Tuesday, July 3, 2012

ಬೆನ್ನು ನೋವಿಗೆ ಮನೆಯಲ್ಲೇ ಇದೆ ಪರಿಹಾರ

ಬೆನ್ನು ನೋವಿಗೆ ಮನೆಯಲ್ಲೇ ಇದೆ ಪರಿಹಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಬಿಡುವಿಲ್ಲದ ಕೆಲಸ ನಿಮಗೆ. ಸಾಲದ್ದಕ್ಕೆ ಆಗಾಗ ವಿಚಿತ್ರ ನೋವೊಂದು ನಿಮ್ಮ ಬೆನ್ನೇರುತ್ತದೆ. ಹಾಗೆ ಬೆನ್ನು ಹತ್ತಿದ ನೋವು ಬಿಡುವುದೇ ಇಲ್ಲ. ಆಗಾಗ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಖಿನ್ನತೆ, ಒತ್ತಡ, ಆತಂಕದ ಮುನ್ಸೂಚನೆ ಇರಬಹುದು. ವಂಶಪಾರಂಪರಗತವಾಗಿಯೂ ಬಂದಿರಬಹುದು. ಬಂದ ದಾರಿ ಯಾವುದೇ ಇರಲಿ, ಬಂದಂತೂ ಆಗಿದೆ. ಈಗ ಬೇಕಿರುವುದು ಪರಿಹಾರ ಮಾತ್ರ. ಆ ಕ್ಷಣಕ್ಕೆ ಯಾವುದೋ ನೋವು ನಿವಾರಕ ಔಷಧ ಬೆನ್ನಿಗೆ ಹಚ್ಚುತ್ತೀರ. ಮಾತ್ರ ಸೇವಿಸುತ್ತೀರ. ಆ ಕ್ಷಣಕ್ಕೆ ಅದು ಮಾಯವಾದರೂ ನಾಳೆ ಬೆಳಗ್ಗೆ ಪುನಃ ಅದು ಹಿಂಬಾಲಿಸುತ್ತದೆ. ಅದರ ಮೇಲೆ ವಿಪರೀತ ಅವಲಂಬಿತರಾಗುತ್ತೀರ. ಜತೆಗೆ ಅಡ್ಡ ಪರಿಣಾಮಗಳಿಗೂ ನೀವೆ ದಾರಿ ಮಾಡಿ ಕೊಡುತ್ತೀರ. ಎಷ್ಟುದಿನ ಅಂತ ಯಾವುದ್ಯಾವುದೋ ಔಷಧ ಹಚ್ಚುತ್ತೀರ. ಮಾತ್ರೆಗಳನ್ನು ನುಂಗುವುದಂತೂ ಬೇಡವೇಬೇಡ. ಹಾಗಂತ ನೋವು ಸಹಿಸಿಕೊಂಡು ಬಿಡಿ ಅಂತಲ್ಲ. ಮನೆಮದ್ದು ಟ್ರೈ ಮಾಡಿ. - ಬೆನ್ನು ನೋವಿದ್ದಾಗ ಬಿಸಿಬಿಸಿಯಾಗಿ ತಿನ್ನಿ. ತಿನ್ನುವ ಪದಾರ್ಥದಲ್ಲಿ ಶುಂಠಿ ಇದ್ದರೆ ಒಳ್ಳೆಯದು. - ನೋವಿರುವ ಭಾಗಕ್ಕೆ ಬೆಚ್ಚಗಿನ ನೀರಿನ ಶಾಖ ನೀಡಿ. - ಪುದಿನಾ ಎಣ್ಣೆಗಳಂಥ ನೈಸರ್ಗಿಕ ಎಣ್ಣೆಗಳಿಂದ ಮಸಾಜ್ ಮಾಡಿ. - ಪ್ರತಿನಿತ್ಯ ಶುಂಠಿ ಸೇವಿಸಿ. - ವಿಟಮಿನ್ ಸಿ ಒಳಗೊಂಡಿರುವ ಹಣ್ಣು, ತರಕಾರಿ ಹೆಚ್ಚು ಸೇವಿಸಿ. - ಲಿಂಬೆರಸಕ್ಕೆ ಉಪ್ಪು ಸೇರಿಸಿ ಜ್ಯೂಸ್ ತಯಾರಿಸಿ ಕುಡಿಯಿರಿ. ಸುಂದರ ಕೂದಲಿಗೆ ಮೆಂತ್ಯ ನಿಮ್ಮ ಮುಖದ ಸೌಂದರ್ಯ ಹೆಚ್ಚಿಸಲು ಕೂದಲ ಆರೋಗ್ಯ ಕೂಡ ಪರೋಕ್ಷವಾಗಿ ಸಹಕರಿಸುತ್ತದೆ ಎಂಬುದನ್ನು ಮರೆಯದಿರಿ. ಯಾಕಂದ್ರೆ, ಒಣಗಿದ ಕೂದಲು ಯಾವುದೇ ಕಾರಣಕ್ಕೂ ಸುಂದರವಾಗಿ ಕಾಣಲು ಸಾಧ್ಯವಿಲ್ಲ. ಆಗಾಗ್ಗೆ ಕಂಡಿಷನಿಂಗ್ ಮಾಡುವುದು ಅತ್ಯಗತ್ಯ. ರಾಸಾಯನಿಕ ಪದಾರ್ಥಗಳಿಂದ ಕಂಡಿಷನಿಂಗ್ ಮಾಡುವುದು ಸುಲಭ ಏನಿಸಿದರೂ, ತಕ್ಷಣಕ್ಕೆ ನಿಮ್ಮ ಕೂದಲು ನಳನಳಿಸಿದಂತೆ ಕಂಡರೂ, ಮುಂದೊಮ್ಮೆ ಉದುರುವ ಸಾಧ್ಯತೆಯೇ ಹೆಚ್ಚು. ನ್ಯಾಚುರಲ್ ಹೇರ್ಕಂಡಿಷನರ್ ನಿಮ್ಮ ಅಡುಗೆಮನೆಯಲ್ಲಿ ಅತಿ ಸುಲಭವಾಗಿ ಲಭ್ಯವಿರುವ ಮೆಂತ್ಯ ಹೇರ್ ಕಂಡಿಷನಿಂಗ್ ಕೆಲಸ ಮಾಡುತ್ತದೆ. ಇದನ್ನು ಆಗಾಗ್ಗೆ ಬಳಸುವುದರಿಂದ ನಿಮ್ಮ ಕೂದಲ ನೈಜ ಸೌಂದರ್ಯ ಹಾಳಾಗದು. ಮಾತ್ರವಲ್ಲ, ದೇಹ ಕೂಡ ತಂಪಾಗಿರುತ್ತದೆ. ಹೊಳೆಯುವ ಕೂದಲಿಗೆ ನಿಮ್ಮ ಕೂದಲಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಮೆಂತ್ಯ ಪುಡಿ ಮಾಡಿಕೊಳ್ಳಿ. ಅರ್ಧ ಕಪ್ ಮೊಸರಿನಲ್ಲಿ ಕಲಸಿ. ಇದಕ್ಕೆ ನಾಲೈದು ಹನಿ ನಿಂಬೆರಸ ಹಾಕಿ. ಇದನ್ನು ನಿಮ್ಮ ಕೂದಲಿಗೆ ಪ್ಯಾಕ್ ಹಾಕಿ. ಇದು ಕಂಡಿಷನರ್ನಂತೆ ಕಾರ್ಯ ನಿರ್ವಹಿಸುತ್ತದೆ. ಕೊಂಚ ಸಮಯದ ನಂತರ ತಣ್ಣಿರಿನಲ್ಲಿ ತೊಳೆಯಿರಿ. ಹೊಟ್ಟಿರುವ ಕೂದಲಿಗೆ ರಾತ್ರಿಯಿಡಿ ಮೆಂತ್ಯವನ್ನು ನೀರಿನಲ್ಲಿ ನೆನೆಸಿ. ಬೆಳಗ್ಗೆ ಇದನ್ನು ನುಣ್ಣಗೆ ರುಬ್ಬಿ. ತಲೆ ಬುರಡೆಗೆ ಲೇಪಿಸಿ. 30 ನಿಮಿಷಗಳ ವರೆಗೆ ಹಾಗೆಯೇ ಬಿಡಿ. ನಂತರ ಶ್ಯಾಂಪೂವಿನಿಂದ ಸ್ನಾನ ಮಾಡಿ. ಬಲು ಮುಖ್ಯ ಬಾಯಿಯ ಆರೋಗ್ಯ ಡಾ. ಎಸ್.ಎಸ್. ಅಂಗಡಿ ಇಂದಿನ ನಮ್ಮ ಜೀವನಶೈಲಿ ತುಂಬಾ ಬದಲಾಗಿದೆ. ಉಡುಗೆ, ತೊಡುಗೆ, ಆಚಾರ, ಆಹಾರ, ವಿಹಾರ ಯಾವುದೂ ಮೊದಲಿನಂತಿಲ್ಲ. ಪಿಜ್ಜಾ, ಬರ್ಗರ್, ಚಾಕಲೇಟ್, ಐಸ್ಕ್ರೀಂ, ಕೇಕ್ ಇತ್ಯಾದಿ ಜಂಕ್ ಫುಡ್ಸ್ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿವೆ. ಬರೀ ಆಹಾರದ ರುಚಿ ನೋಡಿದರೆ ಸಾಲದು, ಅದರ ಅಡ್ಡ ಪರಿಣಾಮಗಳ ಬಗ್ಗೆಯೂ ವಿಚಾರ ಮಾಡಬೇಕು. ಇಂಥ ಆಹಾರಗಳಿಂದ ಬಾಯಿ ಸಂಬಂಧಿ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉದಾ: ಹುಳುಕು ಹಲ್ಲು, ಬಾಯಿ ಹುಣ್ಣು, ವಸಡಿನ ರೋಗಗಳು ಇತ್ಯಾದಿ. ಹಾಗಾದರೆ ಇಂಥ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾಧ್ಯವೆ? ಖಂಡಿತಾ ಸಾಧ್ಯವಿದೆ. ಆಯುರ್ವೇದ ಶಾಸ್ತ್ರದಲ್ಲಿ ಹೇಳಿರುವ ಕೆಲವು ನಿಯಮಗಳನ್ನು ಪಾಲಿಸಬೇಕಷ್ಟೇ. ಮಂಜನ : ಔಷಧ ದ್ರವ್ಯಗಳನ್ನು ಬೆರಳಿನ ತುದಿಯಲ್ಲಿ ತೆಗೆದುಕೊಂಡು ವಸಡು ಮತ್ತು ಹಲ್ಲಿನ ಮೇಲೆ ನಿಧಾನವಾಗಿ ಉಜ್ಜುವುದು. ಮಂಜನಕ್ಕೋಸ್ಕರ ನಾಲ್ಕು ವಿಧದ ಔಷಧ ದ್ರವ್ಯಗಳನ್ನು ಉಪಯೋಗಿಸಲಾಗುತ್ತದೆ. ಪುಡಿ, ಕಲ್ಕ, ಅವಲೇಹ ಮತ್ತು ಜೇನುತುಪ್ಪ. ಈ ರೀತಿ ಮಾಡುವುದರಿಂದ ವಸಡು ಮತ್ತು ಹಲ್ಲಿನ ಮೇಲಿನ ಕೊಳೆ ಹೋಗಲಾಡಿಸಿ, ಅವುಗಳ ಸಂರಕ್ಷಣೆ ಮಾಡಬಹುದು. ಇಲ್ಲದಿದ್ದರೆ ಪ್ರತಿ ದಿನ ಸ್ವಲ್ಪ ಸ್ವಲ್ಪ ಕೊಳೆ ಶೇಖರಗೊಂಡು ಗಟ್ಟಿಯಾಗಿ, ವಸಡು ಮತ್ತು ಹಲ್ಲಿನ ರೋಗಗಳಿಗೆ ಕಾರಣವಾಗುತ್ತವೆ. ಕೆಲವೊಮ್ಮೆ ಬಾಯಿಯ ದುರ್ವಾಸನೆಯೂ ಬರುವುದಿದೆ. ಗಂಡೂಷ: ಕೆಲವು ಔಷಧ ದ್ರವಗಳನ್ನು ಬಾಯಿಯಲ್ಲಿ ತುಂಬಿಕೊಂಡು 10-15 ನಿಮಿಷಗಳ ವರೆಗೆ ಶಾಂತಚಿತ್ತದಿಂದ ಕುಳಿತುಕೊಳ್ಳುವುದು. ನಂತರ ಉಗುಳುವುದು. ಉದಾ- ಎಳ್ಳೆಣ್ಣೆ, ಜೇನುತುಪ್ಪ, ಗಂಜಿ, ಬಿಸಿನೀರು ಇತ್ಯಾದಿ. ಮುಕ್ಕಳಿಸುವುದು: ಔಷಧ ದ್ರವಗಳನ್ನು ಬಾಯಿಯಲ್ಲಿ ತುಂಬಿಕೊಂಡು ಬಾಯಿ ಮುಕ್ಕಳಿಸಬೇಕು. ತ್ರಿಫಲಾ ಕಷಾಯ, ಪಂಚವಲ್ಕಲ ಕಷಾಯ, ಬಿಸಿನೀರು ಇತ್ಯಾದಿಗಳನ್ನು ಇದಕ್ಕೆ ಬಳಸಬಹುದು. ಈ ರೀತಿಯ ಚಿಕಿತ್ಸಾ ವಿಧಾನದಲ್ಲಿ ಸ್ನೇಹನ, ಪ್ರಸಾದನ, ಶೋಧನ ಮತ್ತು ರೋಪಣ ಎಂದು ನಾಲ್ಕು ಉಪಭೇದಗಳಿವೆ. ಈ ಚಿಕಿತ್ಸಾ ವಿಧಾನಗಳಿಂದ ಬಾಯಿಹುಣ್ಣು, ಹುಳುಕುಹಲ್ಲು, ಗಂಟಲುಬೇನೆ, ಬಾಯಿ ಒಣಗುವುದು, ದಾಹವಾಗುವುದು, ರುಚಿ ಇಲ್ಲದಿರುವುದು, ನೆಗಡಿ, ಕಿವಿ ಕಾಯಿಲೆಗಳು, ತಲೆನೋವು ಇತ್ಯಾದಿ ಸಮಸ್ಯೆಗಳನ್ನು ತಡೆಗಟ್ಟಬಹುದು. ಪಥ್ಯ ಮಾಡಿ ಗೋಧಿ, ಜೋಳ, ಹಳೆ ಅಕ್ಕಿ, ಹೆಸರು ಕಾಳು, ಹುರಳಿಕಾಳು, ಹಾಗಲಕಾಯಿ, ಪಾಲಕ್, ಮೂಲಂಗಿ, ಪಡವಲಕಾಯಿ, ಗಜ್ಜರಿ, ಬೀಟ್ರೂಟ್ ಇತರೆ ಹಸಿರು ಕಾಯಿಪಲ್ಲೆ, ಮೋಸಂಬಿ, ನಿಂಬೆಹಣ್ಣು, ನೆಲ್ಲಿಕಾಯಿ, ಟೊಮೇಟೊ, ತಾಂಬೂಲ, ಬೆಣ್ಣೆ ಸೇವಿಸಬಹುದು. ಹುಳಿಮೊಸರು, ಬೆಲ್ಲ ಮತ್ತು ಅದರಿಂದ ತಯಾರಿಸಿದ ಸಿಹಿಪದಾರ್ಥಗಳು, ಉದ್ದು, ತಣ್ಣೀರು, ಗಟ್ಟಿಯಾದ ಆಹಾರ, ಮೀನು ಮಾಂಸ, ದನ ಮತ್ತು ಹಂದಿ ಮಾಂಸ, ಕಬ್ಬಿನ ಹಾಲು, ಹಗಲು ನಿದ್ರೆ, ತಲೆ ಕೆಳಗೆ ಮಾಡಿ ಮಲಗುವುದು ಇವೆಲ್ಲ ನಿಷಿದ್ಧ.

No comments: