳನ್ನು ಹೆಸರಿಸುತ್ತೇವೆ. ಅಶ್ವಿನಿ ನಕ್ಷತ್ರದಿಂದ ಆರಂಭಿಸಿ ರೇವತಿ ನಕ್ಷತ್ರದ ತನಕ ಇರುವ ಇಪ್ಪತ್ತೇಳು ನಕ್ಷತ್ರಗಳು ಹನ್ನೆರಡು ರಾಶಿಗಳಲ್ಲೇ ವಿಭಕ್ತವಾಗಿರುತ್ತದೆ.
ಮೇಷಾದಿ ಹನ್ನೆರಡು ರಾಶಿಗಳಿಗೆ ನವಗ್ರಹಗಳೇ ಅಧಿಪತಿಗಳು. ಮೇಷ, ವೃಶ್ಚಿಕ ರಾಶಿಗಳಿಗೆ ಕುಜ ಅಧಿಪತಿ. ಹಾಗೆಯೇ ವೃಷಭ, ತುಲಾ ರಾಶಿಗಳಿಗೆ ಶುಕ್ರ. ಮಿಥುನ, ಕನ್ಯಾಗಳಿಗೆ ಬುಧ. ಕರ್ಕ ರಾಶಿಗೆ ಚಂದ್ರ. ಸಿಂಹಕ್ಕೆ ರವಿ. ಧನು ಮತ್ತು ಮೀನಗಳಿಗೆ ಗುರು ಹಾಗೂ ಮಕರ, ಕುಂಭಗಳಿಗೆ ಶನೈಶ್ಚರ ಅಧಿಪತಿಗಳಾಗಿದ್ದಾರೆ
ಇವರಲ್ಲಿ ಗುರು, ಶುಕ್ರ ಹಾಗೂ ಪಾಪಗ್ರಹಗಳ ಜತೆಗೆ ಇಲ್ಲದ ಬುಧ ಹಾಗೂ ಬಲಿಷ್ಠ ಚಂದ್ರ ಇವರು ಶುಭಗ್ರಹಗಳು. ಹೀಗಾಗಿಯೇ ಧನು, ಮೀನ, ವೃಷಭ, ತುಲಾ, ಕನ್ಯಾ, ಮಿಥುನ, ಕರ್ಕ ಈ ರಾಶಿಗಳನ್ನು ಶುಭ ರಾಶಿಗಳು ಎನ್ನಬಹುದು. ಮೇಷ, ಸಿಂಹ, ವೃಶ್ಚಿಕ, ಮಕರ, ಕುಂಭಗಳು ಇದಕ್ಕಿಂತ ಭಿನ್ನವಾದವುಗಳು. ಹಾಗಿದ್ದರೂ ಈ ರಾಶಿಗಳನ್ನು ಅಶುಭ ಎನ್ನಲು ಸಾಧ್ಯವಿಲ್ಲ. ಅವುಗಳಲ್ಲಿರುವ ಗ್ರಹಸ್ಥಿತಿಯನ್ನು ಅನುಸರಿಸಿ ಅವು ಶುಭವೋ ಅಶುಭವೋ ಅಂತ ಹೇಳಬೇಕಾಗುತ್ತದೆ.
ಯಾವ ರಾಶಿಗೆ ಯಾವ ದೇವರ ಪೂಜೆ?
ಮೇಷ, ವೃಶ್ಚಿಕ ರಾಶಿಯವರಿಗೆ ರಾಶ್ಯಾಧಿಪತಿ ಕುಜ. ಈ ಗ್ರಹವನ್ನು ಪ್ರತಿನಿಧಿಸುವ ದೇವತೆಗಳು ಸುಬ್ರಹ್ಮಣ್ಯ, ದುರ್ಗೆ. ಈ ದೇವತೆಗಳ ಪೂಜೆಯಿಂದ ಕಷ್ಟಗಳು ನಿವೃತ್ತಿಯಾಗುತ್ತವೆ. ವೃಷಭ ಹಾಗೂ ತುಲಾ ರಾಶಿಗಳಿಗೆ ಶುಕ್ರ ಅಧಿಪತಿ. ಶುಕ್ರನನ್ನು ಅಧಿಕರಿಸುವ ದೇವತೆ ಲಕ್ಷ್ಮಿ. ಈ ರಾಶಿಯವರು ಲಕ್ಷ್ಮಿಯನ್ನು ಆರಾಧಿಸಿದರೆ ಶೀಘ್ರವಾಗಿ ಇಷ್ಟಾರ್ಥಗಳನ್ನು ಪಡೆಯಬಹುದು.
ಮಿಥುನ, ಕನ್ಯಾ ರಾಶಿಯವರಿಗೆ ರಾಶ್ಯಾಧಿಪತಿ ಬುಧ. ಬುಧನನ್ನು ಅಧಿಕರಿಸುವ ದೇವತೆ ವಿಷ್ಣು. ಈ ರಾಶಿಯವರು ವಿಷ್ಣುವನ್ನು ಆರಾಧಿಸಿ ಶುಭವನ್ನು ಹೊಂದಬಹುದು. ಕರ್ಕ ರಾಶಿಗೆ ಚಂದ್ರನು ಅಧಿಪತಿಯಾಗಿದ್ದಾನೆ. ಚಂದ್ರನ ಸಂಪ್ರೀತಿಗಾಗಿ ಸ್ತ್ರೀದೇವತೆಯಾದ ಲಕ್ಷ್ಮೀ ಅಥವಾ ದುರ್ಗೆಯ ಆರಾಧನೆ ಮಾಡುವುದು ಉತ್ತಮ. ಸಿಂಹರಾಶಿಯ ಅಧಿಪತಿ ರವಿ. ರವಿಯನ್ನು ಪ್ರತಿನಿಧಿಸುವ ದೇವತೆ ಶಿವ. ಶಿವನ ಆರಾಧನೆ ಮಾಡಿ ಈ ರಾಶಿಯವರು ಸಂತಸವನ್ನು ಹೊಂದಬಹುದು. ಶನಿ ಗ್ರಹನು ಮಕರ ಹಾಗೂ ಕುಂಭ ರಾಶಿಗಳ ಅಧಿಪತಿ. ಶನಿಯನ್ನು ಅಧಿಕರಿಸುವ ದೇವತೆ ಮೃತ್ಯುಂಜಯ. ಮೃತ್ಯುಂಜಯನನ್ನು ಆರಾಧಿಸಿ ಈ ಗ್ರಹದ ಪೀಡೆಯಿಂದ ಪಾರಾಗಬಹುದು.
Subscribe to:
Post Comments (Atom)
No comments:
Post a Comment