Monday, July 2, 2012

ಹೊಸ ಕಚೇರಿಗೆ ಯಡಿಯೂರಪ್ಪ! ವಿಶೇಷ ಏನಪ್ಪ?

ಬೆಂಗಳೂರು: ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ, ಮಾಜಿ ಸಿಎಂ ಯಡಿಯೂರಪ್ಪ ಹೊಸ ಕಚೇರಿ ತೆರೆದಿದ್ದಾರೆ.
ಪಕ್ಷ ತೊರೆಯುವ ಆಲೋಚನೆಯಿಂದ ಹಿಂದೆ ಸರಿದಿದ್ದ ಯಡಿಯೂರಪ್ಪ ಅವರು ಹೊಸ ಕಚೇರಿ ಆರಂಭಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಸಂಚಲನ ತಂದಿದೆ. ಮಲ್ಲೇಶ್ವರದ 16ನೇ ಅಡ್ಡರಸ್ತೆಯಲ್ಲಿ ಈ ಹಿಂದೆ ಬಿಜೆಪಿ ಕಚೇರಿ ಇದ್ದ ಕಟ್ಟಡವನ್ನು ಬಾಡಿಗೆಗೆ ಪಡೆಯಲಾಗಿದೆ. ಬಿಎಸ್ವೈ ಶುಕ್ರವಾರ ಪೂಜೆ ಸಲ್ಲಿಸಿ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಜತೆಯಲ್ಲೇ ಜನಸಂಪರ್ಕ ಸಭೆ ನಡೆಸಲಿದ್ದಾರೆ. ಮುಂದೆ ಇದೇ ಕಟ್ಟಡ ಯಡಿಯೂರಪ್ಪ ಅವರ 'ಹೊಸ ಪಕ್ಷ'ದ ಕಚೇರಿ ಆಗುವ ಸಾಧ್ಯತೆ ಇದೆ.

ಲೆಹರ್ ಸಿಂಗ್ಗೆ ಸೇರಿದ್ದು : ಈ ಕಟ್ಟಡ ಯಡಿಯೂರಪ್ಪ ಅವರ ಪರಮಾಪ್ತ, ಮೇಲ್ಮನೆ ಸದಸ್ಯ ಲೆಹರ್ ಸಿಂಗ್ಗೆ ಸೇರಿದೆ. ಇದು ವರ್ಷದ ಹಿಂದೆ ಬಿಜೆಪಿ ಕೇಂದ್ರ ಕಚೇರಿ ಆಗಿತ್ತು. ಕಾಡು ಮಲ್ಲೇಶ್ವರ ದೇವಸ್ಥಾನದ ಸಮೀಪ ಬಿಜೆಪಿ ಸ್ವಂತ ಕಚೇರಿ ಕಟ್ಟಿಕೊಂಡ ಬಳಿಕ ಈ ಕಟ್ಟಡ ಖಾಲಿ ಇತ್ತು. ಈಗ ಅದು ಯಡಿಯೂರಪ್ಪ ಅವರ ಕಚೇರಿ ಆಗಿದೆ.

ಮಲ್ಲೇಶ್ವರದಲ್ಲೇ ಇರುವ ಬಾಬುರಾವ್ ದೇಶಪಾಂಡೆ ಭವನದಲ್ಲಿ ವಾಸ್ತು ದೋಷ ಇದೆ ಎಂದು ಬಾಡಿಗೆ ಕಟ್ಟಡಕ್ಕೆ ಬಿಜೆಪಿ ಕೇಂದ್ರ ಕಚೇರಿ ಸ್ಥಳಾಂತರಿಸಲಾಗಿತ್ತು. ವಾಸ್ತು ತಜ್ಞ ಕೆ.ಗಂಗಾಧರ್ ಸಲಹೆಯಂತೆ ಕಟ್ಟಡದಲ್ಲಿ ಕೆಲ ಮಾರ್ಪಾಡು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸದಾನಂದಗೌಡ ರಾಜ್ಯಾಧ್ಯಕ್ಷರಾಗಿದ್ದರು. ಬಾಡಿಗೆ ಕಟ್ಟಡಕ್ಕೆ ಹೋದ ನಂತರ 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಿತು. ಹೀಗಾಗಿ ಅದು ಅದೃಷ್ಟದ ಕಟ್ಟಡ ಎಂಬ ನಂಬಿಕೆ ಪಕ್ಷದಲ್ಲಿದೆ.

ಅದೃಷ್ಟದ ಬಂಗಲೆ ಖಾಲಿ : ಅವರ ಪಾಲಿಗೆ ಅದೃಷ್ಟದ ಬಂಗಲೆ ಎಂದೇ ಹೇಳಲಾಗಿದ್ದ ರೇಸ್ಕೋರ್ಸ್ ರಸ್ತೆಯಲ್ಲಿರುವ ಸರಕಾರಿ ಅತಿಥಿ ಗೃಹವನ್ನು ಜೂನ್ 1ರಂದು ಯಡಿಯೂರಪ್ಪ ಖಾಲಿ ಮಾಡಲಿದ್ದಾರೆ. 2004ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿದ್ದ ಅವಧಿಯಿಂದ ಅವರು ಅಲ್ಲಿ ವಾಸವಿದ್ದರು. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ತೆರವು ಮಾಡಿರಲಿಲ್ಲ. ಆರು ತಿಂಗಳೊಳಗೆ ಖಾಲಿ ಮಾಡಬೇಕೆಂಬ ನಿಯಮವಿದೆ. ಆದರೆ ಸರಕಾರಕ್ಕೆ ಬಾಡಿಗೆ ಕಟ್ಟುತ್ತಿದ್ದೇನೆ ಎಂದು ಮಾಜಿ ಸಿಎಂ ಹೇಳಿಕೊಂಡಿದ್ದಾರೆ. ಆ ಮನೆಗೆ ಹೋದ ಬಳಿಕ ಪ್ರತಿಪಕ್ಷ ನಾಯಕ, ನಂತರ ಡಿಸಿಎಂ, ಸಿಎಂ ಹುದ್ದೆಗೇರಿದ್ದಾರೆ. ಎಂಟು ವರ್ಷಗಳಿಂದ ವಾಸ ಮಾಡುತ್ತಿದ್ದ ಬಂಗಲೆಯನ್ನು ಈಗ ಅವರು ಖಾಲಿ ಮಾಡುತ್ತಿದ್ದಾರೆ.

ಧವಳಗಿರಿಗೆ ಪಯಣ: ಮುಖ್ಯಮಂತ್ರಿ ಅಧಿಕೃತ ನಿವಾಸ ಅನುಗ್ರಹ ಆದರೂ ವಾಸ್ತು ದೋಷ ಇನ್ನಿತರ ಕಾರಣಗಳಿಂದ ಅಲ್ಲಿಗೆ ಹೋಗಲು ಬಯಸದೆ ರೇಸ್ಕೋರ್ಸ್ ನಿವಾಸಕ್ಕೆ ಭದ್ರತೆ ಸೇರಿದಂತೆ ಸಕಲ ವ್ಯವಸ್ಥೆ ಮಾಡಿಸಿಕೊಂಡಿದ್ದರು. ಅಧಿಕಾರ ತಂದುಕೊಟ್ಟ ಅದೃಷ್ಟದ ನಿವಾಸದಲ್ಲಿ ಈಗ ವಾಸ್ತು ದೋಷ ಇರುವುದರಿಂದ ಮನೆ ಖಾಲಿ ಮಾಡುವಂತೆ ವಾಸ್ತುತಜ್ಞರು ನೀಡಿದ ಸಲಹೆ ಮೇರೆಗೆ ಡಾಲರ್ಸ್ ಕಾಲೊನಿಯ ಸ್ವಂತ ನಿವಾಸ ಧವಳಗಿರಿಗೆ ಯಡಿಯೂರಪ್ಪ ಸ್ಥಳಾಂತರಗೊಳ್ಳುತ್ತಿದ್ದಾರೆ.

ಜನಸಂಪರ್ಕ ಸಭೆ : 'ಧವಳಗಿರಿ ಮನೆ ಚಿಕ್ಕದಾಗಿರುವುದರಿಂದ ಬೆಂಬಲಿಗರು, ಕಾರ್ಯಕರ್ತರು ಹಾಗೂ ಅಭಿಮಾನಿಗಳ ಭೇಟಿಗೆ ಜಾಗ ಸಾಕಾಗುವುದಿಲ್ಲ. ಜನರೊಂದಿಗೆ ಬೆರೆಯಬೇಕೆಂದು ತೀರ್ಮಾನ ಮಾಡಿದ್ದೇನೆ. ಭೇಟಿಗೆ ಬಂದವರ ಜತೆ ಮುಕ್ತವಾಗಿ ಚರ್ಚಿಸಲಿದ್ದೇನೆ. ಹೀಗಾಗಿ ಹೊಸ ಕಚೇರಿ ಆರಂಭಿಸುತ್ತಿದ್ದೇನೆ' ಎಂದು ಮಾಜಿ ಸಿಎಂ ಸಮಜಾಯಿಷಿ ನೀಡಿದ್ದಾರೆ.

ಹೊಸ ಕಚೇರಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ ಪೂರ್ಣಗೊಳಿಸಲಾಗಿದೆ. ಗುರುವಾರ ಬೆಳಗ್ಗೆ ಹೊಸ ಕಚೇರಿಗೆ ಭೇಟಿ ನೀಡಿದ ಯಡಿಯೂರಪ್ಪ ಸಿದ್ಧತೆ ವೀಕ್ಷಿಸಿದರು. ಅಲ್ಲಿಗೆ ಉಪಾಹಾರ ತರಿಸಿ ತಿಂದರು. ಶಾಸಕರಾದ ಸುರೇಶ್ ಗೌಡ, ಎಸ್.ಆರ್.ವಿಶ್ವನಾಥ್, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಮೊದಲಾದವರು ಜತೆಗಿದ್ದರು.

ಸೋನಿಯಾ ಫೋಟೊ!

ಹೊಸ ಕಚೇರಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪೋಟೊ ರಾರಾಜಿಸುತ್ತಿರುವುದು ಯಡಿಯೂರಪ್ಪ ಅವರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ಎಂಬ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಯಡಿಯೂರಪ್ಪ ಕುಳಿತುಕೊಳ್ಳುವ ಕೊಠಡಿಯಲ್ಲಿ ವಾಜಪೇಯಿ ಪೋಟೊ ಹಾಕಲಾಗಿದೆ. ಮೈಸೂರಿನಲ್ಲಿ ನಡೆದ ಇನ್ಫೋಸಿಸ್ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಷಣ ಮಾಡುತ್ತಿರುವ, ಸೋನಿಯಾ ಗಾಂಧಿ, ಎನ್.ಆರ್.ನಾರಾಯಣಮೂರ್ತಿ ವೇದಿಕೆ ಮೇಲಿರುವ ಫೋಟೊ ತೂಗು ಹಾಕಲಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ತೆಗೆಸಲಾದ ಫೋಟೊಗಳನ್ನು ಹಾಲ್ನಲ್ಲಿ ಹಾಕಲಾಗಿದೆ. ಅವುಗಳಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮಾಜಿ ರಾಷ್ಟ್ರಪತಿ ಡಾ.ಅಬ್ಡುಲ್ ಕಲಾಂ, ಕೇಂದ್ರ ಸಚಿವ ಪ್ರಣಬ್ ಮುಖರ್ಜಿ ಸೇರಿ ಅನೇಕ ನಾಯಕರ ಫೋಟೊಗಳಿವೆ. ಅಚ್ಚರಿ ಅಂದರೆ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹಾಗೂ ಸಂಘ ಪರಿವಾರದ ನಾಯಕರ ಫೋಟೊಗಳಿಗೆ ಜಾಗ ನೀಡದಿರುವುದು. ತಮ್ಮ ರಾಜಕೀಯ ಹಿನ್ನಡೆಗೆ ಆಡ್ವಾಣಿ ಕಾರಣ ಎಂಬ ಸಿಟ್ಟು ಯಡಿಯೂರಪ್ಪ ಅವರಲ್ಲಿದೆ. ಈ ಕಾರಣಕ್ಕೆ ಅವರ ಫೋಟೊ ಹಾಕಿಲ್ಲ ಎನ್ನಲಾಗಿದೆ.

ಕಟ್ಟುವ, ಕೆಡವುವ ವಾಸ್ತು ಆಟದಲ್ಲಿ ರಾಜಕಾರಣಿಗಳು * ಸುದರ್ಶನ್ ಚನ್ನಂಗಿಹಳ್ಳಿ, ಬೆಂಗಳೂರು

ವಾಸ್ತು ಪುರುಷನನ್ನು ಒಲಿಸಿಕೊಂಡರೆ ಅಧಿಕಾರ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿಂದ ಕೆಲ ರಾಜಕಾರಣಿಗಳು ವಾಸವಿರುವ ಮನೆ ನೆಲಸಮಗೊಳಿಸಿ ವಾಸ್ತು ತಜ್ಞರ ಸಲಹೆಯಂತೆ ಮರು ನಿರ್ಮಾಣ ಕೈಂಕರ್ಯ ಕೈಗೊಂಡಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದ ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಬಸವನಗುಡಿ ನಿವಾಸದಲ್ಲಿ ವಾಸ್ತುದೋಷವಿದೆ ಎಂದು, ಅದನ್ನು ಕೆಡವಿ ಹೊಸ ಮನೆ ಕಟ್ಟಲು ಯೋಜನೆ ಸಿದ್ಧಪಡಿಸಿದ್ದಾರೆ. ಸಮೀಪದಲ್ಲೇ ವಾಸ್ತು ಪಕ್ಕಾ ಇರುವ ಮನೆ ಬಾಡಿಗೆ ಪಡೆಯಲು ನೂರಾರು ಮನೆಗಳನ್ನು ಹುಡುಕಾಡಿದರೂ ಸೂಕ್ತವಾದ ಮನೆ ಸಿಕ್ಕಿಲ್ಲ. ಕೊನೆಗೆ, ಹಿಂದೆ ವೈಯಾಲಿಕಾವಲ್ನಲ್ಲಿ ವಾಸವಿದ್ದ ಸೋದರ ಸಂಬಂಧಿಯವರ ಮನೆಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳಲು ಅವರು ನಿರ್ಧರಿಸಿದ್ದಾರೆ. ಈ ಮನೆಯಲ್ಲಿ ವಾಸ ಇದ್ದ ಸಂದರ್ಭದಲ್ಲೇ ಅನಂತಕುಮಾರ್ಗೆ ಕೇಂದ್ರ ಸಚಿವ ಸ್ಥಾನಮಾನ ಸಿಕ್ಕಿದ್ದು ಎಂಬುದು ವಿಶೇಷ. ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವ ಅನಂತಕುಮಾರ್ ವಾಸ್ತು ತಜ್ಞರ ಸಲಹೆ ಮೇರೆಗೆ ಮನೆ ಮರು ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಸುಬ್ರಹ್ಮಣ್ಯನಗರದಲ್ಲಿ ವಾಸ್ತು ಪ್ರಕಾರ ಇರುವ ಮನೆ ಬಾಡಿಗೆ ಪಡೆದುಕೊಂಡ ಬಳಿಕವೇ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದು. ವಾಸ್ತು ದೋಷದ ಭಯದಿಂದ ಮೂರು ವರ್ಷ ಖಾಲಿ ಇದ್ದ ಅನುಗ್ರಹಕ್ಕೆ ಧೈರ್ಯದಿಂದಲೇ ಸದಾನಂದ ಗೌಡರು ಕುಟುಂಬ ಸಮೇತ ವಾಸ ಹೋಗಿದ್ದು ಕೂಡ ವಾಸ್ತು ದೋಷ ಸರಿಪಡಿಸಿಕೊಂಡ ಬಳಿಕವೇ ಎಂಬುದು ಅಚ್ಚರಿಯ ಸಂಗತಿ. ದಿವಂಗತ ಡಾ.ವಿ.ಎಸ್.ಆಚಾರ್ಯ ಅನುಗ್ರಹಕ್ಕೆ ವಾಸ ಹೋಗಿ ವಾಸ್ತು ದೋಷ ಎಂದು ವಾರದಲ್ಲೇ ಬಂಗಲೆ ಖಾಲಿ ಮಾಡಿದ್ದರು. ಅಂದು ಸಿಎಂ ಆಗಿದ್ದ ಯಡಿಯೂರಪ್ಪ ಅನುಗ್ರಹಕ್ಕೆ ಹೋಗಲು ನಿರಾಕರಿಸಿದ್ದರು.

ಕೆಐಎಡಿಬಿ ಭೂ ಹಗರಣ ಆರೋಪ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಟ್ಟಾ ಸುಬ್ರಹ್ಮಣ್ಯನಾಯ್ಡು ಸದಾಶಿವನಗರದಲ್ಲಿ ಹೊಸದಾಗಿ ಕಟ್ಟಿಸಿಕೊಂಡಿದ್ದ ಮನೆಯ ವಾಸ್ತು ಬದಲಾಯಿಸಿಕೊಂಡರು. ಮನೆ ಮುಂದೆ ಕಾರು ನಿಲ್ಲುವ ಜಾಗ ಎತ್ತರವಾಗಿದ್ದನ್ನು ತಗ್ಗಿಸಿದರು. ಮನೆ ಪ್ರವೇಶದ ಬಾಗಿಲನ್ನು ಉತ್ತರ-ಪಶ್ಚಿಮ ಮೂಲೆಗೆ ಬದಲಾಯಿಸಿಕೊಂಡರು.

ಯಡಿಯೂರಪ್ಪ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಅರವಿಂದ ಲಿಂಬಾವಳಿ ನ್ಯೂತಿಪ್ಪಸಂದ್ರ ಮನೆಯನ್ನು ಮತ್ತಷ್ಟು ವಿಸ್ತರಿಸಿಕೊಂಡರು. ಹೊಸದಾಗಿ ಕಟ್ಟಿಕೊಂಡ ಭಾಗದಲ್ಲಿ ವಾಸ್ತುದೋಷ ಇತ್ತು. ಅದಕ್ಕಾಗಿ ಅರ್ಧದಲ್ಲೇ ಸಚಿವ ಸ್ಥಾನ ಕಳೆದುಕೊಂಡರು. ವಾಸ್ತುತಜ್ಞರ ಸಲಹೆಯಂತೆ ಲಕ್ಷಾಂತರ ರೂ. ವೆಚ್ಚ ಮಾಡಿ ಕಟ್ಟಿದ ಭಾಗ ನೆಲಸಮಗೊಳಿಸಿ ವಾಸ್ತು ಅನ್ವಯ ಮಾರ್ಪಡಿಸಿಕೊಂಡಿದ್ದಾರೆ.

ಅಷ್ಟೇ ಏಕೆ? ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಹಾಲಿ ಸಂಸದ ಪಿ.ಸಿ.ಮೋಹನ್ 2008ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಕೊನೆಗೆ ಜಯನಗರ 7ನೇ ಬ್ಲಾಕ್ನಲ್ಲಿ ವಾಸ್ತು ಇರುವ ಮನೆ ಬಾಡಿಗೆ ಪಡೆದರು. ಬನಶಂಕರಿ 2ನೇ ಹಂತದ ಕಾವೇರಿ ನಗರದಲ್ಲಿ ಇದ್ದ ನಿವೇಶನದಲ್ಲಿ ವಾಸ್ತು ಪ್ರಕಾರ ಮನೆ ಕಟ್ಟಿಸಿಕೊಂಡರು. ಅದೇ ಸಮಯಕ್ಕೆ ನಡೆದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು ರಾಜಕೀಯ ಮರು ಜೀವ ಪಡೆದುಕೊಂಡರು. ಈಗ ಅವರು ಖುಷಿಯಾಗಿದ್ದಾರೆ.

ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಕೂದಲೆಳೆ ಅಂತರದಲ್ಲಿ ಗೆದ್ದು ಮಾನ ಉಳಿಸಿಕೊಂಡ ರಾಮಚಂದ್ರಗೌಡರು ಚುನಾವಣೆಗೆ ಕೆಲವು ತಿಂಗಳ ಹಿಂದಷ್ಟೇ ಬಸವೇಶ್ವರನಗರದ ಮನೆಯ ವಾಸ್ತುದೋಷ ಸರಿಪಡಿಸಿಕೊಂಡಿದ್ದರು. ವೈದ್ಯ ಕಾಲೇಜು ಸಿಬ್ಬಂದಿ ನೇಮಕ ಹಗರಣದಲ್ಲಿ ಸಿಲುಕಿ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು.

ಅರ್ಧದಲ್ಲೇ ಸಚಿವ ಸ್ಥಾನ ಕಳೆದುಕೊಂಡಿದ್ದ ಮತ್ತೊಬ್ಬ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ಅವರು ಮಲ್ಲೇಶ್ವರದಲ್ಲಿ ಕಟ್ಟಿಸುತ್ತಿದ್ದ ಭವ್ಯ ಬಂಗಲೆಯಲ್ಲಿ ವಾಸ್ತು ದೋಷ ಸರಿಪಡಿಸಿಕೊಂಡಿದ್ದಾರೆ. ಬಳಿಕವೇ ಅವರಿಗೆ ವ್ಯಾಪಾರ ಮತ್ತು ರಾಜಕೀಯದಲ್ಲಿ ಯಶಸ್ಸು ಸಿಕ್ಕಲಾರಂಭಿಸಿದೆ ಎಂದು ನಂಬಿಕೊಂಡಿದ್ದಾರೆ.

ವಾಸ್ತುದೋಷ ಸರಿಪಡಿಸಿಕೊಂಡರೆ ರಾಜಕೀಯವಾಗಿ ಸ್ಥಾನಮಾನ, ಅಧಿಕಾರ ಸಿಗುತ್ತದೆ ಎಂಬ ನಂಬಿಕೆಯಿಂದಲೇ ಬಿಬಿಎಂಪಿಯ ಕೆಲ ಹೆಚ್ಚಿನ ಕಾರ್ಪೋರೇಟರ್ಗಳು ಮನೆ ವಾಸ್ತು ಬದಲಾಯಿಸಿಕೊಂಡಿದ್ದಾರೆ. ಅವರಲ್ಲಿ ಶ್ರೀಧರ ರೆಡ್ಡಿ, ಮುನೀಂದ್ರಕುಮಾರ್ ಹಾಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಮಲ್ಲೇಶ್ವರ ಕ್ಷೇತ್ರದ ಶಾಸಕ ಡಾ.ಅಶ್ವತ್ಥನಾರಾಯಣ, ಮೇಲ್ಮನೆ ಸದಸ್ಯ ಅಶ್ವತ್ಥನಾರಾಯಣ ಅವರು ಚುನಾವಣೆಗೆ ಮುನ್ನವೇ ವಾಸ್ತುದೋಷ ಸರಿಪಡಿಸಿಕೊಂಡಿದ್ದರು ಎಂಬುದು ವಿಶೇಷ. ಬಿಜೆಪಿ ಕಚೇರಿಯಾದ ಬಾಬುರಾವ್ ದೇಶಪಾಂಡೆ ಭವನದಲ್ಲಿ ವಾಸ್ತು ದೋಷ ಇದೆ ಎಂದು ಮಲ್ಲೇಶ್ವರದ 16ನೇ ಅಡ್ಡರಸ್ತೆಗೆ ಬಾಡಿಗೆ ಮನೆಗೆ ಕಚೇರಿ ಸ್ಥಳಾಂತರಿಸಿದ ಬಳಿಕವೇ ಪಕ್ಷ ಅಧಿಕಾರಕ್ಕೆ ಬಂತು. ಬಳಿಕ ವಾಸ್ತು ಪ್ರಕಾರವೇ ಕಾಡುಮಲ್ಲೇಶ್ವರ ದೇವಸ್ಥಾನ ಸಮೀಪ ಸ್ವತಃ ಕಟ್ಟಡವನ್ನು ಬಿಜೆಪಿ ಕಟ್ಟಿಕೊಂಡಿದೆ. ವಾಸ್ತು ಸರಿಪಡಿಸಿಕೊಂಡ ಎಲ್ಲ ರಾಜಕಾರಣಿಗಳು ಬಿಜೆಪಿಯವರು ಮತ್ತು ಸಲಹೆಗಾರರು ಒಬ್ಬರೇ ಎಂಬುದು ಮತ್ತೊಂದು ವಿಶೇಷ. ವಾಸ್ತು ತಜ್ಞ ಕೆ.ಗಂಗಾಧರ್, ಸದಾನಂದಗೌಡರಿಂದ ಅನಂತಕುಮಾರ್, ಪಿ.ಸಿ.ಮೋಹನ್, ಲಿಂಬಾವಳಿ, ರಾಮಚಂದ್ರಗೌಡ ಸೇರಿದಂತೆ ಎಲ್ಲರಿಗೂ ವಾಸ್ತು ಸಲಹೆ ನೀಡಿದ್ದಾರೆ.

ಆರೋಗ್ಯ ದೃಷ್ಟಿಯಿಂದ ವಾಸ್ತು ಬಹಳ ಮುಖ್ಯ

ಅನೇಕ ರಾಜಕಾರಣಿಗಳು, ಉದ್ಯಮಿಗಳು, ಜನಸಾಮಾನ್ಯರಿಗೆ ವಾಸ್ತುಸಲಹೆ ನೀಡಿದ್ದೇನೆ. ಅದರಂತೆ ಮನೆ ಕಟ್ಟಿಕೊಂಡವರಿಗೆ, ಮಾರ್ಪಾಡು ಮಾಡಿಕೊಂಡವರಿಗೆ ಒಳ್ಳೆಯದಾಗಿದೆ. ಅನೇಕರಿಗೆ ಅಧಿಕಾರವೂಸಿಕ್ಕಿದೆ. ವಾಸ್ತು ಬದಲಾಯಿಸಿಕೊಂಡರೆ ಅಧಿಕಾರ ಕೊಡಿಸುತ್ತೇನೆ ಎಂದು ಯಾರಿಗೂ ಹುಸಿ ಭರವಸೆ ಕೊಡುವುದಿಲ್ಲ. ಮನೆ ಹಾಗೂ ಕುಟುಂಬದ ಸದಸ್ಯರ ಆರೋಗ್ಯ ದೃಷ್ಟಿಯಿಂದ ವಾಸ್ತು ಬಹಳ ಮುಖ್ಯ ಎಂದಷ್ಟೇ ಹೇಳುತ್ತೇನೆ.

- ಕೆ.ಗಂಗಾಧರ್, ವಾಸ್ತು ಸಲಹೆಗಾರ

ವಾಸ್ತುದೋಷ ಸರಿಪಡಿಸಿಕೊಂಡ ರಾಜಕಾರಣಿಗಳು

ಡಿ.ವಿ.ಸದಾನಂದಗೌಡ, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅರವಿಂದ ಲಿಂಬಾವಳಿ,ಎಸ್.ಎನ್.ಕೃಷ್ಣಯ್ಯಶೆಟ್ಟಿ, ರಾಮಚಂದ್ರಗೌಡ, ಸಂಸದ ಪಿ.ಸಿ.ಮೋಹನ್, ಶಾಸಕ ಡಾ.ಅಶ್ವತ್ಥನಾರಾಯಣ, ಮೇಲ್ಮನೆ ಸದಸ್ಯಅಶ್ವತ್ಥನಾರಾಯಣ, ಬಿಬಿಎಂಪಿ ಕೆಲ ಸದಸ್ಯರು, ಬಿಜೆಪಿ ಕಚೇರಿ.

ಕಾಯಿಲೆ ಕಿರಿ ಕಿರಿ, ಮನೆಮದ್ದೇ ಸರಿ ಅಜೀರ್ಣ

* ಪ್ರತಿನಿತ್ಯ 15 ರಿಂದ 20 ನಿಮಿಷಗಳವರೆಗೆ ಖಾಲಿ ಹೊಟ್ಟೆಗೆ ಅಥವಾ ಊಟವಾದ 2-3 ಗಂಟೆಗಳ ನಂತರ ಹೊಟ್ಟೆ ಭಾಗಕ್ಕೆ ಬಿಸಿನೀರಿನ ಶಾಖ ಕೊಡಿ. ಮಧ್ಯೆ ಮಧ್ಯೆ ಎರಡು ನಿಮಿಷಗಳವರೆಗೆ ಐಸ್ ತುಂಬಿದ ರಬ್ಬರ ಬ್ಯಾಗ್ ಇಡಿ.

* ಹಣ್ಣು, ತರಕಾರಿ ಹೆಚ್ಚು ಸೇವಿಸಿ. ನಿಯಮಿತ ವ್ಯಾಯಾಮ ಮಾಡಿ. * ತಂಬಾಕು, ಮದ್ಯಪಾನ ತ್ಯಜಿಸಿ. * ಕೊಬ್ಬಿನಾಂಶವಿರುವ ಆಹಾರ ತ್ಯಜಿಸಿ.

ಮಲಬದ್ಧತೆ

* ಅಧಿಕ ನಾರುಳ್ಳ ಹಣ್ಣು, ತರಕಾರಿ, ಮೊಳಕೆ ಕಾಳುಗಳನ್ನು ಸೇವಿಸಿ. * ಕರುಳಿನ ಸ್ನಾಯುಗಳನ್ನು ಬಲಪಡಿಸಲು ದಿನನಿತ್ಯ 45 ನಿಮಿಷಗಳವರೆಗೆ ವ್ಯಾಯಾಮ ಮಾಡಿರಿ.

* ಬೆಳಗ್ಗೆ ಹಲ್ಲುಜ್ಜಿದ ನಂತರ 3-4 ಗ್ಲಾಸ್ ನೀರು ಕುಡಿದು, 10 ನಿಮಿಷ ಲಘು ನಡಿಗೆ ಮಾಡಿ. ದಿನಕ್ಕೆ 3-4 ಲೀಟರ್ ನೀರು ಕುಡಿಯಬೇಕು.

* ಶುದ್ಧೀಕರಿಸಿ ನೆನೆಹಾಕಿದ ಮಣ್ಣನ್ನು ಅರ್ಧಗಂಟೆಯವರೆಗೆ ಹೊಟ್ಟೆ ಭಾಗಕ್ಕೆ ಬೆಳಗಿನ ಆಹಾರ ಸೇವನೆಗೂ ಮುನ್ನ ಲೇಪಿಸಿಕೊಳ್ಳಬೇಕು.

* ದೀರ್ಘಕಾಲದಿಂದ ಮಲಬದ್ಧತೆಯಿಂದ ಬಳಲುತ್ತಿದ್ದರೆ ಕಟಿಸ್ನಾನ ಮತ್ತು ಎನಿಮಾ ಚಿಕಿತ್ಸೆಯನ್ನು ಪ್ರಕೃತಿ ಚಿಕಿತ್ಸಕರ ಮಾರ್ಗದರ್ಶನದಲ್ಲಿ ಪಡೆದುಕೊಳ್ಳಿ.

ಜ್ವರ

* ಉಪವಾಸ ಅತ್ಯುತ್ತಮ ಚಿಕಿತ್ಸೆ. ನೀರು ಮತ್ತು ಕಿತ್ತಳೆ ರಸ ಮಾತ್ರ ಸೇವಿಸಬೇಕು. ಉಪವಾಸದ ಅವಧಿಯಲ್ಲಿ ಪ್ರತಿನಿತ್ಯ ಬಿಸಿ ನೀರಿನ ಎನಿಮಾ ತೆಗೆದುಕೊಳ್ಳಬೇಕು.

* ತಣ್ಣೀರಿನ ಸ್ಪಾಂಜ್ಬಾತ್ ತೆಗೆದುಕೊಳ್ಳಿ. * ಹಣೆ ಭಾಗದ ಮೇಲೆ 45 ನಿಮಿಷಗಳವರೆಗೆ ಮಣ್ಣಿನ ಪಟ್ಟಿ ಹಾಕಿ. ಈ ರೀತಿ ದಿನಕ್ಕೆ 3-4 ಬಾರಿ ಮಾಡಿ.

ಶೀತ

* 15 ನಿಮಿಷಗಳವರೆಗೆ ಎರಡೂ ಪಾದಗಳನ್ನು ಬಿಸಿನೀರಿನಲ್ಲಿ ಮುಳಿಗಿಸಿಡಬೇಕು. * ಜಲನೇತಿ ಅಭ್ಯಾಸ ಮಾಡಬಹುದು.

ಗಂಟಲು ನೋವು

* ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ, ಅದರಿಂದ ಬಾಯಿ ಮುಕ್ಕಳಿಸಿ. ಈ ರೀತಿ ಕೆಲವು ಭಾರಿ ಮಾಡಿ.

* ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ.

ಮೊಡವೆ

* ಪ್ರತಿದಿನ 30 ನಿಮಿಷಗಳವರೆಗೆ ಮಣ್ಣನ್ನು ಲೇಪಿಸಿ, ನಂತರ ತಣ್ಣೀರಿನಿಂದ ತೊಳೆಯಿರಿ. * ಹೆಚ್ಚು ನೀರು ಕುಡಿಯಿರಿ.

* ಒಂದು ಪಾತ್ರೆಯಲ್ಲಿ ಕುದಿಯುವ ನೀರು ತೆಗೆದುಕೊಂಡು, ಅದರ ಆವಿಗೆ ಮುಖವೊಡ್ಡಿ. * ಅಧಿಕ ತಾಜಾ ಹಣ್ಣು, ತರಕಾರಿಗಳನ್ನು ಸೇವಿಸಿ.

ಆಸ್ತಮಾ

* ಬೆಚ್ಚಗಿನ ಎದೆ ಪಟ್ಟಿಯನ್ನು 20 ನಿಮಿಷಗಳವರೆಗೆ ಕಟ್ಟಿಕೊಳ್ಳಿ. ಎದೆಯ ಪಟ್ಟಿ ಪ್ರಕೃತಿ ಚಿಕಿತ್ಸಾಲಯಗಳಲ್ಲಿ ದೊರೆಯುತ್ತದೆ.

* ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ.

* ಕುದಿಸಿದ ನೀರನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಎರಡು ಹನಿ ನೀಲಗಿರಿ ಎಣ್ಣೆಹಾಕಿ. ಆ ಹವೆಯನ್ನು 3-4 ನಿಮಿಷಗಳವರೆಗೆ ಉಸಿರಾಡಿ.

* ದೀರ್ಘಕಾಲದಿಂದ ಬಳಲುತ್ತಿರುವವರು ಜಲನೇತಿ, ಸೂತ್ರನೇತಿ, ಪ್ರಾಣಾಯಾಮ ಮತ್ತು ಆಹಾರ ಕ್ರಮಗಳನ್ನು ಪ್ರಕೃತಿ ಚಿಕಿತ್ಸಕರ ಮಾರ್ಗದರ್ಶನದಲ್ಲಿ ಕಲಿತುಕೊಳ್ಳುವುದು ಒಳಿತು.

ಕಣ್ಣಿನ ಉರಿಯೂತ

* ಸ್ವಲ್ಪ ಕೊತ್ತಂಬರಿ ಬೀಜಗಳನ್ನು ಒಂದು ಗ್ಲಾಸ್ ನೀರಿನಲ್ಲಿ ನೆನೆಹಾಕಿ, ಬೆಳಗ್ಗೆ ಸೋಸಿ, ಅದರಿಂದ ಕಣ್ಣುಗಳನ್ನು ತೊಳೆಯಿರಿ.

* ಉಗುರು ಬೆಚ್ಚಗಿನ ನೀರಿನಲ್ಲಿ ಹತ್ತಿ ಅದ್ದಿ, ಅದರಿಂದ ಕಣ್ಣುಗಳನ್ನು ತೊಳೆಯಿರಿ.* ಉಗುರು ಬೆಚ್ಚಗಿನ ನೀರನ್ನು ಐ ಕಪ್ನಲ್ಲಿ ಹಾಕಿ, ಇದರಲ್ಲಿ ಕಣ್ಣುಗಳನ್ನು ಪಿಳುಕಿಸಿ.

ಕೂದಲು ಉದುರುವುದು

* ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ. ಅದನ್ನು ತಲೆ ಚರ್ಮಕ್ಕೆ ತಾಗುವಂತೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ. ಅನಂತರ ತಲೆಸ್ನಾನ ಮಾಡಿ.

* ಆಯಸ್ಕಾಂತದಿಂದ ಚಾರ್ಜ್ ಮಾಡಿದ ತೈಲವನ್ನು ತಲೆಗೆ ಹಚ್ಚಿಕೊಳ್ಳಿ.* ಹೆಚ್ಚು ಮೊಳಕೆ ಕಾಳು ಮತ್ತು ಪ್ರೋಟಿನ್ ಯುಕ್ತ ಆಹಾರ ಸೇವಿಸಿ.

* ಮಾನಸಿಕ ಒತ್ತಡದಿಂದ ಹೊರಬನ್ನಿ.* ಪ್ರತಿದಿನ 100 ರಷ್ಟು ಕೂದಲು ಉದುರುವುದು ಸಾಮಾನ್ಯ. ಇದಕ್ಕಿಂತ ಅಧಿಕವಾದಲ್ಲಿ ಮಾತ್ರ ಕಾಳಜಿ ವಹಿಸಿ.

ಹಲ್ಲುನೋವು

* ನೋವಿರುವ ಭಾಗಕ್ಕೆ ಐಸ್ನಿಂದ ಉಜ್ಜಿ. * ಹಲ್ಲುಗಳ ಸ್ವಚ್ಫತೆ ಕಡೆಗೆ ಗಮನ ಹರಿಸಿ ವೈದ್ಯರ ಸಲಹೆ ಪಡೆಯಿರಿ.

* ರಾಗಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಿ. * ಸೀಬೆ, ಕಿತ್ತಳೆ, ಮೂಸಂಬಿ ಹಣ್ಣುಗಳನ್ನು ಹೆಚ್ಚು ಸೇವಿಸಿ.

ತಲೆನೋವು

* ಅರ್ಧ ಬಕೆಟ್ ಬೆಚ್ಚಗಿನ ನೀರಿನಲ್ಲಿ ಎರಡೂ ಪಾದಗಳನ್ನು 30 ನಿಮಿಷ ಅದ್ದಿ ಇಟ್ಟುಕೊಳ್ಳಿ.

* ಐಸ್ ಪೀಸ್ಗಳನ್ನು ಒಂದು ಕರವಸ್ತ್ರದಲ್ಲಿ ಕಟ್ಟಿ ತಲೆ ಭಾಗಕ್ಕೆ ಮಸಾಜ್ ಮಾಡಿ. * ಪ್ರತಿದಿನ ಬೆಳಗ್ಗೆ 4-5 ಗ್ಲಾಸ್ ನೀರು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

* ಮೈಗ್ರೇನ್ನಿಂದ ಬಳಲುತ್ತಿದ್ದರೆ, ವಾರಕ್ಕೊಂದು ದಿನ ಬೆಳಗಿನ ಸಮಯ 7-8 ಗ್ಲಾಸ್ ಉಪ್ಪು ಮಿಶ್ರಿತ ನೀರು ಕುಡಿದು ವಾಂತಿ ಮಾಡಿ.

* ಸೈನಸ್ ತೊಂದರೆಯಿಂದ ತಲೆನೋವು ಕಾಣಿಸಿಕೊಂಡರೆ ಜಲನೇತಿ ಮತ್ತು ಸೂತ್ರ ನೇತಿಯನ್ನು ಪ್ರಕೃತಿ ಚಿಕಿತ್ಸಕರ ಮಾರ್ಗದರ್ಶನದಲ್ಲಿ ಮಾಡಿ.

*ಮಾನಸಿಕ ಒತ್ತಡದಿಂದ ತಲೆನೋವು ಬಂದರೆ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಮಾಡಿ.

ಮಂಡಿನೋವು

* ನೆನೆಹಾಕಿದ ಹುತ್ತದ ಮಣ್ಣು ಅಥವಾ ಕಪ್ಪು ಮಣ್ಣಿಗೆ ಸ್ವಲ್ಪ ಬೆಚ್ಚಗಿನ ನೀರು ಮಿಶ್ರಣ ಮಾಡಿ, ನಂತರ ನೋವಿರುವ ಮಂಡಿಗೆ ದಪ್ಪದಾಗಿ ಮಣ್ಣಿನ ಲೇಪನ ಮಾಡಿ. ಅರ್ಧ ಗಂಟೆ ಬಿಟ್ಟು ತೊಳೆಯಿರಿ.

* ಸಾಸಿವೆ ಪುಡಿಯನ್ನು ನೀರಿನೊಂದಿಗೆ ಬೆರೆಸಿ, ಇದರ ಮಿಶ್ರಣವನ್ನು ನೋವಿರುವ ಮಂಡಿಗೆ ಲೇಪಿಸಿ. 30 ನಿಮಿಷಗಳ ನಂತರ ತೊಳೆಯಿರಿ.

* ದೇಹತೂಕ ಅಧಿಕವಾಗಿರುವವರಲ್ಲಿ ಮಂಡಿನೋವು ಸಾಮಾನ್ಯವಾಗಿರುವದರಿಂದ ಉಪವಾಸ ಮತ್ತು ಫಲಾಹಾರದ ಮೂಲಕ ತೂಕ ಇಳಿಸಿರಿ.

* ಚಿಕಿತ್ಸಕರ ಮಾರ್ಗದರ್ಶನದಲ್ಲಿ ಮಂಡಿಗಳ ವ್ಯಾಯಾಮ ಅಭ್ಯಾಸ ಮಾಡಿ.

ಹಿಮ್ಮಡಿ ಒಡಕು

* ಅರ್ಧ ಬಕೆಟ್ ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ, ಪಾದಗಳನ್ನು ಅದರಲ್ಲಿ ಇಟ್ಟುಕೊಳ್ಳಿ.

ಎಸಿಡಿಟಿ

* ಪ್ರತಿದಿನ ಬೆಳಗಿನ ಸಮಯದಲ್ಲಿ ಆಹಾರ ಸೇವಿಸುವ ಪೂರ್ವದಲ್ಲಿ ಒಂದು ಗ್ಲಾಸ್ ಬೂದಗುಂಬಳಕಾಯಿ ರಸ ಸೇವಿಸಿ.

* ಒಂದು ಗ್ಲಾಸ್ ಸಿಹಿ ಮಜ್ಜಿಗೆಗೆ ಸ್ವಲ್ಪ ಇಂಗು ಮಿಶ್ರಣ ಮಾಡಿ, ಸೇವಿಸಿ.

ಗೊರಕೆ

* ದೇಹದ ತೂಕ ಇಳಿಸಿ. * ಉಸಿರಾಟ ಸುಗಮಗೊಳಿಸಲು ಪ್ರಾಣಾಯಾಮ ಮಾಡಿ.

ಬೆನ್ನುನೋವು

* ತೈಲದಿಂದ ಮೃದುವಾಗಿ ಮಸಾಜ್ ಮಾಡಿಕೊಳ್ಳಿ. * ಬಿಸಿ ನೀರಿನ ಬ್ಯಾಗಿನಿಂದ ಶಾಖ ತೆಗೆದುಕೊಳ್ಳಿ.* ನಿಯಮಿತ ವ್ಯಾಯಾಮ ಮಾಡಿರಿ.

* ನರಗಳ ಅಥವಾ ಡಿಸ್ಕ್ ತೊಂದರೆಯುಳ್ಳವರು ವೈದ್ಯರ ಸಲಹೆ ಪಡೆಯಿರಿ.* ಸರಿಯಾದ ಕುಳಿತುಕೊಳ್ಳುವ ಭಂಗಿ ಅರಿತು ರೂಢಿಸಿಕೊಳ್ಳಿ.

* ಭಾರ ಎತ್ತುವ ಸಂದರ್ಭದಲ್ಲಿ ಎಚ್ಚರ ವಹಿಸಿ.

ಮೂಗಿನಿಂದ ರಕ್ತ ಸೋರುವುದು

* ಶುದ್ಧ ನೀರಿನಿಂದ ಮುಖ ತೊಳೆಯಿರಿ. * ನಾಲ್ಕು ಅಂಗುಲದಷ್ಟು ದಪ್ಪನೆ ಹತ್ತಿಯನ್ನು ಐಸ್ ನೀರಿನಲ್ಲಿ ಅದ್ದಿ ಮೂಗಿನ ಮೇಲಿಡಿ.

* ಮಂಜುಗಡ್ಡೆಗಳಿಂದ ಮೂಗಿನ ಭಾಗಕ್ಕೆ ಮಸಾಜ್ ಮಾಡಿರಿ.

ರಕ್ತ ಹೀನತೆ

* 20 ಒಣ ದ್ರಾಕ್ಷಿಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ತಿನ್ನಿ. * ಪ್ರತಿದಿನ ಒಂದು ಗ್ಲಾಸ್ ಬಿಟ್ರೂಟ್ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇವಿಸಿ.

* ಹೆಚ್ಚು ಹಸಿರು ಸೊಪ್ಪು, ತರಕಾರಿಗಳನ್ನು ಸೇವಿಸಿ.* ಗಜ್ಜರಿ, ಕಿತ್ತಳೆ ಮತ್ತು ಖರ್ಜೂರವನ್ನು ಹೆಚ್ಚು ಸೇವಿಸಿ.

* ಡಾ. ವೆಂಕಟ್ರಮಣ ಹೆಗಡೆ

No comments: